Search
  • Follow NativePlanet
Share
» »ಮಂಗಳೂರು ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು

ಮಂಗಳೂರು ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು

By Vijay

ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್‌ ಸಮುದ್ರದ ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ ನಿಂತಿದೆ ಮಂಗಳೂರು. ಇವೆರಡೂ ಈ ನಗರಿಗೆ ಭೂಷಣಪ್ರಾಯವಾಗಿ ಲಭಿಸಿವೆ ಎಂದರೂ ತಪ್ಪಾಗಲಾರದು. ಇದರಿಂದಲೇ ಮಂಗಳೂರು ನೋಡುಗರ ಕಣ್ಮನ ಸೆಳೆಯುವ ಆಕರ್ಷಕ ತಾಣಗಳನ್ನು ಒಳಗೊಂಡ ಪ್ರದೇಶವಾಗಿ ಜನಪ್ರಿಯವಾಗಿದೆ.

ವಿಶೇಷ ಲೇಖನ : ಸಾಗರದ ಅನಂತ ಆಕರ್ಷಣೆಗಳು

ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಈ ಪಟ್ಟಣವು ಪ್ರಸ್ತುತ ಭಾರತದ ಪ್ರಮುಖ ಬಂದರು ಪಟ್ಟಣಗಳಲ್ಲಿ ಒಂದಾಗಿದೆ ಹಾಗೂ ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿ ನೆಲೆಸಿದ್ದು ರಾಜ್ಯದ ಗುರುತರವಾದ ಪ್ರವಾಸಿ ಕೇಂದ್ರಗಳ ಪೈಕಿಯೂ ಸಹ ಒಂದಾಗಿದೆ.

ವಿಶೇಷ ಲೇಖನ : ಬೆಂಗಳೂರಿನ ಬಲು ಸುಂದರ ಲಾಲ್ ಬಾಗ್

ಸ್ಥಳೀಯ ಹಿಂದೂ ದೇವತೆಯಾದ ಮಂಗಳಾದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ. ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯವಾಗಿ ಇದನ್ನು ಕುಡ್ಲ ಎಂದು ಕರೆಯುತ್ತಾರೆ.

ಟ್ರಾವಲ್ ಗುರುನಿಂದ ಹೋಟೆಲ್ ಬುಕ್ಕಿಂಗ್ ಮೇಲೆ ಅದ್ಭುತ ಉಳಿತಾಯಗಳು : 40% ಗಳಷ್ಟು ಕಡಿತ

ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ ಸ್ಲೈಡುಗಳಲ್ಲಿ ಮಂಗಳೂರನ್ನು ನೋಡುತ್ತ ಅದರ ಕುರಿತು ಸಂಕ್ಷೀಪ್ತವಾಗಿ ತಿಳಿಯೋಣ.

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಪ್ರವಾಸಿ ದೃಷ್ಟಿಯಿಂದಲೂ ಸಹ ಮಂಗಳೂರು ನಗರ ತನ್ನೊಳಗೆ ಹಾಗು ಹತ್ತಿರದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ನಿಸರ್ಗ ಸಿರಿಯ ಸೊಬಗನ್ನು ಹೊತ್ತಿರುವ ತಾಣದಿಂದ ಹಿಡಿದು ಸುಂದರ ಕಡಲ ತೀರಗಳವರೆಗೆ ಹಲವು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು. ಎಲೆ ಮರೆಯ ಕಾಯಿಯಂತೆ, ಪಶ್ಚಿಮ ಘಟ್ಟಗಳ ದಟ್ಟ ಹಸಿರಿನ ಜಾಡಿನಲ್ಲಿ ನವ ನವೀನವಾಗಿ ಕಂಗೊಳಿಸುತ್ತದೆ ಮಂಗಳೂರು.

ಚಿತ್ರಕೃಪೆ: Ananth BS

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮಂಗಳೂರು ಬಳಿಯಿರುವ ವಮಂಜೂರು ಎಂಬಲ್ಲಿದೆ ಪ್ರಾಕೃತಿಕ ಸಿರಿಯಿಂದ ಸಂಪದ್ಭರಿತವಾದ ಈ ನಿಸರ್ಗಧಾಮ. ತುಳು ಭಾಷೆಯಲ್ಲಿ ಪಿಲಿ ಎಂದರೆ ಹುಲಿ ಹಾಗು ಕುಳ ಎಂದರೆ ಕೆರೆ ಎಂದಾಗುತ್ತದೆ. ಒಂದೊಮ್ಮೆ ಹುಲಿಗಳು ಇಲ್ಲಿ ನೀರನ್ನು ಕುಡಿಯಲು ಬರುತ್ತಿದ್ದುದರಿಂದ ಇದಕ್ಕೆ ಪಿಲಿಕುಳ ಎಂದು ಕರೆಯಲಾಗಿದೆ. ಮಂಗಳೂರು ನಗರ ಸಭೆಯು ಈ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿರುವುದರಿಂದ ಪ್ರಸ್ತುತ ನಗರವಾಸಿಗಳಿಗೆ ಇದೊಂದು ಅನನ್ಯ ವರದಾನವಾಗಿ ಲಭಿಸಿದೆ. ಪಿಕ್ನಿಕ್ ಗಳಿಗಂತೂ ಇದು ಹೇಳಿ ಮಾಡಿಸಿದ ತಾಣವಾಗಿದೆ.

