Search
  • Follow NativePlanet
Share
» »ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

By Vijay

ತಿರುಪತಿ ತಿರುಮಲವು ಕೇವಲ ಭಾರತದಷ್ಟೆ ಅಲ್ಲ ಪ್ರಪಂಚದಲ್ಲೆ ಹೆಸರುವಾಸಿಯಾಗಿದೆ. ಇಲ್ಲಿರುವ ಏಳು ಬೆಟ್ಟಗಳ ಒಡೆಯನೆಂದು ಕರೆಯಲ್ಪಡುವ ಶ್ರೀ ವೆಂಕಟೇಶ್ವರ ಅರ್ಥಾತ್ ಬಾಲಾಜಿಯ ದೇವಸ್ಥಾನದಿಂದ ಇಂದು ತಿರುಪತಿಯು ವಿಶ್ವ ಭೂಪಟದಲ್ಲಿ ಪ್ರಖರವಾಗಿ ಗುರುತಿಸಿ ಕೊಳ್ಳುತ್ತದೆ. ತಿರುಪತಿಯ ಈ ಬಾಲಾಜಿ ದೇವಸ್ಥಾನಕ್ಕೆ ಏನೀಲ್ಲವೆಂದರೂ ಪ್ರತಿ ದಿನ ಲಕ್ಷಗಳಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.

ವಿಶೇಷ ಲೇಖನ : ಏಳು ಬೆಟ್ಟಗಳ ಒಡೆಯನ ಕ್ಷೇತ್ರ

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ತಿರುಪತಿ ತಿರುಮಲ ಕ್ಷೇತ್ರಗಳಲ್ಲಿ ಬಾಲಾಜಿಯ ಮುಖ್ಯ ದೇವಸ್ಥಾನದ ಹೊರತಾಗಿ ಇತರೆ ಕೆಲವು ಪ್ರಮುಖ ದೇವಸ್ಥಾನಗಳೂ ಕಂಡುಬರುತ್ತವೆ. ಇವು ವೆಂಕಟೇಶ್ವರನ ದೇವಸ್ಥಾನದಷ್ಟು ಪ್ರಖ್ಯಾತಿಗಳಿಸಿಲ್ಲವಾದರೂ ಈ ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆಗೇನೂ ಕೊರತೆಯಿಲ್ಲ. ಇವೂ ಸಹ ಧಾರ್ಮಿಕ ಪ್ರವಾಸಿ ಆಕರ್ಷಣೆಗಳಾಗಿವೆ. ಪ್ರಸ್ತುತ ಲೇಖನದ ಮೂಲಕ ಇಲ್ಲಿರುವ ಇತರೆ ಕೆಲವು ಪ್ರಮುಖ ದೇವಾಲಯಗಳ ಕುರಿತು ತಿಳಿಯೋಣ.

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಪದ್ಮಾವತಿ ದೇವಾಲಯ ಪುಷ್ಕರಣಿ
ಚಿತ್ರಕೃಪೆ: Bhaskaranaidu

ಶ್ರೀ ಪದ್ಮಾವತಿ ದೇವಿ ಆಲಯಂ : ತಿರುಪತಿಯ ದಕ್ಷಿಣಕ್ಕೆ ನಾಲ್ಕು ಕಿ.ಮೀ ದೂರದಲ್ಲಿ ಈ ಭವ್ಯವಾದ ದೇವಸ್ಥಾನವನ್ನು ಕಾಣಬಹುದು. ವೆಂಕಟೇಶ್ವರನ ದರುಶನ ಕೋರಿ ಬರುವ ಪ್ರತಿಯೊಬ್ಬ ಭಕ್ತನು ಈ ದೇವಸ್ಥಾನಕ್ಕೆ ಹೋಗದೆ ಹಿಂತಿರುಗಲಾರ. ಇಲ್ಲಿ ವೆಂಕಟೇಶ್ವರನ ಪತ್ನಿಯರಾದ ಪದ್ಮಾವತಿ ಹಾಗೂ ತಾಯರುಗಳ ವಿಇಗ್ರಹಗಳಿವೆ. ದಂತ ಕಥೆಯ ಪ್ರಕಾರ, ಇಲ್ಲಿರುವ ಪುಷ್ಕರಣಿಯಿಂದ ಪದ್ಮಾವತಿ ದೇವಿಯ ಜನನವಾಗಿದೆ. ಈ ದೇವಾಲಯ ಸಂಕೀರ್ಣದಲ್ಲಿ ಕೃಷ್ಣಸ್ವಾಮಿ ಹಾಗೂ ಶ್ರೀ ಸುಂದರ ರಾಜ ಸ್ವಾಮಿಯರ ದೇವಸ್ಥಾನಗಳನ್ನೂ ಸಹ ಕಾಣಬಹುದು.

