Search
  • Follow NativePlanet
Share
» »ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ಬೆಂಗಳೂರು ಆಧುನಿಕವಲದಲ್ಲಿ ಮಂಚೂಣಿಯಲ್ಲಿದ್ದರೂ ಇಲ್ಲಿರುವ ದೇವಾಲಯಗಳು ನಗರದ ಶ್ರೀಮಂತ ಸಂಸ್ಕೃತಿಯನ್ನು, ಧಾರ್ಮಿಕ ಮಹತ್ವವ್ವು ಎತ್ತಿ ಹಿಡಿಯುತ್ತವೆ

By Vijay

ಬೆಂಗಳೂರು ಎಂದರೆ ಸಾಕು, ಅದೇನೊ ಒಂದು ರೀತಿಯ ಆಕರ್ಷಣೆ. ಮೊದಲಿನಿಂದಲೂ ಈ ನಗರ ನನಗೆ ಗೊತ್ತು ಎಂಬ ಬಾಂಧವ್ಯ ಮೂಡುತ್ತದೆ ಬಹುತೇಕರಿಗೆ. ಅದಕ್ಕೆ ಕಾರಣವೂ ಇಲ್ಲದೇನಿಲ್ಲ. ಈ ನಗರದ ವಿಶಿಷ್ಟ ಸಂಸ್ಕೃತಿಯೆ ಹಾಗೆ ಎನ್ನಬಹುದು.

ಬೇರೆಡೆ ಹೋಲಿಸಿದಾಗ ಪ್ರಧಾನವಾಗಿ ಇಲ್ಲಿರುವ ವೈವಿಧ್ಯಮಯ ಸಂಸ್ಕೃತಿ, ತಂಪಾದ ಹಾಗೂ ಹಿತಕರವಾದ ವಾತಾವರಣ, ಶಾಂತಿಪ್ರೀಯ ಬೆಂಗಳೂರಿಗರು, ಆಧುನಿಕ ಶೈಲಿಯ ಶಾಪಿಂಗ್ ಸಂಕೀರ್ಣಗಳು, ಮೋಜು ಮಸ್ತಿಗಳಿಗೆ ಜನಪ್ರೀಯವಾದ ಸ್ಥಳಗಳು, ಎಲ್ಲ ಬಗೆಯ ರುಚಿ ತಿಂಡಿ ತಿನಿಸುಗಳು ದೊರಕುವ ಹೋಟೆಲುಗಳು, ಉದ್ಯಾನಗಳು, ಗಗನಚುಂಬಿ ಐಟಿ ಕಟ್ಟಡಗಳು, ಅಗಲವಾದ ರಸ್ತೆಗಳು, ರಸ್ತೆಯ ಅದಿಇ ಬದಿಗಳಲ್ಲಿ ಎದ್ದು ನಿಂತ ಗಿಡ ಮರಗಳು ಎಲ್ಲವೂ ಈ ನಗರವನ್ನು ಒಂದು ಚುಂಬಕದಂತೆ ಮಾಡಿಬಿಟ್ಟಿವೆ.

ಮಾಡಿ..ಮಾಡಿ...ಬೆಂಗಳೂರಿನಲ್ಲಿ ಶಾಪಿಂಗ್!

ಇಷ್ಟಾಗಿಯೂ ಈ ಆಧುನಿಕ ನಗರದಲ್ಲಿ ಸಂಸ್ಕೃತಿ, ಸಂಪ್ರದಾಯಗಳು ಗಟ್ಟಿಯಾಗಿಯೆ ತಳವೂರಿರುವುದನ್ನು ಕಾಣಬಹುದು. ಒಂದೆಡೆ ವೀಜ್ಞಾನ ಕ್ಷೇತ್ರ, ಐಟಿ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿರುವ ಕಾಸ್ಮೊಪಾಲಿಟನ್ ನಗರವಾಗಿ ಬೆಂಗಳೂರು ವಿಶ್ವದ ಗಮನಸೆಳೆದರೆ ಇನ್ನೊಂದೆಡೆ ಧಾರ್ಮಿಕ ತಳಹದಿ ಇನ್ನೂ ಗಟ್ಟಿಯಾಗಿ ನೆಲೆಯೂರಿರುವುದನ್ನು ತೋರಿಸುವ ನೂರಾರು ದೇವಾಲಯಗಳು ನಗರದ ಶ್ರೀಮಂತ ಸಂಸ್ಕೃತಿಯನ್ನು, ಧಾರ್ಮಿಕ ಮಹತ್ವವ್ವು ಎತ್ತಿ ಹಿಡಿಯುತ್ತವೆ. ಬೆಂಗಳೂರು ಕೆಲವು ಗುರುತರವಾದ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿಗೆ ಭೇಟಿ ನೀಡುವವರು ಈ ದೇವಾಲಯಗಳಿಗೆ ಭೇಟಿ ನೀಡಲೇಬೇಕು. ಇಲ್ಲವಾದಲ್ಲಿ ಸಂಪೂರ್ಣ ಬೆಂಗಳೂರು ಪ್ರವಾಸ ಖಂಡಿತ ಪರಿಪೂರ್ಣವಾಗದು.