ಚಿತ್ರಕೃಪೆ: kamath_ln

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಪಣಂಬೂರು ಕಡಲ ತೀರ: ಪಣಂಬೂರು ಮಂಗಳೂರಿನ ಹೊಸ ಬಂದರು ಪ್ರದೇಶವಾಗಿದೆ. ಇಲ್ಲಿ ಕಂಡುಬರುವ ಕಡಲ ತೀರವು ತನ್ನದೆ ಆದ ವೈಶೀಷ್ಟ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Karunakar Rayker

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಸೇಂಟ್ ಮೇರೀಸ್ ಐಲ್ಯಾಂಡ್ಸ್: ಮಂಗಳೂರು ನಗರದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಉಡುಪಿಯ ಮಲ್ಪೆ ಕಡಲ ತೀರದ ಬಳಿಯಲ್ಲಿದೆ ಈ ಪುಟ್ಟ ನಾಲ್ಕು ದ್ವೀಪ ಸಮೂಹಗಳು. ಇದೊಂದು ಗಮ್ಯ ಪ್ರವಾಸಿ ಆಕರ್ಷಣೆಯಾಗಿದೆ. ಲಾವಾ ರಸದಿಂದ ರೂಪಗೊಂಡ ವಿಶೀಷ್ಟ ಬಗೆಯ ಶಿಲಾ ರಚನೆಗಳಿಂದ ಆಕರ್ಷಿಸುತ್ತದೆ.

ಚಿತ್ರಕೃಪೆ: Travel & Shit

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಸುರತ್ಕಲ್ ಬೀಚ್: ಸುರತ್ಕಲ್ ಮಂಗಳೂರು ನಗರದ ಉಪನಗರವಾಗಿದೆ. ಲೈಟ್ ಹೌಸ್ ಹೊಂದಿರುವ ಇಲ್ಲಿನ ಕಡಲ ತೀರವು ನೋಡಲು ಸುಂದರವಾಗಿ ಗೋಚರಿಸುತ್ತದೆ. ಮಂಗಳೂರಿಗೆ ಬರುವ ಹಲವು ಪ್ರವಾಸಿಗರು ಈ ಕಡಲ ತೀರಕ್ಕೂ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Gopal Venkatesan

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ತಣ್ಣೀರುಬಾವಿ ಕಡಲ ತೀರ: ಮಂಗಳೂರಿನ ಮತ್ತೊಂದು ಪ್ರಮುಖ ಆಕರ್ಷಣೆ ತಣ್ಣೀರುಬಾವಿ ಕಡಲ ತೀರ. ಈ ತಾಣವು ಸುಂದರವಾದ ಸೂರ್ಯಾಸ್ತದ ನೋಟ ಕರುಣಿಸುವುದಕ್ಕೆ ಹೆಸರುವಾಸಿಯಾಗಿದೆ. ಇದನ್ನು ಪಣಂಬೂರಿನಿಂದ ಅಥವಾ ಫೆರ್‍ರಿಯ ಸಹಾಯದಿಂದ ಸುಲ್ತಾನ್ ಬತೇರಿ ಬಳಿಯ ಗುರುಪುರ ನದಿಯ ಮೂಲಕ ಇಲ್ಲಿಗೆ ತಲುಪಬಹುದು.

ಚಿತ್ರಕೃಪೆ: Manoj Vasanth

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಸುಲ್ತಾನ್ ಬತೇರಿ: ನಗರ ಪ್ರದೇಶದಿಂದ ಐದು ಕಿ.ಮೀ ದೂರದಲ್ಲಿರುವ ಸುಲ್ತಾನ್ ಬತೇರಿಯು ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. 1784 ರಲ್ಲಿ ಟಿಪ್ಪು ಸುಲ್ತಾನನಿಂದ ನಿರ್ಮಿಸಲಾದ ಈ ಚಿಕ್ಕ ರಚನೆಯು ಒಂದು ವೀಕ್ಷಣಾಲಯವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈ ತಾಣದ ಬಳಿ ಕಡಲ ತೀರವೂ ಇರುವುದರಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Premkudva

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಉಲ್ಲಾಳ ಬೀಚ್: ಮಂಗಳೂರು ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಉಲ್ಲಾಳ ಪಟ್ಟಣವು ತನ್ನಲ್ಲಿರುವ ಕಡಲ ತೀರದಿಂದಾಗಿ ಗಮ್ಯ ಪ್ರವಾಸಿ ಆಕರ್ಷಣೆಯಾಗಿ ಹೆಸರುವಾಸಿಯಾಗಿದೆ. ನೇತ್ರಾವತಿ ನ್ದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯು ಸೂರ್ಯಾಸ್ತದ ವಿಹಂಗಮ ನೋಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Karunakar Rayker

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಪೊಳಲಿ ರಾಜರಾಜೇಶ್ವರಿ ದೇವಾಲಯ: ಶಕ್ತಿಯ ಸ್ವರೂಪಳಾದ ರಾಜರಾಜೇಶ್ವರಿ ದೇವಿಯ ದೇವಸ್ಥಾನದಿಂದಾಗಿ ಪೊಳಲಿಯು ಪ್ರಸಿದ್ಧವಾಗಿದೆ. ಇದು ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಸೂರತ ಎಂಬುವ ರಾಜನಿಂದ ಸುಮಾರು 8 ನೆಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ. ವಾರ್ಷಿಕವಾಗಿ ಹಲವು ಉತ್ಸವಗಳನ್ನು ಈ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತದೆ. ಅವುಗಳಲ್ಲಿ ಪೊಳಲಿ ಚೆಂಡು ಉತ್ಸವವು ಅತ್ಯಂತ ಪ್ರಮುಖವಾಗಿದೆ.

