Search
  • Follow NativePlanet
Share
» »ಚೆನ್ನೈ ನಗರ ಹಾಗೂ ಸುತ್ತಮುತ್ತಲು

ಚೆನ್ನೈ ನಗರ ಹಾಗೂ ಸುತ್ತಮುತ್ತಲು

By Vijay

ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ರಾಜ್ಯವಾದ ತಮಿಳುನಾಡಿನ ರಾಜಧಾನಿಯೆ ಚೆನ್ನೈ (ಹಿಂದಿನ ಮದ್ರಾಸ್). ಪ್ರಸ್ತುತ ಚೆನ್ನೈ ದೇಶದ ನಾಲ್ಕು ಪ್ರಮುಖ ಮಹಾನಗರಗಳ ಪೈಕಿ ಒಂದಾಗಿದ್ದು ಅತ್ಯುತ್ತಮ ಎನ್ನಬಹುದಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಆಧುನಿಕ ಉಪಕರಣಗಳ ಉದ್ಯಾನವಿರಬಹುದು ಇಲ್ಲವೆ ಪುರಾತನ ಕಟ್ಟಡಗಳಿರಬಹುದು, ಸಾಂಪ್ರದಾಯಿಕ ಮಾರುಕಟ್ಟೆಗಳಿರಬಹುದು ಇಲ್ಲವೆ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಗಳಿರಬಹುದು ಎಲ್ಲವನ್ನು ಕಾಣಬಹುದು ಈ ಮಹಾನಗರದಲ್ಲಿ.

ಆಧುನಿಕತೆಯೊಂದಿಗೆ ಬೆರೆತ ಸಾಂಪ್ರದಾಯಿಕ ತಮಿಳು ಸಂಸ್ಕೃತಿಯನ್ನು ಈ ಮಹಾನಗರದಲ್ಲಿ ಕಾಣಬಹುದು. ಅಲ್ಲದೆ ಇಲ್ಲಿರುವ ಹಲವಾರಿ ದೇವಸ್ಥಾನಗಳು ತಮ್ಮದೆ ಆದ ವಿಶಿಷ್ಟ ರೀತಿಯಲ್ಲಿ ಮಹತ್ವವನ್ನು ಪಡೆದು ದೇಶದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ. ರಾಮೇಶ್ವರಂ, ಕನ್ಯಾಕುಮಾರಿ, ಮದುರೈ, ಕಂಚಿಗಳಂತಹ ಪ್ರಭದ್ಧ ಯಾತ್ರಾ ಕ್ಷೇತ್ರಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದ್ದು ಚೆನ್ನೈ ನಗರವೂ ಸಹ ಹಲವು ವೈಶಿಷ್ಟ್ಯಪೂರ್ಣ ದೇವಸ್ಥಾನಗಳಿಂದಾಗಿ ಹೆಸರುವಾಸಿಯಾಗಿದೆ.

ತಮಿಳು ಚಿತ್ರರಂಗವಾದ ಕಾಲಿವುಡ್ ಗೆ ತವರಾಗಿರುವ ಚೆನ್ನೈ ನಗರ ವಲಯದಲ್ಲಿ ಹಾಗೂ ಸುತ್ತುಮುತ್ತಲು ಹಲವಾರು ಗಮ್ಯವಾದ ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಕೆಲವು ಪ್ರವಾಸಿ ಆಕರ್ಷಣೆಗಳ ಪರಿಚಯ ಮಾಡಿಸುತ್ತದೆ ಈ ಲೇಖನ.

ಇನ್ನೂ ಚೆನ್ನೈ ನಾಲ್ಕು ಮೆಟ್ರೊಪಾಲಿಟನ್ ನಗರಗಳ ಪೈಕಿ ಒಂದಾಗಿರುವುದರಿಂದ ಇಲ್ಲಿಗೆ ತೆರಳುವುದು ಅತಿ ಸುಲಭವಾಗಿದೆ. ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾಗಳಂತಹ ನಗರಗಳಿಂದ ವಿಮಾನಗಳು ಹಾಗೂ ರೈಲುಗಳು ಸುಲಭವಾಗಿ ದೊರೆಯುತ್ತವೆ.

ಗಿಂಡಿ ರಾಷ್ಟ್ರೀಯ ಉದ್ಯಾನ:

ಗಿಂಡಿ ರಾಷ್ಟ್ರೀಯ ಉದ್ಯಾನ:

ಗಿಂಡಿ ರಾಷ್ಟ್ರೀಯ ಉದ್ಯಾನ ತಮಿಳುನಾಡಿನ ಒಂದು ರಕ್ಷಿತ ಪ್ರದೇಶವಾಗಿದೆ. ಚೆನ್ನೈ ನಗರದ ವಲಯದಲ್ಲಿರುವ ಈ ಉದ್ಯಾನವು 2.70 ಚ.ಕಿ.ಮೀ ವ್ಯಾಪ್ತಿಯಲ್ಲಿ ಆವರಿಸಿದೆ. ಇದೊಂದು ನಗರದ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದ್ದು ಇಲ್ಲಿ 2000 ಚುಕ್ಕೆ ಜಿಂಕೆಗಳು, 400 ಕೃಷ್ಣಮೃಗಗಳು, 130 ಬಗೆಯ ಪಕ್ಷಿಗಳು, 14 ಬಗೆಯ ಸಸ್ತನಿಗಳು, ವಿವಿಧ ಸರ್ಪಗಳು ಹೀಗೆ ಹಲವಾರು ಪ್ರಾಣಿ ಪಕ್ಷಿಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Thamizhpparithi Maari

ಮರೀನಾ ಬೀಚ್:

ಮರೀನಾ ಬೀಚ್:

ಚೆನ್ನೈ ನಗರದ ಸುಪ್ರಸಿದ್ಧ ಆಕರ್ಷಣೆ ಮರೀನಾ ಕಡಲ ತೀರ. ನಗರದ ಸೇಂಟ್ ಜಾರ್ಜ್ ಕೋಟೆಯಿಂದ ಪ್ರಾರಂಭವಾಗುವ ಈ ತೀರವು ಸುಮಾರು 13 ಕಿ.ಮೀ ಉದ್ದವನ್ನು ಹೊಂದಿದ್ದು ಬೆಸಂಟ್ ನಗರದಲ್ಲಿ ಕೊನೆಗೊಳ್ಳುತ್ತದೆ. ಈ ರೀತಿಯಾಗಿ ಈ ತೀರವು ಭಾರತದಲ್ಲೆ ಮೊದಲನೇಯ ಹಾಗು ಜಗತ್ತಿನಲ್ಲಿ ಎರಡನೇಯ ನಗರದ ಉದ್ದನೇಯ ಕಡಲ ತೀರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: L.vivian.richard

ಸರ್ಕಾರಿ ಸಂಗ್ರಹಾಲಯ:

ಸರ್ಕಾರಿ ಸಂಗ್ರಹಾಲಯ:

ಭಾರತದ ಎರಡನೇಯ ಅತಿ ಹಳೆಯ ಸಂಗ್ರಹಾಲಯವೆ ಚೆನ್ನೈನ ಎಗ್ಮೋರ್ ಪ್ರದೇಶದಲ್ಲಿರುವ ಸರ್ಕಾರಿ ಸಂಗ್ರಹಾಲಯ. ಎಗ್ಮೋರ್ ಮ್ಯೂಸಿಯಂ ಎಂತಲೂ ಕರೆಯಲ್ಪಡುವ ಈ ಸಂಗ್ರಹಾಲಯವು 1851 ರಲ್ಲಿ ಸ್ಥಾಪಿಸಲ್ಪಟ್ಟಿದೆ. ಈ ಸಂಗ್ರಹಾಲಯವು ಪುರಾತತ್ವ ಸಾಮಗ್ರಿಗಳು ಹಾಗು ಪುರಾತನ ನಾಣ್ಯಗಳ ಸಂಗ್ರಹಕ್ಕಾಗಿ ಪ್ರಸಿದ್ಧವಾಗಿದೆ.

ಪಾರ್ಥಸಾರಥಿ ದೇವಾಲಯ:

ಪಾರ್ಥಸಾರಥಿ ದೇವಾಲಯ:

ಚೆನ್ನೈ ನಗರದ ಟ್ರಿಪ್ಲಿಕೇನ್ ಪ್ರದೇಶದಲ್ಲಿರುವ ಹೆಸರುವಾಸಿಯಾದ ಪಾರ್ಥಸಾರಥಿ ದೇವಾಲಯವು ವೈಷ್ಣವ ದೇವಾಲಯವಾಗಿದ್ದು ಕೃಷ್ಣನಿಗೆ ಮುಡಿಪಾಗಿದೆ. ಸಂಸ್ಕೃತದಲ್ಲಿ ಪಾರ್ಥಸಾರಥಿ ಎಂದರೆ ಅರ್ಜುನನ ರಥದ ಸಾರಥಿ ಎಂದಾಗುತ್ತದೆ. ಪಾರ್ಥ ಅರ್ಜುನ್ನ ಇನ್ನೊಂದು ಹೆಸರಾಗಿದ್ದು ಮಹಾಭಾರತದಿಂದ ಕೃಷ್ಣನಿಗೆ ಈ ಹೆಸರು ಬಂದಿದೆ. ಇದೊಂದು ಅತಿ ಪುರಾತನ ದೇವಾಲಯವೂ ಹೌದು.

ಚಿತ್ರಕೃಪೆ: Nsmohan

ಸೇಂಟ್ ಥಾಮಸ್ ಮೌಂಟ್:

ಸೇಂಟ್ ಥಾಮಸ್ ಮೌಂಟ್:

ಇದು ಚೆನ್ನೈ ನಗರದಲ್ಲಿ ಕಂಡುಬರುವ ಪುಟ್ಟ ಗುಡ್ಡ ಪ್ರದೇಶವಾಗಿದ್ದು, ಇಲ್ಲಿಂದ ಚೆನ್ನೈ ನಗರದ ವಿಹಂಗಮ ನೋಟವನ್ನು ಸವಿಯಬಹುದಾಗಿದೆ. ಇದು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿದೆ.

ಕೋವ್ಲಾಂಗ್:

ಕೋವ್ಲಾಂಗ್:

ಈಸ್ಟ್ ಕೋಸ್ಟ್ ರಸ್ತೆಯ ಮೂಲಕ ಮಹಾಬಲಿಪುರಂಗೆ ಹೋಗುವ ದಿಕ್ಕಿನಲ್ಲಿ ಚೆನ್ನೈನ ದಕ್ಷಿಣಕ್ಕೆ ಸುಮಾರು 40 ಕಿ.ಮೀ ದೂರದಲ್ಲಿ ಈ ಬೆಸ್ತ ಗ್ರಾಮವನ್ನು ಕಾಣಬಹುದು. ಈ ಕಡಲ ದಡದಲ್ಲಿ ವಿಂಡ್ ಸರ್ಫಿಂಗ್ ಕ್ರೀಡೆಯನ್ನು ಆಸ್ವಾದಿಸಬಹುದು.

ಚಿತ್ರಕೃಪೆ: Kmanoj

ವಳ್ಳುವರ್ ಕೊಟ್ಟಂ:

ವಳ್ಳುವರ್ ಕೊಟ್ಟಂ:

ತಮಿಳಿನ ಪ್ರಖ್ಯಾತ ಕವಿ, ಆಧ್ಯಾತ್ಮಿಕ ಪುರುಷ ತಿರುವಳ್ಳುವರ್ ಗೆ ಸಮರ್ಪಿತವಾದ ಸ್ಮಾರಕವೆ ವಳ್ಳುವರ್ ಕೊಟ್ಟಂ.

