ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ!

Written by:
Updated: Thursday, February 23, 2017, 12:30 [IST]
Share this on your social network:
   Facebook Twitter Google+ Pin it  Comments

ತಮಿಳಿನಲ್ಲಿ "ಮನ್ನಾರ್" ಎಂದರೆ ವಿಷ್ಣು ಅಥವಾ ಕೃಷ್ಣನೆಂದಾಗುತ್ತದೆ ಹಾಗೂ "ಗುಡಿ" ಎಂದರೆ ಸ್ಥಳ. ರಾಜವೈಭೋಗದ ವಿಷ್ಣು ನೆಲೆಸಿರುವ ಸ್ಥಳ ಇದಾಗಿದ್ದು ಇಲ್ಲಿ ಪ್ರತಿಷ್ಠಾಪಿತನಾಗಿರುವ ಸ್ವಾಮಿಯನ್ನು ರಾಜಮನ್ನಾರ್ ಎಂತಲೂ ಸಹ ಕರೆಯಲಾಗುತ್ತದೆ. ಹಾಗಾಗಿ ಮನ್ನಾರ್ ನೆಲೆಸಿರುವ ಈ ಸ್ಥಳವು ಮನ್ನಾರ್ಗುಡಿ ಎಂಬ ಹೆಸರು ಪಡೆದಿದೆ.

ತಮಿಳುನಾಡಿ ತಿರುವರೂರು ಜಿಲ್ಲೆಯಲ್ಲಿರುವ ಮನ್ನಾರ್ಗುಡಿ ಪಟ್ಟಣವು ಪ್ರಮುಖವಾಗಿ ತನ್ನಲ್ಲಿರುವ ವೈಭವಸಾರುವ ಕೃಷ್ಣ/ವಿಷ್ಣುವಿನ ದೇವಾಲಯವಾದ ರಾಜಗೋಪಾಲಸ್ವಾಮಿ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಸಾವಿರಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದ ಈ ದೇವಾಲಯವು ಸಾಕಷ್ಟು ಮಹತ್ವ ಪಡೆದ ಹಾಗೂ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು/ಭಕ್ತರು ಭೇಟಿ ನೀಡುವ ದೇವಾಲಯವಾಗಿದೆ.

ಮನ್ನಾರ್ಗುಡಿ

ತಿರುವರೂರು ಜಿಲ್ಲೆಯ ಮನ್ನಾರ್ಗುಡಿ ಪಟ್ಟಣದಲ್ಲಿರುವ ರಾಜಗೋಪಾಲಸ್ವಾಮಿ ದೇವಾಲಯವು ಪಟ್ಟಣದ ಗುರುತರವಾದ ಆಕರ್ಷಣೆಯಾಗಿದ್ದು ಸುಮಾರು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು ಎತ್ತರದ ಗೋಪುರಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Ssriram mt

 

ವಾಸುದೇವ

ಇದು ಮೂಲತಃ ಕೃಷ್ಣ ದೇವಾಲಯವಾಗಿದ್ದು ಕೃಷ್ಣ ಹಾಗೂ ವಾಸುದೇವನನ್ನು ಸಮನಾಗಿ ಪೂಜಿಸಲಾಗುತ್ತದೆ. ಪ್ರತಿಷ್ಠಾಪಿತನಾದ ಮುಖ್ಯ ದೇವರು ವಾಸುದೇವನಾಗಿ ಆರಾಧಿಸಲ್ಪಟ್ಟರೆ ಉತ್ಸವ ಮೂರ್ತಿಯಾಗಿ ರಾಜಗೋಪಾಲಸ್ವಾಮಿಯನ್ನು ಆರಾಧಿಸಲಾಗುತ್ತದೆ.

