Search
  • Follow NativePlanet
Share
» »ಸಾವಿರ ವರ್ಷದ ಪವಿತ್ರ ಕ್ಷೇತ್ರ

ಸಾವಿರ ವರ್ಷದ ಪವಿತ್ರ ಕ್ಷೇತ್ರ

ತಾಂಬರಂ ಬಳಿಯ ಮದಂಬಕ್ಕಂ ಊರಿನಲ್ಲಿರುವ ಈ ದೇಗುಲ ಶಿವನಿಗೆ ಮೀಸಲು. ಈ ಪವಿತ್ರ ಕ್ಷೇತ್ರ ಬೆಂಗಳೂರಿನಿಂದ 334.2 ಕಿ.ಮೀ. ಹಾಗೂ ಚೆನ್ನೈನಿಂದ 30.3 ಕಿ.ಮೀ. ದೂರದಲ್ಲಿದೆ.

By Divya

ಪುರಾತನ ದೇಗುಲ ಎಂದರೆ ಅದೇನೋ ಖುಷಿ. ದೇಗುಲದ ಸುಂದರ ಕೆತ್ತನೆ, ಸುತ್ತಲ ವಾತಾವರಣ ಹಾಗೂ ಅವುಗಳ ಇತಿಹಾಸ ಮನಸ್ಸಿಗೆ ಹೊಸತನದ ಅನುಭವ ನೀಡುತ್ತವೆ. ಅರಸರು ಆಳಿ ಹೋದ ಶ್ರೀಮಂತ ರಾಷ್ಟ್ರ ಭಾರತ. ಇಲ್ಲಿ ಅನೇಕ ಭವ್ಯ ದೇಗುಲಗಳು ನೆಲೆನಿಂತಿವೆ. ಅವುಗಳಲ್ಲಿ ಧೇನುಪುರೇಶ್ವರ ದೇಗುಲವು ಒಂದು.

ಚೆನ್ನೈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ತಮಿಳುನಾಡಿನಲ್ಲಿದೆ. ತಾಂಬರಂ ಬಳಿಯ ಮದಂಬಕ್ಕಂ ಊರಿನಲ್ಲಿರುವ ಈ ದೇಗುಲ ಶಿವನಿಗೆ ಮೀಸಲು. ಈ ಪವಿತ್ರ ಕ್ಷೇತ್ರ ಬೆಂಗಳೂರಿನಿಂದ 334.2 ಕಿ.ಮೀ. ಹಾಗೂ ಚೆನ್ನೈನಿಂದ 30.3 ಕಿ.ಮೀ. ದೂರದಲ್ಲಿದೆ. ಹಾಗಾಗಿ ಚೆನ್ನೈನಿಂದ ಒಂದು ತಾಸಿನಲ್ಲೆಲ್ಲಾ ತಲುಪಬಹುದು. ಮದಂಬಕ್ಕಂ ಅನೇಕ ವಿದ್ವಾಂಸರ ತವರು ಎಂದು ಪರಿಗಣಿಸಲಾಗಿದೆ. ಪುರಾತನ ಕಾಲದ ವಿದ್ವಾಂಸರಾದ ಚತುರ್ವೇದಿಮಂಗಲಂ ಅವರು ಇದೇ ಊರಿನವರು.

ಪುರಾಣಕಥೆ

ಪುರಾಣಕಥೆ

ಈ ದೇಗುಲವು ಒಂದು ಹಸುವಿನ ಮೋಕ್ಷ ಕಥೆಯನ್ನು ಒಳಗೊಂಡಿದೆ. ಕಪಿಲ ಎನ್ನುವ ಋಷಿ ಮುನಿಯು ತನ್ನ ಎಡಗೈಯಿಂದ ಶಿವಲಿಂಗವನ್ನು ಪೂಜಿಸುತ್ತಿದ್ದನು. ಸರಿಯಾಗಿ ಪೂಜೆಮಾಡದೆ ಇರುವುದಕ್ಕಾಗಿ ಶಾಪದಿಂದ ಹಸುವಾಗಿ ಜನ್ಮ ತಾಳಿದನು. ಹಸುವಾಗಿ ಜನ್ಮ ತಳೆದ ಮೇಲೆ ಶಾಪದಿಂದ ಮೋಕ್ಷ ಪಡೆಯಲು ಪ್ರತಿದಿನ ಊರಾಚೆ ಇರುವ ಶಿವಲಿಂಗಕ್ಕೆ ಹಾಲನ್ನು ಸೊರೆದು ಬರುತ್ತಿತ್ತು. ಆದರೆ ದನಗಾಹಿ ಪ್ರತಿದಿನ ಹಾಲು ಹಿಂಡಲು ಹೋದಾಗ ಹಾಲು ಇರುತ್ತಿರಲಿಲ್ಲ. ಇದರಿಂದ ಕೋಪಗೊಂಡು ಪ್ರತಿದಿನ ಹಸುವಿಗೆ ಹೊಡೆಯುತ್ತಿದ್ದ.