ಚಿತ್ರಕೃಪೆ: Surajt88

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕದ್ರಿ ಪಾರ್ಕ್: ಮಂಗಳೂರು ನಗರ ಮಿತಿಯಲ್ಲಿರುವ ಅತಿ ದೊಡ್ಡ ಉದ್ಯಾನ ಇದಾಗಿದೆ. ನಗರದಿಂದ ಐದು ಕಿ.ಮೀ ದೂರದಲ್ಲಿರುವ ಈ ಪಾರ್ಕ್ ಎ.ಐ.ಆರ್ ಸ್ಟುಡಿಯೊ ಬಳಿಯಲ್ಲಿದೆ. ಎಲ್ಲ ವಯಸ್ಕರೂ ಕೂಡ ವಿರಾಮದ ವೇಳೆಯನ್ನು ಹಾಯಾಗಿ ಕಳೆಯಲು ಆದರ್ಶಪ್ರಾಯವಾದ ಈ ಉದ್ಯಾನ ಪಿಕ್ನಿಕ್ ಗಳಿಗೆ ಹೇಳಿಮಾಡಿಸಿದಂತಿದೆ.

ಚಿತ್ರಕೃಪೆ: Premkudva

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮಂಗಳಾದೇವಿ ದೇವಾಲಯ: ಮಂಗಳೂರಿನ ಬೋಲಾರಾ ಪ್ರದೇಶದಲ್ಲಿ ಒಂಭತ್ತನೆಯ ಶತಮಾನದ ಈ ಪುರಾತನ ದೇವಾಲಯವಿದೆ. ಈ ದೇವಿಯಿಂದಲೆ ನಗರಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಕನ್ಯಾಮಣಿಗಳು ಭಕ್ತಿಯಿಂದ ಈ ದೇವಿಯನ್ನು ಬೇಡಿ, ವೃತವನ್ನು ಆಚರಿಸಿದರೆ ತಾವು ಅಪೇಕ್ಷಿಸಿದಂತಹ ಪತಿಯು ದೊರಕುತ್ತಾನೆ ಎಂಬ ನಂಬಿಕೆಯಿದೆ. ಮಂಗಳೂರಿನಲ್ಲಿದ್ದಾಗ ಭೇಟಿ ನೀಡಲೇಬೇಕಾದ ದೇವಸ್ಥಾನ ಇದಾಗಿದೆ.

ಚಿತ್ರಕೃಪೆ: wikimedia

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ: ಮಂಗಳೂರಿನ ಕುದ್ರೋಳಿ ಎಂಬಲ್ಲಿ ಶಿವನ ಅವತಾರ ಗೋಕರ್ಣನಾಥೇಶ್ವರನ ಈ ದೇವಾಲಯವಿದೆ. ನಾರಾಯಣ ಗುರು ಎಂಬ ಪೂಜ್ಯರು ತಮ್ಮೊಡಿಗೆ ತಂದಿದ್ದ ಶಿವಲಿಂಗವೊಂದನ್ನು ಫೆಬ್ರುವರಿ 1912 ರಲ್ಲಿ ಇಲ್ಲಿ ಪ್ರತಿಷ್ಠಾಪಿಸಿ ಈ ಕ್ಷೇತ್ರವನ್ನು ಪಾವನಗೊಳಿಸಿದರು. ನಗರದಲ್ಲಿ ಇದೊಂದು ಸುಂದರ ದೇವಾಲಯವಾಗಿದ್ದು ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Karunakar Rayker

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕದ್ರಿ ಮಂಜುನಾಥ ದೇವಾಲಯ: ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯವು ರೋಚಕವಾದ ಹಿನ್ನಿಲೆಯನ್ನು ಹೊಂದಿದೆ. ವಜ್ರಾಯಣ ಬುದ್ಧನಿಂದ ನಿರ್ಮಿಸಲ್ಪಟ್ಟ ಈ ದೇವಸ್ಥಾನವು ಕ್ರಮೇಣ ಬೌದ್ಧ ಧರ್ಮದ ಪ್ರಭಾವ ಕ್ಷಿಣಿಸಿದ ನಂತರ ಹಿಂದು ದೇವಾಲಯವಾಗಿ ಪರಿವರ್ತಿತವಾಯಿತು. ವಜ್ರಾಯಣನ ಕಾಲದಲ್ಲಿ ಕದ್ರಿ ಎಂಬುದು ಬೌದ್ಧ ವಿಹಾರವಾಗಿದ್ದುದರಿಂದ ಈ ದೇವಸ್ಥಾನಕ್ಕೆ ಕದ್ರಿ ಎಂಬ ಹೆಸರು ಸೇರ್ಪಡೆಗೊಂಡಿತೆನ್ನಲಾಗಿದೆ. ಮುಖ್ಯ ದೇಗುಲದ ಪಶ್ಚಿಮಕ್ಕೆ ದುರ್ಗೆಯ ಹಾಗು ಉತ್ತರಕ್ಕೆ ಗಣಪತಿಯ ದೇವಾಲಯಗಳಿವೆ. ದೇವಾಲಯದ ಹಿಂಭಾಗದಲ್ಲಿ ನೀರಿನ ಚಿಲುಮೆಯೊಂದಿದ್ದು ಪಕ್ಕದಲ್ಲೆ ಇರುವ ವಿವಿಧ ಆಕಾರಗಳ ತೊಟ್ಟಿಗಳಲ್ಲಿ ಈ ನೀರು ಹರಿಯುತ್ತದೆ. ದೇವಾಲಯಕ್ಕೆ ಭೇಟಿ ನೀಡುವವರು ಮೊದಲಿಗೆ ಈ ತೊಟ್ಟಿಯ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವಸ್ಥಾನದೊಳಗೆ ಪ್ರವೇಶಿಸುತ್ತಾರೆ.

