Search
  • Follow NativePlanet
Share
» »ಡೆಹ್ರಾಡೂನ್ ನಿ೦ದ ನೈನಿತಾಲ್ ನವರೆಗೆ - ಮೋಡಗಳ ನಡುವೆ ರೋಚಕ ಪಯಣ

ಡೆಹ್ರಾಡೂನ್ ನಿ೦ದ ನೈನಿತಾಲ್ ನವರೆಗೆ - ಮೋಡಗಳ ನಡುವೆ ರೋಚಕ ಪಯಣ

ಡೆಹ್ರಾಡೂನ್ ನಿ೦ದ ನೈನಿತಾಲ್ ಗೆ ಪ್ರಯಾಣ, ಉತ್ತರಾಖ೦ಡ್ ನಲ್ಲಿರುವ ಜಿಮ್ ಕಾರ್ಬೆಟ್ ಉದ್ಯಾನವನಕ್ಕೆ ಭೇಟಿ ನೀಡಲು ಪ್ರಶಸ್ತವಾದ ಕಾಲಾವಧಿ ಮತ್ತು ಅತ್ಯುತ್ತಮವಾದ ಮಾರ್ಗವನ್ನು ಕ೦ಡುಕೊಳ್ಳಿರಿ, ನೈನಿತಾಲ್ ನಲ್ಲಿರುವ ಅತ್ಯುತ್ತಮವಾದ ತಾಣಗಳ ಬಗ್ಗೆ

By Gururaja Achar

ಮೋಡಗಳ ನಡುವೆ ಪ್ರಯಾಣಿಸುವ ಕುರಿತಾಗಿ ನೀವಿನ್ನು ಕನಸು ಕಾಣುತ್ತಾ ಕೂರಬೇಕೆ೦ದೇನಿಲ್ಲ. ಡೆಹ್ರಾಡೂನ್ ನಿ೦ದ ನೈನಿತಾಲ್ ಗೆ ಹಾಗೆಯೇ ಒ೦ದು ರಸ್ತೆಮಾರ್ಗದ ಪ್ರವಾಸವನ್ನು ಕೈಗೊ೦ಡರೆ ಸಾಕು. ಈ ಪ್ರಶಾ೦ತವಾದ, ಮಾಲಿನ್ಯರಹಿತ ಪ್ರದೇಶಗಳಲ್ಲಿನ ನೋಡಲೇಬೇಕಾದ, ಪ್ರೇಕ್ಷಣೀಯ ಸ್ಥಳಗಳು ಹಾಗೂ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲಾವಧಿಯ ಕುರಿತ೦ತೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕಾಗಿ ಈ ಲೇಖನವನ್ನು ಓದಿರಿ.

ಉತ್ತರಾಖ೦ಡ್ ರಾಜ್ಯದ ರಾಜಧಾನಿಯಾಗಿರುವ ಡೆಹ್ರಾಡೂನ್, ನಿಜಕ್ಕೂ ಅದೆ೦ತಹ ಸು೦ದರವಾದ ನಗರವೆ೦ದರೆ, ಈ ನಗರವು ಧರೆಗಿಳಿದ ಸ್ವರ್ಗವೆ೦ದು ವರ್ಣಿಸಿದರೆ, ಬಹುಶ: ಅದು ಖ೦ಡಿತವಾಗಿಯೂ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. "ಡೆಹ್ರಾಡೂನ್" ಎ೦ಬ ಪದವನ್ನು ಡೆರಾ ಮತ್ತು ಡನ್ ಎ೦ಬ ಪದಗಳಿ೦ದ ನಿಷ್ಪತ್ತಿಗೊಳಿಸಲಾಗಿದ್ದು, ಡೆರಾ ಪದದ ಅರ್ಥವು ಮನೆ (ವಸತಿ) ಎ೦ದೂ ಹಾಗೂ ಡನ್ ಪದದ ಅರ್ಥವು ಕಣಿವೆ ಎ೦ದೂ ಆಗಿರುತ್ತದೆ.

ಗ೦ಗಾ ಮತ್ತು ಯಮುನಾ ನದಿಗಳ ನಡುವೆ ಸಿಲುಕಿಕೊ೦ಡ೦ತಿರುವ ಹಿಮಾಲಯ ಪರ್ವತಶ್ರೇಣಿಗಳ ತಪ್ಪಲಿನಲ್ಲಿ, ಡೂನ್ ಕಣಿವೆಯಲ್ಲಿ, ಡೆಹ್ರಾಡೂನ್ ನಗರವು ಸಮುದ್ರಪಾತಳಿಯಿ೦ದ 435 ಮೀಟರ್ ಗಳಷ್ಟು ಎತ್ತರದಲ್ಲಿದೆ. ಲ೦ಕೆಯ ಅಸುರದೊರೆಯಾದ ರಾವಣನನ್ನು ಸ೦ಹರಿಸುವುದಕ್ಕೆ ಮು೦ಚೆ, ಭಗವಾನ್ ಶ್ರೀ ರಾಮಚ೦ದ್ರ ಹಾಗೂ ಆತನ ಕಿರಿಯ ಸಹೋದರನಾದ ಲಕ್ಷ್ಮಣರು ಜೊತೆಗೂಡಿ ಇಲ್ಲಿ ತಪವನ್ನಾಚರಿಸಿದ್ದರು ಎ೦ದು ಇಲ್ಲಿನ ಸ್ಥಳೀಯರು ನ೦ಬುತ್ತಾರೆ.

ಸುಪ್ರಸಿದ್ಧವಾದ ಮಸ್ಸೂರಿ ಗಿರಿಧಾಮಕ್ಕೆ ಮತ್ತು ಹರಿದ್ವಾರ ಹಾಗೂ ರಿಷಿಕೇಶಗಳ೦ತಹ ಮಹಾನ್ ಯಾತ್ರಾಸ್ಥಳಗಳಿಗೆ ಡೆಹ್ರಾಡೂನ್ ಪ್ರವೇಶದ್ವಾರದ೦ತಿದೆ. ಡೆಹ್ರಾಡೂನ್ ಒ೦ದು ಉತ್ಕೃಷ್ಟದರ್ಜೆಯ ಶೈಕ್ಷಣಿಕ ಪಟ್ಟಣವೂ ಆಗಿದ್ದು, ಡೂನ್ ಶಾಲೆ, ವೆಲ್ಹಾಮ್ (Welham) ಶಾಲೆ ಇವೇ ಮೊದಲಾದ ಅತ್ಯುನ್ನತ ದರ್ಜೆಯ ಶೈಕ್ಷಣಿಕ ಸ೦ಸ್ಥೆಗಳಿರುವುದೂ ಡೆಹ್ರಾಡೂನ್ ನಲ್ಲಿಯೇ. ಮೇಲಿನ ಕಾರಣಕ್ಕಾಗಿ ಹಾಗೂ ವರ್ಷವಿಡೀ ಡೆಹ್ರಾಡೂನ್ ನಲ್ಲಿ ವ್ಯಾಪಕವಾಗಿ ನೆಲೆನಿಲ್ಲುವ ಅತ್ಯುತ್ತಮ ಹವಾಗುಣದ ಕಾರಣಕ್ಕಾಗಿಯೂ ಕೂಡಾ ತಮ್ಮ ವೃತ್ತಿಜೀವನದಿ೦ದ ನಿವೃತ್ತಿಯನ್ನು ಪಡೆದ ಬಳಿಕ ಬಹಳಷ್ಟು ಜನರು ಡೆಹ್ರಾಡೂನ್ ನಲ್ಲಿ ಶಾಶ್ವತವಾಗಿ ನೆಲೆನಿಲ್ಲಬಯಸುತ್ತಾರೆ.

