Search
  • Follow NativePlanet
Share
» »ಹಂಪಿ: ಅವಶೇಷಗಳ ಮಧ್ಯದಲೊಂದು ವೈಭವದ ಸಾಮ್ರಾಜ್ಯ

ಹಂಪಿ: ಅವಶೇಷಗಳ ಮಧ್ಯದಲೊಂದು ವೈಭವದ ಸಾಮ್ರಾಜ್ಯ

By Vijay

ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ.

ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ.

14 ರಿಂದ 16 ನೆಯ ಶತಮಾನದವರೆಗೆ ಕರ್ನಾಟಕವನ್ನಾಳಿದ ವಿಜಯನಗರ ಸಾಮ್ರಾಜ್ಯದ ಅತಿ ವೈಭವಯುತ ರಾಜಧಾನಿಯಾಗಿದ್ದ ಹಂಪಿ ನಗರವು ಪ್ರಖ್ಯಾತ ವಿಟ್ಠಲ ಮಂದಿರ, ವಿರೂಪಾಕ್ಷ ದೇವಾಲಯ, ಹಜಾರ ರಾಮನ ದೇವಾಲಯ, ಸಾಸಿವೆಕಾಳು ಗಣೇಶ, ಪಟ್ಟಾಭಿರಾಮನ ದೇವಾಲಯ, ಕಲ್ಲಿನ ರಥ, ಗಜಶಾಲೆ, ಮೆಟ್ಟಿಲು ಬಾವಿ, ಅಂತಃಪುರ, ಕಮಲದ ಅರಮನೆಗಳಂತಹ ಅತ್ಯಂತ ಕಲಾತ್ಮಕವಾದ ಸ್ಮಾರಕಗಳನ್ನು ಒಳಗೊಂಡಿದೆ.

ನಾಣ್ಣುಡಿಯ ಪ್ರಕಾರ, ಒಂದೊಮ್ಮೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಇಲ್ಲಿನ ರಸ್ತೆ ಬೀದಿಗಳಲ್ಲಿ ಮುತ್ತು, ರತ್ನಗಳನ್ನು ರಾಶಿ ರಾಶಿ ಹಾಕಿ ಮಾರಲಾಗುತ್ತಿತ್ತಂತೆ. ಅಂದರೆ ನೀವೇ ಊಹಿಸಬಹುದು ಈ ನಗರದ ಶ್ರೀಮಂತಿಕೆಯನ್ನು ಆ ಕಾಲದಲ್ಲಿ.

ಈ ಒಂದು ಕಾಲವನ್ನು ವಿಜಯನಗರದ ಸ್ವರ್ಣಯುಗವೆಂದೆ ಹೇಳಲಾಗುತ್ತದೆ. ಇಂತಹ ಸಂಪದ್ಭರಿತವಾದ ಪಟ್ಟಣವು ಕರ್ನಾಟಕದಲ್ಲಿದ್ದುದು ನಿಜವಾಗಿಯೂ ಕನ್ನಡಿಗರಿಗೆಲ್ಲ ಒಂದು ಹೆಮ್ಮೆಯ ಸಂಗತಿಯಾಗಿದೆ.

ಅಷ್ಟೆ ಅಲ್ಲ, ಇಲ್ಲಿನ ಕಲಾತ್ಮಕ ಸ್ಮಾರಕಗಳಿಗೆ ಮಾರು ಹೋಗಿ ಆಂಗ್ಲ, ಹಿಂದಿ, ಕನ್ನಡ ಸೇರಿದಂತೆ ಇತರೆ ಭಾಷೆಯ ಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ.

ಹಂಪಿ ಎನ್ನಲು ಕಾರಣ:

ತುಂಗಭದ್ರಾ ನದಿಯ ಅತಿ ಪುರಾತನ ಹೆಸರು ಪಂಪ. ಆಂಗ್ಲೀಕರಣದ ಪ್ರಭಾವದಿಂದಾಗಿ ಕ್ರಮೇಣ ಇದಕ್ಕೆ ಹಂಪೆ ಅಥವಾ ಹಂಪಿ ಎಂಬ ಹೆಸರು ಬಂದಿತು. ಏಕೆಂದರೆ ಈ ಪಟ್ಟಣವು ತುಂಗಭದ್ರಾ ನದಿ ದಂಡೆಯ ಮೇಲೆಯೆ ನೆಲೆಸಿದೆ.

ಕಾಲಕ್ರಮೇಣ ಇದನ್ನು ವಿಜಯನಗರ ಅಥವಾ ವಿರೂಪಾಕ್ಷಪುರ ಎಂಬ ಹೆಸರುಗಳಿಂದಲೂ ಸಹ ಕರೆಯಲಾಯಿತು. ತುಂಗಭದ್ರಾ ನದಿ, ಬೆಟ್ಟಗುಡ್ಡಗಳಿಂದ ಸುತ್ತುವರೆದಿರುವ ಈ ಐತಿಹಾಸಿಕ ಪಟ್ಟಣವು ಪ್ರಸ್ತುತ ಅವಶೇಷಗಳ ನಡುವೆ ಮುಚ್ಚಿ ಹೋಗಿದ್ದರೂ ಸಹ ಗತಕಾಲದ ತನ್ನ ವೈಭವದ ಕಥೆಯನ್ನು, ಅತ್ಯುತ್ತಮ ಕಲಾತ್ಮಕತೆಯ ಸ್ಮಾರಕಗಳನ್ನು ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನಿಗೆ ಯಾವುದೆ ಭೇದವಿಲ್ಲದೆ ಸಾರಿ ಸಾರಿ ಹೇಳುತ್ತದೆ.

