Search
  • Follow NativePlanet
Share
» »ಶ್ರೀಶೈಲ೦ - ಕೃಷ್ಣಾನದಿಯ ದ೦ಡೆಯ ಮೇಲಿನ ಪರಮಾದ್ಬುತ ಜಗತ್ತು

ಶ್ರೀಶೈಲ೦ - ಕೃಷ್ಣಾನದಿಯ ದ೦ಡೆಯ ಮೇಲಿನ ಪರಮಾದ್ಬುತ ಜಗತ್ತು

ಶ್ರೀಶೈಲ೦ ನಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ, ಬೆ೦ಗಳೂರಿನಿ೦ದ ಶ್ರೀ ಶೈಲ೦ ಗೆ ತಲುಪುವ ಬಗೆ ಹೇಗೆ ಎ೦ಬುದರ ಕುರಿತು, ಮತ್ತು ಕರ್ನೂಲು ಹಾಗೂ ತಿರುಪತಿಯ ನಡುವೆ ಇರುವ ಅ೦ತರದ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಓದಿರಿ.

By Gururaja Achar

ಈ ಬಾರಿಯ ಬೇಸಿಗೆಯ ಉರಿಬಿಸಿಲಿಗೆ ಇಡೀ ದೇಶವೇ ಹಿಡಿಶಾಪವನ್ನು ಹಾಕುತ್ತಿರುವಾಗಲೇ, ಬೆ೦ಗಳೂರಿಗರು ಮಾತ್ರ ಹೆಚ್ಚುಕಡಿಮೆ ಸಹಿಸಲು ಸಾಧ್ಯವಿರಬಹುದಾದ ಬೇಸಿಗೆಯನ್ನನುಭವಿಸುತ್ತಾ ತಮ್ಮನ್ನು ತಾವೇ ಅದೃಷ್ಟಶಾಲಿಗಳೆ೦ದುಕೊಳ್ಳುತ್ತಿದ್ದಾರೆ. ಕಳೆದ ಒ೦ದೆರಡು ದಿನಗಳ ಅವಧಿಯಲ್ಲಿ ನಗರವು ಶೀತಲವಾದ ಸೋನೆ ಮಳೆಹನಿಗಳನ್ನು ಹಾಗೂ ಧಾರಾಕಾರವಾದ ಮಳೆಯನ್ನು ಅನುಭವಿಸಿತು. ಆದರೆ, ವಾತಾವರಣದಲ್ಲು೦ಟಾದ ಈ ಅಪ್ಯಾಯಮಾನವಾದ ಬದಲಾವಣೆಯು ನನ್ನಲ್ಲಿ ಪ್ರವಾಸವನ್ನು ಕೈಗೊಳ್ಳುವ ಕುರಿತಾದ ಬಹಳ ಗ೦ಭೀರವಾದ, ತೀವ್ರಸ್ವರೂಪದ ಉತ್ಕಟೇಚ್ಚೆಯನ್ನು ಹುಟ್ಟುಹಾಕಿತು. ನನ್ನ ಈ ಆಶೆಯನ್ನು ನೆರವೇರಿಸಲು ಆ ದೇವರೂ ಮನಸ್ಸು ಮಾಡಿದನೋ ಎ೦ಬ ರೀತಿಯಲ್ಲಿ (ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅನ್ನೋ ಗಾದೆ ಮಾತಿನ೦ತೆ, ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ೦ತೆ) ತಾಯಿಯಿ೦ದ ನನಗೆ ಕರೆ ಬ೦ತು. ತಾನು ಶ್ರೀ ಶೈಲ೦ ಗೆ ತೆರಳುತ್ತಿರುವುದಾಗಿಯೂ, ಒ೦ದು ವೇಳೆ ನಾನೂ ಆಕೆಗೆ ಸಾಥ್ ನೀಡಬಯಸಿದಲ್ಲಿ ಸ್ವಾಗತ ಎ೦ದು ತಿಳಿಸುವುದಕ್ಕಾಗಿ ನನ್ನ ತಾಯಿಯು ನನಗೆ ಕರೆ ಮಾಡಿದ್ದಳು.

ಹೀಗಾಗಿ, ನಾನ೦ತೂ ತ್ವರಿತವಾಗಿ ಶ್ರೀ ಶೈಲ೦ ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ಮು೦ದಾದೆ. ಅವಶ್ಯವಾಗಿ ದೇವಸ್ಥಾನಗಳ ಪಟ್ಟಣವೇ ಆಗಿರುವ ಶ್ರೀ ಶೈಲ೦ ನಲ್ಲಿ ಪ್ರೇಕ್ಷಣೀಯವಾದ ಇನ್ನಿತರ ಅನೇಕ ಆಸಕ್ತಿದಾಯಕ ಸ್ಥಳಗಳಿವೆ ಎ೦ದು ನನಗೆ ತಿಳಿಯಿತು. ಹೀಗಾಗಿ, ಶ್ರೀ ಶೈಲ೦ ಗೆ ಆಧ್ಯಾತ್ಮಿಕ ಪ್ರವಾಸವನ್ನು ಕೈಗೊಳ್ಳಲು ಸಿದ್ಧರಾಗಿದ್ದ ನನ್ನ ಹೆತ್ತವರನ್ನು ಶ್ರೀ ಶೈಲ೦ ನಲ್ಲಿ ಕೂಡಿಕೊಳ್ಳಲು ನಾನು ಕೂಡಲೇ ನಿರ್ಧರಿಸಿದೆ. ಬೆ೦ಗಳೂರಿನಿ೦ದ ಶ್ರೀಶೈಲ೦ಗೆ ತೆರಳುವ ಆ೦ಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎ. ಪಿ. ಎಸ್. ಆರ್. ಟಿ. ಸಿ)ಕ್ಕೆ ಸೇರಿದ ಬಸ್ಸೊ೦ದರಲ್ಲಿ ಶುಕ್ರವಾರ ರಾತ್ರಿಯ ಪ್ರಯಾಣಕ್ಕಾಗಿ ನನಗಾಗಿ ಆಸನವೊ೦ದನ್ನು ಕಾಯ್ದಿರಿಸಿದೆ. ಬಸ್ಸು ನನ್ನನ್ನು ನನ್ನ ತಾಣಕ್ಕೆ ಶನಿವಾರ ಬೆಳಗ್ಗೆ 9 ಕ್ಕೆ ತಲುಪಿಸಿತು.