ಚಿತ್ರಕೃಪೆ: Surajram

ವಿವೇಕಾನಂದ ಇಲ್ಲಂ:

ವಿವೇಕಾನಂದ ಇಲ್ಲಂ:

ಇಲ್ಲಂ ಎಂದರೆ ತಮಿಳಿನಲ್ಲಿ ನಿಲಯ ಅಥವಾ ಭವನ ಎಂಬರ್ಥ ಬರುತ್ತದೆ. ವಿವೇಕಾನಂದರಿಗೆ ಮುಡಿಪಾದ ಭವನ ಇದಾಗಿದೆ. ಹಿಂದೆ ವಿವೇಕಾನಂದರು ಚೆನ್ನೈಗೆ ಭೇಟಿ ನೀಡಿದ್ದಾಗ ಇಲ್ಲಿ ಒಂಭತ್ತು ದಿನಗಳ ಕಾಲ ತಂಗಿದ್ದರು. ರಾಮಕೃಷ್ಣ ಮಠದ ಪ್ರಮುಖ ಅಂಗವಾಗಿದೆ.

ಚಿತ್ರಕೃಪೆ: SriniG

ಕ್ವೀನ್ಸ್ ಲ್ಯಾಂಡ್:

ಕ್ವೀನ್ಸ್ ಲ್ಯಾಂಡ್:

ಚೆನ್ನೈ ನಗರದ ಪೂಂದಮಲ್ಲೆ ಎಂಬ ಪ್ರದೇಶದಲ್ಲಿ ಈ ಭವ್ಯವಾದ ಮನರಂಜನಾ ಉದ್ಯಾನವನ್ನು ಕಾಣಬಹುದು. 2003 ರಲ್ಲಿ ಪ್ರಾರಂಭವಾದ ಈ ಉದ್ಯಾನವು 70 ಎಕರೆಯಷ್ಟು ಬೃಹತ್ ಪ್ರದೇಶದಲ್ಲಿ ಹರಡಿದೆ. ಹಲವಾರು ತರಹೇವಾರಿ ರೈಡುಗಳನ್ನು ಇಲ್ಲಿ ಆನಂದಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5.30 ರ ವರೆಗೆ ಹಾಗೂ ವಾರಾಂತ್ಯಗಳಂದು 10.30 ರಿಂದ ಸಂಜೆ 6.30 ರ ವೆರೆಗೆ ಈ ಉದ್ಯಾನ ತೆರೆದಿರುತ್ತದೆ. ಶುಲ್ಕ ದೊಡ್ಡದವರಿಗೆ ರೂ.350 ಹಾಗೂ ಮಕ್ಕಳಿಗೆ ರೂ.250. ಎರಡು ಅಡಿಗಳಿಗಿಂತ ಚಿಕ್ಕವಿರುವವರಿಗೆ ಯಾವುದೆ ಶುಲ್ಕವಿರುವುದಿಲ್ಲ.

ಚಿತ್ರಕೃಪೆ: Vijay5050

ವಿ ಜಿ ಪಿ ಯುನಿವರ್ಸಲ್ ಕಿಂಗ್ಡಮ್:

ವಿ ಜಿ ಪಿ ಯುನಿವರ್ಸಲ್ ಕಿಂಗ್ಡಮ್:

ಇದೊಂದು ಮನರಂಜನಾ ಉದ್ಯಾನವಾಗಿದೆ. ಈಸ್ಟ್ ಕೋಸ್ಟ್ ರಸ್ತೆಯಲ್ಲಿ ನೆಲೆಸಿರುವ ಇದು 1997 ರಿಂದ ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಂಡಿತು.

ಚಿತ್ರಕೃಪೆ: ವಿ ಜಿ ಪಿ

ಎಂಪಾ ಸ್ಕೈ ವಾಕ್:

ಎಂಪಾ ಸ್ಕೈ ವಾಕ್:

ಚೆನ್ನೈನ ಅಮಿಂಜಿಕರ ಪ್ರದೇಶದಲ್ಲಿರುವ ಎಂಪಾ ಸ್ಕೈ ವಾಕ್ ಒಂದು ಸುಪ್ರಸಿದ್ಧವಾದ ಶಾಪಿಂಗ್ ಮಾಲ್. ಮಲ್ಟಿಪ್ಲೆಕ್ಸ್ ಸಿನೆಮಾ ಗೃಹ, ತರಹೇವಾರಿ ಬಟ್ಟೆ ಹಾಗೂ ಇತರೆ ಸರಂಜಾಮುಗಳ ಝಗಮಗಿಸುವ ಅಂಗಡಿ ಮುಗ್ಗಟ್ಟುಗಳನ್ನು ಇಲ್ಲಿ ನೋಡಬಹುದು.

ಚಿತ್ರಕೃಪೆ: Ashwin Kumar

ಎಡ್ವರ್ಡ್ ಎಲಿಯಟ್ಸ್ ಬೀಚ್:

ಎಡ್ವರ್ಡ್ ಎಲಿಯಟ್ಸ್ ಬೀಚ್:

ಬೆಸ್ಸಿ ಅಥವಾ ಬೆಸಂಟ್ ನಗರ ಬೀಚ್ ಎಂತಲೂ ಕರೆಯಲ್ಪಡುವ ಎಡ್ವರ್ಡ್ ಬೀಚ್ ಚೆನ್ನೈನ ಬೆಸಂಟ್ ನಗರದಲ್ಲಿದೆ. ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ನೀಡಲು ಇದೊಂದು ಆದರ್ಶಪ್ರಾಯವಾದ ಕಡಲ ತೀರವಾಗಿದೆ.

