Search
  • Follow NativePlanet
Share
» »ಕರ್ನಾಟಕದಲ್ಲಿರುವ 30 ಜಿಲ್ಲೆಗಳ ಪರಿಚಯ

ಕರ್ನಾಟಕದಲ್ಲಿರುವ 30 ಜಿಲ್ಲೆಗಳ ಪರಿಚಯ

By Vijay

ದೇಶದ ಎಂಟನೆಯ ದೊಡ್ಡ ಹಾಗು 9 ನೆಯ ಹೆಚ್ಚು ಜನಸಂಖ್ಯೆಯುಳ್ಳ ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ಒಂದು ಭವ್ಯ ಪ್ರವಾಸಿ ತಾಣವಾಗಿದೆ. ಶಿಲ್ಪ ಕಲೆಯಿಂದ ಹಿಡಿದು ಮನಮೋಹಕ ಕಡಲ ತೀರದವರೆಗೂ ಹಾಗು ಐತಿಹಾಸಿಕ ಸ್ಮಾರಕಗಳಿಂದ ಹಿಡಿದು ವೈಭವೋಪೇತ ಶಾಪಿಂಗ್ ಮಾಲ್ ಗಳ ವರೆಗೂ ಎಲ್ಲವನ್ನು ಒಳಗೊಂಡಿರುವ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳ ಆನಂದವನ್ನು ಈ ರಾಜ್ಯದಲ್ಲಿ ಸವಿಯಬಹುದು. ಇನ್ನೂ ಧಾರ್ಮಿಕವಾಗಿಯೂ ಈ ರಾಜ್ಯದಲ್ಲಿ ಹಲವು ಸುಪ್ರಸಿದ್ಧ ಯಾತ್ರಾ ಕ್ಷೇತ್ರಗಳನ್ನು ಕಾಣಬಹುದು. ಕೊಲ್ಲೂರು ಮೂಕಾಂಬಿಕೆಯಾಗಲಿ, ಧರ್ಮಸ್ಥಳವಾಗಲಿ ಇಲ್ಲವೆ ಸರ್ಪ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವಾಗಲಿ ಅಥವಾ ಅತಿ ಎತ್ತರದ ಗೋಪುರ ಹೊಂದಿರುವ ಶ್ರೀ ಕ್ಷೇತ್ರ ಮುರುಡೆಶ್ವರವಾಗಲಿ ಪ್ರತಿಯೊಂದು ಸ್ಥಳಗಳು ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಭಾರತದ ಎಲ್ಲೆಡೆಯಿಂದಲೂ ಅಸಂಖ್ಯಾತ ಭಕ್ತಾದಿಗಳನ್ನು ಹಾಗು ಪ್ರವಾಸಿಗರನ್ನು ಪ್ರತಿ ವರ್ಷವು ಆಕರ್ಷಿಸುತ್ತದೆ.

2012-13 ನೆಯ ಸಾಲಿನಲ್ಲಿ ಕರ್ನಾಟಕದ "ಸ್ಕಾಟ್ ಲ್ಯಾಂಡ್" ಎಂದೆ ಜನಪ್ರಿಯವಾದ ಪ್ರಖ್ಯಾತ ಕೊಡಗು ಗಿರಿಧಾಮವು ಪಕ್ಕದ ಕೇರಳದಲ್ಲಿರುವ ಸುಮಧುರ ಗಿರಿಧಾಮ ಮುನ್ನಾರ್ ಗಿಂತಲೂ ಹೆಚ್ಚಿನ ಜನಪ್ರಿಯ ತಾಣವಾಗಿ ಹೊರಹೊಮ್ಮಿರುವುದು ಕರ್ನಾಟಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಆಶಯವಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 30 ಜಿಲ್ಲೆಗಳಿದ್ದು ಪ್ರತಿಯೊಂದು ಜಿಲ್ಲೆಯು ತಮ್ಮದೆ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಲೇಖನದ ಮೂಲಕ ಆ ಮುವತ್ತೂ ಜಿಲ್ಲೆಗಳ ಚಿತ್ರ ಪ್ರವಾಸ ಮಾಡಿ ಹಾಗು ಸಮಯಾವಕಾಶ ಸಿಕ್ಕಾಗಲೆಲ್ಲ ಆ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲು ಯೋಜನೆ ಹಾಕಿ. ಇದರಿಂದ ನಮ್ಮಲ್ಲಿರುವ ವೈವಿಧ್ಯಮಯ ಪರಂಪರೆ, ಸಂಸ್ಕೃತಿಯ ಅನುಭವ ನಿಮಗಾಗುವುದರಲ್ಲಿ ಯಾವುದೆ ಸಂಶಯವಿಲ್ಲ.

