Search
  • Follow NativePlanet
Share
» »ಈ ತಾಣವ ನೋಡಿಯೇ ಅನುಭವಿಸಬೇಕು

ಈ ತಾಣವ ನೋಡಿಯೇ ಅನುಭವಿಸಬೇಕು

ಚಿಮ್ಮಿನಿ ವನ್ಯಜೀವಿ ಅಭಯಾರಣ್ಯ ಕೇರಳದ ತ್ರಿಸ್ಸೂರು ಜಿಲ್ಲೆ, ಮುಕುಂದಪುರಂ ತಾಲೂಕು ಆವೃತ್ತಿಯಲ್ಲಿ ಬರುತ್ತದೆ. ಶ್ರೀಮಂತ ಸಸ್ಯ ರಾಶಿ ಹಾಗೂ ಉಷ್ಣವಲಯದ ಈ ಅರಣ್ಯ ಪ್ರದೇಶಕ್ಕೆ ಕೊಚ್ಚಿಯಿಂದ ಕೇವಲ 2 ತಾಸುಗಳ ಪ್ರಯಾಣ ಬೆಳೆಸಿದರೆ ಸಾಕು.

By Divya

ಬಹುಶಃ ಐದು ವರ್ಷಗಳೇ ಕಳೆದಿತ್ತು. ನಮ್ಮ ಸಂಭಾಷಣೆಗಳೇನೆ ಇದ್ದರೂ ಮೊಬೈಲ್ ಮೂಲಕವೇ ನಡೆಯುತ್ತಿತ್ತು. ಅದೇನೋ ಮನಸ್ಸು ಆಕೆಯನ್ನು ಒಮ್ಮೆ ಭೇಟಿ ಮಾಡಬೇಕು, ಜೊತೆಯಲ್ಲಿ ಕುಳಿತು ಒಂದಿಷ್ಟು ಮಾತನಾಡಬೇಕು ಎಂದು ಬಯಸಿತು. ಹಾಗಾಗಿ ಕಳೆದ ವಾರ ಅವಳ ಮನೆಗೆ ಹೋಗಿದ್ದೆ. ಹಲವು ವರ್ಷಗಳಿಂದ ದೂರವಿದ್ದ ನಮಗೆ ಹೇಳುವ-ಕೇಳುವ ವಿಚಾರ ಸಾಕಷ್ಟು ಇತ್ತು. ಏಕಾಂತಕ್ಕೆ ಧಕ್ಕೆ ಬಾರದ ಪ್ರದೇಶಗಳ ಹುಡುಕಾಟವನ್ನು ನಮ್ಮ ಮನಸ್ಸು ಆಗಲೇ ಪ್ರಾರಂಭಿಸಿತ್ತು. ಆಸಮಯಕ್ಕೆ ಆಕೆಯ ಅಪ್ಪ, ಚಿಮ್ಮಿನಿ ವನ್ಯಜೀವಿ ಅಭಯಾರಣ್ಯಕ್ಕೆ ಹೋಗಲು ಸಲಹೆ ನೀಡಿದರು. ಕ್ಷಣ ಮಾತ್ರದಲ್ಲೇ ತಲೆ ಅಲ್ಲಾಡಿಸುತ್ತ, ಅಭಯಾರಣ್ಯಕ್ಕೆ ಹೋಗಲು ನಿರ್ಧರಿಸಿದೆವು...

ಈ ತಾಣ ಕೇರಳದ ತ್ರಿಸ್ಸೂರು ಜಿಲ್ಲೆ, ಮುಕುಂದಪುರಂ ತಾಲೂಕು ಆವೃತ್ತಿಯಲ್ಲಿ ಬರುತ್ತದೆ. ಶ್ರೀಮಂತ ಸಸ್ಯ ರಾಶಿ ಹಾಗೂ ಉಷ್ಣವಲಯದ ಈ ಅರಣ್ಯ ಪ್ರದೇಶಕ್ಕೆ ಕೊಚ್ಚಿಯಿಂದ ಕೇವಲ 2 ತಾಸುಗಳ ಪ್ರಯಾಣ ಬೆಳೆಸಿದರೆ ಸಾಕು. ಬೆಂಗಳೂರಿನಿಂದ 447.9 ಕಿ.ಮೀ. ದೂರದಲ್ಲಿರುವುದರಿಂದ ಸುಮಾರು 8 ತಾಸುಗಳ ಕಾಲ ಪ್ರಯಾಣ ಮಾಡಬೇಕು.

