Search
  • Follow NativePlanet
Share
» »ಏನೀದು ಕರಾವಳಿಯ ಕಂಬಳ ಓಟ

ಏನೀದು ಕರಾವಳಿಯ ಕಂಬಳ ಓಟ

ಕರ್ನಾಟಕದ ಕರಾವಳಿ ಭಾಗದಲ್ಲಿ ಆಯೋಜಿಸಲ್ಪಡುವ ಕಂಬಳ ಜಾನಪದ ಕ್ರೀಡೆಯಾಗಿದ್ದು ನವಂಬರ್ ತಿಂಗಳಿನಿಂದ ಪ್ರಾರಂಭವಾಗಿ ಮಾರ್ಚ್ ವರೆಗೂ ಕರಾವಳಿ ಕರ್ನಾಟಕದ ವಿವಿಧ ಭಾಗಗಳಲ್ಲಿ ನಿಗದಿಪಡಿಸಲಾದ ದಿನಗಳಂದು ನಡೆಯುತ್ತದೆ

By Vijay

ಇಂದು ಆಧುನಿಕ ನಗರದಲ್ಲಿರುವ ಮನುಷ್ಯನಿಗೆ ಮನರಂಜನೆಗೇನೂ ಕೊರತೆಯಿಲ್ಲ. ಸಮಯ ಸಿಗದೆ ಇರುವುದು ಬೇರೆ ವಿಷಯವಾದರೂ ನಮಗೆ ಬೇಕೆಂದಾಗ ಮನರಂಜನೆ ಪಡೆಯುವಷ್ಟು ಸಾಕಷ್ಟು ಅನುಕೂಲತೆಗಳನ್ನು ನಗರಗಳಲ್ಲಿ ನಾವು ಇಂದು ಕಾಣಬಹುದಾಗಿದೆ. ಸಿನೆಮಾ ಮಂದಿರಗಳಾಗಲಿ, ಕ್ರೀಡೆಗಳಾಗಲಿ, ಮನರಂಜನಾ ಉದ್ಯಾನಗಳಾಗಲಿ, ಸಂಗೀತ ಕಚೇರಿಗಳಾಗಲಿ, ವಿವಿಧ ಕಾರ್ಯಕ್ರಮಗಳಾಗಲಿ ಎಲ್ಲವೂ ದೊರೆಯುತ್ತವೆ.

ವಿಶೇಷ ಲೇಖನ : ಜಲ್ಲಿಕಟ್ಟು ಆಟ

ಆದರೆ ಇದೇ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಅವಕಾಶಗಳಿರುವುದು ತುಸು ಕಷ್ಟವೆ. ರೈತಾಪಿ ವರ್ಗವು ನಮ್ಮಂತೆ ವಾರಕ್ಕೆ ಐದು ದಿನಗಳಂತಲ್ಲದೆ ಎಲ್ಲ ದಿನವೂ ಹೆಚ್ಚು ಕಡಿಮೆ ದಿನವಿಡಿ ದುಡಿಯಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಚಟುವಟಿಕೆಗಳು ಹಿಂದಿನ ಕಾಲದಿಂದಲೂ ರೂಪಗೊಂಡು ತಮ್ಮದೆ ಆದ ವೈಶಿಷ್ಟ್ಯತೆಗಳಿಂದ ಕೂಡಿದೆ. ಈ ರೀತಿಯ ಚಟುವಟಿಕೆಗಳು ಕೇವಲ ಮನರಂಜನೆಗಳಿಗೆ ಸೀಮಿತವಾಗಿರದೆ ಸಮಾಜಮುಖಿಯೂ ಸಹ ಆಗಿರುವುದು ವಿಶೇಷ. ಅಂತಹ ಕೆಲ ಗ್ರಾಮೀಣ ಉತ್ಸವಗಳು, ಕ್ರೀಡೆಗಳು ಇಂದಿಗೂ ಕೂಡ ನಮ್ಮ ನಾಡಿನ ಕೆಲ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಏನೀದು ಕರಾವಳಿಯ ಕಂಬಳ ಓಟ