ಬೆಂಗಳೂರು ನಗರ ಜಿಲ್ಲೆ:

ಬೆಂಗಳೂರು ನಗರ ಜಿಲ್ಲೆ:

1986 ರಿಂದ ಚಲಾವಣೆಗೆ ಬಂದ ಬೆಂಗಳೂರು ನಗರ ಜಿಲ್ಲೆಯು 4 ತಲೂಕುಗಳು, 17 ಹೋಬಳಿಗಳು, 668 ಹಳ್ಳಿಗಳು ಹಾಗು 9 ಪುರಸಭೆಗಳನ್ನು ಒಳಗೊಂಡಿದೆ. ಕರ್ನಾಟಕದ ಹೆಮ್ಮೆಯ ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರು ನಗರವು ಈ ಜಿಲ್ಲೆಯಲ್ಲಿದ್ದು ಹಲವಾರು ಗಮ್ಯ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ವೀಕ್ಷಿಸಬಹುದು. 2,208 ಚ.ಕಿ.ಮೀ ವಿಸ್ತೀರ್ಣವನ್ನು ಈ ಜಿಲ್ಲೆ ಹೊಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆ:

ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ವಿಭಾಗಗಳು, ನಾಲ್ಕು ತಾಲೂಕುಗಳು, 35 ಹೋಬಳಿಗಳು ಹಾಗು 1500 ಕ್ಕೂ ಅಧಿಕ ಹಳ್ಳಿಗಳಿವೆ. ಈ ಪ್ರದೇಶದ ಬಹುತೇಕ ಜನರು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ ಉದ್ಯಮಗಳು ತಲೆ ಎತ್ತುತ್ತಿವೆ. ಈ ಪ್ರದೇಶದ ವಿಸ್ತೀರ್ಣ 2,259 ಚ.ಕಿ.ಮೀ.

ಚಿತ್ರಕೃಪೆ: Amol.Gaitonde

ಬೆಳಗಾವಿ ಜಿಲ್ಲೆ:

ಬೆಳಗಾವಿ ಜಿಲ್ಲೆ:

ಉತ್ತರ ಕರ್ನಾಟಕದ ಮಲೆನಾಡ ಸಿರಿಯ ಬೆಳಗಾವಿ ಜಿಲ್ಲೆಯು ಕರ್ನಾಟಕದ ಎರಡನೆಯ ರಾಜಧಾನಿ ಎಂಬ ನಾಮಾಂಕಿತವನ್ನು ಹೊಂದಿದ್ದು ಕರ್ನಾಟಕದ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ಜಿಲ್ಲೆಯಾಗಿದೆ. ಬೆಂಗಳೂರಿನ ವಾಯವ್ಯಕ್ಕೆ 510 ಕಿ.ಮೀ ಗಳಷ್ಟು ದೂರವಿರುವ ಈ ಜಿಲ್ಲೆಯು 13,415 ಚ.ಕಿ.ಮೀ ವಸ್ತೀರ್ಣದಲ್ಲಿ ವ್ಯಾಪಿಸಿದೆ. ಈ ಜಿಲ್ಲೆಯಲ್ಲಿ ಹಲವಾರು ಭವ್ಯ ಪ್ರವಾಸಿ ತಾಣಗಳನ್ನು ಕಾಣಬಹುದು.

ಮೈಸೂರು ಜಿಲ್ಲೆ:

ಮೈಸೂರು ಜಿಲ್ಲೆ:

ಬೆಂಗಳೂರಿನ ನೈರುತ್ಯ ಭಾಗಕ್ಕೆ ಸುಮಾರು 143 ಕಿ.ಮೀ ಗಳಷ್ಟು ದೂರವಿರುವ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯು ಒಂದು ಗಮ್ಯ ಪ್ರವಾಸಿ ಆಕರ್ಷಣೆಯಾಗಿದೆ. 6,854 ಚ.ಕಿ.ಮೀ ಗಳಷ್ಟು ವಿಸ್ತೀರ್ಣ ಹೊಂದಿರುವ ಈ ಜಿಲ್ಲೆಯು ಏಳು ತಾಲೂಕುಗಳನ್ನು ಹೊಂದಿದೆ.

