Search
  • Follow NativePlanet
Share
» »ಕೇವಲ ಚಿತ್ರಗಳಿಂದ ಈ ಸ್ಥಳಗಳನ್ನು ಗುರುತಿಸಬಲ್ಲಿರಾ?

ಕೇವಲ ಚಿತ್ರಗಳಿಂದ ಈ ಸ್ಥಳಗಳನ್ನು ಗುರುತಿಸಬಲ್ಲಿರಾ?

By Vijay

ಒಮ್ಮೊಮ್ಮೆ ಸ್ಥಳಗಳ ಚಿತ್ರ ನೋಡುತ್ತಲೆ ಅದರೆಡೆಗೆ ಆಕರ್ಷಿತರಾಗಿಬಿಡುತ್ತೇವೆ. ಒಮ್ಮೆಯಾದರೂ ಸರಿ, ಈ ಸ್ಥಳ ನೋಡಿಕೊಂಡು ಬರಲೇಬೇಕೆಂದುಕೊಳ್ಳುತ್ತೇವೆ. ಈ ರಿತಿ ನಿಮಗೂ ಒಮ್ಮೆಯಾದರೂ ಅನಿಸಿರಲೇಬೇಕು. ಏಕೆಂದರೆ ಪ್ರಕೃತಿಯ/ನಿಸರ್ಗದ ಸುಂದರತೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ವಿವರವಾಗಿ ಚಿತ್ರದಲ್ಲಿ ಸೆರೆ ಹಿಡಿದಾಗ ಅದರಲ್ಲಿ ಕಂಡುಬರುವ ವೈಭವವೆ ಬೇರೆ ರೀತಿಯದ್ದಾಗಿರುತ್ತದೆ.

ಪೊರ್ಟ್ರೈಟ್ ಚಿತ್ರಗಳ ಬದಲಾಗಿ ಲ್ಯಾಂಡ್ ಸ್ಕೇಪ್ ಮೋಡ್ನಲ್ಲಿ ಅಡ್ಡಡ್ಡಲಾಗಿ ಸುವಿಸ್ತಾರವಾಗಿ ಸೆರೆ ಹಿಡಿಯಲಾಗುವ ಚಿತ್ರಗಳನ್ನು ಸಾಮಾನ್ಯವಾಗಿ ಪನೋರಮಿಕ್ ಚಿತ್ರಗಳೆಂದು ಕರೆಯುತ್ತೇವೆ. ಕನ್ನಡದಲ್ಲಿ ಹೇಳಬೇಕೆಂದರೆ ವಿಹಂಗಮ ಪಟ/ಚಿತ್ರ ಅಥವಾ ದೃಶ್ಯ ಎಂದೆಲ್ಲ ಹೇಳಬಹುದು. ಈ ರೀತಿ ಚಿತ್ರ ಕ್ಲಿಕ್ಕಿಸುವುದೂ ಸಹ ಒಂದು ಕಲೆಯೆ. ಅದೇ ರೀತಿ ಕರ್ನಾಟಕದ ವಿಹಂಗಮ ಚಿತ್ರಗಳು ಸದಾ ನೆನಪಿನಲ್ಲುಳಿವಂತಿವೆ.

ನಿಮಗಿಷ್ಟವಾಗಬಹುದಾದ : ಭಾರತದ ಶ್ರಿಮಂತಿಕೆಯ ವೈಭವ ಸಾರುವ ಚಿತ್ರಗಳು

ಪ್ರಸ್ತುತ ಲೇಖನದಲ್ಲಿ ಕೆಲವು ಅದ್ಭುತ ಹಾಗೂ ಪ್ರವಾಸಿ ಆಕರ್ಷಣೆಯುಳ್ಳ ಸ್ಥಳಗಳ ವಿಹಂಗಮ ಚಿತ್ರಗಳನ್ನು ತೋರಿಸಲಾಗಿದೆ. ನೀವು ಆ ಸ್ಥಳದ ಕುರಿತು ಓದಿ ತಿಳಿಯುವ ಮೊದಲು ಆ ನಿರ್ದಿಷ್ಟ ಚಿತ್ರ ಯಾವ ಸ್ಥಳದ್ದಾಗಿರಬಹುದು ಎಂದು ಗುರುತಿಸಲು ಪ್ರಯತ್ನಿಸಿ ನೋಡಿ. ಇದರಿಂದ ನಿಮ್ಮ ಜ್ಞಾಪಕ ಶಕ್ತಿ ಹೇಗಿದೆ ಎಂಬುದು ನಿಮಗೆ ಗೊತ್ತಾಗಬಹುದು.

