Search
  • Follow NativePlanet
Share
» »ಕರ್ನಾಟಕದಲ್ಲಿರುವ ಶಿವನ ಅನನ್ಯ ದೇವಾಲಯಗಳು

ಕರ್ನಾಟಕದಲ್ಲಿರುವ ಶಿವನ ಅನನ್ಯ ದೇವಾಲಯಗಳು

ಈ ಲೇಖನವು ಅತಿ ಗುರುತರ ಹಾಗು ಪ್ರಸಿದ್ಧವಾದ ಶಿವನ ದೇವಾಲಯಗಳ ಬದಲಾಗಿ ಅಷ್ಟೊಂದಾಗಿ ಕೇಳರಿಯದ ಅತಿ ಪುರಾತನ ಶಿವನ ದೇವಾಲಯಗಳ ಪರಿಚಯ ಮಾಡಿಸುತ್ತದೆ.

ತ್ರಿಮೂರ್ತಿಗಳಲ್ಲಿ ಒಬ್ಬನಾದ ಪ್ರಳಯ ದೇವರೆಂದೆ ಖ್ಯಾತನಾದ ಮಹಾಶಿವನು ಹಿಂದು ಸಂಸ್ಕೃತಿಯಲ್ಲಿ ಅತಿ ವಿಶೇಷ ವ್ಯಕ್ತಿತ್ವ ಹಾಗು ಶಕ್ತಿಯುಳ್ಳ ಮಹಾ ದೇವನು. ದೇಶದಲ್ಲೆ ಅತಿ ಹೆಚ್ಚಾಗಿ ಪೂಜಿಸಲ್ಪಡುವ ಈ ಮಹಾಶಿವನಿಗೆ ಸಮರ್ಪಿತವಾದ ಅಥವಾ ಮುಡಿಪಾದ ದೇವಾಲಯಗಳು ಸಾವಿರಾರು ಸಂಖ್ಯೆಯಲ್ಲಿವೆ. ಇತರೆ ದೇವರುಗಳ ದೇವಾಲಯಗಳಿಗೆ ಹೋಲಿಸಿದಾಗ ಶಿವನಿಗೆ ಸಮರ್ಪಿತವಾದ ದೇವಾಲಯಗಳು ಒಂದು ರೀತಿಯಾಗಿ ವಿಶೀಷ್ಟವಾಗಿರುತ್ತವೆ. ಕೆಲವು ದೇವಾಲಯಗಳಲ್ಲಿ ಶಿವನ ಮೂಲ ವಿಗ್ರಹಗಳಿದ್ದರೆ ಹಲವು ದೇವಾಲಯಗಳಲ್ಲಿ ಶಿವನ ರೂಪವಾದ ಶಿವಲಿಂಗಗಳು ಪೂಜಿಸಲ್ಪಡುತ್ತವೆ.

ಕರ್ನಾಟಕದಲ್ಲೂ ಸಹ ಮಹಾಶಿವನ ಸಹಸ್ರಾರು ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲಿ ಹಲವು ಪವಿತ್ರ ಯಾತ್ರಾ ಕ್ಷೇತ್ರಗಳಾಗಿಯೂ ಪ್ರಸಿದ್ಧಿಯನ್ನು ಪಡೆದಿವೆ. ಈ ಲೇಖನದಲ್ಲಿ ಮಹಾಶಿವನ ಕೆಲವು ವಿಶೀಷ್ಟ ದೇವಾಲಯಗಳ ಪರಿಚಯ ನೀಡಲಾಗಿದೆ. ಸಮಯ ಸಿಕ್ಕಾಗ ಈ ದೇವಾಲಯಗಳಿಗೆ ನೀವು ಭೇಟಿ ನೀಡಿ ಕರುಣಾಮೂರ್ತಿ ಶಿವನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ.

ಅಘೋರೇಶ್ವರ ದೇವಸ್ಥಾನ, ಇಕ್ಕೇರಿ:

ಅಘೋರೇಶ್ವರ ದೇವಸ್ಥಾನ, ಇಕ್ಕೇರಿ:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಸ್ಥಾನವು ಶಿವನಿಗೆ ಮುಡಿಪಾದ ಒಂದು ಪುರಾತನ ಭವ್ಯ ದೇವಾಲಯವಾಗಿದೆ. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಈ ದೇವಸ್ಥಾನವು ವಿಜಯನಗರ ಹಾಗು ದ್ರಾವಿಡ ಶೈಲಿಯ ಆಕರ್ಷಕ ಶಿಲ್ಪ ಕಲೆಯಿಂದ ಕಂಗೊಳಿಸುತ್ತದೆ.

