Search
  • Follow NativePlanet
Share
» »ದೇವಿಗೆ ಮುಡಿಪಾದ ಕರ್ನಾಟಕದ ಸುಂದರ ದೇವಾಲಯಗಳು

ದೇವಿಗೆ ಮುಡಿಪಾದ ಕರ್ನಾಟಕದ ಸುಂದರ ದೇವಾಲಯಗಳು

By Vijay

ಹಿಂದಿನ ಕೆಲವು ಲೇಖನಗಳಲ್ಲಿ ತಮಿಳುನಾಡಿನಲ್ಲಿರುವ ಪ್ರಮುಖ ದೇವಿಯ ದೇವಾಲಯಗಳ ಕುರಿತು ಈಗಾಗಲೆ ಒಂದು ಲೇಖನ ಮೂಡಿ ಬಂದಿದೆ. ಹೀಗೆ ದೇವಿಯ ಪ್ರಮುಖ ದೇವಾಲಯಗಳ ಕುರಿತು ಅದರ ಮುಂದುವರೆದ ಭಾಗವಾಗಿ ಪ್ರಸ್ತುತ ಲೇಖನವು ಕರ್ನಾಟಕದಲ್ಲಿ ಕಂಡುಬರುವ ಕೆಲವು ಪ್ರಮುಖ ದೇವಿಯ ದೇವಾಲಯಗಳ ಕುರಿತು ತಿಳಿಸುತ್ತದೆ.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ಪೈಕಿ ಒಂದಾದ ಕರ್ನಾಟಕದಲ್ಲಿಯೂ ಸಹ ಸಾಕಷ್ಟು ದೇವಾಲಯಗಳು, ಪುಣ್ಯ ಕ್ಷೇತ್ರಗಳು ಕಂಡುಬರುತ್ತವೆ. ಪ್ರತಿನಿತ್ಯ ಭಕ್ತಾದಿಗಳು/ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ತಮ್ಮ ಇಷ್ಟ ದೇವರ, ದೇವತೆಯರ ದರುಶನ ಬಯಸಿ ಈ ರಾಜ್ಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.

ವಿಶೇಷ ಲೇಖನ : ತಮಿಳುನಾಡಿನಲ್ಲಿರುವ ದೇವಿಯ ದೇವಾಲಯಗಳು

ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಪಾರ್ವತಿ, ಲಕ್ಷ್ಮಿ, ಸರಸ್ವತಿ, ದುರ್ಗೆ, ಭಗವತಿ ಹೀಗೆ ಹಲವಾರು ಮುಖ್ಯ ದೇವಿಯರ ದೇವಾಲಯಗಳನ್ನು ಹಾಗೂ ಅವರು ನೆಲೆಸಿರುವ ಶ್ರೀಕ್ಷೇತ್ರಗಳನ್ನು ಇಲ್ಲಿ ಕಾಣಬಹುದು. ಈ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಅಪಾರ.

ಹಾಗಾದರೆ, ಪ್ರಸ್ತುತ ಲೇಖನದ ಮೂಲಕ ಕರುನಾಡಿನಲ್ಲಿರುವ ಕೆಲವು ಮುಖ್ಯ ದೇವಿಯರ ದೇವಸ್ಥಾನಗಳ ಕುರಿತು ತಿಳಿಯಿರಿ ಹಾಗೂ ಸಮಯವಿದ್ದಾಗ ಈ ದೇವಸ್ಥಾನಗಳಿಗೆ ಖಂಡಿತವಾಗಿಯೂ ಭೇಟಿ ನೀಡಲು ಪ್ರಯತ್ನಿಸಿ. ಏಕೆಂದರೆ ನಂಬಿಕೆಯಂತೆ ಈ ದೇವಾಲಯಗಳಲ್ಲಿ ಭಕ್ತಿಯಿಂದ ಏನೇ ಕೇಳಿದರೂ ಆ ತಾಯಿ, ಜಗನ್ಮಾತೆಯು ಕರುಣಿಸದೆ ಇರಲಾರಳು ಎಂಬ ವಿಶ್ವಾಸವಿದೆ.

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಭೂಮಿ ದೇವಿ ದೇವಾಲಯ : ರಾಷ್ಟ್ರೀಯ ಹೆದ್ದಾರಿ 17, ಕರ್ನಾಟಕದ ಕರಾವಳಿ ಪ್ರದೇಶಗಳಗುಂಟ ಸಾಗಿ ಹೋಗುತ್ತದೆ ಹಾಗೂ ಈ ರಸ್ತೆಯಲ್ಲಿ ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಪ್ರವಾಸ ಮಾಡಿದರೆ ಆ ಅನುಭವವನ್ನು ಮರೆಯುವುದು ಸಾಧ್ಯವೆ ಇಲ್ಲ. ಸುಂದರ ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳು, ಶುಭ್ರವಾದ ನೀರಿನಿಂದ ಕೂಡಿದ ಕೆರೆ-ತೊರೆಗಳು, ಜಲಪಾತಗಳು ಮನಸ್ಸಿಗೆ ಮುದವನ್ನೀಡುತ್ತವೆ. ಕಾರವಾರ ಜಿಲ್ಲೆಯಲ್ಲಿರುವ ಚೆಂಡಿಯಾ ಎಂಬ ಗ್ರಾಮದಲ್ಲಿರುವ ಭೂಮಿ ದೇವಿಯ ಈ ದೇವಾಲಯವು ನಿಜಕ್ಕೂ ಅದ್ಭುತವಾದ ಅನುಭವವನ್ನು ಕರುಣಿಸುತ್ತದೆ. ಭೂಮಿ ದೇವಿಗೆ ಸಮರ್ಪಿತವಾದ ಈ ದೇವಾಲಯ ಚಿಕ್ಕದು ಹಾಗೂ ಅಷ್ಟೊಂದಾಗಿ ಬಹುತೇಕ ಯಾರಿಗೂ ಗೊತಿರದೆ ಇದ್ದದ್ದು. ಆದರೆ ಇದು ನೆಲೆಸಿರುವ ಆ ಸುಂದರ ಭೂಮಿ ಹಾಗೂ ಪ್ರಕೃತಿಯನ್ನು ಕಂಡಾಗ ಆಕೆಯ ಅವತಾರವೆ ಆದ ಈ ದೇವಿಯ ಗುಡಿಗೆ ಭೇಟಿ ನಿಡಲು ಮನಸ್ಸು ಖಂಡಿತ ನಿರಾಕರಿಸದು.