ನೀವು ಪ್ರಕೃತಿಪ್ರಿಯ ಪ್ರವಾಸಿಗರಾಗಿದ್ದಲ್ಲಿ, ಹಿಂದೊಮ್ಮೆ ಆ ಸ್ಥಳಕ್ಕೆ ಭೇಟಿ ಮಾಡಿದ್ದಾದಲ್ಲಿ ಖಂಡಿತವಾಗಿಯೂ ಥಟ್ ಅಂತ ಅದಕ್ಕೆ ಉತ್ತರ ಕೊಡಬಹುದೆಂಬ ನಂಬಿಕೆ ನಮ್ಮದು. ಒಂದು ವೇಳೆ ಹೀಗಾಗದಿದ್ದ ಪಕ್ಷದಲ್ಲಿ ಆ ಸ್ಥಳ ಯಾವುದೆಂದು ತಿಳಿದು ಸಮಯ ಸಿಕ್ಕಾಗ ಅಲ್ಲಿಗೆ ತೆರಳಿ ನಿಮ್ಮದೆ ಆದ ಒಂದು ಸುಂದರ ಚಿತ್ರ ಕ್ಲಿಕ್ಕಿಸಿ ನಮ್ಮೊಂದಿಗೆ ಹಂಚಿಕೊಳ್ಳಿ.

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಕರ್ನಾಟಕದಲ್ಲೆ ಅತಿ ಸುಂದರ ಕಡಲ ತೀರಗಳ ಪೈಕಿ ಒಂದಾಗಿದೆ. ರಾಷ್ಟ್ರೀಯ ಹೆದ್ದಾರಿಯೊಂದರ ಒಂದು ಬದಿಯಲ್ಲಿ ನದಿಯಿದ್ದರೆ ಇನ್ನೊಂದು ಬದಿಯಲ್ಲಿ ವಿಶಾಲವಾದ ಸಮುದ್ರವಿದೆ. ಗೊತ್ತಾಯಿತೆ? ಪ್ರಯತ್ನಿಸಿ...

ಉತ್ತರ : ಕುಂದಾಪುರದ ಬಳಿಯಿರುವ ಮರವಂತೆ.

ಚಿತ್ರಕೃಪೆ: Nkodikal

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಈ ಜಲಪಾತ ದಕ್ಷಿಣದ ಪ್ರಖ್ಯಾತ ಗಿರಿಧಾಮವೊಂದರಲ್ಲಿದೆ. ಕರ್ನಾಟಕದ ಜೀವನದಿಯೂ ಉಗಮಗೊಳ್ಳುವುದು ಇದೆ ಸ್ಥಳದಲ್ಲಿ. ಗೊತ್ತಾಯಿತೆ?

ಉತ್ತರ : ಅಬ್ಬಿ ಜಲಪಾತ, ಮಡಿಕೇರಿ.

ಚಿತ್ರಕೃಪೆ: Vaishak Kallore

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದೊಂದು ಸುಂದರ ಜೈನ ಬಸದಿ. ಈ ಸ್ಥಳ ಹಿಂದೆ ಇಲ್ಲಿ ಹೆಚ್ಚಾಗಿ ಬೆಳೆಯುತಿದ್ದ ಬಿದಿರುಗಳಿಂದ ತನ್ನ ಹೆಸರು ಪಡೆದುಕೊಂಡಿದೆ. ಕನ್ನಡದಲ್ಲಿ "ಪೂರ್ವ"ಕ್ಕೆ ಉಪಯೋಗಿಸುವ ಇನ್ನೊಂದು ಪದ ಹಾಗೂ ಬಿದಿರಿನಿಂದ ಈ ಸ್ಥಳದ ಹೆಸರು ರೂಪಿತವಾಗಿದೆ. ಗೊತ್ತಾಯಿತೆ?

ಉತ್ತರ : ಸಾವಿರ ಖ್ಂಬದ ಬಸದಿ, ಮೂಡಬಿದ್ರಿ/ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ.

ಚಿತ್ರಕೃಪೆ: Vaikoovery

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಈ ನಯನಮನೋಹರವಾದ ಪ್ರಕೃತಿ ಸೌಂದರ್ಯ ಹೊಂದಿರುವ ಈ ಸ್ಥಳವು ಜಗತ್ತಿನಲ್ಲೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳ ಪೈಕಿ ಒಂದಾಗಿದೆ. ದಕ್ಷಿಣದ ಚಿರಾಪುಂಜಿ ಎಂದೆ ಪ್ರಖ್ಯಾತಿಗಳಿಸಿದೆ. ಭಾರತದಲ್ಲಿ ಮಳೆಗಾಡು ಸಂಶೋಧನಾ ಕೇಂದ್ರ ಹೊಂದಿರುವ ಏಕೈಕ ತಾಣ ಇದಾಗಿದೆ. ಇಲ್ಲಿನ ಸೂರ್ಯಾಸ್ತ ಅತಿ ಮನಮೋಹಕ ಹಾಗೂ ಜನಪ್ರೀಯ. ಗೊತ್ತಾಯಿತೆ?

