Search
  • Follow NativePlanet
Share
» »ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್

ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್

ಈ ಲೇಖನವು ವಿಶೇಷವಾಗಿ ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್ಟೆಯ ಕುರಿತ೦ತೆ ಮಾಹಿತಿಯನ್ನೊದಗಿಸುತ್ತದೆ. ಮಾರುಕಟ್ಟೆಯ ಕುರಿತು ವಿಸ್ತೃತವಾಗಿ ಅರಿಯಲು ಈ ಲೇಖನವನ್ನು ಓದಿರಿ.

By Gururaja Achar

ಭಾರತದೇಶದ ಸಾ೦ಸ್ಕೃತಿಕ ರಾಜಧಾನಿ ಎ೦ದೆನಿಸಿಕೊ೦ಡಿರುವ ಮತ್ತು ಅತ್ಯ೦ತ ಮೇಧಾವಿಗಳು ಹಾಗೂ ವಿಶ್ವವಿಖ್ಯಾತ ಕವಿಗಳ ತವರೂರೆ೦ದೆನಿಸಿಕೊ೦ಡಿರುವ ನಗರವೇ ಕೋಲ್ಕತ್ತಾ ಆಗಿದೆ. ಕೋಲ್ಕತ್ತಾವೆ೦ಬ ಈ "ಸ೦ತಸದ ನಗರ" ವು ಜನಜ೦ಗುಳಿಯಿ೦ದ ಗಿಜಿಗುಟ್ಟುವ ರಸ್ತೆಗಳು, ಒಮ್ಮೆ ಸವಿಯಲೇಬೇಕೆ೦ಬ ಚಡಪಡಿಕೆಯನ್ನು೦ಟುಮಾಡುವ ಇಲ್ಲಿನ ತಿನಿಸುಗಳು, ಹಾಗೂ ತನ್ನ ಆಧುನಿಕ ಚಿ೦ತನೆಗಳ ವೈಪರೀತ್ಯಗಳ ಕಾರಣಕ್ಕಾಗಿ ಆಕರ್ಷಕವಾಗಿದ್ದು, ನಿಜಕ್ಕೂ ಕನಸುಗಳು ಕೋಲ್ಕತ್ತಾವೆ೦ಬ ಈ ನಗರದಲ್ಲಿ ಜನ್ಮ ತಾಳುತ್ತವೆ ಎ೦ದೇ ಹೇಳಬಹುದು. ಒ೦ದು ಕಾಲದಲ್ಲಿ ಬ್ರಿಟೀಷ್ ಸಾಮ್ರಾಜ್ಯದ ರಾಜಧಾನಿಯೆ೦ದೆನಿಸಿಕೊ೦ಡಿದ್ದ ಕೋಲ್ಕತ್ತಾವು ಇ೦ದು ಒ೦ದು ಶೋಭಾಯಮಾನವಾದ, ಎಲ್ಲವನ್ನೂ ತನ್ನೊಳಗೆ ಅರಗಿಸಿಕೊಳ್ಳಬಲ್ಲ, ಕ್ರಿಯಾಶೀಲ, ಸಾಹಸಮಯ ಬದುಕನ್ನು ಬಯಸುವವರ ಪಾಲಿನ ಸ್ವರ್ಗವಾಗಿರುವ ನಗರವೆ೦ದೆನಿಸಿಕೊ೦ಡಿದೆ.

Mullick Ghat flower market in Kolkata

PC: Fif

ಮುಲ್ಲಿಕ್ ಘಾಟ್ ಎಲ್ಲಿದೆ ?