ಚಿತ್ರಕೃಪೆ: Vaikoovery

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಸೋಮೇಶ್ವರ ಕಡಲ ತೀರ : ಮಂಗಳೂರಿನಿಂದ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಕಿ.ಮೀ. ದೂರದಲ್ಲಿದೆ ಸೋಮೇಶ್ವರ ಕಡಲ ತೀರ. ತುದಿಗಾಣದ ಮರಳಿನ ತೀರ ಪ್ರದೇಶವನ್ನು ಇದು ಹೊಂದಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ತೀರವೇ ಕಾಣುತ್ತದೆ. ಇದಕ್ಕೆ ಒಂದಂಚಿನಲ್ಲಿ ಸಾಲಾಗಿ ಪಾಮ್‌ ಮರಗಳನ್ನು ಬೆಳೆಸಲಾಗಿದೆ. ಈ ಕಡಲ ತೀರ ರುದ್ರ ಶಿವ ಎಂಬ ಹೆಸರಿನಿಂದ ಅತ್ಯಂತ ಪ್ರಸಿದ್ಧಿ ಪಡೆದಿದೆ. ಏಕೆಂದರೆ ಈ ಹೆಸರಿನಲ್ಲಿ ಇಲ್ಲೊಂದು ಬೃಹತ್‌ ಬಂಡೆ ಇದೆ. ಇಲ್ಲೊಂದು ದೇವಾಲಯವೂ ಇದ್ದು ಅದನ್ನು ಅಬ್ಬಕ್ಕ ದೇವಿ ಆಳ್ವಿಕೆ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ಅರೇಬಿಯನ್‌ ಸಮುದ್ರದ ವಿಹಂಗಮ ನೋಟವನ್ನು ಇಲ್ಲಿ ಸವಿಯಬಹುದು ಹಾಗೂ ಈ ಕಡಲ ತೀರವು ಛಾಯಾಚಿತ್ರಕ್ಕೆ ಜನಪ್ರಿಯವಾಗಿದೆ.

ಚಿತ್ರಕೃಪೆ: Niyant Dalal

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕಟೀಲು : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯವು ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ. ಇಲ್ಲಿನ ವಿಶೇಷ ಉತ್ಸವಗಳಲ್ಲಿ ಏಪ್ರಿಲ್ ತಿಂಗಳಿನಲ್ಲಿ ಆಚರಿಸಲ್ಪಡುವ ಮೇಷ ಸಂಕ್ರಮಣ, ನವರಾತ್ರಿ ಆಚರಣೆಗಳು, ನಂದಿನಿ ನದಿಯ ಜನ್ಮ ಪೂರಕವಾಗಿ ಆಚರಿಸುವ ಮಹಾ ಶುದ್ಧ ಪೂರ್ಣಿಮೆ, ಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ, ಕದಿರುಹಬ್ಬ ಮತ್ತು ಲಕ್ಷ ದೀಪೋತ್ಸವವನ್ನು ಒಳಗೊಂಡಿವೆ. ಮಂಗಳೂರಿನಿಂದ 29 ಕಿ.ಮೀ. ದೂರದಲ್ಲಿದ್ದು ಎನ್‌ಎಚ್ 18 ಮತ್ತು ಎನ್‌ಎಚ್ 48, ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸರ್ಕಾರಿ ಹಾಗೂ ಖಾಸಗಿ ಬಸ್ಸ್ ಸೇವೆಗಳನ್ನು ಬಳಸಿ ಈ ಕ್ಷೇತ್ರಕ್ಕೆ ತಲುಪಬಹುದು.

ಚಿತ್ರಕೃಪೆ: Gopal Venkatesan

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಉಡುಪಿ : ಅತ್ಯಾಕರ್ಷಕ ಧಾರ್ಮಿಕ ಹಾಗೂ ಮನರಂಜನೆಯ ಪ್ರವಾಸಿ ಆಕರ್ಷಣೆಗಳುಳ್ಳ ಜಿಲ್ಲೆ ಉಡುಪಿಯು ಮಂಗಳೂರಿನಿಂದ ಕೇವಲ 62 ಕಿ.ಮೀ ದೂರದಲ್ಲಿದೆ. ಕೃಷ್ಣನ ದೇಗುಲದಿಂದಾಗಿ ಈ ಪ್ರದೇಶ ತುಂಬಾ ಪ್ರಸಿದ್ಧವಾಗಿದೆ. ವರ್ಷಪೂರ್ತಿ ಉಡುಪಿ ಶ್ರೀಕೃಷ್ಣ ದೇಗುಲಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಉಡುಪಿಯ ಪ್ರವಾಸಿ ಆಕರ್ಷಣೆಗಳು