ಕೆ ಆರ್ ಮಾರುಕಟ್ಟೆ

ಕೆ ಆರ್ ಮಾರುಕಟ್ಟೆ

ಶ್ರೀಮನ್ನಾರಾಯಣನ ರೂಪವೆ ಆದ ವೆಂಕಟರಮಣನಿಗೆ ಮುಡಿಪಾದ ದೇವಾಲಯ ಇದಾಗಿದೆ. ಬೆಂಗಳೂರಿನ ಹೃದಯ ಭಾಗವಾದ ಕೆ ಆರ್ ಮಾರುಕಟ್ಟೆಯಿರುವ ಕಲಾಸಿಪಾಳ್ಯ ಬಡಾವಣೆಯ ಬೆಂಗಳೂರು ಮೆಡಿಕಲ್ ಕಾಲೂಜಿನ ಎದುರಿನಲ್ಲಿ ಈ ದೇವಾಲಯವಿದೆ. ಇದರ ಪಕ್ಕದಲ್ಲೆ ಟಿಪ್ಪು ಸುಲ್ತಾನನ ಬೇಸಿಗೆಯ ಅರಮ್ನೆಯಿರುವುದನ್ನೂ ಕಾಣಬಹುದು. ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಬೆಂಗಳೂರಿನ ಒಂದು ಪ್ರಮುಖ ದೇವಾಲಯ ಇದಾಗಿದೆ. ಸಾಕಷ್ಟು ಉತ್ಸವಾದಿಗಳು ಇಲ್ಲಿ ಜರುಗುತ್ತವೆ. ವೈಕುಂಠ ಏಕಾದಶಿಯಂದು ಜನರಿಂದ ತುಂಬಿರುತ್ತದೆ ಈ ದೇವಾಲಯ.

ಚಿತ್ರಕೃಪೆ: Dineshkannambadi

ಬೇಗೂರು

ಬೇಗೂರು

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ (ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ) ನೆಲೆಸಿರುವ ಬೇಗೂರು ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ಇದು ಸುಮಾರು 1300 ವರ್ಷಗಳಷ್ಟು ಪುರಾತನವದುದು. ಈ ದೇವಾಲಯವು ಚೋಳ ವಂಶದ ಮೊದಲನೇಯ ಕುಲಾತುಂಗ ರಾಜಾ ಹಾಗು ತಲಕಾಡ್ ಗಂಗಾ ವಂಶದ ರಾಜಸಿಂಹನಂದಿ ಅವರುಗಳಿಂದ ನಿರ್ಮಿಸಲ್ಪಟ್ಟಿದೆ. ಈ ದೇವಾಲಯದಲ್ಲಿ ಐದು ಲಿಂಗಗಳಿರುವುದರಿಂದ ಇದನ್ನು ಪಂಚಲಿಂಗೇಶ್ವರ ದೇವಾಲಯ ಎಂತಲೂ ಕರೆಯಲಾಗುತ್ತದೆ. ಆ ಐದು ಲಿಂಗಗಳೆಂದರೆ ಶ್ರೀ ನಾಗೇಶ್ವರ, ಚೋಳೇಶ್ವರ, ಕಾಲಿ ಕಮಟೇಶ್ವರ, ನಗಾರೇಶ್ವರ ಹಾಗು ಕರಣೇಶ್ವರ. ಅಲ್ಲದೆ ಪಾರ್ವತಿಗೆ ಮೀಸಲಾದ ದೇಗುಲವೂ ಇದ್ದು, ಪಶ್ಚಿಮಕ್ಕೆ ಮುಖ ಮಾಡಿದ ಸೂರ್ಯನ ಮೂರ್ತಿಯನ್ನು ಇಲ್ಲಿ ಕಾಣಬಹುದು. ಪ್ರತಿ ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Dineshkannambadi