ಉತ್ತರ : ಆಗುಂಬೆ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ.

ಚಿತ್ರಕೃಪೆ: Sajjad Fazel

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಉತ್ತರ ಕರ್ನಾಟಕ ಭಾಗದಲ್ಲಿರುವ ಈ ಆಣೆಕಟ್ಟನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಬಾಗಲಕೋಟೆ, ವಿಜಯಪುರಗಳ ಅಂಚುಗಳಲ್ಲಿ ಇದು ಸ್ಥಿತವಿದೆ.

ಉತ್ತರ : ಆಲಮಟ್ಟಿ ಆಣೆಕಟ್ಟು, ವಿಜಯಪುರ ಜಿಲ್ಲೆ.

ಚಿತ್ರಕೃಪೆ: Murughendra

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಈ ಅದ್ಭುತ ಬೆಟ್ಟ ಶ್ರೇಣಿ ಪಶ್ಚಿಮ ಘಟ್ಟಗಳಲ್ಲಿ ಆವರಿಸಿದ್ದು ಧಾರ್ಮಿಕ ದೃಷ್ಟಿಯಿಂದಲೂ ಪ್ರಸಿದ್ಧಿ ಪಡೆದಿದೆ. ಹಿಂದು, ಮುಸ್ಲಿಮ್ ಇಬ್ಬರಿಗೂ ಇದು ಪವಿತ್ರವಾದ ತಾಣವೆಂದೆ ಹೇಳಬಹುದು.

ಉತ್ತರ : ಬಾಬಾ ಬುಡನ್ ಗಿರಿ ಬೆಟ್ಟಗಳು, ಚಿಕ್ಕಮಗಳೂರು ಜಿಲ್ಲೆ.

ಚಿತ್ರಕೃಪೆ: S N Barid

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಈ ಚಿತ್ರವನ್ನು ಶ್ರಿ ತಿರುಮಲ ವೆಂಕಟರಮಣಸ್ವಾಮಿ ದೇವಾಲಯದ ಆವರಣದಿಂದ ತೆಗೆಯಲಾಗಿದೆ. ನೇತ್ರಾವತಿ ನದಿ ಹರಿದಿರುವ ಈ ಸ್ಥಳ ಹಿಂದೆ ಪ್ರಖ್ಯಾತ ವ್ಯಾಪಾರ ಕೇಂದ್ರವಾಗಿತ್ತು. ನೆರೆ ಹಾವಳಿಯಿಂದಾಗಿ ತನ್ನ ವರ್ಚಸ್ಸನ್ನು ಕಡಿಮೆ ಮಾಡಿಕೊಂಡಿತು. ನಂತರ ಇಲ್ಲಿ ಮೈದೆಳೆದಿದ್ದ ಅನೇಕ ವಹಿವಾಟುಗಾರರು ಪಕ್ಕದ ಬಿಸಿ ರೋಡ್ ಗೆ ತೆರಳಿ ನೆಲೆಸಿದರು.

ಉತ್ತರ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ.

ಚಿತ್ರಕೃಪೆ: B.Prashanth Bhat

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಮಂತ್ರಮುಗ್ಧಗೊಳಿಸುವಂತಹ ಬೆಟ್ಟಗಳ ಶ್ರೇಣಿ. ಕೊಡಗು ಜಿಲ್ಲೆಯಲ್ಲಿರುವ ಈ ಬೆಟ್ಟ ಚಾರಣಕ್ಕೂ ಸಹ ಪ್ರಸಿದ್ಧ. ಸೃಷ್ಟಿಕರ್ತನೊಂದಿಗೆ ನಂಟನ್ನು ಹೊಂದಿರುವ ಈ ಬೆಟ್ಟ ಪಶ್ಚಿಮ ಘಟ್ಟದಲ್ಲಿ ನೆಲೆಸಿದೆ.

ಉತ್ತರ : ಬ್ರಹ್ಮಗಿರಿ ಪರ್ವತಗಳು, ಕೊಡಗು.

ಚಿತ್ರಕೃಪೆ: L. Shyamal

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಸುಂದರವಾಗಿ ಗೋಚರಿಸುವ ಬೆಟ್ಟಗಳ ಸಲಿರುವ ಈ ಚಿತ್ರವನ್ನು ಕೃಷ್ಣಯ್ಯನ ಕಟ್ಟೆ ಜಲಾಶಯದಿಂದ ಸೆರೆ ಹಿಡಿಯಲಾಗಿದೆ. ವಿಷ್ಣುವಿನ ಇನ್ನೊಂದು ಹೆಸರಿನ ಹೆಸರನ್ನು ಹೊಂದಿರುವ ಈ ತಾಣವು ಕರ್ನಾಟಕದ ಗಡಿಯಲ್ಲಿದ್ದು ತಮಿಳು ನಾಡಿನ ಈರೋಡ್ ಜಿಲ್ಲೆಗೆ ಹತ್ತಿರವಾಗಿ ನೆಲೆಸಿದೆ. ಶರಪಂಜರ ಚಿತ್ರದಲ್ಲಿ ಕಲ್ಪನಾರವರು ಹಾಡುವ ಒಂದು ಅದ್ಭುತ ಹಾಡು ಈ ಹೆಸರಿನಿಂದಲೆ ಪ್ರಾರಂಭವಾಗುತ್ತದೆ.

