Search
  • Follow NativePlanet
Share
» »ಭಾರತದ ರಹಸ್ಯಮಯ ಹಾಗು ಪಿಶಾಚಗ್ರಸ್ತ ಸ್ಥಳಗಳು

ಭಾರತದ ರಹಸ್ಯಮಯ ಹಾಗು ಪಿಶಾಚಗ್ರಸ್ತ ಸ್ಥಳಗಳು

By Vijay

ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳಿಂದ ಶ್ರೀಮಂತವಾಗಿರುವ ಭಾರತವು ಪ್ರಸ್ತುತ ಆಧುನಿಕರಣ, ಜಾಗತೀಕರಣದತ್ತ ಸಾಗುತ್ತಿದ್ದರೂ ಇಲ್ಲಿ ಕಂಡುಬರುವ ಮೌಢ್ಯಗಳಿಗೇನೂ ಕಮ್ಮಿಯಿಲ್ಲ. ಅದಕ್ಕೆ ಪೂರಕವೆಂಬಂತೆ ವೈಜ್ಞಾನಿಕ ದೃಷ್ಟಿಯಿಂದ ಇನ್ನು ಬಗೆಹರಿಸಲಾಗದ ಅಥವಾ ಆ ನಿಟ್ಟಿನಲ್ಲಿ ಇನ್ನು ಪ್ರಗತಿಯಲ್ಲಿರುವ ಹಲವು ವಿಚಿತ್ರಮಯ ಸ್ಥಳ ಹಾಗು ಪ್ರಕ್ರಿಯೆಗಳು ಇರುವುದರಿಂದ ನಮ್ಮ ಮನಗಳಲ್ಲಿ ಇಂತಹ ರಹಸ್ಯಮಯ ಸ್ಥಳಗಳ ಕುರಿತು ತಿಳಿಯಲು ಅಪಾರವಾದ ಆಸಕ್ತಿ, ಕುತೂಹಲಗಳು ಉಂಟಾಗುತ್ತವೆ. ಈ ಲೇಖನವು ಭಾರತದಲ್ಲಿ ಕಂಡುಬರುವ ಕೆಲವು ರಹಸ್ಯಮಯ ಸ್ಥಳಗಳ ಕುರಿತು ತಿಳಿಸುತ್ತದೆ.

ಸೂಚನೆ: ಯಾವುದೆ ತಾಣಗಳ ರಹಸ್ಯಮಯ ಸಂಗತಿಗಳನ್ನು ಬೆಂಬಲಿಸುವುದಾಗಲಿ ಅಥವಾ ವಿರೋಧಿಸುವುದಾಗಲಿ ಈ ಲೇಖನದ ಉದ್ದೇಶವಲ್ಲ. ಕೇವಲ ಆಸಕ್ತಕರ ಮನವನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಈ ಲೇಖನವನ್ನು ಪ್ರಸ್ತುತಪಡಿಸಲಾಗಿದೆ.

ಜತಿಂಗಾದಲ್ಲಿ ಪಕ್ಷಿಗಳ ಆತ್ಮಹತ್ಯೆ:

ಜತಿಂಗಾದಲ್ಲಿ ಪಕ್ಷಿಗಳ ಆತ್ಮಹತ್ಯೆ:

ಅಸ್ಸಾಂನಲ್ಲಿರುವ ಜತಿಂಗಾ ಎಂಬಲ್ಲಿ ಇಂತಹ ಒಂದು ಅತಿ ವಿಚಿತ್ರ ಘಟನೆಯು ಸಂಭವಿಸುತ್ತದೆ. ಮಳೆಗಾಲದ ನಂತರದ ಸಮಯದಲ್ಲಿ ಕೆಲ ನಿರ್ದಿಷ್ಟ ಸಮಯದಲ್ಲಿ ಮಬ್ಬು ಹಾಗು ದಟ್ಟ ಮಂಜು ಆವರಿಸಿದಾಗ, ಪರಿಸರದಲ್ಲಿ ಕೆಲವು ಬದಲಾವಣೆಗಳಾದಾಗ ಇದಕ್ಕಿದ್ದಂತೆ ಗಿಡಮರಗಳಲ್ಲಿರುವ ಪಕ್ಷಿಗಳು ವಿಚಿತ್ರವಾಗಿ ವರ್ತಿಸುತ್ತ ಅವುಗಳಿಗೆ ಗೋಚರಿಸುವ ಪ್ರಕಾಶದೆಡೆಗೆ ಹಾರಲು ಆರಂಭಿಸುತ್ತವೆ. ವಾತಾವರಣದ ವೈಪರಿತ್ಯದಿಂದಲೊ ಏನೊ ಹಾರುವಾಗ ತಮ್ಮ ನಿಯಂತ್ರಣವನ್ನು ಕಳೆದುಕೊಂಡು ಅಡ್ಡವಾಗಿರುವ ಗಿಡಗಳಿಗೆ ಅಥವಾ ಇತರೆ ವಸ್ತುಗಳಿಗೆ ಅಪ್ಪಳಿಸಿ ಕೆಳ ಬೀಳುತ್ತವೆ. ಅಲ್ಲದೆ ಸ್ಥಳೀಯರು ಕೂಡ ಬಾಂಬೂಗಳನ್ನು ಕೂಡ ಬಳಸಿ ಇವುಗಳನ್ನು ಕೆಳಕ್ಕೆ ತರುತ್ತಾರೆ. ಏಕೆ ಈ ರೀತಿಯ ಬದಲಾವಣೆ ಹಕ್ಕಿಗಳಿಗಾಗುತ್ತದೆ ಎಂದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

ಚಿತ್ರಕೃಪೆ

ಯಾಗಂಟಿ:

ಯಾಗಂಟಿ:

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಯಾಗಂಟಿಯಲ್ಲಿರುವ ಉಮಾ ಮಹೇಶ್ವರ ದೇವಾಲಯದ ನಂದಿ ವಿಗ್ರಹವು ಇಂದಿಗೂ ಕೂಡ ಬೆಳೆಯುತ್ತಿದೆ ಎನ್ನಲಾಗಿದೆ. ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗಿದ್ದು, ಈ ವಿಗ್ರಹವು ಒಂದು ರೀತಿಯ ಬೆಳೆಯುವ ಕಲ್ಲಿನಲ್ಲಿ ಕೆತ್ತಲಾಗಿದೆ ಎಂದು ತಿಳಿಯಲಾಗಿದೆ. ಪೋತುಲುರಿ ವೀರ ಬ್ರಹ್ಮೇಂದ್ರ ಸ್ವಾಮಿಯ ಪ್ರಕಾರ, ಯಾವಾಗ ಈ ನಂದಿಯು ಜೀವ ಪಡೆದು ಒದರಲಾರಂಭಿಸುತ್ತದೊ ಆವಾಗ ಕಲಿಯುಗವು ಅಂತ್ಯಗೊಳ್ಳುತ್ತದಂತೆ!

ಭೂಮಿಗೆ ಸ್ಪರ್ಶಿಸದ ಖಂಬ:

ಭೂಮಿಗೆ ಸ್ಪರ್ಶಿಸದ ಖಂಬ:

ಆಂಧ್ರ ಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಭೂಮಿಗೆ ಸ್ಪರ್ಶಿಸಲಾರದ ಖಂಬವೊಂದನ್ನು ಕಾಣಬಹುದು. ಖಂಬದ ಬುಡವು ಇತರೆ ಸಾಮಾನ್ಯ ಖಂಬಗಳಂತೆ ನೆಲಕ್ಕೆ ತಾಗಿರುವಂತೆ ಕಂಡರೂ ಸೂಕ್ಷ್ಮವಾಗಿ ಗಮನಿಸಿದಾಗ ಅದು ಭೂಸ್ಪರ್ಷ ಮಾಡದೆ ಇರುವುದನ್ನು ಮನಗಾಣಬಹುದು. ಇದಕ್ಕೆ ಸಾಕ್ಷಿಯೆಂಬಂತೆ ತೆಳುವಾದ ಬಟ್ಟೆಯನ್ನು ಇದರ ಕೆಳಗೆ ನಿರಾಯಾಸವಾಗಿ ತೂರಿಸಬಹುದು.