ವಿಶೇಷ ಲೇಖನ : ಕೇರಳದ ಏಳು ವಿಸ್ಮಯಕರ ದೇವಸ್ಥಾನಗಳು

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಗೋವಿಂದರಾಜ ಸ್ವಾಮಿ ದೇವಸ್ಥಾನದ ಗೋಪುರ
ಚಿತ್ರಕೃಪೆ: Adityamadhav83

ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯ : ತಿರುಪತಿಯ ರೈಲು ನಿಲ್ದಾಣದ ಬಳಿ ಈ ದೇವಸ್ಥಾನವಿದೆ. ಈ ದೇವಾಲಯದ ಪ್ರಮುಖ ಲಕ್ಷಣವೆಂದರೆ ಹೊರ ಭಾಗದಲ್ಲಿರುವ ಗಾಳಿ ಗೋಪುರ. ದೂರದಿಂದಲೂ ಸಹ ಈ ಗಾಳಿ ಗೋಪುರವು ಸುಂದರವಾಗಿ ಗೋಚರಿಸುತ್ತದೆ. ಈ ದೇವಸ್ಥಾನದ ಸಂಕೀರ್ಣದಲ್ಲಿ ಗೋವಿಂದರಾಜ ಸ್ವಾಮಿಯ ಹೊರತಾಗಿ ಅಂಡಾಳ್ ಅಮ್ಮನವರು, ಶ್ರೀಕೃಷ್ಣ, ಶ್ರೀ ರಾಮಾನುಜ ತಿರುಮಂಗೈ ಅಳ್ವರ್, ಶ್ರೀ ವೇದಾಂತ ದೇಸಿಕಾ, ಶ್ರೀ ಲಕ್ಷ್ಮಿ ಹಾಗೂ ಶ್ರೀ ಮನವೆಲಾ ಮಹಾಮುನಿಯವರಿಗೆ ಮುಡಿಪಾದ ದೇಗುಲಗಳನ್ನು ಕಾಣಬಹುದಾಗಿದೆ.

ವಿಶೇಷ ಲೇಖನ : ದ.ಭಾರತದ ಮುಖ್ಯ ಧಾರ್ಮಿಕ ಯಾತ್ರೆಗಳು

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ
ಚಿತ್ರಕೃಪೆ: Raji.srinivas

ಶ್ರೀ ಕೋದಂಡ ರಾಮಸ್ವಾಮಿ ದೇವಾಲಯ : ತಿರುಪತಿಯಲ್ಲಿ ಕಂಡು ಬರುವ ಮತ್ತೊಂದು ದೇವಾಲಯ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯ. ಹೆಸರು ಸೂಚಿಸುತ್ತಿರುವಂತೆ ಇದು ಶ್ರೀ ರಾಮದೇವರಿಗೆ ಮುಡಿಪಾದ ದೇವಾಲಯವಾಗಿದೆ. ಇಲ್ಲಿ ಶ್ರೀ ರಾಮನು ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಸಮೇತ ವಿರಾಜಿಸಿದ್ದಾನೆ. ಈ ಮೂರು ವಿಗ್ರಹಗಳು ನೋಡಲು ಆಕರ್ಷಕವಾಗಿದ್ದು ಕಣ್ಮನ ಸೆಳೆಯುತ್ತವೆ. ಇಲ್ಲಿ ಬ್ರಹ್ಮೋತ್ಸವವು ವರ್ಷದ ಫಾಲ್ಗುಣ ಮಾಸದಲ್ಲಿ ಅಂದರೆ ಮಾರ್ಚ್-ಎಪ್ರಿಲ್ ಗಳ ಸಮಯದಲ್ಲಿ ಅತಿ ವಿಜೃಂಭಣೆಯಿಂದ ಜರುಗುತ್ತದೆ.