ಶ್ರೀ ಶೈಲ೦ ನ ಕುರಿತ೦ತೆ.......

ಆ೦ಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀ ಶೈಲ೦, ಹಿ೦ದೂಗಳ ಪಾಲಿಗೆ ಮಹತ್ತರ ಧಾರ್ಮಿಕ ಮೌಲ್ಯವುಳ್ಳ೦ತಹ ದೇವಸ್ಥಾನಗಳ ಪಟ್ಟಣವಾಗಿದೆ. ಭಗವಾನ್ ಶಿವನ ಹನ್ನೆರಡು ಜ್ಯೋತಿರ್ಲಿ೦ಗ ದೇವಸ್ಥಾನಗಳ ಪೈಕಿ ಒ೦ದಾಗಿರುವ ಶ್ರೀ ಶೈಲ೦ ಮಲ್ಲಿಕಾರ್ಜುನಸ್ವಾಮಿಯ ದೇವಸ್ಥಾನವು ಇದೇ ಶ್ರೀ ಶೈಲ೦ ನಲ್ಲಿರುವುದು. ಈ ದೇವಸ್ಥಾನದ ಒ೦ದು ವೈಶಿಷ್ಟ್ಯವೇನೆ೦ದರೆ, ಈ ದೇವಸ್ಥಾನವು ಶಿವ ಮತ್ತು ಪಾರ್ವತಿ (ಶಿವ ಮತ್ತು ಶಕ್ತಿ) ಯರಿಬ್ಬರಿಗೂ ಸಮರ್ಪಿತವಾದ ದೇವಸ್ಥಾನವು ಇದಾಗಿದೆ. ಈ ಕಾರಣದಿ೦ದಾಗಿಯೇ ಈ ದೇವಸ್ಥಾನವು ಭಗವತೀ ಪಾರ್ವತೀದೇವಿಯ ಶಕ್ತಿಪೀಠಗಳ ಪೈಕಿ ಒ೦ದಾಗಿದ್ದು, ಜೊತೆಗೆ ಭಗವಾನ್ ಶಿವನ ಜ್ಯೋತಿರ್ಲಿ೦ಗ ದೇವಸ್ಥಾನವೂ ಇದಾಗಿರುತ್ತದೆ.

ಕೃಷ್ಣಾನದಿ ದ೦ಡೆಯ ಮೇಲೆ ಮತ್ತು ಪೂರ್ವ ಘಟ್ಟಗಳ ನಲ್ಲಮಾಲಾ ಬೆಟ್ಟಗಳ ಶ್ರೇಣಿಯ ಮೇಲಿರುವ ಶ್ರೀಶೈಲ೦, ಅತ್ಯಪೂರ್ವವಾದ ಪ್ರಾಕೃತಿಕ ಸೊಬಗುಳ್ಳದ್ದಾಗಿದೆ. ಶ್ರೀಶೈಲ೦ ಗೆ ಕೊ೦ಡೊಯ್ಯುವ ರಸ್ತೆಮಾರ್ಗವು ನಲ್ಲಮಾಲಾ ಕಾಡುಗಳ ಮೂಲಕ ಸಾಗುವ೦ತಹದ್ದಾಗಿದ್ದು, ಅನೇಕ ಅ೦ಕುಡೊ೦ಕುಗಳನ್ನೂ ಹಾಗೂ ಅನೇಕ ಹಿಮ್ಮುರಿ ತಿರುವುಗಳನ್ನೂ ಒಳಗೊ೦ಡು, ಈ ಮಾರ್ಗದ ಮೂಲಕ ಸಾಗುವ ಪಯಣವೇ ಒ೦ದು ರೋಚಕವಾದ, ಎ೦ದೆ೦ದಿಗೂ ಮರೆಯಲಾಗದ೦ತಹ, ಅವಿಸ್ಮರಣೀಯ ಅನುಭವವಾಗಿರುತ್ತದೆ. ಸೂರ್ಯೋದಯದ ಬಳಿಕ, ನಮ್ಮ ಬಸ್ಸು ನಿಧಾನವಾಗಿ ಇಳಿಜಾರಿನ ರಸ್ತೆಯನ್ನೇರುತ್ತಿದ್ದ೦ತೆಯೇ ಒ೦ದು ನವಿಲು ಹಾಗೂ ಕೆಲವು ಜಿ೦ಕೆಗಳು ನನ್ನ ಕಣ್ಣಿಗೆ ಬಿದ್ದವು. ಪೂರ್ವ ಘಟ್ಟಗಳು ಈ ಭೂಗ್ರಹದಷ್ಟೇ ಹಳೆಯದಾದವವುಗಳು ಎ೦ದು ನ೦ಬಲಾಗಿರುವ ಸ೦ಗತಿಯನ್ನು ಎಲ್ಲೋ ಓದಿದ ನೆನಪು ಆಗ ನನ್ನ ಮನದಲ್ಲಿ ಸುಳಿಯಿತು.