ಇಂತಹ ಒಂದು ಅದ್ಭುತ ವಿಶ್ವವಿಖ್ಯಾತ ತಾಣವು ಕರ್ನಾಟಕದಲ್ಲಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡಬಹುದಾದ ವಿಷಯ. ಮತ್ತೊಂದು ತಿಳಿದುಕೊಳ್ಳಬಹುದಾದ ಸಂಗತಿಯೆಂದರೆ ಇಲ್ಲಿನ ಸುತ್ತಮುತ್ತಲ ಪ್ರದೇಶದ ಬೆಟ್ಟ ಗುಡ್ಡಗಳಲ್ಲಿ ಅಪಾರವಾದ ಸಂಖ್ಯೆಯಲ್ಲಿ ಬಂಡೆಗಳು ಇರುವುದರಿಂದ ಇಲ್ಲಿ ಕಾಣಬಹುದಾದ ಶಿಲ್ಪಕಲೆಗಳಲ್ಲಿ ಯಥೇಚ್ಚವಾಗಿ ಶಿಲೆಗಳನ್ನು ಬಳಸಲಾಗಿದೆ.

ಹಂಪಿ ಉತ್ಸವ:

ಕಲೆ, ಜನಪದ ಸಾಹಿತ್ಯ, ನೃತ್ಯ, ಸಂಗೀತ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರ ಶ್ರೀಮಂತಿಕೆಯನ್ನು ಅನಾವರಣಗೊಳಿಸಲು ಹಾಗು ಹುರುದುಂಬಿಸಲು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್ ರವರು ಇಂತಹ ಒಂದು ವಿಶೀಷ್ಟವಾದ ಉತ್ಸವಕ್ಕೆ ಚಾಲನೆ ನೀಡಿದ್ದರು.

ನಾದ ಉತ್ಸವ ಅಥವಾ ವಿಜಯ ಉತ್ಸವ ಎಂತಲೂ ಕರೆಯಲಾಗುವ ಈ ಉತ್ಸವವನ್ನು ಪ್ರತಿ ವರ್ಷಕ್ಕೊಮ್ಮೆ(ನವಂಬರ್ ಸಮಯದಲ್ಲಿ) ಆಯೋಜಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ರಾಜ್ಯದ ವಿವಿಧ ಮೂಲೆಗಳಿಂದ ಪ್ರತಿಷ್ಠಿತ ಕಲಾವಿದರು ಪಾಲ್ಗೊಳ್ಳುತ್ತಾರೆ.

ಮುಖ್ಯವಾಗಿ ವಿದೇಶಿ ಪ್ರವಾಸಿಗರಲ್ಲಿ ಈ ಉತ್ಸವವು ಹಂಪಿಯ ಅದ್ಭುತವಾದ ಶಿಲ್ಪಕಲೆಯನ್ನು ಪ್ರಸ್ತುತಪಡಿಸುವುದಲ್ಲದೆ ಕರ್ನಾಟಕದ ಕಲಾ ಶ್ರೀಮಂತಿಕೆಯನ್ನು ಎತ್ತಿ ತೋರುತ್ತದೆ. ಪ್ರಸ್ತುತ ವರ್ಷದ ಅಂದರೆ 2016 ನೇಯ ವರ್ಷದ ಹಂಪಿ ಉತ್ಸವವು ಇದೆ ಜನವರಿಯಲ್ಲಿ ನಡೆಯಲಿದೆ (ಇನ್ನೂ ದಿನಾಂಕಗಳು ನಿಗದಿಗೊಂಡಿಲ್ಲ).

ತೆರಳುವ ಬಗೆ:

ರಸ್ತೆ ಮಾರ್ಗವು ಪ್ರಮುಖವಾದ ಮಾಧ್ಯಮವಾಗಿದ್ದು ಹಂಪಿಯನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 340 ಕಿ.ಮೀ ದೂರವಿರುವ ಈ ಐತಿಹಾಸಿಕ ಪಟ್ಟಣವನ್ನು ತುಮಕೂರು, ಚಿತ್ರದುರ್ಗ, ಹೊಸಪೇಟೆ ಮಾರ್ಗವಾಗಿ ಸುಲಭವಾಗಿ ಬಸ್ಸಿನ ಮೂಲಕ ತಲುಪಬಹುದು.

ಇನ್ನೂ ರೈಲಿನಲ್ಲಿ ಪ್ರಯಾಣಿಸಬೇಕೆಂದಿದ್ದರೆ, 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ರೈಲು ನಿಲ್ದಾಣವು ಹಂಪಿಗೆ ಹತ್ತಿರವಾದ ರೈಲು ನಿಲ್ದಾಣವಾಗಿದೆ. ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್, ಬಿಜಾಪುರ ಮುಂತಾದ ಕಡೆಗಳಿಂದ ಹೊಸಪೇಟೆಗೆ ರೈಲುಗಳು ಲಭ್ಯವಿದೆ. ರೈಲುಗಳ ವೇಳಾಪಟ್ಟಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕದ ಪ್ರೌಢ ಪಟ್ಟಣ ಹಂಪಿಯ ಆಕರ್ಷಣೆಗಳ ಕುರಿತು ಸ್ಲೈಡುಗಳಲ್ಲಿ ಓದಿ ತಿಳಿಯಿರಿ.

ವಿಟ್ಠಲ ದೇವಾಲಯ:

ವಿಟ್ಠಲ ದೇವಾಲಯ:

ವಿಷ್ಣು ದೇವರ ಮತ್ತೊಂದು ರೂಪವಾದ ವಿಟ್ಠಲನಿಗೆ ಸಮರ್ಪಿತವಾದ ದೇವಾಲಯ ಸಂಕೀರ್ಣ ಇದಾಗಿದ್ದು, ಶಿಲ್ಪಕಲೆಯ ದೃಷ್ಟಿಯಿಂದ ಅತಿ ಮಹತ್ವವನ್ನು ಪಡೆದಿದೆ. ಹಲವು ಆಕರ್ಷಕ ಸ್ಮಾರಕಗಳನ್ನು ಈ ಸಂಕೀರ್ಣದಲ್ಲಿ ಕಾಣಬಹುದು.

