Search
  • Follow NativePlanet
Share
» »ದಕ್ಷಿಣ ಭಾರತದ ಸುಪ್ರಸಿದ್ಧ ದೇವಾಲಯಗಳು

ದಕ್ಷಿಣ ಭಾರತದ ಸುಪ್ರಸಿದ್ಧ ದೇವಾಲಯಗಳು

By Vijay

ಜ್ಞಾನಿಗಳು ಹೇಳುವಂತೆ ಎಲ್ಲರ ಹೃದಯದಲ್ಲಿ ಭಗವಂತ ನೆಲೆಸಿರುವನಾದರೂ ನಾವು ದೇವಾಲಯಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಏಕೆಂದರೆ ಕೆಲವು ಕ್ಷೇತ್ರ ಮಹಿಮೆಗಳೆ ಹಾಗಿರುತ್ತವೆ. ಇದರಂತೆ ದೇವಸ್ಥಾನಗಳೂ ಕೂಡ ಧನಾತ್ಮಕ ಕಂಪನಗಳನ್ನು (ಪಾಸಿಟಿವ್ ವೈಬ್ರೇಷನ್ಸ್) ಒಳಗೊಂಡಿರುವುದರಿಂದ ಅವುಗಳಿಗೆ ಭೇಟಿ ನೀಡಿದಾಗ ಆ ಕಂಪನಗಳು ನಮ್ಮ ಮನದಾಳದಲ್ಲಿ ಪಸರಿಸಿ ನಮ್ಮಲ್ಲಿ ಧನಾತ್ಮಕತೆ, ಆತ್ಮವಿಶ್ವಾಸ ಹಾಗು ಆನಂದವನ್ನು ವೃದ್ಧಿಸುತ್ತವೆ. ಇನ್ನೂ ಕೆಲವು ಕ್ಷೇತ್ರಗಳ ಹೆಸರನ್ನು ಕೇಳಿದ ಮಾತ್ರವೆ ತಕ್ಷಣ ನಮ್ಮಲ್ಲಿ ಹಲವರಿಗೆ ರೋಮಾಂಚನ ಆಗುವುದು ಸಾಮಾನ್ಯ. ಇವುಗಳ ಮಹಿಮೆಯೆ ಹಾಗೆ.

ದಕ್ಷಿಣ ಭಾರತವು ಸಾಕಷ್ಟು ಸಂಖ್ಯೆಯ ಪವಿತ್ರವಾದ ಕ್ಷೇತ್ರ ದೇವಾಲಯಗಳಿಗೆ ಮನೆಯಾಗಿದೆ. ಹಲವು ಪವಿತ್ರ ಧಾರ್ಮಿಕ ಯಾತ್ರಾ ಕ್ಷೇತ್ರಗಳನ್ನು ಈ ಭಾಗದಲ್ಲಿ ಕಾಣಬಹುದು. ಈ ದೇವಾಲಯಗಳು ಕುಟುಂಬ ಸಮೇತ ಹೊರಡಬಹುದಾದ ಪ್ರವಾಸಿ ಕ್ಷೇತ್ರಗಳಾಗಿಯೂ ಹೆಸರುವಾಸಿಯಾಗಿವೆ. ದಕ್ಷಿಣ ಭಾರತದ ಅಂತಹ ಕೆಲವು ಸುಪ್ರಸಿದ್ಧ ದೇವಾಲಯಗಳ ಪರಿಚಯ ಮಾಡಿಸುತ್ತದೆ ಈ ಲೇಖನ.

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಕರ್ನಾಟಕ:

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಕರ್ನಾಟಕ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಎಂಬ ಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಸರ್ಪ ದೋಷ ನಿವಾರಣೆಗಾಗಿ ಈ ದೇವಾಲಯ ದೇಶದಲ್ಲೆ ಪ್ರಖ್ಯಾತವಾಗಿದೆ. ದೇಶದ ನಾನಾ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರ್ಪ ದೋಷದಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಸರ್ಪಗಳ ದೇವರಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಈ ದೇವಸ್ಥಾನದ ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸುಬ್ರಹ್ಮಣ್ಯ ರಸ್ತೆ ಈ ಗ್ರಾಮಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಇದು ಸುಮಾರು 12 ಕಿ.ಮೀ ದೂರದಲ್ಲಿದೆ. ಅಲ್ಲದೆ ಸುಬ್ರಮನ್ಯದಲ್ಲಿ ಬಸ್ ನಿಲ್ದಾಣವೂ ಸಹ ಇದ್ದು ಬೆಂಗಳೂರು ಹಾಗು ಸುತ್ತಮುತ್ತಲಿನ ಊರುಗಳಿಂದ ಸಾಕಷ್ಟು ಬಸ್ಸುಗಳು ಇಲ್ಲಿಗೆ ಬರುತ್ತಿರುತ್ತವೆ.

ಚಿತ್ರಕೃಪೆ: Soorajna

ಶ್ರೀಕ್ಷೇತ್ರ ಧರ್ಮಸ್ಥಳ, ಕರ್ನಾಟಕ:

ಶ್ರೀಕ್ಷೇತ್ರ ಧರ್ಮಸ್ಥಳ, ಕರ್ನಾಟಕ:

800 ವರ್ಷಗಳಷ್ಟು ಪುರಾತನವಾದ ಈ ಧಾರ್ಮಿಕ ಯಾತ್ರಾ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಈ ದೇವಸ್ಥಾನದ ವಿಶೇಷತೆಯೆಂದರೆ ಇಲ್ಲಿನ ಅರ್ಚಕರು ಶಿವಳ್ಳಿ ಬ್ರಾಹ್ಮಣ ಕುಲದವರಾಗಿದ್ದು, ಆಡಳಿತವು ಜೈನ ಬಂಟ ಕುಟುಂಬದವರಿಂದ ನಿರ್ವಹಿಸಲ್ಪಡುತ್ತದೆ. ಇಲ್ಲಿ ಪೂಜಿಸಲಾಗುವ ಮುಖ್ಯ ದೇವರು ಶಿವನ ಅವತಾರವಾದ ಮಂಜುನಾಥ ಸ್ವಾಮಿಯನ್ನು. ಈ ಕ್ಷೇತ್ರವು ಮತ್ತೊಂದು ಸುಪ್ರಸಿದ್ಧ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಿಂದ ಕೇವಲ 55 ಕಿ.ಮೀ ಗಳಷ್ಟು ದೂರದಲ್ಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮಂಜುನಾಥನ ದರುಶನ ಕೋರಿ ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Vedamurthy J