ಚಿತ್ರಕೃಪೆ: Lisa.davis

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಕುದ್ರೋಳಿ ಭಗವತಿ ದೇವಾಲಯ : ಮಂಗಳೂರು ನಗರದ ಹೃದಯ ಭಾಗದಲ್ಲಿ ಸುಮಾರು ಎರಡು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ದೇವಾಲಯ ಹಾಗೂ ಅದರ ಆವರಣವಿದೆ. ಇದು ಹಂಪನಕಟ್ಟೆ ಪ್ರದೇಶಕ್ಕೆ ಹತ್ತಿರವಾಗಿದೆ. ಈ ಭಗವತಿ ದೇವಿಯ ದೇವಾಲಯವು ಸಾವಿರಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾಗಿದ್ದು ಸಾಕಷ್ಟು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ನಡವಳಿ, ಭರಣಿ, ಕರ್ಕಾಟಕ ಸಂಕ್ರಮಣ, ಸಿಂಹ ಸಂಕ್ರಮಣ, ನವರಾತ್ರಿ ಹೀಗೆ ಹಲವಾರು ಉತ್ಸವಗಳನ್ನು ಆಯಾ ನಿರ್ದಿಷ್ಟ ದಿನಗಳಲ್ಲಿ ವರ್ಷಪೂರ್ತಿ ಆಚರಿಸಲಾಗುತ್ತದೆ. ವಿಶೇಷವಾಗಿ ಕಾಳಿಯಾಟ ಎಂಬ ವಿಶಿಷ್ಟ ಉತ್ಸವವನ್ನು ಪ್ರತಿ 25 ವರ್ಷಗಳಿಗೊಮ್ಮೆ ಅತಿ ಅದ್ದೂರಿ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: Anup256j

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ನಿಮಿಷಾಂಬಾ ದೇವಸ್ಥಾನ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ಕಾವೇರಿ ನದಿಯ ತಟದಲ್ಲಿದೆ ಈ ದೇವಿಯ ದೇವಸ್ಥಾನ. ಇಲ್ಲಿನ ಅಂಬಿಕಾ ದೇವಿಯು ಪಾರ್ವತಿಯ ಅವತಾರವಾಗಿದ್ದು ಅವಳಿಗಾಗಿ ಮುಡಿಪಾದ ದೇವಾಲಯ ಇದಾಗಿದೆ. ಇಲ್ಲಿನ ವಿಶೇಷತೆಯೆಂದರೆ ಈ ದೇವಿಯು ತನ್ನಲ್ಲಿ ಪ್ರಾರ್ಥಿಸುತ್ತ ಬಂದ ಭಕ್ತರ ತೊಂದರೆ-ತಾರ್ಪಣ್ಯಗಳನ್ನು ನಿಮಿಷ ಮಾತ್ರದಲ್ಲೆ ನಿವಾರಿಸುತ್ತಾಳೆ ಎಂಬ ನಂಬಿಕೆಯಿದೆ. ಆದ ಕಾರಣ ಈ ಅಂಬಿಕಾ ದೇವಿಯನ್ನು ನಿಮಿಷಾಂಬಿಕಾ ದೇವಿ ಎಂದು ಇಲ್ಲಿ ಕರೆಯುತ್ತಾರೆ.

ಚಿತ್ರಕೃಪೆ: wikipedia

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಸವದತ್ತಿ ಎಲ್ಲಮ್ಮನ ಗುಡಿ : ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದ್ದು, ಬೆಳಗಾವಿಯ ಪೂರ್ವ ದಿಕ್ಕಿಗೆ (ಹೆಚ್ಚು ಕಡಿಮೆ ಆಗ್ನೇಯ) ಸುಮಾರು 78 ಕಿ.ಮೀ ಗಳ ದೂರದಲ್ಲಿ ನೆಲೆಸಿದೆ. ಸುಗಂದವರ್ತಿ, ಸೌಗಂದಿಪುರ ಎಂದೂ ಕರೆಯಲ್ಪಡಿತ್ತಿದ್ದ ಇದು ರಟ್ಟ ವಂಶದ (875 -1230) ರಾಜಧಾನಿಯಾಗಿತ್ತು. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ/ ಎಲ್ಲಮನ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲಮಗುಡ್ಡ ಎಂದೂ ಕರೆಯಲ್ಪಡುವ ಈ ತಾಣಕ್ಕೆ ತೆರಳಲು ಬೆಳಗಾವಿಯಿಂದ ನಿರಂತರವಾಗಿ ಬಸ್ ಸೌಲಭ್ಯವಿದೆ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ : ಮಂಗಳೂರಿನ ಕದ್ರಿಯಲ್ಲಿರುವ ಈ ದೇವಸ್ಥಾನ ದುರ್ಗಾ ಮಾತೆಯ ಶಕ್ತಿ ರೂಪಕ್ಕೆ ಮುಡಿಪಾದ ದೇವಸ್ಥಾನವಾಗಿದೆ. ಪ್ರತಿನಿತ್ಯ ಸಕಾಷ್ಟು ಜನ ಭಕ್ತಾದಿಗಳು ಈ ದೇವಿಯ ದರುಶನ ಕೋರಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vaikoovery

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಮಹತ್ವ ಹಾಗೂ ಪ್ರಸಿದ್ಧಿಯನ್ನು ಪಡೆದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯವು ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಪೌರಾಣಿಕ ಕ್ಥೆಯಂತೆ, ಹಿಂದೆ ಇಲ್ಲಿ ಒಂದೊಮ್ಮೆ ಕ್ಷಾಮ ಉಂಟಾಗಿ ಜನರು ಕಷ್ಟ ಅನುಭವಿಸಹತ್ತಿದರು. ಇದನ್ನು ಜ್ಞಾನದೃಷ್ಟಿಯಿಂದ ಕಂಡ ಜಬಲಿ ಮಹರ್ಷಿಯು ಪ್ರದೇಶವನ್ನು ಮತ್ತೆ ಫಲವತ್ತಾಗಿ ಮಾಡಲು ಯೋಜಿಸಿ ಕಾಮಧೇನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದನು. ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಕಾಮಧೇನುವಿನ ಪುತ್ರಿಯಾದ ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ನಂದಿನಿಯು ಜಬಲಿ ಮಹರ್ಷಿ ಜತೆಗೆ ಭೂಲೋಕಕ್ಕೆ ಹೋಗಲು ಎಷ್ಟೆ ಬೇಡಿಕೊಂಡರೂ ನಿರಾಕರಿಸಿದಳು. ಇದರಿಂದ ಕೋಪಗೊಂಡ ಜಬಲಿ ಮಹರ್ಷಿಯು ಭೂಲೋಕಕ್ಕೆ ಬರಲೊಪ್ಪದ ನಂದಿನಿಯು ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪವಿತ್ತನು. ಶಾಪಕ್ಕೊಳಗಾದ ನಂದಿನಿಯು ತನ್ನ ತಪ್ಪಿನಿ ಅರಿವಾಗಿ ಮಹರ್ಷಿ ಜಬಲಿಗೆ ಕರುಣೆ ಮಾಡಿ ಶಾಪ ಹಿಂತೆಗೆದುಕೊಳ್ಳಬೇಕು ಇಲ್ಲವಾದರಲ್ಲಿ ಶಾಪ ವಿಮೋಚನೆಯನ್ನಾದರೂ ತಿಳಿಸಬೇಕೆಂದು ಬೇಡಿಕೊಂಡಳು.

