Search
  • Follow NativePlanet
Share
» »ಭಾರತದ ಪ್ರಮುಖ ಗುಹಾಂತರ ದೇವಾಲಯಗಳು

ಭಾರತದ ಪ್ರಮುಖ ಗುಹಾಂತರ ದೇವಾಲಯಗಳು

By Vijay

ಗುಹೆಗಳು ಮೊದಲಿನಿಂದಲೂ ಮನುಷ್ಯನಿಗೆ ಕುತೂಹಲ ಕೆರಳಿಸುವ ರಚನೆಗಳಾಗಿವೆ. ಕೆಲ ಗುಹೆಗಳನ್ನು ಮಾನವ ತನ್ನ ವಾಸಕ್ಕೆಂದು ನಿರ್ಮಿಸಿಕೊಂಡಿದ್ದರೆ ಇನ್ನೂ ಕೆಲ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡು ಮಾನವನ ವಾಸಕ್ಕೆಂದು ಬಳಸಲ್ಪಡುತ್ತಿದ್ದವು. ಕೆಲ ಗುಹೆಗಳಂತೂ ದೇವರಿಗೆ ಮುಡಿಪಾಗಿದ್ದವು. ಅದೆಷ್ಟೊ ಗುಹಾ ದೇವಾಲಯಗಳು ಪುರಾತನ ಕಾಲದಲ್ಲಿ ನಿರ್ಮಿಸಲ್ಪಟ್ಟಿವೆ. ಇಂದಿಗೂ ಭಾರತದಾದ್ಯಂತ ಐತಿಹಾಸಿಕ ಹಿನ್ನಿಲೆಯುಳ್ಳ ಗುಹಾ ದೇವಾಲಯಗಳನ್ನು ಕಾಣಬಹುದು.

ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ ಅಮೋಘ 50% ರಷ್ಟು ಕಡಿತ

ಇಂದು ಗುಹಾ ದೇವಾಲಯಗಳು ಸಾಕಷ್ಟು ಕುತೂಹಲ ಕೆರಳಿಸುತ್ತವೆ. ಗುಹೆಯ ಒಳಾಂಗಣ ಹೇಗಿರುತ್ತದೆ? ಯಾವ ಯಾವ ವಸ್ತುಗಳು ಬಳಸಲ್ಪಡುತ್ತಿದ್ದವು? ಯಾವ ರೀತಿ ಮಾನವನು ಗುಹಾ ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಿದ್ದ? ಮುಂತಾದ ಹಲವಾರು ಪ್ರಶ್ನೆಗಳು ನಮ್ಮನ್ನು ಸುತ್ತುವರೆಯುತ್ತವೆ. ಅಂತೆಯೆ ಇಂದಿಗೂ ಸಹ ಸಾಕಷ್ಟು ಉತ್ಸುಕಮಯ ಪ್ರವಾಸಿಗರು ಗುಹೆಗಳಿಗೆ ಭೇಟಿ ನೀಡಲು ಹಾತೊರೆಯುತ್ತಾರೆ.

ವಿಶೇಷ ಲೇಖನ : ವಿಸ್ಮಯಕರ ಬೊರಾ ಗುಹೆಗಳು

ಇಂದು ಜಗತ್ತಿನ ವಿವಿಧೆಡೆಗಳಲ್ಲಿ ಕಂಡುಬರುವಂತೆ ಭಾರತದಲ್ಲಿಯೂ ಸಹ ಸಾಕಷ್ಟು ಪುರಾತನ ಗುಹಾ ದೇವಾಲಯಗಳಿವೆ. ಕೆಲ ಗುಹೆಗಳಂತೂ ಅದ್ಭುತವಾದ ಶಿಲ್ಪ ಕಲೆ ಹಾಗೂ ವರ್ಣ ಚಿತ್ರಗಳಿಗೆ ವಿಶ್ವದಲ್ಲೆ ಹೆಸರುವಾಸಿಯಾಗಿದ್ದು, ಯುನೆಸ್ಕೊದಿಂದ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣಗಳಾಗಿಯೂ ಸಹ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ.

ವಿಶೇಷ ಲೇಖನ : 3 ಲಕ್ಷ ವರ್ಷ ಪುರಾತನ್ ಭೀಮ್ ಬೆಟ್ಕಾಗುಹೆಗಳು

ಇನ್ನೂ ಕೆಲ ಗುಹೆಗಳು ತಮ್ಮ ಸುತ್ತಲೂ ರೋಚಕವಾದ ದಂತ ಕಥೆಗಳನ್ನು ಹೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಕೆಲ ಪ್ರಮುಖ ಗುಹಾ ದೇವಾಲಯಗಳು ಯಾವುವು ಹಾಗೂ ಅವುಗಳು ಇರುವುದೇಲ್ಲಿ ಎಂಬುದರ ಕುರಿತು ತಿಳಿಯಿರಿ.

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಕೊಣಾಜೆ ಕಲ್ಲು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯಲ್ಲಿರುವ ಒಂದು ಅದ್ಭುತ ಏಕಶಿಲಾ ಗುಹಾ ದೇವಾಲಯವಾಗಿದೆ. ಕೊಣಾಜೆ ಎಂಬ ಗ್ರಾಮದಲ್ಲಿರುವ ಬೃಹತ್ ಗ್ರಾನೈಟ್ ಬಂಡೆಯೊಂದರ ಮೇಲೆ ನಿರ್ಮಿಸಲಾಗಿರುವ ಈ ದೇವಾಲಯವು ನೋಡಲು ಆಕರ್ಷಕವಾಗಿದ್ದು ಟ್ರೆಕ್ ಮೂಲಕ ಮಾತ್ರವೆ ಇಲ್ಲಿಗೆ ತಲುಪಬಹುದಾಗಿದೆ.