ಚಿತ್ರಕೃಪೆ: B.Sandman

ರಿಪಾನ್ ಕಟ್ಟಡ:

ರಿಪಾನ್ ಕಟ್ಟಡ:

ಚೆನ್ನೈ ಮಹಾನಗರಪಾಲಿಕೆ ಇರುವ ಕಟ್ಟಡವೆ ರಿಪಾನ್ ಕಟ್ಟಡ. ಇಂಡೊ - ಸಾರ್ಸೇನಿಕ್ ವಾಸ್ತು ಶೈಲಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಶ್ವೇತ ವರ್ಣದಿಂದ ಕಂಗೊಳಿಸುವ ಈ ಕಟ್ಟಡ ಚೆನ್ನೈ ಸೆಂಟ್ರಲ್ ಬಳಿ ಸ್ಥಿತವಿದೆ.

ಚೆನ್ನೈ ಸೆಂಟ್ರಲ್:

ಚೆನ್ನೈ ಸೆಂಟ್ರಲ್:

ಚೆನ್ನೈ ಅಥವಾ ಮದ್ರಾಸ್ ಸೆಂಟ್ರಲ್ ನಗರದ ಅಂತಿಮ ರೈಲು ನಿಲ್ದಾಣವಾಗಿದ್ದು ಅತ್ಯಂತ ಜನಜಂಗುಳಿಯಿಂದ ಕೂಡಿರುತ್ತದೆ. ನಗರದ ಅತ್ಯಂತ ಪ್ರಮುಖ ರೈಲು ನಿಲ್ದಾಣವಾಗಿರುವ ಇದು ನವದೆಹಲಿ, ಬೆಂಗಳೂರು, ಮುಂಬೈ ನಂತಹ ನಗರಗಳೊಂದಿಗೆ ನೇರವಾದ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: Planemad

ಬಿರ್ಲಾ ಪ್ಲಾನೆಟೋರಿಯಮ್:

ಬಿರ್ಲಾ ಪ್ಲಾನೆಟೋರಿಯಮ್:

ಅಕಾಶದ ಸಂಕ್ಷೀಪ್ತ ವಿವರಣೆಯನ್ನು ಬಿತ್ತರಿಸುವ ಅಥವಾ ಪರಿಚಯಿಸುವ ತಾರಾಲಯ ಇದಾಗಿದೆ. ಚೆನ್ನೈನ ಕೊಟ್ಟುರ್ಪುರಂ ಎಂಬಲ್ಲಿ ಈ ತಾರಾಲಯವಿದೆ.

ಚಿತ್ರಕೃಪೆ: Googlesuresh

ಎಸ್.ಡಿ.ಎ.ಟಿ ಟೆನ್ನಿಸ್ ಸ್ಟೇಡಿಯಮ್:

ಎಸ್.ಡಿ.ಎ.ಟಿ ಟೆನ್ನಿಸ್ ಸ್ಟೇಡಿಯಮ್:

ಎಸ್.ಡಿ.ಎ.ಟಿ ಟೆನ್ನಿಸ್ ಕ್ರೀಡಾಂಗಣವು ಚೆನ್ನೈನ ನುಂಗಬಕ್ಕಂ ಪ್ರದೇಶದಲ್ಲಿದೆ. ಪ್ರತಿ ವರ್ಷ ಜನವರಿಯ ಮೊದಲನೆಯ ವಾರದಲ್ಲಿ ಎ.ಟಿ.ಪಿ ಟೆನ್ನಿಸ್ ಚಾಂಪೀಯನ್ಶಿಪ್ ಸ್ಪರ್ಧೆಯನ್ನು ಇಲ್ಲಿ ಆಯೋಜಿಸಲಾಗುತ್ತದೆ.

ಚಿತ್ರಕೃಪೆ: Matthewmayer

ಸೆಮ್ಮೊಳಿ ಪೂಂಗಾ:

ಸೆಮ್ಮೊಳಿ ಪೂಂಗಾ:

ತಮಿಳಿನ ಈ ಪದವು ಶಾಸ್ತ್ರೀಯ ಭಾಷೆಯ ಉದ್ಯಾನ ಎಂಬರ್ಥ ನೀಡುತ್ತದೆ. ಇದೊಂದು ಬೊಟಾನಿಕಲ್ ಉದ್ಯಾನವಾಗಿದ್ದು ತಮಿಳುನಾಡಿನ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Balajijagadesh

ಸೆಮ್ಮೊಳಿ ಪೂಂಗಾ:

ಸೆಮ್ಮೊಳಿ ಪೂಂಗಾ:

24 ನವಂಬರ್, 2010 ರಂದು ಈ ಉದ್ಯಾನವು ಉದ್ಘಾಟನೆಗೊಂಡಿತು.

ಚಿತ್ರಕೃಪೆ: Eashchand

ಸೆಮ್ಮೊಳಿ ಪೂಂಗಾ:

ಸೆಮ್ಮೊಳಿ ಪೂಂಗಾ:

ಈ ಉದ್ಯಾನವು ಹಿತಕರವಾದ ಪರಿಸರದಿಂದ ಕೂಡಿದ್ದು ಮನಸಿಗೆ ಮುದ ನೀಡುತ್ತದೆ.

ಚಿತ್ರಕೃಪೆ: Eashchand

ಸೆಮ್ಮೊಳಿ ಪೂಂಗಾ:

ಸೆಮ್ಮೊಳಿ ಪೂಂಗಾ:

ಸಂಜೆಯ ಸಮಯದಲ್ಲಿ ಬಣ್ಣದ ಕಾರಂಜಿಗಳಿಂದ ಕಂಗೊಳಿಸುತ್ತಿರುವ ಉದ್ಯಾನ.