ಮೂಕಾಂಬಿಕಾದೇವಿ ದೇವಸ್ಥಾನ, ಕರ್ನಾಟಕ:

ಮೂಕಾಂಬಿಕಾದೇವಿ ದೇವಸ್ಥಾನ, ಕರ್ನಾಟಕ:

ಈ ಸುಪ್ರಸಿದ್ಧ ಮೂಕಾಂಬಿಕಾದೇವಿ ದೇವಸ್ಥಾನವು ಉಡುಪಿ ಜಿಲ್ಲೆಯ ಕೊಲ್ಲೂರು ಎಂಬ ಪಟ್ಟಣದಲ್ಲಿ ನೆಲೆಸಿದೆ. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವ ಈ ಧಾರ್ಮಿಕ ಕ್ಷೇತ್ರಕ್ಕೆ ತಲುಪಲು ಉಡುಪಿ ಹಾಗು ಮಂಗಳೂರಿನಿಂದ ಬಸ್ಸುಗಳು ಲಭ್ಯವಿದೆ. ದಂತಕಥೆಯ ಪ್ರಕಾರ, ಹಿಂದೊಮ್ಮೆ ಕೌಮಾಸುರನೆಂಬ ದೈತ್ಯನು ಈ ಪ್ರದೇಶದಲ್ಲಿ ನೆಲೆಸಿದ್ದು ತನ್ನ ಕ್ರೂರತನದಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದ್ದನು. ಈ ದೈತ್ಯನು ಸ್ತ್ರೀಯೊಬ್ಬಳಿಂದ ಸಂಹರಿಸಲ್ಪಡುತ್ತಾನೆ ಎಂದು ಹೇಳಲಾಗಿತ್ತು ಹಾಗು ಅದರಂತೆ ಪಾರ್ವತಿದೇವಿ(ಮೂಕಾಂಬಿಕೆ)ಯಿಂದ ವಧಿಸಲ್ಪಟ್ಟನು.

ಚಿತ್ರಕೃಪೆ: Syam

ಉಡುಪಿ ಶ್ರೀಕೃಷ್ಣ ಮಠ, ಕರ್ನಾಟಕ:

ಉಡುಪಿ ಶ್ರೀಕೃಷ್ಣ ಮಠ, ಕರ್ನಾಟಕ:

ಕರ್ನಾಟಕದ ಉಡುಪಿ ಜಿಲ್ಲೆಯ ಉಡುಪಿ ಪಟ್ಟಣದಲ್ಲಿರುವ ಶ್ರೀ ಕೃಷ್ಣನಿಗೆ ಸಮರ್ಪಿತವಾದ ಈ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಈ ದೇವಸ್ಥಾನದ ಆವರಣದಲ್ಲಿ ಇತರೆ ಹತ್ತು ಹಲವು ಪುಟ್ಟ ದೇಗುಲಗಳನ್ನು ಕಾಣಬಹುದು. ವೈಷ್ಣವ ಸಮುದಾಯದ ದ್ವೈತ ತತ್ವವನ್ನು ಪ್ರತಿಪಾದಿಸಿದ ಶ್ರೀ ಮಾಧ್ವಾಚಾರ್ಯರಿಂದ ಹದಿಮೂರನೆಯ ಶತಮಾನದಲ್ಲಿ ಈ ಮಠವು ಸ್ಥಾಪಿಸಲ್ಪಟ್ಟಿದೆ. ಇಲ್ಲಿರುವ ಶ್ರೀಕೃಷ್ನನ ವಿಗ್ರಹವು ಮಾಧ್ವಾಚಾರ್ಯರಿಗೆ ಗೋಪಿಚಂದನದಲ್ಲಿ ದೊರ್ಕಿತ್ತೆಂದು ನಂಬಲಾಗಿದೆ.

ಚಿತ್ರಕೃಪೆ: Vaikoovery

ಬೇಲೂರು ಚೆನ್ನಕೇಶವ ದೇವಸ್ಥಾನ, ಕರ್ನಾಟಕ:

ಬೇಲೂರು ಚೆನ್ನಕೇಶವ ದೇವಸ್ಥಾನ, ಕರ್ನಾಟಕ:

ಮೂಲತಃ ವಿಜಯನಾರಾಯಣ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಈ ಚೆನ್ನಕೇಶವ ದೇವಸ್ಥಾನವು ಬೇಲೂರಿನ ಯಗಚಿ ನದಿ ತಟದಲ್ಲಿ ನಿರ್ಮಿತವಾದ ಸುಪ್ರಸಿದ್ಧ ಪ್ರಾಚೀನ ದೇವಾಲಯವಾಗಿದೆ. ಶಿಲ್ಪಕಲೆಗಳಿಗೆ ಹೆಸರುವಾಸಿಯಾದ ಬೇಲೂರು ಒಂದು ಅದ್ಭುತ ಪ್ರವಾಸಿ ಸ್ಥಳವಾಗಿದ್ದು ಹಾಸನ ನಗರದಿಂದ ಕೇವಲ 40 ಕಿ.ಮೀ ಹಾಗು ಬೆಂಗಳೂರಿನಿಂದ 220 ಕಿ.ಮೀ ಗಳಷ್ಟು ದೂರದಲ್ಲಿದೆ. ವಿಷ್ಣುವಿನ ಅವತಾರವಾದ ಚೆನ್ನಕೇಶವನ ಈ ದೇವಸ್ಥಾನವು ತನ್ನ ಅತ್ಯದ್ಭುತವಾದ ಶಿಲ್ಪ ಕಲೆಗೆ ಬಹು ಪ್ರಸಿದ್ಧಿಯ್ತನ್ನು ಪಡೆದಿದೆ.