ಉತ್ತರ : ಬಿಳಿಗಿರಿ ರಂಗನ ಬೆಟ್ಟ (ಬಿ ಆರ್ ಹಿಲ್ಸ್), ಚಾಮರಾಜನಗರ ಜಿಲ್ಲೆ

ಚಿತ್ರಕೃಪೆ: Prashanthns

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಕರ್ನಾಟಕ ರಾಜ್ಯದ ಕೋಲಾರದಲ್ಲಿರುವ ಅಷ್ಟಗ್ರಾಮದ ಪ್ರಮುಖ ಹಳ್ಳಿ. ಅಷ್ಟಗ್ರಾಮವು ಎಂಟು ಗ್ರಾಮಗಳನ್ನು ಹೊಂದಿರುವ ಒಂದು ಪ್ರದೇಶವಾಗಿದ್ದು ಅಯ್ಯಂಗಾರಿ ಬ್ರಾಹ್ಮಣರ ಪ್ರಮುಖ ಕೇಂದ್ರವಾಗಿ ಮೆರೆದಿತ್ತು ಹಿಂದೆ ಮೈಸೂರು ಅರಸರ ಕಾಲದಲ್ಲಿ. ಮೈಸೂರಿನ ಕೃಷ್ಣದೇವರಾಯರು ಈ ಗ್ರಾಮವನ್ನು ದಾನ ಮಾಡಿ ಅವರ ಒಂದು ಭಾಗದ ಹೆಸರು ಈ ತಾಣದೊಂದಿಗೆ ಸೇರಿಕೊಂಡಿದೆ.

ಉತ್ತರ : ದೇವರಾಯಸಮುದ್ರಂ, ಕೋಲಾರ

ಚಿತ್ರಕೃಪೆ: Gundachandru

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಚಾಮರಾಜನಗರ ಜಿಲ್ಲೆಯಲ್ಲಿರುವ ಪ್ರಖ್ಯಾತ ಬೆಟ್ಟ. ಕೃಷ್ಣನಿಗೆ ಮುಡಿಪಾದ ದೇವಸ್ಥಾನ ಹೊಂದಿರುವ ಈ ತಾಣ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲೆ ಬರುತ್ತದೆ. ಚಳಿಗಾಲದ ಸಮಯದಲ್ಲಿ ದೇವಸ್ಥಾನವು ಹಿಮದಂತೆ ಭಾಸವಾಗುವ ಇಬ್ಬನಿಯಿಂದ ಕೂಡಿರುತ್ತದೆ.

ಉತ್ತರ : ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಚಾಮರಾಜನಗರ

ಚಿತ್ರಕೃಪೆ: sabarinathjp

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಬಂದರು ನಗರಿ ಮಂಗಳೂರಿನಿಂದ 12 ಕಿ.ಮೀ ದೂರದಲ್ಲಿದೆ. ನಿಜ ಹೇಳಬೇಕೆಂದರೆ ಇದು ನದಿಯಲ್ಲಿ ರೂಪಿತವಾಗಿರುವ ಚಿಕ್ಕ ನಡುಗಡ್ಡೆ ಪ್ರದೇಶವಾಗಿದೆ. ಇಲ್ಲಿಗೆ ತಲುಪಲು ಇನ್ನೂ ಸಾಂಪ್ರದಾಯಿಕವಾಗಿ ಕಟ್ಟಿಗೆಗಳಿಂದ ನಿರ್ಮಿಸಲಾದ ಸೇತುವೆಯನ್ನೆ ಬಳಸಲಾಗುತ್ತದೆ.

ಉತ್ತರ : ಪಾವೂರು, ದಕ್ಷಿಣ ಕನ್ನಡ ಜಿಲ್ಲೆ

ಚಿತ್ರಕೃಪೆ: Vaikoovery

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಪ್ರಸಿದ್ಧ ಇಂಗ್ಲೀಷ್ ಪುರಾತತ್ವ ಇತಿಹಾಸಕಾರ ಹೇಳುವ ಹಾಗೆ ದೇವಸ್ಥಾನದ ಶಿಲ್ಪಕಲೆಯು ಕನ್ನಡ ಪ್ರದೇಶದಲ್ಲಿ ಹಳೇಬೀಡಿನ ನಂತರ ಅತಿ ಉತ್ಕೃಷ್ಟವಾದದ್ದು. ಪಶ್ಚಿಮ ಚಾಲುಕ್ಯರ ಕಲಾ ನೈಪುಣ್ಯತೆಯನ್ನು ತೋರುವ ಈ ದೇವಾಲಯ ಶಿವನಿಗೆ ಮುಡಿಪಾಗಿದೆ.

