ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ದಕ್ಷಿಣ ಭಾರತದ ಸುಂದರ ಜಲಪಾತಗಳು

Written by:
Published: Thursday, November 14, 2013, 13:13 [IST]
Share this on your social network:
   Facebook Twitter Google+ Pin it  Comments

ನಮ್ಮ ಭೂಮಾತೆಯ ಒಡಲಿನಲ್ಲಿ ಹರಿಯುವ ನೂರಾರು ನದಿ ತೊರೆಗಳು ತಮ್ಮ ಹರಿಯುವಿಕೆಯ ಪಥವನ್ನು ಮುಂದುವರೆಸುತ್ತಿದ್ದಾಗ ಒಮ್ಮೊಮ್ಮೆ ಗುಂಡಿ, ಪ್ರಪಾತಗಳು ಎದುರಾಗುವುದುಂಟು. ಆದರೆ "ಕಾಯಕವೆ ಕೈಲಾಸವೆಂಬಂತೆ ತಾವು ಹರಿಯುವ ದಿಕ್ಕನ್ನು ಬದಲಿಸದೆ ಕಂದಕ, ಪ್ರಪಾತಗಳಲ್ಲಿ ಧುಮುಕುತ್ತವೆ". ಇದೊಂದು ಸ್ವಾಭಾವಿಕ ಘಟನೆಯಾದರೂ ಮನುಷ್ಯನ ಕಣ್ಣಿಗೆ ಇದೊಂದು ಅದ್ಭುತ ನೊಟವನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಹರಿಯುವ ನದಿಯನ್ನು ನೋಡಿದಾಗ ಆಗುವ ಸಂತೋಷದ ಎರಡರಷ್ಟು ಈ ರೀತಿಯಾಗಿ ಧುಮ್ಮಿಕ್ಕುವ ನೀರನ್ನು ನೋಡಿದಾಗ ಆಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವುಗಳನ್ನೆ ಜಲಪಾತಗಳೆಂದು ವ್ಯಾಖ್ಯಾನಿಸಬಹುದು.

ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ, ಇವೆಲ್ಲವೂ ಸೇರಿ ನೋಡುಗರ ಮನದಲ್ಲಿ ರೋಮಾಂಚನ ಹಾಗು ತಾಜಾತನದ ಅನುಭವವನ್ನು ಒದಗಿಸುತ್ತವೆ ಈ ಜಲಪಾತಗಳು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರು ಆನಂದಿಸಬಹುದಾದ ಈ ಜಲಪಾತಗಳು ಭಾರತ ದೇಶದಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿವೆ. ಈ ಲೇಖನದ ಮೂಲಕ ದಕ್ಷಿಣ ಭಾರತದ ಕೆಲವು ಆಯ್ದ ಜಲಪಾತಗಳ ಪ್ರವಾಸ ಮಾಡಿ.

ಕರ್ನಾಟಕ: ಜೋಗ ಜಲಪಾತ

ಜೋಗರ ಗೇರುಸೊಪ್ಪ ಅಥವಾ ಜೋಗ ಜಲಪಾತವು ಭಾರತದ ಎರಡನೆಯ ಹಾಗು ಕರ್ನಾಟಕದ ಅತಿ ಎತ್ತರದ ಜಲಪಾತವಾಗಿದೆ. ಗೇರುಸೊಪ್ಪ ಅಥವಾ ಜೋಗದಗುಂಡಿ ಎಂತಲೂ ಕರೆಯಲಾಗುವ ಇದು ನೆಲೆಸಿರುವುದು ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ. ಶರಾವತಿ ನದಿಯಿಂದ ಉಂಟಾದ ಈ ಜಲಪಾತವು ಸುಮಾರು 830 ಅಡಿಗಳಷ್ಟು ಎತ್ತರದಿಂದ ಭೂಮಿಗೆ ಧುಮುಕುತ್ತದೆ.