ಚಿತ್ರಕೃಪೆ: Dineshkannambadi

ಮಹಾಬಲೇಶ್ವರ ದೇವಸ್ಥಾನ, ಕರ್ನಾಟಕ:

ಮಹಾಬಲೇಶ್ವರ ದೇವಸ್ಥಾನ, ಕರ್ನಾಟಕ:

ಪಶ್ಚಿಮ ಘಟ್ಟದ ಕರಾವಳಿ ತೀರದಲ್ಲಿ ನೆಲೆಸಿರುವ ಪುಟ್ಟ ದೇವಾಲಯ ಪಟ್ಟಣ ಗೋಕರ್ಣವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿರುವ ಮಹಾಬಲೇಶ್ವರ ದೇವಾಲಯವು ಪ್ರಸಿದ್ಧ ಶಿವ ದೇವಾಲಯವಾಗಿದ್ದು ಶಿವನ ಆತ್ಮಲಿಂಗವನ್ನು ಇಲ್ಲಿ ಪೂಜಿಸಲಾಗುತ್ತದೆ. ಅಲ್ಲದೆ ನಾಗಾಭರಣ ಎಂದು ಕರೆಯಲ್ಪಡುವ ಶಿವನ ವಿಗ್ರಹವನ್ನೂ ಇಲ್ಲಿ ಕಾಣಬಹುದು.

ಚಿತ್ರಕೃಪೆ: Nvvchar

ಮುರುಡೇಶ್ವರ ದೇವಸ್ಥಾನ, ಕರ್ನಾಟಕ:

ಮುರುಡೇಶ್ವರ ದೇವಸ್ಥಾನ, ಕರ್ನಾಟಕ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಶಿವನಿಗೆ ಸಮರ್ಪಿತವಾದ ಮುರುಡೇಶ್ವರ ದೇವಸ್ಥಾನವು ಒಂದು ಸುಪ್ರಸಿದ್ಧ ಪ್ರವಾಸಿ ಹಾಗು ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಜಗತ್ತಿನಲ್ಲೆ ಶಿವನ ಎರಡನೆಯ ಅತಿ ದೊಡ್ಡ ವಿಗ್ರಹ ಹೊಂದಿರುವುದರಿಂದಲೂ ಈ ತಾಣ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಅಸಂಖ್ಯಾತ ಭಕ್ತಾದಿಗಳು, ಪ್ರವಾಸಿಗರನ್ನು ಈ ಕ್ಷೇತ್ರ ಕಾಣುತ್ತದೆ.

ಚಿತ್ರಕೃಪೆ: Manjunath Doddamani

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಕರ್ನಾಟಕ:

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಕರ್ನಾಟಕ:

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಎಂಬಲ್ಲಿ ಈ ಅನ್ನಪೂರ್ಣೇಶ್ವರಿಯ ದೇವಸ್ಥಾನವಿದೆ. ಚಿಕ್ಕಮಗಳೂರು ನಗರದಿಂದ 100 ಕಿ.ಮೀ ದೂರವಿರುವ ಈ ಶ್ರೀಕ್ಷೇತ್ರವು ಭದ್ರಾ ನದಿ ತಟದ ಮೇಲೆ ನೆಲೆಸಿದೆ. ಹಿಂದು ನಂಬಿಕೆಯ ಪ್ರಕಾರ, ಅನ್ನ ಅಥವಾ ಊಟದ ದೇವತೆಯಾದ ಅನ್ನಪೂರ್ಣೇಶ್ವರಿಯ ವಿಗ್ರಹ ಇಲ್ಲಿದ್ದು, ಇದನ್ನು ಆದಿ ಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ್ದಾಗಿ ಹೇಳಲಾಗಿದೆ. ಹೆಸರಿಗೆ ತಕ್ಕ ಹಾಗೆ ಈ ಕ್ಷೇತ್ರದಲ್ಲಿ ಯಾವುದೆ ಜಾತಿ ಮತ ಬೇಧವಿಲ್ಲದೆ ಭೇಟಿ ನೀಡುವ ಸರ್ವರಿಗೂ ಪ್ರತಿನಿತ್ಯ ಮಹಾಪ್ರಸಾದವಾಗಿ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.

ಚಿತ್ರಕೃಪೆ: Gnanapiti

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕರ್ನಾಟಕ:

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕರ್ನಾಟಕ:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಕಟೀಲು ಕ್ಷೇತ್ರವು ದುರ್ಗಾಪರಮೇಶ್ವರಿಯ ದೇವಸ್ಥಾನದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ದುರ್ಗಾಪರಮೇಶ್ವರಿಯು ಅರುಣಾಸುರ ಎಂಬ ಭಯಂಕರ ರಾಕ್ಷಸನನ್ನು ಸಂಹರಿಸಲು ಭ್ರಮರ ಅಥವಾ ದುಂಬಿಗಳ ರೂಪವನ್ನು ತಾಳಿ ಲೋಕವನ್ನು ಆ ದೈತ್ಯನ ವಶದಿಂದ ಮುಕ್ತಮಾಡಿ ಕೊನೆಗೆ ನಂದಿನಿ ನದಿಯ ಮಧ್ಯದಲ್ಲಿ ಕಲ್ಲು ಲಿಂಗದ ರೂಪದಲ್ಲಿ ನೆಲೆಸಿದಳೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.