ಚಿತ್ರಕೃಪೆ: Vaikoovery

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಯೋಗಿ ಕೊಳ್ಳ ದೇವಾಲಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆಸಿರುವ ಓಂದು ಸುಂದರ ಗುಹಾ ದೇವಾಲಯವಾಗಿದೆ. ಇದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಯೋಗಿ ಕೊಳ್ಳ ಎಂಬ ಹೆಸರಿನ ಹಳ್ಳಿಯಲ್ಲಿದೆ. ಈ ಗುಹಾ ದೇವಾಲಯವು ಬೆಟ್ಟವೊಂದರ ಮೇಲೆ ಸುಮಾರು 800 ಅಡಿಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಇದೊಂದು ಅದ್ಭುತ ಟ್ರೆಕ್ಕಿಂಗ್ ತಾಣವೂ ಹೌದು.

ಚಿತ್ರಕೃಪೆ: Shil.4349

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಬಾಗಲಕೋಟೆ ಜಿಲ್ಲೆಯ ಪ್ರಖ್ಯಾತ ಐತಿಹಾಸಿಕ ತಾಣವಾದ ಐಹೊಳೆಯಲ್ಲಿರುವ ರಾವಣ ಫಡಿ ಗುಹಾಕಾರದ ಬಂಡೆಯಲ್ಲಿ ಕೆತ್ತಲಾಗಿರುವ ಒಂದು ಸುಂದರವಾದ ದೇವಾಲಯವಾಗಿದೆ.

ಚಿತ್ರಕೃಪೆ: Meesanjay

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಗವಿಪುರದ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನವು ಒಂದು ಅದ್ಭುತ ಗುಹಾಂತರ ದೇವಾಲಯವಾಗಿದೆ. ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿವರ್ಷ 'ಮಕರ ಸಂಕ್ರಾತಿಯ ದಿನ' ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಷ್ಯವನ್ನು ವೀಕ್ಷಿಸಲು ಸಾವಿರಾರು ಶ್ರದ್ಧಾಳುಗಳು ಬಹಳ ದೂರ ಪ್ರದೇಶಗಳಿಂದ ಬರುತ್ತಾರೆ. 'ಸ್ವಯಂಭು'ವೆಂದು ಪ್ರಸಿದ್ಧಿಪಡೆದ ಈ ಕ್ಷೇತ್ರದಲ್ಲಿ 'ಗೌತಮ ಮಹರ್ಷಿ'ಗಳು ಈ ಗುಹಾಂತರ ದೇವಾಲಯದಲ್ಲಿ ತಪಸ್ಸನ್ನು ಆಚರಿಸಿದರೆಂದು ಇತಿಹಾಸವಿದೆ.

ಚಿತ್ರಕೃಪೆ: Pavithrah

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಸಾಮಾನ್ಯವಾಗಿ ಚಿತ್ರದುರ್ಗದ ಕೋಟೆಯ ಕುರಿತು ಬಹುತೇಕರಿಗೆ. ಏಳು ಸುತ್ತುಗಳ ಈ ಕೋಟೆಯು ಒಂದು ಭೂಮಟ್ಟದಿಂದ ಪ್ರಾರಂಭವಾಗುತ್ತ ಎತ್ತರವಾಗಿ ಬೆಳೆಯ ತೊಡಗುತ್ತದೆ. ಮೇಲ್ಭಾಗದ ಕೋಟೆ ರಚನೆಗಳನ್ನು ಮೇಲುದುರ್ಗ ಎಂತಲೆ ಕರೆಯಲಾಗುತ್ತದೆ. ಇಲ್ಲಿರುವ ಶ್ರೀ ಸಂಪಿಗೆ ಸಿದ್ಧೇಶ್ವರ ದೇವಸ್ಥಾನವೂ ಸಹ ಒಂದು ಗುಹಾಂತರ ದೇವಾಲಯವಾಗಿದೆ. ಚಿತ್ರದುರ್ಗಕ್ಕೆ ಭೇಟಿ ನೀಡಿದಾಗ ಈ ದೇವಾಲಯಕ್ಕೆ ಭೇಟಿ ನೀಡಲು ಮರೆಯದಿರಿ. ಇದು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುತ್ತದೆ.

ಚಿತ್ರಕೃಪೆ: Nirde102

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯು ಒಂದು ಪ್ರಖ್ಯಾತ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಬಾದಾಮಿಯಲ್ಲಿರುವ ಗುಹಾಂತರ ದೇವಾಲಯಗಳು ಸಾಕಷ್ಟು ಪ್ರಸಿದ್ಧವಾಗಿದ್ದು, ಇವುಗಳನ್ನು ನೋಡಲು ಕೇವಲ ಭಾರತವಲ್ಲದೆ ವಿದೇಶಗಳಿಂದಲೂ ಸಹ ಇತಿಹಾಸ ಪ್ರಿಯ ಪ್ರವಾಸಿಗರು ಬರುತ್ತಾರೆ.

