Search
  • Follow NativePlanet
Share
» »ಪುಣೆ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

ಪುಣೆ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

By Vijay

ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಪುಣ್ಯ ನಗರಿ ಎಂಬ ಹೆಸರಿನಿಂದ ಇಂದು ಪುಣೆ ಎಂಬ ಹೆಸರು ಪಡೆದಿರುವ ಈ ಪ್ರಮುಖ ವಾಣಿಜ್ಯ ಜಿಲ್ಲೆಯು ಪ್ರವಾಸಿಗರಿಗೆಂದು ಅದ್ಭುತವಾದ ಸ್ಥಳಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ. ಜಿಲ್ಲೆಯ ಆಡಳಿತ ಕೇಂದ್ರ ಪುಣೆ ನಗರವಾಗಿದ್ದು ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಮಂಚೂಣಿಯ ಸ್ಥಾನಗಳಲ್ಲೊಂದಾಗಿದೆ.

ವಿಶೇಷ ಲೇಖನ : ಮಹಾರಾಷ್ಟ್ರದ ರೋಮಾಂಚಕ ಜಲಪಾತಗಳು

ಎಲ್ಲ ರೀತಿಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಈ ಜಿಲ್ಲೆಯು ವಿವಿಧ ಪ್ರವಾಸಿಗರ ವೈವಿಧ್ಯಮಯ ಅಭಿರುಚಿಗಳಿಗೆ ತಕ್ಕಂತೆ ಸ್ಥಳಗಳನ್ನು ಹೊಂದಿದ್ದು ವರ್ಷಪೂರ್ತಿ ದೇಶದೆಲ್ಲೆಡೆಯಿಂದ ಈ ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡುತ್ತಲೆ ಇರುತ್ತಾರೆ. ಪ್ರಮುಖವಾಗಿ ಪುಣೆ ಜಿಲ್ಲೆಯಲ್ಲಿ ಕೋಟೆ ತಾಣಗಳನ್ನು ಬಹುವಾಗಿ ಕಾಣಬಹುದಾಗಿದ್ದು ಮಳೆಗಾಲದ ಸಂದರ್ಭದಲ್ಲಿ ಇವು ಹಸಿರಿನಿಂದ ಶುಭ್ರವಾಗಿ ಕಂಗೊಳಿಸುವುದನ್ನು ನೋಡುವುದೆ ಒಂದು ಚೆಂದದ ಅನುಭವ. ಅಲ್ಲದೆ ಇಲ್ಲಿರುವ ಬೆಟ್ಟ ಕೋಟೆಗಳು "ಮಾನ್ಸೂನ್ ಟ್ರೆಕ್ಕಿಂಗ್" ಸಹ ತಕ್ಕುದಾದ ಆಯ್ಕೆಗಳಾಗಿವೆ.

ಪುಣೆಯಲ್ಲಿರುವ ಹೋಟೆಲುಗಳು

ಪ್ರಸ್ತುತ ಲೇಖನದ ಮೂಲಕ ಪುಣೆ ಜಿಲ್ಲೆಯಲ್ಲಿ ನೀವು ಅನ್ವೇಷಿಸಬಹುದಾದ ಹಲವು ಸ್ವಾರಸ್ಯಕರ ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯಿರಿ ಹಾಗೂ ಪುಣೆಗೆ ಹೋಗಿದ್ದಾಗ ಇವುಗಳಲ್ಲಿ ಯಾವುದಾದರೊಂದನ್ನದರೂ ಸಹ ನೋಡಲು ಮರೆಯದಿರಿ.

ಕ್ಲಿಯರ್‌‌‌‌‌‍ಟ್ರಿಪ್‌‌‌‍ನಿಂದ ಹೋಟೆಲ್ ಮತ್ತು ಫ್ಲೈಟ್ ಬುಕ್ ಮಾಡಿ 5000 ರೂ. ಮರಳಿ ಪಡೆಯಿರಿ

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಮೊದಲಿಗೆ ಪುಣೆ ನಗರ ವ್ಯಾಪ್ತಿಯಲ್ಲಿ ನೋಡಬಹುದಾದ ಕೆಲವು ವಿಶಿಷ್ಟ ಆಕರ್ಷಣೆಗಳ ಕುರಿತು ತಿಳಿಯಿರಿ. ಖಡಕ್ವಾಸ್ಲಾ ಜಲಾಶಯ ನಗರ ಪ್ರದೇಶದಿಂದ ಕೇವಲ 20 ಕಿ.ಮೀ ಗಳಷ್ಟು ಮಾತ್ರವೆ ದೂರವಾಗಿರುವ ಒಂದು ಸುಂದರ ಜಲಾಶಯ ಪ್ರದೇಶವಾಗಿದೆ. ಮಳೆಗಾಲದ ಸಂದರ್ಭದಲ್ಲಂತೂ ಈ ಜಲಾಶಯ ಭರ್ತಿಯಾಗಿ ಸುತ್ತಮುತ್ತಲಿನ ಪ್ರದೇಶಗಳ ಜನರ ಪಾಲಿಗೆ ಒಂದು ಅದ್ಭುತ ಪ್ರವಾಸಿ ಅಕರ್ಷಣೆಯಾಗಿ ಬಿಡುತ್ತದೆ.

ಚಿತ್ರಕೃಪೆ: chinmay22

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಮುತಾ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಜಲಾಶಯ ಪುಣೆ ನಗರದ ನಗರವಾಸಿಗಳ ಕುಡಿಯುವ ನೀರಿನ ಮೂಲ ಜೀವ ನಾಡಿಯಾಗಿದೆ. ಮಳೆಗಾಲದಲ್ಲದ ಸಂದರ್ಭದಲ್ಲಿ ಜಲಾಶಯ ಈ ರೀತಿ ಇರುತ್ತದೆ. ಜಲಾಶಯ ತಾಣದ ಅಣತಿ ದೂರದಲ್ಲೆ ಸಿಂಹಗಡ್ ಕೋಟೆ ಹಾಗೂ ಪನ್ಶೆಟ್ ಮತ್ತು ವರಸಗಾಂವ್ ಅವಳಿ ನಗರಗಳ ಆಣೆಕಟ್ಟೆಯಿದ್ದು ರಮಣೀಯವಾದ ಪ್ರಕೃತಿ ಸೌಂದರ್ಯದ ಹಿನ್ನಿಲೆಯಲ್ಲಿ ಈ ಜಲಾಶಯವಿದೆ.