ಚಿತ್ರಕೃಪೆ: Premkudva

ಕಂಚಿ ಕಾಮಾಕ್ಷಿ ಅಮ್ಮನವರ ದೇವಸ್ಥಾನ, ತಮಿಳುನಾಡು:

ಕಂಚಿ ಕಾಮಾಕ್ಷಿ ಅಮ್ಮನವರ ದೇವಸ್ಥಾನ, ತಮಿಳುನಾಡು:

ಪಾರ್ವತಿ ದೇವಿಯ ಅವತಾರಗಳಲ್ಲೊಂದಾದ ಕಾಮಾಕ್ಷಿ ದೇವಿಗೆ ಸಮರ್ಪಿತವಾದ ಕಂಚಿಯ ಈ ಸುಪ್ರಸಿದ್ಧ ದೇವಸ್ಥಾನವು ಒಂದು ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಈ ದೇವಸ್ಥಾನವು ಬಹುತೇಕವಾಗಿ ಪಲ್ಲವರಿಂದ ಸುಮಾರು ಆರನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಯೋಗ ಮುದ್ರೆ ಹೊತ್ತು ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಕಾಮಾಕ್ಷಿ ದೇವಿಯ ಮೂಲ ವಿಗ್ರಹವು ಶಾಂತಿ ಹಾಗು ಸಮೃದ್ಧತೆಯನ್ನು ಸೂಚಿಸುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುವ ಈ ದೇವಸ್ಥಾನವು ರಾಜಧಾನಿ ಚೆನ್ನೈ ನಗರದಿಂದ 72 ಕಿ.ಮೀ ಗಳಷ್ಟು ದೂರದಲ್ಲಿದೆ.

ಮದುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನ, ತಮಿಳುನಾಡು:

ಮದುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನ, ತಮಿಳುನಾಡು:

ತಮಿಳುನಾಡಿನ ಮದುರೈ ಪಟ್ಟಣದಲ್ಲಿರುವ ಮೀನಾಕ್ಷಿ ಅಮ್ಮನವರ ಈ ದೇವಸ್ಥಾನವು ಐತಿಹಾಸಿಕ ಪ್ರಸಿದ್ಧ ಪುರಾತನ ದೇವಾಲಯವಾಗಿದ್ದು, ವೈಗೈ ನದಿ ತಟದಲ್ಲಿ ನೆಲೆಸಿದೆ. ಈ ದೇವಸ್ಥಾನವು ಪಾರ್ವತಿ ದೇವಿಯ ಅವತಾರವಾದ ಮೀನಾಕ್ಷಿ ದೇವಿಗೆ ಸಮರ್ಪಿತವಾಗಿದ್ದು ಅವಳ ಪತಿಯಾದ ಶಿವನನ್ನು ಇಲ್ಲಿ ಸುಂದರೇಶ್ವರರ್ ರೂಪದಲ್ಲಿ ಪೂಜಿಸಲಾಗುತ್ತದೆ. 2500 ವರ್ಷಗಳಷ್ಟು ಪುರಾತನವಾದ ಮದುರೈ ನಗರಕ್ಕೆ ಜೀವಕಳೆ ತುಂಬಿದೆ ಈ ದೇವಸ್ಥಾನ. ವಾರ್ಷಿಕವಾಗಿ ಹತ್ತು ದಿನಗಳ ಕಾಲ ಮೀನಾಕ್ಷಿ ತಿರುಕಲ್ಯಾಣಂ ಮಹೋತ್ಸವವನ್ನು ಇಲ್ಲಿ ಏಪ್ರಿಲ್ ಹಾಗು ಮೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಏನಿಲ್ಲವೆಂದರೂ ಸುಮಾರು ಹತ್ತು ಲಕ್ಷಗಳಷ್ಟು ಜನರು ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Jorge Royan

ಶ್ರೀರಂಗನಾಥ ಸ್ವಾಮಿ ದೇವಾಲಯ, ತಮಿಳುನಾಡು:

ಶ್ರೀರಂಗನಾಥ ಸ್ವಾಮಿ ದೇವಾಲಯ, ತಮಿಳುನಾಡು:

ಒರಗಿದ ಭಂಗಿಯಲ್ಲಿರುವ ಶ್ರೀ ವೆಂಕಟೇಶ್ವರ ಅರ್ಥಾತ್ ವಿಷ್ಣುವಿನ ವಿಗ್ರಹವಿರುವ ಪವಿತ್ರ ಧಾರ್ಮಿಕ ಯಾತ್ರಾ ಕ್ಷೇತ್ರ ಶ್ರೀರಂಗಂ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿದೆ. ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ಈ ಸುಪ್ರಸಿದ್ಧ ವೈಷ್ಣವ ದೇವಾಲಯವು ಶ್ರೀಮಂತ ದಂತಕಥೆ ಹಾಗು ಐತಿಹಾಸಿಕ ಪುರಾಣವನ್ನು ಹೊಂದಿದೆ. ಕಾರ್ಯನಿರತವಿರುವ ಭಾರತದ ಅತಿ ದೊಡ್ಡ ದೇವಾಲಯ ಇದಾಗಿದೆ. ಕೇವಲ ದೇಸೀಯರಲ್ಲದೆ ವಿದೇಶಿಯರು ಹೆಚ್ಚಾಗಿ ಭೇಟಿ ನೀಡಲ್ಪಡುವ ಕ್ಷೇತ್ರ ಇದಾಗಿದೆ.

ಚಿತ್ರಕೃಪೆ: Nagarjun Kandukuru

ಪಳನಿ ಮುರುಗನ್ ದೇವಾಲಯ, ತಮಿಳುನಾಡು:

ಪಳನಿ ಮುರುಗನ್ ದೇವಾಲಯ, ತಮಿಳುನಾಡು:

ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಎಂಬ ಹೆಸರುಗಳಿಂದಲೂ ಕರೆಯಲ್ಪಡುವ ಮುರುಗನ್ ದೇವರಿಗೆ ಸಮರ್ಪಿತವಾದ ದೇವಸ್ಥಾನವು ತಮಿಳುನಾಡಿನ ಪಳನಿ ಎಂಬಲ್ಲಿ ಬೆಟ್ಟದ ಮೇಲೆ ನೆಲೆಸಿದೆ. ಕೋಯಮತ್ತೂರಿನ ನೈರುತ್ಯಕ್ಕೆ 100 ಕಿ.ಮೀ ಗಳ ಅಂತರದಲ್ಲಿರುವ ಈ ಕ್ಷೇತ್ರವು ಮದುರೈ ನಗರದ ಈಶಾನ್ಯಕ್ಕೆ ಹೆಚ್ಚು ಕಡಿಮೆ ಅಷ್ಟೆ ಅಂತರದಲ್ಲಿದೆ. ಈ ಕ್ಷೇತ್ರವೂ ಕೂಡ ಪ್ರಸಿದ್ಧವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ.

