Search
  • Follow NativePlanet
Share
» »ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಅಗಾಧ ಪ್ರಮಾಣದಲ್ಲಿ ಕೊಕ್ಕರೆಗಳು ವಲಸೆ ಬರುವುದರಿಂದ ಕೊಕ್ಕರೆಬೆಳ್ಳೂರು ಎಂಬ ಹೆಸರು ಪಡೆದಿರುವ ಬೆಳ್ಳೂರು ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನೆಲೆಸಿದೆ

By Vijay

ಇಲ್ಲಿ ದೇವರ ಮಕ್ಕಳು ಎಂದರೆ ಮನುಷ್ಯರು ಎಂದರ್ಥ ಹಾಗೂ ಕೊಕ್ಕುಗಳಿಗೆ ಆಸರೆಯಾದ ಎಂದರೆ ಪಕ್ಷಿಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡಿದ ಮನುಷ್ಯರು ಎಂದರ್ಥ. ಇದೊಂದು ಪಕ್ಷಿಧಾಮವೆಂದು ನೀವು ತಿಳಿದಿದ್ದರೆ ಖಂಡಿತ ತಪ್ಪು. ಬದಲಾಗಿ ಇದೊಂದು ಹಳ್ಳಿ. ಆದರೂ ಇಲ್ಲಿ ಪಕ್ಷಿಗಳು ಸಾಕಷ್ಟು ಸ್ವಚ್ಛಂದವಾಗಿ ಹಾಗೂ ಸುರಕ್ಷಿತವಾಗಿ ಮತ್ತು ಅಷ್ಟೆ ಸಹಜವಾಗಿ ಬದುಕುತ್ತವೆ.

ಇಲ್ಲಿ ಕಂಡುಬರುವ ವಿವಿಧ ಪಕ್ಷಿಗಳಿಗೂ ಹಾಗೂ ಇಲ್ಲಿನ ಜನರಿಗೂ ಅದ್ಯಾವ ಜನ್ಮದ ಸಂಬಂಧವೊ ಗೊತ್ತಿಲ್ಲ, ಇಂದಿಗೂ ಇಬ್ಬರು ಕಲೆತು ಬಾಳುತ್ತಾರೆ. ಪಕ್ಷಿಗಳ ಸಹಾಯಕ್ಕೆಂದು ಇಲ್ಲಿನ ಮನುಷ್ಯರು ಸದಾ ಸಿದ್ಧರಿರುತ್ತಾರೆ. ಅದರಂತೆ ಪಕ್ಷಿಗಳೂ ಸಹ ಸ್ವಚ್ಛಂದವಾಗಿ ವಿಹರಿಸುತ್ತವೆ. ಯಾರ ಭಯವಿಲ್ಲದೆ ಪ್ರಕೃತಿಸಹಜವಾಗಿ ಬಾಳುತ್ತವೆ. ಏಕೆಂದರೆ ಅವುಗಳಿಗೂ ಗೊತ್ತು ನಾವಿಲ್ಲಿ ಸುರಕ್ಷಿತವೆಂದು!

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಚಿತ್ರಕೃಪೆ: J.M.Garg

ಇದೊಂದು ಹಳ್ಳಿಯ ಸುಂದರ ಕಥೆ. ಹಲವಾರು ದಶಕಗಳಿಂದ ಈ ಕಥೆ ಸಾಗುತ್ತಲೆ ಇದೆ. ಆ ಕಥೆಯ ಮುಖ್ಯ ಪಾತ್ರಧಾರಿಗಳೆ ಇಲ್ಲಿನ ನಿವಾಸಿಗಳು ಹಾಗೂ ದೂರದೇಶದಿಂದ ಅತಿಥಿ ರೂಪದಲ್ಲಿ ಬರುವ ವಿವಿಧ ಪಕ್ಷಿಗಳು ಅದರಲ್ಲೂ ವಿಶೇಷವಾಗಿ ಕೊಕ್ಕರೆಗಳು. ಪ್ರತಿ ವರ್ಷ ಜನವರಿ-ಫೆಬ್ರುವರಿ ಸಮಯ ವಲಸೆ ಬಂದ ಹಕ್ಕಿಗಳು ಇಲ್ಲಿ ಸಂತಾನೋತ್ಪತ್ತಿಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ.