ಪ್ರತಿದಿನ ಬೆತ್ತದ ಚಡಿಯ ನೋವನ್ನು ಸಹಿಸಿಕೊಂಡು ಸುಮ್ಮನಾಗುತ್ತಿತ್ತು. ಒಂದು ದಿನ ಹೊಡೆಯುವಾಗ ನೋವನ್ನು ತಾಳಲಾರದೆ ಶಿವಲಿಂಗದ ಬಳಿ ಓಡಿಹೋಯಿತು. ಹಸುವನ್ನು ಹಿಂಬಾಲಿ ಹೋಗಿದ್ದ ದನಗಾಹಿಗೆ ಆಶ್ಚರ್ಯ ಕಾದಿತ್ತು. ಹಸು ಶಿವಲಿಂಗದ ಮೇಲೆ ಹಾಲು ಸೊರೆಯುತ್ತಿರುವುದನ್ನು ಕಂಡು ದುಃಖಿತನಾದನು. ಅಂದಿನಿಂದಲೇ ಕಪಿಲ ಋಷಿಯು ತನ್ನ ಶಾಪದಿಂದ ಮೋಕ್ಷ ಮಡೆದನು. ಆ ತಾಣವೇ ಧೇನುಪುರೇಶ್ವರ ಎಂದು ಕರೆಯಲಾಯಿತು ಎನ್ನಲಾಗುತ್ತದೆ.

PC: commons.wikimedia.org

ದೇಗುಲದ ವಿಚಾರ

ದೇಗುಲದ ವಿಚಾರ

ಧೇನು ಎಂದರೆ ಹಸು. ಈ ಪುರಾಣದಿಂದಲೇ ನೆಲೆಗೊಂಡ ದೇಗುಲ ಧೇನುಪುರೇಶ್ವರ. ಇಲ್ಲಿ ಶಿವನ-ಪಾರ್ವತಿಯರನ್ನು ಆರಾಧಿಸಲಾಗುತ್ತದೆ. ಧೇನುಕಾಂಬಲ ಎಂದು ಕರೆಯಲ್ಪಡುವ ಈ ದೇವಿಗೆ ಬೇರೆ ಗರ್ಭಗುಡಿಯಿದೆ. ದೇಗುಲದ ಪ್ರಧಾನ ದೇವರ ಮುಖ ಪೂರ್ವ ಮುಖವಾಗಿದೆ. ಪಾರ್ವತಿ ದೇವಿಯ ಮುಖವು ದಕ್ಷಿಣ ಮುಖವಾಗಿರುವುದು ವಿಶೇಷ.