ಚಿತ್ರಕೃಪೆ: Gopal Venkatesan

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಆಗ ಜಬಲಿ ಮಹರ್ಷಿಯು ನಿರಂತರವಾಗಿ ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಯನ್ನು ಆ ತಾಯಿಯೇ ತೋರಿಸುತ್ತಾಳೆ ಎಂದು ಹೇಳಿದನು. ನಂದಿನಿಯು ಅನಂತರ ದೇವಿಯನ್ನು ಪ್ರಾರ್ಥಿಸಲು, ದುರ್ಗಿಯು ಪ್ರತ್ಯಕ್ಷವಾಗಿ ಜಬಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು. ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹರ್ಷಿ ಜಬಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀರ್ವದಿಸಿದಳು. ಈ ರೀತಿಯಾಗಿ ನದಿಯ ಮಧ್ಯದಲ್ಲಿ ದೇವಿಯು ಹುಟ್ಟಿ ಇಂದು ಕಟೀಲು ಎಂಬ ಕ್ಷೇತ್ರದಿಂದ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Premkudva

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಮಾರಿಕಾಂಬ ದೇವಸ್ಥಾನ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಶ್ರೀ ಮಾರಿಕಾಂಬ ದೇವಸ್ಥಾನವು ಧಾರ್ಮಿಕ ಆಕರ್ಷಣೆಯುಳ್ಳ ಪ್ರವಾಸಿ ಕ್ಷೇತ್ರವಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ ಸುಪ್ರಸಿದ್ಧ ಮಾರಿಕಾಂಬೆಯ ಜಾತ್ರೆಯಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮಾರಿಕಾಂಬೆಯ ದೇವಸ್ಥಾನವು 17 ನೇಯ ಶತಮಾನದ್ದಾಗಿದ್ದು ಮುಖ್ಯವಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ದೇವಿಯನ್ನು ಆರಾಧಿಸುತ್ತಾರೆ. ಈ ಜಾತ್ರೆಯು ಕರ್ನಾಟಕದ ದೊಡ್ಡ ಜಾತ್ರೆಗಳ ಪೈಕಿ ಒಂದಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಪಕ್ಕದ ತಮಿಳುನಾಡು ಹಾಗು ಆಂಧ್ರಗಳಿಂದಲೂ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಾರೆ.

ಚಿತ್ರಕೃಪೆ: KA 31 news

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಅನ್ನಪೂರ್ಣೇಶ್ವರಿ ದೇವಸ್ಥಾನ : ದೇವತೆ ಅನ್ನಪೂರ್ಣೇಶ್ವರಿಯ ನಿಬ್ಬೆರಗಾಗಿಸುವ ದೇವಾಲಯವು ಹೊರನಾಡಿಗೆ ಸುಪ್ರಸಿದ್ಧ ಖ್ಯಾತಿಯನ್ನು ತಂದುಕೊಟ್ಟಿದೆ. ಜತೆಗೆ ನಿಸರ್ಗದ ವೈವಿಧ್ಯಮಯ ಅಚ್ಚರಿಯನ್ನು ನೋಡಬಯಸುವವರಿಗೆ ಹೊರನಾಡು ಸಾಕೆನ್ನುವಷ್ಟು ಆನಂದವನ್ನು ನೀಡುತ್ತದೆ. ಈ ಹಚ್ಚ ಹಸಿರಿನ ನಗರವು ಚಿಕ್ಕಮಗಳೂರಿನ ದಕ್ಷಿಣಕ್ಕೆ 100 ಕಿ.ಮೀ. ನಷ್ಟು ದೂರದ ರಮಣೀಯ ಮಲೆನಾಡಿನಲ್ಲಿದೆ. ಈ ಪ್ರದೇಶವು ದಟ್ಟವಾದ ಕಾಡಿನಿಂದ ಸುತ್ತುವರೆದಿರುವ ಪರಿಣಾಮ ಹೊರನಾಡಿನ ಸೌಂದರ್ಯಕ್ಕೆ ಪುಷ್ಟಿ ನೀಡಿದೆ.

ಚಿತ್ರಕೃಪೆ: Gnanapiti

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ನೈಸರ್ಗಿಕ ಸೌಂದರ್ಯವನ್ನು ಸವಿಯುವುದರೊಂದಿಗೆ ಇಲ್ಲಿನ ಪುರಾತನ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಪ್ರವಾಸಿಗರು ಬರುತ್ತಾರೆ. ದೇವಾಲಯದ ಅನ್ನಪೂರ್ಣೇಶ್ವರಿ ಮೂಲ ವಿಗ್ರಹವನ್ನು ಬಂಗಾರದಿಂದ ನಿರ್ಮಿಸಲಾಗಿದೆ. ಇಲ್ಲಿಗೆ ಭೇಟಿ ಕೊಡುವ ಭಕ್ತರಿಗೆ ಯಾವುದೇ ರೀತಿಯಲ್ಲಿ ಅನ್ನದ ಕೊರತೆ ಉಂಟಾಗುವುದಿಲ್ಲವೆಂಬ ನಂಬಿಕೆಯಿದೆ. ಪುರಾತನ ಮೂಲಗಳ ಪ್ರಕಾರ, ಒಮ್ಮೆ ಶಿವನು ಶಾಪಕ್ಕೊಳಗಾಗಿದ್ದಾಗ ಅನ್ನಪೂರ್ಣೇಶ್ವರಿ ದೇವಿಯ ಆಶೀರ್ವಾದದಿಂದ ಆ ಶಾಪವಿಮೋಚನೆಯಾಯಿತು ಎಂಬ ನಂಬಿಕೆ ಇಲ್ಲಿದೆ. ಈ ದೇವಾಲಯಕ್ಕೆ ಬರುವ ಎಲ್ಲ ಭಕ್ತಾದಿಗಳಿಗೂ ಅನ್ನಪ್ರಸಾದ ಮತ್ತು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ.

ಚಿತ್ರಕೃಪೆ: Gopal Venkatesan

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಬನಶಂಕರಿ ದೇವಸ್ಥಾನ : ಐತಿಹಾಸಿಕ ತಾಣವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಚೋಳಚಗುಡ್ಡದಲ್ಲಿರುವ ಬನಶಂಕರಿ ಅಮ್ಮನವರ ದೇವಸ್ಥಾನವು ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಬನಶಂಕರಿ ದೇವಿಗೆ ಮುಡಿಪಾದ ದೇವಸ್ಥಾನವಾಗಿದೆ. ಬಾದಾಮಿಯ ಸಾನಿಧ್ಯದಲ್ಲಿರುವ ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿದೆ. ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಲ್ಲಿ ಹೇಳಿರುವಂತೆ ಬನಶಂಕರಿಯಲ್ಲಿ ದುರ್ಗಮಾಸುರನೆಂಬ ರಾಕ್ಷಸನನ್ನು ಸಂಹಾರಿಸಿದ ದೇವಿ ಪಾರ್ವತಿಯ ಅವತಾರವಾದ ಚಾಲುಕ್ಯರ ಕುಲದೇವಿಯು ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವತೆ. ಈ ಬನಶಂಕರಿ ದೇವಾಲಯದಲ್ಲಿ ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ಕೊರೆಯಲಾಗಿದ್ದು ಆಕೆಯು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿ ಇರಲು ಪಾದದಡಿ ಸಿಲುಕಿರುವ ರಾಕ್ಷಸನನ್ನು ಸಹಾ ಕಾಣಬಹುದು. ದೇವಿಯು ತನ್ನ ಆಷ್ಟ ಕೈಗಳಲ್ಲಿ ತ್ರಿಶೂಲ, ಘಂಟೆ, ಕಮಲಾಪತ್ರ, ಡಮರುಗ, ಖಡ್ಗ ಮತ್ತು ಪವಿತ್ರ ವೇದ ಬರಹಗಳನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: G41rn8

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಈ ದೇವಾಲಯಕ್ಕೆ ಪುಷ್ಯಮಾಸವಾದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಭೇಟಿ ಕೊಟ್ಟರೆ ಪ್ರವಾಸಿಗರಿಗೆ ಇಲ್ಲಿನ ಸ್ಥಳೀಯರು ಆಯೋಜಿಸುವ ದೇವಾಲಯದ ರಥದ ಮೆರವಣಿಗೆಯಲ್ಲಿ ಪಾಲ್ಗೊಳ್ಳವ ಅವಕಾಶವಿರುತ್ತದೆ. ತಿಲಕಾರಣ್ಯದಲ್ಲಿ ನೆಲೆಸಿಹ ಈ ದೇವಾಲಯವು ಬನ ಮತ್ತು ಶಂಕರಿ ಎಂಬ ಎರಡು ಪದಗಳ ಸಂಯೋಜನೆಯಿಂದ ಹೆಸರನ್ನು ಪಡೆದುಕೊಂಡಿದೆ. ಬನ ಎಂದರೆ ಕಾಡು ಮತ್ತು ಶಂಕರಿ ಎಂದರೆ ಶಿವ ಪ್ರಿಯೆ ಅಥವಾ ಪಾರ್ವತಿಯನ್ನು ಬಣ್ಣಿಸುವ ರೀತಿ.