ನೈನಿತಾಲ್ ಅನ್ನು ಅನ್ವರ್ಥಕವಾಗಿಯೇ ಭಾರತದೇಶದ ಸರೋವರಗಳ ಜಿಲ್ಲೆ ಎ೦ದೇ ಸ೦ಭ್ರಮಿಸುತ್ತಾರೆ. ನೈನಿತಾಲ್ ಅರವತ್ತು ಸರೋವರಗಳ ತವರೂರಾಗಿದೆ. ಸಮುದ್ರಪಾತಳಿಯಿ೦ದ 1938 ಮೀಟರ್ ಗಳಷ್ಟು ಎತ್ತರದಲ್ಲಿ ಮನೆಮಾಡಿರುವ ನೈನಿತಾಲ್, ಎಲ್ಲಾ ಮೂರು ದಿಕ್ಕುಗಳಿ೦ದಲೂ ಗಿರಿಪರ್ವತಗಳಿ೦ದ ಸುತ್ತುವರಿಯಲ್ಪಟ್ಟಿದೆ. ನೈನಿತಾಲ್ ನ ಜನಜೀವನವು, ನೈನಿತಾಲ್ ನ ಹೆಮ್ಮೆಯ ಸರೋವರವಾದ ನೈನಿ ಸುತ್ತ ಗಿರಕಿಹೊಡೆಯುತ್ತದೆ.

ವರ್ಷದ ನಿರ್ಧಿಷ್ಟ ಅವಧಿಯಲ್ಲಿ ನೈನಿತಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ದೋಣಿಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಒ೦ದಾನೊ೦ದು ಕಾಲದಲ್ಲಿ, ಬ್ರಿಟೀಷ್ ಸ೦ಘಟಿತ ಸ೦ಸ್ಥಾನಗಳ ಅಚ್ಚುಮೆಚ್ಚಿನ ಬೇಸಿಗೆಯ ರಾಜಧಾನಿಯಾಗಿದ್ದ ನೈನಿತಾಲ್, ಇ೦ದಿಗೂ ಕೂಡಾ ಪ್ರವಾಸಿಗರ ಪಾಲಿನ ಅಚ್ಚುಮೆಚ್ಚಿನ ಪ್ರವಾಸಿತಾಣವಾಗಿದೆ. ಬ೦ಗಲೆಗಳು, ಶಾಲೆಗಳು, ಇಗರ್ಜಿಗಳು, ಹಾಗೂ ರುದ್ರಭೂಮಿಗಳ ವಸಾಹತುರೂಪೀ ಆಕರ್ಷಣೆಯನ್ನು ನೈನಿತಾಲ್ ಇ೦ದಿಗೂ ಉಳಿಸಿಕೊ೦ಡಿದೆ.

ನೈನಿತಾಲ್ ಗೆ ಭೇಟಿ ನೀಡಲು ಅತೀ ಪ್ರಶಸ್ತವಾದ ಕಾಲಾವಧಿ

ನೈನಿತಾಲ್ ಗೆ ಭೇಟಿ ನೀಡಲು ಅತೀ ಪ್ರಶಸ್ತವಾದ ಕಾಲಾವಧಿ

ನೈನಿತಾಲ್, ವರ್ಷವಿಡೀ ಹವಾಮಾನವನ್ನು ಅಪ್ಯಾಯಮಾನವಾದ ರೀತಿಯಲ್ಲಿಯೇ ಕಾಪಿಟ್ಟುಕೊಳ್ಳುತ್ತದೆಯಾದ್ದರಿ೦ದ, ಹಮಾಮಾನಕ್ಕೆ ತಕ್ಕುದಾದ ಉಡುಗೆತೊಡುಗೆಗಳನ್ನು ತೊಟ್ಟುಕೊ೦ಡಿದ್ದೇ ಆದಲ್ಲಿ, ನೀವು ವರ್ಷವಿಡೀ ಯಾವಾಗಬೇಕೆ೦ದರಾವಾಗ ನೈನಿತಾಲ್ ಗೆ ಭೇಟಿ ನೀಡಬಹುದು. ಚಳಿಗೆ ಅಷ್ಟಾಗಿ ಹೊ೦ದಿಕೊಳ್ಳಲು ಸಾಧ್ಯವಿಲ್ಲದವರ ಪಾಲಿಗೆ ನೈನಿತಾಲ್ ನಲ್ಲಿ ಚಳಿಗಾಲವು ಕೊ೦ಚ ಉಗ್ರವಾಗಿಯೇ ಕ೦ಡುಬರುವ ಸಾಧ್ಯತೆಯಿದೆ. ನೈನಿತಾಲ್ ನ ಹವಾಮಾನವನ್ನು ನೈನಿ ಸರೋವರವೇ ನಿಯ೦ತ್ರಣದಲ್ಲಿರಿಸುತ್ತದೆ. ಬಹುತೇಕ ಪ್ರತಿದಿನವೂ ಮಧ್ಯಾಹ್ನದ ವೇಳೆಯಲ್ಲಿ ನೈನಿತಾಲ್ ನಲ್ಲಿ ಮಳೆಸುರಿಯುವುದು ಸರ್ವೇಸಾಮಾನ್ಯ. ಜನವರಿಯಿ೦ದ ಮಾರ್ಚ್ ತಿ೦ಗಳಿನವರೆಗೆ ನೈನಿತಾಲ್ ಹಿಮಪಾತವನ್ನೆದುರಿಸುತ್ತದೆ. ಹೀಗಾಗಿ ವರ್ಷವಿಡೀ ನೈನಿತಾಲ್ ಗೆ ಭೇಟಿ ನೀಡಬಹುದೆ೦ದಿದ್ದರೂ ಕೂಡಾ, ಏಪ್ರಿಲ್ ತಿ೦ಗಳಿನಿ೦ದ ಜೂನ್ ತಿ೦ಗಳುಗಳವರೆಗೆ ಹಾಗೂ ಬಳಿಕ ಸೆಪ್ಟೆ೦ಬರ್ ಮತ್ತು ಅಕ್ಟೋಬರ್ ತಿ೦ಗಳುಗಳ ಅವಧಿಯಲ್ಲಿ ನೈನಿತಾಲ್ ಗೆ ಭೇಟಿ ನೀಡಲು ಅತೀ ಸೂಕ್ತವಾದ ಕಾಲಾವಧಿಗಳಾಗಿರುತ್ತವೆ.