Chimmini Wildlife Sanctuary

PC: commons.wikimedia.org

1984ರಲ್ಲಿ ಸ್ಥಾಪನೆಯಾದ ಈ ಅಭಯಾರಣ್ಯ ಸಮುದ್ರ ಮಟ್ಟದಿಂದ 1116 ಮೀ. ಎತ್ತರದಲ್ಲಿದೆ. ಇಲ್ಲಿಯ ಅತ್ಯಂತ ಎತ್ತರದ ಗಿರಿಧಾಮವೆಂದರೆ ಪುಂಡಾ ಪೀಕ್. ಚಿಮ್ಮಿನಿ ಅಭಯಾರಣ್ಯವು ಆನೆ, ಸ್ಲಾತ್ ಕರಡಿ, ಅಳಿಲು, ಸಿಂಹ ಬಾಲದ ಕೋತಿ, ಹುಲಿ ಸೇರಿದಂತೆ ಅನೇಕ ಬಗೆಯ ವನ್ಯಜೀವಿಗಳ ತವರಾಗಿದೆ. ಇಲ್ಲಿ ಸರಿ ಸುಮಾರು 160ಕ್ಕೂ ಹೆಚ್ಚು ಬಗೆಯ ಪಕ್ಷಿ ಸಂಕುಲಗಳನ್ನು ನೋಡಬಹುದು.

ಮನ ಸೆಳೆಯುವ ಸುಂದರ ಹಸಿರು ಸಿರಿಯ ಮಧ್ಯೆ ನದಿಗಳು ಹಾಗೂ ತೊರೆಗಳು ಹರಿಯುತ್ತಿರುತ್ತವೆ. ಇವುಗಳ ನಡುವೆ ನಾದ ಹೊರಡಿಸುವ ಪಕ್ಷಿಗಳು, ಸುಂದರ ಹೂಗಿಡಗಳು ಹಾಗೂ ಆಯುರ್ವೇದದ ಸಸ್ಯಗಳು, ಸುತ್ತ ಹಾರಾಡುವ ವರ್ಣರಂಜಿತ ಚಿಟ್ಟೆಗಳು ಮನಸ್ಸಿಗೆ ಮುದ ನೀಡುತ್ತವೆ. ಸಾಹಸ ಪ್ರಿಯರಿಗಾಗಿ ಚಾರಣ ಮಾಡಲು ಹಲವಾರು ಗುಡ್ಡಪ್ರದೇಶಗಳು ಇಲ್ಲಿವೆ. ಇಲ್ಲಿಗೆ ಬರಲು ಸೂಕ್ತ ಸಮಯವೆಂದರೆ ಅಕ್ಟೋಬರ್‍ನಿಂದ ಮಾರ್ಚ್.

Chimmini Wildlife Sanctuary

PC: commons.wikimedia.org

ತ್ರಿಸ್ಸೂರ್‍ನಿಂದ 40 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಅಂಬಲ್ಲೂರ್-ವರಂದರಪಿಲ್ಲಿ-ಪಲಪಿಲ್ಲಿ ರಸ್ತೆ ಮಾರ್ಗದಲ್ಲಿ ನಾವು ಸಾಗಿದೆವು. ಅಲ್ಲಲ್ಲಿ ನಿಂತು ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವುದು ಹಾಗೂ ಆಗಾಗ ಚಹಾ ಕುಡಿದು ಆರಾಮವಾಗಿ ಬರಲು ಸುಮಾರು 1.5 ತಾಸು ಬೇಕಾಯಿತು. ಅಲ್ಲಿಗೆ ತಲುಪುತ್ತಿದ್ದಂತೆಯೇ ಟಿಕೆಟ್ ಪಡೆದೆವು. ಹಾಗೆಯೇ ಅವರೇ ನುರಿತ ಮಾರ್ಗದರ್ಶಕನನ್ನು ಕಳುಹಿಸಿಕೊಟ್ಟಿದ್ದರು. ಅಲ್ಲಿಯ ಅರಣ್ಯಾಧಿಕಾರಿಗಳೇ ಚಾರಣದ ವ್ಯವಸ್ಥೆ ಹಾಗೂ ಮಾರ್ಗದರ್ಶನವನ್ನು ನೀಡುತ್ತಾರೆ. ಅರಣ್ಯದ ಹೊರವಲಯದಿಂದ ಒಂದು ಸುತ್ತು ಹಾಕಲು ಅರ್ಧದಿನ ಸಾಕಾಗುತ್ತದೆ. ಅದೇ ಅರಣ್ಯದ ಒಳಭಾಗದಲ್ಲಿರುವ ಚಾರಣ ಮಾರ್ಗ, ನದಿ-ತೊರೆಗಳನ್ನು ನೋಡಿ ಸವಿಯಬೇಕೆಂದರೆ ಒಂದು ದಿನದ ಸಮಯವನ್ನು ಕಳೆಯಬೇಕು.

Chimmini Wildlife Sanctuary

PC: commons.wikimedia.org

ನಮ್ಮ ಮಾರ್ಗದರ್ಶಕರೊಂದಿಗೆ ನಮ್ಮ ಚಾರಣ ಪ್ರಾರಂಭವಾಗುತ್ತಿದ್ದಂತೆ ಒಂದು ಬಗೆಯ ಮೌನ ಆವರಿಸಿತ್ತು. ಕೆಲವು ಕುತೂಹಲ ಹಾಗೂ ಅನಿಸಿಕೆಗಳನ್ನು ಗೆಳತಿಯೊಂದಿಗೆ ಹೇಳಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆಯೇ ಮೌನವಾಗಿರಬೇಕು ಎಂದರು ಮಾರ್ಗದರ್ಶಕರು. ಇಲ್ಲಿ ಹೆಚ್ಚು ಸಪ್ಪಳ ಮಾಡಿದರೆ ಪ್ರಾಣಿಗಳಿಗೆ ತೊಂದರೆಯಾಗುವುದಲ್ಲದೆ, ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು ಎಂದರು. ಮರುಕ್ಷಣವೇ ಮೌನದಿಂದಲೇ ಚಾರಣ ಮಾಡಿದೆವು. ಆದರೆ ಹಕ್ಕಿಗಳ ಕಲರವ ಮಾತ್ರ ಚಾರಣದುದ್ದಕ್ಕೂ ಮನ ತಣಿಸುತ್ತಿತ್ತು.