ಚಿತ್ರಕೃಪೆ: Pernoctator

ಇಂತಹ ಸಾಂಪ್ರದಾಯಿಕ ಉತ್ಸವಗಳನ್ನು ಮತ್ತಷ್ಟು ಪ್ರೋತ್ಸಾಹಿಸಿ ಉಳಿಸಿಕೊಂಡು ಹೋಗ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಲೇಖನವು ಕರ್ನಾಟಕದ ಕರಾವಳಿ ಭಾಗದಲ್ಲಿ ಆಯೋಜಿಸಲ್ಪಡುವ ಕಂಬಳ ಜಾನಪದ ಕ್ರೀಡೆಯ ಕುರಿತು ಸಂಕ್ಷೀಪ್ತವಾಗಿ ತಿಳಿಸುತ್ತದೆ. ಕಂಬಳವು ನವಂಬರ್ ತಿಂಗಳಿನಿಂದ ಪ್ರಾರಂಭವಾಗಿ ಮಾರ್ಚ್ ವರೆಗೂ ಕರಾವಳಿ ಕರ್ನಾಟಕದ ವಿವಿಧ ಭಾಗಗಳಲ್ಲಿ ನಿಗದಿಪಡಿಸಲಾದ ದಿನಗಳಂದು ನಡೆಯುತ್ತದೆ. ಭಗವಂತನು ತಮ್ಮ ಜಾನುವಾರಗಳನ್ನು ರಕ್ಷಿಸುತ್ತಿರುವುದರ ಗೌರವಾರ್ಥವಾಗಿಯೂ ಈ ಕಂಬಳ ಉತ್ಸವವನ್ನು ಕೆಲ ಗ್ರಾಮಗಳಲ್ಲಿ ಆಚರಿಸಲಾಗುತ್ತದೆ.

ವಿಶೇಷ ಲೇಖನ : ರೋಮಾಂಚನಗೊಳಿಸುವ ಪ್ಯಾರಾಗ್ಲೈಡಿಂಗ್

ಏನೀದು ಕರಾವಳಿಯ ಕಂಬಳ ಓಟ

ಚಿತ್ರಕೃಪೆ: Hari Prasad Nadig

ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಈ ಕ್ರೀಡೆಯಲ್ಲಿ ಮುಖ್ಯವಾಗಿ ಎರಡು ಕೋಣಗಳ ಕುತ್ತಿಗೆಗೆ ಹಗ್ಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಇಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ. ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು.

ಭತ್ತದ ಮೊದಲ ಕೊಯಿಲಿನ ನಂತರ ಸಾಮಾನ್ಯವಾಗಿ ಈ ಕ್ರೀಡೆ ಆಯೋಜಿಸಲ್ಪಡುತ್ತದೆ. ಮನರಂಜನೆಯ ಮುಖ್ಯ ಉದ್ದೇಶದಿಂದ ಪ್ರಾರಂಭಾವದ ಈ ಜನಪದ ಕ್ರೀಡೆ ಇತ್ತೀಚೆಗೆ ಸ್ಪರ್ಧಿಸುವುದೂ, ಅದರಲ್ಲಿ ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೆಂಬಂತೆ ಪರಿವರ್ತಿತವಾಗಿದೆ. ಹಿಂದೆ ಈ ಕ್ರೀಡೆಯಲ್ಲಿ ಗೆದ್ದವರಿಗೆ ತೆಂಗುಗಳು ಹಾಗೂ ಇತರೆ ಬೆಳೆಗಳನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಆದರೆ ಇಂದು ಇದೊಂದು ಪ್ರತಿಷ್ಠೆಯ ಕ್ರೀಡೆಯಾಗಿದ್ದು, ಬಂಗಾರ, ಬೆಳ್ಳಿ ನಾಣ್ಯಗಳು ಹಾಗೂ ನಗದು ಹಣವನ್ನೂ ಸಹ ಬಹುಮಾನವಾಗಿ ನೀಡಲಾಗುತ್ತದೆ.