ಚಿತ್ರಕೃಪೆ: Chandu6119

ಅಮೃತೇಶ್ವರ ದೇವಸ್ಥಾನ, ಅಮೃತಪುರ:

ಅಮೃತೇಶ್ವರ ದೇವಸ್ಥಾನ, ಅಮೃತಪುರ:

ಚಿಕ್ಕಮಗಳೂರಿನ ಉತ್ತರಕ್ಕೆ 67 ಕಿ.ಮೀ ದೂರದಲ್ಲಿರುವ ಅಮೃತಪುರ ಎಂಬಲ್ಲಿದೆ ಶಿವನ ಈ ದೇವಸ್ಥಾನ. ಹಾಸನದಿಂದ 110 ಹಾಗು ಶಿವಮೊಗ್ಗದಿಂದ 35 ಕಿ.ಮೀ ದೂರದಲ್ಲಿರುವ ಅಮೃತಪುರವು ಅಮೃತೇಶ್ವರ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಭದ್ರಾ ಜಲಾಶಯದ ಹತ್ತಿರದಲ್ಲಿರುವ ಈ ದೇವಾಲಯವು ಹೊಯ್ಸಳ ದೊರೆ ಎರಡನೇಯ ವೀರ ಬಲ್ಲಾಳನ ದಂಡನಾಯಕನಾದ ಅಮೃತೇಶ್ವರನಿಂದ 1196 ರಲ್ಲಿ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Dineshkannambadi

ಬಡವಿಲಿಂಗ ದೇವಸ್ಥಾನ, ಹಂಪಿ

ಬಡವಿಲಿಂಗ ದೇವಸ್ಥಾನ, ಹಂಪಿ

ವೈಭವಯುತ ವಿಜಯನಗರ ಸಾಮ್ರಾಜ್ಯವಿದ್ದ ಹಂಪಿಯಲ್ಲಿ ಈ ದೊಡ್ಡ ಶಿವಲಿಂಗವಿರುವ ಈ ಪುಟ್ಟ ದೇವಸ್ಥಾನವನ್ನು ಕಾಣಬಹುದು. 9 ಅಡಿಯ ದೇವಸ್ಥಾನವಾಗಿದ್ದು, ಹಂಪಿಯ ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ.ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೄತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ.

ಚಿತ್ರಕೃಪೆ: Arun Varadarajan

ಭೂತನಾಥ ದೇವಾಲಯಗಳ ಸಮೂಹ, ಬಾದಾಮಿ:

ಭೂತನಾಥ ದೇವಾಲಯಗಳ ಸಮೂಹ, ಬಾದಾಮಿ:

ಕರ್ನಾಟಕದ ಐತಿಹಾಸಿಕ ಪಟ್ಟಣ ಬಾದಾಮಿಯಲ್ಲಿ ಕಂಡುಬರುತ್ತದೆ ಶಿವನಿಗೆ ಸಮರ್ಪಿತವಾದ ಈ ದೇವಾಲಯ ಸಮೂಹ. ಈ ಸಮೂಹದಲ್ಲಿ ಎರಡು ದೇವಾಲಯಗಳನ್ನು ಕಾಣಬಹುದು. ಮೊದಲನೆಯ ಹಾಗು ದೊಡ್ಡದಾದ ದೇವಾಲಯವು ಕೆರೆಯ ಪೂರ್ವಭಾಗದಲ್ಲಿ ನಿರ್ಮಿತವಾಗಿದ್ದು ಭೂತನಾಥ ದೇವಾಲಯವಾಗಿದೆ. ಎರಡನೆಯ ದೇವಾಲಯ ರಚನೆಯು ಸ್ವಲ್ಪ ಚಿಕ್ಕದಾಗಿದ್ದು ಕೆರೆಯ ಈ ಶಾನ್ಯ ದಿಕ್ಕಿನಲ್ಲಿದೆ. ಇದನ್ನು ಮಲ್ಲಿಕಾರ್ಜುನ ದೇವಾಲಯ ಸಮೂಹವೆಂದು ಕೂಡ ಆಗಾಗ ಕರೆಯಲಾಗುತ್ತದೆ. ದಕ್ಷಿಣ ಹಾಗು ಉತ್ತರ ಭಾರತದ ವಾಸ್ತುಶೈಲಿಯನ್ನು ಮೊದಲನೆಯ ದೇವಾಲಯಯದಲ್ಲಿ ಕಾಣಬಹುದಾಗಿದ್ದು ಕಲ್ಯಾಣಿ ಚಾಲೂಕ್ಯರ ಶೈಲಿಯನ್ನು ಎರಡನೆಯ ದೇವಾಲಯದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Gs9here

ಬುಚೇಶ್ವರ ದೇವಸ್ಥಾನ, ಕೊರವಂಗ್ಲ:

ಬುಚೇಶ್ವರ ದೇವಸ್ಥಾನ, ಕೊರವಂಗ್ಲ:

ಹೊಯ್ಸಳ ವಾಸ್ತುಶಿಲ್ಪದ ಸರಳ ಹಾಗು ಅತ್ಯದ್ಭುತ ಶೈಲಿ ಹೊಂದಿರುವ ಹನ್ನೆರಡನೇಯ ಶತಮಾನದ ಬುಚೇಶ್ವರ ದೇವಸ್ಥಾನವು ಹಾಸನ ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಕೊರವಂಗ್ಲ ಎಂಬ ಹಳ್ಳಿಯಲ್ಲಿದೆ. 1173 ರಲ್ಲಿ ನಿರ್ಮಾಣವಾದ ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯಿಂದ ರಾಷ್ಟ್ರೀಯ ಮಹತ್ವವಿರುವ ಸ್ಮಾರಕವಾಗಿ ರಕ್ಷಿಸಲಾಗಿದೆ.

ಚಿತ್ರಕೃಪೆ: HoysalaPhotos

ಮುಕ್ತೇಶ್ವರ ದೇವಸ್ಥಾನ, ಚೌಡಯ್ಯದನಪುರ:

ಮುಕ್ತೇಶ್ವರ ದೇವಸ್ಥಾನ, ಚೌಡಯ್ಯದನಪುರ:

ಹಾವೇರಿ ಜಿಲ್ಲೆಯಲ್ಲಿರುವ ಹಾವೇರಿ ತಾಲೂಕಿನ ಚೌಡಯ್ಯದನಪುರ ಒಂದು ಪುಟ್ಟ ಹಳ್ಳಿ. ಜಕಣಾಚಾರಿ ಶೈಲಿಯಲ್ಲಿ ನಿರ್ಮಿತವಾಗಿರುವ 11-12 ನೇಯ ಶತಮಾನದ ಈ ದೇವಾಲಯ ಅಂದಿನ ಕಾಲದ ಮಟ್ಟಿಗೆ ವಾಸ್ತುಶಿಲ್ಪದ ರತ್ನವಾಗಿತ್ತು. ಮುಕ್ತೇಶ್ವರನಾಗಿ ಪೂಜಿಸಲಾಗುವ ಇಲ್ಲಿನ ಶಿವಲಿಂಗವು ಒಂದು ಉದ್ಭವ ಲಿಂಗವಾಗಿದೆ.

ಚಿತ್ರಕೃಪೆ: Manjunath Doddamani

ಗಳಗೇಶ್ವರ ದೇವಾಲಯ, ಗಳಗನಾಥ:

ಗಳಗೇಶ್ವರ ದೇವಾಲಯ, ಗಳಗನಾಥ:

ಹಾವೇರಿ ಜಿಲ್ಲೆಯಲ್ಲಿರುವ ಗಳಗನಾಥ ಎಂಬುದು ಒಂದು ಚಿಕ್ಕ ಹಳ್ಳಿ. ಇಲ್ಲಿ ಕಂಡುಬರುವ ತುಂಗಭದ್ರಾ ನದಿ ತಟದ ಗಳಗೇಶ್ವರ ಶಿವನ ದೇವಾಲಯವು ಚಾಲುಕ್ಯ ವಾಸ್ತು ಶೈಲಿಯ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Manjunath Doddamani

ಮೂಲೆ ಶಂಕರೇಶ್ವರ ದೇವಸ್ಥಾನ, ತುರುವೆಕೆರೆ:

ಮೂಲೆ ಶಂಕರೇಶ್ವರ ದೇವಸ್ಥಾನ, ತುರುವೆಕೆರೆ:

ಪುರಾತನ ಭವ್ಯವಾದ ಶಿವನ ಈ ದೇವಸ್ಥಾನವು ತುಮಕೂರು ಜಿಲ್ಲೆಯ ತುರುವೆಕೆರೆಯಲ್ಲಿದೆ. ಇದೊಂದು ರಾಷ್ಟ್ರೀಯ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಇಲ್ಲಖೆಯಿಂದ ರಕ್ಷಣೆ ಪಡೆದಿದೆ.