ಗವಿಪುರಂ

ಗವಿಪುರಂ

ಗವಿಪುರಂ ಗುಹಾ ದೇವಾಲಯ ಎಂತಲೂ ಕರೆಯಿಸಿಕೊಳ್ಳುವ ಈ ದೇವಸ್ಥಾನವು ಗವಿಪುರಂನ (ಗುಟ್ಟಹಳ್ಳಿ) ಕೆಂಪೇಗೌಡ ನಗರದಲ್ಲಿದ್ದು ಬಸವನಗುಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಭಾರತೀಯ ಶಿಲಾ ಕೆತ್ತನೆ ವಾಸ್ತುಶಿಲ್ಪ (ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್) ಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯದ ಅತಿ ಆಸಕ್ತಿದಾಯಕ ವಿಷಯವೆಂದರೆ ವರ್ಷದ ಒಂದು ನಿಗದಿತ ಸಮಯ (ಮಕರ ಸಂಕ್ರಾಂತಿ) ದಲ್ಲಿ ಸೂರ್ಯನ ಕಿರಣವು ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುವುದು.

ಚಿತ್ರಕೃಪೆ: Pavithrah

ಮಹಾಲಕ್ಷ್ಮಿ ಲೇಔಟ್

ಮಹಾಲಕ್ಷ್ಮಿ ಲೇಔಟ್

ಪ್ರಸನ್ನ ವೀರಾಂಜನೇಯ ದೇವಸ್ಥಾನ ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲೊಂದಾದ ಮಹಾಲಕ್ಷ್ಮಿ ಬಡಾವಣೆಯಲ್ಲಿದೆ ಈ ದೇವಸ್ಥಾನ. ಬೆಂಗಳೂರಿನ ಇತರೆ ಜನಪ್ರಿಯ ನಗರಗಳಾದ ರಾಜಾಜಿ ನಗರ, ಬಸವೇಶ್ವರ ನಗರ ಮತ್ತು ಯಶವಂತಪುರಗಳಿಂದ ಇಲ್ಲಿಗೆ ಬಸ್ ಅಥವಾ ಆಟೊಗಳ ಮೂಲಕ ಸುಲಭವಾಗಿ ತಲುಪಬಹುದು. 7 ಜೂನ್ 1976 ರಲ್ಲಿ ಅಂದಿನ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರಿಂದ ಈ ದೇವಸ್ಥಾನದ ಉದ್ಘಾಟನೆಯಾಯಿತು. ಏಕಶಿಲೆಯಲ್ಲಿ ಕೆತ್ತಲಾದ ಆಂಜನೇಯನ ಸುಂದರವಾದ ಪ್ರತಿಮೆಯನ್ನು ಇಲ್ಲಿ ಕಾಣಬಹುದು. ಸುತ್ತಲಿನ ಶಾಂತ ಪರಿಸರವು ಹಸಿರಿನಿಂದ ಕೂಡಿದ್ದು ಒಂದೊಳ್ಳೆ ಅನುಭವವನ್ನು ಭೇಟಿ ನೀಡಿದವರಿಗೆ ಕರುಣಿಸುತ್ತದೆ.

ರಾಜಾಜಿನಗರ

ರಾಜಾಜಿನಗರ

ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ISKCON) ಎಂಬ ಸಂಸ್ಥೆಯಿಂದ ದೇಶದ ವಿವಿಧ ನಗರಗಳಲ್ಲಿ ನಿರ್ಮಿಸಲಾಗಿರುವ ವೈಭವಯುತ ಕೃಷ್ಣ ದೇವಾಲಯಗಳ ಪೈಕಿ ಬೆಂಗಳೂರಿನಲ್ಲಿರುವ ಕೃಷ್ಣನ ದೇವಾಲಯವೂ ಸಹ ಒಂದು. ಸಾಕಷ್ಟು ಅದ್ಭುತವಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.

