Search
  • Follow NativePlanet
Share
» »ಈ ಊರಿನ ಚಳಿಯ ಮಜಾನೇ ಬೇರೆ...!

ಈ ಊರಿನ ಚಳಿಯ ಮಜಾನೇ ಬೇರೆ...!

ಕರ್ನಾಟಕದ ಆಕರ್ಷಕ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಚಿಕ್ಕಮಗಳೂರು ತನ್ನಲ್ಲಿರುವ ಸುಮಧುರ ಪ್ರಾಕೃತಿಕ ಆಕರ್ಷಣೆಗಳಿಂದ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ

By Divya Pandit

ಚಳಿಯ ಮಜಾ ಅನುಭವಿಸಬೇಕೆಂದರೆ ಬರೇ ಉತ್ತರ ಭಾರತದ ಕಡೆ ಹೋಗಬೇಕೆಂದೇನೂ ಇಲ್ಲ. ನಮ್ಮ ಕರ್ನಾಟದಲ್ಲೂ ವಿಶೇಷ ಸ್ಥಳಗಳಿವೆ. ಅವುಗಳ ಅರಿವು ನಮಗಿಲ್ಲ ಅಷ್ಟೆ. ನಿಜ, ದಿನನಿತ್ಯದ ಗಡಿಬಿಡಿಯ ಜೀವನದ ಮಧ್ಯೆ ಪ್ರಕೃತಿ ನಮಗಾಗಿ ನೀಡಿರುವ ಅದ್ಭುತಗಳನ್ನು ನಾವು ನೋಡಿರುವುದೇ ಇಲ್ಲ.

ಅಂತಹ ಒಂದು ದಟ್ಟವಾದ ಅರಣ್ಯ ಪ್ರದೇಶ, ಅದರ ಮಡಿಲಲ್ಲಿ ದೇವಾಲಯಗಳನ್ನು ಹೊಂದಿರುವ ಜಿಲ್ಲೆ ಎಂದರೆ ಚಿಕ್ಕಮಗಳೂರು. ಹೌದು, ಹೆಚ್ಚು ಘಟ್ಟ ಪ್ರದೇಶಗಳನ್ನೇ ಹೊಂದಿರುವ ಈ ಜಿಲ್ಲೆಯಲ್ಲಿ ನೋಡಲು ಅನೇಕ ಸ್ಥಳಗಳಿವೆ. ಅದನ್ನು ನೋಡುವ ಕಾತುರ ಹಾಗೂ ಸಂಯಮ ನಮಗಿರಬೇಕಷ್ಟೆ.

ಈ ಊರಿನ ಚಳಿಯ ಮಜಾನೇ ಬೇರೆ...!

ಚಿತ್ರಕೃಪೆ: Vikram Vetrivel

ದೂರ ಎಷ್ಟು?

ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 242.8 ಕಿ.ಮೀ ದೂರದಲ್ಲಿದೆ. ಬಸ್ ಅಲ್ಲಿ ಹೋಗುವುದಾದರೆ ಸರಿಸುಮಾರು 6 ತಾಸು ಬೇಕಾಗುವುದು. ಕಾರಲ್ಲಿ ಹೋಗುವುದಾದರೆ 5 ತಾಸಲ್ಲಿ ತಲುಪಬಹುದು. ಚಳಿಗಾಲದಲ್ಲಿ ಇಲ್ಲಿ ಸರಿ ಸುಮಾರು 14 ಡಿಗ್ರಿ ಸೆಲ್ಸಿಯಸ್ ಇಂದ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ಹಾಗಾಗಿ ಇಲ್ಲಿ ಪ್ರವಾಸಕ್ಕೆ ಸೂಕ್ತವಾದ ತಿಂಗಳೆಂದರೆ ಡಿಸೆಂಬರ್ ನಿಂದ ಮಾರ್ಚ್. ಇಲ್ಲಿ ಅನುಕೂಲಕ್ಕೆ ತಕ್ಕಂತಹ ವಿಲ್ಲಾ, ರೂಮ್‍ಗಳು ದೊರೆಯುತ್ತವೆ.