ಚಿತ್ರಕೃಪೆ: Dineshkannambadi

ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ:

ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ:

ಬೆಳಗಾವಿ ಜಿಲ್ಲೆಯ ಅತಿ ಹಳೆಯ ಹಳ್ಳಿಗಳಲ್ಲೊಂದಾದ ಹೂಲಿ ಎಂಬಲ್ಲಿ ಶಿವನ ಈ ಪುರಾತನ ದೇವಸ್ಥಾನವಿದೆ. ಎಲ್ಲಮ್ಮ ದೇವಿಯ ಶ್ರೀಕ್ಷೇತ್ರವಾದ ಸೌದತ್ತಿಯಿಂದ ಇದು ಕೇವಲ 9 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Manjunath Doddamani

ಹೊಯ್ಸಳೇಶ್ವರ ದೇವಾಲಯ, ಹಳೇಬೀಡು:

ಹೊಯ್ಸಳೇಶ್ವರ ದೇವಾಲಯ, ಹಳೇಬೀಡು:

ಸುಮಾರು ಹನ್ನೆರಡನೇಯ ಶತಮಾನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾದ ಶಿವನ ಈ ದೇವಾಲಯವು ಅದ್ಭುತವಾದ ವಾಸ್ತುಶಿಲಿಗೆ ಉದಾಹರಣೆಯಾಗಿದ್ದು, ಪ್ರಖ್ಯಾತ ಪ್ರವಾಸಿ ಕ್ಷೇತ್ರವೂ ಆಗಿದೆ.

ಚಿತ್ರಕೃಪೆ: Karthikbs23

ಈಶ್ವರ ದೇವಸ್ಥಾನ, ಅರಸೀಕೆರೆ:

ಈಶ್ವರ ದೇವಸ್ಥಾನ, ಅರಸೀಕೆರೆ:

ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿರುವ ಶಿವನ ಈ ದೇವಸ್ಥಾನವು ಹನ್ನೆರಡನೇಯ ಶತಮಾನದ್ದಾಗಿದೆ. ದೇವಸ್ಥಾನಾವು ಸರಳವಾಗಿದ್ದರೂ ಇದರ ವಾಸ್ತುಶಿಲ್ಪವು ಅತೀ ಸಂಕೀರ್ಣವಾಗಿದ್ದು, ಪ್ರಚಲಿತದಲ್ಲಿರುವ ಹೊಯ್ಸಳ ಸ್ಮಾರಕಗಳ ಪೈಕಿ ಸಂಕೀರ್ಣತೆಯ ದೃಷ್ಟಿಯಿಂದ ಪ್ರಮುಖವಾಗಿದೆ.

ಚಿತ್ರಕೃಪೆ: Dineshkannambadi

ಕಾಲಕಾಲೇಶ್ವರ ದೇವಾಲಯ, ಗಜೇಂದ್ರಗಡ್:

ಕಾಲಕಾಲೇಶ್ವರ ದೇವಾಲಯ, ಗಜೇಂದ್ರಗಡ್:

ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡ್ ಸುತ್ತಮುತ್ತಲಿನ ಪ್ರದೇಶದಲ್ಲೆ ಪ್ರಸಿದ್ಧವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ, ಕಾರಣ ಇಲ್ಲಿರುವ ದಕ್ಷಿಣ ಕಾಶಿ ಎಂದೆ ಬಿಂಬಿತವಾದ ಕಾಲಕಾಲೇಶ್ವರನ ದೇವಾಲಯದಿಂದಾಗಿ. ಪ್ರಸಿದ್ಧ ಪ್ರವಾಸಿ ತಣವಾಗಿರುವ ಈ ದೇವಾಲಯದ ಆವರಣದಲ್ಲಿ ಚಿಕ್ಕದೊಂದು ಚೌಕಾಕಾರದ ನೀರಿನ ಮೂಲವೊಂದನ್ನು ಕಾಣಬಹುದು. ಇದರ ವಿಶೇಷತೆಯೆಂದರೆ ಸುಡು ಬಿಸಿಲಿನ ಬೇಸಿಗೆಯ ಕಾಲದಲ್ಲೂ ಇದು ಬತ್ತುವುದಿಲ್ಲ.
ಗಜೇಂದ್ರಗಡ್ ಕುರಿತು ಹೆಚ್ಚಿಗೆ ತಿಳಿಯಿರಿ.

ಚಿತ್ರಕೃಪೆ: Manjunath Doddamani

ಕಲ್ಲೇಶ್ವರ ದೇವಸ್ಥಾನ, ಬಗಲಿ:

ಕಲ್ಲೇಶ್ವರ ದೇವಸ್ಥಾನ, ಬಗಲಿ:

ದಾವಣಗೇರೆ ಜಿಲ್ಲೆಯ ಬಗಲಿಯಲ್ಲಿರುವ ಶಿವನಿಗೆ ಮುಡಿಪಾದ ಕಲ್ಲೇಶ್ವರ ದೇವಸ್ಥಾನವು ರಾಷ್ಟ್ರಕೂಟ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿದೆ. ಸುಮಾರು ಹಾತನೇಯ ಶತಮಾನದ 36 ಕನ್ನಡ ಶಾಸನಗಳು ದೊರೆತಿರುವ ಈ ದೇವಾಲಯವು ರಾಷ್ಟ್ರೀಯ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಇಲ್ಲಖೆಯಿಂದ ರಕ್ಷಣೆ ಪಡೆದಿದೆ.

