ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳು

Written by:
Updated: Monday, August 18, 2014, 12:56 [IST]
Share this on your social network:
   Facebook Twitter Google+ Pin it  Comments

ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ...ಎಂದು ಅಣ್ಣಾವ್ರು ಅರ್ಥಾತ್ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರು ತಮ್ಮ ಸುಶ್ರಾವ್ಯವಾದ ಕಂಠದಲ್ಲಿ ಹಾಡಿದ್ದನ್ನು ಯಾರೂ ಮರೆಯಲಾರರು. ಒಂದೆಡೆ ಹಾಡು ರಾಜ್ ಅವರ ಮಧುರ ಧ್ವನಿಯಲ್ಲಿ ಮೂಡಿ ಬಂದಿದ್ದರೆ ಮತ್ತೊಂದೆಡೆ ಜೋಗದ ಮೈಮಾಟವು ಕ್ಯಾಮೆರಾದ ಲೆನ್ಸುಗಳಲ್ಲಿ ಚೊಕ್ಕವಾಗಿ ಹಿಡಿದಿಡಲ್ಪಟ್ಟಿದೆ.

ಹೌದು, ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತದ ಮಹಿಮೆಯೆ ಹಾಗೆ. ಕರ್ನಾಟಕದ ಅತಿ ಎತ್ತರದ ಜಲಪಾತವಾಗಿರುವ ಜೋಗವು ಪ್ರಮುಖ ಪ್ರವಾಸಿ ಆಕರ್ಷಣೆಯೂ ಹೌದು. ಇದರಂತೆ ಭಾರತದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದ ಜಲಪಾತಗಳನ್ನು ಕಾಣಬಹುದು.

ನಮ್ಮಲ್ಲಿ ಬಹುತೇಕರಿಗೆ ಹಲವಾರು ಜಲಪಾತಗಳ ಹೆಸರು ತಿಳಿದಿದ್ದರೂ ಸಹ ಅತಿ ಎತ್ತರದಿಂದ ಧುಮುಕುವ ಜಲಪಾತಗಳು ಯಾವುವೆಂದು ಗೊತ್ತಿರಲಿಕ್ಕಿಲ್ಲ. ಆದರೆ ಚಿಂತಿಸಬೇಡಿ, ಈ ಲೇಖನವನ್ನು ಓದಿ ಸಾಕು. ಭಾರತದ ಮೊದಲ 30 ಅತಿ ಎತ್ತರದ ಜಲಪಾತಗಳು ಯಾವುವೆಂದು ತಿಳಿಸುತ್ತದೆ. ಗಮನದಲ್ಲಿಡಬೇಕಾದ ಅಂಶವೆಂದರೆ ಜಲಪಾತಗಳನ್ನು ಹಲವಾರು ವಿಧಗಳಲ್ಲಿ ವಿಭಾಗಿಸಬಹುದಾಗಿದ್ದು ವಿವಿಧ ರೀತಿಗಳಲ್ಲಿ ಕ್ರಮಾಂಕಗಳನ್ನು ನೀಡಬಹುದಾಗಿದೆ. ಆದರೆ ಈ ಲೇಖನದಲ್ಲಿ ಜಲಪಾತಗಳು ಕೇವಲ ಮೇಲಿನಿಂದ ಧುಮುಕುವುದಲ್ಲದೆ ಹಲವು ಸ್ತರಗಳಲ್ಲಿ ಧುಮುಕುವುದರ ಒಟ್ಟಾರೆ ಎತ್ತರವನ್ನು ಮಾತ್ರ ತೆಗೆದುಕೊಳ್ಳಲಾಗಿದೆ.