ಚಿತ್ರಕೃಪೆ: Krishna Kumar Subramanian

 

ವಿಶೇಷತೆ

ಇಲ್ಲಿರುವ ಕೃಷ್ಣನು ಗೋಪಾಲಕನಾಗಿರುವುದು ಇನ್ನೊಂದು ವಿಶೇಷ. ಒಂದೊಮ್ಮೆ ಕಂಸನು ಕೃಷ್ಣನ ಹಿರಿಯ ಸಹೋದರನಾದ ಬಲರಾಮನನ್ನು ಹತ್ಯೆ ಮಾಡಲು ಅವನ ಬಳಿಯಿದ್ದ ಬಲಶಾಲಿಯಾದ ಕುವಲಯಪೀತಂ ಎಂಬ ಆನೆಯನ್ನು ಕಳುಹಿಸಿದ್ದ. ಬಲು ಉಗ್ರ ಹಾಗೂ ಬಲಶಾಲಿಯಾಗಿದ್ದ ಆ ಆನೆ ಬಲರಾಮನನ್ನು ಸಂಹರಿಸಲೆಂದು ಅವನ ಮೇಲೆ ಎರಗಲು ಸಜ್ಜಾಗಿತ್ತು.

ಚಿತ್ರಕೃಪೆ: Krishna Kumar Subramanian

 

ಕಿತ್ತಿದ

ಆ ಸಂದರ್ಭದಲ್ಲಿ ಕೃಷ್ಣನು ಸ್ವತಃ ಆನೆಯ ಮೇಲೆ ಎರಗಿ ಅದನ್ನು ಸುಲಭವಾಗಿ ಸದೆಬಡಿದನಲ್ಲೆ ಅದರ ಕೋರೆಹಲ್ಲುಗಳನ್ನು ಕಿತ್ತೆಸೆದ. ಈ ಒಂದು ಪ್ರಸಂಗದ ಸ್ಮರಣಾರ್ಥವಾಗಿ ಈ ದೇವಾಲಯದಲ್ಲಿರುವ ರಾಜಗೋಪಾಲಸ್ವಾಮಿ ಅರ್ಥಾತ್ ಕೃಷ್ಣನು ಒಂದು ಕೈಯಲ್ಲಿ ಬೆತ್ತ, ಇನ್ನೊಂದು ಕೈಯಲ್ಲಿ ಆನೆ ದಂತವನ್ನು ಹಿಡಿದು ನಿಂತಿರುವುದನ್ನು ಕಾಣಬಹುದು.

ಚಿತ್ರಕೃಪೆ: Harizen20

 

ಕೈಯಲ್ಲಿ ಬೆತ್ತ

ಗೋಪಾಲಕನಾಗಿರುವುದರಿಂದ ತಲೆಗೆ ಪೇಟ, ಕೈಯಲ್ಲಿ ಬೆತ್ತ ಹಾಗೂ ಧೋತ್ರ ಧರಿಸಿರುವುದನ್ನು ಕಾಣಬಹುದು. ಅಲ್ಲದೆ ಅವನ ಸನಿಹದಲ್ಲಿ ಒಂದು ಆಕಳು ಹಾಗೂ ಎರಡು ಕರುಗಳು ಇರುವುದನ್ನೂ ಸಹ ಗಮನಿಸಬಹುದು. ದಕ್ಷಿಣ ಭಾರತದಲ್ಲಿ ಈ ರೀತಿಯ ಕೃಷ್ಣನು ಇರುವುದು ಬಲು ಅಪರೂಪವೆಂದೆ ಹೇಳಬಹುದು. ಹಾಗಾಗಿ ಈ ರಾಜಗೋಪಾಲನ ಭಕ್ತರ ಸಂಖ್ಯೆ ಅಪಾರ.

ಚಿತ್ರಕೃಪೆ: Harizen20

 

ಕೃಷ್ಣನ ಅನುಯಾಯಿಗಳು

ಇನ್ನೊಂದು ದಂತಕಥೆಯ ಪ್ರಕಾರ, ತನ್ನ ಕೃಷ್ಣನ ಅವತಾರ ಮುಗಿದಿದ್ದರೂ ಇಬ್ಬರು ಮಹಾನ್ ಭಕ್ತರ ಕೋರಿಕೆಯಂತೆ ವಿಷ್ಣು ಮತ್ತೆ ಗೋಪಾಲಕನ ಅವತಾರದಲ್ಲಿ ಆ ಇಬ್ಬರೂ ಭಕ್ತರಿಗೆ ಇಲ್ಲಿ ದರ್ಶನ ನೀಡಿದ್ದುದರಿಂದ ಸಕಲ ಹರಕೆಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿದೆ.

ಚಿತ್ರಕೃಪೆ: Ssriram mt

 

ನಿವಾರಣೆಯಾಗುತ್ತದಂತೆ!