ಚಿತ್ರಕೃಪೆ: Arun Saakare

ಕೋಟಿಲಿಂಗೇಶ್ವರ ದೇವಸ್ಥಾನ, ಕಮ್ಮಸಂದ್ರ:

ಕೋಟಿಲಿಂಗೇಶ್ವರ ದೇವಸ್ಥಾನ, ಕಮ್ಮಸಂದ್ರ:

ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಹಳ್ಳಿಯಲ್ಲಿ ಕೋಟಿಲಿಂಗೇಶ್ವರ ಎಂಬ ಈ ದೇವಸ್ಥಾನವನ್ನು ಕಾಣಬಹುದು. ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವು ಜಗತ್ತಿನ ಅತಿ ಎತ್ತರದ ಶಿವಲಿಂಗಗಳ ಪೈಕಿ ಒಂದನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೆ ದೇವಾಲಯದ ಆವರಣದಲ್ಲಿ ಸಾಕಷ್ಟು ಸಂಖ್ಯೆಯ ಪುಟ್ಟ ಶಿವಲಿಂಗಗಳನ್ನು ಕಾಣಬಹುದು.

ಚಿತ್ರಕೃಪೆ: gsnewid

ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ:

ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ:

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಎಂಬಲ್ಲಿ ಶಿವನ ಈ ಪ್ರಸಿದ್ಧವಾದ ದೇವಾಲಯವಿದೆ. ಕುರುಬ ಗೌಡ ಸಮುದಾಯದವರಿಂದ ಶಿವನು ಇಲ್ಲಿ ಮೈಲಾರಿಯಾಗಿ ಪೂಜಿಸಲ್ಪಡುತ್ತಾನೆ. ಮೈಲಾರವು ರಾಣಿಬೆನ್ನೂರಿನಿಂದ 34 ಹಾಗು ಹಡಗಲಿಯಿಂದ 40 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Manjunath Doddamani

ಗೋಕರ್ಣನಾಥೇಶ್ವರ ದೇವಾಲಯ, ಕುದ್ರೋಳಿ:

ಗೋಕರ್ಣನಾಥೇಶ್ವರ ದೇವಾಲಯ, ಕುದ್ರೋಳಿ:

ಮಂಗಳೂರಿನ ಕುದ್ರೋಳಿಯಲ್ಲಿರುವ ಶಿವನಿಗೆ ಮುಡಿಪಾದ ಗೋಕರ್ಣನಾಥೇಶ್ವರನ ದೇವಸ್ಥಾನವಿದೆ. ಮಂಗಳೂರಿನಲ್ಲಿ ಕಂಡುಬರುವ ದೇವಾಲಯಗಳ ಪೈಕಿ ಇದು ಇತ್ತೀಚಿಗಷ್ಟೆ ನಿರ್ಮಾಣಗೊಂಡ ದೇವಾಲಯವಾಗಿದೆ. ನಾರಯಣ ಗುರು ಎಂಬ ಆಧ್ಯಾತ್ಮಿಕ ಸಂತರಿಂದ ಈ ದೇವಾಲಯದ ಪರಿಕಲ್ಪನೆ ಮೂಡಿ ಬಂದಿದೆ.

ಚಿತ್ರಕೃಪೆ: Premkudva

ಶಂಭುಲಿಂಗ ದೇವಸ್ಥಾನ, ಕುಂದಗೋಳ:

ಶಂಭುಲಿಂಗ ದೇವಸ್ಥಾನ, ಕುಂದಗೋಳ:

ಧಾರವಾಡ ಜಿಲ್ಲೆಯಲ್ಲಿರುವ ಕುಂದಗೋಳದಲ್ಲಿ ಶಿವನ ಶಂಭುಲಿಂಗ ದೇವಸ್ಥಾನವನ್ನು ಕಾಣಬಹುದು. 11 ನೇಯ ಶತಮಾನದ ಪಶ್ಚಿಮ ಚಾಲೂಕ್ಯರಿಂದ ನಿರ್ಮಾಣವಾದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನವು ಶಿವ ಹಾಗು ಪಾರ್ವತಿಯರಿಗೆ ಮೀಸಲಾದ ದೇವಸ್ಥಾನವಾಗಿದ್ದು, ಈ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಮತ್ತೊಂದು ಸ್ಮರಿಸಬೇಕಾದ ಸಂಗತಿಯೆಂದರೆ ಕುಂದಗೋಳವು ಹಿಂದುಸ್ತಾನಿ ಸಂಗೀತಕ್ಕೆ ಅತಿ ಗಣ್ಯ ಕೊಡುಗೆ ನೀಡಿದ ನಾಡಗೀರ್ ಕುಟುಂಬದ ತವರಾಗಿರುವುದು ಅಲ್ಲದೆ ಪ್ರಖ್ಯಾತ ಕಲಾವಿದರಾದ ಸವಾಯಿ ಗಂಧರ್ವ, ಪಂಡಿತ್ ಭೀಮಸೇನ ಜೋಶಿ ಹಾಗು ಗಂಗುಬಾಯಿ ಹಾನಗಲ್ ಅವರೊಂದಿಗೆ ನಂಟನ್ನು ಹೊಂದಿದೆ.