ಚಿತ್ರಕೃಪೆ: Nvvchar

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಚೌಡೇಶ್ವರಿ ದೇವಿ ದೇವಸ್ಥಾನ : ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರವಿರುವ ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ಅಮ್ಮನವರು ನೆಲೆಸಿರುವ ಜಿಲ್ಲೆಯಾಗಿದೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ಅಮ್ಮನವರ ದೇಗುಲವಿದೆ. ದಸರಿಘಟ್ಟ ಗ್ರಾಮವು ತಿಪಟೂರಿನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Bp

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಇನ್ನೂ ದಸರಿಘಟ್ಟದ ಚೌಡೇಶ್ವರಿಯ ದೇವಸ್ಥಾನವು ಅತಿ ಪ್ರಭಾವಶಾಲಿ ದೇವಸ್ಥಾನ ಎಂದು ಜನಮನ್ನಣೆ ಪಡೆದಿದ್ದು ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಅಕ್ಕ ಪಕ್ಕದ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಸಹ ಭಕ್ತರು ಈ ದೇವಿಯ ದರುಶನ ಕೋರಿ, ತಮ್ಮ ಸಮಸ್ಯೆ ಅಥವಾ ಪ್ರಶ್ನೆಗಳನ್ನು ನಿವೇದಿಸಲು ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Bpdg1989

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಈ ದೇವಿಯ ಕುರಿತು ರೋಚಕವಾದ ವಿಷಯವೊಂದಿದೆ. ಅದೇನೆಂದರೆ, ಲ್ಲಿರುವ ದೇವಿಯ ಪಂಚಲೋಹದ ವಿಗ್ರಹವು ಕೇಳಿದ ಪ್ರಶ್ನೆಗಳಿಗೆ/ಸಮಸ್ಯೆಗಳಿಗೆ ಉತ್ತರಿಸುತ್ತದೆ. ಎಲ್ಲರೂ ಸಮ್ಮಿಳಿತರಾದಾಗ ಗ್ರಾಮದ ಇಬ್ಬರು ಅನಕ್ಷರಸ್ಥರು ದೇವಿಯ ವಿಗ್ರಹವನ್ನು ಹಿಡಿದು ಮನಸೊ ಇಚ್ಛೆ ಬರೆಯುತ್ತಾರೆ. ನಂತರ ದೇವಸ್ಥಾನದ ಹಿರಿಯ ಅರ್ಚಕರು ಅಕ್ಕಿ ಹಿಟ್ಟಿನಲ್ಲಿ ಸುಲಲಿತವಾಗಿ ಕನ್ನಡದಲ್ಲಿ ಪರಿಹಾರವನ್ನು ಬರೆಯುತ್ತಾರೆ. ಕೇಳುಗರು ಯಾವುದೇ ಭಾಷೆಯಲ್ಲಿ ಬೇಕಾದರೂ ಸಮಸ್ಯೆಗಳನ್ನ, ಪ್ರಶ್ನೆಗಳನ್ನ ಮನದಲ್ಲಿ ನಿವೇದಿಸಿಕೊಳ್ಳಬಹುದು.

ಚಿತ್ರಕೃಪೆ: Bp

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಕಥೆ: ನೂರಾರು ವರ್ಷಗಳ ಹಿಂದೆ ಕರ್ನಾಟಕದ ರಾಯಚೂರು ಜಿಲ್ಲೆಯ ಬಳಿ ತುಂಗಾ ನದಿ ತೀರದಲ್ಲಿ ನಂದವರ ಎಂಬ ಸಾಮ್ರಾಜ್ಯವಿತ್ತು. ಇದನ್ನು ಪರಿಪಾಲಿಸುತ್ತಿದ್ದ ರಾಜನು ಶಕ್ತಿ ದೇವಿಯ ಉಪಾಸಕನಾಗಿದ್ದನು. ರಾಜನು ಶಕ್ತಿಯ ಉಪಾಸಕನಾಗಿದ್ದುದರಿಂದ ಅನೇಕ ಮಂತ್ರ ವಿದ್ಯೆಗಳು ಕರಗತವಾಗಿದ್ದವು. ಅದರಂತೆ ತನ್ನ ಮಂತ್ರ ಶಕ್ತಿಯಿಂದ ಪ್ರತಿ ನಿತ್ಯ ನಸುಕಿನ ನಾಲ್ಕು ಘಂಟೆಗೆ ಎದ್ದು ದೂರದ ಕಾಶಿಗೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿ ಸಾಯಂಕಾಲದ ಸಮಯದಂದು ಮತ್ತೆ ತನ್ನ ಸಾಮ್ರಾಜ್ಯಕ್ಕೆ ಮರಳುತ್ತಿದ್ದನು. ಪ್ರತಿನಿತ್ಯ ರಾಜನ ಅನುಪಸ್ಥಿತಿಯಿಂದ ಬೇಸರಗೊಂಡ ರಾಣಿಯು ಸಂಶಯಗೊಂಡು ರಾಜನಲ್ಲಿ ಒಮ್ಮೆ ಈ ಕುರಿತು ಪ್ರಶ್ನಿಸಿದಳು.

ಚಿತ್ರಕೃಪೆ: Bp

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಮನಸ್ಸಿಲ್ಲದ ಮನಸ್ಸಿನಿಂದ ರಾಜನು ರಾಣಿಯ ಒತ್ತಾಸೆಯ ಮೆರೆಗೆ ತನ್ನ ಪ್ರತಿನಿತ್ಯದ ಕಾರ್ಯ ಚಟುವಟಿಕೆಯ ಕುರಿತು ನಿಜ ಹೇಳಬೇಕಾಯಿತು. ನಿಜ ಸ್ಥಿತಿಯನ್ನರಿತ ರಾಣಿಗೆ ಇದನ್ನು ನಂಬುವುದು ಅಸಾಧ್ಯವಾಗಿ ತಾನು ಕಣ್ಣಾರೆ ಇದನ್ನು ನೋಡಬೇಕೆಂದು ಪಟ್ಟು ಹಿಡಿದಳು. ಕೊನೆಗೆ ರಾಣಿಯ ಅಪೇಕ್ಷೆಗೆ ರಾಜನು ತಲೆ ಬಾಗಿ ಮರುದಿನ ಆಕೆಯನ್ನು ತನ್ನೊಡನೆ ಕರೆದೊಯ್ದನು. ಹೀಗೆ ಇಬ್ಬರು ಕಾಶಿಯಲ್ಲಿರುವಾಗ ರಾಣಿಯು ಮಾಸಿಕ ಋತುಚಕ್ರ ಅನುಭವಿಸಬೇಕಾಯಿತು. ಇದರಿಂದ ರಾಜನು ತನ್ನ ಮಂತ್ರ ಶಕ್ತಿಯನ್ನು ಕಳೆದುಕೊಂಡು, ಎಂದಿನಂತೆ ಹಿಂತಿರುಗಲಾರದೆ ಆಯಾಸಗೊಂಡು ಚಿಂತೆಗಿಡಾದನು.