ಚಿತ್ರಕೃಪೆ: Vijay Pandey

ದಕ್ಷಿಣ ಕನ್ನಡ/ಮಂಗಳೂರು:

ದಕ್ಷಿಣ ಕನ್ನಡ/ಮಂಗಳೂರು:

ದಕ್ಷಿಣ ಕನ್ನಡವು ಒಂದು ಕರಾವಳಿ ಜಿಲ್ಲೆಯಾಗಿದ್ದು ಉಡುಪಿ, ಕೊಡಗು ಹಾಗು ಚಿಕ್ಕಮಗಳೂರು ಜಿಲ್ಲೆಗಳಿಂದ ಸುತ್ತುವರೆದಿದೆ. 4,866 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಜಿಲ್ಲೆಯು ಮಂಗಳೂರು, ಬಂಟವಾಳ, ಪುತ್ತೂರು, ಸೂಳ್ಯ, ಬೆಳ್ತಂಗಡಿ ಸೇರಿ ಐದು ತಾಲೂಕುಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Premkudva

ಉತ್ತರ ಕನ್ನಡ/ಕಾರವಾರ:

ಉತ್ತರ ಕನ್ನಡ/ಕಾರವಾರ:

ನಾರ್ತ್ ಕೆನರಾ ಎಂದು ಕರೆಯಲ್ಪಡುವ ಈ ಕೊಂಕಣ ಜಿಲ್ಲೆಯು ಗೋವಾ, ಬೆಳಗಾವಿ, ಧಾರವಾಡ, ಹಾವೇರಿ, ಉಡುಪಿ ಹಾಗು ಶಿವಮೊಗ್ಗ ಜಿಲ್ಲೆಗಳಿಂದ ಸುತ್ತುವರೆದಿದೆ. ಸುಂದರ ಪ್ರಶಾಂತ ಕಡಲ ತೀರಗಳನ್ನು ಹೊಂದಿರುವ ಈ ಜಿಲ್ಲೆಯು ಬೆಂಗಳೂರಿನಿಂದ ಸುಮಾರು 520 ಕಿ.ಮೀ ಗಳಷ್ಟು ದೂರದಲ್ಲಿದ್ದು, 11 ತಾಲೂಕುಗಳನ್ನು ಒಳಗೊಂಡಿದೆ. 10,291 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಈ ಜಿಲ್ಲೆ ಒಂದು ಉತ್ತಮವಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ತಾಣವಾಗಿದೆ.

ಚಿತ್ರಕೃಪೆ: Neinsun

ಕೊಡಗು:

ಕೊಡಗು:

ಕರ್ನಾಟಕದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯ ಗಿರಿಧಾಮ ಕೊಡಗು ಜಿಲ್ಲೆಯು ಭಾರತದ "ಸ್ಕಾಟ್ ಲ್ಯಾಂಡ್" ಎಂದೆ ಜನಪ್ರಿಯವಾಗಿದೆ. ಇಲ್ಲಿನ್ ನೈಸರ್ಗಿಕ ಸಿರಿಯಾಗಲಿ ಅಥವಾ ಸುಂದರ ಕಾಫಿ ತೋಟಗಳಾಗಲಿ ಎಲ್ಲವೂ ಆಕರ್ಷಣಿಯವಾಗಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆಗಳೆಂಬ ಮೂರು ತಾಲೂಕುಗಳನ್ನು ಹೊಂದಿರುವ ಜಿಲ್ಲೆಯು 4,102 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಲ್ಲಿ ವ್ಯಾಪಿಸಿದೆ.

ಚಿತ್ರಕೃಪೆ: Rathishkrishnan

ಉಡುಪಿ:

ಉಡುಪಿ:

ಕರ್ನಾಟಕದಲ್ಲಿ ಉಡುಪಿ ಜಿಲ್ಲೆಯನ್ನು 1997 ರಲ್ಲಿ ರಚಿಸಲಾಯಿತು. ದಕ್ಷಿಣ ಕನ್ನಡದಿಂದ ಉಡುಪಿ, ಕುಂದಾಪುರ ಹಾಗು ಕಾರ್ಕಳಗಳನ್ನು ಬೇರ್ಪಡಿಸಿ ಉಡುಪಿ ಜಿಲ್ಲೆಯನ್ನು ರಚಿಸಲಾಗಿದ್ದು 3,880 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 405 ಕಿ.ಮೀಗಳಷ್ಟು ದೂರವಿರುವ ಈ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವಪಡೆದಿದೆ.

ಚಿತ್ರಕೃಪೆ: Neinsun

ಗುಲಬರ್ಗಾ:

ಗುಲಬರ್ಗಾ:

ಬೆಂಗಳೂರಿನ ಉತ್ತರಕ್ಕೆ ಸುಮಾರು 575 ಕಿ.ಮೀ ಗಳಷ್ಟು ದೂರವಿರುವ ಗುಲಬರ್ಗಾ ಜಿಲ್ಲೆಯು ಬಿಜಾಪುರ, ಬೀದರ್ ಹಾಗು ಯಾದಗಿರಿ ಜಿಲ್ಲೆಗಳಿಂದ ಸುತ್ತುವರೆದಿದೆ. ಹಲವು ಐತಿಹಾಸಿಕ ಸ್ಮಾರಕಗಳನ್ನೊಳಗೊಂಡಿರುವ ಈ ಜಿಲ್ಲೆಯು 10,951 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು ಏಳು ತಾಲೂಕುಗಳನ್ನು ಹೊಂದಿದೆ.

ಚಿತ್ರಕೃಪೆ: SridharSaraf

ಬಿಜಾಪುರ:

ಬಿಜಾಪುರ:

ಕರ್ನಾಟಕದ ಈ ಐತಿಹಾಸಿಕ ನಗರಿಯು ಇಂಡೊ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಸ್ಮಾರಕಗಳಿಂದಾಗಿ ಜನಪ್ರಿಯವಾಗಿದ್ದು ಶೈಕ್ಷಣಿಕ ಪ್ರವಾಸದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ. ಬಿಜಾಪುರದ ಪ್ರವಾಸಿ ಆಕರ್ಷಣೆಗಳ ಕುರಿತು ಇಲ್ಲಿ ಮಾಹಿತಿ ಪಡೆಯಿರಿ. ಬೆಂಗಳೂರಿನ ಉತ್ತರಕ್ಕೆ ಸುಮಾರು 525 ಕಿ.ಮೀ ಗಳಷ್ಟು ದೂರವಿರುವ ಈ ಜಿಲ್ಲೆಯು 10,494 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಐದು ತಾಲೂಕುಗಳನ್ನು ಒಳಗೊಂಡಿದೆ.

ಧಾರವಾಡ:

ಧಾರವಾಡ:

ಹುಬ್ಬಳ್ಳಿ-ಧಾರವಾಡ ಅವಳಿ ನಗರ ಖ್ಯಾತಿಯ ಧಾರವಾಡ ಜಿಲ್ಲೆಯು ಬೆಂಗಳೂರಿನಿಂದ 430 ಕಿ.ಮೀ ಗಳಷ್ಟು ದೂರವಿದ್ದು 4,260 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಐದು ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆಯಲ್ಲಿ ಹಲವು ಪ್ರವಾಸಿ ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು.

ಚಿತ್ರಕೃಪೆ: Rb goudar

ರಾಯಚೂರು:

ರಾಯಚೂರು:

ಕರ್ನಾಟಕದ ಈಶಾನ್ಯ ಭಾಗದಲ್ಲಿ ನೆಲೆಸಿರುವ ರಾಯಚೂರು ಜಿಲ್ಲೆಯು ಯಾದಗಿರಿ, ಬಾಗಲಕೋಟೆ, ಕೊಪ್ಪಳ ಹಾಗು ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದಿದೆ. ಬೆಂಗಳೂರಿನ ಉತ್ತರಕ್ಕೆ ಸುಮಾರು 415 ಕಿ.ಮೀಗಳಷ್ಟು ದೂರವಿರುವ ಈ ಜಿಲ್ಲೆಯು 6,827 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಐದು ತಾಲೂಕುಗಳನ್ನು ಒಳಗೊಂಡಿದೆ. ಮಾತೊಂದು ಸಂಗತಿಯೆಂದರೆ ಕರ್ನಾಟಕದಲ್ಲಿ ಬಳಸಲ್ಪಡುವ ವಿದ್ಯುತ್ತಿನ ಬಹು ಭಾಗದಷ್ಟು ವಿದ್ಯುತ್ ಅನ್ನು ರಾಯಚೂರಿನ ಶಕ್ತಿನಗರದ ಕಲ್ಲಿದ್ದಲಿನ ಉಷ್ಣ ಸ್ಥಾವರದಲ್ಲಿಯೆ ಉತ್ಪಾದಿಸಲಾಗುತ್ತದೆ.