ಇನ್ನೊಂದು ನಂಬಿಕೆಯಂತೆ ಗೋಪಾಲಕನಾಗಿ ಬಾಲಕ ರೂಪದಲ್ಲಿರುವ ಕಾರಣ ಮಕ್ಕಳ ಜಾತಕಗಳಲ್ಲಿ ದೋಷವೇನಾದರೂ ಇದ್ದಲ್ಲಿ ಆ ಸಕಲ ದೋಷಗಳನ್ನು ನಿವಾರಿಸಿ ಮಕ್ಕಳನ್ನು ಮುನ್ನಡೆಸುತ್ತಾನೆಂಬ ನಂಬಿಕೆಯೂ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು/ಪಾಲಕರು ಈ ಕೃಷ್ಣನ ದರ್ಶನ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Ssriram mt

 

ಸಾಕಷ್ಟು ಗೋಪುರಗಳು

ಹಲವು ಸನ್ನಿಧಿಗಳನ್ನು ಹೊಂದಿರುವ ಈ ವಿಶಾಲ ದೇವಾಲಯವು ಒಟ್ಟಾರೆಯಾಗಿ 16 ಗೋಪುರಗಳನ್ನು, 18 ವಿಮಾನಗಳನ್ನು, 7 ಪ್ರಾಕಾರಗಳನ್ನು, 7 ಮಂಟಪಗಳನ್ನು ಹಾಗೂ 9 ಕಲ್ಯಾಣಿಗಳನ್ನು ಹೊಂದಿದೆ ಎಂದರೆ ಇದರ ಅಗಾಧತೆಯನ್ನು ನೀವೆ ಊಹಿಸಿಕೊಳ್ಳಬಹುದು.

ಐತ್ರಕೃಪೆ: Krishna Kumar Subramanian

 

ಚೆನ್ನಾಗಿದೆ

ತಮಿಳುನಾಡಿನಲ್ಲೆ ತಿರುವರೂರು ರಥಗಳ ಸೌಂದರ್ಯಕ್ಕೆ ವಿಶೇಷವಾಗಿ ಗಮನಸೆಳೆಯುತ್ತದೆ. ಹಾಗಾಗಿ ಪ್ರಸ್ತುತ ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ ದೇವಾಲಯದ ರಥವೂ ಸಹ ಸಾಕಷ್ಟು ಅದ್ಭುತವಾಗಿ ಕಂಡುಬರುತ್ತದೆ. ಅಲ್ಲದೆ ದೇವಾಲಯದ ಗೋಡೆಯೂ ಸಹ ಸುಂದರವಾಗಿ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Harizen20

 

ಕಂಸ

ಕೃಷ್ಣನ ತಾಯಿ ದೇವಕಿಯನ್ನು ಸಹೋದರನಾದ ಕಂಸನು ಬಂಧಿಸಿಟ್ಟಾಗ ವಿಷ್ಣು ಸ್ವತಃ ವಾಸುದೇವ ಹಾಗೂ ದೇವಕಿಯರ ಮುಂದೆ ಪ್ರತ್ಯಕ್ಷನಾಗಿ ತಾನೆ ದೇವಕಿಯ ಗರ್ಭದಿಂದ ಜನಿಸಿ ಬರುವುದಾಗಿ ಆಶ್ವಾಸನೆ ನೀಡುತ್ತಾನೆ. ಅದರಂತೆ ಕ್ರ್‍ಷ್ಣನ ಅವತಾರದಲ್ಲಿ ಜನಿಸಿ ಮುಂದೆ ಗೋಕುಲಂಗೆ ತೆರಳಿ ಅಲ್ಲಿ ಯಶೋಧೆಯ ಮಮತೆಯಲ್ಲಿ ಬೆಳೆಯುತ್ತಾನೆ.