ಏನೀದು ಕರಾವಳಿಯ ಕಂಬಳ ಓಟ

ಚಿತ್ರಕೃಪೆ: Rayabhari

ಸಾಮಾನ್ಯವಾಗಿ ಕಂಬಳವು ಬಿಡುವಾದ ಅಥವಾ ಖಾಲಿಬಿದ್ದ ಗದ್ದೆಗಳಲ್ಲಿ ನಡೆಯುತ್ತದೆ. ಆದರೆ ಇತ್ತೀಚೆಗೆ ಇದಕ್ಕಾಗಿಯೇ ಪ್ರತ್ಯೇಕವಾದ ಕಣಗಳನ್ನು ನಿರ್ಮಿಸಲಾಗಿದೆ. ಕಂಬಳದ ಓಟದ ಉದ್ದವು ಸುಮಾರು ನೂರರಿಂದ ಇನ್ನೂರು ಮೀಟರುಗಳಷ್ಟಿರುತ್ತದೆ. ಹಸನಾದ ಗದ್ದೆಯ ಮಣ್ಣಿನೊಂದಿಗೆ ಜಿಗುಟಾಗದಿರಲು ಅಗತ್ಯವಾದಷ್ಟು ಮರಳು ಸೇರಿಸಿ ಅದರ ಮೇಲೆ ನೀರು ಹಾಯಿಸಿ ಕೆಸರುಗದ್ದೆಯನ್ನಾಗಿ ಮಾಡಲಾಗಿರುತ್ತದೆ. ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಷ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ.

ಈ ಜಾಗದಲ್ಲಿ ಮೇಲೆ ಮಾವಿನ ಎಲೆಗಳ ತೋರಣವನ್ನು ಕಟ್ಟಲಾಗಿರುತ್ತದೆ ಹಾಗೂ ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ. ಕಣದ ಮತ್ತೊಂದು ಇದೇ ರೀತಿಯ ಮಾವಿನ ತೋರಣವಿದ್ದು ಇದು ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಗೆರೆಯ ಕೊಂಚ ಹಿಂದೆ ಏರಿಯೊಂದನ್ನು ನಿರ್ಮಿಸಲಾಗಿರುತ್ತದೆ. ಇದನ್ನು ಮಂಜೊಟ್ಟಿ ಎಂದು ಕರೆಯಲಾಗುತ್ತದೆ. ಪ್ರಾರಂಭದಿಂದ ವೇಗವಾಗಿ ಓಡಿಬರುವ ಕೋಣಗಳು ಈ ಮಂಜೊಟ್ಟಿಯನ್ನು ಏರುತ್ತ ವೇಗವನ್ನು ಕಳೆದುಕೊಂಡು ನಿಧಾನವಾಗಿ ನಿಲ್ಲುತ್ತವೆ.

ಏನೀದು ಕರಾವಳಿಯ ಕಂಬಳ ಓಟ

ಚಿತ್ರಕೃಪೆ: Karunakar Rayker

ಕಂಬಳದ ಗದ್ದೆಗಳಲ್ಲಿ ಎರಡು ವಿಧವಿದ್ದು, ಒಂದು ಒಂಟಿ ಗದ್ದೆಯ ಕಂಬಳ ಇನ್ನೊಂದು ಜೋಡಿ ಗದ್ದೆಯಕಂಬಳ. ಇತ್ತೀಚಿನ ದಿನಗಳಲ್ಲಿ ಕಂಬಳವು ಶನಿವಾರ ಇಲ್ಲವೆ ಭಾನುವಾರಗಳಂದು ನಡೆಯುತ್ತದೆ. ಕಂಬಳದ ಗದ್ದೆಯು ಒಂಟಿಯೋ ಅಥವಾ ಜೋಡಿಯೋ ಎಂಬುವುದರ ಮೇಲೆ ಸ್ಪರ್ಧೆಯ ರೀತಿ ನಿಯಮಗಳು ನಿರ್ಧಾರವಾಗುತ್ತದೆ. ಉಳಿದ ಪಂದ್ಯಗಳಲ್ಲಿನಂತೆಯೇ ಲೀಗ್, ಸೆಮಿಫೈನಲ್, ಫೈನಲ್ ಓಟಗಳು ನಡೆಯುತ್ತವೆ. ಈಗಿನ ದಿನಗಳಲ್ಲಿ ಮುಕ್ತಾಯದ ಗೆರೆಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ ಗಣಕ ಯಂತ್ರಗಳನ್ನಿರಿಸಿ ಫಲಿತಾಂಶ ಹಾಗೂ ಸಮಯವನ್ನು ನಿಖರವಾಗಿ ಅಳೆಯಲಾಗುತ್ತದೆ.