Chimmini Wildlife Sanctuary

PC: commons.wikimedia.org

ಪ್ರಾಣಿಗಳು ಇಲ್ಲೇ ಇದೆಯಾ? ಇಲ್ಲವಾ? ಎನ್ನುವುದನ್ನು ಹೇಗೆ ತಿಳಿಯಬೇಕು ಎನ್ನುವುದನ್ನು ಮಾರ್ಗದರ್ಶಕರು ತಿಳಿಸಿಕೊಟ್ಟರು. ಚಿರತೆಯ ಹೆಜ್ಜೆ ಗುರುತು ನೋಡುತ್ತಿದ್ದಂತೆಯೇ ಕೊಂಚ ಭಯ ಎನಿಸಿತು. ಹಾಗೇ ಮುಂದೆ ಸಾಗುತ್ತಿದ್ದಂತೆ ಹಾರಾಡುತ್ತಿರುವುವ ಚಿಟ್ಟೆಗಳ ರಾಶಿಯೇ ಎದುರಾಯಿತು. ಪಶ್ಚಿಮ ಘಟ್ಟ ಪ್ರದೇಶದಲ್ಲಿಯೇ ಎರಡನೇ ಅತಿ ದೊಡ್ಡ ಚಿಟ್ಟೆಗಳ ವಾಸಸ್ಥಳವಿದು ಎಂದು ಹೇಳಿದರು.

ಬಂಂಡೆಗಳ ಪ್ರದೇಶ, ಅವುಗಳ ಮಧ್ಯೆ ಹರಿದು ಧುಮುಕುವ ಚಿಕ್ಕ ಜಲಪಾತಗಳು ಸುಂದರವಾಗಿ ಕಂಗೊಳಿಸುತ್ತಿದ್ದವು. ಹತ್ತಿರದಲ್ಲಿಯೇ ಕಾಣುತ್ತಿದ್ದ ವಿವಿಧ ಪಕ್ಷಿಗಳ ಪರಿಚಯವೂ ಆಯಿತು. ಸುಮಾರು ಒಂದು ತಾಸುಗಳ ಸಮಯ ನಿರಂತರವಾಗಿ ನಡೆಯುತ್ತಿದ್ದುದ್ದರಿಂದ ಕೊಂಚ ಆಯಾಸವಾಗಿತ್ತು. ಹಾಗೆಯೇ ಮುಂದೆ ಸಾಗಿ ಚಿಮ್ಮಿನಿ ಕೆರೆಯನ್ನು ನೋಡಿಕೊಂಡು ಬಂದೆವು.

Chimmini Wildlife Sanctuary

PC: commons.wikimedia.org

ವನದ ಸೌಂದರ್ಯವನ್ನು ಸವಿದು, ನಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ ಮನೆಕಡೆ ಹೊರೆಟೆವು. ದಾರಿಯುದ್ದಕ್ಕೂ ಐದು ವರ್ಷದಲ್ಲಿ ಹೇಳಿಕೊಳ್ಳಬೇಕಾದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಬಂದೆವು. ಮನೆಗೆ ತಲುಪುವಷ್ಟರಲ್ಲಿ ಸಂಜೆ 4 ಆಗಿತ್ತು. ಹತ್ತಿರದಲ್ಲಿರುವ ಮೂನ್ ಲೈಟ್ ಸೊನಾಟವಿದೆ. ಅಲ್ಲಿ ಬೆಳದಿಂದಳ ಬೆಳಕಿನಲ್ಲಿಯೇ ರಾಫ್ಟಿಂಗ್ ಮಾಡಬಹುದು ಎನ್ನುವುದು ತಿಳಿಯಿತು. ಸುಂದರ ಹಾಗೂ ರೋಮಾಂಚಕವಾಗಿರುವ ಈ ತಾಣಕ್ಕೆ ಹೋಗಲೇ ಬೇಕು ಎನ್ನುವ ಹಂಬಲ ಹೆಚ್ಚುತ್ತಿದೆ. ಮುಂದಿನ ಬಾರಿ ನನ್ನ ಸಹೋದರನ ಜೊತೆ ಇನ್ನೊಮ್ಮೆ ಇಲ್ಲಿಗೆ ಬರಲೇ ಬೇಕು ಎಂಬ ದೃಢ ನಿರ್ಧಾರ ಮಾಡಿದ್ದೇನೆ.

Read more about: ಕೇರಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X