Search
  • Follow NativePlanet
Share
» »ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಕರ್ನಾಟಕದ ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣವು ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಕ್ಷೇತ್ರವಾಗಿದೆ

By Vijay

ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಆಸರೆಯಾಗಿತ್ತು ಈ ಪಟ್ಟಣ. ಆ ಪಟ್ಟಣವೆ ಇಂದಿನ ಬಸವಕಲ್ಯಾಣ. ಬೀದರ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಒಂದು ತಾಲ್ಲೂಕು ಕೇಂದ್ರ. ಅಲ್ಲದೆ ಧಾರ್ಮಿಕವಾಗಿಯೂ ಮಹತ್ವ ಪಡೆದ ಕ್ಷೇತ್ರ. ಕಲ್ಯಾಣ ಚಾಲುಕ್ಯರು ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರು.

ಕ್ರಾಂತಿಕಾರಿ ವಚನಕಾರರಾದ ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯನ್ನು ತೊರೆದು ಬಸವಕಲ್ಯಾಣಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು ಬಸವಕಲ್ಯಾಣ.

ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಚಿತ್ರಕೃಪೆ: Sscheral

ಹಿಂದೆ ಕೇವಲ ಕಲ್ಯಾಣ ಎಂಬ ಹೆಸರನ್ನು ಹೊಂದಿದ್ದ ಈ ಪಟ್ಟಣವು ಭಕ್ತಿ ಭಂಡಾರಿ ಬಸವಣ್ಣನವರು ನೆಲೆಸಿದ ಮೇಲೆ ಪವಿತ್ರ ನೆಲವಾಯಿತು. ಮುಂದೆ ಸಮಯ ಕಳೆದಂತೆ ಕಲ್ಯಾಣ ಹೋಗಿ ಬಸವಕಲ್ಯಾಣ ಎಂಬ ಹೆಸರಿನಿಂದಲೆ ಪ್ರಸಿದ್ಧವಾಯಿತು. ಅಷ್ಟಕ್ಕೂ ಬಸವಕಲ್ಯಣವು 3000 ವರ್ಷಗಳಷ್ಟು ಅದ್ಭುತವಾದ ಇತಿಹಾಸವನ್ನು ಹೊಂದಿದೆ.

ಬಸವಕಲ್ಯಾಣದಲ್ಲಿ ಇಂದು ಅನೇಕ ಐತಿಹಾಸಿಕ ಆಕರ್ಷಣೆಗಳಿದ್ದು ಒಂದೊಮ್ಮೆ ಭೇಟಿ ನೀಡಲು ಯೋಗ್ಯವಾದ ಸ್ಥಳ ಇದಾಗಿದೆ. ಜಗತ್ತಿನ ಅತಿ ಎತ್ತರದ ಬಸವಣ್ಣನವರ ಪ್ರತಿಮೆಯನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಕುಳಿತಿರುವ ಭಂಗಿಯಲ್ಲಿರುವ ಈ ಪ್ರತಿಮೆಯು 108 ಅಡಿಗಳಷ್ಟು ಅಗಾಧವಾದ ಎತ್ತರವನ್ನು ಹೊಂದಿದೆ.

ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಚಿತ್ರಕೃಪೆ: Manjunath Doddamani Gajendragad

ಕೇವಲ ಬಸವಣ್ಣನವರು ಮಾತ್ರವಲ್ಲದೆ ಹನ್ನೆರಡನೇಯ ಶತಮಾನದ ಪ್ರಸಿದ್ಧ ಶರಣ ಸಂತರಾದ ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮ ಮುಂತದವರು ಬಸವಕಲ್ಯಾಣದೊಓದಿಗೆ ವಿಶೇಷವಾದ ನಂಟನ್ನು ಹೊಂದಿದ್ದಾರೆ. ಬಸವಕಲ್ಯಾಣದ ಸುತ್ತ ಮುತ್ತ ಅನೇಕ ದೇವಾಲಯಗಳಿವೆ. ಅಲ್ಲದೆ ಬಸವಕಲ್ಯಾಣ ಪಟ್ಟಣದ ಕೇಂದ್ರ ಭಾಗದಲ್ಲೆ ಬಸವೇಶ್ವರರ ದೇವಾಲಯವಿದೆ.

ಉಮಾಪೂರ ಮಂದಿರ ಇದು ಬಸವಕಲ್ಯಾಣದಿಂದ 15 ಕಿ.ಮೀ. ದೂರ ಪಶ್ಚಿಮ ದಿಕ್ಕಿಗಿದೆ. ಇಲ್ಲಿ ಉಮಾಮಹೇಶ್ವರ ದೇಗುಲದ ಸಂಕೀರ್ಣವು ಕಾಣಬಹುದಾಗಿದ್ದು ನೋಡಲು ನಯನ ಮನೋಹರವಾಗಿದೆ. ಇದು ಕೂಡ ಕಲಾಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ.

ಕಲ್ಯಾಣಕ್ರಾಂತಿಯ ಪಟ್ಟಣಕ್ಕೊಂದು ಭೇಟಿ!

ಚಿತ್ರಕೃಪೆ: Manjunath Doddamani Gajendragad

ಬಸವಕಲ್ಯಾಣ ಕೋಟೆ ಇಲ್ಲಿ ನೋಡಬಹುದಾದ ಇನ್ನೊಂದು ಐತಿಹಾಸಿಕ ಆಕರ್ಷಣೆ. ಕಲ್ಯಾಣ ಕೋಟೆ ಎಂತಲೂ ಕರೆಯಲ್ಪಡುವ ಇದು ಹತ್ತನೇಯ ಶತಮಾನದಲ್ಲಿ ನಿರ್ಮಾಣವಾದ ಕೋಟೆಯಾಗಿದೆ. ಕೋಟೆಯು ಏಳು ದ್ವಾರಗಳನ್ನು ಹೊಂದಿದ್ದು ಪ್ರಸ್ತುತ ಐದು ದ್ವಾರಗಳು ಮಾತ್ರ ಉತ್ತಮವಾಗಿ ಕಂಡುಬರುತ್ತವೆ.

ಬಹಮನಿ ಸಾಮ್ರಾಜ್ಯದ ಕಡೆಯ ಕೊಡುಗೆ ಬೀದರ್ ಕೋಟೆ

ಬಸವಕಲ್ಯಾಣವು ಬೀದರ್ ಪಟ್ಟಣದಿಂದ 80 ಕಿ.ಮೀ, ಕಲಬುರಗಿಯಿಂದ 90 ಕಿ.ಮೀ ಹಾಗೂ ಬೆಂಗಳೂರಿನಿಂದ 650 ಕಿ.ಮೀ ಗಳಷ್ಟು ದೂರದಲ್ಲಿದೆ. ತೆರಳಲು ಉತ್ತಮ ರಸ್ತೆ ಸಂಪರ್ಕವಿದ್ದು ಈ ಮೂರೂ ನಗರಗಳಿಂದಲೂ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X