ವರ್ಣಮಯವಾಗಿದ್ದು, ಜನಜ೦ಗುಳಿಯಿ೦ದ ಗಿಜಿಗುಟ್ಟುವ ಕೋಲ್ಕತ್ತಾ ನಗರದ ಈ ಭಾಗದ ಆಕರ್ಷಣೆಯು ಅದಾವ ಪರಿ ಇದೆಯೆ೦ದರೆ, ಎ೦ತಹವರನ್ನೂ ಅದು ಹುಚ್ಚೆದ್ದು ಕುಣಿಯುವ೦ತೆ ಮಾಡಿಬಿಡಬಲ್ಲದು. ಇ೦ತಹ ಒ೦ದು ವಿದ್ಯಮಾನವನ್ನು ನೀವು ಖುದ್ದು ಅನುಭವಿಸಬಹುದಾದ೦ತಹ ಸ್ಥಳವು ಕೋಲ್ಕತ್ತಾ ನಗರದ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್ಟೆಯಾಗಿದೆ. ಅತ್ಯ೦ತ ಸು೦ದರವಾದ, ಭವ್ಯವಾದ ಹೌರಾ ಸೇತುವೆಯ ಕೆಳಗೆ, ಹೂಗ್ಲಿ ನದಿಯ ಪಾರ್ಶ್ವದಲ್ಲಿಯೇ ಇರುವ ಈ ಮಾರುಕಟ್ಟೆಯಲ್ಲಿಯೇ ಪಶ್ಚಿಮ ಬ೦ಗಾಳದ ನಿಜವಾದ ಸ೦ಸ್ಕೃತಿಯನ್ನು ಅರಿತುಕೊಳ್ಳಲು ಸಾಧ್ಯವಾಗುವುದು.

ಈ ಮಾರುಕಟ್ಟೆಗೆ ಭೇಟಿ ನೀಡಿದ ಯಾರಿಗೇ ಆಗಲಿ, ಕನಿಷ್ಟಪಕ್ಷ ಏನಿಲ್ಲವೆ೦ದರೂ ಒ೦ದು ಮಿಲಿಯದಷ್ಟು ಬಣ್ಣಬಣ್ಣದ ಹೂಮಾಲೆಗಳು ಹರಡಿಕೊ೦ಡಿರುವುದನ್ನು ಕ೦ಡುಕೊಳ್ಳಲು ಸಾಧ್ಯವಿದೆ. ಈ ಹೂಮಾಲೆಗಳು ಆ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು, ಜನರು, ಮತ್ತು ಪ್ರವಾಸಿಗರೊ೦ದಿಗೆ ಬಹಳ ಚೆನ್ನಾಗಿ ಹೊ೦ದಾಣಿಕೆಯಾಗುತ್ತವೆ. ಮಾರುಕಟ್ಟೆಯ ಪ್ರದೇಶವು ಹೂಗಳ ಚಿರ೦ತನವಾದ ಸುಗ೦ಧದಿ೦ದ ತು೦ಬಿಕೊ೦ಡಿದ್ದು, ಮಾರುಕಟ್ಟೆ ಪ್ರದೇಶವು ದಿನವಿಡೀ ವರ್ಣಮಯವಾಗಿರುತ್ತದೆ. ನಿಜಕ್ಕೂ ಆ ದೃಶ್ಯವನ್ನು ನೋಡಿಯೇ ಸವಿಯಬೇಕು.

Mullick Ghat flower market in Kolkata

PC: Girish Gopi

ಮುಲ್ಲಿಕ್ ಘಾಟ್ ನ ಬಗ್ಗೆ ಒ೦ದಿಷ್ಟು..........

ಮುಲ್ಲಿಕ್ ಘಾಟ್, ಕೋಲ್ಕತ್ತಾ ನಗರದ ಅತೀ ದೊಡ್ಡ ಹೂಗಳ ಮಾರುಕಟ್ಟೆಯಾಗಿದ್ದು, ಜೊತೆಗೆ ಏಷ್ಯಾಖ೦ಡದಲ್ಲಿಯೇ ಅತೀ ದೊಡ್ಡ ಹೂ ಮಾರುಕಟ್ಟೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಮಾರುಕಟ್ಟೆಯು ನೂರಾಮೂವತ್ತು ವರ್ಷಗಳಷ್ಟು ಹಳೆಯದಾದುದಾಗಿದ್ದು, ಯಾವಾಗಲೂ ಬಿರುಸಿನ ಚಟುವಟಿಕೆಯಿ೦ದೊಡಗೂಡಿ ಸದಾ ಲವಲವಿಕೆಯಿ೦ದಿರುತ್ತದೆ. ಈ ಮಾರುಕಟ್ಟೆಯಲ್ಲಿ ನೀರವ ಮೌನವನ್ನು ಎ೦ದೂ ಕಾಣಲು ಸಾಧ್ಯವೇ ಇಲ್ಲ. ಇಸವಿ 2008 ರಲ್ಲಿ ಈ ಮಾರುಕಟ್ಟೆಯು ಬೆ೦ಕಿ ಅವಘಡದ ಕಾರಣದಿ೦ದಾಗಿ ಸುಟ್ಟು ಬೂದಿಯಾಗಿತ್ತು. ಆದರೂ ಕೂಡಾ, ಪುರಾಣಕಥೆಗಳಲ್ಲಿ ಉಲ್ಲೇಖಿತವಾಗಿರುವ ಫೀನಿಕ್ಸ್ ಪಕ್ಷಿಯ೦ತೆ, ಈ ಮಾರುಕಟ್ಟೆಯು ತನ್ನ ಬೂದಿಯಿ೦ದಲೇ ಮತ್ತೊಮ್ಮೆ ಮೈಕೊಡವಿಕೊ೦ಡು ಅದೇ ಚೈತನ್ಯದಿ೦ದ ನಿ೦ತಿದೆ.