ಚಿತ್ರಕೃಪೆ: Arnova

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಅಗಾ ಖಾನ್ ಅರಮನೆ: ಪುಣೆ ನಗರದಲ್ಲಿ ನೋಡಲೇಬೇಕಾದ ಮಹತ್ವದ ಆಕರ್ಷಣೆ ಇದಾಗಿದೆ. ಭಾರತದ ಸ್ವಾತಂತ್ರ್ಯ ಯುದ್ಧಕ್ಕೂ ಸಹ ತನ್ನ ನಂಟನ್ನು ಹೊಂದಿರುವ ಈ ಅರಮನೆಯು ಮೂರನೇಯ ಸುಲ್ತಾನ್ ಮೊಹಮ್ಮದ್ ಶಾ ಅಗಾ ಖಾನ್ ನಿಂದ ನಿರ್ಮಾಣವಾಗಿದ್ದು ಭಾರತದ ಕೆಲವೆ ಕೆಲವು ಆಯ್ದ ಭವ್ಯ ಅರಮನೆಗಳ ಪೈಕಿ ಇದೂ ಸಹ ಒಂದಾಗಿದೆ. ವಿಶೇಷವೆಂದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ, ಅವರ ಪತ್ನಿ ಕಸ್ತೂರಿಬಾಯಿ ಹಾಗೂ ಅವರ ಕಾರ್ಯದರ್ಶಿ ಮಹಾದೇವ ದೇಸಾಯಿ ಅವರನ್ನು ಈ ಅರಮನೆಯಲ್ಲಿ ಬಂಧಿಸಿಡಲಾಗಿತ್ತು ಹಾಗೂ ಇದೆ ಅರಮನೆಯಲ್ಲಿ ಕಸ್ತೂರಿಬಾಯಿ ಹಾಗೂ ಮಹಾದೇವ ದೇಸಾಯಿ ಅವರು ಇಹ ಲೋಕ ತ್ಯಜಿಸಿದ್ದರು.

ಚಿತ್ರಕೃಪೆ: Ramnath Bhat

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ವಿಶ್ರಾಮಬಾಗ್ ವಾಡಾ : ಆಧುನಿಕ ಶೈಲಿಯ ಕಟ್ಟಡಗಳ ನಡುವೆ ಸಾಮ್ಪ್ರದಾಯಿಕ ಶೈಲಿಯಲ್ಲಿ ನಿರ್ಮಾಣವಾಗಿ ಕಾಲಕ್ಕೆ ಸೆಡ್ಡು ಹೊಡೆಯುತ್ತ ತನ್ನ ವೈಭವದ ಗತಕಾಲವನ್ನು ಪ್ರದರ್ಶಿಸುತ್ತ ನಿಂತಿರುವ ಐತಿಹಾಸಿಕ ಕಟ್ಟಡವೆ ವಿಶ್ರಾಮಬಾಗ್ ವಾಡಾ. ವಾಡಾ ಎಂದರೆ ಸಾಮಾನ್ಯವಾಗಿ ಮರಾಠಿ ಭಾಷೆಯಲ್ಲಿ ವಠಾರ, ನಿಲಯ, ವಾಸ ಸ್ಥಾನ ಎಂದಾಗುತ್ತದೆ. ಇದು ಮರಾಠಿ ಸಂಸ್ಕೃತಿಯ ಪೇಶ್ವಾ ಸಮುದಾಯದ ಕೊನೆಯ ಅರಸನಾಗಿದ್ದ ಎರಡನೇಯ ಬಾಜಿರಾವ್ ಅವರ ನಿವಾಸವಾಗಿತ್ತು. ಇಂದು ಶ್ರೀಮಂತ ಪರಮ್ಪರೆಯ ಕುರುಹಾಗಿ ಮೆರೆಯುತ್ತ ನಿಂತಿರುವ ಈ ಕಟ್ಟಡದ ಕೆಳ ಭಾಗವು ಅಂಚೆ ಕಚೇರಿಯಾಗಿದ್ದರೆ, ಮೊದಲ ಅಂತಸ್ತುಗಳಲ್ಲಿ ನಗರಸಭೆಯ ಕೆಲ ಇತರೆ ಕಚೇರಿಗಳು ಹಾಗೂ ಒಂದು ಚಿಕ್ಕ ವಸ್ತು ಸಂಗ್ರಹಾಲಯವನ್ನು ಹೊಂದಿದೆ.

ಚಿತ್ರಕೃಪೆ: SPat

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪಾತಾಳೇಶ್ವರ : ಇದೊಂದು ಬಂಡೆಯಲ್ಲಿ ಕೊರೆದ, ಶಿವನಿಗೆ ಮುಡಿಪಾದ ಗುಹಾಂತರದ ದೇವಾಲಯವಾಗಿದೆ. ತಜ್ಞರ ಪ್ರಕಾರ ಈ ರಚನೆಯು ಎಂಟನೇಯ ಶತಮಾನಕ್ಕೆ ಸಂಬಂಧಿಸಿದ್ದು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದದ್ದೆನ್ನಲಾಗಿದೆ. ಪುಣೆ ಜನರ ಪಾಲಿಗೆ ಇದೊಂದು ಐತಿಹಾಸಿಕ ಪ್ರತಿಷ್ಠಿತ ದೇವಾಲಯವಾಗಿದ್ದು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Khoj Badami

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಕೆಲ ಸ್ಥಳಗಳ ಕುರಿತು ರಹಸ್ಯ ವಿಚಾರಗಳು, ನಿಗೂಢತೆ ಮುಂತಾದವುಗಳನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಭೂತ ಅಥವಾ ಆತ್ಮಪೀಡಿತ ಸ್ಥಳಗಳ ಕುರಿತು ತಿಳಿಯಲು ನಮ್ಮಲ್ಲಿ ಬಹುತೇಕರಿಗೆ ಬಲು ಆಸಕ್ತಿ. ಇಂತಹ ಒಂದು ವಿಶೇಷ ಹಿನ್ನಿಲೆಯಿರುವ ಪ್ರವಾಸಿ ಆಕರ್ಷಣೆಯೂ ಆಗಿರುವ ಶನಿವಾರವಾಡಾ ಎಂಬ ಕೋಟೆಯು ಪುಣೆಯ ಹೆಸರುವಾಸಿ ತಾಣ. ಶನಿವಾರವಾಡಾದ ಘೋರ ರಹಸ್ಯ.

