ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

Written by:
Published: Monday, January 30, 2017, 10:29 [IST]
Share this on your social network:
   Facebook Twitter Google+ Pin it  Comments

ಕರ್ನಾಟಕದಲ್ಲಿ ಮಂಚೂಣಿಯಲ್ಲಿರುವ ಮೊದಲ ಐದು ಅತ್ಯುತ್ತಮ ಪಕ್ಷಿಧಾಮಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ ಗುಡವಿ ಪಕ್ಷಿಧಾಮ. ನೀವು ನಿಸರ್ಗಪ್ರಿಯರಾಗಿದ್ದರೆ, ಸದಾ ಶಾಂತಿಯಿಂದ ಕೂಡಿರುವ ಅಹ್ಲಾದಕರ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುವವರಾಗಿದ್ದರೆ ಅದಕ್ಕೂ ಮಿಗಿಲಾಗಿ ಹಕ್ಕಿಗಳ ಚಿಲಿಪಿಲಿ ಕಲರವದಿಂದ ಉತ್ಸಾಹ ಪಡೆಯುವವರಾಗಿದ್ದರೆ ಈ ಪಕ್ಷಿಧಾಮಕ್ಕೆ ಭೇಟಿ ನೀಡಲೇಬೇಕು.

ಈ ಪಕ್ಷಿಧಾಮವು ಸಾಕಷ್ಟು ವಿಶೇಷವಾಗಿದ್ದು ನಯನಮನೋಹರ ದೃಶ್ಯಾವಳಿಗಳಿಂದ ಸಂಪದ್ಭರಿತವಾಗಿದೆ. ಪ್ರಶಾಂತವಾದ ಕೆರೆ ಅದರ ಸುತ್ತಮುತ್ತಲಿನ ದಂಡೆಗಳ ಮೇಲೆ ಸೊಂಪಾಗಿ ಬೆಳೆದ ಗಿಡ-ಮರ ಬಳ್ಳಿಗಳ ರಾಶಿ, ತಾಜಾ ಅನುಭವ ನೀಡುವ ಗಾಳಿ, ಎಲ್ಲೆಡೆ ಕಿವಿಯಲ್ಲಿ ಇಂಪಾಗಿ ಕೇಳಿಬರುವ ಚಿಲಿಪಿಲಿ ನಾದ, ಗದ್ದಲದಿಂದ ಮುಕ್ತ ಪ್ರದೇಶ, ಎಲ್ಲವೂ ಸೇರಿ ನಿಮ್ಮ ಒತ್ತಡವನ್ನು ಕ್ಷಣದಲ್ಲೆ ಕಡಿದು ಓಡಿಸಿಬಿಡುತ್ತದೆ.

ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಚಿತ್ರಕೃಪೆ: Chitra sivakumar

ಸಾಮಾನ್ಯವಾಗಿ ಚಳಿಗಾಲ ಹಾಗೂ ಮಳೆಗಾಲಗಳು ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ ಎನ್ನಲಾಗುತ್ತದೆ. ಇಲ್ಲಿರುವ ನೈಸರ್ಗಿಕ ಕೆರೆಯು ಋತುಮಾನಾಧಾರಿತ ಕೆರೆಯಾಗಿದ್ದು ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ತುಂಬಿರುತ್ತದೆ. ಇನ್ನೂ ಕೆರೆಯ ಪಕ್ಕದಲ್ಲೆ ಇರುವ ಹಸಿರಿನ ವನ್ಯರಾಶಿ ರೆಕ್ಕೆ ವೀರರ ಪ್ರಮುಖ ಆ ಕರ್ಷಣೆ.

ಸಂತಾನಾಭಿವೃದ್ಧಿಗೆಂದು ಎಲ್ಲೆಲ್ಲಿಂದಲೊ ಇಲ್ಲಿಗೆ ಹಕ್ಕಿಗಳು ಬರುತ್ತವೆ. ಇವು ಇಲ್ಲಿ ತಮ್ಮ ಸಹಜ ಚಟುವಟಿಕೆಗಳಲ್ಲಿ ವ್ಯವಹರಿಸುವುದನ್ನು ನೋಡುವುದೆ ಒಂದು ಸುಂದರ ಅನುಭವ. ಯಾರ ಹಂಗೂ ಇಲ್ಲದೆ ತಮ್ಮೊಳಗೆ ಗುಂಪು ಗುಂಪಾಗಿ ಸ್ವಲ್ಪವೂ ಜಗಳ ತಂಟೆಗಳಿಲ್ಲದೆ ಕಾಲ ಕಳೆಯುವ ಈ ಹಕ್ಕಿಗಳನ್ನು ನೋಡಿದಾಗ, ಮನುಷ್ಯ ಯಾಕೆ ಸಂಘಜೀವಿಯಾಗಿದ್ದರೂ ಅದಕ್ಕೆ ಪೂರ್ಣ ನ್ಯಾಯ ಒದಗಿಸುತ್ತಿಲ್ಲ ಎಂಬ ಪ್ರಶ್ನೆ ಕಾಡಬಹುದು.

ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಚಿತ್ರಕೃಪೆ: PJeganathan

ಈ ಪಕ್ಷಿಧಾಮದಲ್ಲಿ ಕಳೆದ ಬಾರಿ ಸರ್ವೇಯೊಂದನ್ನು ಕೈಗೊಂಡಾಗ ತಿಳಿದು ಬಂದಿರುವ ಅಂಶವೆಂದರೆ, ಇಲ್ಲಿ ಒಟ್ಟು 48 ವಿವಿಧ ಕುಟುಂಬಗಳಿಗೆ ಸೇರಿದ ಸುಮಾರು 217 ಬಗೆಯ ಪಕ್ಷಿ ಪ್ರಬೇಧಗಳು ಕಂಡುಬಂದಿವೆ. ಇವುಗಳಲ್ಲಿ ವಲಸೆ ಬಂದ ಪಕ್ಷಿ ಪ್ರಬೇಧಗಳೂ ಸಾಕಷ್ಟಿವೆ. ಬಣ್ಣ ಬಣ್ಣದೆ ರೆಕ್ಕೆ-ಕೊಕ್ಕುಗಳುಳ್ಳ ಈ ಸುಂದರ ಪಕ್ಷಿಗಳನ್ನು ನೋಡಲೆಂದೆ ಅನೇಕ ಪಕ್ಷಿ ವೀಕ್ಷಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪಕ್ಷಿ ವೀಕ್ಷಕ ಹಾಗೂ ಛಾಯಾಗ್ರಾಹಕ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಲ್ಲಿ ಪ್ಲಾಟ್ ಫಾರ್ಮ್ ಒಂದನ್ನು ನಿರ್ಮಿಸಲಾಗಿದ್ದು ಆ ಮೂಲಕ ಪಕ್ಷಿಗಳನ್ನು ಬಲು ನಿಕಟವಾಗಿ ಅವುಗಳ ನೈಜ ಹಾಗೂ ಸ್ವಾಭಾವಿಕ ವಾತಾವರಣದಲ್ಲಿ ಕಾಣಬಹುದು. ಅಲ್ಲದೆ ಸುತ್ತಲಿನ ಪ್ರಾಕೃತಿಕ ಸೌಂದರ್ಯವು ಸೊಗಸಾಗಿರುವುದರಿಂದ ಮನಸ್ಸಿಗೆ ಪ್ರಸನ್ನತೆಯ ಅನುಭವವಾದರೂ ತಪ್ಪಿಲ್ಲ.

ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಪಕ್ಷಿಧಾಮಕ್ಕೆ ಪ್ರವೇಶ ಪಥ, ಚಿತ್ರಕೃಪೆ: PJeganathan

ಗುಡವಿ ಎಂಬುದು ಒಂದು ಹಳ್ಳಿಯಾಗಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿದೆ. ಸೊರಬದಿಂದ ಬನವಾಸಿ ರಸ್ತೆಯ ಮಾರ್ಗದಲ್ಲಿ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿ ಗುಡವಿ ಗ್ರಾಮವಿದೆ. ಸೊರಬದಿಂದ ಬಸ್ಸುಗಳು ದೊರೆಯುತ್ತವೆ. ಇಲ್ಲವಾದಲ್ಲಿ ಬಾಡಿಗೆ ಕಾರಿನ ಮುಲಕವಾಗಿಯೂ ಸಾಗರ ಅಥವಾ ಶಿವಮೊಗ್ಗದಿಂದ ಗುಡವಿಗೆ ತೆರಳಬಹುದಾಗಿದೆ.

ನೆನಪಿರಲಿ, ಗುಡವಿಯಲ್ಲಿ ತಂಗಲು ವ್ಯವಸ್ಥೆಯಿಲ್ಲ. ಆ ಕಾರಣ, ನೀವು ದೂರದಿಂದ ಬರುತ್ತಿರುವವರಾಗಿದ್ದರೆ ಶಿವಮೊಗ್ಗ ಅಥವಾ ಸಾಗರದಲ್ಲಿ ನೆಲೆಸಬಹುದು. ಗುಡವಿಯು ಶಿವಮೊಗ್ಗದಿಂದ 115 ಕಿ.ಮೀ, ಸಾಗರದಿಂದ 41 ಕಿ.ಮೀ ಹಾಗೂ ಬೆಂಗಳೂರಿನಿಂದ 375 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಪಕ್ಷಿಧಾಮ ಬೆಳಿಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ಮಾತ್ರ ತೆರೆದಿದ್ದು ನಿಗದಿತ ಪ್ರವೇಶ ಶುಲ್ಕವನ್ನೊಳಗೊಂಡಿದೆ.

ರಂಗನತಿಟ್ಟು, ಇಲ್ಲಿ ಸಿಗುವ ಆನಂದವೆ ಬೇರೆ!

ಈ ಸುಂದರ ಪಕ್ಷಿಧಾಮಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ ಜೂನ್ ನಿಂದ ನವಂಬರ್ ಮಧ್ಯದ ಸಮಯ. ಹಾಗಾಗಿ ನಿಮ್ಮ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಈ ಅದ್ಭುತ ಧಾಮದ ಹೆಸರನ್ನು ಪಟ್ಟಿ ಮಾಡಿಟ್ಟುಕೊಂಡು ಮುಂಬರುವ ಜೂನ್ ನಂತರದ ಸಮಯದಲ್ಲಿ ಒಂದೊಮ್ಮೆ ಅನುವು ಮಾಡಿಕೊಂಡು ಖಂಡಿತವಾಗಿಯೂ ಈ ಪುಟ್ಟ ಪಕ್ಷಿಧಾಮಕ್ಕೊಂದು ವಿಸಿಟ್ ಹಾಕಿಬಿಡಿ.

English summary

Gudavi : One of the finest Bird Sanctuaries of Karnataka

Gudavi Bird Sanctuary is located in the Soraba taluk of Sagara Subdivision in the Indian state of Karnataka. Gudavi Bird Sanctuary is located on the Banavasi Road in Gudavi of Sorab Taluk which is 16 km from Sorab town.
Please Wait while comments are loading...