ಉತ್ತರ : ಮಹಾದೇವ ದೇವಸ್ಥಾನ, ಇಟಗಿ, ಕೊಪ್ಪಳ ಜಿಲ್ಲೆ.

ಚಿತ್ರಕೃಪೆ: Dineshkannambadi

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಕರ್ನಾಟಕ ಮಾತ್ರವಲ್ಲ ಭಾರತದಲ್ಲೆ ಹೆಚ್ಚು ಪ್ರಸಿದ್ಧವಾದ ಜಲಪಾತ. ರಾಜಾ, ರಾಣಿ, ರಾಕೆಟ್, ರೋರರ್ ಎಂದು ನಾಲ್ಕು ಒಸಳುಗಲ ಮೂಲಕ ಧರೆಗೆ ಧುಮುಕುವ ಈ ಅದ್ಭುತ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದೆ.

ಉತ್ತರ : ಜೋಗದ ಗುಂಡಿ/ಜೋಗ ಜಲಪಾತ, ಶಿವಮೊಗ್ಗ ಜಿಲ್ಲೆ.

ಚಿತ್ರಕೃಪೆ: Prasanaik

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ದೇವಿಯು ಮೂಕಾಸುರನೆಂಬ ರಾಕ್ಷಸನನ್ನು ಸಂಹರಿಸಿ ಇಲ್ಲಿ ನೆಲೆಸಿದ್ದಾಳೆ. ಇದು ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ. ಪ್ರಸಿದ್ಧ ಗಾಯಕರಾದ ಜೆ ಕೆ ಯೆಸುದಾಸ್ ಅವರು ಈ ದೇವಿಯ ಭಕ್ತರಾಗಿದ್ದು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಉತ್ತರ : ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಉಡುಪಿ ಜಿಲ್ಲೆ.

ಚಿತ್ರಕೃಪೆ: Premkudva

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಕಾವೇರಿ ನದಿಯ ದಡವೊಂದರಲ್ಲಿ ನೆಲೆಸಿರುವ ಈ ತಾಣವು ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ನೆಲೆಸಿರುವ ಜನರಿಗೆ ಚುಟುಕು ಪ್ರವಾಸ ಕೈಗೊಳ್ಳಲು ಉಪಯುಕ್ತವಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಈ ತಾಣ ಮಳವಳ್ಳಿಗೆ ಹತ್ತಿರದಲ್ಲಿದ್ದು ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿದೆ. ನಟಸಾರ್ವಭೌಮ ಡಾ.ರಾಜ್ ಅವರ ಹೆಸರಿನ ಮೊದಲ ಎರಡು ಪದಗಳಿಂದ ಈ ತಾಣದ ಹೆಸರು ಪ್ರಾರಂಭವಾಗುತ್ತದೆ.

ಉತ್ತರ : ಮುತ್ತತ್ತಿ, ಮಂಡ್ಯ.

ಚಿತ್ರಕೃಪೆ: Sujit Reddy G

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಬೆಂಗಳೂರಿನಿಂದ 60 ಕಿ.ಮೀ ಗಳಷ್ಟು ದುರದಲ್ಲಿರುವ ಈ ಬೆಟ್ಟ ತಾಣ ಅದ್ಭುತ ಪ್ರವಾಸಿ ಕೇಂದ್ರ. ಭೋಗ ನಂದೀಶ್ವರನ ದೇವಸ್ಥಾನವಿರುವ ಈ ತಾಣ ಅರ್ಕಾವತಿ ನದಿಯ ಉಗಮ ಸ್ಥಾನ ಎಂದು ನಂಬಲಾಗಿದೆ.

ಉತ್ತರ : ನಂದಿ ಬೆಟ್ಟ, ಚಿಕ್ಕಬಳ್ಳಾಪುರ

ಚಿತ್ರಕೃಪೆ: Koshy Koshy

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಕರ್ನಾಟಕದಲ್ಲಿ ನೋಡಬಹುದಾದ ಪ್ರಸಿದ್ಧ ಕಡಲ ತೀರಗಳ ಪೈಕಿ ಇದೂ ಒಂದು. ಈ ಕಡಲ ತೀರ ಹಿಂದುಗಳ ಒಂದು ಪವಿತ್ರ ಸಂಕೇತದ ಆಕಾರದಲ್ಲಿದ್ದು ಅದೆ ಹೆಸರಿನಿಂದ ತನ್ನ ಹೆಸರು ಪಡೆದಿದೆ. ಆಕಳ ಕಿವಿ ಎಂಬರ್ಥಕೊಡುವ ಕ್ಷೇತ್ರದಲ್ಲಿರುವ ಈ ಕಡಲ ತೀರ ಕ್ಷೇತ್ರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಇನ್ನೊಂದು ಸಂಗತಿ ಎಂದರೆ ಇಲ್ಲಿ ಶಿವನ ಆತ್ಮ ಲಿಂಗವಿದೆ ಎಂದು ನಂಬಲಾಗಿದೆ.

