Search
  • Follow NativePlanet
Share
» »ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

By Vijay

ಟ್ರೆಕ್ ಮಾಡುವುದು ಒಂದು ಅದ್ಭುತವಾದ ಪ್ರವಾಸಿ ಚಟುವಟಿಕೆಯಾಗಿದೆ. ವಯಸ್ಕರೆ ಇರಲಿ ಅಥವಾ ಹದಿಹರೆಯದವರಾಗಲಿ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಇದ್ದೆ ಇರುತ್ತದೆ ಟ್ರೆಕ್ ಮಾಡುವುದೆಂದರೆ. ಟ್ರೆಕ್ ಅಥವಾ ಚಾರಣ ಮಾಡಲು ಸಾಮಾನ್ಯವಾಗಿ ಕಾಡು ಪ್ರದೇಶಗಳು, ಬೆಟ್ಟಗಳು ಆದರ್ಶಮಯವಾಗಿರುತ್ತವೆ. ಅದರಲ್ಲೂ ವಿಶೇಷವಾಗಿ ಒಂದೆಡೆ ಬೆಟ್ಟ ಗುಡ್ಡಗಳು ಇನ್ನೊಂದೆಡೆ ಪ್ರಪಾತ, ಕಂದಕಗಳಿರುವ ರುದ್ರಮಯ ಪ್ರದೇಶಗಳಲ್ಲಿ ಚಾರಣ ಮಾಡುವುದೆಂದರೆ ಹೇಗೆ? ಹೌದು ರೋಮ ರೋಮಗಳೂ ರೋಮಾಂಚನಗೊಂಡು ಪುಳಕಿತಗೊಳ್ಳುತ್ತವೆ.

ವಿಶೇಷ ಲೇಖನ : ಈ ಟ್ರೆಕ್ ಗಳನ್ನು ಮಾಡಿದ್ದೀರಾ?

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Purshi

ಈ ರೀತಿಯ ಒಂದು ಅನುಭವ ನೀವು ಪಡೆಯಬೇಕೆಂದಿದ್ದರೆ ಕರ್ನಾಟಕ, ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ತಾಣಕ್ಕೊಮ್ಮೆ ಚಾರಣ ಹೊರಡಿ. ಅದೂ ಕೂಡ ರೈಲು ಹಳಿಗಳ ಮೇಲೆ ಸಾಗುತ್ತ. ಹೌದು ಈ ರೀತಿಯ ಒಂದು ವಿಶಿಷ್ಟ ಟ್ರೆಕ್ ಅನ್ನು ಬೆಳಗಾವಿ ಬಳಿಯಿರುವ ಕ್ಯಾಸಲ್ ರಾಕ್ ಎಂಬ ಸ್ಥಳದಿಂದ ಪ್ರಾರಂಭಿಸಬಹುದು. ಈ ಟ್ರೆಕ್ ಗೆ ಮಳೆಗಾಲ ಅತ್ಯುತ್ತಮ ಸಮಯವಾದರೂ ಚಳಿಗಾಲವೂ ಕೂಡ ಉತ್ತಮ ಸಮಯವೆ ಆಗಿದೆ. ಬನ್ನಿ ಪ್ರಸ್ತುತ ಲೇಖನದ ಮೂಲಕ ಈ ಟ್ರೆಕ್ ಹೇಗೆ ಮಾಡಬಹುದೆಂಬುದರ ಕುರಿತು ತಿಳಿಯೋಣ.

