Search
  • Follow NativePlanet
Share
» »ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

By Vijay

ದಕ್ಷಿಣ ಭಾರತದಲ್ಲಿ ಕಂಡುಬರುವ ಪ್ರಸಿದ್ಧ ಗಿರಿಧಾಮಗಳಷ್ಟು ದೊಡ್ಡ ಮಟ್ಟದ ಗಿರಿಧಾಮವಲ್ಲದಿದ್ದರೂ ಸಹ ಈ ಗಿರಿಧಾಮವು ಸಾಕಷ್ಟು ಆಕರ್ಷಿಸುತ್ತದೆ. ಭೇಟಿ ನೀಡುವ ಪ್ರವಾಸಿಗರ ಮನದಲ್ಲಿ ಉಳಿಯುತ್ತದೆ. ಅದಕ್ಕಿಂತಲೂ ವಿಶೇಷ ಎಂದರೆ ಬೆಂಗಳೂರು ಮಹಾನಗರಕ್ಕೆ ಬಲು ಹತ್ತಿರದಲ್ಲಿ ಸ್ಥಿತವಿದೆ ಈ ಗಿರಿಧಾಮ.

ಇನ್ನೊಂದು ವಿಷೇಷವೆಂದರೆ ಈ ಗಿರಿಧಾಮವು ತನ್ನಲ್ಲಿರುವ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಅಷ್ಟೆ ಏಕೆ ರಾಮಯಾಣದ ನಂಟನ್ನೂ ಸಹ ಈ ಪುಟ್ಟ ಗಿರಿಧಾಮ ಪ್ರದೇಶ ಹೊಂದಿದೆ. ಹಾಗಾಗಿ ಹಿತಕರವಾದ ಪರಿಸರದೊಂದಿಗೆ ಧಾರ್ಮಿಕ ಭಾವವನ್ನು ಮೂಡಿಸುವಂತೆ ಮಾಡುವ ಈ ತಾಣ ಪ್ರವಾಸಿಗರ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ಗಮನ ಸೆಳೆಯುತ್ತದೆ.

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ಚಿತ್ರಕೃಪೆ: Srinivasa83

ಆ ಪುಟ್ಟ ಗಿರಿಧಾಮವೆ ದೇವರಾಯನದುರ್ಗ. ತುಮಕೂರು ಜಿಲ್ಲೆಯಲ್ಲಿ ಬರುವ ದೇವರಾಯನದುರ್ಗವು ಬೆಂಗಳೂರಿನಿಂದ 72 ಕಿ.ಮೀ ಹಾಗೂ ತುಮಕೂರು ನಗರ ಕೇಂದ್ರದಿಂದ 16 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಗಿರಿಧಾಮ ತಾಣದಲ್ಲಿರುವ ಎರಡು ಪ್ರಮುಖ ದೇವಾಲಯಗಳೆ ಯೋಗನರಸಿಂಹ ಹಾಗೂ ಭೋಗನರಸಿಂಹ ದೇವಾಲಯಗಳು. ಅಲ್ಲದೆ ಇತರೆ ಕೆಲವು ದೆಗುಲಗಳೂ ಸಹ ಇಲ್ಲಿವೆ.

ಇಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿಯ ದೇವಾಲಯವು ನೋಡಲು ಆಕರ್ಷಕವಾಗಿದ್ದು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿದೆ. ಮೈಸೂರಿನ ದೊರೆಯಾಗಿದ್ದ ಒಂದನೇಯ ಕಂಠೀರವ ನರಸಿಂಹರಾಜರಿಂದ ಈ ದೇವಾಲಯದ ನಿರ್ಮಾಣವಾಗಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ಚಿತ್ರಕೃಪೆ: Gpitta

ಇಲ್ಲಿರುವ ಗುಡ್ಡದ ಕೆಳಗೆ ಭೋಗನರಸಿಂಹನ ದೇವಾಲಯವಿದ್ದು, ಗುಡ್ಡದ ಮೇಲೆ ಯೋಗನರಸಿಂಹನ ದೇವಾಲಯ ಸ್ಥಿತವಿದೆ. ಇವೆರಡರ ಮಧ್ಯದಲ್ಲಿ ನರಸಿಂಹನ ದೇವಾಲಯವಿದ್ದು ಇದನ್ನು ಕುಂಭಿ ಎಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಗಭಗೃಹ, ಸುಕಾನಸಿ, ನವಗೃಹ ಹಾಗೂ ಮುಖಮಂಟಪಗಳಿರುವುದನ್ನು ಕಾಣಬಹುದು.