ಚಿತ್ರಕೃಪೆ: Raamanp

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ನರಸಿಂಹ ಝರನಿ, ಬೀದರ್ ಪಟ್ಟಣದಲ್ಲಿರುವ ಒಂದು ಅದ್ಭುತ ಗುಹಾಂತರ ದೇವಾಲಯ. ನರಸಿಂಹ ದೇವರಿಗೆ ಮುಡಿಪಾದ ಈ ದೇವಾಲಯವನ್ನು 300 ಮೀ.ಗಳಷ್ಟು ಉದ್ದದ ಸುರಂಗ ಮಾರ್ಗವೊಂದರಲ್ಲಿ ಉತ್ಖನನ ಮಾಡಿ ತೆಗೆಯಲಾಗಿದೆ. ಈ ಉದ್ದನೆಯ ಸುರಂಗ ಗುಹೆಯು ಸುಮಾರು 4 ರಿಂದ 5 ಅಡಿಗಳಷ್ಟು ಆಳದ ನೀರನ್ನು ಹೊಂದಿದ್ದು, ಮೂಲ ವಿಗ್ರಹವನ್ನು ದರ್ಶಿಸಲು ಈ ನೀರಿನ ಮೂಲಕವೆ ಸಾಗುತ್ತ ಹೋಗಬೇಕಾಗಿದೆ. ಕೃತಕ ಆಮ್ಲಜನಕ ಯಂತ್ರಗಳ ವ್ಯವಸ್ಥೆ ಮಾಡಲಾಗಿದ್ದು ದೀಪಗಳ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಸಾಗುವಾಗ ಅಕ್ಕ ಪಕ್ಕದಲ್ಲಿ ಬಾವಲಿಗಳು ಗುಂಪು ಗುಂಪಾಗಿ ಕುಳಿತಿರುವುದನ್ನು ಕಾಣಬಹುದು. ಆದಷ್ಟು ಜಾಗರೂಕತೆಯಿಂದ ತೆರಳಿ ದರ್ಶಿಸಿ ಮರಳಬೇಕು. ಇಲ್ಲಿಯವರೆಗೂ ಯಾರೊಬ್ಬರಿಗೂ ಬಾವಲಿಗಳಿಂದ ಹಾನಿಯುಂಟಾದ ಉದಾಹರಣೆಗಳಿಲ್ಲ. ಒಂದು ಸಮಯದಲ್ಲಿ 6 ರಿಂದ 8 ಜನರ ಗುಂಪು ಮಾತ್ರವೆ ಪ್ರವೇಶಿಸಬಹುದಾಗಿದ್ದು, ಅವರು ಮರಳುವವರೆಗೆ ಮಿಕ್ಕವರು ಸಾಲಿನಲ್ಲಿ ಕಾಯಲೇಬೇಕು. ಮಕ್ಕಳಿದ್ದರೆ ಹೆಗಲ ಮೇಲೆ ಕುಳ್ಳಿರಿಸಿಕೊಂಡರೂ ಸಹ ಬಾವಲಿಗಳಿಗೆ ಸ್ಪರ್ಶವಾಗದ ಹಾಗೆ ಎಚ್ಚರ ವಹಿಸಬೇಕು. ಸಾಗುವಾಗ ಸಾಮಾನ್ಯವಾಗಿ ಭಕ್ತರು "ಗೋವಿಂದಾ ಗೋವಿಂದಾ", "ನರಸಿಂಹ ಹರಿ ಹರಿ" ಎಂದು ಪಠಿಸುತ್ತಾ ಸಾಗುತ್ತಾರೆ.

ಚಿತ್ರಕೃಪೆ: Jaideep Rao

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಶಿವ ಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಚಿರಪರಿಚಿತವಾದ ಹೆಸರು. 12 ನೇಯ ಶತಮಾನದಲ್ಲಿ ಜೀವಿಸಿದ್ದ ಈ ಶರಣೆಯು ಭಕ್ತಿ ಪರಂಪರೆಯ ಪ್ರಮುಖ ಶಿವ ಶರಣರುಗಳ ಪೈಕಿ ಒಂದಾಗಿದ್ದಾರೆ. ತಮ್ಮ ಜೀವನವನ್ನೆ ಶಿವನಿಗಾಗಿ, ಅರಿವು (ಮೋಕ್ಷ) ಪಡೆಯುವುದಕ್ಕಾಗಿ ಮೀಸಲಿಟ್ಟ ಮಹಾ ಸಾಧ್ವಿ ಅಕ್ಕ ಮಹಾದೇವಿ. ಒಂದು ಐತಿಹ್ಯದ ಪ್ರಕಾರ, ಅಕ್ಕ ಮಹಾದೇವಿಯು ಎಲ್ಲೆಡೆ ಸುತ್ತಾಡಿ, ವಚನಗಳನ್ನು ಪಸರಿಸುತ್ತ ಕೊನೆಗೆ ಶ್ರೀಶೈಲಂನ ಕಡಲಿ ಎಂಬ ದಟ್ಟಾರಣ್ಯದಲ್ಲಿ ಶಿವನನ್ನು ಆರಾಧಿಸುತ್ತ ಐಕ್ಯಗೊಂಡಳು. ಅದೇ ಸ್ಥಳವು ಇಂದು ಅಕ್ಕ ಮಹಾದೇವಿ ಗುಹೆಗಳು ಎಂಬ ಹೆಸರಿನಿಂದ ಪ್ರಚಲಿತದಲ್ಲಿದೆ. ಈ ಅಕ್ಕಮಹಾದೇವಿ ಗುಹೆ ಇರುವುದು ಶ್ರೀಶೈಲಂನಿಂದ ಕೇವಲ 18 ಕಿ.ಮೀ ದೂರದಲ್ಲಿ ಮಾತ್ರ.