ಚಿತ್ರಕೃಪೆ: Bp

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಈ ರೀತಿಯಾಗಿ ಹತಾಶೆಗೊಂಡು ರಾಜನು ಗಂಗೆಯ ದಡದಲ್ಲಿ ಅಲೆಯುತ್ತಿರುವಾಗ ಬ್ರಾಹ್ಮಣರ ಗುಂಪೊಂದು ಚಂಡಿಯಾಗ ಮಾಡುತ್ತಿರುವುದು ಕಣ್ಣಿಗೆ ಬಿತ್ತು. ತಕ್ಷಣ ಅವರಲ್ಲಿ ತೆರಳಿ ತನಗುಂಟಾದ ಸಮಸ್ಯೆಯ ಕುರಿತು ಅವರಲ್ಲಿ ಕಳಕಳಿಯಿಂದ ವಿನಂತಿಸಿದನು. ಅವನ ದುಖವನ್ನು ಕಂಡ ಬ್ರಾಹ್ಮಣರ ಗುಂಪು, ಮರುಗಿ ಅವನಿಗೆ ಸಹಾಯ ಮಾಡಲು ಸಮ್ಮತಿಸಿ ತಾವು ಪಡೆದ ಪುಣ್ಯದ ಕೆಲ ಭಾಗವನ್ನು ಉಪಯೋಗಿಸಿ ರಾಣಿಯನ್ನು ಮತ್ತೆ ಶುದ್ಧ/ಪವಿತ್ರಳನ್ನಾಗಿ ಮಾಡುವುದಾಗಿ ಹೇಳಿದರು. ಅಲ್ಲದೆ ತಾವು ಮಾಡಿದ ಸಹಾಯಕ್ಕಾಗಿ ರಾಜನಿಂದ ಕೊಡುಗೆಯನ್ನೂ ಅಪೇಕ್ಷಿಸಿದರು. ಅದಕ್ಕೆ ರಾಜನು ಯಾವಾಗ ಈ ಬ್ರಾಹ್ಮಣರ ಗುಂಪು ತನ್ನ ಬಳಿ ಬಂದು ಕೇಳುತ್ತಾರೊ ಆವಾಗ ಜಹಾಗೀರುಗಳನ್ನು ದಾನವಾಗಿ ಕೊಡುವುದಾಗಿ ಮಾತು ಕೊಟ್ಟನು.

ಚಿತ್ರಕೃಪೆ: Bpdg

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ನಂತರ ಬ್ರಾಹ್ಮಣರ ಸಹಾಯದಿಂದ ರಾಜನು ರಾಣಿಯ ಸಮೇತ ತನ್ನ ರಾಜ್ಯಕ್ಕೆ ನಿರಾಯಾಸವಾಗಿ ಬಂದು ತಲುಪಿದನು ಹಾಗೂ ಮತ್ತೆ ಎಂದಿಗೂ ತನ್ನ ಮಂತ್ರ ಶಕ್ತಿಯನ್ನು ಬಳಸಲಿಲ್ಲ. ಹೀಗೆ ವರ್ಷಗಳು ಉರುಳಿದವು. ಒಮ್ಮೆ ಕಾಶಿಯಲ್ಲಿ ಘೋರವಾದ ಕ್ಷಾಮ ಉಂಟಾಯಿತು. ಇಂತಹ ದುಸ್ಥಿತಿಯಲ್ಲಿ ಬ್ರಾಹ್ಮಣರಿಗೆ ರಾಜನು ಕೊಟ್ಟ ಮಾತು ನೆನಪಿಗೆ ಬಂದು ನೇರವಾಗಿ ನಂದವರಕ್ಕೆ ಬಂದಿಳಿದು ರಾಜನನ್ನು ಕಂಡು ಅವನು ಕೊಟ್ಟ ಮಾತನ್ನು ನೆನಪಿಸಿದರು. ಆದರೆ ತಾನು ಕೊಟ್ಟ ಮಾತನ್ನು ಸಂಪೂರ್ಣವಾಗಿ ಮರೆತಿದ್ದ ರಾಜನು ಅವರಿಗೆ ಸಹಾಯ ಮಾಡುವ ಬದಲು ನಿಂದಿಸಿದನು. ಇದರಿಂದ ಬ್ರಾಹ್ಮಣರ ಅವಕೃಪೆಗೆ ಪಾತ್ರನಾದನು. ನಂತರದ ದಿನಗಳಿಂದ ರಾಜನು ದುರದೃಷ್ಟಕ್ಕೆ ಒಳಗಾಗಿ ಮಾಡುವ ಎಲ್ಲ ಕಾರ್ಯಗಳು ಭಗ್ನಗೊಳ್ಳತೊಡಗಿದವು.

ಚಿತ್ರಕೃಪೆ: Bpdg

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಅತ್ತ ಬ್ರಾಹ್ಮಣರ ಗುಂಪು, ರಾಜನು ಮಾತು ಕೊಟ್ಟಿದ್ದಕ್ಕೆ ಚೌಡೇಶ್ವರಿ ದೇವಿಯೆ ಏಕ ಸಾಕ್ಷಿಯಾಗಿರುವಳೆಂದು ಅರಿತು ಅವಳನ್ನು ನಂದವರಕ್ಕೆ ಬರಲು ಪ್ರಾರ್ಥಿಸಿದರು. ಅವರ ಇಚ್ಛೆಯಂತೆ ಚೌಡೇಶ್ವರಿ ದೇವಿಯು ನಂದವರಕ್ಕೆ ಬಂದಿಳಿದಳು. ಇತ್ತ ಈ ಎಲ್ಲ ಬೆಳವಣಿಗೆಗಳಿಂದ ತನ್ನ ತಪ್ಪನ್ನು ಅರಿತ ರಾಜನು ಬ್ರಾಹಮಣರ ಗುಂಪು ಹಾಗೂ ದೇವಿಯಲ್ಲಿ ಅತಿ ವಿನಮ್ರದಿಂದ ಕ್ಷಮೆ ಕೋರಿದನು. ಹೀಗೆ ಇಲ್ಲಿ ನೆಲೆಸಿದ ಬ್ರಾಹ್ಮಣ ಸಮುದಾಯದವರು ಕಾಲಾಂತರದಲ್ಲಿ ನಂದವರಿಕ ಬ್ರಾಹಣರಾಗಿ ತಮ್ಮ ಕುಲದೇವತೆಯಾಗಿ ಚೌಡೇಶ್ವರಿ ದೇವಿಯನ್ನು ಆರಾಧಿಸತೊಡಗಿದರು. ತೊಗಟವೀರ ಕ್ಷತ್ರಿಯರ ಕುಟುಂಬ ದೇವತೆಯಾಗಿಯೂ ಚೌಡೇಶ್ವರಿ ದೇವಿ ಆರಾಧಿಸಲ್ಪಡುತ್ತಾರೆ.