ದೇವಾಲಯದ ಜೊತೆಗೆ ಮೂರು ಪವಿತ್ರ ಕಲ್ಯಾಣಿಗಳು ಅಥವಾ ತೀರ್ಥಗಳಿರುವುದನ್ನು ನೋಡಬಹುದು. ಇವುಗಳನ್ನು ನರಸಿಂಹ ತೀರ್ಥ, ಪ್ರಸನ್ನ ತೀರ್ಥ ಹಾಗೂ ಪಾದ ತೀರ್ಥಗಳೆಂದು ಕರೆಯಲಾಗುತ್ತದೆ. ಇವುಗಳ ಜೊತೆ ಜೊತೆಯಾಗಿ ಆಂಜನೇಯನ ದೇಗಲವೂ ಸಹ ಇಲ್ಲಿದೆ. ಇಲ್ಲಿ ಹನುಮನನ್ನು ಸಂಜೀವರಾಯ ಸ್ವಾಮಿಯಾಗಿ ಪೂಜಿಸಲಾಗುತ್ತದೆ.

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ನಾಮದಚಿಲುಮೆ, ಚಿತ್ರಕೃಪೆ: AjithBhat

ಹಿಂದುಗಳು ಮೊದಲಿನಿಂದಲೂ ದೇವಾಲಯಗಲಿರುವ ಗಿರಿಗಳಿಗೆ ಪರಿಕ್ರಮಣೆ/ಪ್ರದಕ್ಷಿಣೆಯನ್ನು ಹಾಕುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ದೇವರ ಕೃಪೆ ಶೀಘ್ರದಲ್ಲಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ದೇವರಾಯನದುರ್ಗದ ಈ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕುವ ಪದ್ಧತಿಯು ಇಂದಿಗೂ ಚಾಲ್ತಿಯಲ್ಲಿದೆ. ವಿಶ್ವ ಹಿಂದು ಪರಿಷತ್ ಇದನ್ನು ಆಯೋಜಿಸುತ್ತದೆ.

ನಾಮದಚಿಲುಮೆ ಇಲ್ಲಿ ನೋಡಲೇಬೇಕಾದ ಮತ್ತೊಂದು ಕುತೂಹಲ ಕೆರಳಿಸುವ ಧಾರ್ಮಿಕ ಆಕರ್ಷಣೆ. ಪ್ರತೀತಿಯಂತೆ ಹಿಂದೆ ರಾಮನು ವನವಾಸ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಈ ಪ್ರದೇಶಕ್ಕೊಮ್ಮೆ ಭೇಟಿ ನೀಡಿದ್ದ. ಪ್ರತಿನಿತ್ಯದಂತೆ ಬೆಳಿಗ್ಗೆಯ ಸಮಯದಲ್ಲಿ ಹಣೆಗೆ ನಾಮ (ತಿಲಕ) ಇಟ್ಟುಕೊಳ್ಳಲು ನೀರನ್ನು ಹುಡುಕಿದಾಗ ಎಲ್ಲಿಯೂ ನೀರು ದೊರಕಲಿಲ್ಲ.

ತುಮಕೂರಿನಲ್ಲಿ ನೋಡಲೇಬೇಕಾದ ಸ್ಥಳಗಳು

ಆದರೆ ತಿಲಕ ಇಟ್ಟುಕೊಳ್ಳುವುದು ರಾಮನಿಗೆ ಮುಖ್ಯವಾಗಿದ್ದುದರಿಂದ ತನ್ನ ಬತ್ತಳಿಕೆಯಿಂದ ಬಾಣವೊಂದನ್ನು ತೆಗೆದು ಮುಂದಿರುವ ಒಂದು ಬಂಡೆಗೆ ಬಿಟ್ಟ. ಇದರಿಂದ ಅಲ್ಲಿ ರಂಧ್ರ ಉಂಟಾಗಿ ಅದರಿಂದ ನೀರು ಮೇಲಕ್ಕೆ ಸರ ಸರನೆ ಚಿಮ್ಮತೊಡಗಿತು. ಹಾಗಾಗಿ ಆ ಸ್ಥಳಕ್ಕೆ ನಾಮದಚಿಲುಮೆ ಎಂಬ ಹೆಸರು ಬಂದಿದ್ದು ಇದನ್ನು ಇಂದಿಗೂ ದೇವರಾಯನದುರ್ಗದಲ್ಲಿ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X