ಚಿತ್ರಕೃಪೆ: Manjunath Doddamani

ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ:

ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ:

ಗದಗ್ ಜಿಲ್ಲೆಯ ಲಕ್ಕುಂಡಿಯಲ್ಲಿರುವ ಶಿವನಿಗೆ ಮುಡಿಪಾದ ಕಾಶಿವಿಶ್ವೇಶ್ವರ ದೇವಸ್ಥಾನವು ಪಶ್ಚಿಮ ಚಾಲೂಕ್ಯ್ಅರ ಕಾಲದಾಲಿ ನಿರ್ಮಾಣಗೊಂಡ ಅತಿ ಪುರಾತನ ದೇವಾಲಯವಾಗಿದೆ. ಗದಗ್ ಪಟ್ಟಣದಿಂದ ಲಕ್ಕುಂಡಿಯು ಕೇವಲ 11 ಕಿ.ಮೀ ದೂರದಲ್ಲಿದೆ. ಹೆನ್ರಿ ಕೌಸೆನ್ಸ್ ಎಂಬ ಬರಹಗಾರರ ಪ್ರಕಾರ, ಈ ದೇವಸ್ಥಾನವು ಕನ್ನಡ ಭಾಷೆ ಬಳಸಲ್ಪಡುತ್ತಿದ್ದ ಪ್ರದೇಶದಲ್ಲೆ ಅತ್ಯಂತ ಸುಂದರವಾದ ದೇವಾಲಯವಾಗಿತ್ತು.

ಚಿತ್ರಕೃಪೆ: Dineshkannambadi

ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ:

ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ:

ಶಿವನಿಗೆ ಮುಡಿಪಾದ ಸೋಮೇಶ್ವರ ದೇವಾಲಯವು ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಎಂಬ ಗ್ರಾಮದಲ್ಲಿದೆ. ಇಲ್ಲಿನ ಪ್ರಮುಖ ಸ್ಮಾರಕ ಹೆಗ್ಗುರುತಾಗಿರುವ 11 ನೇಯ ಶತಮಾನದ ಈ ಪುರಾತನ ದೇವಾಲಯವು ಚಾಲೂಕ್ಯ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿದೆ.

ಚಿತ್ರಕೃಪೆ: Manjunath Doddamani

ಮಧುಕೇಶ್ವರ ದೇವಸ್ಥಾನ, ಬನವಾಸಿ:

ಮಧುಕೇಶ್ವರ ದೇವಸ್ಥಾನ, ಬನವಾಸಿ:

ಕದಂಬ ಶೈಲಿಯಲ್ಲಿ ನಿರ್ಮಾಣವಾಗಿರುವ ಶಿವನಿಗೆ ಮುಡಿಪಾದ ಮಧುಕೇಶ್ವರ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪಟ್ಟಣದಲ್ಲಿದೆ. ಬನವಾಸಿಯು ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ಆಯೋಜಿಸಲ್ಪಡುವ ಕದಂಬೋತ್ಸವಕ್ಕಾಗಿ ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Clt13

ಮಹಾದೇವ ದೇವಾಲಯ, ಇಟಗಿ:

ಮಹಾದೇವ ದೇವಾಲಯ, ಇಟಗಿ:

ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಇಟಗಿ ಎಂಬ ಪಟ್ಟಣದಲ್ಲಿ ಮಹಾದೇವನ ಈ ದೇವಸ್ಥಾನವನ್ನು ಕಾಣಬಹುದು. ಪಶಿಚಿಮ ಚಾಲೂಕ್ಯರ ದೊರೆ ನಾಲ್ಕನೇಯ ವಿಕ್ರಮಾದಿತ್ಯನ ಆಸ್ಥಾನದ ದಂಡನಾಯಕನಾಗಿದ್ದ ಮಹಾದೇವನಿಂದ ಈ ದೇವಾಲಯವು 12 ನೇಯ ಶತಮಾನದಲ್ಲಿ ನಿರ್ಮಾಣಗೊಂಡಿದೆ.