ಚಿತ್ರಕೃಪೆ: Noblevmy

ರಾಮನಾಥಸ್ವಾಮಿ ದೇವಾಲಯ, ತಮಿಳುನಾಡು:

ರಾಮನಾಥಸ್ವಾಮಿ ದೇವಾಲಯ, ತಮಿಳುನಾಡು:

ಶಿವನಿಗೆ ಮುಡಿಪಾದ ರಾಮನಾಥಸ್ವಾಮಿ ದೇವಾಲಯವು ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾದ ರಾಮೇಶ್ವರಂನಲ್ಲಿದೆ. ಈ ದೇವಸ್ಥಾನವು 275 ಪಾಡಲ್ ಪೆಟ್ರ ಸ್ಥಳಗಳ ಪೈಕಿ ಒಂದಾಗಿದೆ. ಸ್ಮಾರ್ಥ, ಶೈವ ಹಾಗು ವೈಷ್ಣವ ಈ ಮೂರು ಸಮುದಾಯದವರ ಪವಿತ್ರ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ ದ್ವೀಪ ಪಟ್ಟಣ ರಾಮೇಶ್ವರಂನ ಈ ದೇವಸ್ಥಾನ. ಅಲ್ಲದೆ ಪವಿತ್ರವಾದ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಇದೂ ಕೂಡ ಒಂದು.

ಚಿತ್ರಕೃಪೆ: SPK

ತಿಲ್ಲೈ ನಟರಾಜರ್ ದೇವಸ್ಥಾನ, ತಮಿಳುನಾಡು:

ತಿಲ್ಲೈ ನಟರಾಜರ್ ದೇವಸ್ಥಾನ, ತಮಿಳುನಾಡು:

ಕಡಲೂರ್ ಜಿಲ್ಲೆಯ ಚಿದಂಬರಂನಲ್ಲಿರುವ ತಿಲ್ಲೈ ನಟರಾಜರ್ ದೇವಸ್ಥಾನವು ಶೈವರಿಗೆ ಅತಿ ಮಂಚೂಣಿಯಲ್ಲಿರುವ ದೇವಸ್ಥಾನವಾಗಿದೆ. ನೃತ್ಯ ದೇವರು ನಟರಾಜ ಅರ್ಥಾತ್ ಶಿವನ ಸುಂದರವಾದ ವಿಗ್ರಹ ಇಲ್ಲಿದೆ. ಚಿದಂಬರಂ ಪಂಚಭೂತ ಸ್ಥಳಗಳ ಪೈಕಿ ಒಂದಾಗಿದ್ದು, ಆಕಾಶವನ್ನು ಪ್ರತಿನಿಧಿಸುತ್ತದೆ.

ಬೃಹದೇಶ್ವರ ದೇವಸ್ಥಾನ, ತಮಿಳುನಾಡು:

ಬೃಹದೇಶ್ವರ ದೇವಸ್ಥಾನ, ತಮಿಳುನಾಡು:

ಯುನೆಸ್ಕೊ ಮಾನ್ಯತೆ ಪಡೆದಿರುವ ಶಿವನಿಗೆ ಸಮರ್ಪಿತವಾದ ಬೃಹದೇಶ್ವರ ದೇವಸ್ಥಾನವು ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿದೆ. ಭಾರತದ ದೊಡ್ಡ ದೇವಸ್ಥಾನಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ವಾಸ್ತುಶಿಲ್ಪ ದೃಷ್ಟಿಯಿಂದ ಭಾರತದ ಅತಿ ಶ್ರೀಮಂತ ದೇವಾಲಯವೂ ಆಗಿದೆ. ಪ್ರತಿ ವರ್ಷ ಅನೇಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಸ್ಥಾನ ಒಂದು ಪ್ರಖ್ಯಾತ ಐತಿಹಾಸಿಕ ಪ್ರವಾಸಿ ಸ್ಥಳವಾಗಿದೆ.

ಚಿತ್ರಕೃಪೆ: Sri Ram

ಆದಿ ಕುಂಬೇಶ್ವರ ದೇವಾಲಯ, ಕುಂಭಕೋಣಂ, ತಮಿಳುನಾಡು:

ಆದಿ ಕುಂಬೇಶ್ವರ ದೇವಾಲಯ, ಕುಂಭಕೋಣಂ, ತಮಿಳುನಾಡು:

ಕನಿಷ್ಟ 1300 ವರ್ಷಗಳ ಹಿಂದೆ ನಿರ್ಮಿಸಲಾದ ಕುಂಭೇಶ್ವರರ್ ದೇವಾಲಯದಲ್ಲಿ ಶಿವನನ್ನು ಆದಿ ಕುಂಬೇಶ್ವರರನ ರೂಪದಲ್ಲಿ ಆರಾಧಿಸಲಾಗುತ್ತದೆ. ಏಳನೆಯ ಶತಮಾನದಲ್ಲಿ ಚೋಳರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಏಳನೆಯ ಶತಮಾನದಲ್ಲಿ ಬದುಕಿದ್ದ ತಮಿಳುನಾಡಿನ ಖ್ಯಾತ ಕವಿ ಹಾಗೂ ಸಂತರಾದ ಸೈವನಯನಾರರು ಬರೆದ ಸ್ತುತಿಗಳಲ್ಲಿಯೂ ಈ ದೇವಾಲಯದ ಉಲ್ಲೇಖವಿದೆ. ಒಂಭತ್ತು ಅಂತಸ್ತುಗಳಷ್ಟು ಎತ್ತರವಾದ (ಸುಮಾರು 125 ಅಡಿ) ರಾಜಗೋಪುರ ಅಥವಾ ಮಹಾಪ್ರವೇಶದ್ವಾರ ಇತರ ದೇವಾಲಯಗಳನ್ನು ಕುಬ್ಜವಾಗಿಸಿದೆ. ಇದು ಕುಂಭಕೋಣಂ ನಗರದಲ್ಲಿಯೇ ಅತಿದೊಡ್ಡ ಶಿವದೇವಾಲಯವಾಗಿದೆ.