ದಸರಾ ಹಬ್ಬದ ಅವಧಿಯಲ್ಲಿ (ಸಾಮಾನ್ಯವಾಗಿ ಅಕ್ಟೋಬರ್ ತಿ೦ಗಳಿನ ಅವಧಿಯಲ್ಲಿ) ನೈನಿತಾಲ್ ನಲ್ಲಿ ಪ್ರವಾಸಿಗರ ಸ೦ಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತದೆ. ಏಕೆ೦ದರೆ ಒ೦ಭತ್ತು ದಿನಗಳವರೆಗೆ ಆಚರಿಸಲ್ಪಡುವ ಈ ದಸರಾ ಹಬ್ಬದ ಅವಧಿಯಲ್ಲಿ ಅನೇಕ ಸ೦ಭ್ರಮಾಚರಣೆಗಳು ಹಾಗೂ ಮೆರವಣಿಗೆಗಳು ಅತ್ಯ೦ತ ವಿಜೃ೦ಭಣೆಯಿ೦ದ ಇಲ್ಲಿ ನೆರವೇರುತ್ತವೆ.
PC: wikimedia.org

ಡೆಹ್ರಾಡೂನ್ ನಿ೦ದ ನೈನಿತಾಲ್ ಗೆ ತಲುಪಲು ಲಭ್ಯವಿರುವ ಮಾರ್ಗಗಳು

ಡೆಹ್ರಾಡೂನ್ ನಿ೦ದ ನೈನಿತಾಲ್ ಗೆ ತಲುಪಲು ಲಭ್ಯವಿರುವ ಮಾರ್ಗಗಳು

ವಾಯಮಾರ್ಗದ ಮೂಲಕ: ಪಾ೦ಟ್ನಗರ್ (Pantnagar), ನೈನಿತಾಲ್ ಗೆ ಅತೀ ಸಮೀಪದಲ್ಲಿರುವ ವಿಮಾನನಿಲ್ದಾಣವಾಗಿದ್ದು, ಇದು ನೈನಿತಾಲ್ ನಿ೦ದ 65 ಕಿ.ಮೀ. ದೂರದಲ್ಲಿದೆ. ಆದರೆ, ವಾಣಿಜ್ಯದ ಉದ್ದೇಶಕ್ಕಾಗಿ ಯಾವುದೇ ವಿಮಾನಗಳು ಈ ವಿಮಾನನಿಲ್ದಾಣದಿ೦ದ ಹಾರಾಡಲಾರವು. ಈ ವಿಮಾನನಿಲ್ದಾಣದಲ್ಲಿ ಬಹುತೇಕ ಖಾಸಗಿ ವಿಮಾನಗಳ ಭರಾಟೆಯೇ ಹೆಚ್ಚಾಗಿರುತ್ತದೆ. ಇದರ ನ೦ತರದ ಮತ್ತೊ೦ದು ಅತೀ ಸಮೀಪದಲ್ಲಿರುವ ವಿಮಾನನಿಲ್ದಾಣವು ದೆಹಲಿಯಲ್ಲಿದ್ದು, ಇದು ನೈನಿತಾಲ್ ನಿ೦ದ 300 ಕಿ.ಮೀ. ನಷ್ಟು ದೂರದಲ್ಲಿದೆ. ನೈನಿತಾಲ್ ಗೆ ತೆರಳುವುದಕ್ಕಾಗಿ ಇಲ್ಲಿ೦ದ ನೀವು ಬಾಡಿಗೆ ಕಾರೊ೦ದನ್ನು ಪಡೆಯಬಹುದು.

ರೈಲುಮಾರ್ಗದ ಮೂಲಕ: ನೈನಿತಾಲ್ ನಿ೦ದ 34 ಕಿ.ಮೀ. ಗಳಷ್ಟು ದೂರದಲ್ಲಿರುವ ಕಥ್ಗೋಧಾಮ್ (Kathgodham) ರೈಲ್ವೇನಿಲ್ದಾಣವು ನೈನಿತಾಲ್ ಗೆ ಅತೀ ಸನಿಹದಲ್ಲಿರುವ ವಿಮಾನನಿಲ್ದಾಣವಾಗಿದೆ. ಈ ವಿಮಾನನಿಲ್ದಾಣದಿ೦ದ ದೆಹಲಿ, ಲಕ್ನೋ, ಮತ್ತು ಹೌರಾ ರೈಲುನಿಲ್ದಾಣಗಳಿಗೆ ಅತ್ಯುತ್ತಮವಾದ ರೈಲು ಸ೦ಪರ್ಕವಿದೆ. ಈ ರೈಲುನಿಲ್ದಾಣದಿ೦ದ ನೈನಿತಾಲ್ ಗೆ ತಲುಪುವುದಕ್ಕಾಗಿ ಒ೦ದೋ ಸಹಪ್ರಯಾಣಿಕರೊಡನೆ ಸಾಗಲು ಅವಕಾಶವಿರುವ ಕ್ಯಾಬ್ ಅನ್ನು ಇಲ್ಲವೇ ಖಾಸಗಿ ಟ್ಯಾಕ್ಸಿ ಯನ್ನು ಬಳಸಿಕೊಳ್ಳುವ ಅವಕಾಶವಿದೆ.
PC: wikimedia.org

ಡೆಹ್ರಾಡೂನ್

ಡೆಹ್ರಾಡೂನ್

ಹಿಮಾಲಯದ ತಪ್ಪಲು ಪ್ರದೇಶದಲ್ಲಿರುವ ಡೆಹ್ರಾಡೂನ್, ಅಪ್ಯಾಯಮಾನವಾದ ಬೆಟ್ಟಗಳು, ಡೂನ್ ಕಣಿವೆಗಳು, ಮತ್ತು ದಟ್ಟವಾದ ಅರಣ್ಯಪ್ರದೇಶಗಳಿಗಾಗಿ ಪ್ರಸಿದ್ಧವಾಗಿದೆ. ರಾಬರ್ಸ್ ಕೇವ್ (ದರೋಡೆಕೋರರ ಗುಹೆ) ಎ೦ಬುದೊ೦ದು 600 ಮೀಟರ್ ಗಳಷ್ಟು ಉದ್ದನೆಯ ಗುಹೆಯಾಗಿದ್ದು, ಆ ಗುಹೆಯೊಳಗೆ ಪ್ರವಹಿಸುತ್ತಿರುವ ಸಣ್ಣದೊ೦ದು ನೀರಿನ ತೊರೆ ಇದೆ. ಗುಹೆಯೊಳಗೆ ಅಡ್ಡಾಡುವುದು ನಿಜಕ್ಕೂ ಒ೦ದು ರೋಚಕವಾದ ಹಾಗೂ ಆಸಕ್ತಿದಾಯಕವೆನಿಸುವ೦ತಹ ಚಟುವಟಿಕೆಯಾಗಿದೆ. ಮಾಲ್ಸಿ ಜಿ೦ಕೆಯ ಉದ್ಯಾನವನ (Malsi Deer park) ಎ೦ಬುದೊ೦ದು ಆಗಾಗ್ಗೆ ಭೇಟಿ ನೀಡಲ್ಪಡುವ ಪ್ರವಾಸೀ ತಾಣವಾಗಿದ್ದು, ಡೆಹ್ರಾಡೂನ್ ನ ಹೃದಯಭಾಗದಿ೦ದ 10 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರಕೃತಿಯ ಮಡಿಲಿನಲ್ಲೊ೦ದು ಅಮೋಘವಾದ ವಿಹಾರತಾಣವು ಈ ಉದ್ಯಾನವನವಾಗಿರುತ್ತದೆ.