ಚಿತ್ರಕೃಪೆ: Bpdg

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಬನಶಂಕರಿ ಅಮ್ಮನವರ ದೇವಸ್ಥಾನ : ಇದು ಹುಬ್ಬಳ್ಳಿ-ಧಾರವಾಡ ರಸ್ತೆಯ ಹುಬ್ಬಳ್ಳಿ ನಗರದಿಂದ ಸುಮಾರು ಒಂಬತ್ತು ಕಿ.ಮೀ ದೂರದಲ್ಲಿರುವ ಬನಶಂಕರಿ ದೇವಿಗೆ ಮುಡಿಪಾದ ಅತಿ ಪುರಾತನವಾದ ದೇವಾಲಯವಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಈ ದೇವಸ್ಥಾನಕ್ಕೆ ಬನಶಂಕರಿ ದೇವಿಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇಗುಲದ ಶಿಲ್ಪ ಕಲೆಯು ಆಕರ್ಷಕವಾಗಿದೆ.

ಚಿತ್ರಕೃಪೆ: Siddharth Pujari

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಸರಸ್ವತಿ ದೇಗುಲ : ಗದಗ ಪಟ್ಟಣದಲ್ಲಿ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯಗಳ ಸಂಕೀರ್ಣವಿದೆ. ಈ ಸಂಕೀರ್ಣವೇನೊ ಶಿವನಿಗೆ ಮುಡಿಪಾದರೂ ಇಲ್ಲಿ ಇತರೆ ದೇವರುಗಳ ಸನ್ನಿಧಿಯನ್ನೂ ಸಹ ಕಾಣಬಹುದಾಗಿದೆ. ಅಂತಹ ದೇವರುಗಳಲ್ಲಿ, ವಿದ್ಯೆ ಬುದ್ಧಿಗೆ ಸಂಕೇತವಾಗಿರುವ ಬ್ರಹ್ಮನ ಮಡದಿಯಾದ ಸರಸ್ವತಿಗೆ ಮುಡಿಪಾದ ದೇಗುಲವಿರುವುದು ವಿಶೇಷ. ಏಕೆಂದರೆ ಸರಸ್ವತಿಗೆಂದು ಮುಡಿಪಾದ ದೇವಾಲಯಗಳಿರುವುದು ಬಲು ವಿರಳ.

ಚಿತ್ರಕೃಪೆ: Manjunath Doddamani Gajendragad

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಮೂಕಾಂಬಿಕೆ ದೇವಸ್ಥಾನ : ಉಡುಪಿ ಜಿಲ್ಲೆಯ ಕೊಲ್ಲೂರು ಎಂಬ ಕ್ಷೇತ್ರವು ತನ್ನ ಮೂಕಾಂಬಿಕಾ ದೇವಿಯ ದೇವಸ್ಥಾನದಿಂದಾಗಿ ದೇಶದಲ್ಲಿಯೆ ಪ್ರಖ್ಯಾತಿ ಪಡೆದಿದೆ.ಮೂಕಾಂಬಿಕಾ ದೇವಿಯು ಪಾರ್ವತಿ ದೇವಿಯ ಅವತಾರವೆ ಆಗಿದ್ದಾಳೆ ಹಾಗೂ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ದಂತ ಕಥೆಗಳಿವೆ. ಹಿಂದೊಮ್ಮೆ ಈ ಕ್ಷೇತ್ರದಲ್ಲಿ ಕೌಮಾಸುರನೆಂಬ ರಾಕಷಸನಿದ್ದನು. ಕಠಿಣವಾದ ತಪಸ್ಸನ್ನಾಚರಿಸಿ ವಿಶೇಷವಾದ ಶಕ್ತಿಗಳನ್ನು ವರದಾನವಾಗಿ ದೇವರಿಂದ ಪಡೆದಿದ್ದನು. ಹೀಗಾಗಿ ಅವನು ದಿನೆ ದಿನೆ ತನ್ನ ಕ್ರೌರತ್ವವನ್ನು ವೃದ್ಧಿಸಿಕೊಳ್ಳುತ್ತ ಜನಸಾಮಾನ್ಯರಿಗೆ ಹಿಂಸೆ ನೀಡುತ್ತ, ದೇವತೆಗಳಿಗೂ ಸಹ ಕಿರುಕುಳ ನೀಡಲಾರಂಭಿಸಿದನು.

ಚಿತ್ರಕೃಪೆ: Vinayaraj

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಹೀಗಿರುವಾಗ ಒಂದು ದಿನ ಶುಕ್ರಾಚಾರ್ಯ ಮಹರ್ಷಿಗಳು ದೇವತೆಗಳನ್ನು ಕುರಿತು ಆ ರಾಕ್ಷಸನ ಸಂಹಾರ ಒಬ್ಬ ಸ್ತ್ರೀ ಅಂದರೆ ಸ್ವತಃ ಪಾರ್ವತಿ ದೇವಿಯ ಕೈಗಳಿಂದಲೆ ಆಗುತ್ತದೆಂಬ ಭವಿಷ್ಯ ತಿಳಿಸಿದನು. ಇದರಿಂದ ಸಂತಸಗೊಂಡ ದೇವತೆಗಳು ಪಾರ್ವತಿ ದೇವಿಯ ಬಳಿ ತೆರಳಿ ತಮ್ಮ ವೇದನೆಯನ್ನು ನಿವೇದಿಸಿಕೊಂಡರು. ಈ ಸಂದರ್ಭದಲ್ಲಿ ಕೌಮಾಸುರನಿಗೆ ಈ ವಿಷಯ ತಿಳಿದು ತಾನು ಈ ರೀತಿಯ ನಾಶದಿಂದ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಶಿವನನ್ನು ಕುರಿತು ಅತಿ ಘೋರ ತಪಸ್ಸನ್ನಾಚರಿಸಲು ಪ್ರಾರಂಭಿಸಿದನು.

ಚಿತ್ರಕೃಪೆ: wikimedia

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಅವನ ಅತ್ಯಂತ ಕಠಿಣ ತಪಸ್ಸಿನಿಂದ ಪ್ರಸನ್ನನಾದ ಶಿವನು ಪ್ರತ್ಯಕ್ಷನಾಗಿ ವರವನ್ನು ಕೇಳುವಂತೆ ಹೇಳಿದನು. ಇದೆ ಸಂದರ್ಭವನ್ನು ಕಾಯುತ್ತಿದ್ದ ದೇವಿಯು ಮುಂದೆ ಇದರಿಂದ ಲೋಕ ಕಲ್ಯಾಣಕ್ಕೆ ಚುತಿ ಬರುವುದೆಂದು ಗ್ರಹಿಸಿ ಕೌಮಾಸುರನ ಬಾಯಿಯು ಮುಚ್ಚಿ ಹೋಗಿ ಅವನು ಮೂಕನಾಗುವಂತೆ ಮಾಡಿದಳು. ರಾಕ್ಷಸನು ಶಿವನಿದ್ದರೂ ಸಹ ಏನೂ ಕೇಳಲಾಗದೆ ಅಸಹಾಯಕನಾಗಿ ನಿಂತನು. ಹೀಗೆ ಕೌಮಾಸುರನಿಗೆ ಮುಂದೆ ಮೂಕಾಸುರ ಎಂಬ ಹೆಸರು ಬಂದಿತು. ಇತ್ತ ಸಮಯಕ್ಕನುಸಾರವಾಗಿ ದೇವಿಯು ಎಲ್ಲ ದೇವತೆಗಳ ಶಕ್ತಿಗಳನ್ನು ಪಡೆದು ದುಷ್ಟನಾದ ಮೂಕಾಸುರನನ್ನು ಸಂಹರಿಸಿ ಮೂಕಾಂಬಿಕೆಯಾಗಿ ಭಕ್ತರನ್ನು ಹರಸುತ್ತ ಈ ಕ್ಷೇತ್ರದಲ್ಲಿ ಶಾಶ್ವತವಾಗಿ ನೆಲೆಸಿದಳು.