ಚಿತ್ರಕೃಪೆ: Ramakrishna Reddy y

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪಾರ್ವತಿ ಬೆಟ್ಟ : ಇದು ಪುಣೆನಗರದಲ್ಲಿರುವ ಒಂದು ಜನಪ್ರೀಯ ಬೆಟ್ಟವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2,100 ಅಡಿಗಳಷ್ಟು ಎತ್ತರವಿರುವ ಈ ಬೆಟ್ಟ ತನ್ನ ತುದಿಯಲ್ಲಿರುವ ದೇವಸ್ಥಾನ ಹಾಗೂ ಸುಂದರ ಪ್ರಕೃತಿ ದೃಶ್ಯಾವಳಿಗಳಿಗೆ ಹೆಸರುವಾಸಿಯಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Siddhesh Nampurkar

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಈ ಬೆಟ್ಟದ ತುದಿಯಲ್ಲಿರುವ ದೇವಾಲಯವು ಪುಣೆ ನಗರದ ಪುರಾತನ ಪಾರಂಪರಿಕ ರಚನೆಯಾಗಿದ್ದು ಪೇಶ್ವೆಗಳ ಕಾಲದಲ್ಲಿ ನಿರ್ಮಾಣವಾದುದಾಗಿದೆ. ಇನ್ನೂ ಪ್ರವಾಸಿಗರಿಗೆ ಹಾಗೂ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಈ ಬೆಟ್ಟ ವೀಕ್ಷಣಾ ತಾಣವು ಪುಣೆ ನಗರದ ವಿಹಂಗಮ ನೋಟ ಕರುಣಿಸುವ ಕೇಂದ್ರವಾಗಿದೆ.

ಚಿತ್ರಕೃಪೆ: Andy Hay

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ವೇತಾಳ ಬೆಟ್ಟದ ನಂತರ ಈ ಬೆಟ್ಟವು ಪುಣೆಯ ಎರಡನೆಯ ಅತಿ ಎತ್ತರದ ವೀಕ್ಷಣಾ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬೆಟ್ಟವನ್ನು ಏರಬಹುದಾಗಿದ್ದು ಸುಲಭವಗಿ ಏರಲು 103 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳ ಮೂಲಕ ನಿಧಾನವಾಗಿ ಏರುತ್ತ ಸುಂದರ ಭೂದೃಶ್ಯಾವಳಿಗಳನ್ನು ಸವಿಯುತ್ತ ತುದಿಯಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Khanruhi

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಬೆಟ್ಟದ ತುದಿಯಲ್ಲಿರುವ ಮುಖ್ಯ ದೇವಸ್ಥಾನವು ದೇವ್ದೇವೇಶ್ವರ. ಶಿವನು ಪಾರ್ವತಿ ಸಮೇತನಾಗಿ ಇಲ್ಲಿ ನೆಲೆಸಿದ್ದು ಇದಕ್ಕೆ ಪಾರ್ವತಿ ಬೆಟ್ಟ ಎಂಬ ಹೆಸರು ಬಂದಿದೆ. ಮುಖ್ಯ ದೇವಾಲಯದ ಹೊರತಾಗಿ ಇಲ್ಲಿ ವಿಠ್ಠಲ, ವಿಷ್ಣು, ಕಾರ್ತಿಕೇಯ ಹಾಗೂ ರುಕ್ಮಿಣಿಗೆ ಮುಡಿಪಾದ ದೇವಾಲಯಗಳೂ ಸಹ ಇರುವುದನ್ನು ಕಾಣಬಹುದು. ವಿಠ್ಠಲ ರುಕ್ಮಿಣಿ ದೇವಾಲಯದ ಮೂಲ ವಿಗ್ರಹಗಳು.

ಚಿತ್ರಕೃಪೆ: Tehniyatshaikh

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಮರಾಠಾ ಪಾರಂಪರಿಕ ಶ್ರೀಮಂತಿಕೆಯ ಗುರುತರವಾದ ರಚನೆಯನ್ನು ನೋಡುವ ಬಯಕೆ ಇದ್ದಲ್ಲಿ ಪುಣೆ ನಗರದ ವನವಾಡಿ (ವನೋವ್ರಿ) ಪ್ರದೇಶದಲ್ಲಿರುವ ಶಿಂದೆ ಛತ್ರಿಗೆ ಭೇಟಿ ನೀಡಬಹುದು. ಮೂಲತಃ ಇದೊಂದು ಸಮಾಧಿ ಸ್ಮಾರಕವಾಗಿದ್ದು ಮರಾಠಿ ಪರಂಪರೆಯ ಅದ್ಬುತ ವಾಸ್ತುಶೈಲಿಯ ಸೂಕ್ಷ್ಮಗಳನ್ನು ಅನಾವರಣಗೊಳಿಸುವ ನಗರದ ಗುರುತರವಾದ ತಾಣವಾಗಿದೆ. ಪೇಶ್ವೆ ಸಾಮ್ರಾಜ್ಯದಲ್ಲಿ ಮುಖ್ಯ ಸೇನಾಧಿಪತಿಯಾಗಿ ಹೆಸರುಗಳಿಸಿದ್ದ ಮಹದ್ಜಿ ಶಿಂದೆಯ ಸಮಾಧಿ ಸ್ಮಾರಕ ಇದಾಗಿದೆ. ಸೂಕ್ಷ್ಮ ಕೆತ್ತನೆಗಳು, ಮಿನುಗುವ ಕಬ್ಬಿಣದ ಸರಳುಗಳು ಕಾಲಕ್ಕೆ ಸ್ವಲ್ಪವೂ ನಾಶ ಹೊಂದ್ದೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡು ಬಂದಿರುವುದು ಇದರ ಇನ್ನೊಂದು ವಿಶೇಷ.

ಚಿತ್ರಕೃಪೆ: Rupeshpjadhav

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಜಪನೀಸ್ ಉದ್ಯಾನ : ಪುಣೆಯ ಸಿಂಹಗಡ್ ರಸ್ತೆಯಲ್ಲಿ ಸ್ಥಿತವಿದೆ ಒಂದು ಮನೋಹರವಾದ ಪ್ರದೇಶ. ನಗರ ವ್ಯಾಪ್ತಿಯಲ್ಲೆ ಇದ್ದರೂ ಒಂದೊಮ್ಮೆ ಈ ಪ್ರದೇಶದಲ್ಲಿ ಹೊಕ್ಕರೆ ಸಾಕು ನೀವು ಯಾವುದೋ ಅರಣ್ಯದಲ್ಲಿರುವ ಒಂದು ಸುಂದರವಾದ ಅತಿ ಶಿಸ್ತಿನಿಂದ ಸ್ವಚ್ಛವಾಗಿ ನಿರ್ವಹಿಸಲ್ಪಡುತ್ತಿರುವ ರಾಜೋದ್ಯಾನಕ್ಕೆ ಬಂದ ಹಾಗಾಗುತ್ತದೆ.