ಚಿತ್ರಕೃಪೆ: vivek raj

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳ ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣ. ಗೊಮ್ಮಟೇಶ್ವರನಿರುವ ಬೆಟ್ಟವೆಂದರೆ ಎಲ್ಲರಿಗೂ ಬೇಗನೇ ನೆನಪಿಗೆ ಬರಬಹುದು. 10ನೇ ಶತಮಾನದಿಂದಲೇ ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರ್ಕಳ ಪಟ್ಟಣವು ಇಲ್ಲಿರುವ ಜೈನ್ ಪ್ರತಿಮೆಗಳು ಮತ್ತು ವಿವಿಧ ದೇವಸ್ಥಾನಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ. ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಪ್ರತಿಮೆ ಬಾಹುಬಾಲಿಯ ಎದುರಿಗಿರುವ ಬ್ರಹ್ಮದೇವ ಕಂಬವು ವಿಶಿಷ್ಟವಾಗಿ ನಿರ್ಮಿಸಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಕಾರ್ಕಳವು ಮಂಗಳೂರಿನಿಂದ ಕೇವಲ 52 ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Arun Keerthi K. Barboza

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮೂಡಬಿದಿರೆ : 10ನೇ ಶತಮಾನಗಳಲ್ಲಿನ ಜೈನ ದೇವಾಲಯಗಳಿಗೆಂದೇ ಪ್ರಸಿದ್ಧಿ ಹೊಂದಿರುವ ಮೂಡಬಿದಿರೆ ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿರುವ ಹೊಳಪುಳ್ಳ ಗ್ರಾನೈಟ್ ಬಳಸಿ ನಿರ್ಮಿಸಿರುವ ಚಂದ್ರನಾಥ ದೇವಾಲಯವು ಅತ್ಯಾಕರ್ಷಕವಾಗಿದೆ. ವಿಶಿಷ್ಟ ಕೆತ್ತನೆಗಳಿಂದ ಕಂಗೊಳಿಸುರವ 1000 ಕಂಬಗಳು ಈ ದೇವಾಲಯದಲ್ಲಿರುವುದು ವಿಶೇಷ. 7ನೇ ಶತಮಾನದ ಕಾಂತಾವಾರ ದೇವಸ್ಥಾನ, 9ನೇ ಶತಮಾನದ ಗೌರಿ ದೇವಸ್ಥಾನ ಇವು ಕೂಡ ಹಿಂದೂಗಳ ತೀರ್ಥಸ್ಥಳಗಳೆಂದೇ ಪ್ರಸಿದ್ಧಿಯಾಗಿವೆ. ಮಂಗಳೂರಿನಿಂದ ಕೇವಲ 32 ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ. ಸಾವಿರ ಕಂಬದ ದೇವಾಲಯ.

ಚಿತ್ರಕೃಪೆ: Riju K

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮುರುಡೇಶ್ವರ : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ಕ್ಷೇತ್ರ. ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ನೆಲೆಸಿರುವ ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರವು ವಿಶೇಷವಾಗಿ ತನ್ನಲ್ಲಿರುವ ಅತಿ ಎತ್ತರದ ದೇವಾಲಯ ಗೋಪುರ ಹಾಗೂ ಅತಿ ಎತ್ತರದ ಶಿವನ ಪ್ರತಿಮೆಗಳಿಂದಾಗಿ ಜನರ ಮನ್ನಣೆ ಗಳಿಸಿದೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಭವ್ಯ ರಚನೆಗಳನ್ನು ದರ್ಶಿಸುವ ಉದ್ದೇಶದಿಂದ ಮುರುಡೇಶ್ವರಕ್ಕೆ ಆಗಮಿಸುತ್ತಲೆ ಇರುತ್ತಾರೆ. ಅಲ್ಲದೆ ಮುರುಡೇಶ್ವರ ಕಡಲ ತೀರವೂ ಸಹ ಒಂದು ಪ್ರವಾಸಿ ಆಕರ್ಷಣೆಯಾಗಿದ್ದು ಜನರನ್ನು ಚುಂಬಕದಂತೆ ಸೆಳೆಯುತ್ತದೆ. ಮಂಗಳೂರಿನಿಂದ ಮುರುಡೇಶ್ವರವು 157 ಕಿ.ಮೀ ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Jim McDougall

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮಡಿಕೇರಿ : ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಮಂಗಳೂರಿನಿಂದ ಕೇವಲ 138 ಕಿ.ಮೀ ಗಳಷ್ಟು ದೂರವಿದ್ದು, ಸುಲಭವಾಗಿ ತಲುಪಬಹುದಾಗಿದೆ. ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಓಂಕಾರೇಶ್ವರ ದೇವಸ್ಥಾನ, ರಾಜಾ ಸೀಟ್, ಅಬ್ಬಿ ಜಲಪಾತ, ಮಡಿಕೇರಿ ಕೋಟೆ ಮುಂತಾದ ಪ್ರಮುಖ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಒಟ್ಟಾರೆ ಮಡಿಕೇರಿ ಒಂದು ಸುಂದರ ಗಿರಿಧಾಮವಾಗಿದ್ದು, ರೋಮಾಂಚನಗೊಳಿಸುವ ಇಬ್ಬನಿಭರಿತ ಇಲ್ಲಿನ ವಾತಾವರಣವು ನವದಂಪತಿಗಳ ಹೃದಯದಲ್ಲಿ ಕಿಚ್ಚು ಹಚ್ಚದೆ ಇರಲಾರದು.