ಚಿತ್ರಕೃಪೆ: Sarvagnya

ಮಾಗೋಡ್ ಜಲಾಪತ:

ಕಾರವಾರ ಪಟ್ಟಣದಿಂದ 80 ಕಿ.ಮೀ ದೂರದಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಬೆಡ್ತಿ ನದಿಯಿಂದ ಉಂಟಾದ ಈ ಜಲಪಾತವು ಸುಮಾರು 650 ಅಡಿಗಳಷ್ಟು ಎತ್ತರದಿಂದ ಎರಡು ಕವಲುಗಳಾಗಿ ಒಡೆದು ಭೂಮಿಗೆ ಧುಮ್ಮಿಕ್ಕುವ ದೃಶ್ಯವು ನೋಡಲು ರುದ್ರ ರಮಣೀಯವಾಗಿರುತ್ತದೆ. ಯಲ್ಲಾಪುರ ಹಾಗು ಕುಮಟಾಗಳಿಂದ ಕ್ರಮವಾಗಿ 19 ಹಾಗು 60 ಕಿ.ಮೀ ದೂರವಿರುವ ಈ ಜಲಪಾತ ತಾಣವನ್ನು ವಾಹನಗಳ ಮುಖಾಂತರ ತಲುಪಬಹುದು.

ಚಿತ್ರಕೃಪೆ: Prad.gk

ಹೆಬ್ಬೆ ಜಲಪಾತ:

ಸುಂದರ ಗಿರಿಧಾಮ ಪ್ರದೇಶವಾದ ಕೆಮ್ಮಣ್ಣುಗುಂಡಿಯಲ್ಲಿ ಕಾಣಬಹುದಾಗಿದೆ 550 ಅಡಿಗಳಷ್ಟು ಎತ್ತರದ ಈ ಅದ್ಭುತವಾದ ಹೆಬ್ಬೆ ಜಲಪಾತ. ಮೊದಲೆ ಅದ್ಭುತವಾದ ನಿಸರ್ಗ ನೋಟಗಳಿಂದ ಕೆಮ್ಮಣ್ಣುಗುಂಡಿಯು ಪ್ರವಾಸಿಗರನ್ನು ಆಕರ್ಷಿಸುತ್ತಿರುವಾಗ ಐಸ್ ಕ್ರೀಮ್ ಮೇಲೆ ಚೆರ್‍ರಿ ಹಣ್ಣು ಇಟ್ಟಂತೆ ಇದು ಕಂಗೊಳಿಸುತ್ತದೆ.

ಚಿತ್ರಕೃಪೆ: Srinivasa83

ಗೋಕಾಕ್ ಜಲಪಾತ:

ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ.

ಕಲ್ಹತ್ತಿ ಜಲಪಾತ:

ಚಿಕ್ಕಮಗಳೂರು ಜಿಲ್ಲೆಯ ಕಲ್ಲತ್ತಿಯಲ್ಲಿ ಈ ಜಲಪಾತವನ್ನು ಕಾಣಬಹುದು. ಕಾಳಹಸ್ತಿ ಜಲಪಾತ ಎಂತಲೂ ಕರೆಯಲಾಗುವ ಇದು ಇರುವುದು ಕೆಮ್ಮಣ್ಣುಗುಂಡಿ ಗಿರಿಧಾಮದಿಂದ ಕೇವಲ 10 ಕಿ.ಮೀ ದೂರದಲ್ಲಿ ಮಾತ್ರ. ಚಂದ್ರದ್ರೋಣ ಶಿಖರದಿಂದ ಸುಮಾರು 400 ಅಡಿಗಳಷ್ಟು ಕೆಳಗೆ ನುಸುಳಿಕೊಂಡು ಹೋಗುವ ದೃಶ್ಯಾವಳಿಗಳನ್ನು ಉಂಟು ಮಾಡುವ ಈ ಜಲಪಾತವು ನೋಡಲು ಮನಮೋಹಕವಾಗಿದೆ.

ಚಿತ್ರಕೃಪೆ: Vinayak Kulkarni

ಉಂಚಳ್ಳಿ ಜಲಪಾತ:

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕಂಡುಬರುವ ಈ ಜಲಪಾತವನ್ನು ಲಷಿಂಗ್ಟನ್ ಜಲಪಾತವೆಂದೂ ಕರೆಯುತ್ತಾರೆ. ಅಘನಾಶಿನಿ ನದಿಯಿಂದ ಉಂಟಾಗುವ ಈ ಜಲಪಾತವು ಸುಮಾರು 116 ಮೀ.ಗಳ ಎತ್ತರದಿಂದ ಧುಮುಕುತ್ತದೆ.