ಚಿತ್ರಕೃಪೆ: Karthikeyan Raghuraman

ಶಬರಿಮಲೆ ಅಯ್ಯಪ್ಪ ದೇವಸ್ಥಾನ, ಕೇರಳ:

ಶಬರಿಮಲೆ ಅಯ್ಯಪ್ಪ ದೇವಸ್ಥಾನ, ಕೇರಳ:

ಸ್ವಾಮಿ ಅಯ್ಯಪ್ಪನಿಗೆ ಸಮರ್ಪಿತವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವು ಕೇರಳದಲ್ಲಿ ಕಂಡುಬರುವ ಶಾಸ್ತ ದೇವಾಲಯಗಳ ಪೈಕಿ ಬಹು ಪ್ರಮುಖವಾದ ದೇವಾಲಯವಾಗಿದೆ. ಇದೊಂದು ಪವಿತ್ರವಾದ ವಾರ್ಷಿಕ ಹಿಂದು ಯಾತ್ರಾ ಕ್ಷೇತ್ರವಾಗಿದ್ದು ಜಗತ್ತಿನ ಅತಿ ದೊಡ್ಡ ಯಾತ್ರಾಕ್ಷೇತ್ರಗಳ ಪೈಕಿ ಒಂದಾಗಿದೆ. ಅಯ್ಯಪ್ಪನ ಈ ಪವಿತ್ರ ದೇವಾಲಯವು ಕೇರಳ ರಾಜ್ಯದ ಪಥನಾಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತ್ತಿನ ಶಬರಿ ಬೆಟ್ಟ (ಮಲೈ)ದ ತುದಿಯಲ್ಲಿ ನೆಲೆಸಿದೆ.

ಚಿತ್ರಕೃಪೆ: AnjanaMenon

ಗುರುವಾಯೂರ್, ಕೇರಳ:

ಗುರುವಾಯೂರ್, ಕೇರಳ:

ತ್ರಿಸ್ಸೂರ್ ಜಿಲ್ಲೆಯಲ್ಲಿರುವ ಕಳೆ ತುಂಬಿದ ಪಟ್ಟಣ ಗುರುವಾಯೂರ್. ಗುರುವಾಯೂರು ಸ್ಥಳವು ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನ ಹಾಗೂ ಭಗವಾನ್ ಶ್ರೀ ಮಹಾ ವಿಷ್ಣುವಿನ ತವರು ಎಂದೇ ಗುರುತಿಸಲ್ಪಟ್ಟಿದೆ, ಕೇರಳದಲ್ಲಿ ಹಲವಾರು ಯಾತ್ರಾಸ್ಥಳಗಳಿದ್ದು ಅವುಗಳಲ್ಲಿ ಗುರುವಾಯೂರು ಕೂಡಾ ಅತ್ಯಂತ ಪ್ರಸಿದ್ಧವಾದ ಯಾತ್ರಾಸ್ಥಳ ಎನಿಸಿದೆ. ಇಲ್ಲಿ ಭಕ್ತಾದಿಗಳ ಮಹಾಪೂರವೇ ಹರಿದುಬರುತ್ತದೆ. ಗುರುವಾಯೂರು ಎಂಬ ಹೆಸರು ಮೂರು ಶಬ್ದಗಳ ಸಂಯೋಜನೆ ಯಾಗಿದ್ದು ಮೂರು ಅರ್ಥಗಳಿಂದ ಕೂಡಿದೆ. 'ಗುರು' ಎಂದರೆ ಗುರು ಬೃಹಸ್ಪತಿ, 'ವಾಯು' ಈ ಪದವು ಗಾಳಿ ದೇವತೆ ಎಂಬ ಅರ್ಥವನ್ನು ಹೊಂದಿದ್ದು ಇನ್ನು 'ಉರ್' ಎಂದರೆ ಮಲಯಾಳಂ ನಲ್ಲಿ ಭೂಮಿ, ವಸುಂಧರೆ ಎಂಬ ಅರ್ಥವನ್ನು ಕೊಡುತ್ತದೆ.

ಚಿತ್ರಕೃಪೆ: RanjithSiji

ಶ್ರೀ ಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರಂ, ಕೇರಳ:

ಶ್ರೀ ಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರಂ, ಕೇರಳ:

ತಿರುವನಂತಪುರಂ ಜಿಲ್ಲೆಯ ಹೃದಯ ಭಾಗದಲ್ಲಿ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವಿದೆ. ಇದು ಶ್ರೀ ವಿಷ್ಣುವಿನ ದೇವಸ್ಥಾನವಾಗಿದೆ. ಈ ದೇವಾಲಯದ ಆಡಳಿತವನ್ನು ತಿರುವಾಂಕೂರಿನ ಶ್ರೀಮಂತ ರಾಜ ಮನೆತನದವರಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿರುವ ಪದ್ಮನಾಭ ಸ್ವಾಮಿ ವಿಗ್ರಹವು ಪ್ರಮುಖ ಆಕರ್ಷಣೆಯಾಗಿದೆ. ಮಹಾ ವಿಷ್ಣು ಸಹಸ್ರ ತಲೆಯಿರುವ, ಹೆಡೆಯೆತ್ತಿರುವ ಕಾಳಿಂಗ ಸರ್ಪದ ಮೇಲೆ ವಿರಾಜಮಾನವಾಗಿ ಮಲಗಿರುವ ಮಹಾ ವಿಷ್ಣುವಿನ ಮೂರ್ತಿ ಇಲ್ಲಿನ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದು ತಿರುವನಂತಪುರ ನಗರದ ಕೀರ್ತಿಯನ್ನು ಹೆಚ್ಚಿಸಿದೆ. ವಿಷ್ಣುವಿನ ಪಕ್ಕದಲ್ಲಿ ವಿಷ್ಣುವಿನ ಪತ್ನಿ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳನ್ನು ಕಾಣಬಹುದು.