ಚಿತ್ರಕೃಪೆ: Manjunath Doddamani

ಮಲ್ಲಿಕಾರ್ಜುನ ದೇವಾಲಯ, ಬಸರಳು:

ಮಲ್ಲಿಕಾರ್ಜುನ ದೇವಾಲಯ, ಬಸರಳು:

ಮಂಡ್ಯ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಪಟ್ಟಣವಾದ ಬಸರಳು ಎಂಬಲ್ಲಿ ಈ ಮಲ್ಲಿಕಾರ್ಜುನ ದೇವಸ್ಥಾನವಿದೆ. ಬಸರಳು ನಾಗಮಂಗಲಕ್ಕೆ ಹತ್ತಿರದಲ್ಲಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಿಂದ 65 ಕಿ.ಮೀ ದೂರದಲ್ಲಿದೆ. ಹೊಯ್ಸಳ ಸಾಮ್ರಾಜ್ಯದ ಎರಡನೇಯ ವೀರನರಸಿಂಹನ ಕಾಲದಲ್ಲಿ ಹರಿಹರ ಧನ್ನಾಯಕನಿಂದ ಈ ದೇವಾಲಯವು 1234 ರಲ್ಲಿ ನಿರ್ಮಾಣಗೊಂಡಿದೆ. ಇದೊಂದು ಸಂರಕ್ಷಿತ ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Dhiruguri

ನಾಗರೇಶ್ವರ ದೇವಾಲಯ, ಬಂಕಾಪುರ:

ನಾಗರೇಶ್ವರ ದೇವಾಲಯ, ಬಂಕಾಪುರ:

ಶಿವನ ಈ ದೇವಸ್ಥಾನವನ್ನು ಜನಪ್ರಿಯವಾಗಿ "ಅರವತ್ತು ಖಂಬದ ಗುಡಿ" ಎಂದು ಕರೆಯಲಾಗುತ್ತದೆ. ಏಕೆಂದರೆ ಈ ದೇವಾಲಯದಲ್ಲಿ 60 ಖಂಬಗಳನ್ನು ಕಾಣಬಹುದಾಗಿದೆ. ಇದಿರುವುದು ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ. 12 ನೇಯ ಶತಮಾನದ ಈ ದೇವಾಲಯವು ಪಶ್ಚಿಮ ಚಾಲೂಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಈ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Dineshkannambadi

ನವಲಿಂಗ ದೇವಸ್ಥಾನ, ಕುಕನೂರು:

ನವಲಿಂಗ ದೇವಸ್ಥಾನ, ಕುಕನೂರು:

ರಾಷ್ಟ್ರಕೂಟ ಸಾಮ್ರಾಜ್ಯದ ಒಂದನೇಯ ಅಮೋಘವರ್ಷ ಇಲ್ಲವೆ ಅವನ ಮಗನಾದ ಎರಡನೇಯ ಕೃಷ್ಣನ ಕಾಲದಲ್ಲಿ ನಿರ್ಮಾಣವಾದ ಶಿವನ ಈ ದೇವಾಲಯವು 9 ನೇಯ ಶತಮಾನದ್ದಾಗಿದೆ. ಕುಕನೂರು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನಲ್ಲಿದೆ. ಇಲ್ಲಿ ಕನ್ನಡ ಲಿಪಿಯಲ್ಲಿರುವ ಪುರಾತನ ಶಾಸನಗಳನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಪಂಚಲಿಂಗೇಶ್ವರ ದೇವಸ್ಥಾನ, ಗೋವಿಂದನಹಳ್ಳಿ:

ಪಂಚಲಿಂಗೇಶ್ವರ ದೇವಸ್ಥಾನ, ಗೋವಿಂದನಹಳ್ಳಿ:

ಮಂಡ್ಯ ಜಿಲ್ಲೆಯ ಗೋವಿಂದನ ಹಳ್ಳಿಯಲ್ಲಿ ಶಿವನ ಈ ಅದ್ಭುತವಾದ ಪಂಚಲಿಂಗೇಶ್ವರನ ದೇವಸ್ಥಾನವನ್ನು ಕಾಣಬಹುದು. ಪಂಚಲಿಂಗೇಶ್ವರ ಅಕ್ಷರಶಃ ಐದು ಲಿಂಗಗಗಳು ಎಂಬರ್ಥ ಕೊಡುತ್ತದೆ. ಹೊಯ್ಸಳ ದೊರೆ ವೀರ ಸೋಮೇಶ್ವರನ ಕಾಲದಲ್ಲಿ ಸುಮಾರು 1238 ರಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ಈ ದೇವಾಲಯ ಸಂರಕ್ಷಿತ ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: HoysalaPhotos

ರಾಮೇಶ್ವರ ದೇವಸ್ಥಾನ, ಕೆಳದಿ:

ರಾಮೇಶ್ವರ ದೇವಸ್ಥಾನ, ಕೆಳದಿ:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಯಲ್ಲಿದೆ ಶಿವನ ಈ ದೇವಸ್ಥಾನ. ಕೆಳದಿಯು ಸಾಗರದಿಂದ ಕೇವಲ 15 ಕಿ.ಮೀ ದೂರವಿದ್ದು ಉತ್ತಮ ರಸ್ತೆ ಸ್ದಂಪರ್ಕವನ್ನು ಹೊಂದಿದೆ. ಹೊಯ್ಸಳ ಹಾಗು ನಾಯಕ ವಾಸ್ತುಶೈಲಿಯ ಮಿಶ್ರತೆಯನ್ನು ಹೊಂದಿರುವ ಈ ದೇವಾಲಯ ಸುಮಾರು 16 ನೇಯ ಶತಮಾನದ್ದಾಗಿದೆ. ಇದೊಂದು ಪ್ರವಾಸಿ ಗಮ್ಯ ತಾಣವೂ ಹೌದು.

ಚಿತ್ರಕೃಪೆ: Dineshkannambadi

ಶಂಕರಲಿಂಗ ದೇವಸ್ಥಾನ, ಅಮರಗೋಳ:

ಶಂಕರಲಿಂಗ ದೇವಸ್ಥಾನ, ಅಮರಗೋಳ:

ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಮಧ್ಯದಲ್ಲಿರುವ ಅಮರಗೋಳವು ಹುಬ್ಬಳ್ಳಿ ನಗರದಿಂದ 9 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಶಿವನಿಗೆ ಮುಡಿಪಾದ ಶಂಕರಲಿಗ ದೇವಸ್ಥಾನವು ಮಹಾಶಿಲ್ಪಿ ಜಕಣಾಚಾರ್ಯರಿಂದ ನಿರ್ಮಿತವಾಗಿದೆ. ಈ ದೇವಸ್ಥಾನದಲ್ಲಿ ನಗರ ವಾಸ್ತುಶೈಲಿಯನ್ನು ಹೇರಳವಾಗಿ ಕಾಣಬಹುದು.

ಚಿತ್ರಕೃಪೆ: Siddharth Pujari

ಸಿದ್ದೇಶ್ವರ ದೇವಾಲಯ, ಹಾವೇರಿ:

ಸಿದ್ದೇಶ್ವರ ದೇವಾಲಯ, ಹಾವೇರಿ:

ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಲ್ಲಿರುವ ಶಿವನಿಗೆ ಮುಡಿಪಾದ ಸಿದ್ದೇಶ್ವರ ದೇವಸ್ಥಾನವು 12 ನೇಯ ಶತಮಾನದ ದೇವಾಲಯವಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ ಇತರೆ ಸಾಮಾನ್ಯ ದೇವಾಲಯಗಳು ಪೂರ್ವಕ್ಕೆ ಮುಖ ಮಾಡಿರುವ ಹಾಗೆ ಇರದೆ ಪಶ್ಚಿಮಕ್ಕೆ ಮುಖ ಮಾಡಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Dineshkannambadi

ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು:

ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು:

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಶಿವನಿಗೆ ಸಮರ್ಪಿತವಾದ ಈ ಅತಿ ಪುರಾತನ ದೇವಾಲಯವನ್ನು ಕಾಣಬಹುದು. ನಂಜನಗೂಡು ಕ್ಷೇತ್ರದಲ್ಲಿ ಹರಿದಿರುವ ಕಪಿಲಾ ನದಿಯ ಬಲದಂಡೆಯಲ್ಲಿ ಈ ಸುಂದರ ದೇವಸ್ಥಾನವಿದೆ. ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಅಥವ "ದಕ್ಷಿಣದ ವಾರಣಾಸಿ" ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Dineshkannambadi

ತಾರಕೇಶ್ವರ ದೇವಾಲಯ, ಹಾನಗಲ್:

ತಾರಕೇಶ್ವರ ದೇವಾಲಯ, ಹಾನಗಲ್:

ಹಾವೇರಿ ಜಿಲ್ಲೆಯ ಹಾನಗಲ್ಲಿನಲ್ಲಿ ಶಿವನಿಗೆ ಸಮರ್ಪಿತವಾದ ತಾರಕೇಶ್ವರ ದೇವಾಲಯವನ್ನು ಕಾಣಬಹುದು. 12 ನೇಯ ಶತಮಾನದ ಮಧ್ಯದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ಅದ್ಭುತವಾದ ವಾಸ್ತು ಶಿಲ್ಪ ಕಲೆಯನ್ನು ಹೊಂದಿದೆ.

ಚಿತ್ರಕೃಪೆ: Manjunath Doddamani

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X