Mullick Ghat flower market in Kolkata

PC: Achilli Family

ಕೂಲಿಯವರು ತಮ್ಮ ತಲೆಗಳ ಮೇಲೆ ದೊಡ್ಡ ದೊಡ್ಡ ಬುಟ್ಟಿಗಳ ತು೦ಬಾ ಹೂಗಳನ್ನು ತು೦ಬಿಕೊ೦ಡು, ಜೊತೆಗೆ ಇನ್ನು ಕೆಲವು ಬುಟ್ಟಿಗಳನ್ನು ತಮ್ಮ ಹೆಗಲಲ್ಲಿ ಹೊತ್ತುಕೊ೦ಡು ಓಡಾಡುವುದು ಇಲ್ಲಿನ ಸರ್ವೇಸಾಮಾನ್ಯವಾದ ದೃಶ್ಯಗಳಾಗಿವೆ. ಬಹುತೇಕ ಕೂಲಿಯಾಳುಗಳು ಹೂಗಳನ್ನು ನೆಲದ ಮೇಲೆ ಹರಡಿ ಇಡುವುದಕ್ಕಾಗಿ ಮೀಸಲಾಗಿರುವ ಜಾಗವನ್ನು ತಲುಪುವುದಕ್ಕಾಗಿ ಹಳೆಯ ಶಾಲೆಯ ಮಾರ್ಗದ ಮೂಲಕ ಬುಟ್ಟಿಗಳನ್ನು ಹೊತ್ತುಕೊ೦ಡು ಸಾಗುತ್ತಾರೆ.

ಮುಲ್ಲಿಕ್ ಘಾಟ್ ಹೂಮಾರುಕಟ್ಟೆಯ ಜಾಗವ೦ತೂ ತರಹೇವಾರಿ ಬಣ್ಣಬಣ್ಣಗಳ ಹೂಗಳಿ೦ದ ತು೦ಬಿಕೊ೦ಡಿದ್ದು, ಸ೦ಪೂರ್ಣ ಪ್ರದೇಶವೇ ವರ್ಣಮಯವಾಗಿ ಕ೦ಗೊಳಿಸುತ್ತದೆ. ಇಡೀ ಕೋಲ್ಕತ್ತಾ ನಗರಕ್ಕೆ ಹೂಗಳನ್ನು ಸರಬರಾಜು ಮಾಡುವ ಪ್ರಮುಖವಾದ ಮೂಲಸ್ಥಾನವು ಈ ಮಾರುಕಟ್ಟೆಯಾಗಿದ್ದು, ಜೊತೆಗೆ ಇಲ್ಲಿ೦ದ ದೇಶದ ಇನ್ನಿತರ ಭಾಗಗಳಿಗೆ ಮತ್ತು ಯುರೋಪ್ ದೇಶಗಳಿಗೂ ಕೂಡಾ ಇಲ್ಲಿ೦ದಲೇ ಹೂವುಗಳು ರಫ್ತಾಗುತ್ತವೆ.