ಮಾಹಿತಿ ಕೃಪೆ: worldwaterfalldatabase

ಸೂಚನೆ: ಇಲ್ಲಿರುವ ಜಲಪಾತದ ಕ್ರಮಾಂಕಗಳು ಆರೋಹಣ ಪದ್ಧತಿಯಲ್ಲಿದೆ. ಅಂದರೆ ಕಡಿಮೆ ಎತ್ತರದ ಜಲಪಾತ ಮೊದಲನೇಯ ಸ್ಲೈಡಿನಿಂದ ಪ್ರಾರಂಭವಾಗಿ ಅತಿ ಎತ್ತರದ ಜಲಪಾತ ಕೊನೆಯ ಸ್ಲೈಡಿನಲ್ಲಿರುತ್ತದೆ.

ಶಿವನಸಮುದ್ರ:

ಈ ಪಟ್ಟಿಯಲ್ಲಿ 30 ನೇಯ ಸ್ಥಾನದಲ್ಲಿದೆ ಕರ್ನಾಟಕದಲ್ಲಿರುವ ಶಿವನಸಮುದ್ರ ಜಲಪಾತ. ಇದರ ಎತ್ತರ ಸುಮಾರು 98 ಮೀ ಅಂದರೆ ಸುಮಾರು 320 ಅಡಿಗಳಷ್ಟು.

ಚಿತ್ರಕೃಪೆ: neonlights78

 

ಹುಂಡ್ರು ಜಲಪಾತ:

ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯಲ್ಲಿರುವ ಜಲಪಾತವೂ ಸಹ 320 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Smeet Chowdhury

 

ಪಾಂಡವಕಡಾ:

ನಂತರ ಬುಂದ್ಲಾ ಜಲಪಾತ (328 ಅಡಿಗಳು, ಹಿಮಾಚಲ ಪ್ರದೇಶ) ಹಾಗೂ ರಜತ್ ಪ್ರಪಾತ ಜಲಪಾತ (350 ಅಡಿಗಳು, ಮಧ್ಯ ಪ್ರದೇಶ). ಇದರ ನಂತರ ಇರುವುದು ಮಹಾರಾಷ್ಟ್ರದಲ್ಲಿರುವ ಪಾಂಡವಕಡಾ ಜಲಪಾತ. ಇದರ ಎತ್ತರ 350 ಅಡಿಗಳು.

ಚಿತ್ರಕೃಪೆ: Uruj Kohari

 

ಉಂಚಳ್ಳಿ ಜಲಪಾತ:

ಲಶಿಂಗ್ಟನ್ ಜಲಪಾತ ಎಂತಲೂ ಕರೆಯಲ್ಪಡುವ ಉಂಚಳ್ಳಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿ ಸ್ಥಿತವಿದೆ. 381 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಅಘನಾಶಿನಿ ನದಿಯಿಂದ ರೂಪಿತವಾಗಿದೆ.

ಚಿತ್ರಕೃಪೆ: Balaji Narayanan

 

ಕೋಸಳ್ಳಿ:

ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಚಲಿಸುತ್ತ ಸುಮಾರು 8 ಕಿ.ಮೀ ಗಳಷ್ಟು ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡುಮಾರ್ಗದಲ್ಲಿ ನಡೆದರೆ ಕೋಸಳ್ಳಿ ಜಲಪಾತ ಕಾಣಸಿಗುತ್ತದೆ. ಕೋಸಳ್ಳಿ ಜಲಪಾತವು 3 ರಿಂದ 5 ಹಂತಗಳಲ್ಲಿ ಧುಮುಕುತ್ತದೆ. ಒಟ್ಟು ಎತ್ತರ 380 ಅಡಿಗಳು.

ಚಿತ್ರಕೃಪೆ: Vishuachar

 

ಕಲ್ಹತ್ತಿ:

ನಂತರ ಬಿಡಾನ್ ಜಲಪಾತ (394 ಅಡಿಗಳು, ಮೇಘಾಲಯ). ಇದರ ನಂತರ ಕರ್ನಾಟಕದ ಕಲ್ಹತ್ತಿ ಜಲಪಾತ. ಎತ್ತರ ಸುಮಾರು 400 ಅಡಿಗಳು.