ಚಿತ್ರಕೃಪೆ: Ssriram mt

 

ಕಥೆ ಕೇಳಿದ್ದರು

ಈ ಕಥೆಯನ್ನು ಕೇಳಿದ್ದ ಗೋಪಿಲರ್ ಹಾಗೂ ಗೋಪಿರಲಯರ್ ಎಂಬ ಇಬ್ಬರು ಋಷಿಗಳು ಪ್ರಭಾವಿತರಾಗುತ್ತಾರೆ ಹಾಗೂ ಸ್ವಾಮಿಯ ದರ್ಶನ ಪಡೆಯುವ ಉದ್ದೇಶದಿಂದ ತಪಸ್ಸನ್ನಾಚರಿಸುತ್ತಾರೆ. ಮೊದಲಿಗೆ ಸ್ವಾಮಿಯು ಅವರಿಗೆ ವಾಸುದೇವನ ರೂಪದಲ್ಲಿ ದರ್ಶನ ಕೊಡುವ ಕಾರಣ ಈ ದೇವಾಲಯದಲ್ಲಿ ಮುಖ್ಯ ವಿಗ್ರಹ ದೇವರಾಗಿ ವಾಸುದೇವನನ್ನು ಆರಾಧಿಸಲಾಗುತ್ತದೆ.

ಚಿತ್ರಕೃಪೆ: Ssriram mt

 

ದ್ವಾರಕದೆಡೆ ಪಯಣ

ಆದರೆ ಆ ಇಬ್ಬರು ಋಷಿಗಳಿಗೆ ಗೋಕುಲದ ಕೃಷ್ಣನ ದರ್ಶನ ಮಾಡಬೇಕೆಂಬ ತೀವ್ರ ಬಯಕೆಯಾಗಿರುವುದರಿಂದ ಉತ್ತರದ ದ್ವಾರಕದೆಡೆ ತಮ್ಮ ಪ್ರಯಾಣ ಬೆಳೆಸುತ್ತಾರೆ. ಹೀಗೆ ಸಾಗುವಾಗ ತ್ರಿಲೋಕ ಸಂಚಾರಿ ನಾರದ ಮಹಾಮುನಿಗಳು ಅವರಿಗೆ ಎದುರಾಗಿ ದ್ವಾಪರಯುಗ ಮುಗಿದಿರುವುದಾಗಿಯೂ ಕೃಷ್ಣನ ಅವತಾರ ಈ ಭೂಮಿಯ ಮೇಲೆ ಸಮಾಪ್ತವಾಗಿರುವುದಾಗಿಯೂ ತಿಳಿ ಹೇಳುತ್ತಾನೆ.

ಚಿತ್ರಕೃಪೆ: Harizen20

 

ಬೇಸರಪಟ್ಟರು

ಈ ಸತ್ಯವು ಆ ಇಬ್ಬರು ಋಷಿಗಳಿಗೆ ಸಿಡಿಲು ಬಡಿದಂತಾಗಿ, ತಾವೆಂದೂ ಇನ್ನು ಮುಂದೆ ಕೃಷ್ಣನನ್ನು ನೋಡಲು ಸಾಧ್ಯವೆ ಇಲ್ಲವೆಂಬ ಆತಂಕ ಉಂಟಾಗಿ ಅಲ್ಲಿಯೆ ಕುಸಿದು ಬೀಳುತ್ತಾರೆ. ನಾರದರು ನೀರನ್ನು ಸಿಂಪಡಿಸಿ ಅವರನ್ನು ಎಚ್ಚರಿಸಿ ನಿರ್ದಿಷ್ಟ ಸ್ಥಳವೊಂದರಲ್ಲಿ ಕುಳಿತು ಸ್ವಾಮಿಯ ಕುರಿತು ತಪಸ್ಸನ್ನಾಚರಿಸಲು ಸಲಹೆ ನೀಡುತ್ತಾನೆ.

ಚಿತ್ರಕೃಪೆ: Ssriram mt

 

ದರ್ಶನವಾಯಿತು!

ಅದರಂತೆ ಆ ಮುನಿಗಳು ಅತ್ಯಂತ ಕಠಿಣವಾದ ತಪಸ್ಸನ್ನಾಚರಿಸಿ ಕೃಷ್ಣನ ಕೃಪೆಗೆ ಪಾತ್ರರಾಗುತ್ತಾರೆ. ಹಾಗಾಗಿ ವಿಷ್ಣು ಅವರಿಗೆ ಗೋಪಾಲಕ ಕೃಷ್ಣನ ರೂಪದಲ್ಲಿ ಮತ್ತೆ ದರ್ಶನ ಕರುಣಿಸುತ್ತಾನೆ ಮತ್ತು ಅವರ ಕೋರಿಕೆಯಂತೆ ಅದೆ ಸ್ಥಳದಲ್ಲಿ ನೆಲೆಸುತ್ತಾನೆ. ಆ ಸ್ಥಳವೆ ಇಂದಿನ ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ ದೇವಾಲಯ ಎಂಬ ಪ್ರತೀತಿಯಿದೆ.