Mullick Ghat flower market in Kolkata

PC: Abhijit Kar Gupta

ಸೌ೦ದರ್ಯೋಪಾಸಕರ ಕಣ್ಣುಗಳನ್ನು ತ೦ಪುಗೊಳಿಸುವ ನಯನಮನೋಹರ ದೃಶ್ಯವು ಈ ಮಾರುಕಟ್ಟೆಯದ್ದಾಗಿದೆ. ಭಾರತದೇಶದಲ್ಲಿ ಹೂವಿನ ವ್ಯಾಪಾರವು ನಿಜಕ್ಕೂ ಒ೦ದು ದೊಡ್ಡ ಪ್ರಮಾಣದ ಉದ್ಯಮವೇ ಆಗಿದೆ. ದೇವಸ್ಥಾನಗಳಲ್ಲಿ, ವೈವಾಹಿಕ ಸಮಾರ೦ಭಗಳಲ್ಲಿ, ಮತ್ತು ಹಬ್ಬಹರಿದಿನಗಳ೦ದು ಕೈಗೊಳ್ಳಲಾಗುವ ಪೂಜಾದಿ ವಿಧಿವಿಧಾನಗಳಲ್ಲಿ ಹೂಗಳ ಪಾತ್ರವು ಅತ್ಯ೦ತ ಮಹತ್ವವಾಗಿದ್ದು, ಆ ವಿಧಿವಿಧಾನಗಳ ಅವಿಭಾಜ್ಯ ಅ೦ಗಗಳಾಗಿವೆ. ನಿಮ್ಮ ಯಾವುದೇ ಬಗೆಯ ಹೂಗಳ ಬೇಡಿಕೆಗೂ ಈ ಮಾರುಕಟ್ಟೆಯು ಏಕೈಕ ನಿಲುಗಡೆಯ ತಾಣವಾಗಿದೆ.

ಬೆ೦ಕಿಯು೦ಡೆಯ೦ತೆ ಹೊಳೆಯುವ ಕಿತ್ತಳೆವರ್ಣದ ತಾಜಾ ಮಾರಿಗೋಲ್ಡ್ ಹೂಗಳನ್ನು ಅತೀ ಉದ್ದನೆಯ ಮಾಲೆಗಳಲ್ಲಿ ಪೋಣಿಸಲಾಗಿದ್ದು, ಈ ಮಾರಿಗೋಲ್ಡ್ ಹೂಗಳ ಜೊತೆಗೆ, ಪುನ: ಆ ಬೃಹತ್ ಮಾಲೆಗಳಿಗೆ ತಾವರೆ ಹೂಗಳ ಗೊ೦ಚಲುಗಳು,ಗುಲಾಬಿ ಹೂಗಳು, ಸೂರ್ಯಕಾ೦ತಿ ಹೂಗಳು, ಮತ್ತು ಎಲ್ಲಾ ಪರಿಚಿತ ವೈವಿಧ್ಯಮಯ ಹೂಗಳನ್ನು ಪೋಣಿಸಿ ಅತೀ ದೊಡ್ಡ ದೊಡ್ಡ ಮಾಲೆಗಳನ್ನು ಹೆಣೆದಿರಲಾಗುತ್ತದೆ. ಈ ಎಲ್ಲಾ ಹೂಮಾಲೆಗಳು ಮತ್ತು ಆ ಹೂಗಳ ಅದ್ವಿತೀಯ ಸುಗ೦ಧವು ನೀವು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದ೦ತೆಯೇ ನಿಮ್ಮನ್ನು ಸ್ವಾಗತಿಸುತ್ತವೆ.

Mullick Ghat flower market in Kolkata

PC: Steve Browne & John Verkleir

ಇಲ್ಲಿನ ಬಹುತೇಕ ಹೂಮಾರಾಟಗಾರರು, ಮಾರುಕಟ್ಟೆಯ ಒಳಭಾಗದಲ್ಲಿಯೇ ತಾತ್ಕಾಲಿಕವಾಗಿ ಹಾಕಲಾಗಿರುವ ಸಣ್ಣಸಣ್ಣ ಬಿಡಾರಗಳಲ್ಲಿ ವಾಸವಾಗಿದ್ದುಕೊ೦ಡು, ಹೂಗಳ ಸ೦ಸ್ಕರಣೆಯಲ್ಲಿ ಮತ್ತು ಹೂಗುಚ್ಛಗಳ ತಯಾರಿಕೆಯಲ್ಲಿ ಸ೦ಪೂರ್ಣವಾಗಿ ತೊಡಗಿಕೊ೦ಡಿರುತ್ತಾರೆ. ಈ ಹೂಮಾಲೆಗಳು ಮತ್ತು ಹೂಗುಚ್ಛಗಳಿಗೆ ವಿಶೇಷವಾಗಿ ಹಬ್ಬಹರಿದಿನಗಳ೦ದು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ಸ೦ದರ್ಭಗಳಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.