ಚಿತ್ರಕೃಪೆ: Suresh.A

ಹಾಸನ:

ಹಾಸನ:

ಒಂದೊಮ್ಮೆ ಹೊಯ್ಸಳರಾಳಿದ ಹಾಸನ ಜಿಲ್ಲೆಯು ವಾಸ್ತು ಶಿಲ್ಪ ಅದ್ಭುತದ ಹಳೇಬೀಡು, ಬೇಲೂರಿನಂತಹ ತಾಣಗಳಿಗೆ ತವರಾಗಿದೆ. ಎಂಟು ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆಯು 6,814 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಬೆಂಗಳೂರಿನಿಂದ 185 ಕಿ.ಮೀ ಗಳ ಅಂತರದಲ್ಲಿದೆ.

ಚಿತ್ರಕೃಪೆ: Anks.manuja

ಶಿವಮೊಗ್ಗ:

ಶಿವಮೊಗ್ಗ:

ಮಲೆನಾಡ ಸಿರಿ ಶಿವಮೊಗ್ಗ ಜಿಲ್ಲೆಯು ಪಶ್ಚಿಮ ಘಟ್ಟದ ಮನಮೋಹಕ ನೋಟದೊಂದಿಗೆ ಕೂಡಿದ್ದು ವಿಶ್ವಪ್ರಖ್ಯಾತ ಜೋಗ ಜಲಪಾತವಿರುವ ಜಿಲ್ಲೆಯೂ ಆಗಿದೆ. ಏಳು ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆಯು ಬೆಂಗಳೂರಿನಿಂದ 305 ಕಿ.ಮೀ ಅಂತರದಲ್ಲಿದ್ದು 8,477 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇದೊಂದು ಆದರ್ಶಮಯ ಪ್ರವಾಸಿ ಜಿಲ್ಲೆಯೂ ಹೌದು.

ಚಿತ್ರಕೃಪೆ: Manjeshpv

ತುಮಕೂರು:

ತುಮಕೂರು:

10,598 ಚ.ಕಿ.ಮೀ ಗಳಷ್ಟು ವಿಸ್ತೀರ್ಣ ಹೊಂದಿರುವ ತುಮಕೂರು ಜಿಲ್ಲೆಯು ಬೆಂಗಳೂರಿಗೆ ಬಹು ಹತ್ತಿರದಲ್ಲಿರುವ ಜಿಲ್ಲೆಯಾಗಿದೆ. ಕೆಲವು ಗಮ್ಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಈ ಜಿಲ್ಲೆಯು 10 ತಾಲೂಕುಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Manjeshpv

ಹಾವೇರಿ:

ಹಾವೇರಿ:

ಕರ್ನಾಟಕದ 30 ಜಿಲ್ಲೆಗಳಲ್ಲಿ ಒಂದಾಗಿರುವ ಹಾವೇರಿ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದ ಉತ್ತಮವಾಗಿ ಬೆಳೆಯಬಹುದಾದ ಜಿಲ್ಲೆಯಾಗಿದೆ. ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಹತ್ತಿರವಾಗಿರುವ ಈ ಜಿಲ್ಲೆಯು 4,823 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು ಏಳು ತಾಲೂಕುಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ 336 ಕಿ.ಮೀ ದೂರವಿರುವ ಈ ಜಿಲ್ಲೆಯು ಹುಬ್ಬಳ್ಳಿ ಹಾಗು ದಾವಣೆಗೆರೆಗೆ ಬಹು ಹತ್ತಿರದಲ್ಲಿದೆ.

ಚಿತ್ರಕೃಪೆ: Rhalasur113

ಗದಗ್:

ಗದಗ್:

4,656 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಗದಗ್ ಜಿಲ್ಲೆಯು ಐದು ತಾಲೂಕುಗಳನ್ನು ಒಳಗೊಂಡಿದ್ದು, ಬೆಂಗಳೂರಿನಿಂದ 464 ಕಿ.ಮೀ ದೂರದಲ್ಲಿದೆ. ಈ ಜಿಲ್ಲೆಯು ಬಾಗಲಕೋಟೆ, ಕೊಪ್ಪಳ ಹಾಗು ಬಳ್ಳಾರಿ ಜಿಲ್ಲೆಗಳನ್ನು ತನ್ನ ಅಕ್ಕ ಪಕ್ಕದಲ್ಲಿ ಹೊಂದಿದೆ. ಈ ಜಿಲ್ಲೆಯೂ ಕೂಡ ಹಲವು ಪ್ರವಾಸಿ ಆಕರ್ಷಣೆಗಳಿಂದಾಗಿ ಹೆಸರುವಾಸಿಯಾಗಿದೆ.