ಚಿತ್ರಕೃಪೆ: రహ్మానుద్దీన్

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಆಂಧ್ರಪ್ರದೇಶದ ವಿಜಯವಾಡಾದ ಕನಕದುರ್ಗ ದೇವಾಲಯದ ಬಳಿ ಅಕ್ಕನ್ನ ಮಾದನ್ನ ಹೆಸರಿನ ಗುಹಾಂತರ ದೇವಾಲಯಗಳಿವೆ. 17 ನೆಯ ಶತಮಾನದಲ್ಲಿ ಗುಹೆಗಳಿಗೆ ಸಂಬಂಧಿಸಿದಂತೆ ದೇವಾಲಯಗಳನ್ನು ನಿರ್ಮಿಸಲಾಯಿತಾದರೂ ಇಲ್ಲಿರುವ ಗುಹೆಗಳು ಸುಮಾರು 6 ರಿಂದ 7 ನೆ ಶತಮಾನಕ್ಕೆ ಸಂಬಂಧಪಟ್ಟವುಗಳಾಗಿವೆ. ಎರಡನೆಯ ಶತಮಾನದ ಮತ್ತೊಂದು ಗುಹೆಯನ್ನು ಇಲ್ಲಿ ನೋಡಬಹುದಾಗಿದ್ದು ಅಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: Adityamadhav83

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. 3,229 ಮೀ.ಗಳಷ್ಟು ಉದ್ದವಿರುವ ಈ ಪ್ರಕೃತಿ ಸಹಜ ನಿರ್ಮಿತ ಗುಹೆಯು ಆಂಧ್ರದ ಕೊಲಿಮಿಗುಂದ್ಲಾ ತಲೂಕಿನಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಗುಹೆಯು 3.5 ಕಿ.ಮೀ ವರೆಗೆ ಅನ್ವೇಷಿಸಲ್ಪಟ್ಟಿದ್ದು, ಜನರಿಗೆ 1.5 ಕಿ.ಮೀ ದೂರದವರೆಗೆ ಪ್ರವೇಶಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಸಂಗತಿಯೆಂದರೆ ಸಂಸ್ಕೃತ ಪದವಾದ "ಬಿಲಂ" (ಗುದ್ದ/ರಂಧ್ರ) ನಿಂದ ಇದಕ್ಕೆ ಬೇಲಮ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: PP Yoonus

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಉಂಡವಲ್ಲಿ ಗುಹಾಂತರ ದೇವಾಲಯಗಳು ಭಾರತೀಯ ಶೈಲಿಯ ಬಂಡೆ ಕೆತ್ತನೆಯ ವಾಸ್ತು ಶಿಲ್ಪಕ್ಕೆ ಉತ್ತಮ ಉದಾಹರಣೆಗಳಾಗಿವೆ. ಆಂಧ್ರದ ಗುಮ್ಟೂರು ಜಿಲ್ಲೆಯ ತಾಡಪಲ್ಲಿ ತಾಲೂಕಿನ ಉಂಡವಲ್ಲಿ ಎಂಬಲ್ಲಿ ಈ ಸುಂದರ ಗುಹಾಂತರ ದೇವಾಲಾಯಗಳು ನೆಲೆಸಿವೆ. ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಳಿಯಿರುವ ಉಂಡವಲ್ಲಿ ಗುಹೆ.

ಚಿತ್ರಕೃಪೆ: Ramireddy.y

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಆಂಧ್ರದ ಕುರ್ನೂಲ್ ಜಿಲ್ಲೆಯಲ್ಲಿರುವ ಯಾಗಂಟಿಯು ಒಂದು ಶ್ರೀಕ್ಷೇತ್ರವಾಗಿದೆ. ಇಲ್ಲಿರುವ ಪ್ರಸಿದ್ಧ ದೇವಾಲಯವು ಶಿವನಿಗೆ ಮುಡಿಪಾಗಿದ್ದು, ಇಲ್ಲಿ ಆಗಸ್ತ್ಯ, ವೆಂಕಟೇಶ್ವರ ಹಾಗೂ ವೀರ ಬ್ರಹ್ಮಂ ಗುಹೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Pranayraj1985

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿದೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಎಲ್ಲೋರ ಗುಹೆಗಳ ಜೊತೆಗೆ ಅಜಂತ ಗುಹೆಗಳೂ ಸಹ ಪ್ರಪಂಚದ ಒಂದು ಪ್ರಸಿದ್ದ ಪಾರಂಪರಿಕ ಕ್ಷೇತ್ರವೆಂದು ಯುನೆಸ್ಕೋ ಸಂಸ್ಥೆಯಿಂದ ಘೋಷಿತವಾಗಿದೆ.