ಚಿತ್ರಕೃಪೆ: Dineshkannambadi

ಸಂಗೀತ ಸ್ವರ ಚಿಮ್ಮಿಸುವ ಖಂಬಗಳು:

ಸಂಗೀತ ಸ್ವರ ಚಿಮ್ಮಿಸುವ ಖಂಬಗಳು:

"ಮ್ಯೂಸಿಕಲ್ ಪಿಲ್ಲರ್ಸ್" ಅಥವಾ ಸ್ವರ ಚಿಮ್ಮಿಸುವ ಖಂಬಗಳನ್ನು ವಿಟ್ಠಲ ದೇವಾಲಯ ಸಂಕೀರ್ಣದಲ್ಲಿ ಕಾಣಬಹುದು. ಕಲಾತ್ಮಕತೆಯ ಅಗಾಧತೆಯನ್ನು ತೋರಿಸುವ ಈ ಖಂಬಗಳನ್ನು ಜಡ ವಸ್ತುವಿನಿಂದ ಮೀಟಿದಾಗ ಸಂಗೀತ ಸ್ವರಗಳು ಕೇಳಿ ಬರುತ್ತವೆ.

ಚಿತ್ರಕೃಪೆ: Nvamsi76

ಕಲ್ಲಿನ ರಥ:

ಕಲ್ಲಿನ ರಥ:

ವಿಟ್ಠಲ ದೇವಸ್ಥಾನದ ಎದುರಾಭಿಮುಖವಾಗಿ ಆ ಸಂಕೀರ್ಣದಲ್ಲಿ ವೈಭವಯುತವಾಗಿ ನಿಂತಿದೆ ಈ ಕಲ್ಲಿನ ರಥ. ಕಲ್ಲಿನಲ್ಲೆ ಸೂಕ್ಷ್ಮವಾಗಿ ಕೆತ್ತಲಾದ ಈ ಕಲ್ಲಿನ ರಥ ನೋಡಲು ಆಕರ್ಷಕವಾಗಿದ್ದು ಆ ಕಾಲದ ಕುಶಲಕರ್ಮಿಗಳ ಕಲಾ ನೈಪುಣ್ಯ್ತೆಯನ್ನು ಎತ್ತಿ ತೋರಿಸುತ್ತದೆ.

ಚಿತ್ರಕೃಪೆ: Dr Murali Mohan Gurram

ವಿರೂಪಾಕ್ಷ ದೇವಾಲಯ:

ವಿರೂಪಾಕ್ಷ ದೇವಾಲಯ:

ಹಂಪಿಯ ತುಂಗಭದ್ರಾ ನದಿ ದಂಡೆಯ ಬಳಿ ಈ ದೇವಾಲಯವಿದೆ. ಶಿವನ ಮತ್ತೊಂದು ರೂಪವಾದ ವಿರೂಪಾಕ್ಷನಿಗೆ ಈ ದೇವಾಲಯವು ಸಮರ್ಪಿತವಾಗಿದೆ. ಭಾರತದಲ್ಲಿ ಏಳನೆಯ ಶತಮಾನದಿಂದಲೂ ಚಲಾವಣೆಯಲ್ಲಿರುವ ಪುರಾತನ ದೇವಾಲಯಗಳ ಪೈಕಿ ಈ ದೇವಸ್ಥಾನವು ಒಂದು ಎಂದು ನಂಬಲಾಗಿದೆ. ಈ ದೇವಾಲಯವು ಕೂಡ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹಲವು ಹಿಂದು ಧಾರ್ಮಿಕ ಆಚರಣೆಗಳನ್ನು ವೀಕ್ಷಿಸಲು ಇದೊಂದು ಉತ್ತಮ ತಾಣವಾಗಿದೆ.

ಚಿತ್ರಕೃಪೆ: Anil Kusugal

ರಾಯಲ್ ಎನ್ಕ್ಲೋಸರ್ (ರಾಜಪ್ರಾಂಗಣ):

ರಾಯಲ್ ಎನ್ಕ್ಲೋಸರ್ (ರಾಜಪ್ರಾಂಗಣ):

ಹಲವು ರಚನೆಗಳುಳ್ಳ ಒಂದು ಭವ್ಯವಾದ ರಾಜಪ್ರಾಂಗಣವಿದು. ಇಲ್ಲಿ ವಿವಿಧ ರಚನೆಗಳಾದ ಭೂಗತ ದೇವಾಲಯಗಳು, ಜಲ ಕೊಳಗಳು, ಕಟ್ಟೆಗಳು ಹಾಗು ಪ್ರಸಿದ್ಧವಾದ ಮಹಾನವಮಿ ದಿಬ್ಬವನ್ನು ಇಲ್ಲಿ ಕಾಣಬಹುದು. ಈ ದಿಬ್ಬದ ಮೇಲೆ ಕುಳಿತು ಅಂದಿನ ಮಹಾರಾಜರು ಹಬ್ಬ ಹರಿದಿನಗಳ ಮೆರವಣಿಗೆಗಳನ್ನು ವೀಕ್ಷಿಸುತ್ತಿದ್ದರು. ಚಿತ್ರದಲ್ಲಿ ಕಾಣುತ್ತಿರುವುದು ಮಹಾನವಮಿ ದಿಬ್ಬ.

ಚಿತ್ರಕೃಪೆ: Dr Murali Mohan Gurram

ಹಂಪಿ ಬಜಾರ್:

ಹಂಪಿ ಬಜಾರ್:

ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರಿನಲ್ಲೆ ಈ ಮಾರುಕಟ್ಟೆಯಿದ್ದು ಇದಕ್ಕೆ ವಿರೂಪಾಕ್ಷ ಬಜಾರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಒಂದು ಕಿ.ಮೀ ಉದ್ದದ ಈ ಬೀದಿಯು ಎರಡು ಬದಿಗಳಲ್ಲಿ ಹಲವಾರು ರಚನೆಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ಎರಡು ಅಂತಸ್ತುಗಳ ರಚನೆಯೂ ಆಗಿವೆ. ಹಿಂದೆ ಪಟ್ಟಣದ ವೈಭವಯುತ ವ್ಯಾಪಾರಿ ಬೀದಿಯಾಗಿ ಇದು ಕಾರ್ಯನಿರ್ವಹಿಸುತ್ತಿತ್ತು.