ಚಿತ್ರಕೃಪೆ: Eashchand

ಎಂ.ಎ ಚಿದಂಬರಂ ಸ್ಟೇಡಿಯಮ್:

ಎಂ.ಎ ಚಿದಂಬರಂ ಸ್ಟೇಡಿಯಮ್:

ಚೆನ್ನೈನ ಚಿಪೌಕ್ ಪ್ರದೇಶದಲ್ಲಿರುವ ಎಂ.ಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣವು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ. ಅನೇಕ ಅಂತಾರಾಷ್ಟ್ರೀಯ ಪಂದ್ಯಗಳು ಈ ಕ್ರೀಡಾಂಗಣದಲ್ಲಿ ಜರುಗುತ್ತಿರುತ್ತವೆ.

ಚಿತ್ರಕೃಪೆ: Chandrachoodan Gopalakrishnan

ಕಪಾಲೀಶ್ವರರ್ ದೇವಸ್ಥಾನ:

ಕಪಾಲೀಶ್ವರರ್ ದೇವಸ್ಥಾನ:

ಚೆನ್ನೈ ನಗರದ ಮೈಲಾಪೋರ್ ಪ್ರದೇಶದಲ್ಲಿರುವ ಶಿವನಿಗೆ ಮುಡಿಪಾದ ದೇವಾಲಯವೆ ಕಾಪಾಲೀಶ್ವರರ್ ದೇವಸ್ಥಾನ. ಸುಮಾರು ಏಳನೇಯ ಶತಮಾನದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ಪ್ರಸ್ತುತ ನಗರದ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ಚಿತ್ರಕೃಪೆ: Nsmohan

ಲೈಟ್ ಹೌಸ್:

ಲೈಟ್ ಹೌಸ್:

ಬಂಗಾಳ ಕೊಲ್ಲಿ ಸಮುದ್ರಕ್ಕೆ ಅಭಿಮುಖವಾಗಿ ಸ್ಥಿತವಿರುವ ಲೈಟ್ ಹೌಸ್ ಮರೀನಾ ಕಡಲ ತೀರದ ಗುರುತರವಾದ ಕೇಂದ್ರವಾಗಿದೆ. ಈ ಲೈಟ್ ಹೌಸ್ ಹವಾಮಾನ ಇಲಾಖೆಯ ಕಚೇರಿಯನ್ನೂ ಸಹ ಹೊಂದಿದೆ. 2013 ರಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಇದನ್ನು ಮುಕ್ತಗೊಳಿಸಲಾಯಿತು.

ಚಿತ್ರಕೃಪೆ: Balu Velachery

ವಡಾಪಳನಿ ಮುರುಗನ್ ದೇವಾಲಯ:

ವಡಾಪಳನಿ ಮುರುಗನ್ ದೇವಾಲಯ:

ಚೆನ್ನೈನ ವಡಾಪಳನಿಯಲ್ಲಿರುವ ಅಂಡವರ್ ದೇವಾಲಯವು ಮುರುಗನ್ ದೇವರಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವಾಗಿದೆ. ಮುರುಗನ್ ಎಂದರೆ ಸುಬ್ರಮಣ್ಯ ಸ್ವಾಮಿ. ಇದೊಂದು ಪುರಾತನ ದೇವಾಲಯವಾದರೂ 1920 ರ ಸಮಯದಲ್ಲಿ ಇದನ್ನು ನವೀಕರಣಗೊಳಿಸಲಾಯಿತು ಹಾಗೂ ಇದೆ ಸಮಯದಲ್ಲಿ ಇದಕ್ಕೆ ರಾಜಗೋಪುರವನ್ನೂ ಸಹ ನಿರ್ಮಿಸಲಾಯಿತು.

ಚಿತ್ರಕೃಪೆ: wikipedia

ಪುಳಲ್ ಏರಿ:

ಪುಳಲ್ ಏರಿ:

ಚೆನ್ನೈ ನಗರವಲಯದಿಂದ ಸುಮಾರು 20 ಕಿ.ಮೀ ದೂರದಲ್ಲಿ ಈ ಜಲಾಶಯವಿದೆ. ವಾರಾಂತ್ಯದ ರಜಾ ಸಮಯದಲ್ಲಿ ಭೇಟಿ ನೀಡಲು ಇದೊಂದು ಆದರ್ಶಪ್ರಾಯ ಸ್ಥಳವಾಗಿದೆ. ಇದು ತಿರುವಳ್ಳುರ್ ಜಿಲ್ಲೆಯ ಪೊನ್ನೆರಿ ತಾಲೂಕಿನಲ್ಲಿದೆ. ಈ ಜಲಾಶಯದಿಂದಲೂ ಚೆನ್ನೈ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ.

ಚಿತ್ರಕೃಪೆ: பரிதிமதி

ಮರುಂದೀಶ್ವರರ್ ದೇವಾಲಯ:

ಮರುಂದೀಶ್ವರರ್ ದೇವಾಲಯ:

ಶಿವನಿಗೆ ಸಮರ್ಪಿತವಾದ ಮರುಂದೀಶ್ವರರ್ ದೇವಸ್ಥಾನವು ಚೆನ್ನೈನ ತಿರುವಣ್ಮಿಯೂರ್ ಎಂಬಲ್ಲಿದೆ. ಪಾದಾಲ್ ಪೆಟ್ರಂ ಸ್ಥಳಗಳಲ್ಲಿ ಉಲ್ಲೇಖಿಸಲಾದ 275 ದೇವಸ್ಥಾನಗಳ ಪೈಕಿ ಇದು ಕೂಡ ಒಂದು. ತಮಿಳು ಪದ ಮರುಂದ ಎಂದರೆ ಔಷಧಿ ಎಂದು ಅರ್ಥ. ಪರಮೇಶ್ವರನು ಇಲ್ಲಿ ಅಗಸ್ತ್ಯ ಋಷಿಗೆ ಚಮತ್ಕಾರಿಯ ಔಷಧಿಯ ಕುರಿತು ತಿಳಿಸಿದ್ದನು. ಆದ್ದರಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ದೇವಾಲಯದ ದರುಶನ ಉತ್ತಮ ಎಂದು ನಂಬಲಾಗಿದೆ.