ಚಿತ್ರಕೃಪೆ: Danial Chitnis

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

30 ಗುಹೆಗಳ ಗುಂಪಾಗಿರುವ ಅಜಂತಾವು, ಮೂರು ಧರ್ಮಗಳ ಚಿತ್ರಕಲೆ, ಶಿಲ್ಪಕಲೆ ಹಾಗು ಹಸಿಚಿತ್ರಗಳನ್ನು ನಿರೂಪಿಸುತ್ತದೆ. ಅಜಂತದ ಈ ರತ್ನದಂತಹ ಗುಹೆಗಳು ನಿರ್ಮಾಣಗೊಂಡಾಗ ಅದರ ಎಲ್ಲ ಗೋಡೆಗಳು ಕ್ರಿ.ಪೂ 2 ನೇ ಶತಮಾನದಿಂದ ಕ್ರಿ.ಪೂ 6 ಮತ್ತು 7ನೇ ಶತಮಾನದ ವಾಸ್ತವಿಕತೆಗೆ ಕಿಟಕಿಯಂತಿದೆ. ಇಲ್ಲಿನ ಎಲ್ಲ ಗುಹೆಗಳಲ್ಲೂ ಕಾಣುವ ಒಂದು ಸಾಮಾನ್ಯ ವಿಷಯವೆಂದರೆ, ಇವು ಬುದ್ದ ದೇವರು ಮೋಕ್ಷ ಪಡೆಯುವ ಪೂರ್ವದ ನಿಜವಾದ ಜೀವನವನ್ನು ಹೊರತರುತ್ತವೆ. ಇಲ್ಲಿನ ಗುಹೆಗಳು ಶ್ರೀಲಂಕಾದಲ್ಲಿ ಕಂಡು ಬರುವ ಸೀಗೆರಿಯ ಗುಹೆಗಳ ಹೋಲಿಕೆಯನ್ನು ತೋರುತ್ತವೆ. ಹಸಿರಿನ ವನಸಿರಿಯ ಮಧ್ಯೆ ಅಡಗಿಕೊಂಡಿರುವ ಅಜಂತಾ ಗುಹೆಗಳು.

ಚಿತ್ರಕೃಪೆ: Ashok Prabhakaran

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಔರಂಗಾಬಾದ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪ್ರಖ್ಯಾತ ಪುರಾತನ ತಾಣವಾದ ಎಲ್ಲೋರಾ ಗುಹೆಗಳನ್ನು ಒಂದು ಜಾಗತಿಕ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ. ಇದು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇದನ್ನು ರಾಷ್ಟ್ರಕೂಟರ ಕಾಲದಲ್ಲಿ ಕೆತ್ತಲಾಗಿತ್ತು ಮತ್ತು ಕಟ್ಟಲ್ಪಟ್ಟಿತ್ತು.

ಚಿತ್ರಕೃಪೆ: Arian Zwegers

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಇಲ್ಲಿರುವ ಒಟ್ಟು 34 ರಚನೆಗಳು ಸಾಮಾನ್ಯವಾಗಿ ಮೂರು ಗುಂಪುಗಳಲ್ಲಿರುತ್ತದೆ. ಬುದ್ಧ ಗುಂಪು, ಹಿಂದೂ ಗುಂಪು ಮತ್ತು ಜೈನ ಗುಂಪು. ಬುದ್ಧ ಗುಂಪು ಮೊದಲ ಹನ್ನೆರಡು ಗುಹೆಗಳನ್ನು ಹೊಂದಿರುತ್ತದೆ. ಹಿಂದೂ ಗುಂಪು ನಂತರದ ಹದಿನೇಳು ಗುಹೆಗಳನ್ನು ಹೊಂದಿದೆ. ಹಾಗೇ ಜೈನ ಗುಂಪು ಕೇವಲ ಐದು ಗುಹೆಗಳನ್ನು ಹೊಂದಿದೆ. ಎಲ್ಲಾ ಗುಹೆಗಳೂ ಕೂಡಾ ಸಮೀಪದಲ್ಲೇ ಇವೆ. ಆ ಎಲ್ಲಾ ಗುಹೆಗಳೂ ಕೂಡಾ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ.

ಚಿತ್ರಕೃಪೆ: Kunal Mukherjee

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಈ ಗುಹೆಗಳಲ್ಲಿನ ಇನ್ನೊಂದು ಪ್ರಮುಖ ಅಂಶವೆಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ. ಆ ಕಾಲದ ಸಂತರು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡಿದಾಗ ನೀರಿನ ವ್ಯವಸ್ಥೆಯು ತುಂಬಾ ಸುಲಭ ಲಭ್ಯವಾಗಿತ್ತು. ಅವರು ಮಳೆನೀರು ಸಂಗ್ರಹದಲ್ಲಿ ತುಂಬಾ ಜಾಣ್ಮೆಯನ್ನು ಹೊಂದಿದ್ದರು. ಗುಹೆಯಲ್ಲಿರುವ ದೊಡ್ಡ ದೊಡ್ಡ ಬಂಡೆಗಳ ಸಹಾಯದಿಂದ ಅವರು ನೀರನ್ನು ಸಂಗ್ರಹ ಮಾಡುತ್ತಿದ್ದರು.

ಚಿತ್ರಕೃಪೆ: Shriram Rajagopalan

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮಹಾರಾಷ್ಟ್ರದ ಲೋನಾವಲಾ ಬಳಿಯಿರುವ ಕರ್ಲಿ ಎಂಬಲ್ಲಿ ಕಾರ್ಲಾ ಗುಹಾಂತರ ದೇವಾಲಯಗಳನ್ನು ಕಾಣಬಹುದು. ಇವು ಬೌದ್ಧ ಗುಹಾಲಯಗಳಾಗಿದ್ದು ಎರಡನೆಯ ಶತಮಾನಕ್ಕೆ ಸಂಬಂಧಿಸಿವೆ.

ಚಿತ್ರಕೃಪೆ: Pradeep717

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮುಂಬೈ ಮಹಾನಗರದ ಜೋಗೇಶ್ವರಿ ಎಂಬಲ್ಲಿ ಜೋಗೇಶ್ವರಿ ಗುಹಾಂತರ ದೇವಾಲಯವನ್ನು ಕಾಣಬಹುದು. ಕ್ರಿ.ಶ 520 ರಿಂದ 550 ರ ಸಮಯದ ಗುಹಾಲಯ ಇದಾಗಿದೆ. ಪ್ರಸಿದ್ಧ ಇತಿಹಾಸ ತಜ್ಞರಾದ ವಾಲ್ಟರ್ ಸ್ಪಿಂಕ್ ಎಂಬುವವರ ಪ್ರಕಾರ, ಈ ಗುಹೆಯು ಹಿಂದೂ ಧರ್ಮದ ಮೊದಲ ದೊಡ್ಡ ಗುಹಾಂತರ ದೇವಾಲಯವಾಗಿದೆ.