ಚಿತ್ರಕೃಪೆ: GaneshSB

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಇನ್ನೊಂದು ಕಥೆಯಂತೆ ಒಮ್ಮೆ ಆದಿ ಶಂಕರಾಚಾರ್ಯರು ದೇವಿಯನ್ನು ನಿತ್ಯ ಪೂಜಿಸುವ ದೃಷ್ಟಿಯಿಂದ ತಮ್ಮ ನೆಲೆಗೆ ಅಂದರೆ ಕೇರಳಕ್ಕೆ ಕರೆದೊಯ್ಯಬೇಕೆಂಬ ಇಚ್ಛೆಯಿಂದ ಕೊಡಚಾದ್ರಿಯ ಬೆಟ್ಟಗಳಲ್ಲಿ ತಪಗೈದರು. ಅದಕ್ಕೆ ಪ್ರಸನ್ನಳಾಗಿ ಪ್ರತ್ಯಕ್ಷಳಾದ ದೇವಿಯು ಶಂಕರರನ್ನು ಕುರಿತು ವರ ಕೇಳಲು ಹೇಳಿದಳು. ಇದಕ್ಕೆ ಪ್ರತಿಯಾಗಿ ಶಂಕರರು ತಾನು ದಿನ ನಿತ್ಯ ದೇವಿಯನ್ನು ಆರಾದಿಸಬೇಕೆಂದೂ ಅದಕ್ಕಾಗಿ ದೇವಿಯು ತನ್ನೊಡನೆ ಕೇರಳಕ್ಕೆ ಬರಬೇಕೆಂದು ವಿನಂತಿಸಿದರು.

ಚಿತ್ರಕೃಪೆ: Yogesa

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಇದಕ್ಕೊಪ್ಪಿದ ದೇವಿಯು ಶಂಕರರನ್ನು ಹಿಂಬಾಲಿಸುವೆನೆಂದು ಶಂಕರರು ಯಾವುದೆ ಕಾರಣಕ್ಕೂ ತನ್ನನ್ನು ಹಿಂದಿರುಗಿ ನೋಡಬಾರದೆಂದು ಶರತ್ತು ವಿಧಿಸಿದಳು. ಅದನ್ನೊಪ್ಪಿದ ಶಂಕರರು ನೇರವಾಗಿ ಕೇರಳಕ್ಕೆಂದು ನಡೆಯತೊಡಗಿದರು. ಹಿಂದೆ ಹಿಂದೆ ಬರುತ್ತಿದ್ದ ದೇವಿಯ ಗೆಜ್ಜೆ ಶಬ್ದ ಶಂಕರ ಕಿವಿಗೆ ಬೀಳಿತ್ತಿತ್ತು. ಇದರಿಂದ ಶಂಕರರು ದೇವಿಯು ಬರುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು. ಸ್ವಲ್ಪ ದೂರ ತೆರಳಿದ ಬಳಿಕ ದೇವಿಯು ಪರೀಕ್ಷಿಸುವುದಕ್ಕಾಗಿ ಹಾಗೆಯೆ ನಿಂತಳು. ಗೆಜ್ಜೆ ಶಬ್ದ ನಿಂತು ಹೋದ ಕಾರಣ ಶಂಕರರು ಸಂಶಯಪಟ್ಟು ಹಿಂದಿರುಗಿ ನೋಡಲು ದೇವಿಯೆ ಅಲ್ಲಿಯೆ ಇದ್ದಳು. ಆದರೆ ಆಕೆ ವಿಧಿಸಿದ ಶರತ್ತು ಮುರಿದ ಕಾರಣ ದೇವಿಯು ಅಲ್ಲಿಯೆ ನೆಲೆಸಿದಳು. ಆ ಕ್ಷೇತ್ರವೆ ಇಂದಿನ ಕೊಲ್ಲೂರು.

ಚಿತ್ರಕೃಪೆ: Yogesa

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಆದರೂ ಹಟ ಬಿಡದ ಶಂಕರರು ದೇವಿಯನ್ನು ಪರಿ ಪರಿಯಾಗಿ ಬೇಡಿದಾಗ ದೇವಿಯು ಶಂಕರರ ಭಕ್ತಿಗೆ ಮೆಚ್ಚಿ ಹೀಗೆ ಹೇಳಿದಳು. ಮುಂಜಾವಿನ ನಿರ್ಮಾಲ್ಯ ದರ್ಶನಕ್ಕೆ ನಾನು ಕೇರಳದ ಚೋಟನಿಕ್ಕಾರಾ ದೇವಾಲಯದಲ್ಲಿದ್ದು ಭಕ್ತರನ್ನು ಹರಸುತ್ತೇನೆ ಹಾಗೂ ಉಳಿದ ಸಮಯ ಇಲ್ಲಿದ್ದು ಭಕ್ತರನ್ನು ಕರುಣಿಸುತ್ತೇನೆ. ಹೀಗಾಗಿ ಕೊಲ್ಲೂರಿಗೆ ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಕೇರಳಿಗರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Yogesa

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಕೋಲಪುರ 'ಆದಿ ಮಹಾಲಕ್ಷ್ಮಿ' ಎಂದು ಸಹಾ ಪ್ರಸಿದ್ಧವಾಗಿರುವ ಮೂಕಾಂಬಿಕಾ ದೇವಾಲಯವು ಕೊಲ್ಲೂರಿನ ನೋಡಲೇಬೇಕಾದ ದೇವಾಲಯವಾಗಿದೆ. ಈ ದೇವಾಲಯವು ದಟ್ಟ ಕಾಡು ಮತ್ತು ಸುಂದರ ಪರ್ವತ ಶ್ರೇಣಿಗಳ ನಡುವೆ ಮನೆಮಾಡಿಕೊಂಡಿದೆ. ಇದರ ರಚನೆಯು ಪ್ರಾಚೀನ ಹಿಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಹಾಗು ಇದು ವಾಸ್ತುಶಿಲ್ಪದ ಅದ್ಭುತವೆಂದು ಪರಿಗಣಿಸಲ್ಪಟ್ಟಿದೆ.

ಚಿತ್ರಕೃಪೆ: Vedamurthy.j

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಈ ದೇವಾಲಯದಲ್ಲಿ ಜ್ಯೋತಿರ್ಲಿಂಗವಿದ್ದು ಅದು ಮಧ್ಯದಲ್ಲಿ ಶಕ್ತಿಯನ್ನು ಬಿಂಬಿಸುವ ಬಂಗಾರದ ಗೆರೆಯನ್ನು ಹೊಂದಿದೆ. ಮೂಕಾಂಬಿಕಾ ದೇವಿಯ ಮೂರ್ತಿಯ ಮುಂಭಾಗದಲ್ಲಿರುವ ಲಿಂಗವು ಮೂರು ಕಣ್ಣುಗಳನ್ನು ಹೊಂದಿದೆ. ಈ ಪುರಾತನ ದೇವಾಲಯವು ಒಂದು ಪವಿತ್ರ ಸಿದ್ಧಿ ಕ್ಷೇತ್ರವಾಗಿದ್ದು ತನ್ನೊಳಗೆ ಹಲವಾರು ದಂತಕತೆಗಳನ್ನು ಅಡಗಿಸಿಕೊಂಡು ಕುಳಿತಿದೆ.

