Search
  • Follow NativePlanet
Share
» »ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

By Vijay

ಕಾನೂನು ಸಮಸ್ಯೆ, ವ್ಯವಹಾರ ಸಮಸ್ಯೆ ಅಥವಾ ಯಾವುದೆ ಕೌಟುಂಬಿಕ ಸಮಸ್ಯೆಯಿರಲಿ ಈ ಕಾಳಿ ಮಾತೆಯನ್ನು ಅಚಲವಾದ ಭಕ್ತಿ ನಂಬಿಕೆಯಿಂದ ಪೂಜಿಸಿ ಪ್ರಾರ್ಥಿಸಿದರೆ ಪರಿಹಾರ ಶತಸಿದ್ಧ ಎಂದೆ ಈಕೆಗೆ ನಡೆದುಕೊಳ್ಳುವ ಭಕ್ತರ ಬಲವಾದ ನಂಬಿಕೆಯಾಗಿದೆ. ಕಂಕಣ ಹಾಗೂ ಸಂತಾನ ಭಾಗ್ಯಗಳನ್ನು ಕರುಣಿಸುತ್ತಾಳೆಂದು ಹಲವರ ಒಳಿತು ಕಂಡವರ ಅಭಿಪ್ರಾಯವಾಗಿದೆ.

ಸರಸ್ವತಿಯ ಈ ಆಕರ್ಷಕ ದೇವಾಲಯಗಳು ಗೊತ್ತೆ?

ಈ ಕಾಳಿ ಮಾತೆಯನ್ನು ಮಧುರ ಕಾಳಿ ಅಮ್ಮ ಎಂದೆ ಕರೆಯುತ್ತಾರೆ ಹಾಗೂ ಈ ದೇವಿ ನೆಲೆಸಿರುವ ದೇವಾಲಯವನ್ನು ಮಧುರ ಕಾಳಿ ಅಮ್ಮನವರ ದೇವಾಲಯ ಎಂದು ಕರೆಯಲಾಗುತ್ತದೆ. ಸಾವಿರ ವರ್ಷಗಳ ಇತಿಹಾಸವಿರುವ ಈ ಮಧುರ ಕಾಳಿ ಅಮ್ಮನವರ ದೇವಾಲಯವಿರುವುದು ತಮಿಳುನಾಡಿನ ಪೆರಂಬಲೂರು ಜಿಲ್ಲೆಯ ಸಿರುವಚೂರಿನಲ್ಲಿ. ಸಿರುವಚೂರು ಸೇಲಂನಿಂದ 145 ಕಿ.ಮೀ ಗಳಷ್ಟು ದೂರದಲ್ಲಿದೆ.

ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಚಿತ್ರಕೃಪೆ: Dinesh Kumar (DK)

ಕರ್ನಾಟಕದಿಂದ ಈ ದೇವಾಲಯಕ್ಕೆ ಹೋಗಬಯಸುವ ಕಾಳಿ ಮಾತೆಯ ಭಕ್ತಾದಿಗಳು/ಪ್ರವಾಸಿಗರು ಬೆಂಗಳೂರಿನಿಂದ ಇಲ್ಲಿಗೆ ತಲುಪುವುದು ಸುಲಭವಾಗುತ್ತದೆ. ಬೆಂಗಳೂರಿನಿಂದ ಸೇಲಂಗೆ ತೆರಳಿ ಅಲ್ಲಿಂದ 125 ಕಿ.ಮೀ ದೂರವಿರುವ ಪೆರಂಬಲೂರಿಗೆ ತೆರಳಿ ಅಲ್ಲಿಂದ ಒಂಭತ್ತು ಕಿ.ಮೀ ದೂರದ ಸಿರುವಚೂರಿಗೆ ತಲುಪಬಹುದಾಗಿದೆ.

ವಿಶೇಷವೆಂದರೆ, ಈ ದೇವಾಲಯ ಮೂಲತಃ ಚೆಲ್ಲಿಯಮ್ಮನವರ ಸ್ಥಾನವಾಗಿದೆಯಾದರೂ ಇಂದು ಕಾಳಿ ಅಮ್ಮ ನೆಲೆಸಿರುವ ಮುಖ್ಯ ದೇವಾಲಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕುತೂಹಲಕರ ಹಿನ್ನಿಲೆಯೊಂದಿದೆ. ಅದರ ಪ್ರಕಾರ, ಹಿಂದೊಮ್ಮೆ ಈ ಪ್ರಾಂತ್ಯದ ಮುಖ್ಯ ದೇವಿಯಾಗಿ ಚಲ್ಲಿ ಅಮ್ಮ ವಾಸವಾಗಿದ್ದಳು. ಆದರೆ ದುರದೃಷ್ಟವಶಾತ್ ಆ ಪ್ರಾಂತ್ಯಕ್ಕೆ ಅತಿ ಘೋರ ಕ್ರೂರ ಮನಸುಳ್ಳ ಮಾಂತ್ರಿಕನೊಬ್ಬನ ಆಗಮನವಾಯಿತು.

ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಚಿತ್ರಕೃಪೆ: Dinesh Kumar (DK)

ಆತ ಎಷ್ಟು ಬಲಶಾಲಿಗನಾಗಿದ್ದನೆಂದರೆ ತನ್ನ ಮಾಟ, ಮಂತ್ರ ಶಕ್ತಿಗಳ ಪ್ರಭಾವದಿಂದ ಚೆಲ್ಲಿ ಅಮ್ಮನನ್ನು ತನ್ನ ಗುಲಾಮ ಮಾಡಿಕೊಂಡು ತನ್ನ ಕೃರತನದ ಅಟ್ಟಹಾಸ ಮೆರೆಯುತ್ತಿದ್ದ. ಎಲ್ಲರಿಗೂ ಚೆಲ್ಲಿಯಮ್ಮನ ಮೂಲಕ ಕಷ್ಟ-ಕಾರ್ಪಣ್ಯಗಳನ್ನು ಕೊಡುತ್ತಿದ್ದ. ಇದರಿಂದ ಬೇಸರ ಹೊಂದಿದ ಚೆಲ್ಲಿ ಅಮ್ಮ ಏನೂ ಮಾಡಲಾಗದೆ ಅಸಹಾಯಕಳಾಗಿದ್ದಳು.

ಹೀಗಿರುವ ಸಂದರ್ಭದಲ್ಲಿ ಕಾಳಿ ಮಾತೆಯ ಅವತಾರವಾದ ಮಧುರ ಕಾಳಿ ಅಮ್ಮ ಒಂದೊಮ್ಮೆ ಈ ಪ್ರದೇಶದ ಮೂಲಕ ಸಾಗುವಾಗ ಅಲ್ಲಿನ ದೇವಿಯಾದ ಚೆಲ್ಲಿ ಅಮ್ಮನ ಕುರಿತು ಒಂದು ದಿನ ತಂಗಲು ಕೋರಿದಳು. ಇದಕ್ಕೆ ಪ್ರಸನ್ನಳಾದ ಚೆಲ್ಲಿ ಅಮ್ಮ ಅದಕ್ಕೆ ಅನುಮತಿಸಿ ತನ್ನ ಅಸಹಾಯಕ ಸ್ಥಿತಿಯ ಕುರಿತು ಹಾಗೂ ಮಾಂತ್ರಿಕನ ಕುರಿತು ಎಲ್ಲವನ್ನೂ ಕಾಳಿ ಮಾತೆಯ ಮುಂದೆ ತೋಡಿಕೊಂಡಳು.

ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಳಿಮಾತೆ!

ಚಿತ್ರಕೃಪೆ: Dinesh Kumar (DK)

ಮಾಂತ್ರಿಕನ ಮೇಲೆ ಕೋಪಗೊಂಡ ಮಧುರ ಕಾಳಿ ಮಾತೆಯು ಆ ಮಾಂತ್ರಿಕನನ್ನು ಎದುರಿಸಿ ಆತನನ್ನು ಸಂಹರಿಸಿ ಚೆಲ್ಲಿ ಅಮ್ಮನನ್ನು ಅವನ ದಾಸ್ಯತ್ವದಿಂದ ಮುಕ್ತಿಗೊಳಿಸಿದಳು. ಇದರಿಂದ ಸಂತಸಗೊಂಡ ಚೆಲ್ಲಿ ಅಮ್ಮ ತಾನೆ ನೆಲೆಸಿರುವ ಸ್ಥಳದಲ್ಲಿಯೆ ಮಧುರ ಕಾಳಿ ಅಮ್ಮ ನೆಲೆಸಬೇಕೆಂದು ಪ್ರಾರ್ಥಿಸಿ ತಾನು ಈ ದೇವಾಲಯಕ್ಕೆ ಹತ್ತಿರದಲ್ಲಿರುವ ಪೆರಿಯಾಸ್ವಾಮಿಮಲಿ ಎಂಬ ಗುಡ್ಡದಲ್ಲಿ ನೆಲೆಸಿದಳು.

ಮನಸ್ಸಿಗೆ ಶಾಂತಿ-ನೆಮ್ಮದಿ ನೀಡುವ ಸಪ್ತಶೃಂಗಿ ಇವಳು!

ಆದರೆ ಈ ರೀತಿ ನೆಲೆಸುವುದಕ್ಕೂ ಮುಂಚೆ ತನ್ನ ಒಂದು ಕೋರಿಕೆಯನ್ನು ಕಾಳಿ ಮಾತೆಯ ಮುಂದಿಟ್ಟಳು. ಅದರ ಪ್ರಕಾರವಾಗಿ ಮೊದಲು ತನಗೆ ಪೂಜೆಯಾಗಬೇಕೆಂದು ಚೆಲ್ಲಿ ಅಮ್ಮ ಪ್ರಾರ್ಥಿಸಿದ್ದಳು. ಹಾಗಾಗಿ ಇಂದಿಗೂ ಈ ಪದ್ಧತಿ ಈ ದೇವಾಲಯದಲ್ಲಿ ನಡೆದುಕೊಂಡು ಬಂದಿದೆ. ಮಧುರ ಕಾಳಿ ಅಮ್ಮನವರಿಗೆ ಆರತಿ ಬೆಳಗುವುದಕ್ಕೂ ಮುಂಚೆ ಅರ್ಚಕರು ಎದುರು ಬದಿಯ ಗುಡ್ಡದಲ್ಲಿ ನೆಲೆಸಿರುವ ಚೆಲ್ಲಿ ಅಮ್ಮನವರಿಗೆ ಮೊದಲು ಆರತಿ ಬೆಳಗಿ ತದನಂತರ ಮಧುರ ಕಾಳಿ ಅಮ್ಮನವರನ್ನು ಪೂಜಿಸುತ್ತಾರೆ. ಫಂಗುಣಿ ಹಾಗೂ ರಥೋತ್ಸವ ಇಲ್ಲಿ ಆಚರಿಸಲಾಗುವ ಮುಖ್ಯ ಉತ್ಸವಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X