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Premnath Thirumalaisamy

ದೂಧ್ ಸಾಗರ್ ಜಲಪಾತವನ್ನು ಕೇವಲ ಕಾಲ್ನಡಿಗೆಯಿಂದ ಮಾತ್ರವೇ ತಲುಪಬಹುದಾಗಿದೆ. (ರೈಲುಗಳು ಇಲ್ಲಿಂದ ಚಲಿಸುತ್ತವೆ ಹಾಗೂ ಯಾವುದೆ ನಿಲ್ದಾಣ ಹೊಂದಿಲ್ಲ). ಅದಕ್ಕಾಗಿ ಮೊದಲು ನೀವು ಕ್ಯಾಸಲ್ ರಾಕ್ ಹಳ್ಳಿಗೆ ತಲುಪಬೇಕಾಗುತ್ತದೆ. ಕ್ಯಾಸಲ್ ರಾಕ್ ಗ್ರಾಮವು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಬೆಳಗಾವಿಯಿಂದ 80 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಳಗಾವಿಯಿಂದ ಕ್ಯಾಸಲ್ ರಾಕ್ ಗೆ ತೆರಳಲು ರೈಲು ಲಭ್ಯವಿದ್ದು ಬೇಕಾದರೆ ಖಾನಾಪುರ ಹಾಗೂ ಲೊಂಡಾ ಮಾರ್ಗವಾಗಿ ಬಾಡಿಗೆ ವಾಹನಗಳ ಮೂಲಕ ಕ್ಯಾಸಲ್ ರಾಕ್ ತಲುಪಬಹುದು.

ವಿಶೇಷ ಲೇಖನ : ಹಸಿರು ಪಥದ ರೈಲು

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Karthik Narayana

ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ಮೊದಲು ಬೆಳಗಾವಿಗೆ ರವಿವಾರದ ಹಿಂದಿನ ದಿನವೆ ಬಂದು ತಲುಪುವಂತೆ ತೆರಳಬೇಕು. ಏಕೆಂದರೆ ಕ್ಯಾಸಲ್ ರಾಕ್ ಗೆ ಕೆಲವು ರೈಲುಗಳಿದ್ದರೂ ಸಹ ಅವು ತಲುಪುವ ಸಮಯ ಉತ್ತಮವಾಗಿಲ್ಲ. ರವಿವಾರದಂದು ಮಾತ್ರವೆ ಬೆಳಗಿನ ಸಮಯದಲ್ಲೆ ಕ್ಯಾಸಲ್ ರಾಕ್ ಗೆ ತಲುಪುವ ರೈಲು ದೊರೆಯುತ್ತದೆ. ಅದೂ ಪೂರ್ಣಾ ಎಕ್ಸ್ ಪ್ರೆಸ್ ರೈಲು. ಹೊರಡುವ ಸಮಯ ಇತ್ಯಾದಿಗಳನ್ನು ಮುಂಚಿತವಾಗಿ ತಿಳಿದರೆ ಉತ್ತಮ. ಒಂದೊಮ್ಮೆ ಕ್ಯಾಸಲ್ ರಾಕ್ ನಿಲ್ದಾಣದಲ್ಲಿ ಇಳಿದಿರೆಂದರೆ ನಿಮ್ಮ ಚಾರಣ ಕಾರ್ಯವನ್ನು ಆರಂಭಿಸಬಹುದು.

ವಿಶೇಷ ಲೇಖನ : ಮೈಮನ ಪುಳಕಿತಗೊಳಿಸುವ ಕೊಡಚಾದ್ರಿ ಟ್ರೆಕ್

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Purshi

ಈ ರೈಲು ಸಾಮಾನ್ಯವಾಗಿ ಬೆಳಗಾವಿ ರೈಲು ನಿಲ್ದಾಣದಿಂದ ಬೆಳಿಗ್ಗೆ 7 ಘಂಟೆ 50 ನಿಮಿಷಕ್ಕೆ ನಿರ್ಗಮಿಸಿ ಕ್ಯಾಸಲ್ ರಾಕ್ ಅನ್ನು ಅದೆ ದಿನ ಬೆಳಿಗ್ಗೆ 10 ಘಂಟೆ 10 ನಿಮಿಷಕ್ಕೆ ತಲುಪುತ್ತದೆ. ಕ್ಯಾಸಲ್ ರಾಕ್ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಒಂದು ಸುಂದರ ಪುಟ್ಟ ಗ್ರಾಮವಾಗಿದೆ. ಇಲ್ಲಿಂದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಬ್ರಿಗಾಂಜಾ ಘಾಟ್ ಮೂಲಕ ಸಾಗುತ್ತ ದೂಧ್ ಸಾಗರ ಜಲಪಾತಕ್ಕೆ ತೆರಳಬಹುದು. ದೂಧ್ ಸಾಗರ್ ಜಲಪಾತವು ಕ್ಯಾಸಲ್ ರಾಕ್ ನಿಂದ 23 ಕಿ.ಮೀ ಗಳಷ್ಟು ದೂರದಲ್ಲಿದೆ. ಅಂದರೆ ರೈಲು ಕಂಬಿಗಳ ಮೇಲೆ ನೀವು 23 ಕಿ.ಮೀ ಗಳಷ್ಟು ಟ್ರೆಕ್ ಮಾಡುತ್ತ ಸಾಗಬೇಕು!

