ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ

Written by: Manasa KM
Published: Thursday, April 20, 2017, 12:58 [IST]
Share this on your social network:
   Facebook Twitter Google+ Pin it  Comments

ವಯನಾಡು ಬೆಂಗಳೂರಿಗರಿಗೆ ಬಹಳ ಇಷ್ಟವಾದ ಪ್ರದೇಶ. ವಾರಾಂತ್ಯಕ್ಕೊಮ್ಮೆ ಹೆಚ್ಚು ಪ್ರಾಯಸ ಪಡದೆ ತಟ್ಟನೆ ಹೊರಟು ಬಿಡುತ್ತಾರೆ. ನಮ್ಮ ಕರ್ನಾಟಕದ ಗಡಿ ದಾಟಿ ಕೇರಳ ತಲುಪುತ್ತಿದ್ದಂತೆಯೇ ವಯನಾಡು ಜಿಲ್ಲೆ ನಮ್ಮನ್ನು ಸ್ವಾಗತಿಸುತ್ತದೆ. ಬೆಂಗಳೂರಿನಿಂದ ಸುಮಾರು ಆರರಿಂದ ಏಳು ಗಂಟೆಗಳ ಪ್ರಯಾಣ. ವಯನಾಡು ಜಿಲ್ಲೆಯಲ್ಲಿ ನೋಡಬೇಕಾದ ಬಹಳಷ್ಟು ಪ್ರದೇಶಗಳು ಇವೆ. ಇವನ್ನು ಒಂದೇ ಬಾರಿ ನೋಡುವುದರಲ್ಲಿ ಮಜವಿಲ್ಲ. ಕೇರಳ ಎಂದರೆ ಒಂದು ಕಡೆ ತಂಗಿ ಅಲ್ಲಿನ ಹಸಿರು, ಅಲ್ಲಿನ ವಿಶೇಷಗಳನ್ನು ಕಣ್ಣು ತುಂಬಿ ಕೊಳ್ಳುವುದು. ಹೀಗಾಗಿ ಶನಿವಾರ ಭಾನುವಾರ ಎರಡು ದಿನ ತಂಪಾಗಿ ಹಸಿರಿನ ಮಧ್ಯೆ ಕಾಲ ಕಳೆಯಲು ನಾವು ಬಾಣಾಸುರ ಡ್ಯಾಂ ಹಾಗೂ ಬಾಣಾಸುರ ಬೆಟ್ಟವನ್ನು ನೋಡಲು ಹೊರಟೆವು.

ಶುಕ್ರವಾರ ರಾತ್ರಿ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಲ್ಲಿ ನಮ್ಮ ಐರಾವತ ಬಸ್ ಹತ್ತಿ ಸುಮಾರು ಮುಂಜಾನೆ ಐದಕೆಲ್ಲ ಕಲ್ಪೆಟ್ಟ ಊರು ತಲುಪಿದೆವು. ಕಲ್ಪೆಟ್ಟ ಊರಿನಿಂದ ಬಾಣಾಸುರ ಬೆಟ್ಟದ ತಪ್ಪಲ್ಲು ಸುಮಾರು 21 ಕಿಮೀ ದೂರ ಇದೆ. ಅಲ್ಲಿಂದ ಕೇರಳದ ಬಸ್ ಹಿಡಿದು ಬಾಣಾಸುರ ಬೆಟ್ಟದ ತಪಲ್ಲಿನಲ್ಲಿ ಮುಂಚಿತವಾಗಿ ಕಾಯ್ದಿರಿಸಿದ ಒಂದು ರೆಸಾರ್ಟ್ ತಲುಪಿದೆವು. ಏಪ್ರಿಲ್ ನ ಬಿಸಿ ಕೇರಳದಲ್ಲಿ ಬೆಂಗಳೂರನ್ನು ಮೀರಿಸಿತ್ತು. ಆದರೂ ನಮ್ಮ ಬಸ್ ರೆಸಾರ್ಟ್ ಬಳಿಗೆ ಬರುವಾಗ ಸುಮಾರು 8 ಗಂಟೆಯಾದರೂ ಇನ್ನೂ ಮುಸುಕಿದ ಮಂಜು ನಮಗೆ ಆನಂದ ನೀಡಿತು.

ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ


PC : Challiyan

ನಮ್ಮ ರೆಸಾರ್ಟ್ ಬಾಣಾಸುರ ಬೆಟ್ಟದ ತಪ್ಪಲಿನಲ್ಲಿ ಇತ್ತು. ರೆಸಾರ್ಟ್ನ ಹಿಂಬದಿಯಲ್ಲಿ ಬಾಣಾಸುರ ಬೆಟ್ಟ ಭವ್ಯವಾಗಿ ನಿಂತಿತ್ತು ಹಾಗೂ ರೆಸಾರ್ಟ್ನ ಮುಂದೆ ಬಾಣಾಸುರ ಡ್ಯಾಂನ ಹಿನ್ನೀರು ದೊಡ್ಡ ಸರೋವರದಂತೆ ಕಾಣುತ್ತಿತ್ತು. ಸ್ನಾನ ತಿಂಡಿ ಮುಗಿಸುವಷ್ಟರಲ್ಲಿ ಸೂರ್ಯದೇವ ತನ್ನ ಪ್ರತಾಪವನ್ನು ತೋರಿಸತೊಡಗಿದನು.

ಬಾಣಾಸುರ ಡ್ಯಾಂ ಅನ್ನು ಕರಮನತೊಡು ಎಂಬ ಕಬಿನಿ ನದಿಯ ಉಪನದಿಗೆ ಕಟ್ಟಲಾಗಿದೆ. ಇದು ಭಾರತದ ಅತಿ ದೊಡ್ಡ ಹಾಗೂ ಏಷಿಯಾ ಖಂಡದ ಎರಡನೆಯ ದೊಡ್ಡ "ಅರ್ತ್ ಡ್ಯಾಂ" ಆಗಿದೆ. ಈ ಡ್ಯಾಂ ನಲ್ಲಿ ನಿಲ್ಲುವ ನೀರಿನಿಂದ ಮುಳುಗಿದ ಸಣ್ಣ ಪುಟ್ಟ ಬೆಟ್ಟಗಳು ಈಗ ದ್ವೀಪಗಳಂತೆ ಕಾಣುತ್ತವೆ. ಈ ಡ್ಯಾಂ ಅನ್ನು ಜಲವಿದ್ಯುತ್ ಹಾಗೂ ಕುಡಿಯುವ ಮತ್ತು ವ್ಯವಸಾಯಕ್ಕೆ ಬಳಸುವ ನೀರಿಗಾಗಿ ಕಟ್ಟಲಾಯಿತು. ಹಿಂಬದಿಯಲ್ಲಿ ಭವ್ಯವಾಗಿ ಕಾಣುವ ಬಾಣಾಸುರ ಬೆಟ್ಟ ಈ ನೋಟಕ್ಕೆ ಒಂದು ಅಂದ ನೀಡುತ್ತದೆ.

ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ

PC : Vaibhavcho

ಇನ್ನು ಇದಕ್ಕೆ "ಬಾಣಾಸುರ" ಡ್ಯಾಂ ಹಾಗೂ ಬೆಟ್ಟ ಎಂದು ಹೆಸರು ಏಕೆ ಬಂತು ಎಂಬ ಕುತೂಹಲ ನಮಗೆ. ಬಾಣಾಸುರ ನಮ್ಮ ಪುರಾಣಗಳ ಪ್ರಕಾರ ಬಲಿ ಚಕ್ರವರ್ತಿಯ ಮಗ. ಬಲಿ ಚಕ್ರವರ್ತಿಯ ಕಥೆ ನಮಗೆಲ್ಲ ಗೊತ್ತಿರುವುದೇ, ವಾಮನ ಅವತಾರದಲ್ಲಿ ಬಂದ ಮಹಾ ವಿಷ್ಣುವಿನ ಪಾದವನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ ಬಲಿ ಚಕ್ರವರ್ತಿ. ಬಾಣಾಸುರ ಶಿವನ ಮಹಾಭಕ್ತ ಆತನನ್ನು ತಪಸ್ಸಿನ ಮೂಲಕ ವರಿಸಿಕೊಂಡು ತನಗೆ ರಕ್ಷಕನಾಗಿ ಇರುವಂತೆ ವರ ಪಡೆದುಕೊಳ್ಳುತ್ತಾನೆ. ಈತನ ಮಗಳಾದ "ಉಷಾ" ಶ್ರೀ ಕೃಷ್ಣನ ಮೊಮ್ಮಗನಾದ "ಅನಿರುದ್ದ"ನನ್ನು ಕನಸಿನಲ್ಲಿ ನೋಡಿ ಪ್ರೀತಿಸಿ ಮದುವೆಯಾಗಲು ತನ್ನ ಸಖಿಯ ಸಹಾಯ ಪಡೆಯುತ್ತಾಳೆ. ಈ ವಿಷಯಗಳಿಂದ ಶ್ರೀ ಕೃಷ್ಣನಿಗೂ ಬಾಣಾಸುರನಿಗೂ ಯುದ್ದ ಕೂಡ ನಡೆಯತ್ತದೆ.

ಬಾಣಾಸುರ ಡ್ಯಾಂನ ಹತ್ತಿರದಲ್ಲಿರುವ ಕೆಲವು ಪ್ರವಾಸಿ ತಾಣಗಳು ಇಂತಿವೆ:
ಬಾಣಾಸುರ ಡ್ಯಾಂ ನಲ್ಲಿ ಸ್ಪೀಡ್ ಬೋಟ್ ಹಾಗೂ ಇತರ ಅನೇಕ ಆಟಗಳು ಹಾಗೂ ಉದ್ಯಾನವನವಿದೆ. ರೆಸಾರ್ಟ್ನಿಂದ ಸೈಕಲ್ಗಳನ್ನು ತೆಗೆದುಕೊಂಡು ಬಾಣಾಸುರ ಡ್ಯಾಂ ವರೆಗೂ ಹೋಗಿ ಅಲ್ಲಿ ಸುತ್ತಿದ ಅನುಭವ ಬಹಳ ಚೆನ್ನಾಗಿತ್ತು.

ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ


PC : Vinayaraj

ಬಾಣಾಸುರ ಬೆಟ್ಟ:
ಬಾಣಾಸುರ ಬೆಟ್ಟ ಪಶ್ಚಿಮ ಘಟ್ಟಗಳ ಮೂರನೇ ಅತಿ ಎತ್ತರದ ಬೆಟ್ಟ. ಬಾಣಾಸುರ ಬೆಟ್ಟ ಸುಮಾರು ಆರು ಸಾವಿರ ಅಡಿ ಇದ್ದು ಹಸಿರು ಕಾಡಿನಿಂದ ಸುತ್ತುವರೆದಿದೆ. ಬಹಳಷ್ಟು ಜನ ಬಾಣಾಸುರ ಬೆಟ್ಟದ ಟ್ರೆಕಿಂಗ್ ಮಾಡುತ್ತಾರೆ. ನಾವು ಬಿಸಿಲಿಗೆ ಹೆದರಿ ಟ್ರೆಕಿಂಗ್ ಹೊರಡಲಿಲ್ಲ.