ಚಿತ್ರಕೃಪೆ: fozylet

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕುಮಾರ ಪರ್ವತ : ಪುಷ್ಪಗಿರಿ ಎಂತಲೂ ಕರೆಯಲ್ಪಡುವ ಕುಮಾರಪರ್ವತವು ಮಳೆಗಾಲದಲ್ಲಿ ಸಾಕ್ಷಾತ್ ಧರೆಗಿಳಿದ ಸ್ವರ್ಗದಂತೆಯೆ ಗೋಚರಿಸುತ್ತದೆ. ಚಿಮು ಚಿಮು ಮಳೆ, ಶುಭ್ರ ಹಸಿರು, ಕಣ್ಣು ಮಂಜಾಯಿತೆನೊ ಅನ್ನುವಷ್ಟು ಮಂಜು ಮುಸುಕಿದ ವಾತಾವರಣ, ಅಲ್ಲಲ್ಲಿ ಹರಿಯುವ ಸಣ್ಣ ಪುಟ್ಟ ಕೆರೆ ತೊರೆಗಳು, ಜಲಪಾತಗಳು ಇವೆಲ್ಲವೂ ನಿಮ್ಮನ್ನು ಒಂದು ಬೇರೆಯದೆ ಲೋಕಕ್ಕೆ ಕರೆತಂದಂತೆ ಮಾಡುತ್ತವೆ. ಮಳೆಗಾಲದ ಸಂದರ್ಭದಲ್ಲಿ ಕುಮಾರಪರ್ವತದ ಟ್ರೆಕ್ಕಿಂಗ್ ಉತ್ಕೃಷ್ಟಮಟ್ಟದ ಅನುಭವ ನೀಡುತ್ತದೆ. ಸಾಹಸಪ್ರಿಯ ಯಾವ ಪ್ರವಾಸಿಗನೆ ಆಗಲಿ ಇಂತಹ ಟ್ರೆಕ್ಕಿಂಗ್ ಆನು ಎಂದೂ ಮರೆಯಲಾರ. ಕಾಡಿನ ಮಧ್ಯದಿಂದ ಸಾಗುತ್ತ, ವೈವಿಧ್ಯಮಯ ಕೀಟ ಲೋಕ ಹಾಗೂ ಸಸ್ಯ ಸಂಪತ್ತನ್ನು ಆಸ್ವಾದಿಸುತ್ತ ಟ್ರೆಕ್ ಮಾಡುವುದೆ ಒಂದು ಚೆಂದದ ಅನುಭವ. ಮಂಗಳೂರಿನಿಂದ 152 ಕಿ.ಮೀ ದೂರವಿದ್ದು ಕುಕ್ಕೆ ಬಳಿ ಇದು ನೆಲೆಸಿದೆ.

ಚಿತ್ರಕೃಪೆ: Vivekvaibhavroy

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕುಕ್ಕೆ ಸುಬ್ರಹ್ಮಣ್ಯ : ಸರ್ಪ ದೋಷ ನಿವಾರಣೆಗೆ ಅತಿ ಪ್ರಮುಖ ಸ್ಥಳವಾಗಿ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಕುಕ್ಕೆಯು ದೇಶದಲ್ಲೆ ಅತಿ ಜನಪ್ರಿಯ ಹಾಗೂ ಹೆಸರುವಾಸಿಯಾದಂತಹ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ. ಸಾಕ್ಷಾತ್ ಸುಬ್ರಹ್ಮಣ್ಯನೆ ಇಲ್ಲಿ ನೆಲೆಸಿರುವುದರಿಂದ ಈ ಸ್ಥಳವನ್ನು ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರಿನ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ. ಮಂಗಳೂರಿನಿಂದ 147 ಕಿ.ಮೀ ಗಳಷ್ಟು ದೂರದಲ್ಲಿ ಈ ಕ್ಷೇತ್ರವಿದೆ.

ಚಿತ್ರಕೃಪೆ: karthick siva

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ. ಬೆಂಗಳೂರು ಹಾಗೂ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಲು ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಇದಕ್ಕೆ ಹತ್ತಿರದಲ್ಲಿರುವ ಪ್ರಮುಖ ರೈಲು ನಿಲ್ದಾಣ ಮಂಗಳೂರು. ಧರ್ಮಸ್ಥಳವು ಬೆಂಗಳೂರಿನಿಂದ 298 ಕಿ.ಮೀ ಹಾಗೂ ಮಂಗಳೂರಿನಿಂದ 75 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Naveenbm

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಕೊಲ್ಲೂರು : ದೇಶದ ಎಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ತನ್ನತ್ತ ವಿಶೇಷವಾಗಿ ಆಕರ್ಷಿಸುತ್ತಿರುವ ಕೊಲ್ಲೂರು ಕರ್ನಾಟಕದಲ್ಲಿನ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ. ಕೊಲ್ಲೂರು ನಿರಂತರವಾಗಿ ಹರಿಯುತ್ತಿರುವ ಸೌಪರ್ಣಿಕ ನದಿಯ ದಂಡೆಯಲ್ಲಿ ಪಶ್ಚಿಮ ಘಟ್ಟಗಳ ನಯನ ಮನೋಹರವಾದ ಪ್ರಾಕೃತಿಕ ಹಿನ್ನೆಲೆಯ ನಡುವೆ ನೆಲೆಸಿದೆ. ಈ ಪ್ರಾಕೃತಿಕ ಐಸಿರಿಯು ಇಲ್ಲಿನ ಪ್ರಸಿದ್ಧ ಕ್ಷೇತ್ರದ ಸುತ್ತಲ ಪರಿಸರದ ಸೊಬಗನ್ನು ಹೆಚ್ಚಿಸಿದೆ. ಈ ಕ್ಷೇತ್ರ ಪರಶುರಾಮನಿಂದ ನಿರ್ಮಿತವಾದುದೆಂದು ನಂಬಲಾದ ಮೂಕಾಂಬಿಕ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಕೊಲ್ಲೂರು ಮಂಗಳೂರಿನಿಂದ 129 ಕಿ.ಮೀ ಹಾಗೂ ಉಡುಪಿಯಿಂದ 90 ಕಿ.ಮೀ ದೂರವಿದೆ.