ಏನೀದು ಕರಾವಳಿಯ ಕಂಬಳ ಓಟ

ಚಿತ್ರಕೃಪೆ: Pernoctator

ಕಂಬಳದ ಅಂತಿಮ ಸುತ್ತಿನ ಓಟದ ಸ್ಪರ್ಧೆಯ ನಂತರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಫಲಿತಾಂಶಗಳು ಹೊರಬಿಳುತ್ತಿದ್ದಂತೆಯೆ ಭವ್ಯವಾದ ವೇದಿಕೆ ನಿರ್ಮಾಣವಾಗಿರುತ್ತದೆ. ಸ್ಪರ್ಧೆಯಲ್ಲಿ ಗೆದ್ದ ಕೋಣಗಳ ಯಜಮಾನನಿಗೆ ಚಿನ್ನದ ಪದಕಗಳನ್ನು ನೀಡಲಾಗುತ್ತದೆ ಅಲ್ಲದೆ ಓಡಿಸಿದವನಿಗೂ ಕೂಡ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮುಗಿದು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು, ಧ್ವನಿವರ್ಧಕಗಳ ಮೂಲಕ ವಿವರಣೆ ಕೊಡುವ ಉದ್ಘೋಷಕರು ಇವರೆಲ್ಲರಿಂದ ಅಲ್ಲಿ ಒಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ.

ಏನೀದು ಕರಾವಳಿಯ ಕಂಬಳ ಓಟ

ಚಿತ್ರಕೃಪೆ: Prabhu.sanoor

ಕೋಣಗಳನ್ನು ವೇಗವಾಗಿ ಓಡಿಸುವ ಉದ್ದೇಶದಿಂದ ನಾಗರ ಬೆತ್ತಗಳಿಂದ ಅವುಗಳಿಗೆ ಹೊಡೆಯುವುದು ಸಾಮಾನ್ಯ. ಈ ಕಾರಣಕ್ಕಾಗಿ ಕಂಬಳವನ್ನು ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ ಹಾಗೂ ಈ ಕ್ರೀಡೆಯನ್ನು ನಿಷೇಧಿಸಬೇಕೆನ್ನುವ ಕೂಗು ಕೇಳಿ ಬಂದದ್ದೂ ಇದೆ. ಆದರೆ ಏಟು ಹೊಡೆದರೂ ಸ್ಪರ್ಧೆಯ ಕೊನೆಗೊಂಡ ನಂತರ ಅವುಗಳನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ ಎಂಬ ಯಜಮಾನರುಗಳ ಹೇಳಿಕೆಯು ಕಂಬಳವು ಇನ್ನು ಚಾಲ್ತಿಯಲ್ಲಿರುವುದಕ್ಕೆ ಕಾರಣವಾಗಿದೆ. ಇಂದಿನ ಕಂಬಳಗಳಲ್ಲಿ ಕೋಣಗಳು ಮಂಜೊಟ್ಟಿಯನ್ನು ಏರಿದ ಮೇಲೆ ಅವುಗಳಿಗೆ ಹೊಡೆಯಬಾರದೆನ್ನುವ ನಿಯಮವೂ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X