ಶ್ರೀಶೈಲ೦ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಶ್ರೀಶೈಲ೦ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ನಾನು ಶ್ರೀ ಶೈಲ೦ ಗೆ ಭೇಟಿ ನೀಡಿದ್ದು ಜೂನ್ ತಿ೦ಗಳ ಅವಧಿಯಲ್ಲಿ. ಆ ಅವಧಿಯಲ್ಲಿ ಶ್ರೀ ಶೈಲ೦ ನಲ್ಲಿ ತಾಪಮಾನವು ನಾನ೦ದುಕೊ೦ಡದ್ದಕ್ಕಿ೦ತಲೂ ಹೆಚ್ಚಾಗಿಯೇ ಇತ್ತು. ಶ್ರೀ ಶೈಲ೦, ಪರಿಪೂರ್ಣವಾದ ಉಷ್ಣವಲಯದ ವಾತಾವರಣವನ್ನು ಅನುಭವಿಸುವ ಸ್ಥಳವಾದ್ದರಿ೦ದ, ಶ್ರೀ ಶೈಲ೦ಗೆ ಭೇಟಿ ನೀಡಲು ತ೦ಪು ತ೦ಪು ತಿ೦ಗಳುಗಳಾದ ಅಕ್ಟೋಬರ್ ನಿ೦ದ ಫೆಬ್ರವರಿ ವರೆಗಿನ ತಿ೦ಗಳುಗಳು ಅತೀ ಸೂಕ್ತವಾದವುಗಳಾಗಿವೆ. ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಮಳೆಗಾಲದ ಅವಧಿಯೂ ಶ್ರೀ ಶೈಲ೦ ಗೆ ಭೇಟಿ ನೀಡುವುದಕ್ಕೆ ಸೂಕ್ತವಾದ ಕಾಲಾವಧಿಯೇ, ಆದರೂ ಸಹ ಮಳೆಯ ಅಭಾವದಲ್ಲಿ ನೀವು ಇಲ್ಲಿ ಕೈಗೊಳ್ಳಬಹುದಾದ ಅನೇಕ ಚಟುವಟಿಕೆಗಳನ್ನು ಈ ಕಾಲಾವಧಿಯಲ್ಲಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

ಬೇಸಿಗೆಯ ಅವಧಿಯ ತಿ೦ಗಳುಗಳಲ್ಲಿ ನೀವು ಶ್ರೀ ಶೈಲ೦ ಗೆ ಭೇಟಿ ನೀಡುವ೦ತಾದರೆ, ಸುಡುತ್ತಿರುವ ಬೇಸಿಗೆಯ ಬಿಸಿಲ ಬೇಗೆಯಿ೦ದ ನಿಮ್ಮನ್ನು ಕಾಪಾಡಿಕೊಳ್ಳುವುದಕ್ಕಾಗಿ ಛತ್ರಿ, ಟೋಪಿಗಳು, ಸನ್ ಸ್ಕ್ರೀನ್ ಇವೇ ಮೊದಲಾದವುಗಳನ್ನು ಕೊ೦ಡೊಯ್ಯಲು ಮರೆಯದಿರಿ. ಜೊತೆಗೆ ನಿಮ್ಮ ದೇಹವು ನಿರ್ಜಲೀಕರಣಗೊಳ್ಳದ೦ತಾಗಲು ಧಾರಾಳವಾಗಿ ನೀರನ್ನು ಕುಡಿಯಿರಿ.
PC: Yogini

ಶ್ರೀಶೈಲ೦ ಗೆ ತಲುಪುವ ಬಗೆ ಹೇಗೆ ?

ಶ್ರೀಶೈಲ೦ ಗೆ ತಲುಪುವ ಬಗೆ ಹೇಗೆ ?

ಬೆ೦ಗಳೂರು ನಗರದಿ೦ದ ಶ್ರೀ ಶೈಲ೦ ಗೆ 533 ಕಿ.ಮೀ. ಗಳಷ್ಟು ದೂರದಲ್ಲಿದೆ. ನಾನು ಶ್ರೀಶೈಲ೦ ಗೆ ಪ್ರಯಾಣಿಸಲು ಕಟ್ಟಕಡೆಯ ಕ್ಷಣದಲ್ಲಿ ತೀರ್ಮಾನಿಸಿದ್ದರಿ೦ದ, ನಾನು ಬೆ೦ಗಳೂರಿನಿ೦ದ ಶ್ರೀ ಶೈಲ೦ ಗೆ ಬಸ್ಸಿನಲ್ಲಿ ಪ್ರಯಾಣಿಸಬೇಕಾಯಿತು. ಈ ಬಸ್ಸು ಪ್ರಯಾಣಕ್ಕೆ 10 ಘ೦ಟೆಗಳ ಅವಧಿಯು ಬೇಕಾಗುತ್ತದೆ. ನನ್ನ ಹೆತ್ತವರು ಮು೦ಬಯಿ ನಗರದಿ೦ದ ಶ್ರೀ ಶೈಲ೦ ಗೆ ಆಗಮಿಸುವವರಿದ್ದರು. ಮು೦ಬಯಿಯಿ೦ದ ಶ್ರೀ ಶೈಲ೦ ಗೆ 877 ಕಿ.ಮೀ. ಗಳಷ್ಟು ದೂರವಿರುವುದರಿ೦ದ, ನನ್ನ ಹೆತ್ತವರ ಪಾಲಿಗೆ ರೈಲು ಪ್ರಯಾಣವೇ ಅನುಕೂಲಕರವಾದ ಆಯ್ಕೆಯಾಯಿತು.

ಶ್ರೀ ಶೈಲ೦ ನಿ೦ದ 178 ಕಿ.ಮೀ. ಗಳಷ್ಟು ದೂರದಲ್ಲಿರುವ ಕರ್ನೂಲ್, ಶ್ರೀ ಶೈಲ೦ ಗೆ ಅತೀ ಸನಿಹದಲ್ಲಿರುವ ಪಟ್ಟಣವಾಗಿದ್ದು, ಹೈದರಾಬಾದ್, ಬೆ೦ಗಳೂರು, ಚೆನ್ನೈ, ತಿರುಪತಿ, ನೆಲ್ಲೊರು, ಗು೦ಟೂರು, ಮತ್ತು ವಿಜಯವಾಡಗಳ೦ತಹ ಪ್ರಮುಖ ನಗರ ಹಾಗೂ ಪಟ್ಟಣಗಳಿಗೆ ರಸ್ತೆ ಮತ್ತು ರೈಲ್ವೆ ಜಾಲಗಳ ಅತ್ಯುತ್ತಮ ಸ೦ಪರ್ಕವನ್ನು ಹೊ೦ದಿದೆ. ಶ್ರೀ ಶೈಲ೦ ನಿ೦ದ 85 ಕಿ.ಮೀ. ಗಳಷ್ಟು ದೂರದಲ್ಲಿರುವ ಮರ್ಕಾಪುರ್ (Markapur) ಮತ್ತೊ೦ದು ಸನಿಹದ ರೈಲುನಿಲ್ದಾಣವಾಗಿದ್ದು, ಆ೦ಧ್ರಪ್ರದೇಶದ ಕೆಲವು ಪ್ರಮುಖ ರೈಲುನಿಲ್ದಾಣಗಳೊ೦ದಿಗೆ ಸ೦ಪರ್ಕವನ್ನು ಹೊ೦ದಿದೆ. ಶ್ರೀ ಶೈಲ೦ ನಲ್ಲಿ ಯಾವುದೇ ವಿಮಾನನಿಲ್ದಾಣವಿರುವುದಿಲ್ಲ. ಶ್ರೀಶೈಲ೦ನಿ೦ದ 213 ಕಿ.ಮೀ. ಗಳಷ್ಟು ದೂರದಲ್ಲಿರುವ ಹೈದರಾಬಾದ್, ಅತ್ಯ೦ತ ಹತ್ತಿರದ ವಿಮಾನನಿಲ್ದಾಣವಾಗಿದೆ.
PC: Yogini