ಚಿತ್ರಕೃಪೆ: Harish Aluru

ಹೇಮಕೂಟ ಬೆಟ್ಟ:

ಹೇಮಕೂಟ ಬೆಟ್ಟ:

ರೋಚಕ ಸ್ಥಳಪುರಾಣವನ್ನು ಹೊಂದಿರುವ ಹಂಪಿಯ ಹೇಮಕೂಟ ಬೆಟ್ಟವು ಅನೇಕ ಶಿಲಾ ರಚನೆಗಳು ಹಾಗು ದೇವಾಲಯಗಳನ್ನು ಒಳಗೊಂಡಿದೆ. ಸಾಧಾರಣ ಎತ್ತರದ ಈ ಬೆಟ್ಟವು ಹತ್ತಲು ಕೇವಲ 20 ನಿಮಿಷಗಳಷ್ಟು ಕಾಲವನ್ನು ತೆಗೆದುಕೊಳ್ಳುತ್ತದೆ ಹಾಗು ಸುಂದರವಾದ ಸೂರ್ಯೋದಯ ಹಾಗು ಸೂರ್ಯಾಸ್ತಗಳನ್ನು ಈ ಬೆಟ್ಟದ ಮೇಲಿಂದ ವೀಕ್ಷಿಸಬಹುದು. ಸ್ಥಳ ಪುರಾಣದ ಪ್ರಕಾರ, ಹಿಂದೆ ಇಲ್ಲಿಯೆ ಶಿವನು ತಪಸ್ಸುಗೈಯ್ಯುತ್ತಿರುವಾಗ ಪಂಪಾ ಎಂಬ ಹೆಸರಿನ ಕನ್ಯೆಯು ಭಕ್ತಿ ಭಾವದಿಂದ ಅರ್ಪಿಸಿದ ಸೇವೆಯಿಂದ ಪ್ರಸನ್ನನಾಗಿ ಆಕೆಯನ್ನು ವರಿಸಿದ್ದನಂತೆ. ಹೀಗಾಗುತ್ತಿದ್ದಂತೆ ಎಲ್ಲೆಲ್ಲೂ ಬಂಗಾರದ ಮಳೆಯಾಗಿ ಈ ಬೆಟ್ಟಕ್ಕೆ ಹೇಮಕೂಟ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಸಂಸ್ಕೃತ ಶಬ್ದವಾದ ಹೇಮ ಎಂದರೆ ಕನ್ನಡದಲ್ಲಿ ಸ್ವರ್ಣ ಅಥವಾ ಬಂಗಾರ ಎಂದಾಗುತ್ತದೆ.

ಚಿತ್ರಕೃಪೆ: Sujith Pillai

ಕಡಲೆಕಾಳು ಗಣೇಶ:

ಕಡಲೆಕಾಳು ಗಣೇಶ:

ಹೇಮಕೂಟ ಬೆಟ್ಟದ ಇಳಿಜಾರಿನ ಜಾಗದ ಕಲ್ಲಿನಲ್ಲಿ 14 ಅಡಿಗಳಷ್ಟು ಎತ್ತರದ ಈ ಗಣೇಶನ ವಿಗ್ರಹವನ್ನು ಕೆತ್ತಲಾಗಿದೆ. ಸಹಜ ಶಿಲೆಯಲ್ಲೆ ಮೂರ್ತಿಯನ್ನು ಕಡಿಯುವ ಅಂದಿನ ಶಿಲ್ಪಿಗಳ ಕೌಶಲ್ಯಕ್ಕೆ ಉತ್ತಮ ಸಾಕ್ಷಿಯಾಗಿದೆ ಈ ವಿಗ್ರಹ. ಈ ವಿಗ್ರಹವನ್ನು ಸ್ವಲ್ಪ ದೂರದಿಂದ ಗಮನಿಸಿದಾಗ ಕಡಲೆಕಾಯಿಯಂತೆ ಗೋಚರಿಸುವುದರಿಂದ ಇದಕ್ಕೆ ಕಡಲೆಕಾಳು ಗಣೇಶ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Keshvi2209

ಸಾಸಿವೆಕಾಳು ಗಣೇಶ:

ಸಾಸಿವೆಕಾಳು ಗಣೇಶ:

ತೆರೆದ ಮಂಟಪದಲ್ಲಿ ಈ ಬೃಹತ್ ನಾಲ್ಕು ಕೈಗಳುಳ್ಳ ಗಣೇಶನ ವಿಗ್ರಹವನ್ನು ನಿರ್ಮಿಸಲಾಗಿದೆ. ವಿಜಯನಗರ ಶಿಲ್ಪಕಲೆಗೆ ಮತ್ತೊಂದು ಗಮನಾರ್ಹ ಉದಾಹರಣೆಯಾಗಿದೆ ಈ ವಿಗ್ರಹ. ಈ ಗಣೆಶನ ಹೊಟ್ಟೆಯು ಸಾಸಿವೆಕಾಳಿನ ಆಕಾರವನ್ನು ಹೋಲುವುದರಿಂದ ಇದನ್ನು ಸಾಸಿವೆಕಾಳು ಗಣೇಶ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Ssenthilkumaran

ಬಾಲಕೃಷ್ಣ ದೇವಾಲಯ:

ಬಾಲಕೃಷ್ಣ ದೇವಾಲಯ:

ವಿಷ್ಣು ದೇವರ ಅವತಾರವಾದ ಶ್ರೀಕೃಷ್ಣನ ಬಾಲ್ಯಾವಸ್ಥೆಯ ರೂಪಕ್ಕೆ ಸರ್ಪಿತವಾಗಿದೆ ಈ ದೇವಾಲಯ. ಈ ದೇವಾಲಯ ಸಂಕೀರ್ಣದಲ್ಲಿ ಮುಖ್ಯ ದೇಗುಲ, ದೇವತೆಯರಿಗೆ ಸಂಬಂಧಪಟ್ಟ ಇತರೆ ದೇಗುಲಗಳು, ರಥ, ನೀರಿನ ಕೊಳ ಹಾಗು ಕಲಾತ್ಮಕತೆಯಿಂದ ಕೂಡಿದ ಹಲವು ಖಂಬಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Ilya Mauter