ಚಿತ್ರಕೃಪೆ: Vks0009

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮುಂಬೈನ ಬೊರಿವಿಲಿ ಪ್ರದೇಶದ ಉತ್ತರ ದಿಕ್ಕಿನಲ್ಲಿ ಕಾನ್ಹೇರಿ ಗುಹಾ ದೇವಾಲಯವನ್ನು ಕಾಣಬಹುದು. ಕೃಷ್ಣಗಿರಿ ಎಂಬ ಕಪ್ಪುಅ ಬಣ್ಣದ ಬೃಹತ್ ಬೆಟ್ಟದ ಬಂಡೆಯಿಂದ ಕ್ರಮೇಣವಾಗಿ ಇದಕ್ಕೆ ಕಾನ್ಹೇರಿ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Sohan Ulhas Gurav

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮುಂಬೈನ ಅಂಧೇರಿ ಪ್ರದೇಶದ ಪಶ್ಚಿಮ ದಿಕ್ಕಿನಲ್ಲಿ ಮಹಾಕಾಲಿ ಗುಹೆಗಳಿವೆ. ಏನಿಲ್ಲವೆಂದರೂ ಈ ಗುಹೆಯು ಸುಮಾರು 5000 ವರ್ಷಗಳಷ್ಟು ಪುರಾತನವಾದುದೆಂದು ಅಂದಾಜಿಸಲಾಗಿದೆ.

ಚಿತ್ರಕೃಪೆ: Shiriskar.sagar

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮಹಾರಾಷ್ಟ್ರದ ಕರ್ಜಾತ್ ನಲ್ಲಿ ಕಂಡು ಬರುವ ಕೊಂಡನ ಗುಹೆಗಳು ಬೌದ್ಧ ರಚನೆಗಳಾಗಿದ್ದು ಪ್ರವಾಸಿಗರನ್ನು ಸದಾ ಆಕರ್ಷಿಸುತ್ತವೆ. ಇವು ಬೌದ್ಧ ಧರ್ಮದ ಗುಹಾಂತರ ದೇವಾಲಯಗಳಾಗಿವೆ.

ಚಿತ್ರಕೃಪೆ: Rudolph.A.furtado

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ನಾಶಿಕ್‌ನಲ್ಲಿರುವ ಪಾಂಡವಲೇನಿ ಗುಹೆಗಳು ವಾಸ್ತುಶಿಲ್ಪ ಪ್ರಿಯರಿಗೆ ಇಷ್ಟವಾಗುತ್ತದೆ. ತ್ರಿವಶ್ಮಿ ಗುಡ್ಡದ ಬುಡದಲ್ಲಿರುವ ಈ ಗುಹೆಯು 20 ಶತಮಾನಗಳ ಹಿಂದಿನದು. ಇಲ್ಲಿನ ಗುಹೆಗಳ ಸಂಖ್ಯೆ ಒಟ್ಟು 24. ಇದನ್ನು ಜೈನ ರಾಜರು ನಿರ್ಮಿಸಿದ್ದರು ಎಂದು ನಂಬಲಾಗಿದೆ. ಅಂಬಿಕಾದೇವಿ, ವೀರ ಮನಿಭದ್ರಾಜಿ ಮತ್ತು ತೀರ್ಥಂಕರ ವೃಷಭದೇವ ಇಲ್ಲಿ ವಾಸವಾಗಿದ್ದರು.

ಚಿತ್ರಕೃಪೆ: N.v.petkar

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಭಾಜಾ ಗುಹೆಗಳು ಖಂಡಾಲದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿವೆ. ಇವು ಈ ಗಿರಿಧಾಮದಿಂದ ಕೇವಲ 16 ಕಿ.ಮೀ ದೂರದಲ್ಲಿವೆ. ಈ ಅದ್ಭುತವಾದ ಪುರಾತನ ಗುಹೆಗಳು ಸುಮಾರು ಕ್ರಿ.ಪೂ 2 ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಹೊಂದಿವೆ. ಬೌದ್ಧ ಧರ್ಮದ ಹೀನಾಯಾನ ಪಂಥಕ್ಕೆ ಸೇರಿದ ಈ ಗುಹೆಗಳು ಭಾರತದಲ್ಲಿರುವ ಬೌದ್ಧ ವಾಸ್ತು ಶಿಲ್ಪ ಕಲೆಗ ಪ್ರತ್ಯಕ್ಷ ಸಾಕ್ಷಿಗಳಾಗಿ ನಿಂತಿದೆ.

ಚಿತ್ರಕೃಪೆ: Shalini31786

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಬಾರಾಬಾರ, ಬಿಹಾರ ರಾಜ್ಯದ ಬೋಧಗಯಾದಲ್ಲಿರುವ, ಮೌರ್ಯರ ಕಾಲದ ಈ ಗುಹೆಗಳು ಭಾರತದಲ್ಲಿರುವ ಕಲ್ಲಿನಿಂದ ಕೆತ್ತಲಾದ ಗುಹೆಗಳಲ್ಲಿ ಅತ್ಯಂತ ಹಳೆಯದು ಎಂಬ ಹಿರಿಮೆಗೆ ಪಾತ್ರವಾಗಿವೆ. ಬರಾಬರ್ ಗುಹೆಗಳಲ್ಲಿ ಹೆಚ್ಚಿನವು ಎರಡು ಅಂತಸ್ತುಗಳನ್ನು ಹೊಂದಿವೆ. ಗ್ರಾನೈಟ್ ಕಲ್ಲಿನಿಂದ ಕೆತ್ತಲಾದ ಗುಹೆಗಳು ಒಳಗಿನಿಂದ ಬಹಳ ಹೊಳಪಿನಿಂದ ಕೂಡಿವೆ.