ಬಾಗಲಕೋಟೆ:

ಬಾಗಲಕೋಟೆ:

ಬಾಗಲಕೋಟೆ ಜಿಲ್ಲೆಯು ಬಿಜಾಪುರ, ಬೆಳಗಾವಿ, ಗದಗ್, ಕೊಪ್ಪಳ ಹಾಗು ರಾಯಚೂರು ಜಿಲ್ಲೆಗಳಿಂದ ಸುತ್ತುವರೆದಿದೆ. ಕೂಡಲ ಸಂಗಮ, ಬಾದಾಮಿ, ಪಟ್ಟದಕಲ್ಲುಗಳಂತಹ ಪ್ರಸಿದ್ಧ ಧಾರ್ಮಿಕ ಹಾಗು ಐತಿಹಾಸಿಕ ಸ್ಥಳಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು. 6,575 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಈ ಜಿಲ್ಲೆಯು 6 ತಾಲೂಕುಗಳನ್ನು ಹೊಂದಿದ್ದು ಬೆಂಗಳೂರಿನಿಂದ 480 ಕಿ.ಮೀ ದೂರದಲ್ಲಿದೆ.

ದಾವಣಗೆರೆ:

ದಾವಣಗೆರೆ:

1997 ರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಡಿಸಿ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. 6 ತಾಲೂಕುಗಳು, 24 ಹೋಬಳಿಗಳು ಹಾಗು 230 ಗ್ರಾಮಪಂಚಾಯತ್ ಗಳನ್ನು ಹೊಂದಿರುವ ಈ ಜಿಲ್ಲೆಯು 5,924 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ದಾವನ ಕೆರೆ ಯಿಂದ ದಾವಣಗೆರೆ ಎಂಬ ಹೆಸರು ಪಡೆದ ಈ ಜಿಲ್ಲೆಯು ಹರಿಹರ, ಬಗಲಿ ಗಳಂತಹ ಐತಿಹಾಸಿಕ ಹಾಗು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Irrigator

ಚಿಕ್ಕಮಗಳೂರು:

ಚಿಕ್ಕಮಗಳೂರು:

ಭಾರತದಲ್ಲಿ ಪ್ರಥಮವಾಗಿ ಕಾಫಿ ಬೆಳೆಯಲಾದ ಚಿಕ್ಕಮಗಳೂರು ಜಿಲ್ಲೆಯು ಕರ್ನಾಟಕದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯೂ ಹೌದು. ಏಳು ತಾಲೂಕುಗಳನ್ನು ಹೊಂದಿರುವ ಈ ಜಿಲ್ಲೆಯು 7,201 ಚ.ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಅನೇಕ ಧಾರ್ಮಿಕ ಹಾಗು ಪ್ರಾಕೃತಿಕ ಪ್ರವಾಸಿ ಗಮ್ಯ ತಾಣಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು. ಬೆಂಗಳೂರಿನಿಂದ 245 ಕಿ.ಮೀ ದೂರವಿರುವ ಈ ಜಿಲ್ಲೆಯನ್ನು ಖಾಸಗಿ ಹಾಗು ಸರಕಾರಿ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Srinivasa83

ಚಾಮರಾಜನಗರ:

ಚಾಮರಾಜನಗರ:

ಕರ್ನಾಟಕದ ದಕ್ಷಿಣದ ತುತ್ತ ತುದಿ ಜಿಲ್ಲೆಯಾದ ಚಾಮರಾಜನಗರವು ನಾಲ್ಕು ತಾಲೂಕುಗಳನ್ನು ಒಳಗೊಂಡಿದ್ದು, 5,101 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. 1998 ರಲ್ಲಿ ಮೈಸೂರು ಜಿಲ್ಲೆಯಿಂದ ಬೇರ್ಪಡಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಮೂಲತಃ ಅರಿಕೊಟ್ಟಾರಾ ಎಂಬ ಹೆಸರಿನ ಈ ಸ್ಥಳವು ಮೈಸೂರಿನ ಮಹಾರಾಜರಾಗಿದ್ದ ಚಾಮರಾಜ ಒಡೇಯರ್ ಇಲ್ಲಿಯೆ ಹುಟ್ಟಿದುದರಿಂದ ಚಾಮರಾಜನಗರ ಎಂಬ ಹೆಸರು ಪಡೆಯಿತು.