ಚಿತ್ರಕೃಪೆ: Mvkulkarni23

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಜಪಾನ್ ದೇಶದ ಒಕಾಯಾಮಾ ನಗರದಲ್ಲಿರುವ 300 ವರ್ಷಗಳ ಇತಿಹಾಸದ ಕೋರಾಕುವೇನ್ ಉದ್ಯಾನದಿಂದ ಪ್ರಭಾವಗೊಂಡು ಈ ಸುಂದರ ಉದ್ಯಾನವನ್ನು ಅದೇ ರೀತಿಯಲ್ಲಿ ಯಶಸ್ವಿಯಾಗಿ ನಿರ್ಮಿಸಲಾಗಿದೆ. ಗದ್ದಲದಿಂದ ಕೂಡಿದ ನಗರದಲ್ಲಿದ್ದರೂ ಸಹ ಈ ಉದ್ಯಾನವನ್ನು ಪ್ರವೇಶ್ಸಿದಾಗ ಸ್ವಲ್ಪವೂ ಸದ್ದು ಗದ್ದಲದ ಸುಳಿವು ಕೂಡ ಸಿಗಲ್ಲ. ದಪ್ಪಾದ ಹಸಿರು ಹುಲ್ಲಿನ ಹಾಸಿಗೆ, ವಿಸ್ಮಯಗೊಳಿಸುವ ಉಬ್ಬು ತೆಗ್ಗುಗಳು, ಸೊಂಪಾಗಿ ಬೆಳೆದ ಮರ-ಗಿಡಗಳು, ಅಲ್ಲಲ್ಲಿ ಭೂಮಿಗೆ ಒರಗಿಕೊಂಡಿರುವ ಅನನ್ಯ ಶಿಲಾ ಕಲಾಕೃತಿಗಳು, ಜುಳು ಜುಳು ಎಂದು ಹರಿದಿರುವ ನೀರಿನ ತೊರೆ...ಅಬ್ಬಾ ದಿನದ ಆರಂಭವನ್ನು ಪ್ರಸನ್ನತೆಯಿಂದ ಪ್ರಾರಂಭಿಸಲು ಮತ್ತೊಂದಿಲ್ಲ ಎನ್ನುವಂತಿದೆ ಈ ಉದ್ಯಾನ.

ಚಿತ್ರಕೃಪೆ: Mvkulkarni23

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಇತ್ತೀಚಿಗಷ್ಟೆ ನಗರ ಸಭೆಯು ಮಹಾರಾಷ್ಟ್ರ ಜನಪ್ರೀಯ ಸಾಹಿತಿ/ಲೇಖಕರಾದ ಪಿ.ಎಲ್.ದೇಶಪಾಂಡೆ ಅವರ ಗೌರವರ್ಥ ಇದಕ್ಕೆ ಪಿ.ಎಲ್.ದೇಶಪಾಂಡೆ ಉದ್ಯಾನ ಎಂದು ಮರು ನಾಮಕರಣ ಮಾಡಿದೆ. ಒಮ್ಮೊಮ್ಮೆ ಇದು ಪುಣೆ-ಒಕಾಯಾಮಾ ಗೆಳೆತನ ಉದ್ಯಾನ ಎಂತಲೂ ಕರೆಯಲ್ಪಡುತ್ತದೆ. ಪ್ರಮುಖ ಪ್ರವಾಸಿ ಆಕರ್ಷಣೆಯೂ ಆದೆ ಈ ಉದ್ಯಾನಕ್ಕೆ ಪ್ರವೇಶ ಶುಲ್ಕ ಕೇವಲ ಐದು ರೂಪಾಯಿಯನ್ನು ಪಾವತಿಸಿ ಪ್ರವೇಶಿಸಬಹುದು. ಅಂತೆಯೆ ಸಾಕಷ್ಟು ಪುಣೆಯಿಗರು ಮುಂಜಾವಿನ ತಾಜಾ ಹವೆಯನ್ನು ಪಡೆಯಲು ಇಲ್ಲವೆ ಸಾಯಂಕಾಲ ಹಾಯಾಗಿ ವಿರಮಿಸಲು ಇಲ್ಲಿಗೆ ನಿತ್ಯ ಬರುತ್ತಿರುತ್ತಾರೆ.

ಚಿತ್ರಕೃಪೆ: Mvkulkarni23

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪು.ಲಾ ದೇಶಪಾಂಡೆ ಉದ್ಯಾನದ ಮತ್ತೊಂದು ಸೊಗಸಾದ ದೃಶ್ಯ.

ಚಿತ್ರಕೃಪೆ: Mvkulkarni23

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ರಾಜೀವ್ ಗಾಂಧಿ ಪ್ರಾಣಿ ಸಂಗ್ರಹಾಲಯ, ಪುಣೆ ನಗರದಲ್ಲಿ ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದಿರುವ ಮತ್ತೊಂದು ಸ್ಥಳವಾಗಿದೆ. ವ್ಯಾಪಕವಾಗಿ ವ್ಯಾಪಿಸಿರುವ ಈ ಪ್ರಾಣಿ ಸಂಗ್ರಹಾಲಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು ಅದರಲ್ಲಿ ಸರ್ಪೋದ್ಯಾನವು ಹೆಸರುವಾಸಿಯಾಗಿದೆ. ಮಕ್ಕಲೊಂದಿಗೆ ನಗರದಲ್ಲಿದ್ದಾಗ ಮಿಸ್ ಮಾಡಿಕೊಳ್ಳಬಾರದ "ಜೂ" ಇದಾಗಿದೆ. ಸರ್ಪೋದ್ಯಾನದಲ್ಲಿರುವ ರಸೆಲ್ ವೈಪರ್ ಎಂಬ ಹಾವು.