ಚಿತ್ರಕೃಪೆ: Svpdasa

ಬಸವನಗುಡಿ

ಬಸವನಗುಡಿ

ಬೆಂಗಳೂರಿನ ಒಂದು ಪ್ರಮುಖ ಹಾಗು ಜನಪ್ರಿಯ ಪ್ರದೇಶವಾದ ಬಸವನಗುಡಿ ತನ್ನ ಹೆಸರನ್ನು ಬಸವನ ಗುಡಿ (ದೇವಸ್ಥಾನ) ಯಿಂದಲೆ ಪಡೆದಿದೆ. ಬಸವ ಎಂದರೆ ಶಿವನ ವಾಹನ ನಂದಿಯಾಗಿದ್ದು ಅದಕ್ಕೆ ಸಮರ್ಪಿತವಾದ ದೇವಸ್ಥಾನ ಇದಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ 4.8 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದ್ದು ಮೆಜೆಸ್ಟಿಕ್ ನಿಲ್ದಾಣದಿಂದಲೂ ಸಹ ಬಿ.ಎಂ.ಟಿ.ಸಿ ಬಸ್ಸುಗಳ ಮೂಲಕ ತಲುಪಬಹುದು. ನಂದಿಗೆ ಸಮರ್ಪಿತವಾಗಿರುವ ಹಾಗು ನಂದಿಯ ಬೃಹತ್ ವಿಗ್ರಹವಿರುವ ಜಗತ್ತಿನ ಏಕಮಾತ್ರ ದೇವಸ್ಥಾನವೆಂದು ನಂಬಲಾಗಿದೆ.

ಚಿತ್ರಕೃಪೆ: cotaro70s

ಏಕಶಿಲೆ

ಏಕಶಿಲೆ

ಬಸವನಗುಡಿಯ ಬುಲ್ ಟೆಂಪಲ್ ಪಕ್ಕದಲ್ಲೆ ಇರುವ ದೊಡ್ಡ ಗಣಪತಿ ದೇವಸ್ಥಾನವು ಬಹುವಾಗಿ ಭೇಟಿ ನೀಡಲ್ಪಡುವ ಒಂದು ಜನಪ್ರಿಯ ದೇವಸ್ಥಾನ. ಬಸವನಗುಡಿ ಮುಖ್ಯ ರಸ್ತೆಯ ಮೇಲೆ ನೆಲೆಸಿರುವ ಈ ದೇವಸ್ಥಾನವನ್ನು ನಗರದ ಯಾವುದೇ ಭಾಗದಿಂದ ಸುಲಭವಾಗಿ ರಿಕ್ಷಾ ಅಥವಾ ಬಸ್ ಮೂಲಕ ತಲುಪಬಹುದು. ಈ ದೇವಸ್ಥಾನವು ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿದೆ. ಒಮ್ಮೆ ಕೆಂಪೇಗೌಡರು ವಿಹರಿಸುತ್ತಿದ್ದಾಗ ಹಲವು ಬಂಡೆಗಳಲ್ಲಿ ಒಂದು ಬಂಡೆಯು ಗಣಪತಿಯ ಆಕರವನ್ನು ಹೋಲುತ್ತಿದ್ದ ಹಾಗೆ ಕಂಡುಬಂದಿತು. ತಕ್ಷಣವೆ ಅವರು ತಮ್ಮ ಶಿಲ್ಪಿಗಳನ್ನು ಕರೆತಂದು ಅದನ್ನು ಒಂದು ಏಕಶಿಲಾ ಗಣಪತಿಯ ವಿಗ್ರಹದ ಹಾಗೆ ರೂಪಿಸಲು ಸೂಚಿಸಿದರು. ಈ ದೇವಸ್ಥಾನದ ವಿಶೇಷತೆ ಬೃಹತ್ತಾದ ಏಕಶಿಲಾ ಗಣೇಶ ವಿಗ್ರಹ. 18 ಅಡಿ ಎತ್ತರವಾಗಿದ್ದು, 16 ಅಡಿಗಳಷ್ಟು ಅಗಲವಾಗಿದೆ. ಇದನ್ನು ಶಕ್ತಿ ಅಥವಾ ಸತ್ಯ ಗಣಪತಿ ಎಂದು ಕರೆಯಲಾಗುತ್ತದೆ. ಈ ವಿಗ್ರಹವು ತನ್ನ ಬಲಭಾಗದಲ್ಲಿ ಇನ್ನೂ ಬೆಳೆಯುತ್ತಿದೆ ಎಂದು ನಂಬಲಾಗಿದೆ. ದೇವಸ್ಥಾನ ತೆರೆದಿರುವ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ12.30 ರ ವರೆಗೆ. ಸಾಯಂಕಾಲ 5.30 ರಿಂದ 8.30 ರ ವರೆಗೆ.