ಚಿತ್ರಕೃಪೆ: Vedamurthy J

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ:

2007 ರಲ್ಲಿ ಕೋಲಾರ ಜಿಲ್ಲೆಯನ್ನು ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಚಿಸಲಾಯಿತು. ಆರು ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆಯು 4,524 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ನಂದಿ ಬೆಟ್ಟ, ಮುದ್ದೇನಹಳ್ಳಿಗಳಂತಹ ಪ್ರವಾಸಿ ಆಕರ್ಷಣೆಗಳು ಈ ಜಿಲ್ಲೆಯಲ್ಲಿದೆ.

ಚಿತ್ರಕೃಪೆ: Jayaprakash Narayan MK

ಚಿತ್ರದುರ್ಗ:

ಚಿತ್ರದುರ್ಗ:

ಐತಿಹಾಸಿಕ ಪ್ರಸಿದ್ಧ ಚಿತ್ರದುರ್ಗ ಕೋಟೆಯನ್ನು ಒಳಗೊಂಡಿರುವ ಈ ಜಿಲ್ಲೆಯು ಆರು ತಾಲೂಕುಗಳನ್ನು ಹೊಂದಿದ್ದು, 8,440 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರವಿರುವ ಈ ಜಿಲ್ಲೆಯು ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿ ನೆಲೆಸಿದ್ದು ಹಲವು ಗಮ್ಯ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು.

ಚಿತ್ರಕೃಪೆ: Pavithrah

ಕೋಲಾರ:

ಕೋಲಾರ:

ಕರ್ನಾಟಕದ ಬಂಗಾರ ಜಿಲ್ಲೆ ಕೋಲಾರವು ಐದು ತಾಲೂಕುಗಳನ್ನು ಒಳಗೊಂಡಿದ್ದು 3,969 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಬೆಂಗಳೂರಿನ ಪೂರ್ವಕ್ಕೆ ಕೇವಲ 65 ಕಿ.ಮೀ ದೂರದಲ್ಲಿರುವ ಈ ಜಿಲ್ಲೆಯು ಪ್ರಸಿದ್ಧ ಕೋಲಾರಮ್ಮ ದೇವಿಯಿಂದಾಗಿ ಹೆಸರುವಾಸಿಯಾಗಿದೆ. ಪ್ರಾಚೀನ ಕಾಲದ ಇತಿಹಾಸ ಹೊಂದಿರುವ ಈ ಜಿಲ್ಲೆಯು ಹಲವು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.

ಚಿತ್ರಕೃಪೆ: Hariharan Arunachalam

ಬೀದರ್:

ಬೀದರ್:

ಕರ್ನಾಟಕ ರಾಜ್ಯದ ಉತ್ತರ ದಿಕ್ಕಿನ ತುತ್ತ ತುದಿಯ ಜಿಲ್ಲೆ ಇದಾಗಿದ್ದು ಐದು ತಾಲೂಕುಗಳನ್ನು ಒಳಗೊಂಡು 5,448 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಆಂಧ್ರದ ಹೈದರಾಬಾದ್ ನಿಂದ ಕೇವಲ 125 ಕಿ.ಮೀ ದೂರವಿರುವ ಈ ಜಿಲ್ಲೆಯು 1956 ರ ವರೆಗೂ ಹೈದರಾಬಾದ್ ರಾಜ್ಯದ ಭಾಗವಾಗಿತ್ತು. ಹಲವು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿರುವ ಈ ಜಿಲ್ಲೆಯು ಬೆಂಗಳೂರಿನಿಂದ ಸುಮಾರು 700 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Varun Wudayagiri

ಕೊಪ್ಪಳ:

ಕೊಪ್ಪಳ:

ಮೂಲತಃ ಕೊಪ್ಪನಗರ ಎಂಬ ಹೆಸರನ್ನು ಹೊಂದಿದ್ದ ಇಂದಿನ ಉತ್ತರ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯು ನಾಲ್ಕು ತಾಲೂಕುಗಳನ್ನು ಒಳಗೊಂಡಿದ್ದು 7,189 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಹಂಪಿ, ಆನೆಗುಂದಿಯಂತಹ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳು ಈ ಜಿಲ್ಲೆಗೆ ಬಹು ಹತ್ತಿರದಲ್ಲಿವೆ. ಅಲ್ಲದೆ ಈ ಜಿಲ್ಲೆಯಲ್ಲೂ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ.