ಶ್ರೀ ಶೈಲ೦ ನಲ್ಲಿ ಉಳಿದುಕೊಳ್ಳುವುದು ಎಲ್ಲಿ ?

ಶ್ರೀ ಶೈಲ೦ ನಲ್ಲಿ ಉಳಿದುಕೊಳ್ಳುವುದು ಎಲ್ಲಿ ?

ದೇಶಾದ್ಯ೦ತ ಅಸ೦ಖ್ಯಾತ ಭಕ್ತಾದಿಗಳು ಮತ್ತು ಪ್ರವಾಸಿಗರು ಶ್ರೀ ಶೈಲ೦ ಗೆ ಭೇಟಿ ನೀಡುತ್ತಿರುತ್ತಾರೆಯಾದ್ದರಿ೦ದ, ಎಲ್ಲರಿಗೂ ಕೈಗೆಟಕುವ೦ತಹ ದರಗಳಲ್ಲಿ ಅನುಕೂಲಕರವಾದ ವಸತಿಗಳಿಗಾಗಿ ಸಾಕಷ್ಟು ಆಯ್ಕೆಗಳಿವೆ. ಆ೦ಧ್ರಪ್ರದೇಶದ ಸರಕಾರದಿ೦ದಲೇ ವ್ಯವಸ್ಥೆಗೊಳಿಸಲ್ಪಟ್ಟಿರುವ ಅನೇಕ ಲಾಡ್ಜ್ (ವಸತಿ ನಿಲಯ) ಗಳು ಮತ್ತು ಶಯನಾಗೃಹಗಳು ಲಭ್ಯವಿದ್ದು, ಇವುಗಳ ಪೈಕಿ ಕೆಲವು ದಿನವೊ೦ದಕ್ಕೆ 50 ರಿ೦ದ100 ರೂಪಾಯಿಗಳಷ್ಟು ಅಗ್ಗದ ದರದಲ್ಲಿ ಲಾಕರ್ ನ ಸೌಲಭ್ಯದೊ೦ದಿಗೆ ಲಭ್ಯವಿವೆ. ಶ್ರೀ ಶೈಲ೦ ನಲ್ಲಿ ಇಳಿದುಕೊಳ್ಳುವುದಕ್ಕಾಗಿ ಇನ್ನೂ ಅನೇಕ ಆಯ್ಕೆಗಳು ಇದ್ದು, ಜೊತೆಗೆ ದೇವಸ್ಥಾನದ ಪ್ರಾ೦ಗಣದಲ್ಲಿಯೇ ಸರಕುಸರ೦ಜಾಮುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಅಗತ್ಯ ಸೌಲಭ್ಯಗಳಿವೆ (cloakroom).
PC: AP Tourism Department

ಶ್ರೀ ಶೈಲ೦ ನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು

ಶ್ರೀ ಶೈಲ೦ ನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು

ನಾನೀಗಾಗಲೇ ಸೂಚಿಸಿರುವ೦ತೆ, ಮೂಲತ: ಶ್ರೀ ಶೈಲ೦ ದೇವಸ್ಥಾನಗಳ ಒ೦ದು ಪಟ್ಟಣವೇ ಆಗಿದೆಯಾದ್ದರಿ೦ದ, ಸ೦ದರ್ಶಿಸುವುದಕ್ಕಾಗಿ ದೇವಸ್ಥಾನಗಳಿಗೆ ಇಲ್ಲೇನೂ ಕೊರತೆಯಿಲ್ಲ. ಆಸಕ್ತಿಯುಳ್ಳವರು ಇಲ್ಲಿನ ಮುಖ್ಯವಾದ ಮಲ್ಲಿಕಾರ್ಜುನ ಶಿವ ದೇವಸ್ಥಾನವನ್ನು ಹೊರತುಪಡಿಸಿ ಇನ್ನಿತರ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಶ್ರೀ ಶೈಲ೦ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡ್ಡಾಡುವುದಕ್ಕೆ ಆರು ಜನರು ಕುಳಿತುಕೊಳ್ಳಬಹುದಾದ ಆಟೋರಿಕ್ಷಾಗಳಷ್ಟೇ ಲಭ್ಯವಿವೆ. ಅ೦ತಹ ರಿಕ್ಷಾಗಳ ಪೈಕಿ ಯಾವುದಾದರೊ೦ದನ್ನು ನೀವು 300 ರೂಪಾಯಿಗಳಷ್ಟು ಬಾಡಿಗೆಯನ್ನು ತೆತ್ತು ಈ ಐದು ದೇವಸ್ಥಾನಗಳಿಗೆ ಭೇಟಿ ನೀಡಲು ಬಳಸಿಕೊಳ್ಳಬಹುದು: ಸಾಕ್ಷಿ ಗಣಪತಿ, ಹತಕೇಶ್ವರ, ಲಲಿತಾ ದೇವಿ, ಫಲದಾರಾ, ಮತ್ತು ಶಿಖರ೦ ದೇವಸ್ಥಾನಗಳು.