ಚಿತ್ರಕೃಪೆ: Scouser

 

ಕೇವತಿ ಜಲಪಾತ:

ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಕೇವತಿ ಜಲಪಾತದ ಎತ್ತರ ಸುಮಾರು 427 ಅಡಿಗಳು.

ಚಿತ್ರಕೃಪೆ: Syedzohaibullah

 

ಹೆಬ್ಬೆ ಜಲಪಾತ:

ನಂತರ ಬಿಷಪ್ ಜಲಪಾತ(443 ಅಡಿಗಳು, ಮೇಘಾಲಯ), ಲೋಧ್ ಜಲಪಾತ (468 ಅಡಿಗಳು, ಜಾರ್ಖಂಡ್) ಹಾಗೂ ದುದುಮಾ ಜಲಪಾತ (516 ಅಡಿಗಳು, ಒಡಿಶಾ). ಇವುಗಳ ನಂತರ ಕರ್ನಾಟಕದ ಕೆಮ್ಮಣ್ಣುಗುಂಡಿ ಬಳಿಯಿರುವ ಹೆಬ್ಬೆ ಜಲಪಾತ. ಎತ್ತರ 551 ಅಡಿಗಳು.

ಚಿತ್ರಕೃಪೆ: Srinivasa83

 

ಮಾಗೋಡು ಜಲಪಾತ:

ನಂತರ ಜೊರಂಡ ಜಲಪಾತ (593 ಅಡಿಗಳು, ಒಡಿಶಾ) ಹಾಗೂ ಇದರ ನಂತರ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯಿರುವ ಮಾಗೋಡು ಜಲಪಾತ. ಇದರ ಎತ್ತರ 650 ಅಡಿಗಳು.

ಚಿತ್ರಕೃಪೆ: Prad.gk

 

ಸೂಚಿಪಾರಾ ಜಲಪಾತ:

ಕೇರಳದ ಪ್ರಖ್ಯಾತ ಪ್ರವಾಸಿ ತಾಣ ವಯನಾಡ್ ಬಳಿಯಿರುವ ಸೂಚಿಪಾರಾ ಜಲಪಾತವು 656 ಅಡಿಗಳಷ್ಟು ಎತ್ತರದಿಂದ ಹಲವು ಸ್ತರಗಳಲ್ಲಿ ಹರಿಯುತ್ತದೆ. ಚಿತ್ರದಲ್ಲಿ ಜಲಪಾತದ ಒಂದು ಭಾಗ ಮಾತ್ರ.

ಚಿತ್ರಕೃಪೆ: Yjenith

 

ಕುಣೆ ಜಲಪಾತ:

ಮಹಾರಾಷ್ಟ್ರದ ಪ್ರಸಿದ್ಧ ತಾಣ ಲೋನಾವಲಾ ಬಳಿಯಿರುವ ಕುಣೆ ಜಲಪಾತವು 656 ಅಡಿಗಳಷ್ಟು ಎತ್ತರ ಹೊಂದಿದೆ.

ಚಿತ್ರಕೃಪೆ: Avinash Lewis

 

ಬಾರೇಹಿಪಾನಿ ಜಲಪಾತ:

ಒಡಿಶಾ ರಾಜ್ಯದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನದಲ್ಲಿರುವ ಬಾರೇಹಿಪಾನಿ ಜಲಪಾತವು 712 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Samarth Joel Ram

 

ವಂಟಾಂವ್ಗ್ ಜಲಪಾತ:

ಈಶಾನ್ಯ ಭಾರತದ ಮಿಜೋರಾಮ್ ರಾಜ್ಯದ ಸೆರ್ಚ್ಚಿಪ್ ಜಿಲ್ಲೆಯಲ್ಲಿ ಈ ಜಲಪಾತವಿದೆ. ಇದರ ಎತ್ತರ 750 ಅಡಿಗಳು.