ಉತ್ತರ : ಓಂ ಕಡಲ ತೀರ, ಗೋಕರ್ಣ

ಚಿತ್ರಕೃಪೆ: Axis of eran

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಬೆಂಗಳೂರಿನಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿರುವ ಐತಿಹಾಸಿಕ ಮಹತ್ವವುಳ್ಳ ಕೋಟೆಯಾಗಿದೆ. ಹಿಂದೆ ಇದು ದೇವನದೊಡ್ಡಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಇಂದು ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸಹ ಇರುವುದು ವಿಶೇಷ.

ಉತ್ತರ : ದೇವನಹಳ್ಳಿ ಕೋಟೆ.

ಚಿತ್ರಕೃಪೆ: Ch4nd4nk

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಕರ್ನಾಟಕದಲ್ಲಿರುವ, ಜೈನರ ಪಾಲಿನ ಪ್ರಖ್ಯಾತ ತೀರ್ಥಕ್ಷೇತ್ರ. ಇಲ್ಲಿ ಎರಡು ಬೆಟ್ಟಗಳಿದ್ದು ಒಂದರ ಮೇಲೆ ಅಮೋಘವಾದ ಏಕ ಶಿಲೆಯಲ್ಲಿ ಕೆತ್ತಲಾದ ಪ್ರತಿಮೆಯಿದ್ದರೆ ಚಿತ್ರದಲ್ಲಿರುವ ಬೆಟ್ಟದ ಮೇಲೆ ಜೈನ ದೇಗುಲಗಳಿವೆ.

ಉತ್ತರ : ಚಂದ್ರಗಿರಿ ಬೆಟ್ಟ, ಶ್ರವಣಬೆಳಗೋಳ.

ಚಿತ್ರಕೃಪೆ: Nikhil_Varma

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯಿಂದ ಸುಮಾರು ಏಳು ಕಿ.ಮೀ ದೂರದಲ್ಲಿದೆ. ಇದೊಂದು ಬೃಹತ್ ಏಕಶಿಲಾ ಬಂಡೆಯಾಗಿದ್ದು ಮೇಲೆ ಒಂದು ಗುಹಾಂತರ ದೇವಾಲಯವನ್ನೂ ಸಹ ಹೊಂದಿದೆ. ಸ್ಥಳ ಪುರಾಣದಂತೆ ಹಿಂದೆ ಬ್ರಿಟೀಷ್ ನಾವಿಕರು ಇದರ ಬೃಹತ್ ಗಾತ್ರವನ್ನು ಸಮುದ್ರದಿಂದಲೇ ನೋಡಿ ಇದನ್ನು "ಕತ್ತೆಯ ಕಿವಿಗಳು" ಎಂದು ಕರೆದಿದ್ದರಂತೆ. ಇದು ಚಾರಣಕ್ಕೆ ಯೋಗ್ಯವಾದ ಸ್ಥಳವಾಗಿದೆ. ಅಲ್ಲದೆ ಬೆಟ್ಟದ ಮೇಲಿನ ಪರಿಸರವು ಶಾಂತವಾಗಿದ್ದು ಧ್ಯಾನ ಮಾಡಲು ಪ್ರಶಸ್ತವಾಗಿದೆ.

ಉತ್ತರ : ಕೊಣಾಜೆ ಕಲ್ಲು, ದಕ್ಷಿಣ ಕನ್ನಡ.

ಚಿತ್ರಕೃಪೆ: Karunakar Rayker

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಕರ್ನಾಟಕದ ಮೂರನೇಯ ಅತಿ ಎತ್ತರದ ಬೆಟ್ಟ. ಚಾರಣಕ್ಕೂ ಯೋಗ್ಯವಾದ ಸ್ಥಳ. ಐತಿಹಾಸಿಕ ಮಹತ್ವವುಳ್ಳ ಗುರುತರ ಸ್ಮಾರಕವಾದ ನಾಲ್ಕುನಾಡು ಅರಮನೆ ಈ ಬೆಟ್ಟದ ಬುಡದಲ್ಲಿದೆ. ಕೊಡವ ಭಾಷೆಯಲ್ಲಿ ಇದನ್ನು ನಾಲನಾಡು ಅರಮನೆ ಎಮ್ದೆ ಕರೆಯುತ್ತಾರೆ.