ಚಿತ್ರಕೃಪೆ: Rahulpurushot

ಅಸ್ಥಿಪಂಜರಗಳ ಕೆರೆ/ರೂಪಕುಂಡ್ ಸರೋವರ:

ಅಸ್ಥಿಪಂಜರಗಳ ಕೆರೆ/ರೂಪಕುಂಡ್ ಸರೋವರ:

ಉತ್ತರಾಖಂಡ್ ರಾಜ್ಯದ ತ್ರಿಶೂಲ್ ಶೃಂಗಶ್ರೇಣಿಗಳಲ್ಲಿ ಈ ಹಿಮ ಸರೋವರವು ಕಂಡುಬರುತ್ತದೆ. ಕೌತುಕಮಯ ಸಂಗತಿಯೆಂದರೆ ಹೆಚ್.ಕೆ ಮಧ್ವಾಲ್ ಎಂಬ ವನಪಾಲಕ 1942 ರಲ್ಲಿ ಈ ಕೆರೆಯಲ್ಲಿ ಅಸ್ಥಿಪಂಜರಗಳಿರುವುದನ್ನು ಪತ್ತೆ ಹಚ್ಚಿದ. ನಂತರ ಇಲ್ಲಿ ಬಹು ಸಂಖ್ಯೆಯಲ್ಲಿ ಅಸ್ಥಿಪಂಜರಗಳಿರುವುದನ್ನು ಶೋಧಿಸಲಾಯಿತು. ವರ್ಷದ ಒಂದು ನಿರ್ದಿಷ್ಟ ತಿಂಗಳಿನಲ್ಲಿ ಹಿಮದಲ್ಲಿ ಘನಿರ್ಭವಿಸಿದ ಈ ಕೆರೆಯು ಕರಗಿದಾಗ ಸ್ವಚ್ಛವಾದ ಆ ನೀರಿನಲ್ಲಿ ಅಸ್ಥಿಪಂಜರಗಳನ್ನು ಗಮನಿಸಬಹುದು. ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗಿದ್ದು ದೊರೆತಿರುವ ಅಸ್ಥಿಪಂಜರಗಳು 9 ನೇಯ ಶತಮಾನಕ್ಕೆ ಸಂಬಂದಿಸಿದ್ದಾಗಿವೆ ಎಂದು ಹೇಳಲಾಗಿದೆ. ರೂಪಕುಂಡ್ ಗೆ ಹೋಗುವ ಮಾರ್ಗದ ಚಿತ್ರವನ್ನು ಗಮನಿಸಬಹುದು.

ಚಿತ್ರಕೃಪೆ: Djds4rce

ಅವಳಿಗಳ ಕೋದಿನ್ಹಿ ಹಳ್ಳಿ:

ಅವಳಿಗಳ ಕೋದಿನ್ಹಿ ಹಳ್ಳಿ:

ಕೇರಳ ರಾಜ್ಯದ ಕೋಳಿಕೋಡ್ (ಕ್ಯಾಲಿಕಟ್) ದಿಂದ 35 ಕಿ.ಮೀ ದೂರದಲ್ಲಿರುವ ಕೋದಿನ್ಹಿ ಎಂಬ ಹಳ್ಳಿಯು ಅತಿ ಹೆಚ್ಚು ಸಂಖ್ಯೆಯಲ್ಲಿ ಅವಳಿಗಳನ್ನು ಹೊಂದಿದೆ. 2009 ರ ತನಕ ನಡೆಸಲಾದ ಸಮೀಕ್ಷೆಯ ಪ್ರಕಾರ, ಈ ಒಂದು ಹಳ್ಳಿಯಲ್ಲಿ 220 ಜೊತೆ ಅವಳಿಗಳು ಹಾಗು ಎರಡು ಜೊತೆ ತ್ರಿವಳಿಗಳು ಕೂಡ ಕಂಡುಬಂದಿದೆ. (ಸಾಂದರ್ಭಿಕ ಚಿತ್ರ)