ಚಿತ್ರಕೃಪೆ: Balaji Narayanan

ಶಿವನಸಮುದ್ರ ಜಲಪಾತ:

ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿ ಈ ಜಲಪಾತವನ್ನು ಕಾಣಬಹುದು. ಹಲವು ಕವಲುಗಳಲ್ಲಿ ಕಾವೇರಿ ನದಿಯು ಒಡೆದು ಈ ಜಲಪಾತವನ್ನು ಸೃಷ್ಟಿಸುತ್ತದೆ. ಅಲ್ಲದೆ ಈ ತಾಣವು ಏಷಿಯಾ ಖಂಡದ ಮೊದಲ ಜಲ ವಿದ್ಯುತ್ ಉತ್ಪಾದನೆಯ ಯೋಜನೆಯೂ ಆಗಿದೆ. ಇದು ಸ್ಥಾಪಿತವಾಗಿದ್ದು 1902 ರಲ್ಲಿ. ಸಾಮಾನ್ಯವಾಗಿ ಈ ಜಲಪಾತದ ಎಡ ಭಾಗ ಗಗನಚುಕ್ಕಿ ಎಂದು ಹಾಗು ಬಲಭಾಗ ಭರಚುಕ್ಕಿ ಎಂದು ತಿಳಿದುಕೊಳ್ಳಲಾಗುತ್ತದೆ. ಆದರೆ ನಿಜವೆಂದರೆ ಭರಚುಕ್ಕಿಯು ಗಗನಚುಕ್ಕಿಯಿಂದ ಕೆಲವು ಕಿ.ಮೀ ದೂರದಲ್ಲಿ ನೈರುತ್ಯ ದಿಕ್ಕಿನಲ್ಲಿ ನೆಲೆಸಿದೆ.

ಚಿತ್ರಕೃಪೆ

ಸಾತೊಡ್ಡಿ ಜಲಪಾತ:

ಉತ್ತರ ಕನ್ನಡ ಜಿಲ್ಲೆಯ ಕಲ್ಲರಮರನೆ ಘಟ್ಟ ಪ್ರದೇಶಗಳಲ್ಲಿ ವಿವಿಧಿ ನೀರಿನ ಮೂಲಗಳಿಂದ ಈ ಜಲಪಾತವು ಉಂಟಾಗಿದೆ. ಸಿರಸಿ ನದಿ ಬಳಿಯಿರುವ ಈ ತಾಣವು ಯಲ್ಲಾಪುರ ಪಟ್ಟಣದಿಂದ 32 ಕಿ.ಮೀ ದೂರದಲ್ಲಿ ನೆಲೆಸಿದೆ. ಸುಮಾರು 50 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತದ ನೀರು ಅಂತಿಮವಾಗಿ ಕೊಡಸಲಿ ಆಣೆಕಟ್ಟಿನ ಹಿನ್ನೀರಿನಲ್ಲಿ ಸಮಾಗಮಗೊಳ್ಳುತ್ತದೆ.

ಚಿತ್ರಕೃಪೆ: Hema Priyadharshini

ಗೊಡಚಿನಮಲ್ಕಿ ಜಲಪಾತ:

ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ ಕೇವಲ 15 ಕಿ.ಮೀ ದೂರದಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ ಈ ಜಲಪಾತವಿದ್ದು ನೋಡಲು ಮನಮೋಹಕವಾಗಿದೆ. ಇಲ್ಲಿಗೆ ತೆರಳಲು ಗೋಕಾಕ್ ಬಸ್ ನಿಲ್ದಾಣದಿಂದ ಗೊಡಚಿನಮಲ್ಕಿ ಹಳ್ಳಿಯವರೆಗೆ ತೆರಳಬೇಕು(ಪ್ರಯಾಣಿಕರ ವಿನಂತಿ ಮೆರೆಗೆ ಬಸ್ ಗಳನ್ನು ಇಲ್ಲಿ ನಿಲ್ಲಿಸಲಾಗುತ್ತದೆ). ಇಲ್ಲಿಂದ ಸುಮಾರು ನಾಲ್ಕು ಕಿ.ಮೀ ಗಳಷ್ಟು ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತ ಸಾಗಿ ಈ ಜಲಪಾತವನ್ನು ತಲುಪಬಹುದು.