ಚಿತ್ರಕೃಪೆ: Photo Dharma

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

5 ನೇ ಶತಮಾನದ ಗುಪ್ತ ವಂಶದ ಎರಡನೇ ಚಂದ್ರಗುಪ್ತನ ಕಾಲದಲ್ಲಿ ಈ ಗುಹೆಗಳನ್ನು ಪುನರ್ನಿರ್ಮಿಸಲಾಯಿತು. ಮಧ್ಯ ಪ್ರದೇಶದ ವಿದಿಶಾದಿಂದ 6 ಕಿಮೀ ದೂರದಲ್ಲಿರುವ ಬೇತ್ವಾ ಮತ್ತು ಬಿಯಾಸ್ ನದಿಗಳ ಮಧ್ಯದಲ್ಲಿ ಈ ಗುಹೆಗಳಿವೆ. ಇವು ದೊಡ್ಡ ಬೆಟ್ಟವೊಂದರಲ್ಲಿದ್ದು ಇಲ್ಲಿ ಬೌದ್ಧ ಪರಿಸರವನ್ನು ಕಾಣಬಹುದಾಗಿದೆ. ಇಲ್ಲಿನ ಶಾಸನಗಳು ಮತ್ತು ಕೆತ್ತನೆಗಳು ಐತಿಹಾಸಿಕ ಮಹತ್ವವನ್ನು ಪಡೆದಿವೆ.

ಚಿತ್ರಕೃಪೆ: Indrajit Chatterjee

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಉದಯಗಿರಿ ಮತ್ತು ಖಂಡಗಿರಿ ಗುಹೆಗಳು ಭುವನೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಭುವನೇಶ್ವರದಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಒಂದೊಮ್ಮೆ ಈ ಗುಹೆಗಳು ಜೈನ ಮಠಗಳ ಪ್ರಮುಖ ತಾಣವಾಗಿತ್ತು. ಇಲ್ಲಿನ ಬೆಟ್ಟಗಳಲ್ಲಿ ಕೆತ್ತಲಾದ ಕೋಣೆಗಳಿಂದ ಮಠಗಳು ಕಾರ್ಯ ನಿರ್ವಹಿಸುತ್ತಿದ್ದವು. ಪ್ರಸ್ತುತ ಇವು ಗುಹೆಗಳಾಗಿವೆ. ಈ ಮಠಗಳು ಎರಡನೇಯ ಶತಮಾನದಲ್ಲಿ ನಿರ್ಮಿತವಾದದ್ದು ಎನ್ನಲಾಗಿದೆ.

ಚಿತ್ರಕೃಪೆ: Itikanta Mohapatra

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಕ್ಕೂರ್ ಎಂಬ ಹಳ್ಳಿಯಲ್ಲಿ ಶಿವನಿಗೆ ಮುಡಿಪಾದ ತ್ರಿಕ್ಕೂರ್ ಮಹಾದೇವ ಎಂಬ ಗುಹಾಂತರ ದೇವಾಲಯವಿದೆ. 7 ಅಥವಾ 8 ನೆಯ ಶತಮಾನದ ಸಂದರ್ಭದಲ್ಲಿ ಇದರ ನಿರ್ಮಾಣವಾಗಿರಬಹುದೆಂದು ನಂಬಲಾಗಿದೆ.

ಚಿತ್ರಕೃಪೆ: Aruna

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟುಕ್ಕಾಲ್ ಎಂಬ ಗ್ರಾಮದಲ್ಲಿ ಕೊಟ್ಟುಕ್ಕಾಲ್ ಗುಹಾಂತರ ದೇವಾಲಯವಿದೆ. ಇಲ್ಲಿ ಮುಖ್ಯವಾಗಿ ಎರಡು ಸಮಾನವಲ್ಲದ, ಪೂರ್ವಕ್ಕೆ ಮುಖ ಮಾಡಿದ ಗುಹಾ ರಚನೆಗಳಿದ್ದು ಅವುಗಳ ಮಧ್ಯದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: Kannanshanmugam

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ತಮಿಳುನಾಡಿನ ಮಹಾಬಲಿಪುರಂ ಒಂದು ಅದ್ಭುತ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ಬಂಗಾಳ ಕೊಲ್ಲಿ ಸಮುದ್ರಕ್ಕೆ ಎದುರಾಭಿಮುಖವಾಗಿ ನಿಂತಿರುವ ದೇವಾಲಯದ ಜೊತೆಗೆ ಇನ್ನೂ ಹಲವು ಆಕರ್ಷಣೆಗಳು ಇಲ್ಲಿವೆ. ಅದರಲ್ಲೊಂದಾಗಿದೆ ವರಾಹ ಗುಹಾ ದೇವಾಲಯ. ಬಂಡೆಯಲ್ಲಿ ಕೆತ್ತಲಾದ ವರಾಹಸ್ವಾಮಿಗೆ ಮುಡಿಪಾದ ಅತ್ಯಾಕರ್ಷಕ ಗುಹಾ ದೇವಾಲಯ ಇದಾಗಿದೆ.