ಕೋದಂಡರಾಮ ದೇವಸ್ಥಾನ

ಚಿಕ್ಕಮಗಳೂರಿನಿಂದ ಈ ದೇಗುಲ ಬರೀ 5ಕಿ.ಮೀ. ಹೀರೇಮಗಳೂರು ಎಂಬ ಊರಿನಲ್ಲಿ ಇರುವ ಈ ದೇಗುಲ ಹೊಯ್ಸಳರ ಕಾಲದ್ದು. ಹಾಗಾಗಿ ಈ ದೇಗುಲದ ವಿನ್ಯಾಸ ಹಾಗೂ ಕಲಾಕೃತಿಗಳು ಹೊಯ್ಸಳರ ರೀತಿಯಲ್ಲಿಯೇ ಇವೆ. ನವಗೃಹ, ರಾಮ, ಸೀತೆ ಹಾಗೂ ಲಕ್ಷ್ಮಣ ದೇವರನ್ನು ಇಲ್ಲಿ ಆರಾಧಿಸಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ ಪರಶುರಾಮನಿಗೆ ದರ್ಶನ ನೀಡಲು ರಾಮ ಸೀತಾ ಮತ್ತು ಲಕ್ಷ್ಮಣನ ಜೊತೆಗೆ ಇಲ್ಲಿಗೆ ಬಂದಿದ್ದ ಎಂದು ಹೇಳಲಾಗುತ್ತದೆ.

ಈ ಊರಿನ ಚಳಿಯ ಮಜಾನೇ ಬೇರೆ...!

ಹೀರೇಕೊಳಲೆ ಕೆರೆ, ಚಿತ್ರಕೃಪೆ: Rinyogi03

ಹೀರೇಕೊಳಲೆ ಲೇಕ್

10ಕಿ.ಮೀ ದೂರದಲ್ಲಿರುವ ಈ ಲೇಕ್‍ನ ಸುತ್ತ ಎತ್ತರವಾದ ಬೆಟ್ಟಗಳಿವೆ. ಇದರ ನೀರನ್ನು ಸುತ್ತ ಹಳ್ಳಿಯ ಜನರು ದಿನ ಬಳಕೆಗೆ ಹಾಗೂ ವ್ಯವಸಾಯಕ್ಕೆ ಬಳಸುತ್ತಾರೆ. ಇಲ್ಲಿಂದಲೇ ದೂರದಲ್ಲಿರುವ ಮುಳ್ಳಯ್ಯನ ಗಿರಿ ಬೆಟ್ಟವನ್ನು ನೋಡಬಹುದು.

ಮುಳ್ಳಯ್ಯನ ಗಿರಿ

ಈ ಬೆಟ್ಟಕ್ಕೆ ಸಾಗಲು ನಾಲ್ಕು ತಾಸು ಬೇಕಾಗುವುದು. ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಮಾತ್ರ ಇಲ್ಲಿ ಪ್ರವೇಶಕ್ಕೆ ಅನುಮತಿಯಿದೆ. ಬಹಳ ಎತ್ತರದಲ್ಲಿ ಇರುವ ಈ ಬೆಟ್ಟವನ್ನು ಹತ್ತುವುದೇ ಒಂದು ಮಜಾ. ಹತ್ತಿದ ಮೇಲೆ ಆ ಚಳಿಯಗಾಳಿ, ಮಂಜಿನ ತುಂತುರು ಹನಿಗಳು ಮೈ ಮೇಲೆ ಬೀಳುವಾಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಬೆಟ್ಟದ ತುದಿಯಲ್ಲಿ ತಪಸ್ವಿ ಮುಳ್ಳಪ್ಪ ಸ್ವಾಮಿಯ ಚಿಕ್ಕ ದೇವಾಲಯವಿದೆ. ಅಲ್ಲೇ ಸ್ವಲ್ಪ ಕೆಳಗೆ ಇಳಿದರೆ ಒಂದು ಸುರಂಗ ಇರುವುದನ್ನು ನೋಡಬಹುದು. ಬೆಳಗಿನ ಜಾವ ಹಾಗೂ ಮುಸ್ಸಂಜೆಯಲ್ಲಿ ಹೋದರೆ ಚಳಿಯ ಸವಿಯಲು ಸಾಧ್ಯ. ಕೆಲವರಿಗೆ ಬೆಟ್ಟ ಹತ್ತಲು ಉಸಿರಾಟದ ತೊಂದರೆ ಆಗಬಹುದು.