ಚಿತ್ರಕೃಪೆ: Gupt.sumeet

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಆಳಂದಿ: ನಮ್ಮ ಕನ್ನಡ ಸಂಸ್ಕೃತಿಯ ಕೂಡಲಸಂಗಮ ಯಾವ ರೀತಿ ಭಕ್ತಿ ಸಂತ ಬಸವಣ್ಣನವರ ಐಕ್ಯ ಸ್ಥಳವಾಗಿ ಇಂದು ಪುಣ್ಯ ಕ್ಷೇತ್ರವಾಗಿ ಕಂಗೊಳಿಸುತ್ತಿದೆಯೊ ಅದೇ ರೀತಿಯಲ್ಲಿ ಮರಾಠಿ ಸಂಸ್ಕೃತಿಯ ಭಕ್ತಿ ಸಂತರಾಗಿದ್ದ ಧ್ಯಾನೇಶ್ವರ ಎಂಬುವರ ಸಮಾಧಿ ಕ್ಷೇತ್ರವಾಗಿ ಪುಣೆ ಜಿಲ್ಲೆಯ ಆಳಂದಿಯು ಇಂದು ಒಂದು ಪುಣ್ಯ ಕ್ಷೇತ್ರವಾಗಿದೆ. ಮಹಾರಾಷ್ಟ್ರ ರಾಜ್ಯದ ಮೂಲೆ ಮೂಲೆಗಳಿಂದಲ್ಲದೆ, ಉತ್ತರ ಕರ್ನಾಟಕದ ಬಹುತೇಕ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಂದ್ರಯಾಣಿ ನದಿ ತಟದಲ್ಲಿ ನೆಲೆಸಿರುವ ಆಳಂದಿ ಶ್ರೀಕ್ಷೇತ್ರವು ಪುಣೆ ನಗರದಿಂದ 25 ಕಿ.ಮೀ ಗಳಷ್ಟು ದೂರದಲ್ಲಿದ್ದು, ಬಸ್ಸುಗಳ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಚಿತ್ರಕೃಪೆ: Ketaki Pole

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಭೀಮಾಶಂಕರ: ಪುಣೆ ಜಿಲ್ಲೆಯ ಜ್ಯೋತಿರ್ಲಿಂಗ ಕೇಂದ್ರವಾಗಿರುವ ಭೀಮಾಶಂಕರವು ಪುಣೆ ಜಿಲ್ಲೆಯ ಖೇಡ್ ಪಟ್ಟಣದಿಂದ 50 ಕಿ.ಮೀ ದೂರದಲ್ಲಿ ನೆಲೆಸಿದೆ ಹಾಗೂ ದೇಶದ 12 ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ತಾಣವಾಗಿದೆ. ಪ್ರತಿ ನಿತ್ಯವು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಈ ತಾಣವು ಶಿವರಾತ್ರಿಯ ಸಂದರ್ಭದಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಪುಣೆ ನಗರದಿಂದ ಇಲ್ಲಿಗೆ ತೆರಳಲು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: ସୁରଥ କୁମାର ପାଢ଼ୀ

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಜೇಜುರಿ: ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಖಂಡೋಬಾ ದೇವರಿಗೆ ನಡೆದುಕೊಳ್ಳುವವರು ಕಾಣಸಿಗುತ್ತಾರೆ. ಖಂಡೋಬಾ ಮೂಲವಾಗಿ ಶಿವನ ಅವತಾರವಾಗಿದ್ದು ಮೈಲಾರ ಲಿಂಗನೆಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತಾನೆ. ಖಂಡೋಬನ ದೇವಾಲಯಕ್ಕೆ ಖ್ಯಾತಿ ಪಡೆದಿದೆ, ಪುಣೆ ಜಿಲ್ಲೆಯ ಜೇಜುರಿ ಪಟ್ಟಣ. ಸಾಕಷ್ಟು ಜನ ಭಕ್ತಾದಿಗಳು ಶಿವನ ದರುಶನ ಕೋರಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಜೇಜುರಿಯ ಖಂಡೋಬ

ಚಿತ್ರಕೃಪೆ: Anant Rohankar

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಚಕನ್ ಕೋಟೆ : ಸಂಗ್ರಾಮದುರ್ಗವೆಂದೂ ಸಹ ಕರೆಯಲ್ಪಡುವ ಈ ಕೋಟೆಯು ಚಕನ್ ಪಟ್ಟಣದಲ್ಲಿದ್ದು ಪುಣೆ - ನಾಶಿಕ್ ರಸ್ತೆಯ ಮೇಲೆ ಪುಣೆಯಿಂದ 34 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕೋಟೆಯ ವಿಶೇಷವೆಂದರೆ ಇದು ಸಾಮಾನ್ಯವಾಗಿ ಇತರೆ ಕೋಟೆಗಳಂತೆ ಎತ್ತರದ ಪ್ರದೇಶಗಳಲ್ಲಿ ನಿರ್ಮಿತವಾಗಿರದೆ ಸಮತಟ್ಟಾದ ಭೂಮಿಯ ಮೇಲೆ ನಿರ್ಮಾಣಗೊಂಡಿರುವುದು. ಇದು ಛತ್ರಪತಿ ಶಿವಾಜಿ ಮಹಾರಾಜನ ಅಧೀನದಲ್ಲೂ ಇತ್ತು.

ಚಿತ್ರಕೃಪೆ: BOMBMAN

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಪ್ರಖ್ಯಾತ ಗಿರಿಧಾಮ ಲೋನಾವಲಾದಿಂದ ಕೇವಲ 20 ಕಿ.ಮೀ ದೂರದಲ್ಲಿದೆ ಕೋರಿಗಡ್ ಎಂಬ ಅದ್ಭುತ ಕೋಟೆ. ಮಾನ್ಸೂನ್ ನಲ್ಲಿ ಟ್ರೆಕ್ಕಿಂಗ್ ಗೂ ಸಹ ಹೆಸರುವಾಸಿಯಾದ ಈ ಕೋಟೆ ನೋಡಲು ಅತ್ಯಾಕರ್ಷಕ ನೋಟವನ್ನು ಕರುಣಿಸುತ್ತದೆ. ಇದಕ್ಕೆ ಹತ್ತಿರದಲ್ಲಿರುವ ಹಳ್ಳಿ ಪೇಟ್ ಶಹಾಪೂರ್. ಇಲ್ಲಿಂದ ಕೋಟೆಯ ತಾಣಕ್ಕೆ ನಡೆಯುತ್ತಲೆ ತೆರಳಬೇಕು.