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: L. Shyamal

ಮತ್ತೊಂದು ವಿಷಯವೆಂದರೆ ಪ್ರಾಥಮಿಕ ಅವಶ್ಯಕತೆಗಳಾದ ನೀರು, ಊಟ, ಟಾರ್ಚ್, ಔಷಧಿಗಳನ್ನು ತೆಗೆದುಕೊಂಡು ಹೋಗುವುದು ಅವಶ್ಯಕವಾಗಿದೆ. ಏಕೆಂದರೆ ಈ ಮಾರ್ಗದಲ್ಲಿ ಯಾವ ವಸ್ತುಗಳೂ ಸಿಗುವುದಿಲ್ಲ. ಜಲಪಾತದ ಮುಂಚೆ ದೂಧ್ ಸಾಗರ್ ಹೆಸರಿನ ರೈಲು ನಿಲ್ದಾಣವಿದ್ದು ಇಂದು ಅದು ಪಾಳು ಬಿದ್ದಿದೆ. ಪ್ರವಾಸಿ ಸಮಯದಲ್ಲಿ ಮಾತ್ರವೆ ಇಲ್ಲಿ ಅಲ್ಪ ಪ್ರಮಾಣದ ತಿಂಡಿಗಳು ಲಭಿಸಬಹುದು. ಇನ್ನುಳಿದಂತೆ ಬೇರೆ ಸಮಯದಲ್ಲಿ ಇಲ್ಲಿ ಏನೂ ದೊರೆಯುವುದಿಲ್ಲ. ಆದ್ದರಿಂದ ಮುಂಚಿತವಾಗಿಯೇ ಊಟ ತಿಂಡಿಗಳನ್ನು ಸಿದ್ಧಪಡಿಸಿಕೊಂಡಿದ್ದರೆ ತೊಂದರೆಯಾಗುವುದಿಲ್ಲ.

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Karthik Narayana

ಟ್ರೆಕ್ ಮಾಡುವ ಸಮಯದಲ್ಲಿ ಕೋಲು ಮುಂತಾದ ಆಧಾರಕಗಳನ್ನು ಹಿಡಿದು ಸಾಗುವುದರಿಂದ ಸಹಾಯವಾಗುತ್ತದೆ ಹಾಗೂ ಕಂಬಿಗಳ ಮೇಲೆ ಟ್ರೆಕ್ ಸಾಗುವುದರಿಂದ ಎರಡು ಕಡೆಗಳಿಂದ ರೈಲು ಬರುತ್ತಿರುವುದರ ಕುರಿತು ಎಚ್ಚರಿಕೆ ವಹಿಸಬೇಕು. ಈ ಮಾರ್ಗದಲ್ಲಿ ಅಲ್ಲಲ್ಲಿ ಸುರಂಗ ಮಾರ್ಗಗಳಿರುವುದರಿಂದ ಜಾಗರೂಕತೆಯಿಂದ ಟ್ರೆಕ್ ಮಾಡಬೇಕಾಗುತ್ತದೆ. ಈ ರೀತಿಯಾಗಿ ಚಾರಣ ಮಾಡುವುದೆ ಒಂದು ಅದ್ಭುತ ಅನುಭವವಾಗಿದೆ. ಛಾಯಾಗ್ರಾಹಕರಾಗಿದ್ದರೆ ನಿಮ್ಮ ಕ್ಯಾಮೆರಾಗಳನ್ನು ಸಿದ್ಧವಿಡಿ. ಸಾಕಷ್ಟು ಬಗೆ ಬಗೆಯ ಪಶ್ಚಿಮ ಘಟ್ಟಗಳ ಈ ಪ್ರದೇಶದ ಅಪರೂಪದ ಹಕ್ಕಿಗಳು ಕಾಣಬಹುದು.