ಚಿತ್ರಕೃಪೆ: Vsundar

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಪಂಚರಥಗಳ ಗುಹಾಂತರ ದೇವಾಲಯಗಳು: ಯುಧಿಷ್ಟರ, ಭೀಮ, ಅರ್ಜುನ, ನಕುಲ, ಸಹದೇವ ಹಾಗೂ ದ್ರೌಪದಿ ಹೀಗೆ ಪಾಂಡವರಿಗೆ ಮುಡಿಪಾದ ಐದು ರಥಗಳನ್ನು ಕೆತ್ತಲಾಗಿದ್ದು, ಅದ್ಭುತವಾದ ಕೆತ್ತನೆಗೆ ಮೈಮನಗಳು ಪುಳಕಿತಗೊಳ್ಳದೆ ಇರಲಾರವು. ಮತ್ತೊಂದು ಸಂಗತಿಯೆಂದರೆ ಈ ಐದೂ ರಥಗಳು ಒಂದೆ ಬೃಹತ್ ಬಂಡೆಯಿಂದ ಕೆತ್ತಲ್ಪಟ್ಟಿದ್ದರೂ ಸಹ ಒಂದಕ್ಕೊಂದು ಜೋಡಿಸಲ್ಪಟ್ಟದೆ ಇರುವುದು.

ಚಿತ್ರಕೃಪೆ: Venu62

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮಹಾಬಲಿಪುರಂನಲ್ಲಿರುವ ಮತ್ತೊಂದು ಗುಹಾಂತರ ದೇವಾಲಯ, ಕೃಷ್ಣ ಗುಹಾಂತರ ದೇವಾಲಯ. ಭಗವಂತ ಶ್ರೀಕೃಷ್ಣನಿಗೆ ಮುಡಿಪಾದ ಈ ಗುಹಾ ದೇವಾಲಯ ಕೃತಕವಾಗಿದ್ದರೂ ಸಹ ಸಾಕಷ್ಟು ಪ್ರವಾಸಿ ಆಕರ್ಷಣೆಯನ್ನು ಹೊಂದಿದೆ.

ಚಿತ್ರಕೃಪೆ: Thamizhpparithi Maari

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ/ಮಂಟಪವು ತಮಿಳುನಾಡಿನ ಮಹಾಬಲಿಪುರಂನ ಲೈಟ್ ಹೌಸ್ ಬಳಿಯಲ್ಲಿ ಸ್ಥಿತವಿರುವ ಗುಹಾ ಸಂಕೀರ್ಣವಾಗಿದೆ. ರಾಷ್ಟ್ರೀಯ ಮಹತ್ವದ ಸ್ಥಾನ ಪಡೆಸಿರುವ ಈ ಗುಹಾ ಮಂಟಪವು ಮಹಾಬಲಿಪುರಂನ ಇತರೆ ದೇವಾಲಯ ರಚನೆಗಳ ಜೊತೆ ಜೊತೆಯಲ್ಲೆ ನಿರ್ಮಾಣವಾದುದಾಗಿದೆ. ಒಂದು ಹೆಬ್ಬ್ಂಡೆಯಲ್ಲಿ ಕೆತ್ತಲಾಗಿರುವ ಈ ಗುಹಾ ಮಂಟಪದ ಒಳ ಗೋಡೆಗಳ ಮೇಲೆ ನೈಪುಣ್ಯತೆಯಿಂದ ಕೂಡಿದ ವಿವಿಧ ಕೆತ್ತನೆಗಳನ್ನು ಕಾಣಬಹುದು.

ಚಿತ್ರಕೃಪೆ: Thamizhpparithi Maari

ಗುಹಾ ದೇವಾಲಯಗಳು:

ಗುಹಾ ದೇವಾಲಯಗಳು:

ಈ ಗುಹಾ ಮಂಟಪವನ್ನು ಪೂರ್ವಕ್ಕೆ ಮುಖ ಮಾಡಿ ಕೆತ್ತಲಾಗಿದ್ದು, ಮೂರು ಕೋಣೆಗಳನ್ನು ಇದರಲ್ಲಿ ಕಾಣಬಹುದಾಗಿದೆ. 32 ಅಡಿಗಳಷ್ಟು ಉದ್ದ, 15 ಅಡಿಗಳಷ್ಟು ಅಗಲ ಹಾಗೂ 12.5 ಅಡಿಗಳಷ್ಟು ಎತ್ತರವನ್ನು ಈ ಗುಹಾ ಮಂಟಪವು ಹೊಂದಿದೆ. ಹೊರ ಭಾಗವು ಕೆತ್ತಲ್ಪಟ್ಟ ಖಂಬಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿ ಗೋಚರಿಸುತ್ತದೆ. ಮಹಾಬಲಿಪುರಂನಲ್ಲಿ ಕಂಡುಬರುವ ಪ್ರಮುಖ ಗುಹೆಗಳ ಪೈಕಿ ಇದೂ ಸಹ ಒಂದಾಗಿದ್ದು, ಮಹಿಷಾಸುರ ಮರ್ದಿನಿಯಾದ ತಾಯಿ ದುರ್ಗೆಗೆ ಮುಡಿಪಾದ ದೇವಾಲಯವಾಗಿದೆ. ಒಳ ಗೋಡೆಗಳಲ್ಲಿ ಮಹಿಷಾಸುರನ ಜೊತೆ ದುರ್ಗೆಯು ಯುದ್ಧ ಮಾಡುತ್ತಿರುವ ಪ್ರಸಂಗದ ಕೆತ್ತನೆಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Destination8infinity

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X