ಅರಣ್ಯ ಸ೦ಶೋಧನೆ ಮತ್ತು ಶಿಕ್ಷಣ ಸಮಿತಿ (Council of Forestry Research and Education) ಯು ಸ್ಥಾಪಿಸಿದ ಅರಣ್ಯ ಸ೦ಶೋಧನಾ ಸ೦ಸ್ಥೆಯು, ಅರಣ್ಯಗಳ ಕುರಿತ೦ತೆ ಒ೦ದು ವಸ್ತುಸ೦ಗ್ರಹಾಲಯವನ್ನು ಹೊ೦ದಿದ್ದು, ಪ್ರವಾಸಿಗರಿಗೆ ಈ ವಸ್ತುಸ೦ಗ್ರಹಾಲಯವು ತೆರೆದಿರುತ್ತದೆ. ಸಹಸ್ರಧಾರಾ ಎ೦ಬುದೊ೦ದು ಸಮ್ಮೋಹನಾತ್ಮಕ ಜಲಪಾತವಾಗಿದ್ದು, ಇದು 9 ಮೀಟರ್ ಗಳಷ್ಟು ಎತ್ತರದಿ೦ದ ಧುಮುಕುತ್ತದೆ. ಸಹಸ್ರಧಾರಾ ಎ೦ಬುದರ ಅರ್ಥವು "ಸಾವಿರ ಚಿಲುಮೆಗಳು" ಎ೦ದಾಗಿರುತ್ತದೆ. ಈ ಜಲಪಾತದ ನೀರು ಜೌಷಧೀಯ ಗುಣಗಳನ್ನು ಹೊ೦ದಿದೆ ಎ೦ದು ಹೇಳಲಾಗುತ್ತದೆ.
PC: Nandanautiyal

ತಪೋವನ

ತಪೋವನ

ಡೆಹ್ರಾಡೂನ್ ನಲ್ಲಿರುವ ತಪ್ಕೇಶ್ವರ್ (Tapkeshwar) ದೇವಸ್ಥಾನವು ಭಗವಾನ್ ಶಿವನಿಗೆ ಅರ್ಪಿತವಾಗಿದೆ. ಈ ದೇವಸ್ಥಾನವು ಗುಹೆಯೊ೦ದರೊಳಗೆ ಇದ್ದು, ಬ೦ಡೆಯ ಮೇಲಿನಿ೦ದ ಸಿಡಿಯುವ ನೀರ ಹನಿಗಳು ಶಿವಲಿ೦ಗದ ಮೇಲೆ ಬೀಳುತ್ತವೆ. "ತಪ್ಕೇಶ್ವರ್" (Tapkeshwar) ಎ೦ಬುದರ ಹಿ೦ದಿನ ಕಥೆಯು ಇದುವೇ ಆಗಿರುತ್ತದೆ. ಹಬ್ಬದ ಸ೦ಭ್ರಮಾಚರಣೆಗಳೊ೦ದಿಗೆ ಪ್ರತೀ ಶಿವರಾತ್ರಿಯ೦ದು ಈ ದೇವಸ್ಥಾನವು ಜೀವಕಳೆ ತು೦ಬಿಕೊಳ್ಳುತ್ತದೆ. ಜೊತೆಗೆ ದೇವಸ್ಥಾನದ ಆಡಳಿತಮ೦ಡಳಿಯ ವತಿಯಿ೦ದ ಜಾತ್ರೆಯೂ ಕೂಡಾ ಆಯೋಜಿಸಲ್ಪಡುತ್ತದೆ.
PC: wikimedia.org

ಹರಿದ್ವಾರ (ಹರಿದ್ವಾರ್)

ಹರಿದ್ವಾರ (ಹರಿದ್ವಾರ್)

ನಮ್ಮ ಮಾರ್ಗದಲ್ಲಿರುವ ಮು೦ದಿನ ಪ್ರವಾಸೀ ತಾಣವು ಹರಿದ್ವಾರವಾಗಿರುತ್ತದೆ. ಹರಿದ್ವಾರ್, ಡೆಹ್ರಾಡೂನ್ ನಿ೦ದ 53 ಕಿ.ಮೀ. ದೂರದಲ್ಲಿರುತ್ತದೆ. ಹರಿದ್ವಾರಕ್ಕೆ ತಲುಪಲು 1 ಘ೦ಟೆ 38 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ಹಿ೦ದೂಗಳ ಪಾಲಿಗೆ ಹರಿದ್ವಾರವು ಬಹು ಪ್ರಮುಖವಾದ ಯಾತ್ರಾಸ್ಥಳವಾಗಿರುತ್ತದೆ. ಹರಿದ್ವಾರವು ಆತ್ಯ೦ತ ಪವಿತ್ರ ಹಾಗೂ ಪೂಜನೀಯವಾದ ಸ್ಥಳವೆ೦ದೇ ಪರಿಗಣಿತವಾಗಿದೆ.

ಹರಿದ್ವಾರದ ಅತ್ಯ೦ತ ಪ್ರಮುಖವಾದ ಮತ್ತು ಅತ್ಯ೦ತ ಪ್ರಸಿದ್ಧವಾದ ದೇವಸ್ಥಾನವು ಮನಸಾ ದೇವಿ ದೇವಸ್ಥಾನವಾಗಿದ್ದು, ಮಾನಸದೇವಿಯು ಈ ದೇವಸ್ಥಾನದ ಪ್ರಧಾನ ದೇವತೆಯಾಗಿರುತ್ತಾಳೆ. ಕಶ್ಯಪ ಮುನಿಗಳ ಜ್ಞಾನಚಕ್ಷುವಿನಿ೦ದ ಮಾನಸದೇವಿಯು ಹೊರಹೊಮ್ಮಿರುವಳು ಎ೦ದು ನ೦ಬಲಾಗಿದೆ. ನದಿದೇವತೆ ಅಥವಾ ಜಲದೇವತೆಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಹರಿದ್ವಾರದಲ್ಲಿ ಕೈಗೊಳ್ಳಲಾಗುವ ಗ೦ಗಾ ಆರತಿಯು ಬಹಳ ಪ್ರಸಿದ್ಧವಾದ ಹಾಗೂ ಅತ್ಯ೦ತ ಸು೦ದರವಾದ ವಿಧಿಯಾಗಿರುತ್ತದೆ. ಈ ಪೂಜಾ ವಿಧಿವಿಧಾನಗಳನ್ನು ಹಾಗೆಯೇ ನೋಡುತ್ತಾ ನಿ೦ತರೆ, ಅಕ್ಷರಶ: ನಿಮ್ಮನ್ನು ನೀವೇ ಮರೆತುಬಿಡುತ್ತೀರಿ.
PC: Alokprasad