PC: commons.wikimedia.org

ದೇಗುಲದ ಶಿಲ್ಪಕಲೆ

ದೇಗುಲದ ಶಿಲ್ಪಕಲೆ

ಚೋಳರ ಕಾಲದಲ್ಲಿ ನಿರ್ಮಿಸಲಾದ ಈ ದೇಗುಲ ದ್ರಾವಿಡರ ಶೈಲಿಯಲ್ಲಿ ರಚನೆಗೊಂಡಿದೆ. ದೇಗುಲದಲ್ಲಿ ಸುಂದರ ಕೆತ್ತನೆಯ ಬೃಹತ್ ಕಂಬಗಳನ್ನು ಕಾಣಬಹುದು. ದೇಗುಲದ ಗೋಡೆಯ ಸುತ್ತಲೂ ವಿಶೇಷ ಕೆತ್ತನೆಗಳು ಹಾಗೂ ಮೋಹಕ ಮಂಟಪ ಇರುವುದನ್ನು ಕಾಣಬಹುದು. ಇಲ್ಲಿಯ ಒಂದು ಕಂಬದ ಮೇಲೆ ಕಪಿಲ ಋಷಿಯು ತನ್ನ ಎಡಗೈನಿಂದ ಶಿವಲಿಂಗವನ್ನು ಹಿಡಿದಿರುವ ದೃಶ್ಯದ ಕೆತ್ತನೆ ಇರುವುದನ್ನು ಗಮನಿಸಬಹುದು.

PC: commons.wikimedia.org

ಪೂಜಾ ವಿಚಾರ

ಪೂಜಾ ವಿಚಾರ

ಪ್ರತಿದಿನ ಕ್ರಮಬದ್ಧವಾಗಿ ಪೂಜಾ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಜೊತೆಗೆ ಶಿವರಾತ್ರಿ, ನವರಾತ್ರಿ ಸೇರಿದಂತೆ ಅನೇಕ ಹಬ್ಬ ಹರಿದಿನಗಳನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಇವುಗಳನ್ನು ಹೊರತು ಪಡಿಸಿದರೆ ವಿಶೇಷ ಪೂಜೆಗಳಾದ ಪ್ರದೋಶ ಹಾಗೂ ಪಂಗುನಿ ಉತ್ತಿರಮ್‍ಗಳನ್ನು ಮಾಡಲಾಗುತ್ತದೆ. ಭಕ್ತರಿಗಾಗಿ ದೇಗುಲವು ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12.30ರ ವರೆಗೆ ಹಾಗೂ ಸಂಜೆ 5 ರಿಂದ 8.30ರ ವರೆಗೆ ತೆರೆದಿರುತ್ತದೆ.

PC: commons.wikimedia.org

ಸುತ್ತಲ ಪರಿಸರ

ಸುತ್ತಲ ಪರಿಸರ

ಜನಜಂಗುಳಿಯಿಂದ ದೂರವುಳಿದ ಈ ದೇಗುಲದಲ್ಲಿ ಪ್ರಶಾಂತ ವಾತಾವರಣವಿರುತ್ತದೆ. ಸುತ್ತಲ ಹಸಿರು ಸಿರಿ ಹಾಗೂ ತಂಪು ಗಾಳಿಯಿಂದ ಭಕ್ತರ ಮನ ತಣಿಯುತ್ತದೆ. ದೇಗುಲದ ಒಳಗೂ ಸ್ವಲ್ಪ ಸಮಯ ಕುಳಿತು ನಿರಾಳ ಭಾವ ಹೊಂದಬಹುದು.

PC: commons.wikimedia.org

ಹೋಗುವ ದಾರಿ

ಹೋಗುವ ದಾರಿ

ಈ ದೇಗುಲವು ತಾಂಬರಂ-ವಾಲಚೇರಿ ರಸ್ತೆ ಮಾರ್ಗದಿಂದ 3 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ದೇವಾಲಯಕ್ಕೆ ಹೋಗಲು ಅನೇಕ ಬಸ್ ವ್ಯವಸ್ಥೆಗಳಿವೆ.

PC: commons.wikimedia.org

ಹತ್ತಿರದ ಆಕರ್ಷಣೆ

ಹತ್ತಿರದ ಆಕರ್ಷಣೆ

ಇಲ್ಲಿಗೆ ಬಂದರೆ ದೇಗುಲದ ಹತ್ತಿರ ಇರುವ ಕಲ್ಯಾಣ ಶ್ರೀನಿವಾಸ ಪೆರುಮಾಳ ದೇಗುಲ, ಝೂಲಾಜಿಕಲ್ ಪಾರ್ಕ್, ವೈಯಾಲೇಶ್ವರ ದೇಗುಲ, ಶಿವ ದೇಗುಲ, ಶ್ರೀ ಅಂಗಲಮ್ಮನ ದೇಗುಲವನ್ನು ನೋಡಬಹುದು.

PC: commons.wikimedia.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X