ಈ ಹಳ್ಳಿಯು ಪ್ರಾಕೃತಿಕವಾಗಿ ಶ್ರೀಮಂತ ಭೂಮಿಯಾಗಿದ್ದು ಹಲವಾರು ಕೆರೆಗಳನ್ನು ಹಾಗೂ ದೊಡ್ಡದಾದ ಗಿಡಮರಗಳನ್ನು ಹೊಂದಿದೆ. ಈ ವಿಶಾಲ ಗಿಡ ಮರಗಳೆ ಹಕ್ಕಿಗಳಿಗೆ ಆಶ್ರಯ ತಾಣಗಳು. ಇವುಗಳ ಮೇಲೆಯೆ ಹಕ್ಕಿಗಳು ಗೂಡುಗಳನ್ನು ನಿರ್ಮಿಸಿ ಸಂತಾನೋತ್ಪತ್ತಿಯ ಕಾರ್ಯದಲ್ಲಿ ತೊಡಗುತ್ತವೆ.

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಚಿತ್ರಕೃಪೆ: Koshy Koshy

ಈ ಸಂದರ್ಭದಲ್ಲಿ ಪಕ್ಷಿಗಳಿಗೆ ಯಾವುದೆ ವಿಧದಲ್ಲಿ ತೊಂದರೆಯಾಗದಂತೆ ಇಲ್ಲಿನ ಜನರು ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಪಕ್ಷಿ ವೀಕ್ಷಣೆಗೆಂದು ಬರುವವರಿಗೆ ಈ ಕುರಿತು ಮೊದಲೆ ತಿಳಿಸಲಾಗುತ್ತದೆ. ಅವುಗಳ ನೈಜತೆಗೆ ಧಕ್ಕೆ ಹಾಗೂ ತೊಂದರೆ ತರದಿರಲು ಮನವಿ ಮಾಡುವುದನ್ನು ಮರೆಯುವುದಿಲ್ಲ.

ಇನ್ನೂ ಇಲ್ಲಿ ಕಂಡುಬರುವ ಕೊಕ್ಕರೆಗಳು, ಗಿಳಿಗಳು ಹಾಗೂ ವೈವಿಧ್ಯಮಯ ನೀರು ಹಕ್ಕಿಗಳು ಬಲು ವಿಶೇಷವಾಗಿ ಕಂಡುಬರುತ್ತವೆ. ಛಾಯಾಗ್ರಾಹಕರಿಗಂತೂ ಇಲ್ಲಿನ ಸುತ್ತಾಟ ಒಂದು ಅಪೂರ್ವ ಅವಕಾಶವೆ ಸರಿ. ಆದರೆ ಪಕ್ಷಿಗಳಿಗೆ ತೊಂದರೆ, ಕಿರಿ ಕಿರಿ ಉಂಟಾಗದಂತೆ ನಿಗದಿತ ಶುಲ್ಕ ಕೊಟ್ಟು ಕೆಲವು ಘಂಟೆಗಳಷ್ಟು ಮಾತ್ರವೆ ಇಲ್ಲಿ ಸುತ್ತಾಡಬಹುದಾಗಿದೆ.

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಚಿತ್ರಕೃಪೆ: Niranj Vaidyanathan

ಈ ಹಳ್ಳಿಯ ಹೆಸರು ಬೆಳ್ಳೂರು. ಕೊಕ್ಕರೆಗಳು ಮೊದ ಮೊದಲು ಈ ಸ್ಥಳವನ್ನು ಆರಿಸಿಕೊಂಡು ಬರಲಾರಂಭಿಸಿದವು. ಕಾಲ ಉರುಳಿದಂತೆ ಹೀಗೆ ವಲಸೆ ಬರುವ ಕೊಕ್ಕರೆಗಳು ಹೆಚ್ಚಾಗಿ ಸುತ್ತಮುತ್ತಲಿನ ಜನರು ಸೇರಿದಂತೆ ಅರಣ್ಯ ಇಲಾಖೆಯ ಗಮನಸೆಳೆಯಿತು. ನಂತರ ಇದನ್ನು ಪಕ್ಷಿಗಳಿಗೆಂದು ಮುಡಿಪಾಗಿಟ್ಟು ಅಭಿವೃದ್ಧಿಪಡಿಸಲಾಯಿತು.