ಚಿತ್ರಕೃಪೆ: Mohan Krishnan

ಮಧ್ಯ ಕೈಲಾಸ:

ಮಧ್ಯ ಕೈಲಾಸ:

ತಮಿಳಿನಲ್ಲಿ ನಡುಕೈಲೈ ಎಂತಲೂ ಕರೆಯಲ್ಪಡುವ ಮಧ್ಯ ಕೈಲಾಸವು ಒಂದು ದೇವಾಲಯವಾಗಿದ್ದು ಚೆನ್ನೈ ನಗರದ ಅಡ್ಯಾರ್ ಪ್ರದೇಶದಲ್ಲಿದೆ. ದೇವಸ್ಥಾನದ ಮೂಲದೇವತೆ ವೆಂಕಟ ಆನಂದ ವಿನಾಯಕ ಅರ್ಥಾತ್ ಗಣೆಶನಾಗಿದ್ದು ಸುತ್ತಲು ಶಿವ, ವಿಷ್ಣು ಹಾಗೂ ಇತರೆ ದೇವರುಗಳ ಸನ್ನಿಧಿಯನ್ನು ಕಾಣಬಹುದು. ಸಪ್ತ ಸ್ವರಗಳಾದ ಸ, ರಿ, ಗ, ಮ, ಪ, ದ, ನಿ ಗಳನ್ನು ಪ್ರತಿಬಿಂಬಿಸುವ ಏಳು ಘಂಟೆಗಳನ್ನು ಕಾಣಬಹುದು. ಮತ್ತೊಂದು ವಿಶೇಷವೆಂದರೆ ವಿನಾಯಕ ಚತುರ್ಥಿ ದಿನದಂದು ಸೂರ್ಯ ರಷ್ಮಿಯು ಮೂಲ ದೇವರ ಮೇಲೆ ಬೀಳುವ ಹಾಗೆ ಇದನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Sankar Pandian

ಶ್ರೀ ರಾಮಕೃಷ್ಣ ಮಠ:

ಶ್ರೀ ರಾಮಕೃಷ್ಣ ಮಠ:

ಯುನಿವರ್ಸಲ್ ಟೆಂಪಲ್ ಅಥವಾ ಜಾಗತಿಕ ದೇವಾಲಯ ಎಂತಲೂ ಕರೆಯಲ್ಪಡುವ ಚೆನ್ನೈನ ಶ್ರೀ ರಾಮಕೃಷ್ಣ ಮಠವು ದಕ್ಷಿಣ ಭಾರತದ ರಾಮಕೃಷ್ಣ ಮಂಡಳಿಯ ಅತಿ ಹಳೆಯ ದೇವಾಲಯವಾಗಿದೆ.

ಚಿತ್ರಕೃಪೆ: Srinivasan G

ತ್ಯಾಗರಾಜ ದೇವಾಲಯ:

ತ್ಯಾಗರಾಜ ದೇವಾಲಯ:

ಚೆನ್ನೈ ನಗರದ ಉತ್ತರ ಭಾಗದಲ್ಲಿರುವ ತಿರುವೊಟ್ಟಿಯೂರ್ ಎಂಬ ಪ್ರದೇಶದಲ್ಲಿ ಶಿವನಿಗೆ ಮುಡಿಪಾದ ತ್ಯಾಗರಾಜ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: Mohan Krishnan

ಪ್ಯಾರೀಸ್ ಕಾರ್ನರ್:

ಪ್ಯಾರೀಸ್ ಕಾರ್ನರ್:

ಚೆನ್ನೈ ನಗರದ ಚೆನ್ನೈ ಬಂದರು ಪ್ರದೇಶದಲ್ಲಿರುವುದೆ ಪ್ಯಾರಿಸ್ ಕಾರ್ನರ್. ಹಿಂದೆ ಥಾಮಸ್ ಪ್ಯಾರಿ ಎಂಬ ಇಂಗ್ಲೆಂಡಿನ ವ್ಯಾಪಾರಿಯೊಬ್ಬ ಇಲ್ಲಿ ಇ.ಐ.ಡಿ ಪ್ಯಾರಿ ಎಂಬ ಕಂಪನಿಯನ್ನು ಇಲ್ಲಿ ಹುಟ್ಟಿ ಹಾಕಿದ್ದರಿಂದ ಈ ಸ್ಥಳಕ್ಕೆ ಈ ಹೆಸರು ಬಂದಿದೆ. ವಾಣಿಜ್ಯ ವ್ಯಾಪಾರಕ್ಕೆ ಅತಿ ಪ್ರಮುಖವಾದ ಸ್ಥಳ ಇದಾಗಿದ್ದು ಹೆಚ್ಚು ಜನಜಂಗುಳಿಯಿಂದ ಕೂಡಿರುತ್ತದೆ. ಅಲ್ಲದೆ ಹಾಲಿವುಡ್ ಹಾಗೂ ತಮಿಳು ಚಿತ್ರಗಳ ಡಿವಿಡಿಗಳು ಇಲ್ಲಿ ನಿರಾಯಾಸವಾಗಿ ದೊರೆಯುತ್ತದೆ.