ಉತ್ತರ : ತಡಿಯಂಡಮೋಳ ಬೆಟ್ಟ, ಕೊಡಗು.

ಚಿತ್ರಕೃಪೆ: L. Shyamal

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದು ಭಾರತದಲ್ಲೆ ದೊಡ್ಡ ಆಣೆಕಟ್ಟುಗಳ ಪೈಕಿ ಒಂದಾಗಿದ್ದು ಕರ್ನಾಟಕದ ಅತಿ ದೊಡ್ಡ ಆಣೆಕಟ್ಟಾಗಿದೆ. ಹೊಸಪೇಟೆ ಸಮೀಪವಿರುವ ಈ ಆಣೆಕಟ್ಟನ್ನು ಕೃಷ್ಣಾ ನದಿಯ ಉಪನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದೆ. ಆಂಧ್ರದ ರಾಯಲ್ ಸಿಮಾ ಹಾಗೂ ಕರ್ನಾಟಕದ ಭಾಗಗಳ ಜನರಿಗೆ ಇದರಿಂದ ಉಪಯೋಗವಾಗಿದೆ.

ಉತ್ತರ : ತುಂಗಭದ್ರಾ ಆಣೆಕಟ್ಟು

ಚಿತ್ರಕೃಪೆ: Haxplorer

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ನಯನ ಮನೋಹರವಾದ ಈ ಜಲಪಾತವನ್ನು ಪ್ರೀತಿಯಿಂದ "ಉತ್ತರ ಕರ್ನಾಟಕದ ನಯಾಗ್ರಾ" ಎಂದೆ ಕರೆಯಲಾಗುತ್ತದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತ ತಾನಿರುವ ಸ್ಥಳದ ಹೆಸರಿನಿಂದಲೆ ಜನಪ್ರೀಯವಾಗಿದೆ. ಅಂದ ಹಾಗೆ ಈ ಜಲಪಾತವಿರುವ ತಾಣ ಸಿಹಿಯಾದ ಖಾದ್ಯಕ್ಕೊಂದು ಬಲು ಹೆಸರುವಾಸಿ.

ಉತ್ತರ : ಗೋಕಾಕ್ ಜಲಪಾತ, ಬೆಳಗಾವಿ ಜಿಲ್ಲೆ.

ಚಿತ್ರಕೃಪೆ: Sandeep Prakash

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನ ಹೊಯ್ಸಳ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ವಿಸ್ತಾರವಾದ ಮಂಟಪ ಹೊಂದಿರುವ ಈ ದೇವಸ್ಥಾನದಲ್ಲಿರುವ ಖಂಬಗಳು ಅದ್ಭುತವಾಗಿ ಕೆತ್ತಲ್ಪಟ್ಟಿದ್ದು ಹೊಳಪಿನಿಂದ ಕೂಡಿದೆ. ಅಮೃತಪುರ ಎಂಬಲ್ಲಿರುವ ಈ ದೇವಸ್ಥಾನ ಶಿವನಿಗೆ ಮುಡಿಪಾಗಿದೆ.

ಉತ್ತರ : ಅಮೃತೇಶ್ವರ ದೇವಸ್ಥಾನ

ಚಿತ್ರಕೃಪೆ: Shynahegde

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದೊಂದು ಬೆಟ್ಟದ ಮೆಲಿನ ಕೋಟೆ ಪ್ರದೇಶವಾಗಿದೆ. ಚಾರಣಕ್ಕೆ ಪ್ರಸಿದ್ಧಿ ಪಡೆದಿರುವ ಈ ತಾಣವು ಕುದುರೆಮುಖ ಪರ್ವತ ಶ್ರೇಣಿಗಳಲ್ಲಿ ಬರುತ್ತದೆ. ಕೋಟೆಯು ಟಿಪ್ಪು ಸುಲ್ತಾನನಿಂದ ನಿರ್ಮಿಸಲ್ಪಟ್ಟಿದ್ದು ಅವನ ತಾಯಿಯ ನೆನಪಿನಾರ್ಥವಾಗಿ ಈ ಕೋಟೆಗೆ ಹೆಸರಿಡಲಾಗಿದೆ.