ಚಿತ್ರಕೃಪೆ: t.saldanha

 

ಖಂಡಾಧರ ಜಲಪಾತ:

ಒಡಿಶಾ ರಾಜ್ಯದ ಸುಂದರಗಡ್ ಬಳಿಯಲ್ಲಿದೆ ಈ ಖಂಡಾಧರ ಜಲಪಾತ. ಇದರ ಎತ್ತರ 800 ಅಡಿಗಳು.

ಚಿತ್ರಕೃಪೆ: Sukanta sarangi

 

ಜೋಗ ಜಲಪಾತ:

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗದ ಗುಂಡಿ ಅಥವಾ ಜೋಗ ಜಲಪಾತವು ವಿಶ್ವ ಪ್ರಖ್ಯಾತ ಜಲಪಾತ ತಾಣವಾಗಿದ್ದು ಶರಾವತಿಯ ನೀರುವ ರಾಜಾ, ರಾಣಿ, ರಾಕೆಟ್, ರೋರರ್ ಎಂಬ ನಾಲ್ಕು ವಿಭಾಗಗಳಲ್ಲಿ ರಭಸವಾಗಿ ಧರೆಗುರುಳುತ್ತದೆ. ಇದರ ಎತ್ತರ 829 ಅಡಿಗಳು. ಗಮನಿಸಿ, ಜೋಗ ಜಲಪಾತವು ಜಗತ್ತಿನ ಎರಡನೇಯ ಅತಿ ಎತ್ತರದ ಧುಮುಕುವ (ಪ್ಲಂಜ್) ಜಲಪಾತವಾಗಿದೆ. ಅಂದರೆ ನೀರು ಬಂಡೆಯಿಂದ ಬಿದ್ದ ಮೇಲೆ ಆ ಬಂಡೆಯ ಯಾವುದೆ ಭಾಗಕ್ಕೆ ತಾಕಲಾರದೆ ನೇರವಾಗಿ ಧರೆಗುರುಳುವುದು.

ಚಿತ್ರಕೃಪೆ: Vmjmalali

 

ಬರ್ಕಣ ಜಲಪಾತ:

ಪಶ್ಚಿಮ ಘಟ್ಟದ ಆಗುಂಬೆ ಬಳಿಯಲ್ಲೆ ಮತ್ತೊಂದು ನಯನ ಮನೋಹರವಾದ ಜಲಪಾತವನ್ನು ಕಾಣಬಹುದಾಗಿದೆ. ಅದೆ ಬರ್ಕಣ ಜಲಪಾತ. ಸುಮಾರು 850 ಅಡಿಗಳಷ್ಟು ಎತ್ತರವನ್ನು ಈ ಜಲಪಾತ ಹೊಂದಿದೆ. ದೂರದಿಂದಲೂ ಕೂಡ ಭವ್ಯವಾದ ನೋಟವನ್ನು ನೋಡುಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: Lakshmipathi23

 

ತಲಯಾರ್ ಜಲಪಾತ:

ತಮಿಳುನಾಡಿನ ಕೊಡೈಕೆನಾಲ್ ಬಳಿಯಿರುವ ಈ ಜಲಪಾತದ ಎತ್ತರ 975 ಅಡಿಗಳು. ಇದನ್ನು ರ್‍ಯಾಟ್ ಟೇಲ್ (ಇಲಿಯ ಬಾಲ) ಜಲಪಾತ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Barbaragailblock

 

ಮೀನ್ಮುಟ್ಟಿ ಜಲಪಾತ:

ಮೀನ್ಮುಟ್ಟಿ ಎಂಬ ಹೆಸರಿನ ಎರಡು ಜಲಪತಗಳನ್ನು ಕೇರಳದಲ್ಲಿ ನೋಡಬಹುದಾಗಿದೆ. ಒಂದು ವಯನಾಡ್ ಬಳಿಯಿದ್ದರೆ ಇನ್ನೊಂದು ತಿರುವನಂತಪುರದ ಬಳಿಯಲ್ಲಿದೆ. ಆದರೆ ತಿರುವನಂತಪುರದ ಬಳಿಯಿರುವ ಮೀನ್ಮುಟ್ಟಿ ಜಲಪಾತವು ಹಲವು ಸ್ತರಗಳಲ್ಲಿ ಉರುಳುತ್ತ 984 ಅಡಿಗಳಷ್ಟು ಒಟ್ಟಾರೆಯ ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Vssekm

 

ಕಿನ್ರೆಮ್ ಜಲಪಾತ:

ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯ ಚೀರಾಪುಂಜಿ ಬಳಿಯಲ್ಲಿದೆ ಈ ಸೊಬಗಿನ ಜಲಪಾತ. ಇದರ ಎತ್ತರ 1000 ಅಡಿಗಳು.

ಚಿತ್ರಕೃಪೆ: wikimapia

 

ದೂಧಸಾಗರ್ ಜಲಪಾತ:

ಕರ್ನಾಟಕ, ಗೋವಾ ರಾಜ್ಯಗಳ ಅಂಚುಗಳಲ್ಲಿ ಕಂಡುಬರುವ ದೂಧ್ ಸಾಗರ್ ಜಲಪಾತವು 1017 ಅಡಿಗಳಷ್ಟು ಎತ್ತರವನ್ನು ಹೊಂದಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಚಿತ್ರಕೃಪೆ: Sharat Chandra

 

ಮಾವ್ಸ್ ಮಾಯ್ ಜಲಪಾತ:

ಇದಕ್ಕೆ ಇನ್ನೊಂದು ಹೆಸರು ಏಳು ಸಹೋದರಿಯರ ಜಲಪಾತ ಹಾಗೂ ನಾಹ್ಸನ್ ಗಿಥಿಯಾಂಗ್ ಜಲಪಾತ. ಇದು ಮೇಘಾಲಯ ರಾಜ್ಯದಲ್ಲಿ ಕಂಡುಬರುತ್ತದೆ. ಇದರ ಎತ್ತರ 1035 ಅಡಿಗಳು.

ಚಿತ್ರಕೃಪೆ: Ashwin Kumar

 

ನೊಹ್ಕಾಲಿಕಾಯ್ ಜಲಪಾತ:

ನಂತರದ ಸ್ಥಾನದಲ್ಲಿದೆ ಲ್ಯಾಂಗ್ ಶಿಯಾಂಗ್ ಜಲಪಾತ ಇದು ಕೂಡ ಮೇಘಾಲಯ ರಾಜ್ಯದಲ್ಲಿದ್ದು 1107 ಅಡಿಗಳಷ್ಟು ಎತ್ತರ ಹೊಂದಿದೆ. ಇದರ ನಂತರದ ಸ್ಥಾನದಲ್ಲಿ ಅಂದರೆ ಭಾರತದ ಮೊದಲನೇಯ ಅತಿ ಎತ್ತರದ ಜಲಪಾತವಾಗಿ ಕಂಗೋಲಿಸುತ್ತದೆ ನೊಹ್ಕಾಲಿಕಾಯ್ ಜಲಪಾತ. ವಿಶೇಷವೆಂದರೆ ಇದು ಕೂಡ ಇರುವುದು ಮೇಘಾಲಯ ರಾಜ್ಯದಲ್ಲಿ. ಇದರ ಎತ್ತರ 1115 ಅಡಿಗಳು.

ಚಿತ್ರಕೃಪೆ: भवानी गौतम

 

English summary

Highest waterfalls of India

Waterfalls are generally popular tourist spots. There are various types of waterfalls. If some are known for its width then some others are known for their height. This particular article is about list of waterfalls in India which are tallest or highest.
Please Wait while comments are loading...