ಚಿತ್ರಕೃಪೆ: L.vivian.richard

ಸ್ಪೆನ್ಸರ್ ಪ್ಲಾಜಾ:

ಸ್ಪೆನ್ಸರ್ ಪ್ಲಾಜಾ:

ಚೆನ್ನೈ ನಗರದ ಅನ್ನಾ ಸಲೈ ಪ್ರದೇಶದಲ್ಲಿ ಸ್ಥಿತವಿರುವ ಸ್ಪೆನ್ಸರ್ ಪ್ಲಾಜಾ ಚೆನ್ನೈ ಪಟ್ಟಣದ ಪ್ರಮುಖ ಹೆಗ್ಗುರುತಾಗಿದೆ. ವಿಶೇಷವೆಂದರೆ ಬ್ರಿಟೀಷ್ ಆಡಳಿತದ ಸಮಯದಲ್ಲಿ ನಿರ್ಮಾಣವಾದ ಇದು ಭಾರತದ ಅತಿ ಪುರಾತನ ಶಾಪಿಂಗ್ ಮಾಲ್ ಆಗಿದೆ. ಅಲ್ಲದೆ ಭಾರತದಲ್ಲಿ ಕಂಡುಬರುವ ಬೃಹತ್ ಶಾಪಿಂಗ್ ಮಾಲ್ ಗಳ ಪೈಕಿ ಒಂದಾಗಿದೆ. ಅನೇಕ ವಿಧದ, ಅಂತಾರಾಷ್ಟ್ರೀಯ ಬ್ರ್ಯಾಂಡುಗಳ ಸಾಮಗ್ರಿಗಳು ಇಲ್ಲಿ ದೊರೆಯುತ್ತವೆ.

ಚಿತ್ರಕೃಪೆ: Ashwin Kumar

ಅನ್ನಾ ನಗರ ಟಾವರ್ ಪಾರ್ಕ್:

ಅನ್ನಾ ನಗರ ಟಾವರ್ ಪಾರ್ಕ್:

ಅಧಿಕೃತವಾಗಿ ಡಾ. ವಿಶ್ವೇಶ್ವರಯ್ಯ ಟಾವರ್ ಪಾರ್ಕ್ ಎಂದು ಕರೆಯಲ್ಪಡುವ ಈ ಗೋಪುರೋದ್ಯಾನವು ಚೆನ್ನೈನ ಪ್ರತಿಷ್ಠಿತ ಅನ್ನಾ ನಗರದ ಪ್ರಮುಖ ಆಕರ್ಷಣೆಯಾಗಿದೆ. ಈ ಉದ್ಯಾನದಲ್ಲಿರುವ ಗೋಪುರವು ನಗರದ ಅತಿ ಎತ್ತರದ ಗೋಪುರವಾಗಿದೆ. ಪಿಕ್ನಿಕ್, ವಿರಾಮಗಳಿಗೆ ಆದರ್ಶಮಯವಾದ ಸ್ಥಳವಾಗಿದೆ.

ಚಿತ್ರಕೃಪೆ: Acvasagam

ಶಿವನ್ ಪಾರ್ಕ್:

ಶಿವನ್ ಪಾರ್ಕ್:

ಚೆನ್ನೈನ ಕೆ.ಕೆ ನಗರ ಪ್ರದೇಶದಲ್ಲಿ ಈ ಉದ್ಯಾನವನ್ನು ಕಾಣಬಹುದು. ಬೆಳಿಗ್ಗೆಯ ವಾಕಿಂಗ್ ಸಮಯದಿಂದ ಹಿಡಿದು ಸಾಯಂಕಾಲದ ವಿರಾಮದ ಸಮಯದಲ್ಲೂ ಅನೇಕ ಜನರನ್ನು ಇಲ್ಲಿ ಕಾಣಬಹುದು. ಮಕ್ಕಳಿಗೆ ಪಿಕ್ನಿಕ್ ಕರೆದುಕೊಂಡು ಹೋಗಲು ಪ್ರಶಸ್ತವಾದ ಸ್ಥಳ ಇದಾಗಿದೆ. ಇನ್ನೂ ಸಂಜೆಯ ಸಮಯದಲ್ಲಿ ರುಚಿಕರವಾದ ಚಾಟ್ ಗಳೂ ಇಲ್ಲಿ ದೊರೆಯುತ್ತವೆ.

ಚಿತ್ರಕೃಪೆ: Destination8infinity

ಮದ್ರಾಸ್ ಮೊಸಳೆ ಉದ್ಯಾನ:

ಮದ್ರಾಸ್ ಮೊಸಳೆ ಉದ್ಯಾನ:

ಚೆನ್ನೈ ನಗರದಿಂದ 40 ಕಿ.ಮೀ ದೂರದಲ್ಲಿ ಈ ಮೊಸಳೆ ಉದ್ಯಾನವನ್ನು ಕಾಣಬಹುದಾಗಿದೆ. ಅಪಾಯದ ಭೀತಿಯಲ್ಲಿರುವ, ಮಗ್ಗರ್, ಮಾರ್ಶ್ ಹಾಗೂ ಉಪ್ಪು ನೀರಿನ ಮೊಸಳೆಗಳನ್ನು ರಕ್ಷಿಸಿ, ಬೆಳೆಸಿಕೊಂಡು ಹೋಗುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು. ಈ ಉದ್ಯಾನವು ಅಪಾರವಾದ ಜನಾಕರ್ಷಣೆಯನ್ನು ಗಳಿಸಿದೆ.