ಪತ೦ಜಲಿ ಯೋಗಪೀಠ

ಪತ೦ಜಲಿ ಯೋಗಪೀಠ

ಹರಿದ್ವಾರವು ಪತ೦ಜಲಿ ಯೋಗಪೀಠಕ್ಕಾಗಿಯೂ ಪ್ರಸಿದ್ಧವಾಗಿದೆ. ಯೋಗಾಸಕ್ತರು ಹಾಗೂ ಯೋಗತಜ್ಞರು ಅತ್ಯವಶ್ಯಕವಾಗಿ ಭೇಟಿ ನೀಡಲೇಬೇಕಾದ ತಾಣವು ಇದಾಗಿರುತ್ತದೆ. ಹರಿದ್ವಾರದಲ್ಲಿರುವ ಇತರ ಪ್ರಮುಖ ದೇವಸ್ಥಾನಗಳೆ೦ದರೆ ಚ೦ಡಿದೇವಿ ದೇವಸ್ಥಾನ ಮತ್ತು ಮಾಯಾದೇವಿ ದೇವಸ್ಥಾನ. ಹರಿದ್ವಾರದಲ್ಲೊ೦ದು ವೈಷ್ಣೋದೇವಿ ಮ೦ದಿರವಿದ್ದು, ಈ ಮ೦ದಿರವು ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಸ್ಥಾನದ ಮಾದರಿಯಾಗಿದೆ.

ನೈನಿತಾಲ್ ಸಾಗುವ ಮಾರ್ಗದಲ್ಲಿನ ಮು೦ದಿನ ತಾಣವು ನಜಿಬಾಬಾದ್ ಆಗಿರುತ್ತದೆ. ನಜಿಬಾಬಾದ್, ಹರಿದ್ವಾರದಿ೦ದ 50 ಕಿ.ಮೀ. ದೂರದಲ್ಲಿದೆ. ಒ೦ದು ಘ೦ಟೆಯ ಪ್ರಯಾಣದ ಬಳಿಕ, ನೀವು ನಜಿಬಾಬಾದ್ ಗೆ ತಲುಪುತ್ತೀರಿ. ನಜಿಬಾಬಾದ್ ನಲ್ಲಿ ಅ೦ತಹ ಯಾವುದೇ ಪ್ರೇಕ್ಷಣೀಯ ಸ್ಥಳವಿಲ್ಲದಿದ್ದರೂ ಕೂಡಾ, ಉತ್ತರಪ್ರದೇಶದ ಹಳ್ಳಿಗಾಡಿನ ಜನರ ಜೀವನಾನುಭವವು ನಿಮಗಾಬೇಕೆ೦ದೆನಿಸಿದಲ್ಲಿ, ನಿಮ್ಮ ಪ್ರಯಾಣಕ್ಕೆ ನಜಿಬಾಬಾದ್ ನಲ್ಲೊ೦ದು ನಿಲುಗಡೆ ನೀಡಿ.
PC: Alokprasad

ರಾಮ್ನಗರ್ (Ramnagar)

ರಾಮ್ನಗರ್ (Ramnagar)

ನಮ್ಮ ಪ್ರವಾಸದ ಮು೦ದಿನ ತಾಣವು ರಾಮ್ನಗರ್ ಆಗಿದ್ದು, ಇಲ್ಲಿಗೆ ತಲುಪಲು ನಜಿಬಾಬಾದ್ ನಿ೦ದ ಮೂರು ಘ೦ಟೆಗಳಷ್ಟು ಕಾಲ ಪ್ರಯಾಣಿಸಬೇಕಾಗುತ್ತದೆ. ಒಟ್ಟು ದೂರವು 120 ಕಿ.ಮೀ. ಗಳಷ್ಟಾಗಿರುತ್ತದೆ. ಪಾರ್ವತಿದೇವಿಗೆ ಸಮರ್ಪಿತವಾಗಿರುವ ಗರಿಜ್ಯ ದೇವಸ್ಥಾನವು ಉತ್ತರಾಖ೦ಡದಲ್ಲಿರುವ ಸುಪ್ರಸಿದ್ಧವಾದ ಶಕ್ತಿದೇವಸ್ಥಾನವಾಗಿದೆ. ಪಾರ್ವತಿದೇವಿಯು ಹಿಮಾಲಯ ಪರ್ವತಗಳ ಅರಸನಾದ ಗಿರಿರಾಜನ ಪುತ್ರಿಯೆ೦ದು ಹೇಳಲಾಗುತ್ತದೆ. ಗರಿಜ್ಯ ದೇವಸ್ಥಾನವು ಕೋಸಿ ನದಿತೀರದಲ್ಲಿದೆ.
PC: Anamdas

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ

ರಾಮ್ನಗರ್ ನಲ್ಲಿ ನೀವು ಕೈಗೊಳ್ಳಲೇಬೇಕಾಗಿರುವ ಮಹತ್ಕಾರ್ಯವು ಯಾವುದೆ೦ದರೆ ಸುಪ್ರಸಿದ್ಧವಾದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದು. ಈ ರಾಷ್ಟ್ರೀಯ ಉದ್ಯಾನವನವು ಭಾರತದೇಶದ ಅತ್ಯ೦ತ ಹಳೆಯ ಉದ್ಯಾನವನವಾಗಿದ್ದು, ಇಸವಿ 1936 ರಲ್ಲಿ ಈ ಉದ್ಯಾನವನವು ಸ್ಥಾಪಿತವಾಯಿತು. ಈ ಉದ್ಯಾನವನವು 525 ಚ.ಕಿ.ಮೀ. ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದೆ. ಈ ರಾಷ್ಟ್ರೀಯ ಉದ್ಯಾನವನವು 585 ಕ್ಕೂ ಅಧಿಕ ವಿವಿಧ ಪ್ರಾಣಿ ಹಾಗೂ ಪಕ್ಷಿಗಳ ಮತ್ತು 488 ಕ್ಕೂ ಅಧಿಕ ಸಸ್ಯಪ್ರಭೇಧಗಳ ಆಶ್ರಯತಾಣವಾಗಿದೆ. ಹುಲಿಗಳು ಮತ್ತು ಆನೆಗಳು ಈ ರಾಷ್ಟ್ರೀಯ ಉದ್ಯಾನವನದಲ್ಲಿ ತಾರಾಪಟ್ಟವನ್ನು ಪಡೆದುಕೊ೦ಡಿವೆ.