ಲಕ್ಷ್ಮಿ ನರಸಿಂಹ/ಉಗ್ರನರಸಿಂಹ

ಲಕ್ಷ್ಮಿ ನರಸಿಂಹ/ಉಗ್ರನರಸಿಂಹ

ಇದೊಂದು ಹಂಪಿಯಲ್ಲಿ ಕಾಣಸಿಗುವ ದೊಡ್ಡ ಏಕಶಿಲಾ ವಿಗ್ರಹವಾಗಿದೆ. ಈ ಸಿಂಹ ಮುಖಿ ವಿಗ್ರಹವು ವಿಷ್ಣುವಿನ ಉಗ್ರಾವತಾರವಾದ ನರಸಿಂಹನದ್ದಾಗಿದೆ. ಕುಳಿತ ಭಂಗಿಯಲ್ಲಿರುವ ಈ ವಿಗ್ರಹವು ಒಂದೊಮ್ಮೆ ತನ್ನ ತೊಡೆಯ ಮೇಲೆ ಲಕ್ಷ್ಮಿಯ ವಿಗ್ರಹವನ್ನು ಹೊಂದಿತ್ತು. ಪ್ರದೇಶವು ಶತ್ರುಗಳ ಆಕ್ರಮಣಕ್ಕೊಳಗಾಗಿ ಲಕ್ಷ್ಮಿ ದೇವಿಯ ವಿಗ್ರಹವು ನಶಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Srikar.agnihotram

ರಾಣಿಯ ಸ್ನಾನ ಗೃಹ/ ಕ್ವೀನ್ಸ್ ಬಾತ್:

ರಾಣಿಯ ಸ್ನಾನ ಗೃಹ/ ಕ್ವೀನ್ಸ್ ಬಾತ್:

ಮಧ್ಯದಲ್ಲಿ ನೀರಿನ ಕೊಳ ಹಾಗು ನಾಲ್ಕು ದಿಕ್ಕುಗಳಲ್ಲೂ ಮಂಟಪ ಕೊಠಡಿಗಳಿರುವ ಈ ರಚನೆಯು ಇತಿಹಾಸ ತಜ್ಞರ ಪ್ರಕಾರ ಸ್ನಾನದ ಗೃಹವಾಗಿ ಬಳಸಲ್ಪಡುತ್ತಿತ್ತೆಂದು ಹೇಳಲಾಗುತ್ತದೆ. ಇಂಡೊ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಚಿತ್ರಕೃಪೆ: Aravindreddy.d

ಲೋಟಸ್ ಮಹಲ್/ ಕಮಲದ ಅರಮನೆ:

ಲೋಟಸ್ ಮಹಲ್/ ಕಮಲದ ಅರಮನೆ:

ಕಮಲದ ದಳಗಳಂತೆ ಕಾಣುವ ಈ ರಚನೆಯು ಕಮಾನುಗಳಲ್ಲಿ ಇಸ್ಲಾಮಿಕ್ ವಾಸ್ತುಶೈಲಿಯನ್ನೂ, ಛಾವಣಿ ಹಾಗು ಅಡಿಯಲ್ಲಿ ಹಿಂದು ವಾಸ್ತು ಶೈಲಿಯನ್ನು ಹೊಂದಿದೆ. ಬಹುಶಃ ಇದು ಸೇನಾ ಮುಖ್ಯಸ್ಥ ಇಲ್ಲವೆ ರಾಣಿಯರು ಸಂತೋಷದಿಂದ ಸಮಯವನ್ನು ಕಳೆಯಲು ಬಳಸಲ್ಪಡುತ್ತಿತ್ತು ಎಂದು ಹೇಳಲಾಗಿದೆ.

ಚಿತ್ರಕೃಪೆ: Mansoor Ali

ಹಜಾರರಾಮನ ದೇವಾಲಯ:

ಹಜಾರರಾಮನ ದೇವಾಲಯ:

ಇದು ರಾಜನ ಖಾಸಗಿ ದೇವಾಲಯವಾಗಿತ್ತು. ಈ ದೇವಾಲಯದ ಹೊರಗೋಡೆಗಳಲ್ಲಿ ಅತ್ಯಂತ ಆಕರ್ಷಕವಾದ ಕೆತ್ತನೆಗಳನ್ನು ಕಾಣಬಹುದು. ದೇಗುಲದ ಎಲ್ಲ ಗೋಡೆಗಳಲ್ಲೂ ರಾಮಾಯಣದ ಕಥೆಯನ್ನು ಕಾಮಿಕ್ ಚಿತ್ರಗಳಂತೆ ಕೆತ್ತನೆ ಮಾಡಲಾಗಿದೆ.

ಚಿತ್ರಕೃಪೆ: Alende devasia

ಗಜಶಾಲೆ:

ಗಜಶಾಲೆ:

ರಾಜಾಶ್ರಯದ ಆನೆಗಳ ವಿಶ್ರಾಂತಿ ತಾಣ ಇದಾಗಿತ್ತು. ಸಾಲು ಸಾಲಾಗಿ ಕೊಠಡಿಗಳನ್ನು ಹೊಂದಿರುವ ಈ ರಚನೆಯು ಗುಮ್ಮಟಾಕಾರದ ಛಾವಣಿಗಳನ್ನು ಹೊಂದಿದೆ. ಪ್ರತಿಯೊಂದು ಕೊಠಡಿಯು ಎರಡು ಆನೆಗಳು ಇರಬಹುದಾದಷ್ಟು ವಿಶಾಲವಾಗಿವೆ.

ಚಿತ್ರಕೃಪೆ: Trishanth.diwate

ಪಟ್ಟಾಭಿರಾಮ ದೇವಾಲಯ:

ಪಟ್ಟಾಭಿರಾಮ ದೇವಾಲಯ:

ಈ ವಿಶಾಲವಾದ ದೇವಾಲಯವು ರಾಮದೇವರಿಗೆ ಸಮರ್ಪಿತವಾಗಿದೆ. ವಿಶಾಲ ಪ್ರಾಂಗಣದ ಇದರ ಖಂಬಗಳು ಪೌರಾಣಿಕ ಕಲ್ಪನೆಯ ಮೃಗಗಳ ಆಕಾರದಲ್ಲಿ ಕೆತ್ತಲ್ಪಟ್ಟಿವೆ.