ಚಿತ್ರಕೃಪೆ: Mallikarjunasj

ಹಲಸೂರು

ಹಲಸೂರು

ಬೆಂಗಳೂರಿನ ಹಲಸೂರು (ಅಲ್ಸೂರು) ಪ್ರದೇಶದಲ್ಲಿದೆ ಈ ಸೋಮೇಶ್ವರ ದೇವಾಲಯ. ಚೋಳರ ಕಾಲಕ್ಕೆ ಸಂಬಂಧಿಸಿದ ಈ ದೇವಾಲಯ ನಗರದಲ್ಲಿರು ಪುರಾತನ ದೇವಾಲಯಗಳ ಪೈಕಿ ಒಂದು. ಹೊಯ್ಸಳ, ಚೋಳ ಹಾಗು ವಿಜಯನಗರದ ವಾಸ್ತುಶಿಲ್ಪಗಳ ಪ್ರಭಾವವನ್ನು ಈ ದೇವಾಲಯದಲ್ಲಿ ಕಾಣಬಹುದು. ಸೋಮೇಶ್ವರ ಅಥವಾ ಶಿವನಿಗೆ ಸಮರ್ಪಿತವಾದ ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಬ್ರಹ್ಮ ಹಾಗು ವಿಷ್ಣು ದೇವರನ್ನೂ ಪೂಜಿಸಲಾಗುತ್ತದೆ. ಅದ್ಭುತವಾದ ವಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯದ ರಾಜಗೋಪುರ ಹಾಗು ಧ್ವಜಸ್ಥಂಭಗಳು ನೋಡಲು ಆಕರ್ಷಕವಾಗಿವೆ. ಈ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Dineshkannambadi

ಮಲ್ಲೇಶ್ವರಂ

ಮಲ್ಲೇಶ್ವರಂ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಈ ಚಿಕ್ಕ ದೇವಾಲಯವು ಅಷ್ಟೊಂದು ದೊಡ್ಡದಾದ ರಚನೆಯಲ್ಲವಾದರೂ ಇದರ ಮಹಿಮೆ ಅಪಾರ. ಇದರ ಹಿನ್ನೆಲೆಯೂ ಅಷ್ಟೆ ರೋಚಕ. ಅಲ್ಲದೆ ಈ ಶಿವನ ಕ್ಷೇತ್ರ ಸಾಕಷ್ಟು ಜಾಗೃತ ಎಂಬ ನಂಬಿಕೆಯೂ ಇದೆ. ಈ ಚಿಕ್ಕ ದೇವಾಲಯದ ಪ್ರಧಾನ ದೇವ ಲಿಂಗ ಸ್ವರೂಪಿ ಶಿವನಾಗಿದ್ದು, ಇದನ್ನು ನಂದಿ ತೀರ್ಥ, ನಂದೀಶ್ವರ ತೀರ್ಥ, ಮಲ್ಲೇಶ್ವರಂ ನಂದಿ ಗುಡಿ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ. ಧಾರ್ಮಿಕ ಭಾವನೆಯನ್ನು ಇಮ್ಮಡಿಗೊಳಿಸುವಂತಹ ಅದ್ಭುತ ಸ್ಥಳ ಇದಾಗಿದೆ. ಇಲ್ಲಿ ನಂದಿಯ ವಿಗ್ರಹವು ದಕ್ಷಿಣಕ್ಕೆ ಮುಖ ಮಾಡಿ ನಿಂತಿದ್ದು ಅದರ ಬಾಯಿಯಿಂದ ನೀರು ಸದಾ ಕಾಲಾ ಜಿನುಗುತ್ತಿರುತ್ತದೆ. ಕೆಲವರ ನಂಬಿಕೆಯ ಪ್ರಕಾರ ಈ ನೀರಿನ ಮೂಲ ಯಾವುದೆಂದು ಇಂದಿಗೂ ಕಂಡುಹಿಡಿಯಲಾಗಿಲ್ಲವಂತೆ!