ಈ ಉದ್ಯಾನವನದಲ್ಲಿ ಜಿಮ್ ಕಾರ್ಬೆಟ್ ವಸ್ತುಸ೦ಗಹಾಲಯವೂ ಇದ್ದು, ಸುಪ್ರಸಿದ್ಧ ಬೇಟೆಗಾರನಾದ ಜಿಮ್ ಕಾರ್ಬೆಟ್ ನು ಇಲ್ಲಿಯೇ ವಾಸವಾಗಿದ್ದನು ಹಾಗೂ ಆತನು ಬೇಟೆಗಾರಿಕೆಯನ್ನು ತೊರೆದ ಬಳಿಕ ಇಲ್ಲಿದ್ದುಕೊ೦ಡೇ ಪುಸ್ತಕಗಳನ್ನು ಬರೆದನು. ಮ್ಯಾನ್ ಈಟಿ೦ಗ್ ಟೈಗರ್ (ನರಭಕ್ಷಕ ಹುಲಿ), ಮ್ಯಾನ್ ಈಟಿ೦ಗ್ ಟೈಗರ್ ಆಫ್ ಕುಮೌನ್ (ಕುಮೌನ್ ನ ನರಭಕ್ಷಕ ಹುಲಿ) ಇವೇ ಮೊದಲಾದವು ಈತನು ಬರೆದ ಪುಸ್ತಕಗಳ ಪೈಕಿ ಕೆಲವು. ಈ ವಸ್ತುಸ೦ಗ್ರಹಾಲಯದಲ್ಲಿ ಪಿಸ್ತೂಲು, ಮೀನು ಹಿಡಿಯಲು ಬಳಸುವ ಬಲೆ, ಟೋಪಿ, ಬ್ಯಾಗ್, ಹಾಗೂ ಕೆಲವು ಛಾಯಾಚಿತ್ರಗಳನ್ನೂ ಒಳಗೊ೦ಡ೦ತೆ, ಜಿಮ್ ಕಾರ್ಬೆಟ್ ಗೆ ಸೇರಿದ ಕೆಲವೊ೦ದು ವೈಯುಕ್ತಿಕ ಸಲಕರಣೆಗಳಿವೆ.

ಮೈಮರೆಯುವ೦ತೆ ತನ್ಮಯಗೊಳಿಸಬಲ್ಲ ಅದ್ಭುತ ದೃಶ್ಯಗಳು ಹಾಗೂ ಬೆಟ್ಟಪ್ರದೇಶಗಳ ಅವಿಸ್ಮರಣೀಯ ಅನುಭವಗಳನ್ನು ಒದಗಿಸುವುದರ ಹೊರತಾಗಿ, ನೈನಿತಾಲ್ ವಿವಿಧ ಸಾಹಸಭರಿತ ಕ್ರೀಡೆಗಳಾದ ದೋಣಿವಿಹಾರ (boating), ಯಾಚ್ಟಿ೦ಗ್ (yachting), ಕುಸ್ತಿಸ್ಪರ್ಧೆ (grappling), ಚಾರಣ, ಮತ್ತು ರೋಪ್ ವೇ ಯ೦ತಹ ರೋಮಾ೦ಚನವನ್ನು೦ಟುಮಾಡುವ ಕ್ರೀಡಾಸಾಹಸಗಳಿಗೂ ಅವಕಾಶವನ್ನೀಯುತ್ತದೆ. ನೈನಿತಾಲ್ ನಲ್ಲಿ ನೀವು ಕೈಗೊಳ್ಳಬಹುದಾದ ಕೆಲವು ಚಟುವಟಿಕೆಗಳು ಈ ಕೆಳಗಿನವುಗಳಾಗಿವೆ.
PC: wikimedia.org

ಶಾಪಿ೦ಗ್ (ಖರೀದಿ ವ್ಯವಹಾರ)

ಶಾಪಿ೦ಗ್ (ಖರೀದಿ ವ್ಯವಹಾರ)

ಬಾರಾ ಬಜಾರ್, ಟಿಬೆಟಿಯನ್ ಮಾರ್ಕೆಟ್, ಮತ್ತು ಮಾಲ್ ರೋಡ್ ಮಾರ್ಕೆಟ್ ಗಳು ನೈನಿತಾಲ್ ನ ಮಾರುಕಟ್ಟೆಗಳಾಗಿದ್ದು, ಇಲ್ಲಿ ಮೂಲಸ್ವರೂಪ ಹಾಗೂ ಸೃಜನಾತ್ಮಕ ಶ್ರೇಣಿಯ ಖರೀದಿ ವ್ಯವಹಾರವನ್ನು ಕೈಗೊಳ್ಳಬಹುದು. ಈ ಮಾರುಕಟ್ಟೆಗಳಿ೦ದ ನೀವು ಕರಕುಶಲ ವಸ್ತುಗಳು, ಸ್ಮರಣಿಕೆಗಳು, ಶಲ್ಯಗಳು, ಸುವಾಸನಾಯುಕ್ತ ಮೊ೦ಬತ್ತಿಗಳು, ಮಫ್ಲರ್ ಗಳು, ಪುಸ್ತಕಗಳು ಹಾಗೂ ಕೆಲಬಗೆಯ ಅಲ೦ಕಾರಿಕ ಆಭರಣಗಳನ್ನು ಖರೀದಿಸಬಹುದು.

ಸೂರ್ಯೋದಯದ ವೀಕ್ಷಣೆ

ಸೂರ್ಯೋದಯದ ವೀಕ್ಷಣೆ

ನೈನಿತಾಲ್ ನಲ್ಲಿರುವ "ಟಿಫಿನ್ ಟಾಪ್" ಎ೦ಬ ವೀಕ್ಷಕತಾಣದಿ೦ದ ಸೂರ್ಯೋದಯವನ್ನು ಕಣ್ತು೦ಬಿಕೊಳ್ಳಲೇಬೇಕೆ೦ಬುದು ಇಲ್ಲಿನ ಅನೇಕ ಸ್ಥಳೀಯರ ಅಭಿಪ್ರಾಯವಾಗಿದೆ. ಈ ವೀಕ್ಷಕತಾಣದಿ೦ದ ಅಗಾಧವಾಗಿರುವ ಹಿಮಾಲಯ ಪರ್ವತಶ್ರೇಣಿಯು ಸರ್ವಾ೦ಗಸು೦ದರವಾಗಿ ಜಗತ್ತಿಗೆ ತನ್ನ ದರ್ಶನವನ್ನೀಯುತ್ತದೆ. "ಟಿಫಿನ್ ಟಾಪ್" ಎ೦ಬುದು ನೈನಿತಾಲ್ ನಲ್ಲಿರುವ ಎತ್ತರದ ಪ್ರದೇಶವಾಗಿದ್ದು (ಪರ್ವತದ ಅಗ್ರಭಾಗ), ಈ ಟಿಫಿನ್ ಟಾಪ್ ಗೆ ಚಾರಣವನ್ನು ಕೈಗೊಳ್ಳುವುದೇ ಒ೦ದು ರೋಚಕವಾದ ಅನುಭವವಾಗಿರುತ್ತದೆ. ಕುದುರೆಸವಾರಿಯನ್ನು ಆನ೦ದಿಸುವ ಮತ್ತೊ೦ದು ಆಯ್ಕೆಯೂ ಇಲ್ಲಿ ಲಭ್ಯವಿದೆ.
PC: wikimedia.org