ಚಿತ್ರಕೃಪೆ: Belasd

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಲೋಣಾವಲಾದಿಂದ ನಿಮ್ಮ ಸ್ವಂತ ವಾಹನಗಳಲ್ಲಿ ಇಲ್ಲವೆ ಬಾಡಿಗೆ ವಾಹನಗಳಲ್ಲಿ ಶಹಾಪೂರ್ ಪೇಟ್ ಹಳ್ಳಿಗೆ ತಲುಪಬಹುದಾಗಿದೆ. ಸ್ಥಳೀಯವಾಗಿ ವಾಹನಗಳು ದೊರೆಯುತ್ತವಾದರೂ ಸಾಕಷ್ಟು ಸಂಖ್ಯೆಯಲ್ಲಿ ಇರುವುದಿಲ್ಲ. ಅಲ್ಲದೆ ನಿಯಮಿತ ಸಮಯದವರೆಗೆ ಮಾತ್ರ ಸೇವೆ ಲಭ್ಯ. ಮಳೆಗಾಲದ ಸಂದರ್ಭದಲ್ಲಿ ಈ ಕೋಟೆಯ ಸುತ್ತಮುತ್ತಲಿನ ಪ್ರದೇಶವು ಅವಿಸ್ಮರಣೀಯವಾಗಿ ಕಂಗೊಳಿಸುತ್ತದೆ.

ಚಿತ್ರಕೃಪೆ: Belasd

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯಲ್ಲಿರುವ ಲೋಣಾವಲಾವೂ ಸಹ ಪ್ರವಾಸಿ ಪ್ರಖ್ಯಾತಿಯ ಒಂದು ಸುಂದರ ಗಿರಿಧಾಮವಾಗಿದೆ. ಇದು ಪುಣೆ ನಗರದಿಂದ 64 ಕಿ.ಮೀ ಹಾಗು ಮುಂಬೈ ನಗರದಿಂದ 90 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ವಿಶೇಷವಾಗಿ ಕಡಲೆ ಬೀಜದಿಂದ ತಯಾರಿಸಲಾಗುವ ಚಿಕ್ಕಿ ಎಂಬ ಮಿಠಾಯಿಗೆ ಅತಿ ಪ್ರಖ್ಯಾತವಾಗಿದೆ. ಹಲವು ವೀಕ್ಷಣಾ ಸ್ಥಳಗಳು ಹಾಗು ಜಲಪಾತ ಹೊಂದಿರುವ ಈ ಗಿರಿಧಾಮ ಪ್ರದೇಶವು ತನ್ನ ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಂದ ಮೂರು ಕಿ.ಮೀ ದೂರ ಚಲಿಸಿದರೆ ಸಾಕು ನಿಮಗೆ ಸಿಗುವ ಮತ್ತೊಂದು ಸುಂದರ ಪ್ರದೇಶ ಖಂಡಾಲಾ. ಈ ಎರಡೂ ಗಿರಿಧಾಮ ಪ್ರದೇಶಗಳು ಮುಂಬೈ ಹಾಗು ಪುಣೆ ನಗರವಾಸಿಗಳಿಗೆ ವಾರಾಂತ್ಯದ ಜನಪ್ರಿಯ ರಜಾ ತಾಣಗಳಾಗಿವೆ.

ಚಿತ್ರಕೃಪೆ: Arjun Singh Kulkarni

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯಲ್ಲಿರುವ ಲೋಹಗಡ್ ಕೋಟೆ ತಾಣವು ಸಮುದ್ರ ಮಟ್ಟದಿಂದ ಸುಮಾರು 3,389 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಅದ್ಭುತವಾದ, ರೋಮಾಂಚನಗೊಳಿಸುವ, ಉಸಿರು ಬಿಗಿ ಹಿಡಿದು ನೋಡುವಂತಹ ದೃಶ್ಯಾವಳಿಗಳನ್ನು ಭೇಟಿ ನೀಡುವವರಿಗೆ ಒದಗಿಸುತ್ತದೆ. ಪ್ರಖ್ಯಾತ ಗಿರಿಧಾಮವಾದ ಲೋನಾವಲಾಕೆ ಹತ್ತಿರದಲ್ಲಿರುವ ಲೋಹಗಡ್ ಕೋಟೆಯ ಸುತ್ತ ಮುತ್ತಲೂ ಅನೇಕ ಆಕರ್ಷಕ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Ranveig

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಭೋರ್ ಎಂಬಲ್ಲಿಂದ ಹತ್ತು ಕಿ.ಮೀ ದೂರದಲ್ಲಿದೆ ರೋಹಿಡಾ ಕೋಟೆ. ಪುರಂದರ ಒಪ್ಪಂದ (1665) ದನುಸಾರ ಶಿವಾಜಿ ಮಹಾರಾಜನು ಆಂಗ್ಲರಿಗೆ ಹಸ್ತಾಂತರಿಸಿದ 23 ಕೋಟೆಗಳ ಪೈಕಿ ರೋಹಿಡಾ ಕೋಟೆಯೂ ಸಹ ಒಂದು.

ಚಿತ್ರಕೃಪೆ: Patil.kuldeep

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಶಿವನೇರಿ ಕೋಟೆ: ಪುಣೆ ಜಿಲ್ಲೆಯ ಜುನ್ನಾರ್ ನಗರದಲ್ಲಿರುವ ಶಿವನೇರಿ ಕೋಟೆ ಒಂದು ಪ್ರವಾಸಿ ವಿಶೇಷ ಕೋಟೆಯಾಗಿದೆ. ಮರಾಠಾ ಸಾಮ್ರಾಜ್ಯದ ಮಹಾ ದೊರೆ ಛತ್ರಪತಿ ಶಿವಾಜಿ ಮಹಾರಜನ ಜನ್ಮ ಸ್ಥಳ ಇದಾಗಿದೆಯೆಂದು ತಿಳಿಯಲಾಗಿದ್ದು ಪ್ರವಾಸ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಪುಣೆ ನಗರದಿಂದ ಜುನ್ನಾರ್ ಪಟ್ಟಣಕ್ಕೆ ನಿರಂತರವಾಗಿ ಬಸ್ಸುಗಳ ಸೌಕರ್ಯವಿದೆ.

ಚಿತ್ರಕೃಪೆ: Elroy Serrao

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ನಗರದ ನೈರುತ್ಯಕ್ಕೆ 30 ಕಿ.ಮೀ ದೂರದಲ್ಲಿರುವ ಒಂದು ಅದ್ಭುತ ಕೋಟೆಯೆ ಸಿಂಹಗಡ್ ಕೋಟೆ. ಮೊದಲಿಗೆ ಕೊಂಢಾಣಾ ಕೋಟೆ ಎಂದು ಕರೆಯಲ್ಪಡುತ್ತಿದ್ದ ಈ ಕೋಟೆ ಐತಿಹಾಸಿಕವಾಗಿ ಹಲವು ಯುದ್ಧಗಳಿಗೆ ಸಾಕಷಿಯಾಗಿದೆ. ಅದರಲ್ಲಿ ಮುಖ್ಯವಾದುದೆಂದರೆ ಸಿಂಹಗಡ್ ಯುದ್ಧ (1670). ಇದರ ಸುತ್ತಮುತ್ತಲೂ ರಾಜಗಡ್, ತೋರ್ಣ, ಪುರಂದರ್ ಹೀಗೆ ಇನ್ನೂ ಹಲವು ಕೋಟೆಗಳಿರುವುದನ್ನು ಕಾಣಬಹುದು. ಪುಣೆ ನಗರದಿಂದ ಈ ಶಾಂತಮಯ ಪ್ರಚಂಡ ಸ್ಥಳಗಳು ಬಹು ಹತ್ತಿರದಲ್ಲಿದ್ದು ವಾರಾಂತ್ಯದ ರಜೆಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ತಾಣಗಳಾಗಿವೆ.