ಅಯ್ಯನ ಕೆರೆ

ಚಿಕ್ಕಮಗಳೂರಿನಿಂದ 25 ಕಿ.ಮೀ. ದೂರದಲ್ಲಿರುವ ಈ ಕೆರೆ ಸುತ್ತಲೂ ಮೊನಚಾದ ಬೆಟ್ಟಗಳಿಂದ ಆವೃತ್ತವಾಗಿದೆ. ಹೊಯ್ಸಳರ ಕಾಲದಿಂದಲೂ ಇರುವ ಈ ಕೆರೆ ತನ್ನ ಸುತ್ತ ಹಳ್ಳಿಯ ಜನರ ವ್ಯವಸಾಯಕ್ಕೆ ಆಸರೆ ಆಗಿದೆ. ನೀವು ಸಾಹಸ ಪ್ರಿಯರಾದರೆ ಅಲ್ಲಿರುವ ಬೆಟ್ಟವನ್ನು ಹತ್ತುವ ಸಾಹಸ ಮಾಡಬಹುದು.

ಈ ಊರಿನ ಚಳಿಯ ಮಜಾನೇ ಬೇರೆ...!

ಬಾಬಾ ಬುಡನ್ ಗಿರಿ, ಚಿತ್ರಕೃಪೆ: Dinesh Valke

ಬಾಬಾ ಬುಡನ್ ಗಿರಿ

36 ಕಿ.ಮೀ ದೂರದಲ್ಲಿರುವ ಈ ಬೆಟ್ಟ ಸುಮಾರು 1895 ಮೀ. ವಿಸ್ತೀರ್ಣವನ್ನು ಹೊಂದಿದೆ. ಇದನ್ನು ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಬೆಟ್ಟ ಎಂತಲೂ ಹೇಳುತ್ತಾರೆ. ಇಲ್ಲೂ ಮಂಜಿನ ಹನಿ, ತಂಪಾದ ಗಾಳಿಯ ಅನುಭವವನ್ನು ಪಡೆಯಬಹುದು. ಇಲ್ಲಿ ದತ್ತಪೀಠ ಎನ್ನುವ ದೇಗುಲ ಇರುವುದು ವಿಶೇಷ.

ಹೊನ್ನಮ್ಮಾ ಫಾಲ್ಸ್

ಬಾಬಾ ಬುಡನ್ ಗಿರಿಯಿಂದ 7 ಕಿ.ಮೀ. ದೂರದಲ್ಲಿರುವ ಈ ಫಾಲ್ಸ್ 30 ಅಡಿ ಎತ್ತರದಿಂದ ಜಿನುಗುತ್ತದೆ. ಈ ಫಾಲ್ಸ್ ಸುತ್ತ ಆಯುರ್ವೇದಕ್ಕೆ ಸಂಬಂಧಿಸಿದ ಸಸ್ಯಗಳಿಗೆ. ಇದನ್ನು ಧಾರ್ಮಿಕವಾಗಿ ಹಿಂದೂ ಹಾಗೂ ಮುಸ್ಲೀಂರು ಇಬ್ಬರೂ ಆರಾಧಿಸುತ್ತಾರೆ ಎನ್ನುವುದೇ ವಿಶೇಷ. ಇಲ್ಲಿ ಅತಿಯಾದ ತಂಪು ವಾತಾವರಣ.

ಗಮನಿಸ ಬೇಕಾದದ್ದು

* ಬೆಟ್ಟ ಹತ್ತುವುದನ್ನು ಮರೆಯಬೇಡಿ
* ತಿಂಡಿ, ನೀರು, ಹಣ್ಣುಗಳನ್ನು ಒಯ್ಯುವುದು ಉತ್ತಮ
* ಬೆಟ್ಟದ ತುದಿಗೆ ಹೋಗುತ್ತಿದ್ದಂತೆ ಮೊಬೈಲ್ ನೆಟ್‍ವರ್ಕ್ ಸಿಗುವುದು ಕಷ್ಟ
* ಜಾಗಿಂಗ್ ಶೂ ಹಾಗೂ ಸ್ವೆಟರ್ ಧರಿಸಿ ಹೋಗುವುದನ್ನು ಮರೆಯಬೇಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X