ತಿರುಮಲ ವೆಂಕಟೇಶ್ವರ ದೇವಾಲಯ, ಆಂಧ್ರ ಪ್ರದೇಶ:

ತಿರುಮಲ ವೆಂಕಟೇಶ್ವರ ದೇವಾಲಯ, ಆಂಧ್ರ ಪ್ರದೇಶ:

ತಿರುಪತಿ ಬಳಿಯಿರುವ ತಿರುಮಲ ಬೆಟ್ಟ ಪಟ್ಟಣದ ವೆಂಕಟೇಶ್ವರ ದೇವಾಲಯವು ಭಾರತದಲ್ಲೆ ಎರಡನೆಯ ಶ್ರೀಮಂತ ದೇವಾಲಯವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ರಾಜ್ಯದ ಚಿತ್ತೂರ್ ಜಿಲ್ಲೆಯಲ್ಲಿರುವ ಈ ಶ್ರೀಕ್ಷೇತ್ರವು ರಾಜಧಾನಿ ಹೈದರಾಬಾದ್ ನಗರದಿಂದ 600 ಕಿ.ಮೀ, ಚೆನ್ನೈ ನಗರದಿಂದ 138 ಕಿ.ಮೀ ಹಾಗು ಬೆಂಗಳೂರಿನಿಂದ 291 ಕಿ.ಮೀ ಗಳ ಅಂತರದಲ್ಲಿದೆ. ಏಳು ಬೆಟ್ಟಗಳ ಒಡೆಯ ವೆಂಕಟೇಶ್ವರನ ಈ ದೇವಸ್ಥಾನಕ್ಕೆ ಪ್ರತಿನಿತ್ಯ ಏನಿಲ್ಲವೆಂದರೂ 50,000 ದಿಂದ ಹಿಡಿದು 100000 ದ ವರೆಗೆ ಜನರು ಭೇಟಿ ನೀಡುತ್ತಾರೆ. ಇದು ಪ್ರಪಂಚದಲ್ಲೆ ಅತಿ ಹೆಚ್ಚು ಭೇಟಿ ನಿಡಲ್ಪಟ್ಟ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ವಾರ್ಷಿಕವಾಗಿ ಜರುಗುವ ಬ್ರಹ್ಮೋತ್ಸವ ರೀತಿಯ ಉತ್ಸವ ಸಮಯದಲ್ಲಂತೂ ಈ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ 500000 ಕ್ಕೂ ಮೀರುತ್ತದೆ.

ಚಿತ್ರಕೃಪೆ: Raj srikanth800

ಶ್ರೀಶೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಆಂಧ್ರ ಪ್ರದೇಶ:

ಶ್ರೀಶೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಆಂಧ್ರ ಪ್ರದೇಶ:

ಪವಿತ್ರವಾದ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಶಿವನ ಅವತಾರ ಮಂಜುನಾಥ ಸ್ವಾಮಿಯ ಈ ದೇವಸ್ಥಾನವು ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿದೆ. 275 ಪಾಡಲ್ ಪೆಟ್ರ ಸ್ಥಳಗಳ ಪೈಕಿ ಒಂದಾಗಿರುವ ಈ ಶ್ರೀಕ್ಷೇತ್ರವು ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಂದ ಭೇಟಿ ನೀಡಲ್ಪಡುವ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಿದೆ.

ಸ್ಥಳಪುರಾಣ: ಒಂದೊಮ್ಮೆ ಗಣಪತಿ ಹಾಗು ಕಾರ್ತಿಕೇಯರ ಮಧ್ಯೆ ಯಾರು ಮೊದಲು ಮದುವೆ ಮಾಡಿಕೊಳ್ಳಬೇಕೆಂಬ ಗೊಂದಲ ಏರ್ಪಟ್ಟಾಗ ಅದಕ್ಕೆ ಪರಿಹಾರ್ಥವಾಗಿ ಭಗವಂತ ಶಿವನು ಯಾರು ಮೊದಲು ಭೂಮಿಯ ಪ್ರದಕ್ಷಿಣೆ ಹಾಕುವರೊ ಅವರು ಮೊದಲು ಮದುವೆಯಾಗಬೇಕೆಂದು ಆದೇಶಿಸಿದನು. ಅದರಂತೆ ಕಾರ್ತಿಕೇಯನು ತನ್ನ ವಾಹನವಾದ ನವೀಲಿನ ಮೂಲಕ ವೇಗವಾಗಿ ಭೂಪ್ರದಕ್ಷಿಣೆಗೆ ತೆರಳಿದನು. ಆದರೆ ಗಣಪನು ಸಹನೆಯಿಂದ ಇದ್ದು ಶಾಸ್ತ್ರದಲ್ಲಿ ಹೇಳಿರುವಂತೆ ತಾಯಿ ತಂದೆಯರ ಪ್ರದಕ್ಷಿಣೆ ಹಾಕಿ ಭೂಪ್ರದಕ್ಷಿಣೆಯನ್ನು ಮೊದಲು ಸಂಪೂರ್ಣಗೊಳಿಸಿ ರಿದ್ಧಿ, ಸಿದ್ಧಿ ಹಾಗು ಬುದ್ಧಿಯರನ್ನು ವರಿಸಿದನು. ಇತ್ತ ಕಾರ್ತಿಕೇಯ ಮರಳಿದ ಮೇಲೆ ನಡೆದ ಸಂಗತಿಯನ್ನು ತಿಳಿದು ಮುನಿಸಿಕೊಂಡು ಬ್ರಹ್ಮಚಾರಿಯಾಗಿ ಕ್ರವುಂಜ ಬೆಟ್ಟದ ಮೇಲೆ ಏಕಾಂಗಿಯಾಗಿ ನೆಲೆಸಲು ತೆರಳಿದನು. ಇದನ್ನು ತಿಳಿದ ಶಿವ ಪಾರ್ವತಿಯರು ಅವನನ್ನು ಸಮಾಧಾನಪಡಿಸಲು ತೆರಳಿದರು. ಹೀಗೆ ಶಿವ ಪಾರ್ವತಿಯರು ನೆಲೆಸಿದ ಸ್ಥಳವೆ ಇಂದು ಶ್ರೀಶೈಲಂ ಆಗಿದೆ. ನಂಬಿಕೆಯಂತೆ ಅವಮಾಸ್ಯೆ ದಿನದಂದು ಶಿವನು ಹಾಗು ಪೌರ್ಣಮಿಯ ದಿನದಂದು ಪಾರ್ವತಿಯು ಕಾರ್ತಿಕೇಯನನ್ನು ಭೇಟಿ ಮಾಡುತ್ತಾರೆ.