ಚಿತ್ರಕೃಪೆ: Ssriram mt

 

ಹರಿದ್ರಾ ನದಿ

ಆ ಮುನಿಗಳು ತಪಸ್ಸನ್ನಾಚರಿಸಿದ ಸ್ಥಳದ ಬಳಿ ಇರುವ ಕಲ್ಯಾಣಿಯೆ ಹರಿದ್ರಾ ನದಿ ಎಂದು ಕರೆಯಲ್ಪಡುತ್ತದೆ. ಇದು ದೇವಾಲಯ ಸಂಕೀರ್ಣದ ಹೊರ ಭಾಗದಲ್ಲಿ ಸ್ಥಿತವಿರುವುದು ವಿಶೇಷ. ಜಮುನಾ ಹಾಗೂ ಯಮುನಾ ನದಿಗಳು ಇದರಲ್ಲಿ ಅಡಕವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಕಲ್ಯಾಣಿಯು ಭಾರತದಲ್ಲಿ ಕಂಡುಬರುವ ಅತ್ಯಂದ ದೊಡ್ಡ ಕಲ್ಯಾಣಿಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Ssriram mt

 

ಆರು ಬಾರಿ

ವೈಷ್ಣವ ಸಂಪ್ರದಾಯದ ಈ ದೇವಾಲಯದಲ್ಲಿ ನಿತ್ಯವೂ ಆರು ಬಾರಿ ಪೂಜೆಗಳು ಹಾಗೂ ವಾರ್ಷಿಕವಾಗಿ ಅನೇಕ ಉತ್ಸವಗಳು ಜರುಗುತ್ತವೆ. ಅದರಲ್ಲೂ ವಿಶೇಷವಾಗಿ ಮಾರ್ಚ್-ಎಪ್ರಿಲ್ ಸಂದರ್ಭದಲ್ಲಿ ಜರುಗುವ ಬ್ರಹ್ಮೋತ್ಸವ ಈ ದೇವಾಲಯದ ಅತ್ಯಂತ ಪ್ರಮುಖ ಹಾಗೂ ಮಹತ್ವದ ಉತ್ಸವವಾಗಿದೆ.

ಮನ್ನಾರ್ಗುಡಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರಕೃಪೆ: Supraja kannan

 

18 ದಿನಗಳು

ಕೃಷ್ಣಾವತಾರಕ್ಕೆ ಸಂಬಂಧಿಸಿದಂತೆ 18 ಬಲು ವಿಶೇಷವಾದ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಮಹಾಭಾರತದ ಯುದ್ಧ ನಡೆದಿದ್ದು ಹದಿನೆಂಟು ದಿನಗಳ ಕಾಲ. ಭಗವದ್ಗೀತೆಯಲ್ಲಿ ಅಧ್ಯಾಯಗಳಿರುವುದು 18. ಹಾಗಾಗಿ ಇಲ್ಲಿನ ಬ್ರಹ್ಮೋತ್ಸವವನ್ನೂ ಸಹ ಹದಿನೆಂಟು ದಿನಗಳ ಕಾಲ ಬಲು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೃಷ್ಣನ 32 ಲೀಲೆಗಳ ಗೌರವಾರ್ಥವಾಗಿ 32 ಬಗೆ ಬಗೆಯ ಅಲಂಕಾರಗಳನ್ನು ಕೃಷ್ಣನಿಗೆ ಮಾಡಲಾಗುತ್ತದೆ.