ಚಿತ್ರಕೃಪೆ: syam

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಬೇಕಲ್ ಕೋಟೆ : ಬೆಕಲ್ ಕೋಟೆಯು ಕೇರಳದಲ್ಲಿಯೇ ಅತ್ಯಂತ ದೊಡ್ಡ ಕೋಟೆಯಾಗಿದ್ದು 40 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಈ ಕೋಟೆಯ ಪ್ರಮುಖ ಗುರುತುಗಳೆಂದರೆ, ದಕ್ಷಿಣದಲ್ಲಿನ ಸುರಂಗ, ಸೈನಿಕರಿಗಾಗಿ ಆಹಾರ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಡುವುದಕ್ಕಾಗಿ ವಿಶಾಲವಾದ ಕೋಣೆ/ಸ್ಥಳ ಹಾಗೂ ಶತ್ರುಗಳ ಬರುವಿಕೆಯನ್ನು ಕಂಡುಹಿಡಿಯಲು ಅತ್ಯಂತ ಎತ್ತರದಲ್ಲಿ ಕಟ್ಟಲಾದ ದಿಕ್ಸೂಚಿಯಂತಹ ಟವರ್. ನಿಮ್ಮ ರಜಾ ದಿನಗಳನ್ನು ನೆನಪಿಸಿಕೊಳ್ಳುವಂತಹ ಉತ್ತಮ ಪ್ರವಾಸದಲ್ಲಿ ಕಳೆಯಬೇಕೆಂದಿದ್ದರೆ ಬೆಕಲ್ ಕೋಟೆಗೊಮ್ಮೆ ಭೇಟಿ ನೀಡಿ. ಕೇರಳದಲ್ಲಿದ್ದರೂ ಸಹ ಇದು ಮಂಗಳೂರಿನಿಂದ ಕೇವಲ 68 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ashwin Kumar

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಶೃಂಗೇರಿ : ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ದಿವ್ಯ ಕ್ಷೇತ್ರ. ಸುಮಾರು 8 ನೇಯ ಶತಮಾನದಲ್ಲಿ ಜೀವಿಸಿದ್ದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಶ್ರೀಕ್ಷೇತ್ರವೆ ಶೃಂಗೇರಿ. ಶೃಂಗೇರಿಯು ಧಾರ್ಮಿಕ ದೃಷ್ಟಿಯಿಂದ ಭವ್ಯವಾದ ಪ್ರವಾಸಿ ಪಟ್ಟಣವಾಗಿದ್ದು, ಇದರ ಸುತ್ತಮುತ್ತಲು ಹಲವು ಇತರೆ ಧಾರ್ಮಿಕ ಪ್ರವಾಸಿ ಕ್ಷೇತ್ರಗಳನ್ನೂ ಸಹ ಕಾಣಬಹುದಾಗಿದೆ. ಮಂಗಳೂರಿನಿಂದ ಶೃಂಗೇರಿಯು ಸುಮಾರು 106 ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Calvinkrishy

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮರವಂತೆ : ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳಿಯಿರುವ ಮರವಂತೆ ಎಂಬ ಹಳ್ಳಿಯು ತನ್ನ ಅತಿ ಮಧುರವಾದ ಹಾಗೂ ಅಷ್ಟೆ ಸುಂದರವಾದ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ. ಈ ಕಡಲ ತೀರ ಎಷ್ಟೊಂದು ಸುಂದರವಾಗಿದೆ ಎಂದರೆ ಔಟ್ ಲುಕ್ ಎಂಬ ಪ್ರವಾಸಿ ನಿಯತಕಾಲಿಕೆಯು ಇದನ್ನು ಕರ್ನಾಟಕದಲ್ಲಿರುವ ಅತಿ ಸುಂದರ ಕಡಲ ತೀರಗಳ ಪಟ್ಟಿಯಲ್ಲಿ ಒಂದೆಂದು ಹೆಸರಿಸಿದೆ. ಉಡುಪಿಯಿಂದ 55 ಕಿ.ಮೀ ಹಾಗೂ ಮಂಗಳೂರಿನಿಂದ 106 ಕಿ.ಮೀ ಗಳಷ್ಟು ದೂರವಿರುವ ಈ ಕರಾವಳಿ ಹಳ್ಳಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಮೂಲಕ ತಲುಪಬಹುದಾಗಿದೆ. ವಿಶೇಷವೆಂರೆ ಈ ಹೆದ್ದಾರಿಯ ಒಂದು ಬದಿ ಸಮುದ್ರವಿದ್ದರೆ ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿ ಹರಿದಿದೆ. ಈ ರೀತಿಯ ದೃಶ್ಯವು ತನ್ನಲ್ಲೆ ತಾನೆ ವಿಶಿಷ್ಟವಾಗಿದ್ದು ಕಾಣ ಸಿಗುವುದು ಬಹು ಅಪರೂಪ ಎಂತಲೆ ಹೇಳಬಹುದು.