ಚಿತ್ರಕೃಪೆ: Sreejith K

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ನವರಾತ್ರಿ ಸಮಯದಲ್ಲಿ ಇಲ್ಲಿ ಆಚರಿಸಲ್ಪಡುವ ಸರಸ್ವತಿ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.ಯಾತ್ರಾರ್ಥಿಗಳು ಪೂಜಾ ಕೈಂಕರ್ಯಗಳನ್ನು ಸಲ್ಲಿಸುವ ಮೊದಲು ತೀರ್ಥಸ್ನಾನ ಮಾಡಿ, ಮೂಕಾಂಬಿಕಾ ದೇವಾಲಯದಲ್ಲಿನ ದೇವಿಯನ್ನು ಮತ್ತು ಲಿಂಗವನ್ನು ಪುಷ್ಪಗಳಿಂದ ಅಲಂಕರಿಸಿ ಪೂಜಿಸುತ್ತಾರೆ.

ಚಿತ್ರಕೃಪೆ: Rojypala

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಚಾಮುಂಡೇಶ್ವರಿ ದೇವಸ್ಥಾನ : ಮೈಸೂರಿನಲ್ಲಿದೆ ಚಾಮುಂಡೇಶ್ವರಿಯ ದೇವಾಲಯ. ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಚಾಮುಂಡಿ ಬೆಟ್ಟದ ಮೇಲೆ ವೊಡೆಯರ ದೇವತೆಯಾದ, ಪಾರ್ವತಿಯ ಅವತಾರಿಣಿ ತಾಯಿ ಚಾಮುಂಡೇಶ್ವರಿಯ ಈ ದೇವಾಲಯವಿದೆ.

ಚಿತ್ರಕೃಪೆ: Saravana Kumar

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಈ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಂತರ ಮೈಸೂರಿನ ಅರಸರು 1827ರಲ್ಲಿ ಇದನ್ನು ದುರಸ್ತಿಗೊಳಿಸಿದರು. ಈ ದೇವಾಲಯದ ಮುಂಭಾಗದಲ್ಲಿ ರಾಕ್ಷಸರ ರಾಜನಾದ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ನಿಲ್ಲಿಸಲಾಗಿದೆ.

ಚಿತ್ರಕೃಪೆ: Sarvagnya

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಚಾಮುಂಡಿ ಬೆಟ್ಟದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ 5 ಮೀ ಎತ್ತರದ ನಂದಿ ವಿಗ್ರಹ. ಇದನ್ನು ಸುಮಾರು 1659 ರಲ್ಲಿ ಕಪ್ಪು ಗ್ರಾನೈಟ್ ಕಲ್ಲನ್ನು ಬಳಸಿ ನಿರ್ಮಿಸಲಾಗಿದೆ. ಚಾಮುಂಡೇಶ್ವರಿ ಮತ್ತು ಹನುಮನಿಗೆ ಸಮರ್ಪಿತವಾಗಿರುವ ಎಸ್‌ಎನ್‌ಏ ದೇವಸ್ಥಾನಗಳೂ ಇಲ್ಲಿದ್ದು ಬೆಳಿಗ್ಗೆ 7.30 ರಿಂದ 2 ಗಂಟೆ ಮತ್ತು 3.30 ರಿಂದ ಸಾಯಂಕಾಲ 6 ಗಂಟೆಗಳವರೆಗೆ ತೆರೆದಿರುತ್ತದೆ. ಪ್ರವಾಸಿಗರು ನಗರದ ಸುಂದರವಾದ ನೋಟವನ್ನು ಚಾಮುಂಡಿ ಬೆಟ್ಟದ ತಪ್ಪಲುಗಳಿಂದ ಸವಿಯಬಹುದು.

ಚಿತ್ರಕೃಪೆ: Saravana Kumar

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಲಕ್ಷ್ಮಿ ದೇವಿ ದೇವಾಲಯ : ಹಾಸನ ಜಿಲ್ಲೆಯ ದೊಡ್ಡಗದ್ದವನಳ್ಳಿಯಲ್ಲಿ ಸುಂದರವಾದ ಕೆತ್ತನೆಯುಳ್ಳ ಪುರಾತನ ಲಕ್ಷ್ಮಿ ದೇಗುಲವನ್ನು ಕಾಣಬಹುದು. ಹೊಯ್ಸಳ ದೊರೆ ವಿಷ್ಣುವರ್ಧನನಿಂದ ಈ ದೇವಾಲಯದ ನಿರ್ಮಾಣ ಕ್ರಿ.ಶ. 1114 ರಲ್ಲಾಗಿದೆ.

ಚಿತ್ರಕೃಪೆ: Dineshkannambadi

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಶೃಂಗೇರಿ ಶಾರದಾಂಬೆ : ಶೃಂಗೇರಿಯಲ್ಲಿರುವ ಶಾರದಾಂಬೆಯ ದೇಗುಲವೂ ಸಹ ಒಂದು ಪ್ರಖ್ಯಾತವಾದ ಧಾರ್ಮಿಕ ತಾಣವಾಗಿದೆ. ಬುದ್ಧಿ ಜಾಣ್ಮೆಗಳ ಅಧಿದೇವತೆಯಾದ ಸರಸ್ವತಿ ದೇವಿಯ ಅವತಾರವಾದ ಶಾರದಾಂಬೆಗೆ ಈ ದೇವಾಲಯ ಮುಡಿಪಾಗಿದೆ. ಸ್ಥಳ ಪುರಾಣದಂತೆ ಶ್ರೀ ಆದಿ ಶಂಕರರು ಶಾರದಾಂಬೆಯನ್ನು ಪ್ರತಿಷ್ಠಾಪಿಸಿದರೆನ್ನಲಾಗಿದೆ.

ಚಿತ್ರಕೃಪೆ: wikipedia

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಮಂಗಳಾ ದೇವಿ ದೇವಾಲಯ : ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯವು 9ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ.

ಚಿತ್ರಕೃಪೆ: Ssriram mt

ದೇವಿಯ ಸುಂದರ ದೇವಾಲಯಗಳು:

ದೇವಿಯ ಸುಂದರ ದೇವಾಲಯಗಳು:

ಈ ದೇವಾಲಯದಲ್ಲಿ ಆಚರಣೆಯಾಗುವ ಇನ್ನೊಂದು ದೊಡ್ಡ ಹಬ್ಬ ಗಣೇಶೋತ್ಸವ. ಮಂಗಳೂರು ನಗರ ಬಸ್‌ ನಿಲ್ದಾಣದಿಂದ ಈ ದೇವಾಲಯಕ್ಕೆ ಅತ್ಯಂತ ಸುಲಭವಾಗಿ ಬಸ್‌ ಮೂಲಕ ತೆರಳಬಹುದು. ಈ ದೇವಾಲಯ ಪ್ರಮುಖವಾಗಿ ಬಾಲೆಯರಿಗೆ ಪ್ರಮುಖವಾಗಿದೆ. ಮಂಗಳ ಪಾರ್ವತಿ ವೃತ ದೇವಾಲಯದ ಪ್ರಮುಖ ವೃತಗಳಲ್ಲಿ ಒಂದು. ಇಲ್ಲಿ ಮಾತ್ರ ಇದನ್ನು ಆಚರಿಸಲಾಗುತ್ತದೆ. ಕುವರಿಯರು ಇಲ್ಲಿ ಬಂದು ಈ ವೃತ ಮಾಡಿದರೆ ಉತ್ತಮ ಪತಿ ಸಿಕ್ಕು, ಜೀವನ ಅತ್ಯಂತ ಸುಗಮವಾಗಿ ಸಾಗುತ್ತದೆ ಎಂದು ನಂಬಲಾಗಿದೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X