ಚಿತ್ರಕೃಪೆ: Ravibhalli

ಬಳ್ಳಾರಿ:

ಬಳ್ಳಾರಿ:

ಐತಿಹಾಸಿಕ ಸ್ಮಾರಕಗಳು, ಫಾರ್ಮ್ ಲ್ಯಾಂಡ್ ಗಳಿಂದ ತುಂಬಿರುವ ಬಳ್ಳಾರಿ ಜಿಲ್ಲೆಯು ಖನಿಜದದಿರುಗಳಿಂದಲೂ ಸಂಪದ್ಭರಿತವಾಗಿದೆ. ಹಂಪಿಯಂತಹ ವಿಶ್ವ ಪ್ರಖ್ಯಾತ ಪ್ರವಾಸಿ ತಾಣವು ಬಳ್ಳಾರಿ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ 310 ಕಿ.ಮೀ ದೂರವಿರುವ ಈ ಜಿಲ್ಲೆಯು 8,450 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು 7 ತಾಲೂಕುಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Ravibhalli

ಮಂಡ್ಯ:

ಮಂಡ್ಯ:

ಕರ್ನಾಟಕದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯು ಬೆಂಗಳೂರಿನಿಂದ 121 ಕಿ.ಮೀ ದೂರವಿದ್ದು 4,961 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. 7 ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆಯಲ್ಲಿ ಹಲವಾರು ಧಾರ್ಮಿಕ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಕರ್ನಾಟಕದಲ್ಲೆ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಇದಾಗಿದೆ.

ಚಿತ್ರಕೃಪೆ: Dineshkannambadi

 ರಾಮನಗರ:

ರಾಮನಗರ:

ಸುಪ್ರಸಿದ್ಧ ಹಿಂದಿ ಚಲನಚಿತ್ರ "ಶೋಲೆ" ಚಿತ್ರೀಕರಣಗೊಂಡ ರಾಮನಗರ ಜಿಲ್ಲೆಯು ಬೆಂಗಳೂರಿನ ನೈರುತ್ಯ ಭಾಗಕ್ಕೆ ಕೇವಲ 50 ಕಿ.ಮೀ ದೂರವಿದ್ದು 3,556 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ 23 ನೆ ಅಗಸ್ಟ್ 2007 ರಂದು ರಾಮನಗರ ಜಿಲ್ಲೆಯನ್ನು ರಚಿಸಲಾಯಿತು. ನಾಲ್ಕು ತಾಲೂಕುಗಳನ್ನು ಹೊಂದಿರುವ ಈ ಜಿಲ್ಲೆಯು ಪರ್ವತಾರೋಹಣಕ್ಕೆ ಅನುಕೂಲಕರವಾಗಿರುವ ಹಲವಾರು ಪ್ರವಾಸಿ ಆಕರ್ಷಣೆಯ ಬೆಟ್ಟ ಗುಡ್ಡಗಳನ್ನು ಹೊಂದಿದೆ.

ಚಿತ್ರಕೃಪೆ: Redolentreef

ಯಾದಗಿರಿ:

ಯಾದಗಿರಿ:

ಏಪ್ರಿಲ್ 10, 2010 ರಂದು ಗುಲಬರ್ಗಾ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಜಿಲ್ಲೆಯನ್ನು ರಚಿಸಲಾಯಿತು. ಪ್ರಸ್ತುತ ಈ ಜಿಲ್ಲೆಯೆ ಕರ್ನಾಟಕದ 30 ನೆಯ ಜಿಲ್ಲೆಯಾಗಿದೆ. ಶಾಪೂರ್, ಶೋರಾಪೂರ್ ಹಾಗು ಯಾದಗಿರಿ ತಾಲೂಕುಗಳನ್ನು ಹೊಂದಿರುವ ಈ ಜಿಲ್ಲೆಯು 5,273 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಒಂದೊಮ್ಮೆ ಯಾದವ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ಜಿಲ್ಲೆಯನ್ನು ಯಾದವಗಿರಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು 500 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Yadgirtown.gov.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X