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಕಪಿಲೇಶ್ವರ ಸ್ವಾಮಿ ದೇವಸ್ಥಾನ
ಚಿತ್ರಕೃಪೆ: Kalyan Kanuri

ಶ್ರೀ ಕಪಿಲೇಶ್ವರ ಸ್ವಾಮಿ ದೇವಾಲಯ : ತಿರುಪತಿ ಕ್ಷೇತ್ರದಲ್ಲಿ ಕಂಡು ಬರುವ ಶಿವನ ಏಕೈಕ ಪ್ರಮುಖ ದೇವಾಲಯವಿದು. ಆದ್ದರಿಂದ ಶೈವ ಪಂಥದವರ ಪ್ರಮುಖ ದೇವಾಲಯವಾಗಿ ಇದು ಆಕರ್ಷಿಸುತ್ತದೆ. ಕಪಿಲತೀರ್ಥಂ ಎಂತಲೂ ಕರೆಯಲ್ಪಡುವ ಈ ದೇವಸ್ಥಾನದ ಕಲ್ಯಾಣಿಯಲ್ಲಿ ಮೊದಲು ಮಿಂದು ನಂತರ ಭಕ್ತರು ವೆಂಕಟೇಶ್ವರನ ದರುಶನ ಕೋರಿ ತಿರುಮಲಕ್ಕೆ ಹೊರಡುತ್ತಾರೆ.

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಶ್ರೀ ಕಲ್ಯಾಣ ವೆಂಕಟೇಶ್ವರನ ದೇವಸ್ಥಾನ
ಚಿತ್ರಕೃಪೆ: YVSREDDY

ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ : ತಿರುಪತಿಯ ನಾರಾಯಣವನಂ ನಲ್ಲಿ ಈ ದೇವಸ್ಥಾನವಿದೆ. ದಂತ ಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲಿ ಶ್ರೀ ವೆಂಕಟೇಶ್ವರನು ದೇವಿ ಪದ್ಮಾವತಿಯೊಡನೆ ವಿವಾಹವಾಗಿದ್ದನು. ಅಂತೆಯೆ ಇದು ಕಲ್ಯಾಣ ನೆರವೇರಿದುದರ ಸೂಚಕವಾಗಿ ನಿರ್ಮಾಣಗೊಂಡಿದೆ.

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ಬೇಡಿ ಆಂಜನೇಯನ ದೇವಸ್ಥಾನ
ಚಿತ್ರಕೃಪೆ: vimal_kalyan

ಶ್ರೀ ಬೇಡಿ ಆಂಜನೇಯ ದೇವಸ್ಥಾನ : ಇದು ತಿರುಮಲದ ಮುಖ್ಯ ವೆಂಕಟೇಶ್ವರನ ದೇವಾಲಯವಿರುವ ಮಹಾದ್ವಾರಕ್ಕೆ ಅಭಿಮುಖವಾಗಿ ನೆಲೆಸಿದೆ. ವಿಶೇಷವೆಂದರೆ ಇಲ್ಲಿ ಆಂಜನೇಯನನ್ನು ಕೈಮುಗಿಯುತ್ತ ನಿಂತಿರುವ ಭಂಗಿಯಲ್ಲಿ ಕಾಣಬಹುದು. ದಂತ ಕಥೆಯ ಪ್ರಕಾರ, ಹನುಮನು ಚಿಕ್ಕವನಿದ್ದಾಗ ಋಷಿ ಮುನಿಗಳಿಗೆ ಬಹಳ ಪಿಡಿಸುತ್ತಿದ್ದುದರಿಂದ ಅವನನ್ನು ಅವರು ಬೇಡಿಯಿಂದ ಕಟ್ಟಿ ಹಾಕಿದ್ದರು ಎಂಬ ಪ್ರತೀತಿಯಿದೆ. ಇನ್ನೊಂದು ಕಥೆಯ ಪ್ರಕಾರ, ತಾಯಿ ಅಂಜನಾ ದೇವಿ ಸ್ವತಃ ಹನುಮನು ಓಡಿ ಹೋಗದಿರಲು ಬೇಡಿಯಿಂದ ಕಟ್ಟಿದ್ದಳು ಎನ್ನಲಾಗುತ್ತದೆ. ಅಂತೆಯೆ ಇದಕ್ಕೆ ಬೇಡಿ ಆಂಜನೇಯ ದೇವಸ್ಥಾನ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X