ಚಿತ್ರಕೃಪೆ: Kmanoj

ಚೋಳಮಂಡಲ ಕಲಾವಿದರ ಹಳ್ಳಿ:

ಚೋಳಮಂಡಲ ಕಲಾವಿದರ ಹಳ್ಳಿ:

1966 ರಲ್ಲಿ ಸ್ಥಾಪಿಸಲ್ಪಟ್ಟ ಈ ಕಲಾವಿದರ ಹಳ್ಳಿಯು ಕಲಾವಿದರ ಬೃಹತ್ ನೆಲೆಯಾಗಿದೆ. ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ ನ ಪ್ರಾಂಶುಪಾಲರಾಗಿದ್ದ ಕೆ.ಸಿ.ಎಸ್ ಪಾನಿಕರ್ ಹಾಗೂ ಅವರ ಶಿಷ್ಯ ವೃಂದದಿಂದ ಸ್ಥಾಪಿಸಲ್ಪಟ್ಟ ಈ ಹಳ್ಳಿಯಲ್ಲಿ ಅನೇಕ ಬಗೆ ಬಗೆಯ ಕಲಾಕೃತಿಗಳನ್ನು ಕಾಣಬಹುದಾಗಿದೆ. ಇದು ಚೆನ್ನೈ ನಗರದಿಂದ 9 ಕಿ.ಮೀ ದೂರದಲ್ಲಿರುವ ಇಂಜಂಬಕ್ಕಂ ಎಂಬ ಪ್ರದೇಶದಲ್ಲಿದೆ.

ಚಿತ್ರಕೃಪೆ: Destination8infinity

ದಕ್ಷಿಣಚಿತ್ರ:

ದಕ್ಷಿಣಚಿತ್ರ:

ದಕ್ಷಿಣ ಭಾರತೀಯ ಜೀವನ ಶೈಲಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ದೃಷ್ಟಿಯಿಂದ ರೂಪಿಸಲಾದ ಒಂದು ಪ್ರಯತ್ನವೆ ದಕ್ಷಿಣಚಿತ್ರ. ಇದೊಂದು ಸಾಂಪ್ರದಾಯಿಕ ಗ್ರಾಮವಾಗಿದ್ದು ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಕಂಡುಬರುವ ಜನ ಜೀವನವನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ. ಇದು ಚೆನ್ನೈ ನಗರದಿಂದ 25 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Koshy Koshy

ಕಣ್ಣೀಮಾರಾ ಸಾರ್ವಜನಿಕ ಗ್ರಂಥಾಲಯ:

ಕಣ್ಣೀಮಾರಾ ಸಾರ್ವಜನಿಕ ಗ್ರಂಥಾಲಯ:

ಇದೊಂದು ಚೆನ್ನೈನ ಎಗ್ಮೋರ್ ಪ್ರದೇಶದಲ್ಲಿರುವ ಸಾರ್ವಜನಿಕ ಗ್ರಂಥಾಲಯ. ದೇಶದ ನಾಲ್ಕು ಸಂಗ್ರಹಣಾ ಗ್ರಂಥಾಲಯಗಳ ಪೈಕಿ ಇದೂ ಸಹ ಒಂದಾಗಿದ್ದು ಭಾರತದಲ್ಲಿ ಪ್ರಕಟಗೊಂಡ ಪ್ರತಿಯೊಂದು ಲೇಖನಗಳು, ದಿನ ಪತ್ರಿಕೆಗಳು, ಪುಸ್ತಕಗಳ ಪ್ರತಿಯು ಇಲ್ಲಿ ಸಂರಕ್ಷಿಸಲ್ಪಟ್ಟಿರುತ್ತದೆ.

ಸರವಣ ಭವನ:

ಸರವಣ ಭವನ:

ಚೆನ್ನೈ ನಗರದ ಪ್ರಮುಖ ಹಾಗೂ ಸುಪ್ರಸಿದ್ಧವಾದ ಹೋಟೆಲ್ ಇದಾಗಿದೆ. ಬಹುತೇಕ ಪ್ರವಾಸಿಗರು ಈ ಹೋಟೆಲ್ ಗೆ ಭೇಟಿ ನೀಡದೆ ಮರಳಲಾರರು.

ಪಳ್ಳಿಕರನೈ ಜೌಗು ಪ್ರದೇಶ:

ಪಳ್ಳಿಕರನೈ ಜೌಗು ಪ್ರದೇಶ:

ಚೆನ್ನೈ ನಗರದ ಏಕೈಕ ಜೌಗು (ತೇವ) ಪ್ರದೇಶ ಇದಾಗಿದೆ. ನಗರದ ದಕ್ಷಿಣ ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ಬಂಗಾಳ ಕೊಲ್ಲಿಯ ಪಕ್ಕದಲ್ಲಿ ಸ್ಥಿತವಾಗಿದ್ದು ಪಕ್ಷಿ ವೀಕ್ಷಣೆಗೆ ಹೆಸರುವಾಸಿಯಾಗಿದೆ. ವಿರಳವಾದ ಫಲ್ವಸ್ ವ್ಹಿಸ್ಟ್ಲಿಂಗ್ ಬಾತುಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: GnanaskandanK

ಸೇಂಟ್ ಜಾರ್ಜ್ ಕೋಟೆ:

ಸೇಂಟ್ ಜಾರ್ಜ್ ಕೋಟೆ:

ಭಾರತದಲ್ಲಿನ ಬ್ರಿಟೀಷರ ಕೋಟೆಗಳ ಮೊದಲನೇಯ ಹೆಸರು ಇದಾಗಿದೆ. 1644 ರಲ್ಲಿ ಇದು ಸ್ಥಾಪಿಸಲ್ಪಟ್ಟಿದೆ. ಪ್ರಸ್ತುತ ಈ ಭವನವು ತಮಿಳುನಾಡು ವಿಧಾನ ಸಭೆಯಾಗಿದೆ. ಅಲ್ಲದೆ ಇತರೆ ಬೇರೆ ಇಲ್ಲಖೆಗಳ ಕಚೇರಿಗಳನ್ನೂ ಸಹ ಇಲ್ಲಿ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X