ಚಿತ್ರಕೃಪೆ: Masterzatak

ತಿಗಳರಪೇಟೆ

ತಿಗಳರಪೇಟೆ

ಬೆಂಗಳೂರಿನ ತಿಗಳರಪೇಟೆಯ ಒ.ಟಿ.ಸಿ ರಸ್ತೆಯಲ್ಲಿರುವ ಧರ್ಮರಾಯ ದೇವಸ್ಥಾನವು ಐತಿಹಾಸಿಕವಾಗಿ ಒಂದು ವಿಶೀಷ್ಟವಾದ ದೇವಸ್ಥಾನವಾಗಿದೆ. ಭಾರತ ದೇಶದಲ್ಲೆ ಪಾಂಡವರಿಗೆ ಸಮರ್ಪಿಸಲಾದ ಅನನ್ಯ ದೇವಾಲಯ ಇದಾಗಿದೆ. ಈ ದೇವಾಲಯವು ಗಂಗ ಅರಸು ಜನಾಂಗದವರಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿಯಲಾಗಿದೆ. ಇವರು ಮೂಲತಃ ಉತ್ತರ ತಮಿಳುನಾಡಿನಿಂದ ದಕ್ಷಿಣ ಮೈಸೂರು ಪ್ರಾಂತ್ಯಕ್ಕೆ ವಲಸೆ ಬಂದವರಾಗಿದ್ದಾರೆ. ಪುರಾತತ್ವ ಇಲಾಖೆಯು ಈ ದೇಗುಲವು ಸುಮಾರು 800 ವರ್ಷಗಳಷ್ಟು ಪುರಾತನವಾದುದು ಎಂದು ದಾಖಲಿಸಿದೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ ಕರಗ.

ಚಿತ್ರಕೃಪೆ: Thigala4u

ಮುರುಗೇಶ ಪಾಳ್ಯ

ಮುರುಗೇಶ ಪಾಳ್ಯ

ಇದೊಂದು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾದ ಶಿವನ ಸನ್ನಿಧಿಯಾಗಿದೆ. 65 ಅಡಿಗಳಷ್ಟು ಎತ್ತರದ ಶ್ವೇತವರ್ಣದ ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ ಇದರ ಅತಿ ಪ್ರಮುಖ ಆಕರ್ಷಣೆ. ಹಿಮಾಲಯ ಪರ್ವತಗಳ ಹಿನ್ನಿಲೆಯಲ್ಲಿ ಜಟದಲ್ಲಿ ಗಂಗಾಧಾರಿಯಾಗಿ ಪ್ರತಿಷ್ಠಾಪಿಸಲಾಗಿರುವ ಈ ಪ್ರತಿಮೆ ನಯನ ಮನೋಹರವಾಗಿದೆ. ರವಿ ಎಂ ಮೆಲ್ವಾನಿ ಹಾಗೂ ಅವರ ತಂದೆಗೆ ಕನಸಿನಲ್ಲಿ ಶಿವನ ದೇವಾಲಯ ಸ್ಥಾಪಿಸಬೇಕೆಂಬ ಪ್ರೇರಣೆಯುಂಟಾಗಿ ಅವರ ಸತತ ಪ್ರಯತ್ನ ಫಲದಿಂದಲೆ ಇಂದು ಮುರುಗೇಶಪಾಳ್ಯದಲ್ಲಿ ಈ ಶಿವನ ದೇವಾಲಯ ನಿರ್ಮಾಣವಾಗಿದೆ. 1995 ಫೆಬ್ರುವರಿ 26 ರ ಮಹಾಶಿವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯ ಶ್ರೀ ಶಂಕರಾಚಾರ್ಯರ ಸಾನಿಧ್ಯದಲ್ಲಿ ಈ ಭವ್ಯ ಶಿವನ ದೇವಾಲಯ ಲೋಕಾರ್ಪಣೆಯಾಯಿತು.