ಭದ್ರಾಚಲಂ, ಆಂಧ್ರ ಪ್ರದೇಶ:

ಭದ್ರಾಚಲಂ, ಆಂಧ್ರ ಪ್ರದೇಶ:

ಶ್ರೀರಾಮಚಂದ್ರನ ದೇವಾಲಯವಿರುವ ಭದ್ರಾಚಲಂ ದೇವಸ್ಥಾನವನ್ನು ಅಯೋಧ್ಯೆಯ ನಂತರ ಅತಿ ಪವಿತ್ರವಾದ ದೇವಾಲಯವಾಗಿ ಕಾಣಲಾಗುತ್ತದೆ. ಆಂಧ್ರದ ಖಮ್ಮಂ ಜಿಲ್ಲೆಯಲ್ಲಿರುವ ಭದ್ರಾಚಲಂ ಶ್ರೀಕ್ಷೇತ್ರವು ತಿರುಪತಿಯ ನಂತರ ಅತಿ ಹೆಚ್ಚಾಗಿ ಭೇಟಿ ನೀಡಲ್ಪಡುವ ಒಂದು ಪ್ರಮುಖವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನದಲ್ಲಿರುವ ರಾಮನ ಮೂಲ ವಿಗ್ರಹವು ವಿಶೀಷ್ಟವಾದ ರೂಪದಲ್ಲಿದೆ. ನಾಲ್ಕು ಕೈಗಳನ್ನು ಹೊಂದಿರುವ ರಾಮನ ವಿಗ್ರಹವು ಪದ್ಮಾಸನದಲ್ಲಿ ಕುಳಿತಿದ್ದು ನೋಡಲು ಮನಮೋಹಕವಾಗಿದೆ. ರಾಮನ ಎಡಭಾಗದಲ್ಲಿ ಸೀತೆಯಿದ್ದು ಅವಳ ಎಡಭಾಗದಲ್ಲಿ ಲಕ್ಷಮಣನಿದ್ದಾನೆ. ಲಕ್ಷ್ಮಣನನ್ನು ವೈಕುಂಠ ರಾಮನೆಂದು ಕರೆಯಲಾಗುತ್ತದೆ.

ಚಿತ್ರಕೃಪೆ: Adityamadhav83

ಶ್ರೀಕಾಳಹಸ್ತಿ, ಆಂಧ್ರ ಪ್ರದೇಶ:

ಶ್ರೀಕಾಳಹಸ್ತಿ, ಆಂಧ್ರ ಪ್ರದೇಶ:

ದಕ್ಷಿಣ ಭಾರತದ ಜನಪ್ರಿಯ ಶಿವ ದೇವಸ್ಥಾನಗಳ ಪೈಕಿ ಒಂದಾಗಿರುವ ಶ್ರೀಕಾಳಹಸ್ತಿ ದೇವಾಲಯವು ಆಂಧ್ರದ ತಿರುಪತಿ ಬಳಿಯಿರುವ ಶ್ರೀಕಾಳಹಸ್ತಿ ಎಂಬ ಕ್ಷೇತ್ರದಲ್ಲಿ ಸ್ವರ್ಣಮುಖಿ ನದಿ ತಟದ ಮೇಲೆ ನೆಲೆಸಿದೆ. ಬೇಡರ ಕಣ್ಣಪ್ಪನು ತನ್ನ ಎರಡು ಕಣ್ಣುಗಳನ್ನು ತ್ಯಾಗ ಮಾಡಿದ ಕ್ಷೇತ್ರ ಇದೆಂದು ನಂಬಲಾಗಿದೆ. ತಿರುಪತಿಯಿಂದ 36 ಕಿ.ಮೀ ದೂರದಲ್ಲಿರುವ ಶ್ರೀಕಾಳಹಸ್ತಿ ಶಿವಲಿಂಗವು ಪಂಚಭೂತ ಸ್ಥಳಗಳ ಪೈಕಿ ಒಂದಾಗಿದ್ದು ವಾಯುಲಿಂಗವನ್ನು ಪ್ರತಿನಿಧಿಸುತ್ತದೆ. ದೇವಸ್ಥಾನದ ಒಳಭಾಗವನ್ನಿ ಐದನೇಯ ಶತಮಾನದಲ್ಲಿ ನಿರ್ಮಿಸಲಾಗಿದ್ದು ಹೊರಭಾಗವನ್ನು ಚೋಳ ಹಾಗು ವಿಜಯನಗರ ಅರಸುಗಳಿಂದ ಸುಮಾರು 12 ನೇಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಹಲವು ದಂತಕಥೆಗಳನ್ನು ಒಳಗೊಂಡಿರುವ ಈ ಶ್ರೀಕ್ಷೇತ್ರವು ಒಂದು ಅದ್ಭುತವಾದ ಧಾರ್ಮಿಕ ಪ್ರವಾಸಿ ಯಾತ್ರಾ ಕೇಂದ್ರವಾಗಿದೆ.

ಚಿತ್ರಕೃಪೆ: Krishna Kumar Subramanian

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X