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Purshi

ಮೊದಲಿಗೆ ನೀವು ದೂಧ್ ಸಾಗರ್ ಪಾಳು ಬಿದ್ದ ರೈಲು ನಿಲ್ದಾಣಕ್ಕೆ ತಲುಪುತ್ತಿರಿ. ಈ ನಿಲ್ದಾಣದಲ್ಲಿ ಬೇಕಿದ್ದರೆ ಕೆಲ ಸಮಯ ವಿಶ್ರಾಂತಿ ಪಡೆದು ನಂತರ ಮುಂದೆ ಸಾಗಬಹುದು. ಇಲ್ಲಿಂದ ಕೇವಲ ಎರಡು ಕಿ.ಮೀ ಸಾಗಿದರೆ ಸಾಕು ನೀವು ಭವ್ಯವಾದ ದೂಧ್ ಸಾಗರ್ ಜಲಪಾತ ತಾಣದಲ್ಲಿರುತ್ತೀರಿ. ಆ ಅದ್ಭುತ ದೃಶ್ಯವನ್ನು ಕಂಡಾಗ ನಿಮಗಾದ ಆಯಾಸವು ಕ್ಷಣದಲ್ಲೆ ಓಡಿ ಹೋಗುವುದು ಖಂಡಿತ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಲನ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ನ ಕೆಲವು ಸನ್ನಿವೇಶಗಳನ್ನು ಈ ಜಲಪಾತ ತಾಣದಲ್ಲಿ ಚಿತ್ರೀಕರಿಸಲಾಗಿದೆ.

ವಿಶೇಷ ಲೇಖನ : ಭಾರತದ ಎತ್ತರದ ಜಲಪಾತಗಳು

ಕ್ಯಾಸಲ್‍ರಾಕ್ ನಿಂದ ದೂಧ್ ಸಾಗರ್ ಅದ್ಭುತ ಟ್ರೆಕ್

ಚಿತ್ರಕೃಪೆ: Sharat Chandra

ಇನ್ನುಳಿದಂತೆ ದೂಧ್ ಸಾಗರ್ ಭಾರತದ ಅತಿ ಎತ್ತರದ ಜಲಪಾತಗಳ ಪೈಕಿ ಒಂದಾಗಿದೆ. ಆದರೆ ಇದು ಒಂದೆ ಸ್ಥಳದಿಂದ ಭುವಿಗೆ ಧುಮುಕಲಾರದೆ ನಾಲ್ಕು ಸ್ತರಗಳಲ್ಲಿ ಧುಮುಕುತ್ತ ಭುವಿಗೆ ಅಪ್ಪಳಿಸುತ್ತದೆ. ಸಾವಿರಕ್ಕೂ ಹೆಚ್ಚು ಅಡಿಗಳಷ್ಟು ಎತ್ತರ ಹೊಂದಿದ್ದು ನೂರು ಅಡಿಗಳಷ್ಟು ಅಗಲವನ್ನು ಹೊಂದಿದೆ. ಗೋವಾದ ಪ್ರಮುಖ ನದಿಯಾದ ಮಾಂಡೋವಿ ನದಿಯಿಂದ ಈ ಜಲಪಾತವು ರೂಪಗೊಂಡಿದೆ. ಇದು ಧುಮುಕುವುದನ್ನು ಗಮನಿಸಿದಾಗ ಸಾಕ್ಷಾತ್ ನೊರೆ ಹಾಲು ಬಿಳುತ್ತಿರುವಂತೆ ಗೋಚರಿಸುವುದರಿಂದ ಇದಕ್ಕೆ ದೂಧ್ ಸಾಗರ್ ಎಂಬ ಹೆಸರು ಬಂದಿದೆ. ಮರಾಠಿ ಹಾಗೂ ಹಿಂದಿ ಭಾಷೇಯಲ್ಲಿ ದೂಧ್ ಎಂದರೆ ಹಾಲು ಎಂದಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X