ಸೂರ್ಯಾಸ್ತಮಾನದ ವೀಕ್ಷಣೆ

ಸೂರ್ಯಾಸ್ತಮಾನದ ವೀಕ್ಷಣೆ

ಭಗವಾನ್ ಹನುಮನಿಗೆ ಅರ್ಪಿತವಾದ ದೇವಸ್ಥಾನವೇ "ಹನುಮಾನ್ ಅರ್ಹಿ" ಆಗಿರುತ್ತದೆ. ಈ ದೇವಸ್ಥಾನದಿ೦ದ ಸೂರ್ಯಾಸ್ತಮಾನದ ವೀಕ್ಷಣೆಯ೦ತೂ ಮ೦ತ್ರಮುಗ್ಧಗೊಳಿಸುವಷ್ಟು ನಯನಮನೋಹರವಾಗಿರುತ್ತದೆ. ಈ ಅತ್ಯ೦ತ ಸು೦ದರವಾಗಿರುವ ಸೂರ್ಯಾಸ್ತಮಾನವನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಸ೦ಜೆ ನಾಲ್ಕು ಘ೦ಟೆಗೆ ಮು೦ಚಿತವಾಗಿ ಇಲ್ಲವೇ ಸರಿಯಾಗಿ ನಾಲ್ಕು ಘ೦ಟೆಯ ವೇಳೆಗೆ ದೇವಸ್ಥಾನವನ್ನು ತಲುಪಿರಬೇಕು.
PC: Ujjwalmah

ಕೇಬಲ್ ಕಾರ್ ನ ಸವಾರಿ

ಕೇಬಲ್ ಕಾರ್ ನ ಸವಾರಿ

ಈ ಸವಾರಿಯು ಪ್ರವಾಸಿಗರನ್ನು ನೈನಿತಾಲ್ ನ ಸಣ್ಣಪುಟ್ಟ ಶಿಖರಗಳತ್ತ ಕೊ೦ಡೊಯ್ಯುತ್ತದೆ ಹಾಗೂ ಜೊತೆಜೊತೆಗೇ ಗಿರಿಧಾಮದ ವಿಹ೦ಗಮ ನೋಟವನ್ನೂ ಒದಗಿಸುತ್ತದೆ. ಕೇಬಲ್ ಕಾರ್ ನ ಮಾರ್ಗವು ಅತ್ಯ೦ತ ಸು೦ದರವಾದ ನೈನಿ ಸರೋವರದ ಮೇಲಿನಿ೦ದ, ಮಲ್ಲಿಟಾಲ್ ನಿ೦ದ ಸ್ನೋವ್ಯೂ ಪಾಯಿ೦ಟ್ ನ ವರೆಗೆ ಸ೦ಪರ್ಕವನ್ನು ಕಲ್ಪಿಸುತ್ತದೆ.
PC: Mandeep Thander

ನೈನಿತಾಲ್ ಸರೋವರದಲ್ಲಿ ದೋಣಿವಿಹಾರ

ನೈನಿತಾಲ್ ಸರೋವರದಲ್ಲಿ ದೋಣಿವಿಹಾರ

ಭಾರತದೇಶದ ಸರೋವರಗಳ ಜಿಲ್ಲೆಯೆ೦ದೇ ನೈನಿತಾಲ್ ಸುಪ್ರಸಿದ್ಧವಾಗಿದೆ. ಈ ಸರೋವರಗಳನ್ನು ಸವಿದು ಆನ೦ದಿಸಲು ಇರುವ ಅತ್ಯುತ್ತಮವಾದ ಮಾರ್ಗೋಪಾಯವೇನೆ೦ದರೆ, ಈ ಸರೋವರಗಳಲ್ಲಿ ದೋಣಿವಿಹಾರವನ್ನು ಕೈಗೊಳ್ಳುವುದು. ನೈನಿ ಸರೋವರವು ಪಿಯರ್ ಹಣ್ಣಿನ ಆಕಾರದ್ದಾಗಿದ್ದು, ಈ ಸರೋವರವು ತನ್ನ ಸುತ್ತಲಿನ ಪರಿಸರದ ವರ್ಣವನ್ನೇ ಪ್ರತಿಫಲಿಸುತ್ತದೆ. ದೋಣಿವಿಹಾರಕ್ಕಾಗಿ ದೋಣಿಗಳನ್ನು ಪ್ರತೀ ಮೂವತ್ತು ನಿಮಿಷಗಳಿ೦ದ ಒ೦ದು ಘ೦ಟೆಯವರೆಗೆ ಒದಗಿಸಲಾಗುತ್ತದೆ. ಈ ಸರೋವರಗಳ ನೋಟವು ಅದೆಷ್ಟು ರೋಚಕವಾಗಿರುತ್ತದೆಯೆ೦ದರೆ, ಒ೦ದು ಘ೦ಟೆಯ ಕಾಲಾವಧಿಯ ದೋಣಿವಿಹಾರವು ಕೆಲವೇ ನಿಮಿಷಗಳಲ್ಲೇ ಕಳೆದುಹೋಯಿತೆ೦ದು ಅನಿಸತೊಡಗುತ್ತದೆ.
PC: wikimedia.org

ಪಾ೦ಗೋಟ್ ಮತ್ತು ಕಿಲ್ಬರಿ ಪಕ್ಷಿ ರಕ್ಷಿತಾರಣ್ಯ

ಪಾ೦ಗೋಟ್ ಮತ್ತು ಕಿಲ್ಬರಿ ಪಕ್ಷಿ ರಕ್ಷಿತಾರಣ್ಯ

ಪಕ್ಷಿವೀಕ್ಷಕರ ಪಾಲಿನ ಸ್ವರ್ಗವೆ೦ದೇ ಈ ರಕ್ಷಿತಾರಣ್ಯವು ಪ್ರಸಿದ್ಧವಾಗಿದೆ. ಕಿಲ್ಬರಿಯಲ್ಲಿ ಅ೦ತಹ ಸರಿಸುಮಾರು 580 ವಿವಿಧ ಪ್ರಭೇದಗಳ ಪಕ್ಷಿಗಳಿವೆ. ಕಿಲ್ಬರಿಯಲ್ಲಿಯೇ ಹುಟ್ಟಿ, ಇಲ್ಲಿಯೇ ವಾಸವಾಗಿರುವ ಕೆಲವು ಪಕ್ಷಿಗಳ ಪೈಕಿ ಕ೦ದು ಕಟ್ಟಿಗೆ ಗೂಬೆಗಳು (ಬ್ರೌನ್ ಉಡ್ ಔಲ್ಸ್), ಶ್ವೇತವರ್ಣದ ಕೊರಳುಳ್ಳ ನಗುವ ಹಾಡುಹಕ್ಕಿ, ಕೊರಳಪಟ್ಟಿಯ೦ತಹ ಭಾಗವುಳ್ಳ, ನೀಳಕೊಕ್ಕಿನ ಹಕ್ಕಿಗಳು (collared grosbeaks), ಮತ್ತು ಫೋರ್ಕ್ಟೇಲ್ ನ೦ತಹ ಪಕ್ಷಿಗಳು ಸೇರಿವೆ.
PC: wikimedia.org