ಚಿತ್ರಕೃಪೆ: Lakshmipathi23

ಕೇರಳ: ಅಡ್ಯಾನ್‍ಪಾರಾ ಜಲಪಾತ:

ಈ ಜಲಪಾತವು ಎತ್ತರದ ಬದಲು ಓರೆ ಭೂಮಿಯಲ್ಲಿ ನುಸುಳಿಕೊಂಡು ಸಾಗುವ ಸುಂದರ ಜಲಪಾತ. ಕೇರಳದ ನೀಲಂಬೂರ್ ತಾಲೂಕಿನ ಕೂರ್ಮಬಲಂಗೋಡ್ ಹಳ್ಳಿಯಲ್ಲಿ ಈ ಜಲಪಾತವನ್ನು ಕಾಣಬಹುದು.

ಅತಿರಪಳ್ಳಿ ಜಲಪಾತ:

ಕೇರಳದ ತ್ರಿಶ್ಶೂರಿನ ಅತಿರಪಳ್ಳಿ ಎಂಬಲ್ಲಿ ನೆಲೆಸಿದೆ ಈ ಸುಂದರ ಜಲಪಾತ. ಚಾಲಕುಡಿ ನದಿಯಿಂದ ಉಂಟಾಗುವ ಈ ಜಲಪಾತವು 80 ಅಡಿಗಳಷ್ಟು ಎತ್ತರದಿಂದ ಭೂಮಿಗೆ ಧುಮುಕುತ್ತದೆ. ಇದನ್ನು "ನಯಾಗ್ರಾ ಆಫ್ ಇಂಡಿಯಾ" ಎಂಬ ನಾಮದಿಂದಲು ಸಂಭೋದಿಸಲಾಗುತ್ತದೆ.

ಚಿತ್ರಕೃಪೆ: Pranchiyettan

ಮೀನ್ಮುಟ್ಟಿ ಜಲಪಾತ:

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಕಲ್ಪೆಟ್ಟಾದಿಂದ ಕೇವಲ 29 ಕಿ.ಮೀ ದೂರದಲ್ಲಿ ಈ ಜಲಪಾತವನ್ನು ಕಾಣಬಹುದು. ಮೂರು ಸ್ತರಗಳಲ್ಲಿ ಭೂಮಿಗೆ ಧುಮುಕುವ ಈ ಜಲಪಾತದ ಒಟ್ಟಾರೆ ಎತ್ತರ ಸುಮಾರು 300 ಮೀ ಗಳಷ್ಟು.

ಸೂಚಿಪಾರಾ ಜಲಪಾತ:

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಈ ಜಲಪಾತವು ಮೂರು ಸ್ತರಗಳಲ್ಲಿ ಭೂಮಿಗೆ ಧುಮುಕುತ್ತದೆ. ಅಕ್ಷರಶಃ ಸೂಜಿಗಲ್ಲು ಎಂಬ ಅರ್ಥ ಕೊಡುವ ಈ ಜಲಪಾತವು ಅತ್ಯದ್ಭುತವಾದ ಪ್ರಕೃತಿ ನೋಟಗಳಿಂದ ಪ್ರವಾಸಿಗರ ಕಣ್ಮನಗಳನ್ನು ಸೆಳೆಯುತ್ತದೆ.

ಚಿತ್ರಕೃಪೆ: M.arunprasad

ವಾಳಚ್ಚಾಲ್ ಜಲಪಾತ:

ಕೇರಳದ ತ್ರಿಶ್ಶ್ಯೂರ್ ಜಿಲ್ಲೆಯ ಅತ್ತಿರಪಳ್ಳಿ ಎಂಬಲ್ಲೆ ನೆಲೆಸಿದೆ ಈ ಜಲಪಾತ. ಚಾಲಕುಡಿ ನದಿಯಿಂದುಂಟಾಗುವ ಈ ಜಲಪಾತವು ಈ ಪ್ರದೇಶದ ಮತ್ತೊಂದು ಪ್ರಖ್ಯಾತ ಜಲಪಾತ ಅತ್ತಿರಪಳ್ಳಿ ಜಲಪಾತದಿಂದ ಕೇವಲ 5 ಕಿ.ಮೀ ದೂರದಲ್ಲಿದೆ.