ದೆಹಲಿ ಕ್ಯಾಂಟ್:

ದೆಹಲಿ ಕ್ಯಾಂಟ್:

ದೆಹಲಿ ಕ್ಯಾಂಟೋನ್ಮೆಂಟ್ ಅನ್ನು ಜನಪ್ರಿಯವಾಗಿ ದೆಹಲಿ ಕ್ಯಾಂಟ್ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿನ ಒಂದು ಮಾರ್ಗವು ಹಚ್ಚ ಹಸಿರಿನಿಂದ ಕೂಡಿದ್ದು ಬಹುಶಃ ದೆಹಲಿಯ ಅತಿ ಸ್ವಚ್ಛ ಮಾರ್ಗವಾಗಿದೆ. ಇದರ ಹಿಂದಿರುವ ಕಥೆಯೆಂದರೆ, ರಾತ್ರಿಯ ಸಮಯದಲ್ಲಿ ಶ್ವೇತ ವರ್ಣದ ಸೀರೆಯುಟ್ಟ ಒಬ್ಬ ಮಹಿಳೆಯು ಒಂಟಿ ಸವಾರರನ್ನು ಕಂಡಾಗ ಲಿಫ್ಟ್ ಕೇಳುತ್ತಾಳಂತೆ! ಲಿಫ್ಟ್ ಕೊಡದೆ ಇದ್ದ ಸಂದರ್ಭದಲ್ಲಿ ಆ ಮಹಿಳೆಯು ಸವಾರನ ವೇಗಕ್ಕಿಮ್ತಲೂ ವೇಗವಾಗಿ ಚಲಿಸಿ ಹೋಗುತ್ತಾಳಂತೆ.

ಚಿತ್ರಕೃಪೆ

ಭಾನಗಡ್ ಕೋಟೆ:

ಭಾನಗಡ್ ಕೋಟೆ:

ಭಾನಗಡ್ ರಾಜಸ್ಥಾನ ರಾಜ್ಯದ ಅಲ್ವಾರ್ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇಲ್ಲಿರುವ ಭಾನಗಡ್ ಕೋಟೆಯಲ್ಲಿ ಆತ್ಮಗಳಿವೆಯೆಂದು ಹೇಳಲಾಗುತ್ತದೆ. ರಾಜಸ್ಥಾನದ ಅಧಿಕೃತ ಪ್ರವಾಸಿ ತಾಣವಾಗಿದ್ದರೂ ಸಹ ಈ ಕೋಟೆಯಲ್ಲಿ ಸೂರ್ಯಾಸ್ತದ ನಂತರ ಹಾಗು ಸೂರ್ಯೊದಯದ ಮುಂಚೆ ಯಾರಿಗೂ ಪ್ರವೇಶಿಸಲು ಅನುಮತಿಯಿಲ್ಲ. ಇದರ ಹಿಂದಿರುವ ಸ್ವಾರಸ್ಯಕರ ಕಥೆ: ಹಿಂದೆ ಈ ರಾಜ್ಯದಲ್ಲಿ ರತ್ನಾವತಿ ಎಂಬ ಸುಂದರ ರಾಜಕುವರಿಯಿದ್ದಳು. ಇದೆ ಪ್ರದೇಶದಲ್ಲಿದ್ದ ತಾಂತ್ರಿಕನೊಬ್ಬ ಈಕೆಯನ್ನು ತುಂಬ ಪ್ರೀತಿಸುತ್ತಿದ್ದ ಹಾಗು ಮದುವೆ ಮಾಡಿಕೊಳ್ಳಲು ಬಯಸಿದ್ದ. ಆದರೆ ಇದು ಅಸಾಧ್ಯವಗಿದ್ದುದರಿಂದ ಮಾಟಮಂತ್ರಗಳ ಮೂಲಕ ಆಕೆಯನ್ನು ಪಡೆಯಲು ಪ್ರಯತ್ನಿಸಿದ. ಇದರ ಸುಳಿವು ರಾಜಕುಮಾರಿಗೆ ಗೊತ್ತಾಗಿ ಅವನ ಪ್ರಾಣ ಕಳೆದುಕೊಳ್ಳಬೇಕಾಯಿತು. ಆದರೆ ಸಾಯುವ ಮುನ್ನ ಈ ಕೋಟೆಗೆ ಶಾಪವನ್ನಿತ್ತು ಸತ್ತ. ಅಂದಿನಿಂದ ಇಲ್ಲಿ ಆತ್ಮಗಳು ನೆಲೆಸಿವೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Arindambasu2