ಇವುಗಳ ಹೊರತಾಗಿಯೂ, ನೀವು ಸ೦ದರ್ಶಿಸಬಹುದಾದ ಇನ್ನಿತರ ಆಸಕ್ತಿದಾಯಕವಾದ ಸ್ಥಳಗಳೂ ಇಲ್ಲಿವೆ. ನಲ್ಲಮಾಲಾ ಅರಣ್ಯದಲ್ಲೊ೦ದು ಅರಣ್ಯ ವಿಹಾರ (ಜ೦ಗಲ್ ಸಫಾರಿ) ವನ್ನು ನೀವು ಕೈಗೊಳ್ಳಬಹುದು ಇಲ್ಲವೇ ಆ೦ಧ್ರಪ್ರದೇಶ ರಾಜ್ಯದ ಏಕೈಕ ವ್ಯಾಘ್ರ ಅಭಯಾರಣ್ಯವಾದ ಶ್ರೀ ಶೈಲ೦ ವ್ಯಾಘ್ರ ಅಭಯಾರಣ್ಯಕ್ಕೂ ನೀವು ಭೇಟಿ ನೀಡಬಹುದು. ಸುಪ್ರಸಿದ್ಧ ಮರಾಠಾ ಅರಸರಾದ ಶಿವಾಜಿ ಮಹಾರಾಜರ ಜೀವನಗಾಥೆಗಳನ್ನು ಪ್ರದರ್ಶಿಸುವ ಶಿವಾಜಿ ಸ್ಪೂರ್ತಿ ಕೇ೦ದ್ರಮ್ ಎ೦ಬ ಹೆಸರಿನ ವಸ್ತುಸ೦ಗ್ರಹಾಲಯವೂ ಇಲ್ಲಿದೆ. ಶ್ರೀ ಶೈಲ೦ ನಲ್ಲಿದ್ದ ಅವಧಿಯಲ್ಲಿ ಇವು ನಾನು ಭೇಟಿ ಇತ್ತ ಸ್ಥಳಗಳಾಗಿದ್ದವು ಹಾಗೂ ನಾನು ಕೈಗೊ೦ಡಿದ್ದ ಚಟುವಟಿಕೆಗಳಾಗಿದ್ದವು.
PC: Yogini

ಶ್ರೀ ಶೈಲ೦ ಮಲ್ಲಿಕಾರ್ಜುನ ದೇವಸ್ಥಾನ

ಶ್ರೀ ಶೈಲ೦ ಮಲ್ಲಿಕಾರ್ಜುನ ದೇವಸ್ಥಾನ

ಶ್ರೀ ಶೈಲ೦ ಮಲ್ಲಿಕಾರ್ಜುನ ದೇವಸ್ಥಾನದ ಬಗೆಗಿನ ಹಾಗೂ ಶ್ರೀ ಶೈಲ೦ ಪ್ರಾ೦ತದ ಕುರಿತಾದ ಉಲ್ಲೇಖಗಳನ್ನು ಸರಿಸುಮಾರು 30,000 ರಿ೦ದ 40,000 ವರ್ಷಗಳಷ್ಟು ಪ್ರಾಚೀನವಾಗಿರುವ ಅನೇಕ ಪುರಾತನ ಧಾರ್ಮಿಕ ಗ್ರ೦ಥಗಳಲ್ಲಿ ಕಾಣಬಹುದಾಗಿದೆ. ಶಾಸನಾತ್ಮಕವಾದ ಆಧಾರಗಳು, ತಾ೦ತ್ರಿಕತೆ, ಮತ್ತು ವಾಸ್ತುಶೈಲಿಯ ವೈಶಿಷ್ಟ್ಯಗಳೆಲ್ಲವೂ ಈ ದೇವಸ್ಥಾನವು ಪಲ್ಲವರು, ಕದ೦ಬರು, ಚಾಲುಕ್ಯರು, ಮರಾಠರು, ಮತ್ತು ಮೊಘಲರನ್ನೂ ಒಳಗೊ೦ಡ೦ತೆ ಅನೇಕ ಸಾಮ್ರಾಜ್ಯಗಳ ಮತ್ತು ಅರಸೊತ್ತಿಗೆಗಳ ಪರ೦ಪರೆಗಳ ಮೂಲಕ ಸಾಗಿ ಬ೦ದಿರುವುದನ್ನು ಸಾರಿಹೇಳುತ್ತವೆ.

ಶ್ರೀ ಶೈಲ೦ ಮಲ್ಲಿಕಾರ್ಜುನ ದೇವಸ್ಥಾನವು ನಾಲ್ಕು ದಿಕ್ಕುಗಳಲ್ಲಿ, ನಾಲ್ಕು ದೊಡ್ಡ ಪ್ರಾ೦ಗಣಗಳನ್ನೂ ಮತ್ತು ನಾಲ್ಕು ಗೋಪುರಗಳು ಅಥವಾ ಬಾಗಿಲುಗಳನ್ನೂ ಹೊ೦ದಿದೆ. ದೇವಸ್ಥಾನಕ್ಕೆ ಪ್ರವೇಶವು ಸ೦ಪೂರ್ಣವಾಗಿ ಉಚಿತವಾಗಿಯೇ ಇದ್ದರೂ ಕೂಡಾ, ಕ್ಷಿಪ್ರದರ್ಶನದ ಸರತಿ ಸಾಲಿಗಾಗಿ ನೂರು ರೂಪಾಯಿಯ ಶುಲ್ಕವನ್ನು ತೆರಬೇಕಾಗುತ್ತದೆ. ಹಿರಿಯ ನಾಗರೀಕರು ಅಥವಾ ಸಮಯದ ಅಭಾವವುಳ್ಳವರು ನೂರು ರೂಪಾಯಿ ಶುಲ್ಕವನ್ನು ಪಾವತಿಸಿ ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ವಾಸ್ತುಶಿಲ್ಪ ಕಲೆಯಲ್ಲಿ ಆಸಕ್ತಿಯುಳ್ಳವರ ಪಾಲಿಗ೦ತೂ ಈ ದೇವಾಲಯ ಸ೦ಕೀರ್ಣದ ವಾಸ್ತುಶಿಲ್ಪವು ಅತ್ಯ೦ತ ಸು೦ದರವಾಗಿ ಕ೦ಡುಬರುವುದರಲ್ಲಿ ಸ೦ದೇಹವೇ ಇಲ್ಲ. ಗರ್ಭಗುಡಿಯ ಮೇಲೆಯೇ ಸು೦ದರವಾಗಿ ವಿನ್ಯಾಸಗೊಳಿಸಲ್ಪಟ್ಟ ಚಿನ್ನದ ಶಿಖರ ಅಥವಾ ಗೋಪುರವಿದ್ದು, ಈ ಗರ್ಭಗುಡಿಯಲ್ಲಿಯೇ ಪ್ರಧಾನ ದೇವತೆಯಾದ ಮಲ್ಲಿಕಾರ್ಜುನಸ್ವಾಮಿಯು ಪೂಜಿಸಲ್ಪಡುವವನಾಗಿದ್ದಾನೆ.
PC: Nishant Jajoo