ಚಿತ್ರಕೃಪೆ: Riju K

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ವೇಣೂರು : ವೇಣೂರು ಜೈನ ಸಮುದಾಯದ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಗುರಪುರ ನದಿ ದಂಡೆಯ ಮೇಲಿರುವ ಈ ಚಿಕ್ಕ ಪಟ್ಟಣವು ಈ ದಿನಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿ ಇಲ್ಲದೆ ಹೊದರೂ ಇತಿಹಾಸದ ಪ್ರಕಾರ ಇದೊಂದು ಪ್ರಗತಿಪರ ನಗರವಾಗಿದ್ದು ಅಜಿಲ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿತ್ತು. ಆದುದರಿಂದ ಇದು ಧಾರ್ಮಿಕ ಹಾಗು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪಟ್ಟಣದ ಪ್ರಮುಖ ಆಕರ್ಷಣೆ ಎಂದರೆ 35 ಅಡಿ ಎತ್ತರದ ಭಗವಾನ್ ಗೊಮ್ಮಟೇಶ್ವರನ ಪ್ರತಿಮೆ. ಈ ಪ್ರತಿಮೆಯನ್ನು 1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನು ಪ್ರತಿಷ್ಠಾಪಿಸಿದ್ದು, ಇಡಿ ಕರ್ನಾಟಕದಲ್ಲಿ ಕಾಣಸಿಗುವ ನಾಲ್ಕು ಗೊಮ್ಮಟೇಶ್ವರನ ಏಕಶಿಲಾ ಪ್ರತಿಮೆಗಳಲ್ಲಿ ಇದು ಒಂದಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದು, ಮಂಗಳೂರು, ಉಡುಪಿ ಹಾಗು ರಾಜ್ಯದ ಇತರೆ ಸಾರಿಗೆ ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಮುಲ್ಕಿ : ಶಾಂಭವಿ ನದಿಯ ಹಿನ್ನೀರಿನ ಸುಂದರ ತಟದಲ್ಲಿ ನೆಲೆಸಿರುವ ಮುಲ್ಕಿಯು ಚಿಕ್ಕದಾದರೂ ಧಾರ್ಮಿಕ ದೃಷ್ಟಿಯಿಂದ ಈ ಭಾಗದಲ್ಲಿ ಬಲು ಮಹತ್ವ ಪಡೆದ ತಾಣವಾಗಿದೆ. ಹಿಂದೊಮ್ಮೆ ಮೂಲಿಕಾಪುರವೆಂದು ಕರೆಯಲ್ಪಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಈ ಪುಟ್ಟ ಗ್ರಾಮವು ಆಂಜನೇಯನ ದೇವಸ್ಥಾನ, ದುರ್ಗಾ ಪರಮೇಶ್ವರಿ ದೇವಸ್ಥಾನ, ಹರಿಹರ ದೇವಾಲಯ, ವೆಂಕಟರಮಣ ದೇವಾಲಯ ಮುಂತಾದವುಗಳಿಗೆ ತವರಾಗಿದೆ. ಮುಲ್ಕಿಯು ಮಂಗಳೂರಿನಿಂದ 22 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Arun Keerthi K. Barboza

ಮಂಗಳೂರು ಆಕರ್ಷಣೆಗಳು:

ಮಂಗಳೂರು ಆಕರ್ಷಣೆಗಳು:

ಹೊರನಾಡು : ದೇವತೆ ಅನ್ನಪೂರ್ಣೇಶ್ವರಿಯ ನಿಬ್ಬೆರಗಾಗಿಸುವ ದೇವಾಲಯವು ಹೊರನಾಡಿಗೆ ಸುಪ್ರಸಿದ್ಧ ಖ್ಯಾತಿಯನ್ನು ತಂದುಕೊಟ್ಟಿದೆ. ಜತೆಗೆ ನಿಸರ್ಗದ ವೈವಿಧ್ಯಮಯ ಅಚ್ಚರಿಯನ್ನು ನೋಡಬಯಸುವವರಿಗೆ ಹೊರನಾಡು ಸಾಕೆನ್ನುವಷ್ಟು ಆನಂದವನ್ನು ನೀಡುತ್ತದೆ. ಈ ಹಚ್ಚ ಹಸಿರಿನ ನಗರವು ಚಿಕ್ಕಮಗಳೂರಿನ ದಕ್ಷಿಣಕ್ಕೆ 100 ಕಿ.ಮೀ. ಹಾಗೂ ಮಂಗಳೂರಿನಿಂದ 125 ಕಿ.ಮೀ ಗಳಷ್ಟು ದೂರದಲ್ಲಿರುವ ರಮಣೀಯ ಮಲೆನಾಡಿನ ಪ್ರದೇಶದಲ್ಲಿದೆ. ಈ ಪ್ರದೇಶವು ದಟ್ಟವಾದ ಕಾಡಿನಿಂದ ಸುತ್ತುವರೆದಿರುವ ಪರಿಣಾಮ ಹೊರನಾಡಿನ ಸೌಂದರ್ಯಕ್ಕೆ ಪುಷ್ಟಿ ನೀಡಿದೆ.

ಚಿತ್ರಕೃಪೆ: Gopal Venkatesan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X