ಡುಮಾಸ್ ಕಡಲ ತೀರ:

ಡುಮಾಸ್ ಕಡಲ ತೀರ:

ಅರೇಬಿಯನ್ ಸಮುದ್ರದ ಈ ಕಡಲ ತೀರವು ಗುಜರಾತ್ ರಾಜ್ಯದ ಸುರತ್ ನಗರದಿಂದ ನೈರುತ್ಯ ದಿಕ್ಕಿಗೆ ಸುಮಾರು 21 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದು ಉತ್ತಮ ಪ್ರವಾಸಿ ಆಕರ್ಷಣೆಯಾಗಿರುವ ಇದು ಪಿಶಾಚಗ್ರಸ್ತ (ಹಾಂಟೆಡ್) ಕೂಡ ಆಗಿದೆ ಎಂದು ಹೇಳಲಾಗುತ್ತದೆ. ಮಧ್ಯರಾತ್ರಿಯ ಸಮಯದಲ್ಲಿ ಕಡಲ ತೀರದ ಒಂದು ನಿರ್ದಿಷ್ಟ ಜಾಗದಲ್ಲಿ ಆತ್ಮಗಳ ಕಾಟವಿದೆಯೆಂದು ಹೇಳಲಾಗುತ್ತದೆ. ಎಷ್ಟೊ ಜನರು ಇಲ್ಲಿಂದ ಅದೃಶ್ಯರಾಗಿದ್ದು ಮರಳಿ ಬಂದೆ ಇಲ್ಲ ಎಂತಲೂ ಹೇಳಲಾಗುತ್ತದೆ. ಹಿಂದೊಮ್ಮೆ ಇಲ್ಲಿ ಶವಗಳ ದಹನಕ್ರಿಯೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದ್ದು ಆ ಆತ್ಮಗಳು ಇಲ್ಲಿ ಸುತ್ತಾಡುತ್ತಿರುತ್ತವೆ ಎನ್ನಲಾಗಿದೆ.

ಚಿತ್ರಕೃಪೆ: Marwada

ಶನಿವಾರವಾಡಾ ಕೋಟೆ:

ಶನಿವಾರವಾಡಾ ಕೋಟೆ:

ಪುಣೆ ನಗರದ ಬಾಜಿ ರಾವ್ ರಸ್ತೆಯ ಅಭಿನವ ಕಲಾ ಮಂದಿರ ಬಳಿಯಿರುವ ಈ ಕೋಟೆಯು ಭಾರತದ ಪ್ರಮುಖ ಪಿಶಾಚಗ್ರಸ್ತ ತಾಣಗಳ ಪೈಕಿ ಒಂದಾಗಿದೆ. ಹಿಂದೆ ಪೇಶ್ವಾ ವಂಶದ ಕುಡಿಯಾದ 14 ವರ್ಷದ ರಾಜಕುಮಾರನನ್ನು ಹೃದಯವಿದ್ರಾವಕವಾಗಿ ಕೊಲೆ ಮಾಡಲಾಗಿದ್ದು ಇಂದಿಗೂ ಕೂಡ ಅವನ ಅಳುವು ಪ್ರತಿ ಪೂರ್ಣ ಚಂದಿರದ ದಿನದಂದು ಕೇಳಬಹುದು ಎನ್ನಲಾಗುತ್ತದೆ.

ಚಿತ್ರಕೃಪೆ: Ramakrishna Reddy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X