Search
  • Follow NativePlanet
Share
» »ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ

ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ

By Vijay

ಶಿವ-ಪಾರ್ವತಿಯರ ಇಬ್ಬರ ಪುತ್ರರಲ್ಲಿ ಒಬ್ಬನಾದ ಷಣ್ಮುಖನನ್ನು ವೀರ ಯೋಧನ ರೂಪದಲ್ಲಿರುವ ದೇವರನ್ನಾಗಿ ಆರಾಧಿಸಲಾಗುತ್ತದೆ. ದೇವತೆಗಳ ಸೈನ್ಯದ ಸೇನಾಧಿಪತಿಯಾಗಿರುವ ಷಣ್ಮುಖ ಹಲವು ನಾಮಗಳಿಂದ ಹಿಂದುಗಳ ಪಾಲಿಗೆ ಪರಮ ದೇವನಾಗಿದ್ದಾನೆ. ಷಣ್ಮುಖನನ್ನು ಕರ್ನಾಟಕದಲ್ಲಿ ಕನ್ನಡಿಗರು ಸುಬ್ರಹ್ಮಣ್ಯ ಎಂದು ಕರೆದರೆ ತಮಿಳಿಗರು ಮುರುಗನ್ ಎಂದು ಪೂಜಿಸುತ್ತಾರೆ.

ಬೆಂಗಳೂರು ಬಳಿಯಿರುವ ಸರ್ಪದೋಷ ಪರಿಹಾರ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ

ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಜಿ ಅವರಿಗೆ ಸ್ವತಃ ಷಣ್ಮುಖನೆ ಇಲ್ಲಿನ ಚಿಕ್ಕ ಗುಡ್ಡವೊಂದರ ಮೇಲೆ ನೆಲೆಸುವ ಇಚ್ಛೆ ವ್ಯಕ್ತಪಡಿಸಿದ್ದುದರ ಸಂಕೇತವಾಗಿ ಈ ಸುಂದರ ದೇವಾಲಯದ ನಿರ್ಮಾಣವಾಗಿದೆ. ಈ ದೇವಾಲಯವು ತನ್ನದೆ ಆದ ರೀತಿಯ ವಿಶೇಷತೆ ಹೊಂದಿದ್ದು ಈ ರೀತಿಯಲ್ಲಿರಬಹುದಾದ ಜಗತ್ತಿನ ಏಕೈಕ ದೇವಾಲಯ ಇದಾಗಿದೆ ಎಂದರೆ ತಪ್ಪಾಗಲಾರದು.

ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ

ಚಿತ್ರಕೃಪೆ: Kiran Gopi

ಈ ದೇವಾಲಯವಿರುವುದು ಮತ್ತಿನ್ನೆಲ್ಲೂ ಅಲ್ಲ ಕರ್ನಾಟಕದ ರಾಜಧಾನಿ ನಗರವಾದ ಬೆಂಗಳೂರಿನಲ್ಲಿ. ಹೌದು, ಬೆಂಗಳೂರಿನ ರಾಜರಾಜೇಶ್ವರಿ ಬಡಾವಣೆಯಲ್ಲಿರುವ ಶೃಂಗಗಿರಿ ಎಂಬ ಹೆಸರಿನ ಗುಡ್ಡವೊಂದರ ಮೇಲೆ ಸುಬ್ರಹ್ಮಣ್ಯನು ಷಣ್ಮುಖ ಸ್ವಾಮಿಯಾಗಿ ನೆಲೆಸಿದ್ದಾನೆ. ಮೈಸೂರು ರಸ್ತೆಯಲ್ಲಿ ಸಾಗುವಾಗ ಸಿಗುವ ರಾಜರಾಜೇಶ್ವರಿ ಆರ್ಚಿನ ಒಳಗೆ ಪ್ರವೇಶಿಸಿ ಈ ದೇವಾಲಯವನ್ನು ತಲುಪಬಹುದು.

ಷಣ್ಮುಖ ಎಂದರೆ ಆರು ಮುಖ ಎಂಬರ್ಥ ಬರುವುದರಿಂದ ಈ ದೇವಾಲಯ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದ ಡಾ. ಆರ್. ಅರುಣಾಚಲಂ ಇದರ ವಿನ್ಯಾಸದ ಹಾಗೂ ನಿರ್ಮಾಣಗಾರರು. ಹಾಗಾಗಿ ಇದರ ಗೋಪುರವು ಷಣ್ಮುಖನ ಆರು ಮುಖಗಳನ್ನು ಹೊಂದಿದೆ. ಇವರು ಈ ದೇವಾಲಯವನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸುವ ಪ್ರಬಲ ಇಚ್ಛೆ ಹೊಂದಿದ್ದುದರಿಂದ ಈ ಸುಂದರ ದೇವಾಲಯದ ನಿರ್ಮಾಣಕ್ಕೆ ಕಾರಣಕರ್ತರಾದರೆನ್ನಬಹುದು.

ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ

ಚಿತ್ರಕೃಪೆ: Brunda Nagaraj

ಶೃಂಗಗಿರಿ ಗುಡ್ಡವು ಭೂಮಟ್ಟದಿಂದ ಸುಮಾರು 240 ಅಡಿಗಳಷ್ಟು ಎತ್ತರವಿದ್ದು ಇದರ ಮೇಲೆ ಷಣ್ಮುಖನ ದೇವಾಲಯ ನಿರ್ಮಿಸಲಾಗಿದೆ. ದೇವಾಲಯದ ಒಟ್ಟು ಎತ್ತರ 123 ಅಡಿಗಳಿದ್ದು ಅದರಲ್ಲಿ ಗೋಪುರಗಳ ಎತ್ತರ 62 ಅಡಿಗಳಷ್ಟಿದೆ. ಗರ್ಭಗುಡಿಯು ಸಾಂಪ್ರದಾಯಿಕತೆಯ ಕಳೆಯನ್ನು ಹೊಂದಿದ್ದರೆ ದೇವಾಲಯದ ಹೊರರಚನೆಯು ಆಕರ್ಷಕ ವಾಸ್ತುಶೈಲಿಯಿಂದ ಕೂಡಿದ್ದು ಜನರನ್ನು ಸೆಳೆಯುತ್ತದೆ.

ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ

ಈ ದೇವಾಲಯದ ಮುಖ್ಯ ಗುಣಲಕ್ಷಣವೆಂದರೆ ಇದರ ಗೋಪುರ ಹಾಗೂ ಅದರ ಮೇಲಿರುವ "ಕ್ರಿಸ್ಟಲ್" ಗುಮ್ಮಟ. ಇದು ಜಗಮಗಿಸುವ ಲೈಟುಗಳನ್ನು ಹೊಂದಿದ್ದು ಬೆಳಗಿದಾಗ ಅತ್ಯಂತ ಆಕರ್ಷಕವಾಗಿ ಕಂಡುಬರುತ್ತದೆ. ಇನ್ನೂ ಗುಡ್ಡದ ಮೇಲಿರುವುದರಿಂದ ಸುತ್ತಮುತ್ತಲಿನ ಸ್ಥಳಗಳಿಂದ ಸಾಕಷ್ಟು ಗಮನಸೆಳೆಯುತ್ತದೆ.

ಇದರ ಇನ್ನೊಂದು ಗುಣ ಲಕ್ಷಣವೆಂದರೆ ಇದರ ಛಾವಣಿಯಲ್ಲಿ ಅನುಷ್ಠಾನ ಮಾಡಲಾದ ಸೂರ್ಯನ ಕಿರಣಗಳನ್ನು ಗುರುತಿಸುವ ಸೆನ್ಸಾರ್ ಗಳು. ಇದು ಸೂರ್ಯನು ಪೂರ್ವದಲ್ಲಿ ಹುಟ್ಟಿದಾಗಿನಿಂದ ಹಿಡಿದು ಪಶ್ಚಿಮದಲ್ಲಿ ಮುಳುಗುವವರೆಗೆ ಅದರ ಸ್ಥಾನವನ್ನು ಗುರುತಿಸುತ್ತ ಸೂರ್ಯ ಕಿರಣಗಳು ಸದಾ ಷಣ್ಮುಖನ ಮೇಲೆ ಬೀಳುತ್ತಿರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಷಣ್ಮುಖ ದಿನದ ಸಮಯ ಸದಾ ಸೂರ್ಯ ಕಿರಣ ಅಭಿಷೇಕ ಪಡೆಯುತ್ತಾನೆ.

ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ

ಚಿತ್ರಕೃಪೆ: Manavatha

ರಾಜರಾಜೇಶ್ವರಿ ನಗರ ಆರ್ಚ್ ಬೆಂಗಳೂರು-ಮೈಸೂರು ರಸ್ತೆ ಮಾರ್ಗದಲ್ಲಿ ಬರುವುದರಿಂದ ಇಲ್ಲಿಗೆ ತೆರಳಲು ಸಾಕಷ್ಟು ಬಿಎಂಟಿಸಿ ಬಸ್ಸುಗಳು ಕೆಂಪೇಗೌಡ ಬಸ್ಸು ನಿಲ್ದಾಣ ಹಾಗೂ ಕೃಷ್ಣರಾಜೇಂದ್ರ ಮಾರುಕಟ್ಟೆಗಳಿಂದ ದೊರೆಯುತ್ತವೆ. ನಿಮ್ಮ ಸ್ವಂತ ವಾಹನವಿದ್ದಲ್ಲಿ ರಾಜರಾಜೇಶ್ವರಿ ನಗರ ಆರ್ಚಿಗೆ ತೆರಳಿ ಅಲ್ಲಿಂದ ಸ್ಥಳೀಯವಾಗಿ ವಿಚಾರಿಸುತ್ತ ಈ ದೇವಾಲಯವನ್ನು ತಲುಪಬಹುದು.

ಕದ್ದಿರಾಂಪುರದ ಮುರುಗನ ದೇವಾಲಯ

ಷಣ್ಮುಖ ದೇವಾಲಯದ ಹೊರತಾಗಿ ಗುಡ್ಡದ ಕೆಳಗೆ ಪಂಚಮುಖಿ ವಿನಾಯಕನ ದೇವಸ್ಥಾನವನ್ನೂ ಸಹ ನಿರ್ಮಿಸಲಾಗಿದೆ. ಈ ಗಣೇಶನು ವಿಶಿಷ್ಟ, ಏಕೆಂದರೆ ಇಲ್ಲಿ ಪಂಚ ಮುಖಗಳುಳ್ಳ ವಿನಾಯಕನು ಸಿಂಹಾರೂಢನಾಗಿರುವುದು ವಿಶೇಷ. ದೇವಾಲಯ ಬೆಳಿಗೆ 6:30 ರಿಂದ ಅಪರಾಹ್ನ 12:30 ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9:00 ವರೆಗೆ ತೆರೆದಿರುತ್ತದೆ.

ದೇವಾಲಯ ವಿಳಾಸ :

ಶೃಂಗಗಿರಿ ಷಣ್ಮುಖ ದೇವಾಲಯ
ರಾಜರಾಜೇಶ್ವರಿ ನಗರ,
ಕೆಂಗೇರಿ-ಉತ್ತರಹಳ್ಳಿ ಮುಖ್ಯ ರಸ್ತೆಯ ಹತ್ತಿರ,
ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X