ಚಿತ್ರಕೃಪೆ: Indianhilbilly

ಬನಶಂಕರಿ

ಬನಶಂಕರಿ

ಬೆಂಗಳೂರು ದಕ್ಷಿಣದಲ್ಲಿರುವ ಬನಶಂಕರಿ ಬೆಂಗಳೂರಿಗರಿಗೆ ಅತಿ ಚಿರಪರಿಚಿತವಿರುವ ಪ್ರದೇಶ. ಬೃಹತ್ತಾಗಿ ವಿಸ್ತರಿಸಿರುವ ಈ ಪ್ರದೇಶಕ್ಕೆ ಬನಶಂಕರಿ ಎಂಬ ಹೆಸರು ಬರಲು ಕಾರಣ ಇಲ್ಲಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಅಮ್ಮನ ದೇವಸ್ಥಾನ. ಸೊಮಣ್ಯ ಶೆಟ್ಟಿ ಎಂಬ ಬನಶಂಕರಿ ಅಮ್ಮನ ಭಕ್ತರು ಈ ದೇವಸ್ಥಾನವನ್ನು 1915 ರಲ್ಲಿ ನಿರ್ಮಿಸಿದ್ದಾರೆ. ಇವರು ದೇವಿಯ ಮೂರ್ತಿಯನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ದೇವಸ್ಥಾನದ ವಿಶೇಷತೆಯೆಂದರೆ, ಹಿಂದೂಗಳಲ್ಲಿ ಸಾಮಾನ್ಯವಾಗಿ ಒಳ್ಳೆಯ ಘಳಿಗೆಯಲ್ಲ ಎಂದು ನಂಬಲ್ಪಡುವ ರಾಹು ಕಾಲದಲ್ಲಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ದೇವಿಯು ಎಲ್ಲ ವಿಘ್ನಗಳನ್ನು ಪರಿಹರಿಸುತ್ತಾಳೆ ಎಂಬುದು ಇದರ ಸಂಕೇತವಾಗಿದೆ. ಅರ್ಧ ಸಿಳಿದ ನಿಂಬೆ ಹಣ್ಣಿನ ತೊಗಟೆಯನ್ನು ಹಣತೆಯನ್ನಾಗಿ ಮಾಡಿ ಅದರಲ್ಲಿ ದೀಪ ಬೆಳಗಿ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಬನಶಂಕರಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Rangakuvara

ವಿಜಯನಗರ

ವಿಜಯನಗರ

ಬೆಂಗಳೂರಿನಲ್ಲಿ ಕಂಡುಬರುವ ಲವಲವಿಕೆಯ ಬಡಾವಣೆಗಳಲ್ಲಿ ವಿಜಯನಗರವೂ ಸಹ ಒಂದು. ಸಾಕಷ್ಟು ಪ್ರಸಿದ್ಧ ಹಾಗೂ ದೊಡ್ಡ ಬಡಾವಣೆಯಾಗಿರುವ ವಿಜಯನಗರದಲ್ಲಿ ಹಲವಾರು ಭವ್ಯ ದೇವಾಲಯಗಳಿವೆ. ಇಲ್ಲಿನ ಮುಖ್ಯ ರಸ್ತೆಯ ಅಂದರೆ ಕಾರ್ಡ್ ರಸ್ತೆಯ ಮೇಲಿರುವ ಮಾರುತಿ ಮಂದಿರವು ಸಾಕಷ್ಟು ಪ್ರಖ್ಯಾತಿಗಳಿಸಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ವಿಜಯನಗರ ಮಾರುತಿ ಮಂದಿರ ಎಂಬ ಹೆಸರಿನಿಂದಲೆ ಕರೆಯಲ್ಪಡುವ ಬಸ್ ನಿಲ್ದಾಣವು ಈ ದೇವಾಲಯದ ಎದುರಿಗಿದೆ.