ಹಾಗಾಗಿ ಬೆಳ್ಳೂರು, ಕೊಕ್ಕರೆಬೆಳ್ಳೂರು ಎಂಬ ಹೊಸ ಹೆಸರನ್ನು ಪಡೆದು ಜನಪ್ರೀಯವಾಯಿತು. ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಈ ಗ್ರಾಮವಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮದ್ದೂರಿನವರೆಗೂ ಸಾಗುತ್ತ ಮದ್ದೂರು ಬಲು ಹತ್ತಿರದಲ್ಲಿರುವಾಗಲೆ ಹೆದ್ದಾರಿಯಿಂದ ಎಡ ತಿರುವು ಪಡೆದು ತೈಲೂರು ಮೂಲಕ ಕೊಕ್ಕರೆಬೆಳ್ಳೂರಿಗೆ ತಲುಪಬಹುದಾಗಿದೆ. ಬೆಂಗಳೂರಿನಿಂದ ಒಟ್ಟು ದೂರ 87 ಕಿ.ಮೀ.

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಚಿತ್ರಕೃಪೆ: Sachin Nigam

ಪ್ರಕೃತಿ ಮತ್ತು ಪಕ್ಷಿ ಸಂತಾನ ಒಂದಕ್ಕೊಂದು ಬೆರೆತುಕೊಂಡಿರುವ ವಿಸ್ಮಯವನ್ನು ಇಲ್ಲಿ ಕಾಣಬಹುದು. ಇದು ಬೇರೆ ಪಕ್ಷಿಧಾಮಕ್ಕಿಂತಲೂ ಭಿನ್ನವಾಗಿದೆ, ಹೇಗೆಂದರೆ ಇದು ಪಕ್ಷಿಗಳಿಗೆಂದು ಮಾನವ ನಿರ್ಮಿಸಿದ ಸ್ಥಳವಲ್ಲ ಬದಲಿಗೆ ಇದೊಂದು ಗ್ರಾಮವಾಗಿದ್ದು ಇಲ್ಲಿ ಪೆಲಿಕಾನ್ ಹಾಗೂ ಪೇಂಟೆಡ್ ಸ್ಟಾರ್ಕ್ ಗಳಂತಹ ವಿಶೇಷವಾದ ಪಕ್ಷಿಗಳು ಸ್ವತಃ ತಮ್ಮ ಗೂಡುಗಳನ್ನು ಕಟ್ಟಿಕೊಂಡು ನಿರಂತರವಾಗಿ ನಿರ್ಮಿಸಿಕೊಂಡಿರುವ ಪಕ್ಷಿ ವನವಾಗಿದೆ.

ನೆಟ್ಟ ಕಣ್ಣು ನೆಟ್ಟಂತೆ ಇಡುವ ರಂಗನತಿಟ್ಟು!

ಇಲ್ಲಿನ ಸ್ಥಳಿಯ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು ಅವುಗಳ ರಕ್ಷಣೆ ಮಾಡುತ್ತಿದ್ದಾರೆ ಹಾಗೆಯೇ ಪಕ್ಷಿಗಳೂ ಕೂಡ ಗ್ರಾಮದ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಮೂಲಕ ಈ ಪುಟ್ಟ ಗ್ರಾಮವನ್ನು ಇಡೀ ನಾಡಿನಲ್ಲೇ ಜನಪ್ರಿಯಗೊಳಿಸಿವೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದಾಗಿ ಗ್ರಾಮಕ್ಕೆ ಕನ್ನಡ ಭಾಷೆಯಲ್ಲಿ 'ಕೊಕ್ಕರೆ ಬೆಳ್ಳೂರು' ಎಂಬ ಹೆಸರು ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X