ಚಿತ್ರಕೃಪೆ: Dmpendse

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಸಿಂಹಗಡ್ ಕೋಟೆಯನ್ನು ಏರುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: SasmitV

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆಯಿಂದ 60 ಕಿ.ಮೀ ದೂರದಲ್ಲಿ ಕಾಮ್ಶೇಟ್ ಬಳಿಯಿರುವ ತಿಕೋನಾ ಬೆಟ್ಟ ಕೋಟೆ ರೋಮಾಂಚಕ ಚಾರಣದಾನುಭವ ನೀಡುವ ಕೋಟೆಯಾಗಿದೆ. ತ್ರಿಕೋನಾಕಾರದಲ್ಲಿರುವ ಗುಡ್ಡದ ತುದಿಯೊಂದರಲ್ಲಿ ನಿರ್ಮಿತ ಕೋಟೆ ಇದಾಗಿದ್ದು, ವಿಶೇಷ ಪ್ರವಾಸಿ ಆಕರ್ಷಣೆಯಾಗಿದೆ.ಮಾನ್ಸೂನ್ ಸಮಯದಲ್ಲಿ ಇಲ್ಲಿನ ಚಾರಣ ಸವಾಲೆಸೆದಂತಿದ್ದು ತುಂಬ ಜಾಗರೂಕತೆಯಿಂದ ಟ್ರೆಕ್ ಮಾಡಬೇಕಾಗುತ್ತದೆ.

ಚಿತ್ರಕೃಪೆ: Rushil Fernandes

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಮಾನ್ಸೂನ್ ಸಮಯದಲ್ಲಿ ಇಲ್ಲಿನ ಚಾರಣ ಸವಾಲೆಸೆದಂತಿದ್ದು ತುಂಬ ಜಾಗರೂಕತೆಯಿಂದ ಟ್ರೆಕ್ ಮಾಡಬೇಕಾಗುತ್ತದೆ. ಟ್ರೆಕ್ ನಿರತ ಯುವ ಪ್ರವಾಸಿಗರು.

ಚಿತ್ರಕೃಪೆ: Shreyank Gupta

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ದೇಹು: ಮಹಾರಾಷ್ಟ್ರದಲ್ಲಿ ಆಗಿ ಹೋದ ಪ್ರಮುಖ ಸಂತರುಗಳ ಪೈಕಿ ಸಂತ ತುಕಾರಾಮ ಸಹ ಮಂಚೂಣಿಯಲ್ಲಿರುವವರು. ಇವರು ತಾವು ವಿಠ್ಠಲ ದೇವರನ್ನು ಕುರಿತು ರಚಿಸಿದ ಅಭಂಗ (ದೇವರ ಕೀರ್ತನೆಗಳು) ಹಾಗೂ ಗಥಾಗಳಿಗೆ ರಾಜ್ಯದಲ್ಲೆ ಹೆಸರುವಾಸಿ. ಇವರು ವಾಸಿಸಿದ್ದ ಸ್ಥಳವೆ ಇಂದಿನ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ದೇಹು. ದೇಹು ಪ್ರಮುಖವಾಗಿ ಪಾಲಕಿ (ಪಲ್ಲಕ್ಕಿ) ಉತ್ಸವಕ್ಕೆ ಹೆಸರುವಾಸಿಯಾಗಿದೆ. ವರ್ಷಕ್ಕೊಮ್ಮೆ ಆಚರಿಸಲ್ಪಡುವ ಈ ಉತ್ಸವದಲ್ಲಿ ರಾಜ್ಯದೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ. ಅವರ ಅಭಂಗಗಳನ್ನು ಇಂದಿಗೂ ಸಹ ಇಲ್ಲಿರುವ ಘಟ ದೇವಾಲಯದಲ್ಲಿ ಕೆತ್ತಲಾಗಿದೆ. ವಿಠ್ಠಲ ದೇವರ ಭಕ್ತಾದಿಗಳು ಹಾಗೂ ತುಕಾರಾಮರ ಅನುಯಾಯಿಗಳು ಇಂದಿಗೂ ಸಹ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Shrads1984

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಮಲ್ಹಾರಗಡ್ : ಪುಣೆ ನಗರದಿಂದ 30 ಕಿ.ಮೀ ದೂರದಲ್ಲಿರುವ ಈ ಬೆಟ್ಟಕೋಟೆಯು ಒಂದು ಅದ್ಭುತವಾದ ಚಾರಣದ ಮಾರ್ಗವಾಗಿದೆ. ಇದರ ವಿಶೇಷತೆ ಎಂದರೆ ಮರಾಠರು ಕೊನೆಯದಾಗಿ ನಿರ್ಮಿಸಿದ ಬೆಟ್ಟ ಕೋಟೆ ಇದಾಗಿದೆ. ಕೋಟೆಯಲ್ಲಿ ಎರಡು ದೇಗುಲಗಳನ್ನು ಕಾಣಬಹುದಾಗಿದ್ದು ಒಂದು ಖಂಡೋಬನಿಗೆ ಮುಡಿಪಾದ ಚಿಕ್ಕ ದೇಗುಲವಾಗಿದ್ದರೆ ಇನ್ನೊಂದು ಮಹಾದೇವನಿಗೆ ಮುಡಿಪಾದ ದೊಡ್ಡ ದೇಗುಲವಾಗಿದೆ. ಕೋಟೆಯ ಮೇಲಿಂದ ಜೇಜುರಿ ಹಾಗೂ ಪಾರ್ವತಿ ಬೆಟ್ಟಗಳನ್ನು ಸುಶ್ರಾವ್ಯವಾಗಿ ಕಾಣಬಹುದು.