ಚಿತ್ರಕೃಪೆ: Harizen20

 

ದಕ್ಷಿಣ ದ್ವಾರಕಾ

ಅಲ್ಲದೆ ನವರಾತ್ರಿ ಉತ್ಸವ ಹಾಗೂ ಇತರೆ ಉತ್ಸವಾದಿಗಳನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಉತ್ಸವಾದಿ ಸಂದರ್ಭಗಳಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುವವರೆ ಸಂಖ್ಯೆ ಅಧಿಕವಾಗಿರುತ್ತದೆ. ಮಿಕ್ಕಂತೆ ಪ್ರವಾಸಿಗರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಗುರುವಾಯೂರಿನ ಜೊತೆ ಜೊತೆಗೆ ಈ ದೇವಾಲಯವನ್ನೂ ಸಹ "ದಕ್ಷಿಣದ ದ್ವಾರಕಾ" ಎಂದು ಕರೆಯುತ್ತಾರೆ.

ಚಿತ್ರಕೃಪೆ: Harizen20

 

ಕಾಲ

ಇತಿಹಾಸದಿಂದ ತಿಳಿದುಬರುವ ಅಂಶವೆಂದರೆ, ಹನ್ನೊಂದನೇಯ ಶತಮಾನದಲ್ಲಿ ಚೋಳ ಸಾಮ್ರಾಜ್ಯದ ಕುಲೋತುಂಗ ಚೋಳ ರಾಜನಿಂದ ಈ ದೇವಾಲಯ ನಿರ್ಮಾಣವಾಗಿದೆ. ತದ ನಂತರ ಇತರೆ ಚೋಳ ರಾಜರು ಕಾಲಕ್ಕೆ ತಕ್ಕಂತೆ ವಿಸ್ತರಿಸಿದರು. ತಂಜಾವೂರು ನಾಯಕರೂ ಸಹ ಹದಿನಾರನೇಯ ಶತಮಾನದಲ್ಲಿ ಈ ದೇವಾಲಯವನ್ನು ಸಾಕಷ್ಟು ನವೀಕರಿಸಿದರು ಎಂದು ತಿಳಿದುಬರುತ್ತದೆ.

ಚಿತ್ರಕೃಪೆ: Harizen20

 

ಎಷ್ಟು ದೂರ?

ಮನ್ನಾರ್ಗುಡಿಯು ತಿರುವರೂರು ಜಿಲ್ಲಾ ಕೆಂದ್ರದಿಂದ 20 ಕಿ.ಮೀ, ಚೆನ್ನೈನಗರದಿಂದ 310 ಕಿ.ಮೀ ಹಾಗೂ ಬೆಂಗಳೂರಿನಿಂದ 430 ಕಿ.ಮೀ ಗಳಷ್ಟು ದೂರವಿದ್ದು ಈ ಮೂರೂ ಸ್ಥಳಗಳಿಂದ ಮನ್ನಾರ್ಗುಡಿಗೆ ತೆರಳಲ್ಲು ಬಸ್ಸುಗಳು ದೊರೆಯುತ್ತವೆ. ಬೆಂಗಳೂರಿನಿಂದ ವಿಶೇಷವಾಗಿ ಖಾಸಗಿ ಬಸ್ಸುಗಳ ಸೌಕರ್ಯವಿದೆ. ಮನ್ನಾರ್ಗುಡಿ ರೈಲು ನಿಲ್ದಾಣ ಹೊಂದಿದ್ದು ಕರೂರಿನ ಮೂಲಕ ರೈಲು ಮನ್ನಾರ್ಗುಡಿಗೆ ರೈಲು ಲಭ್ಯವಿದೆ. ಬೆಂಗಳೂರಿನಿಂದ ಮೈಲಾಡುತುರೈ ಎಕ್ಸ್ ಪ್ರೆಸ್ ರೈಲಿನ ಮೂಲಕ ಕರೂರು ತಲುಪಿ ಅಲ್ಲಿಂದ ಮನ್ನಾರ್ಗುಡಿಗೆ ಮತ್ತೊಂದು ರೈಲನ್ನು ಹಿಡಿದು ತಲುಪಬಹುದು. ಮನ್ನಾರ್ಗುಡಿ ರೈಲು ನಿಲ್ದಾಣ.

ಚಿತ್ರಕೃಪೆ: Vasanth Mohan

 

English summary

Mannargudi Rajagopalaswamy Temple : Another Dwarka of South!

Rajagopalaswamy temple is a Vaishnavite shrine located in the town of Mannargudi, Tamil Nadu, India. The presiding deity is Rajagopalaswamy, a form of Lord Krishna.
Please Wait while comments are loading...