ಪೂಕ್ಕಡೆ ಲೇಕ್ ಹಾಗೂ ಕಾರ್ಲಾಡ್ ಲೇಕ್:
ಬಾಣಾಸುರ ಡ್ಯಾಂ ನಿಂದ ಸುಮಾರು ಹತ್ತು ಕಿಮೀ ದೂರದಲ್ಲಿ ಕಾರ್ಲಾಡ್ ಲೇಕ್ ಹಾಗೂ ಸುಮಾರು ಸುಮಾರು ಇಪ್ಪತೈದು ಕಿಮೀ ದೂರದಲ್ಲಿ ಪೂಕ್ಕಡೆ ಲೇಕ್ ಇದೆ. ಪೂಕ್ಕಡೆ ಲೇಕ್ ನಲ್ಲಿ ಪೆಡಲ್ ಬೋಟ್ ಹಾಗೂ ಮೋಟಾರ್ ಬೋಟ್ ಇದ್ದು ಅಷ್ಟು ದೊಡ್ಡ ಆಕರ್ಷಣೆ ಎನಿಸಲಿಲ್ಲ. ಆದರೆ ಕಾರ್ಲಾಡ್ ಲೇಕ್ ನಲ್ಲಿ ಅನೇಕ ಆಟಗಲಿದ್ದವು. ಜ಼ಿಪ್ ಲೈನ್, ವಾಲ್ ಕ್ಲೈಂಬಿಂಗ್, ಬೋಟಿಂಗ್, ರಾಕ್ ಕ್ಲೈಂಬಿಂಗ್ ಹೀಗೆ ಅನೇಕ ಆಟಗಳು ಮನಸೆಳೆದವು.

ಇವೆಲ್ಲವುಗಳ ಜೊತೆಗೆ ಎಲ್ಲಿ ನಿಂತು ನೋಡಿದರು ಅಲ್ಲಿ ಹಸಿರಿನ ಟೀ ಎಸ್ಟೇಟ್ ಗಳು, ಕಾಡು, ಬೆಟ್ಟಗಳು ಹೇಗೆ ಕಣ್ಣು ಸೆಳೆಯುವ ಅಂದ.

ಭವ್ಯವಾದ ಬಾಣಾಸುರ ಬೆಟ್ಟ ಹಾಗೂ ಡ್ಯಾಂ - ವಯನಾಡಿನ ಮತ್ತೊಂದು ಸುಂದರ ಪ್ರವಾಸಿ ತಾಣ


PC : Vaibhavcho

ಸಂಜೆ ಐದರ ಹೊತ್ತಿಗೆ ನಮ್ಮ ರೆಸಾರ್ಟ್ ನಿಂದ ಸ್ವಲ್ಪ ದೂರ ಬಾಣಾಸುರ ಬೆಟ್ಟದಲ್ಲಿ ನಡೆದು ಡ್ಯಾಂ ಹಿನ್ನೀರನ್ನು ನೋಡುತ್ತಾ ಕುಳಿತೆವು. ಸಂಜೆಯ ತಣ್ಣನೆಯ ಗಾಳಿ, ಗೆಳೆಯರ ಮಾತುಗಳು, ಕುರುಕು ತಿಂಡಿಗಳು, ಎದುರಿಗೆ ಕಾಣುವ ಹಿನ್ನೀರು ಮತ್ತು ಸಣ್ಣ ಸಣ್ಣ ದ್ವೀಪಗಳು ಮೈಮರೆಯುವಂತೆ ಮತ್ತು ಚೆಲ್ಲಿದವು.

ಏಪ್ರಿಲ್ ಬಿಸಿ ತಟ್ಟುತ್ತಿದ್ದರು ಬಾಣಾಸುರ ಡ್ಯಾಂ ಹಾಗೂ ಬೆಟ್ಟದ ತಪ್ಪಲಿನ ರೆಸಾರ್ಟ್ ನಮಗೆ ವಾರಾಂತ್ಯಕ್ಕೆ ಬೇಕಾದ ಸುಮಧುರ ಅನುಭವ ನೀಡಿತು.

Read more about: wayanad
English summary

Banasura Dam In Wayanad

Banasura Dam in Wayanad
Please Wait while comments are loading...