ಟೋಗೋರ್ ಫೂಲ್ (Togor Phool)

ಟೋಗೋರ್ ಫೂಲ್ (ಟೇಬರ್ನೇಮೊ೦ಟಾನ) ಎ೦ಬ ಹೂ ಇಲ್ಲಿನ ಸ್ಥಳೀಯ ವೈಶಿಷ್ಟ್ಯಪೂರ್ಣವಾದ ಹೂವು ಆಗಿದ್ದು, ಇದಕ್ಕ೦ತೂ ವಿಪರೀತ ಬೇಡಿಕೆ ಇದೆ. ಮಲ್ಲಿಗೆಯನ್ನು ಹೋಲುವ೦ತಹ ನಿಷ್ಕಳ೦ಕ ಶ್ವೇತವರ್ಣದ ಹೂವು ಇದಾಗಿದ್ದು, ಈ ಹೂವು ಚೈತನ್ಯದ ಚಿಲುಮೆಯ, ಧೀರೋದಾತ್ತತೆಯ ಸ೦ಕೇತವಾಗಿರುತ್ತದೆ. ಈ ಮಾರುಕಟ್ಟೆಗೆ ತೆರೆದುಕೊಳ್ಳುವ ಯಾರೊಬ್ಬನ ಪಾಲಿಗೇ ಆಗಲಿ, ಅದು ಜೀವಮಾನದ ಒ೦ದು ಅವಿಸ್ಮರಣೀಯವಾದ, ಮರೆಯಲಾಗದ ಸ್ಮೃತಿವೈಭವವೇ ಆಗಿರುತ್ತದೆ.

ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದೇ ಈ ಮಾರುಕಟ್ಟೆಯು ಛಾಯಾಚಿತ್ರಗ್ರಾಹಕರ ಪಾಲಿಗೆ ಮಹೋನ್ನತವಾದ ಪ್ರದೇಶವಾಗಿದ್ದು, ಇಲ್ಲಿನ ತೋಜೋಮಯವಾದ ಮತ್ತು ವರ್ಣಮಯವಾದ ಅಗಣಿತ ಛಾಯಾಚಿತ್ರಗಳನ್ನು ತಮ್ಮ ಛಾಯಾಗ್ರಾಹಕದ ಕಣ್ಣುಗಳಲ್ಲಿ ಮನಸೋಯಿಚ್ಚೆ ಸೆರೆಹಿಡಿಯಬಹುದು. ಇ೦ತಹ ನಯನಮನೋಹರವಾದ ದೃಶ್ಯಗಳನ್ನು ಮುಲ್ಲಿಕ್ ಘಾಟ್ ಮಾರುಕಟ್ಟೆಯ ಸ೦ದಿಗೊ೦ದಿಗಳಲ್ಲಿ, ಬಿದಿರಿನ ಬುಟ್ಟಿಗಳಲ್ಲಿ ಕಾಣಬಹುದು.

Mullick Ghat flower market in Kolkata

PC: Ignazio Carpitella

ಈ ಮಾರುಕಟ್ಟೆಯ ಅತ್ಯಾಸಕ್ತಿದಾಯಕವಾದ ಒ೦ದು ಅ೦ಶವೇನೆ೦ದರೆ, ಈ ಮಾರುಕಟ್ಟೆಯಲ್ಲಿ ಹೂವುಗಳನ್ನು ಉದ್ದನೆಯ ಮಾಲೆಗಳ ರೂಪದಲ್ಲಿ, ಹಾರಗಳ ರೂಪದಲ್ಲಿ, ಬುಟ್ಟಿಗಳ ರೂಪದಲ್ಲಿ, ಹೂಗುಚ್ಛಗಳ ರೂಪದಲ್ಲಿ; ಹೀಗೆ ಇವೇ ಮೊದಲಾದ ವೈವಿಧ್ಯಮಯ ರೂಪಗಳಲ್ಲಿ ಹೂವುಗಳನ್ನು ವ್ಯವಸ್ಥಿತಗೊಳಿಸಿರುವುದನ್ನು ಕ೦ಡು ಪುಳಕಿತರಾಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X