ಆಂಧ್ರ ಪ್ರದೇಶ: ಪಾಪ ವಿನಾಶನಂ:

ಆಂಧ್ರಪ್ರದೇಶದ ವಿಶ್ವ ಪ್ರಖ್ಯಾತ ತಿರುಪತಿ ತಿರುಮಲಗಳ 50 ಮೈಲಿಗಳ ಅಳತೆಯಲ್ಲಿ ಈ ಜಲಪಾತವನ್ನು ಕಾಣಬಹುದು. ಈ ಪ್ರದೇಶದಲ್ಲಿರುವ ಏಕೈಕ ಶಿವನ ಮಂದಿರವಾದ ಕಪೀಲ ತೀರ್ಥಂ ಬಳಿಯಿರುವ ಈ ಜಲಪಾತವು ನೋಡಲು ರಮಣಿಯವಾಗಿದೆ.

ಚಿತ್ರಕೃಪೆ

ತಲಕೋನ ಜಲಪಾತ:

ತಿರುಪತಿಯಿಂದ ಸುಮಾರು 49 ಕಿ.ಮೀ ದೂರದಲ್ಲಿರುವ ಶ್ರೀ ವೆಂಕಟೇಶ್ವರ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಜಲಪಾತದ ಅಂದವನ್ನು ಸವಿಯಬಹುದು. 272 ಅಡಿಗಳಿಂದ ಧುಮ್ಮಿಕ್ಕುವ ಈ ಜಲಪಾತವು ತನ್ನ ಸುತ್ತಮುತ್ತಲು ಹೇರಳವಾದ ಸಸ್ಯ ಸಂಪತ್ತನ್ನು ಹೊಂದಿದೆ.

ಚಿತ್ರಕೃಪೆ: VinothChandar

ಕೈಲಾಸನಾಥಕೋನ ಜಲಪಾತ:

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುತ್ತುರು ಪಟ್ಟಣದ ಸನಿಹ ನಗರಿ ಕಣಿವೆ ಪ್ರದೇಶದಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಖನಿಜಾಂಶಗಳಿಂದ ಸಂಪದ್ಭರಿತವಾದ ಈ ಜಲಪಾತದ ನೀರು ಔಷಧಿಯುಕ್ತ ಗುಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಸ್ಥಳೀಯ ಪುರಾಣದ ಪ್ರಕಾರ, ವೆಂಕಟೇಶ್ವರ ಕಲ್ಯಾಣ ಸಂದರ್ಭದಲ್ಲಿ ಸ್ವತಃ ಶಿವನೆ ಈ ಜಲಪಾತದ ನೀರನ್ನು ಧ್ಯಾನಕ್ಕೊಸ್ಕರ ಬಳಸಿದ್ದನಂತೆ. ಶಿವ ಹಾಗು ಪಾರ್ವತಿಯರ ಚಿಕ್ಕ ದೇವಾಲಯಗಳನ್ನು ಈ ತಾಣದ ಬಳಿ ಕಾಣಬಹುದಾಗಿದೆ.

ಚಿತ್ರಕೃಪೆ

ಉಬ್ಬಲಮಡುಗು ಜಲಪಾತ:

ಆಂಧ್ರದ ಚಿತ್ತೂರ್ ಜಿಲ್ಲೆಯ ಸಿರ್ ಸಿಟಿ ಎಂಬ ಉಪನಗರದ ಬಳಿಯಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಟಾಡಾ ಅಥವಾ ಕಂಬಕಂ ಜಲಪಾತ ಎಂದೂ ಕರೆಯಲ್ಪಡುವ ಇದು ಶ್ರೀಕಾಳಹಸ್ತಿಯಿಂದ 35 ಕಿ.ಮೀ ಹಾಗು ತಮಿಳುನಾಡಿನ ಚೆನ್ನೈನಿಂದ 80 ಕಿ.ಮೀ ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: VikiUNITED

ಮಲ್ಲೇಲ ತೀರ್ಥಂ ಜಲಪಾತ:

ಆಂಧ್ರ ಪ್ರದೇಶದ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಶ್ರೀಶೈಲಂ ನಿಂದ 58 ಕಿ.ಮೀ ದೂರವಿರುವ ಇದು ದಟ್ಟ ಅರಣ್ಯದ ಮಧ್ಯಭಾಗದಲ್ಲಿ ನೆಲೆಸಿದ್ದು ಇದನ್ನು ಕಾಣಲು ಸುಮಾರು 350 ಮೆಟ್ಟಿಲುಗಳಷ್ಟು ಕೆಳಗಿಳಿದು ಹೋಗಬೇಕು.