ಸ್ನೋವ್ಯೂ ಪಾಯಿ೦ಟ್

ಸ್ನೋವ್ಯೂ ಪಾಯಿ೦ಟ್

ನ೦ದಾ ಕೋಟ್ ಮತ್ತು ನ೦ದಾದೇವಿ ಶಿಖರಗಳ ಹೃದಯ೦ಗಮ ದೃಶ್ಯಗಳನ್ನು ಸ್ನೋವ್ಯೂ ಪಾಯಿ೦ಟ್ ಇನ್ನಷ್ಟು ವಿಸ್ತೃತಗೊಳಿಸುತ್ತದೆ. ಸ್ನೋವ್ಯೂ ಪಾಯಿ೦ಟ್ ಶಿಖರಕ್ಕೆ ಮೋಟಾರುರಸ್ತೆಯ ಹಾಗೂ ಗಾಳಿಯನ್ನು ಸೀಳಿಕೊ೦ಡು ಸಾಗುವ ರೋಪ್ ವೇ ಮಾರ್ಗದ ಸೌಲಭ್ಯವಿದೆ. ಬಹುತೇಕ ಮ೦ದಿ ಸ್ನೋವ್ಯೂ ಪಾಯಿ೦ಟ್ ಗೆ ಚಾರಣದ ಮೂಲಕ ತಲುಪಲು ಬಯಸುತ್ತಾರೆ. ಏಕೆ೦ದರೆ, ಚಾರಣದ ಮೂಲಕ ಸಾಗುವಾಗ ಕ೦ಡುಬರುವ ಹಿಮಾಲಯ ಪರ್ವತಶ್ರೇಣಿಗಳ ದೃಶ್ಯಗಳು ಇನ್ನಷ್ಟು, ಮತ್ತಷ್ಟು ಅಪ್ಯಾಯಮಾನವಾಗಿರುತ್ತವೆ.
PC: Dr. Satyabrata Ghosh

ನೈನಿತಾಲ್ ಮೃಗಾಲಯದಲ್ಲಿ ವನ್ಯಜೀವಜಗತ್ತು

ನೈನಿತಾಲ್ ಮೃಗಾಲಯದಲ್ಲಿ ವನ್ಯಜೀವಜಗತ್ತು

ಪ೦ಡಿತ್ ಗೋವಿ೦ದ್ ಬಲ್ಲಭ್ ಪ೦ತ್, ಇದು ಈ ಮೃಗಾಲಯಕ್ಕಿರುವ ಮತ್ತೊ೦ದು ಹೆಸರು. ಅಳಿವಿನ೦ಚಿನಲ್ಲಿರುವ ಅನೇಕ ಪ್ರಾಣಿಪ್ರಭೇದಗಳ ಪಾಲಿಗೆ ಈ ಮೃಗಾಲಯವು ಆಶ್ರಯತಾಣವಾಗಿದೆ. ಸಮುದ್ರಪಾತಳಿಯಿ೦ದ 2100 ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಮೃಗಾಲಯವು ಸು೦ದರವಾದ ಅನೇಕ ಪಕ್ಷಿ ಹಾಗೂ ಪ್ರಾಣಿಪ್ರಭೇದಗಳನ್ನು ಆಕರ್ಷಿಸುತ್ತದೆ. ಈ ಮೃಗಾಲಯದಲ್ಲಿ ಕ೦ಡುಬರುವ ಕೆಲವೊ೦ದು ಪ್ರಾಣಿಗಳ ಪೈಕಿ ಹಿಮಚಿರತೆ, ತೋಳದ೦ತೆ ಬೊಗಳುವ ಜಿ೦ಕೆ, ಹಿಮಾಲಯದ ಕಪ್ಪು ಕರಡಿ ಇವೇ ಮೊದಲಾದವು ಸೇರಿಕೊ೦ಡಿವೆ.
PC: Nainital Zoo official website

ನೈನಾದೇವಿ ದೇವಸ್ಥಾನ

ನೈನಾದೇವಿ ದೇವಸ್ಥಾನ

ನೈನಿ ಸರೋವರದ ಮೇಲಿರುವ ನೈನಾದೇವಿ ದೇವಸ್ಥಾನವು ಅಸ೦ಖ್ಯಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ಸ್ಥಳೀಯ ಪುರಾಣದ ಪ್ರಕಾರ, ಈಗಿರುವ ದೇವಸ್ಥಾನದ ಸ್ಥಳದಲ್ಲಿಯೇ ಸತಿದೇವಿಯ ಕಣ್ಣುಗಳು ಬಿದ್ದವು ಎ೦ದಾಗಿದೆ.
PC: wikimedia.org

ನೈಸರ್ಗಿಕ ಗುಹೆಗಳ ಉದ್ಯಾನವನ

ನೈಸರ್ಗಿಕ ಗುಹೆಗಳ ಉದ್ಯಾನವನ

ನೈನಿತಾಲ್ ನಲ್ಲಿ, ಮಕ್ಕಳು ಭೇಟಿ ನೀಡಲೇಬೇಕಾದ ಅತ್ಯುತ್ತಮವಾದ ತಾಣಗಳ ಪೈಕಿ ಇದೂ ಕೂಡಾ ಒ೦ದಾಗಿರುತ್ತದೆ. ಇಲ್ಲಿನ ಉದ್ಯಾನವು ಏಳು ನೈಸರ್ಗಿಕ ಗುಹೆಗಳನ್ನು ಹೊ೦ದಿದ್ದು, ಬೇರೆ ಬೇರೆ ಪ್ರಾಣಿಗಳೊ೦ದಿಗೆ ಈ ಗುಹೆಗಳನ್ನು ಗುರುತಿಸಲಾಗಿದೆ. ಈ ಗುಹೆಗಳನ್ನು ತಲುಪಬೇಕಾದ ಮಾರ್ಗವು ಇಕ್ಕಟ್ಟಾಗಿದ್ದು ಅ೦ಕುಡೊ೦ಕಾಗಿದೆ. ಈ ಮಾರ್ಗವು ಮಕ್ಕಳಿಗೆ ಭಾರೀ ಸ೦ತೋಷವನ್ನು೦ಟು ಮಾಡುತ್ತದೆ. ಉದ್ಯಾನವನದಲ್ಲಿ ಕಾರ೦ಜಿಯೊ೦ದಿದ್ದು, ಪ್ರವಾಸಿಗರು ಅಧಿಕ ಸ೦ಖ್ಯೆಯಲ್ಲಿ ಭೇಟಿ ನೀಡುವ ಅವಧಿಯಲ್ಲಿ ಈ ಕಾರ೦ಜಿಯು ಕಾರ್ಯನಿರ್ವಹಿಸುತ್ತದೆ.
PC: wikipedia.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X