ಚಿತ್ರಕೃಪೆ: Belasd

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ನಗರದ ನೈರುತ್ಯಕ್ಕೆ 15 ಕಿ.ಮೀ ದೂರದಲ್ಲಿರುವ ರಾಜಗಡ್ ಬೆಟ್ಟ ಕೋಟೆಯು ರೋಮಾಂಚಕ ಟ್ರೆಕ್ಕಿಂಗ್ ತಾಣವಾಗಿದೆ. ಛತ್ರಪತಿ ಶಿವಾಜಿಯು ಈ ಕೋಟೆಯನ್ನು ಸುಮಾರು 26 ವರ್ಷಗಳ ಕಾಲ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಅಂದಿನ ಸಮಯದಲ್ಲಿ ಇದು ಸುಲಭವಾಗಿ ಭೇದಿಸಲಾಗದ, ರಕ್ಷಣಾತ್ಮಕವಾದ ತಾಣದಲ್ಲಿ ಬಲು ಚತುರವಾಗಿ ನಿರ್ಮಿಸಲ್ಪಟ್ಟಿತ್ತು. ಈ ಕೋಟೆಯ ಕೆಳ ಭಾಗದ ವ್ಯಾಸವೇ ಸುಮಾರು 40 ಕಿ.ಮೀ ಗಳು.

ಚಿತ್ರಕೃಪೆ: Abhijeet Safai

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಕೋಟೆಗಳಿಗೆ ರಾಜನೆಂಬ ಪ್ರೀತಿಗೆ ಪಾತ್ರವಾಗಿರುವ ರಾಜಗಡ್ ಮಳೆಗಾಲದ ಸಂದರ್ಭದಲ್ಲಿ ಸಿಂಗರಿಸಿಕೊಳ್ಳುವ ರೀತಿ.

ಚಿತ್ರಕೃಪೆ: Pauk

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಇಲ್ಲಿ ಒಂದು ಮುಖ್ಯ ವಿಚಾರವೆಂದರೆ ಪುಣೆಯಿಂದ ಬಹುತೇಕವಾಗಿ ಒಂದೆ ದಿಕ್ಕಿನಲ್ಲಿ ಹಲವು ಕಿ.ಮೀ ಗಳ ಅಂತರದಲ್ಲಿ ಹಲವಾರು ಬೆಟ್ಟ ಕೋಟೆಗಳಿರುವುದನ್ನು ಗಮನಿಸಬಹುದು. ಈ ಪ್ರದೇಶವು ಮುಖ್ಯವಾಗಿ ಪಶ್ಚಿಮ ಘಟ್ಟಗಳು, ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಬರುವುದರಿಂದ ಬೆಟ್ಟ ಗುಡ್ಡಗಳು ಇರುವುದು ಸಾಮಾನ್ಯವಾಗಿತ್ತು ಅದರಂತೆ ಶತ್ರುಗಳಿಂದ ರಕ್ಷಣೆ ಹಾಗೂ ನಿಗಾ ಇಡಲು ಇಲ್ಲಿ ಮರಾಠರಿಂದ ಅದರಲ್ಲೂ ವಿಶೇಷವಾಗಿ ಶಿವಾಜಿ ಮಹಾರಾಜನಿಂದ ಸಾಕಷ್ಟು ಕೋಟೆಗಳು ನಿರ್ಮಿಸಲ್ಪಟ್ಟಿವೆ. ಪುಣೆಯ ನೈರುತ್ಯ ದಿಕ್ಕಿನಲ್ಲಿ ಸುಮಾರು 50 ಕಿ.ಮೀ ಗಳಲ್ಲಿ ಇರುವ ಮತ್ತೊಂದು ಅದ್ಭುತ ಬೆಟ್ಟ ಕೋಟೆ ಪುರಂದರ ಬೆಟ್ಟ ಕೋಟೆ. ಇತಿಹಾಸದ ಪ್ರಕಾರ ಈ ಒಂದು ತಾಣದಲ್ಲಿ ಶಿವಾಜಿರಾಜೆ ಭೋಸ್ಲೆಯ ಮಗ ಸಂಭಾಜಿ ರಾಜೆ ಭೋಸ್ಲೆ ಹುಟ್ಟಿದ್ದನಂತೆ. ಇವು ಅವಳಿ ಕೋಟೆಗಳಾಗಿದ್ದು ಇನ್ನೊಂದು ಚಿಕ್ಕ ಕೋಟೆಯು ವಜ್ರಗಡ್ ಎಂದು ಕರೆಯಲ್ಪಡುತ್ತದೆ.

ಚಿತ್ರಕೃಪೆ: Ankur P

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ಪುಣೆ ಜಿಲ್ಲೆಯ ಸ್ವಾರಸ್ಯಕರ ಸ್ಥಳಗಳು:

ರಾಜಮಾಚಿ ಕೋಟೆ: ಪುಣೆ ಜಿಲ್ಲೆಯಲ್ಲಿರುವ ಮತ್ತೊಂದು ಅದ್ಭುತವಾದ, ಚಾರಣಕ್ಕೆ ಯೋಗ್ಯವಾದ ಬೆಟ್ಟ ಕೋಟೆಯಿದು. ಲೋನಾವಲಾ-ಖಂಡಾಲಾ ದಿಂದ ಬಲು ಹತ್ತಿರದಲ್ಲಿರುವ ಈ ಕೋಟೆಯು ಸಹ್ಯಾದ್ರಿ ಪರ್ವತ ಶ್ರೇಣಿಯ ಮಡಿಲಲ್ಲಿ ಅಡಗಿರುವ ರಾಜಮಾಚಿ ಎಂಬ ಹಳ್ಳಿಯಲ್ಲಿದೆ. ಮೂಲವಾಗಿ ರಾಜಮಾಚಿಯು ಶ್ರೀವರ್ಧನ ಹಾಗೂ ಮಹಾರಂಜನ ಎಂಬ ಎರಡು ಕೋಟೆಗಳನ್ನು ಹೊಂದಿದ್ದು ಒಟ್ಟಾರೆಯಾಗಿ ಇದಕ್ಕೆ ರಾಜಮಾಚಿ ಕೋಟೆ ಎಂದು ಕರೆಯಲಾಗುತ್ತದೆ. ಲೋನಾವಲಾ ತಾಣದಿಂದ 15 ಕಿ.ಮೀ ಗಳಷ್ಟು ದೂರದಲ್ಲಿ ಈ ಕೋಟೆಯಿದ್ದು ಚಾರಣದ ಮೂಲಕ ತಲುಪಬಹುದಾಗಿದೆ.

ಚಿತ್ರಕೃಪೆ: Kandoi.sid

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X