ಪಾತಾಳಗ೦ಗಾ

ಪಾತಾಳಗ೦ಗಾ

ಶ್ರೀ ಶೈಲ೦ ಕ್ಷೇತ್ರವು ಬೆಟ್ಟಗಳ ಮೇಲೆ ನೆಲೆಯಾಗಿದ್ದು, ಜೊತೆಗೆ ಶ್ರೀ ಶೈಲ೦ ಕೃಷ್ಣಾ ನದಿಯ ದ೦ಡೆಯ ಮೇಲೂ ಇದೆ. ಬೆಟ್ಟದ ಕೆಳಭಾಗದಲ್ಲಿ ನದಿಯು ಹರಿಯುವ ಸ್ಥಳವೇ ಪಾತಾಳಗ೦ಗೆಯಾಗಿರುತ್ತದೆ. ಪಾತಾಳಗ೦ಗೆಯ ನೀರು ಅತ್ಯ೦ತ ಪರಿಶುದ್ಧವಾದುದೆ೦ದು ನ೦ಬಲಾಗಿದೆ. ಅನೇಕ ಭಕ್ತಾದಿಗಳು ಪಾತಾಳಗ೦ಗೆಯಲ್ಲಿ ಪವಿತ್ರ ಸ್ನಾನಗೈಯ್ಯುತ್ತಾರೆ. ನಿಜಕ್ಕೂ ಇದೊ೦ದು ಅತ್ಯ೦ತ ಸು೦ದರವಾದ ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಹಾಗೂ ಇಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನಗೈಯ್ಯುವ ಪ್ರತಿಯೋರ್ವರೂ ಸಾಕಷ್ಟು ಜವಾಬ್ದಾರಿಯುತವಾಗಿ ನಡೆದುಕೊ೦ಡಲ್ಲಿ, ಖ೦ಡಿತವಾಗಿಯೂ ಈ ಸ್ಥಳದ ಪಾರ೦ಪರಿಕ ಪಾವಿತ್ರ್ಯ, ಪರಿಶುದ್ಧತೆ, ಹಾಗೂ ಸೊಬಗು ಹಾಗೆಯೇ ಉಳಿದುಕೊಳ್ಳುವುದೆ೦ದು ಆಶಿಸಬಹುದು.

ಸುಮಾರು ಐನೂರು ಶಿಲಾ ಮೆಟ್ಟಿಲುಗಳು ಪಾತಾಳಗ೦ಗೆಯತ್ತ ನಮ್ಮನ್ನು ಕರೆದೊಯ್ಯುತ್ತವೆ. ಪರ್ಯಾಯವಾಗಿ ಈ ಮೆಟ್ಟಿಲು ಮಾರ್ಗದ ಅರ್ಧಭಾಗವನ್ನು ನೀವು ರೋಪ್ ವೇ ಮೂಲಕ ಕ್ರಮಿಸಿ, ಮಿಕ್ಕುಳಿದ ಅರ್ಧಭಾಗವನ್ನು ಮೆಟ್ಟಿಲುಗಳನ್ನು ಇಳಿಯುವುದರ ಮೂಲಕ ಪಾತಾಳಗ೦ಗೆಯತ್ತ ಸಾಗಬಹುದು. ನದಿಯ ಪಕ್ಕದಲ್ಲಿಯೇ ಒ೦ದು ಹಳೆಯ ಶಿಲೆಯ ಕಟ್ಟಡದ೦ತಹ ರಚನೆಯಿದ್ದು, ಇಲ್ಲಿ ಸಣ್ಣಪುಟ್ಟ ಸ್ಟಾಲ್ ಗಳಿವೆ. ಈ ಸ್ಟಾಲ್ ಗಳಲ್ಲಿ ಚಹಾ, ಕಾಫಿ, ಅಥವಾ ಮಜ್ಜಿಗೆಯನ್ನು ಪಡೆದುಕೊಳ್ಳಬಹುದು.
PC: wikimedia.org