ಉತ್ತರ : ಜಮಾಲಾಬಾದ್ ಕೋಟೆ, ಬೆಳ್ತಂಗಡಿ

ಚಿತ್ರಕೃಪೆ: Prashmob

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಹೈದರಾಬಾದ್ ಕರ್ನಾಟಕ ಭಾಗದ ಒಂದು ಪಟ್ಟಣದಲ್ಲಿ ಈ ಸುಂದರ ಕೆರೆಯನ್ನು ಕಾಣಬಹುದು. ಈ ಕೆರೆಯ ಆಕಾರ ಮಾವಿನ ಕಾಯಿಯ ಹಾಗಿದ್ದು ನೋಡಲು ಆಕರ್ಷಕವಾಗಿದೆ. ಈ ಪಟ್ಟಣದ ಹೆಸರು ಕರ್ನಾಟಕದಲ್ಲಿ ಐಐಟಿ ಸ್ಥಾಪನೆಯಾಗಬೇಕಾದ ಊರುಗಳ ಸ್ಪರ್ಧೆಯಲ್ಲಿ ಬಲವಾಗಿ ಕೇಳಿಸಲ್ಪಟ್ಟಿತ್ತು.

ಉತ್ತರ : ಆಮ್ ತಾಲಾಬ್/ಮಾವಿನ ಕೆರೆ, ರಾಯಚೂರು

ಚಿತ್ರಕೃಪೆ: Tanzeelahad

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಇದೊಂದು ಸುಂದರ ಕೆರೆಯಾಗಿದ್ದರೂ ನಿರ್ಲಕ್ಷಿಸಲ್ಪಡುತ್ತಿದೆ. ಅಲಲ್ಲಿ ಕೆರೆಯ ಒತ್ತುವರಿ ಮಾಡಲಾಗುತ್ತಿದೆ ಎಂದೂ ಸಹ ದೂಷಿಸಲಾಗುತ್ತಿದೆ. ಈ ಕೆರೆ ಇರುವುದು "ಭಾರತದ ಸಿಲಿಕಾನ್ ವ್ಯಾಲಿ" ಎಂದು ಮನ್ನಣೆಗಳಿಸಿರುವ ಪ್ರತಿಷ್ಠಿತ ನಗರವೊಂದರಲ್ಲಿ.

ಉತ್ತರ : ವಾರಣಾಸಿ ಕೆರೆ, ರಾಮಮೂರ್ತಿ ನಗರ, ಬೆಂಗಳೂರು.

ಚಿತ್ರಕೃಪೆ: Suresh.vinay

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ಈ ಸ್ಥಳದ ಕೊಂಪೆ ಕೊಂಪೆಯೂ ತನ್ನ ಗತ ವೈಭವವನ್ನು ಸಾರಿ ಸಾರಿ ಹೇಳುತ್ತಿದೆ. ಯುನೆಸ್ಕೊದಿಂದ ಮಾನ್ಯತೆ ಪಡೆದ ವಿಶ್ವವಿಖ್ಯಾತ ತಾಣ ಇದಾಗಿದೆ. ಒಂದಾನೊಂದು ಕಾಲದಲ್ಲಿ ಕರ್ನಾಟಕದ ಪ್ರತಿಷ್ಠಿತ ಹಾಗೂ ಶ್ರೀಮಂತ ಸಾಮ್ರಾಜ್ಯವೊಂದರ ರಾಜಧಾನಿ ಪಟ್ಟಣವಾಗಿ ಮೆರೆದಿತ್ತು ಈ ಅದ್ಭುತ ಶಿಲ್ಪಕಲೆಗಳನ್ನು ಹೊತ್ತ ನಗರ.

ಉತ್ತರ : ಹಂಪಿ, ಬಳ್ಳಾರಿ ಜಿಲ್ಲೆ

ಚಿತ್ರಕೃಪೆ: Manjunath Doddamani Gajendragad

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಹೇಳಿ ನೋಡೋಣ ಇದು ಯಾವ ಸ್ಥಳ ಎಂದು? ಉತ್ತರ ನೋಡುವ ಮುನ್ನ ಒಮ್ಮೆ ಯೋಚಿಸಿ. ದಕ್ಷಿಣ ಭಾರತದ ರಾಜ್ಯವೊಂದರ "ಸಾಂಸ್ಕೃತಿಕ ರಾಜಧಾನಿ" ಯ ನಗರದಲ್ಲಿದೆ ಈ ತಾಣ. ಭಾರತದಲ್ಲಿರುವ ಸುಂದರವಾದ ಹಾಗೂ ವಿಶಾಲವಾದ ಉದ್ಯಾನಗಳ ಪೈಕಿ ಇದೂ ಒಂದು. ಈ ಸುಂದರ ಉದ್ಯಾನ ಕರ್ನಾಟಕದ ಜನಪ್ರೀಯ ಜಲಾಶಯದ ಒಂದು ಭಾಗವಾಗಿದೆ.

ಉತ್ತರ : ಬೃಂದಾವನ/ ಕೆಆರ್‍ಎಸ್ ಉದ್ಯಾನ, ಮಂಡ್ಯ ಜಿಲ್ಲೆ

ಚಿತ್ರಕೃಪೆ: Sunil Nallode

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X