ಚಿತ್ರಕೃಪೆ: Aravindreddy.d

ಅಚ್ಯುತರಾಯನ ದೇವಾಲಯ:

ಅಚ್ಯುತರಾಯನ ದೇವಾಲಯ:

ಹಂಪಿಯಲ್ಲಿ ಕಾಣಬಹುದಾದ ದೇವಾಲಯಗಳ ಪೈಕಿ ಈ ದೇವಾಲಯವು ಸುಧಾರಿತ ದೇವಾಲಯವಾಗಿದೆ. ಅಚ್ಯುತರಾಯನ ಆಡಳಿತದಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿರುವ ಕಾರಣ ಇದಕ್ಕೆ ಅಚ್ಯುತರಾಯನ ದೇವಾಲಯ ಎಂದು ಕರೆಯಲಾಗುತ್ತದೆ. ಮೂಲತಃ ಈ ದೇವಾಲಯವು ವಿಷ್ಣುವಿನ ಮತ್ತೊಂದು ರೂಪವಾದ ತಿರುವೆಂಗಳನಾಥನಿಗೆ ಮುಡಿಪಾಗಿದೆ.

ಚಿತ್ರಕೃಪೆ: Jayalakshmi Iyangar

ಆಂಜನೇಯ ಬೆಟ್ಟ:

ಆಂಜನೇಯ ಬೆಟ್ಟ:

ಈ ಬೆಟ್ಟದ ತುದಿಯಲ್ಲಿ ಆಂಜನೇಯನಿಗೆ ಸಮರ್ಪಿತವಾದ ದೇವಾಲಯವಿರುವುದರಿಂದ ಇದಕ್ಕೆ ಆಂಜನೇಯ ಬೆಟ್ಟವೆಂದು ಕರೆಯಲಾಗುತ್ತದೆ. ಭಗವಂತ ಹಣುಮಂತನು ಈ ಬೆಟ್ಟದಲ್ಲಿಯೆ ಜನ್ಮ ತಳೆದನು ಎಂದು ನಂಬಲಾಗಿದ್ದು ಆನೆಗೊಂದಿ ಪ್ರದೇಶದ ಕೇಂದ್ರ ಭಾಗದಲ್ಲಿ ಇದನ್ನು ಕಾಣಬಹುದು. ಅಂಜನಾ ದೇವಿಗೆ ಹುಟ್ಟಿದುದರಿಂದ ಹಣುಮಂತನಿಗೆ ಆಂಜನೇಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಕಲ್ಲಿನಲ್ಲಿ ಕೆತ್ತಲಾದ ಹಣುಮಂತನ ವಿಗ್ರಹವಿದ್ದು ಜೊತೆಗೆ ರಾಮ ಹಾಗು ಸೀತೆಯರ ದೇಗುಲಗಳನ್ನು ಕಾಣಬಹುದು.

ಚಿತ್ರಕೃಪೆ: Ilya Mauter

ಮಲಯವಂತ ರಘುನಾಥ ದೇವಾಲಯ:

ಮಲಯವಂತ ರಘುನಾಥ ದೇವಾಲಯ:

ಧಾರ್ಮಿಕ ಹಾಗು ಪೌರಾಣಿಕ ದೃಷ್ಟಿಯಿಂದ ರಾಮನಿಗೆ ಸಮರ್ಪಿತವಾದ ಈ ದೇವಾಲಯವು ಬಹು ಮಹತ್ವದ್ದಾಗಿದೆ. ಇದರ ಹಿಂದಿರುವ ಸ್ಥಳಪುರಾಣವೆಂದರೆ ಒಂದೊಮ್ಮೆ ರಾಮ ಲಕ್ಷ್ಮಣರು ಇಲ್ಲಿದ್ದಾಗ ಮಳೆಗಾಲವಿತ್ತಂತೆ. ಮಳೆಯಿಂದ ರಕ್ಷಣೆ ಪಡೆಯಲು ಶ್ರೀರಾಮನು ಮಲಯವಂತ ಬೆಟ್ಟದ ತುದಿಗೆ ಬಾಣ ಬಿಟ್ಟಾಗ ಒಂದು ಸೀಳು ಉಂಟಾಗಿ ಅದರಲ್ಲಿ ರಾಮ ಲಕ್ಷ್ಮಣರಿಬ್ಬರು ಆಶ್ರಯ ಪಡೆದರು. ನಂತರ ಗೋಪುರವನ್ನು ಇದಕ್ಕೆ ನಿರ್ಮಿಸಿ ಒಳಗೆ ಕಲ್ಲಿನಲ್ಲೆ ರಾಮ, ಲಕ್ಷ್ಮಣ ಹಾಗು ಸೀತೆಯ ನಿಂತ ಭಂಗಿ ಮತ್ತು ಹನುಮನ ಮಂಡಿಯುರಿ ಕುಳಿತ ಭಂಗಿಯನ್ನು ಕೆತ್ತಲಾಗಿದೆ.

ಚಿತ್ರಕೃಪೆ: Dineshkannambadi

ತಲರಿಗಟ್ಟಾ ದ್ವಾರ:

ತಲರಿಗಟ್ಟಾ ದ್ವಾರ:

ಹಂಪಿಗೆ ಪ್ರವೇಶಿಸಲು ಪ್ರಮುಖವಾದ ದ್ವಾರಗಳ ಪೈಕಿ ಇದೂ ಒಂದು. ಇಲ್ಲಿ ಆಂಜನೇಯನಿಗೆ ಮೂದಿಪಾದ ಚಿಕ್ಕ ದೇಗುಲವೊಂದನ್ನು ಕಾಣಬಹುದು. ಅಲ್ಲದೆ ಈ ಪ್ರವೇಶ ದ್ವಾರದ ಮೇಲ್ತುದಿಯನ್ನು ತಲುಪಬಹುದಾಗಿದ್ದು ಹಂಪಿಯ ವಿವಿಧ ರಚನೆಗಳ ವಿಹಂಗಮ ನೋಟವನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಇದು ಅಂದಿನ ಕಾಲದಲ್ಲಿ ಟಾಲ್ ಗೇಟ್ ಆಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿಯಲಾಗಿದೆ.

ಚಿತ್ರಕೃಪೆ: Dr Murali Mohan Gurram

ಗೆಜ್ಜಲ ಮಂಟಪ:

ಗೆಜ್ಜಲ ಮಂಟಪ:

ವಿಜಯನಗರದ ಇತರೆ ಸ್ಮಾರಕಗಳ ಮುಂದೆ ಇದು ಅಷ್ಟೊಂದು ಗಮನಾರ್ಹವಾದ ರಚನೆಯಾಗಿಲ್ಲವಾದರೂ ನೀವು ಭೇಟಿ ನೀಡಬಹುದಾದ ಮುಖ್ಯ ಸ್ಮಾರಕಗಳ ಮಾರ್ಗದಲ್ಲಿ ಇದು ನೆಲೆಸಿರುವುದರಿಂದ ಕೆಲ ಸಮಯ ಇಲ್ಲಿ ವಿರಾಮ ಪಡೆಯಲು ಉತ್ತಮವಾಗಿದೆ. ಈ ರಚನೆಯ ಹಿಂದಿರುವ ಉದ್ದೇಶ ಇನ್ನೂ ನಿಖರವಾಗಿ ತಿಳಿದುಬಂದಿಲ್ಲವಾದರೂ ಬಹುಶಃ ವಾರ್ಷಿಕ ದೇವಾಲಯ ಉತ್ಸವದ ಸಂದರ್ಭದಲ್ಲಿ ದೇವರ ವಿಗ್ರಹಗಳನ್ನು ಈ ಮಂಟಪದಲ್ಲಿ ಇಡಲಾಗುತ್ತಿತ್ತು ಎಂದು ಭಾವಿಸಲಾಗಿದೆ. ಪ್ರವಾಸಿಗರಿಂದ ಅತಿ ವಿರಳವಾಗಿ ಭೇಟಿ ನೀಡಲ್ಪಡುವ ಈ ಪ್ರದೇಶ ಶಾಂತಮಯ ವಾತವರಣವನ್ನು ಒದಗಿಸುತ್ತದೆ.

ಚಿತ್ರಕೃಪೆ: YukioSanjo

ಕುದುರೆಗೊಂಬೆ ಮಂಟಪ:

ಕುದುರೆಗೊಂಬೆ ಮಂಟಪ:

ವಿಟ್ಠಲ ದೇವಾಲಯ ಹಾಗು ಗೆಜ್ಜಲ ಮಂಟಪದ ಮಧ್ಯದಲ್ಲಿರುವ ಮಾರ್ಗದ ಕೇಂದ್ರದಲ್ಲಿ ಈ ಕುದುರೆಗೊಂಬೆ ಮಂಟಪವನ್ನು ಕಾಣಬಹುದು. ಈ ಮಂಟಪದ ಖಂಬಗಳು ಕುದುರೆಗಳ ಆಕಾರದಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿರುವುದರಿಂದ ಇದಕ್ಕೆ ಕುದುರೆಗೊಂಬೆ ಮಂಟಪ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Dineshkannambadi

ಎರಡಂತಸ್ತುಗಳ ಮಂಟಪ:

ಎರಡಂತಸ್ತುಗಳ ಮಂಟಪ:

ಕೋದಂಡರಾಮನ ದೇವಾಲಯದಿಂದ ವಿಟ್ಠಲ ದೇವಾಲಯಕ್ಕಿರುವ ಮಾರ್ಗವು ಈ ರಚನೆಯ ಮೂಲಕ ಹಾದು ಹೋಗುತ್ತದೆ. ಎರಡು ಅಂತಸ್ತುಗಳ ಈ ತೆರೆದ ಮಂಟಪವು ಸಮತೋಲನವನ್ನು ಕಾಪಾಡಿಕೊಂಡಿರುವುದನ್ನು ನೋಡಿದರೆ ಅಚ್ಚರಿಯಾಗದೆ ಇರಲಾರದು.

ಚಿತ್ರಕೃಪೆ: Srikar.agnihotram

ಪುರಂದರದಾಸ ಮಂಟಪ:

ಪುರಂದರದಾಸ ಮಂಟಪ:

ತುಂಗಭದ್ರಾ ನದಿ ದಂಡೆಯ ಮೇಲಿರುವ ಖಂಬಗಳುಳ್ಳ ಈ ತೆರೆದ ಮಂಟಪವು ಒಂದೊಮ್ಮೆ ಹಂಪಿಯಲ್ಲಿ ವಾಸಿಸಿದ್ದ ಪ್ರಸಿದ್ಧ ಪುರಾತನ ಕವಿ ಪುರಂದರದಾಸರಿಗೆ ಮುಡಿಪಾಗಿದೆ. ಹಿಂದು ಆಚರಣೆಗಳನ್ನು ಇಂದಿಗೂ ಕೂಡ ಇಲ್ಲಿ ಮಾಡಲಾಗುತ್ತದೆ. ಇಲ್ಲಿಯೆ ಕುಳಿತು ಪುರಂದರದಾಸರು ಸ್ಂಗೀತಗಳನ್ನು ಸಂಯೋಜಿಸಿದ್ದರು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Dr Murali Mohan Gurram

ಪುರಾತನ ಸೇತುವೆ:

ಪುರಾತನ ಸೇತುವೆ:

ಪುರಂದರದಾಸ ಮಂಟಪದ ದಕ್ಷಿಣ ದಿಕ್ಕಿಗೆ ಈ ಪುರಾತನ ಸೇತುವೆಯನ್ನು ಕಾಣಬಹುದು. ಭಾಗಶಃ ನಾಶ ಹೊಂದಿರುವ ಈ ಸೇತುವೆಯು ಅಂದಿನ ಜನರ ಅಭಿವೃದ್ಧಿಪರ ಕಾಳಜಿಯನ್ನು ಸೂಚಿಸುತ್ತದೆ. ತುಂಗಭದ್ರಾ ನದಿಯು ಎರಡು ಸೀಳುಗಳಲ್ಲಿ ಹರಿಯುತ್ತ ಮುಂದೆ ಒಂದಾಗಿ ದ್ವೀಪವನ್ನು ನಿರ್ಮಿಸಿ ಅದಕ್ಕೆ ಸಂಪರ್ಕ ಸಾಧಿಸಲು ಈ ಸೇತುವೆಯ ನಿರ್ಮಾಣವಾಗಿದೆ ಎಂದು ಹೇಳಬಹುದು.