ಜಯನಗರ

ಜಯನಗರ

ಬೆಂಗಳೂರಿನ ಜಯನಗರ 9 ನೇಯ ಬ್ಲಾಕಿನಲ್ಲಿರುವ ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ ಈ ದೇವಾಲಯ. ದೇವಾಲಯ ಸಂಕೀರ್ಣವು ಐದು ಎಕರೆಯಷ್ಟು ವಿಸ್ತಾರವಾಗಿ ಹರಡಿದೆ. ಗುಡ್ಡದ ಮೇಲೆ ನೆಲೆಸಿರುವ ಆಂಜನೇಯನ ಜೊತೆಗೆ ಇಲ್ಲಿನ ದೇವಾಲಯ ಆವರಣದಲ್ಲಿ ಸೀತಾ ರಾಮಸ್ವಾಮಿ , ಭಗವತಿ, ಗಣೇಶ, ಶ್ರೀ ರಾಜರಾಜೇಶ್ವರಿ ಹಾಗು ನವಗ್ರಹ ದೇವಸ್ಥಾನಗಳನ್ನೂ ಕಾಣಬಹುದು.ಈ ದೇವಾಲಯಕ್ಕಿರುವ ದಂತಕಥೆಯೊಂದರ ಪ್ರಕಾರ, ಒಮ್ಮೆ ಬೆಟ್ಟದಷ್ಟು ತುಂಬಿದ್ದ ರಾಗಿಯು ಕಲ್ಲು ಗುಡ್ಡವಾಗಿ ಪರಿವರ್ತಿತವಾಯಿತು. ಆದ್ದರಿಂದ ಇದಕ್ಕೆ ರಾಗಿಗುಡ್ಡ ಎಂಬ ಹೆಸರು ಬಂದಿತು. ಈ ದೇವಾಲಯದಲ್ಲಿ ಎರಡು ಕಾರ್ಯಾಲಯಗಳಿದ್ದು ಸಣ್ಣ ಕಾರ್ಯಾಲಯವನ್ನು ಉಪನಯನ, ಸೀಮಂತ ಮುಂತಾದ ಕಾರ್ಯಗಳಿಗೂ, ದೊಡ್ಡ ಕಾರ್ಯಾಲಯವನ್ನು ಮದುವೆಯಂತಹ ದೊಡ್ಡ ಸಮಾರಂಭಗಳಿಗೂ ಬಾಡಿಗೆಗೆ ಪಡೆಯಬಹುದಾಗಿದೆ. ದೇವಸ್ಥಾನ ತೆರೆದಿರುವ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ11.30 ರ ವರೆಗೆ. ಸಾಯಂಕಾಲ 5 ರಿಂದ 8.30 ರ ವರೆಗೆ.

ಚಿತ್ರಕೃಪೆ: www.dharmasagar.com

ಕೆಂಗೇರಿ

ಕೆಂಗೇರಿ

ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಗಣಪತಿ ಎಂದು ಕರೆಯಲ್ಪಡುತ್ತಾನೆ. ದೂರದಿಂದೆಯೆ ಈ ಗಣಪನ ದೇವಾಲಯವು ಸಾಕಷ್ಟು ಆಕರ್ಷಕವಾಗಿ ಕಂಡುಬರುತ್ತದೆ. ಸುವರ್ಣ ಬಣ್ಣ ಲೇಪಿತ ಐದು ಶರೀರವುಳ್ಳ ಈ ಗಣೇಶನು ದೇವಾಲಯದ ಗೋಪುರವಾಗಿಯೆ ಫಳ ಫಳನೆ ಹೊಳೆಯುತ್ತ ಎಲ್ಲರ ಗಮನ ತನ್ನೆಡೆ ಸೆಳೆಯುತ್ತಾನೆ. ಬೆಂಗಳೂರಿನ ಕೆಂಗೇರಿ ಬಳಿ ಸ್ಥಿತವಿರುವ ಈ ಪಂಚಮುಖ ಹಾಗೂ ಪಂಚ ಶರೀರವುಳ್ಳ ದೇವಾಲಯವು ಕೆಂಗೇರಿ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಮೈಸೂರಿನೆಡೆ ಸಾಗುವ ರಸ್ತೆಯಲ್ಲಿ ಸಾಗುವಾಗ ದೊರೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X