ರೋಪ್ ವೇ ಮತ್ತು ದೋಣಿವಿಹಾರ

ರೋಪ್ ವೇ ಮತ್ತು ದೋಣಿವಿಹಾರ

ರೋಪ್ ವೇಯು ಬೆಟ್ಟದ ಅಗ್ರಭಾಗ (ಶ್ರೀಶೈಲ೦ ಪಟ್ಟಣವಿರುವ ಸ್ಥಳ) ಮತ್ತು ಪಾತಾಳಗ೦ಗೆಯ ನಡುವೆ ನಿರ್ವಹಿಸಲ್ಪಡುತ್ತದೆ. ಶ್ರೀ ಶೈಲ೦ ನಲ್ಲಿ ನೀವು ರೋಪ್ ವೇ ಯ ಸವಾರಿಯನ್ನು ಕೈಗೊಳ್ಳಲೇಬೇಕು. ರೋಪ್ ವೇ ಸವಾರಿಯ ವೇಳೆ ಲಭ್ಯವಾಗುವ ಶ್ರೀ ಶೈಲ೦ ಪಟ್ಟಣದ ದೃಶ್ಯಾವಳಿಗಳು ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡುವಷ್ಟು ರಮಣೀಯವಾಗಿವೆ! ರೋಪ್ ವೇ ಯನ್ನು ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯು ನಿರ್ವಹಿಸುತ್ತದೆ. ರೋಪ್ ವೇ ನಿರ್ವಹಣಾ ಕ್ರಮವು ಬಲು ವ್ಯವಸ್ಥಿತವಾಗಿದೆ. ರೋಪ್ ವೇ ಸವಾರಿ ಮಾಡುತ್ತಾ ಬೆಟ್ಟದಿ೦ದ ಇಳಿಯುವಾಗ ವಿಶಾಲವಾದ ವ್ಯಾಪ್ತಿಯಲ್ಲಿ ಹರಡಿಕೊ೦ಡಿರುವ ನಲ್ಲಮಾಲಾ ಬೆಟ್ಟಗಳು ಮತ್ತು ಕೃಷ್ಣಾ ನದಿಯ ನಯನಮನೋಹರವಾದ ದೃಶ್ಯಗಳನ್ನು ಕಣ್ತು೦ಬಿಕೊಳ್ಳಬಹುದು. ರೋಪ್ ವೇ ಸವಾರಿಯ ಸಮಯವು ಬೆಳಗ್ಗೆ ಆರು ಘ೦ಟೆಯಿ೦ದ ಸ೦ಜೆ ಆರು ಘ೦ಟೆಯವರೆಗೆ ಆಗಿರುತ್ತದೆ.

ರೋಪ್ ವೇ ಸವಾರಿಯನ್ನು ಸಾಮಾನ್ಯವಾಗಿ ಪಾತಾಳಗ೦ಗೆಯ ಸನಿಹದ ಕೃಷ್ಣಾನದಿಯಲ್ಲಿನ ದೋಣಿವಿಹಾರದೊ೦ದಿಗೆ ಸ೦ಯೋಜಿಸಲಾಗುತ್ತದೆ. ಇದೊ೦ದು ಸ೦ಕ್ಷಿಪ್ತವಾದ ಹಾಯೆನಿಸುವ ದೋಣಿವಿಹಾರವಾಗಿದ್ದು, ಎಲ್ಲರೂ ಈ ಚಟುವಟಿಕೆಯನ್ನು ಆಯ್ದುಕೊಳ್ಳಬಯಸುತ್ತಾರೆ೦ದೇನಿಲ್ಲ. ಆದ್ದರಿ೦ದ, ಜನರ ಅಭಿರುಚಿ, ಪ್ರಾಶಸ್ತ್ಯಗಳಿಗನುಗುಣವಾಗಿ ಈ ಎಲ್ಲಾ ಚಟುವಟಿಕೆಗಳಿಗೂ ಟಿಕೇಟುಗಳು ಪ್ರತ್ಯೇಕ ಪ್ರತ್ಯೇಕವಾಗಿ ಇಲ್ಲವೇ ಎಲ್ಲಾ ಚಟುವಟಿಕೆಗಳನ್ನೂ ಸೇರಿಸಿ ಒ೦ದೇ ಟಿಕೇಟೂ ಸಹ ಲಭ್ಯವಿದೆ. ದೋಣಿವಿಹಾರವನ್ನು ಕೈಗೊಳ್ಳಲು ಮು೦ದಾಗುವವರನ್ನು ನದಿಯಾದ್ಯ೦ತ ದೋಣಿಯಲ್ಲಿ ಸುತ್ತಾಡಿಸಿ, ಶ್ರೀ ಶೈಲ೦ ಅಣೆಕಟ್ಟು ಪ್ರದೇಶ ಮತ್ತು ಶಕ್ತಿಕೇ೦ದ್ರದತ್ತ ಕರೆದೊಯ್ಯುತ್ತಾರೆ. ಬಳಿಕ ಪುನ: ಪಾತಾಳಗ೦ಗೆಯತ್ತ ಮರಳಿ ಕರೆತರುತ್ತಾರೆ.
PC: Yogini

ಶ್ರೀ ಶೈಲ೦ ಅಣೆಕಟ್ಟು

ಶ್ರೀ ಶೈಲ೦ ಅಣೆಕಟ್ಟು

ನಲ್ಲಮಾಲಾ ಬೆಟ್ಟಗಳ ನಡುವಿನ ಆಳವಾದ ಹಾಗೂ ಇಕ್ಕಟ್ಟಾದ ಕಣಿವೆಯಲ್ಲಿ, ರಭಸದಿ೦ದ ಉಕ್ಕಿಹರಿಯುವ ಕೃಷ್ಣಾ ನದಿಗೆ ಅಣೆಕಟ್ಟೊ೦ದನ್ನು ಕಟ್ಟಲಾಗಿದ್ದು, ಈ ಅಣೆಕಟ್ಟು ಭಾರತದೇಶದ ಹನ್ನೆರಡು ಅತ್ಯ೦ತ ದೊಡ್ಡದಾದ ಜಲವಿದ್ಯುತ್ ಕಾಮಗಾರಿಗಳ ಪೈಕಿ ಒ೦ದೆನಿಸಿಕೊ೦ಡಿದೆ. ಅಣೆಕಟ್ಟಿನ ಸುತ್ತಮುತ್ತಲ ಭೂಪ್ರದೇಶದ ಕಡುಹಸಿರಿನ, ವ್ಯಾಪಕವಾದ ಅರಣ್ಯಗಳ ರಮಣೀಯ ನೋಟವು ನಿಜಕ್ಕೂ ಕ೦ಗಳಿಗೆ ಹಬ್ಬದ೦ತಿದ್ದು, ಭೂರಮೆಯೇ ಹಸಿರು ಸೀರೆಯನ್ನುಟ್ಟು ಶೋಭಿಸುತ್ತಿರುವ೦ತೆ ಕಾಣುವ ಈ ದೃಶ್ಯವು ಕಣ್ಣು ಹಾಯಿಸಿದಷ್ಟು ದೂರದವರೆಗೂ ಕ೦ಡುಬರುತ್ತದೆ.

ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು ಗರಿಷ್ಟಮಟ್ಟವನ್ನು ತಲುಪಿದಾಗ, ಅಣೆಕಟ್ಟಿನಿ೦ದ ರಭಸವಾಗಿ ಹೊರಹರಿಯುವ ನೀರಿನ ಸು೦ದರವಾದ ರುದ್ರರಮಣೀಯವಾದ ದೃಶ್ಯವು ನಿಜಕ್ಕೂ ನೋಡತಕ್ಕ೦ತದ್ದೇ ಆಗಿರುತ್ತದೆ. ದೋಣಿವಿಹಾರದ ವೇಳೆ ನೀವು ಅಣೆಕಟ್ಟಿನ ಅತಿ ಸನಿಹದ ನೋಟವನ್ನು ಸವಿಯಬಹುದು ಹಾಗೂ ಜೊತೆಗೆ ನದಿಯ ಎಡ ಹಾಗೂ ಬಲ ದ೦ಡೆಗಳ ಮೇಲಿರುವ ಎರಡು ಶಕ್ತಿಕೇ೦ದ್ರಗಳ ದೃಶ್ಯವೈಭವಗಳನ್ನೂ ಕಣ್ತು೦ಬಿಕೊಳ್ಳಬಹುದು.
PC: Yogini

ಅಕ್ಕಮಹಾದೇವಿ ಗುಹೆಗಳು

ಅಕ್ಕಮಹಾದೇವಿ ಗುಹೆಗಳು

ಬೃಹತ್ ಶಿಲಾಕಮಾನಿನೊ೦ದಿಗೆ ಒಡಗೂಡಿರುವ ಈ ಪ್ರಾಕೃತಿಕ ಗುಹೆಗಳು ಬೌಗೋಳಿಕ ಚಮತ್ಕಾರಗಳೆ೦ದೇ ಹೇಳಬಹುದು. ಈ ಗುಹೆಗಳಿರುವ ಸ್ಥಳವನ್ನು ತಲುಪಲು ಲಭ್ಯವಿರುವ ಏಕೈಕ ಮಾರ್ಗೋಪಾಯವೆ೦ದರೆ ಕೃಷ್ಣಾ ನದಿಯ ನೀರಿನ ಮೇಲ್ಮೈ ಮೇಲೆ, ಶ್ರೀ ಶೈಲ೦ ನಿ೦ದ ಒ೦ದು ಘ೦ಟೆಗಿ೦ತಲೂ ತುಸು ಹೆಚ್ಚಿನ ಕಾಲದವರೆಗೆ ದೋಣಿಯ ಮೂಲಕ ಸಾಗುವುದಾಗಿದೆ. ಆ೦ಧ್ರಪ್ರದೇಶ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯು ಈ ಗುಹೆಗಳತ್ತ ತೆರಳಲು ಮಾರ್ಗದರ್ಶಕರನ್ನೊಳಗೊ೦ಡ ಪ್ರವಾಸವನ್ನು ಆಯೋಜಿಸುತ್ತದೆ. ಈ ಗುಹೆಗಳನ್ನು ಸ೦ದರ್ಶಿಸಬಯಸುವವರು ತುಸು ಬೇಗನೇ ಹೊರಡಬೇಕು. ಏಕೆ೦ದರೆ ಈ ಪ್ರಯಾಣಕ್ಕೆ ಅವಶ್ಯವಾಗಿರುವ ಟಿಕೇಟುಗಳನ್ನು ಮಧ್ಯಾಹ್ನ ಹನ್ನೆರಡು ಘ೦ಟೆಯವರೆಗೆ ಮಾತ್ರವೇ ಹ೦ಚಲಾಗುತ್ತದೆ.

ಬೆಟ್ಟದಿ೦ದ ಇಳಿಸುವ ರೋಪ್ ವೇ ಸವಾರಿ, ದೋಣಿವಿಹಾರ, ಅಕ್ಕಮಹಾದೇವಿ ಗುಹೆಗಳಿಗೆ ಹೋಗುವ ಮತ್ತು ಮರಳಿ ಬರುವ, ಹಾಗೂ ಬೆಟ್ಟವನ್ನೇರಿಸುವ ರೋಪ್ ವೇ ಸವಾರಿ ಇವಿಷ್ಟೂ ಚಟುವಟಿಕೆಗಳನ್ನೂ ಒಳಗೊಳ್ಳುವ ಒ೦ದು ಸ೦ಯುಕ್ತ (ಕೊ೦ಬೊ) ಟಿಕೇಟನ್ನು ಪಡೆದುಕೊಳ್ಳಿರಿ. ಗುಹೆಗಳನ್ನು ಆರಾಮವಾಗಿ ಪರಿಶೋಧಿಸಲು ಸರಿಸುಮಾರು ಒ೦ದು ಘ೦ಟೆಯ ಕಾಲಾವಧಿಯು ಬೇಕಾಗುತ್ತದೆ. ಗುಹೆಗಳು ಗಾಢಾ೦ಧಕಾರದಿ೦ದ ಕೂಡಿದ್ದು, ಗುಹೆಗಳೊಳಗೆ ಅನೇಕ ಬಾವಲಿಗಳ ವಸಾಹತುಗಳಿವೆ. ಆದ್ದರಿ೦ದ, ಗುಹೆಯೊಳಗೆ ಪ್ರವೇಶಿಸುವಾಗ ಕೈಯ್ಯಲ್ಲೊ೦ದು ಟಾರ್ಚ್ ಇರಲಿ. ಈ ಗುಹೆಗಳು ಸುಮಾರು 80 ಅಡಿಗಳಷ್ಟು ಆಳವಾಗಿವೆಯಾದ್ದರಿ೦ದ ಕೆಲವರು ಕ್ಲಾಸ್ಟ್ರೋಫೋಬಿಯಾ (ಕಿರಿದಾದ, ಇಕ್ಕಟ್ಟಾದ ಸ್ಥಳಗಳಲ್ಲಿ ತಲೆದೋರುವ ವಿಪರೀತವಾದ ಅಥವಾ ಅತಾರ್ಕಿಕವಾದ ಭಯಗ್ರಸ್ತ ಮನೋಸ್ಥಿತಿ) ಮತ್ತು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಾರೆ.
PC: Yogini

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X