ಚಂದ್ರಮೌಳೀಶ್ವರ ದೇವಾಲಯ:

ಚಂದ್ರಮೌಳೀಶ್ವರ ದೇವಾಲಯ:

ತುಂಗಭದ್ರಾ ಉತ್ತರದ ನದಿ ತಟದ ರಿಶಿಮುಖ ದ್ವೀಪದಲ್ಲಿ ಚಂದ್ರಮೌಳೀಶ್ವರ ದೇವಾಲಯವನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯವಿದ್ದ ದಿನಗಳಲ್ಲಿ ಇದೊಂದು ಪ್ರಮುಖವಾಗಿ ಪೂಜಿಸಲ್ಪಡುವ ದೇವಾಲಯವಾಗಿತ್ತು. ಆದರೆ ಪ್ರಸ್ತುತ, ಈ ಪಾಳು ಬಿದ್ದ ದೇವಾಲಯದ ಸುತ್ತಮುತ್ತಲು ಗಿಡ ಬಳ್ಳಿಗಳು ಯಥೇಚ್ಚವಾಗಿ ಬೆಳೆದಿದ್ದು, ಪ್ರವೇಶಿಸಲು ಕಷ್ಟಕರವಾಗಿದೆ. ಅಲ್ಲದೆ ತುಂಗಭದ್ರಾ ನದಿಯು ಹೊರಹಾಕಿದ ಅಪಾರವಾದ ಮರಳಿನ ರಾಶಿ ದ್ವೀಪದ ಮೇಳೆ ಇದಿರುವುದರಿಂದ ಶಿಥಿಲಗೊಳ್ಳುವ ಅವಸ್ಥೆಯಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ದೇವಸ್ಥಾನ.

ಚಿತ್ರಕೃಪೆ: hampi.in

ಕೋದಂಡರಾಮನ ದೇವಾಲಯ:

ಕೋದಂಡರಾಮನ ದೇವಾಲಯ:

ನದಿಗೆ ಎದುರಾಭಿಮುಖವಾಗಿ ನೆಲೆಸಿರುವ ಈ ದೇವಾಲಯವು ಸರಳವಾಗಿ ಕಂಡರೂ ಧಾರ್ಮಿಕವಾಗಿ ಬಹಳ ಮಹತ್ವವನ್ನು ಪಡೆದಿದೆ. ಸ್ಥಳ ಪುರಾಣದ ಪ್ರಕಾರ, ಈ ಒಂದು ಸ್ಥಳದಲ್ಲೆ ರಾಮನು ವಾಲಿಯನ್ನು ವಧಿಸಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ್ದನು. ದೇವಾಲಯದ ಎದುರಿಗಿರುವ ಕೊಳದ ಜಾಗವು ಭೇಟಿ ನೀಡುವ ಭಕ್ತಾದಿಗಳಿಗೆ ಪವಿತ್ರವಾಗಿದೆ. ವಾಸ್ತುಶಿಲ್ಪ ದೃಷ್ಟಿಯಿಂದ ಅಷ್ಟೊಂದು ಮಹತ್ವವಿಲ್ಲವಾದರೂ ಧಾರ್ಮಿಕ ದೃಷ್ಟಿಯಿಂದ ಮುಖ್ಯವಾದ ದೇವಾಲಯ ಇದಾಗಿದೆ. ಕಾಣುತ್ತಿರುವುದು ಸಾಂದರ್ಭಿಕ ವರ್ಣಚಿತ್ರ.

ಚಿತ್ರಕೃಪೆ: Ayswaryak

ಬಡವಲಿಂಗ:

ಬಡವಲಿಂಗ:

ಇದು ಹಂಪಿಯಲ್ಲಿರುವ ಏಕಶಿಲೆಯ ಅತಿ ದೊಡ್ಡ ಶಿವಲಿಂಗವಾಗಿದೆ. ನರಸಿಂಹ ಪ್ರತಿಮೆಯ ತಾಣದ ಪಕ್ಕದಲ್ಲೆ ಇರುವ ಒಂದು ಕೊಠಡಿಯಲ್ಲಿ ಈ ಶಿವಲಿಂಗವನ್ನು ಕಾಣಬಹುದು. ನೀರಿನ ಮಾರ್ಗವು ಈ ಕೊಠಡಿಯ ಮೂಲಕ ಸಾಗು ಹೋಗುವ ಹಾಗೆ ಮಾಡಿರುವುದರಿಂದ ಯಾವಾಗಲೂ ಇದು ನೀರಿನಿಂದ ಆವೃತವಾಗಿರುತ್ತದೆ.

ಚಿತ್ರಕೃಪೆ: Dey.sandip

ಏಕಶಿಲಾ ಬಸವಣ್ಣ:

ಏಕಶಿಲಾ ಬಸವಣ್ಣ:

ಮುಖ್ಯ ಬಜಾರ್ ನ ಪೂರ್ವ ತುದಿಯಲ್ಲಿ ಈ ವಿಶೇಷವಾದ ರಚನೆಯನ್ನು ಕಾಣಬಹುದು. ಸ್ಥಳೀಯವಾಗಿ ಯೆಡೂರು ಬಸವಣ್ಣ ಅಥವಾ ನಂದಿ ಎಂದು ಕರೆಯಲ್ಪಡುವ ಈ ದೊಡ್ಡ ಏಕಶಿಲಾ ಕುಳಿತ ಎತ್ತಿನ ವಿಗ್ರಹವನ್ನು ಎರಡಂತಸ್ತುಳ್ಳ ತೆರೆದ ಮಂಟಪದಲ್ಲಿ ಕಾಣಬಹುದು.

ಚಿತ್ರಕೃಪೆ: Nvamsi76

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X