ಚಿತ್ರಕೃಪೆ: Ylnr123

ತಮಿಳುನಾಡು: ಕುಟ್ರಾಲಂ ಜಲಪಾತ:

ತಮಿಳುನಾಡಿನ ತಿರುನೆಲ್ವೆಲಿ ಜಿಲ್ಲೆಯಲ್ಲಿರುವ ಕುಟ್ರಾಲಂ ಪ್ರದೇಶವು ತನ್ನಲ್ಲಿ ಹಲವು ಜಲಪಾತಗಳನ್ನೊಳಗೊಂಡಿದೆ. ಅವುಗಳಲ್ಲಿ ಮೂರು ಮುಖ್ಯ ಜಲಪಾತಗಳಾದ ಮುಖ್ಯ ಜಲಪಾತ, ಐದು ಜಲಪಾತಗಳು ಹಾಗು ಹಳೆಯ ಕುಟ್ರಾಲಂ ಜಲಪಾತಗಳನ್ನು ಸುಲಭವಾಗಿ ರಸ್ತೆಯ ಮುಖಾಂತರ ತಲುಪಬಹುದಾಗಿದೆ. ಇಲ್ಲಿ ಕಾಣುತ್ತಿರುವುದು ಮುಖ್ಯ ಜಲಪಾತ.

ಚಿತ್ರಕೃಪೆ: Mdsuhail

ಹೊಗೆನಕ್ಕಲ್ ಜಲಪಾತ:

ಕಾವೇರಿ ನದಿಯಿಂದುಂಟಾಗುವ ಹೊಗೆನಕ್ಕಲ್ ಜಲಪಾತವು ನೋಡಲು ಮನೋಹರವಾಗಿದ್ದು ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿದ್ದು, ಧರ್ಮಪುರಿ ಪಟ್ಟಣದಿಂದ ಕೇವಲ 46 ಕಿ.ಮೀ ದೂರದಲ್ಲಿದೆ. ಕನ್ನಡದಲ್ಲಿ ಹೊಗೆಯ ಕಲ್ಲು ಎಂಬ ಅರ್ಥ ಕೊಡುವ ಈ ಜಲಪಾತ ತಾಣವು ಅಕ್ಷರಶಃ ಹೊಗೆಯಲ್ಲಿ ಆವರಿಸಿರುವಂತೆ ಆಭಾಸವನ್ನು ಮೂಡಿಸುತ್ತದೆ.

ಚಿತ್ರಕೃಪೆ: Mithun Kundu

ಕಿಳಿಯೂರ್ ಜಲಪಾತ:

ತಮಿಳುನಾಡಿನ ಪೂರ್ವ ಘಟ್ಟ ಪ್ರದೇಶದ ಸೇರ್ವರಾಯನ್ ಪರ್ವತ ಶ್ರೇಣಿಗಳಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. 300 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತವಿರುವುದು ಯೇರ್ಕಾಡ್ ಗಿರಿಧಾಮದಲ್ಲಿ.

ಚಿತ್ರಕೃಪೆ: Antkriz

ಮಂಕಿ ಜಲಪಾತ:

ತಮಿಳುನಾಡಿನ ಪೊಲ್ಲಾಚಿಯ ಆನಮಲೈ ಪರ್ವತ ಶ್ರೇಣಿಯಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಪೊಲ್ಲಾಚಿಯಿಂದ ಬರೋಬ್ಬರಿ 30 ಕಿ.ಮೀ ದೂರದಲ್ಲಿ ಈ ಜಲಪಾತ ತಾಣವಿದೆ.

ಚಿತ್ರಕೃಪೆ: Marcus Sherman

ಆಗಾಯ ಗಂಗೈ ಜಲಪಾತ:

ತಮಿಳುನಾಡಿನ ಪೂರ್ವ ಘಟ್ಟ ಪ್ರದೇಶದ ಕೊಳ್ಳಿ ಪರ್ವತ ಶ್ರೇಣಿಯಲ್ಲಿ ಈ ಜಲಪಾತವನ್ನು ಕಾಣಬಹುದು. ಪಂಚನಾಥಿ ಎಂಬ ಕಾಡಿನ ತೊರೆಯೊಂದು ಸುಮಾರು 300 ಅಡಿಗಳಷ್ಟು ಎತ್ತರದಿಂದ ಭೂಮಿಗೆ ಧುಮುಕುತ್ತ ಈ ಜಲಪಾತವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Dilli2040

Please Wait while comments are loading...