Search
  • Follow NativePlanet
Share
» »ಸ್ವಾದಿ, ಸೋದೆ, ಸೋಂದ ಎಲ್ಲವೂ ಚೆಂದ!

ಸ್ವಾದಿ, ಸೋದೆ, ಸೋಂದ ಎಲ್ಲವೂ ಚೆಂದ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಬಳಿ ಸ್ಥಿತವಿರುವ ಸ್ವಾದಿ, ಸೋದೆ ಅಥವಾ ಸೋಂದ ಕ್ಷೇತ್ರವು ಮಾಧ್ವ ಯತಿವರ್ಯರಾದ ವಾದಿರಾಜರ ಮಠ ಹಾಗೂ ಬೃಂದಾವನಕ್ಕೆ ಹೆಸರುವಾಸಿಯಾಗಿದೆ

By Vijay

ಮಾಧ್ವ ಸಂಪ್ರದಾಯದವರಿಗೆ ಪೂಜ್ಯನೀಯರಾದ ಹಾಗೂ ದಾಸ ಸಾಹಿತ್ಯಕ್ಕೆ ತಮ್ಮದೆ ಆದ ಅಪಾರ ಕಾಣಿಕೆ ಸಲ್ಲಿಸಿರುವ ಮಾಧ್ವ ಯತಿಗಳಲ್ಲೊಬ್ಬರಾದ ಶ್ರೀ ವಾದಿರಾಜರ ದಿವ್ಯ ಬೃಂದಾವನವಿರುವ ಶ್ರೀಕ್ಷೇತ್ರವೆ ಸ್ವಾದಿ. ಇದನ್ನು ಸೋದೆ, ಸೋಂದ ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುತ್ತದೆ.

120 ವರ್ಷಗಳ ತುಂಬು ಜೀವನ ನಡೆಸಿದ ವಾದಿರಾಜ ಯತಿವರ್ಯರ ಆರಾಧ್ಯ ದೈವ ಹಯವದನ ಅಥವಾ ಹಯಗ್ರೀವ. ತಮ್ಮ ಎಂಟನೇಯ ವಯಸ್ಸಿನಲ್ಲೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ಈ ಮಹಾನುಭಾವರು 112 ವರ್ಷಗಳ ಕಾಲ ಸತತವಾಗಿ ದೈವ ಚಿಂತನೆ, ಹರಿ ಕೀರ್ತನೆ, ಧರ್ಮಪ್ರಸಾರ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.

ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಉಡುಪಿ ಜಿಲ್ಲೆಯ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನಿಸಿದ್ದ ವಾದಿರಾಜರು, ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟವರು ಹಾಗೂ ಇನ್ನೊಂದು ರೋಚಕ ವಿಷಯವೆಂದರೆ ಕುಡುಮ ಎಂದು ಕರೆಯಲ್ಪಡುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳ ಎಂದು ಹೆಸರು ಬದಲಿಸಿದವರು ಇವರು.

ಇವರ ಬೃಂದಾವನವಿರುವ ಶ್ರೀಕ್ಷೇತ್ರವೆ ಸೋದೆ ಅಥವಾ ಸ್ವಾದಿ ಕ್ಷೇತ್ರ. ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಸ್ಥಿತವಿದೆ. ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಸಾಕಷ್ಟು ಪವಿತ್ರವಾದ ಕ್ಷೇತ್ರ ಇದಾಗಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಗುಡಿಗಳಿವೆ

ಗುಡಿಗಳಿವೆ

ಸ್ವಾದಿ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Sritri

ಪ್ರಮುಖವಾದದ್ದು

ಪ್ರಮುಖವಾದದ್ದು

ಇಲ್ಲಿರುವ ವಾದಿರಾಜರ ಮಠವು ಪ್ರಮುಖ ಕೇಂದ್ರವಾಗಿದ್ದು ಈ ಮಠವನ್ನು ಭಾವಿ ಸಮೀರ ಎಂದು ಕರೆಯಲ್ಪಟ್ಟಿದ್ದ ವಾದಿರಾಜರು ಪ್ರತಿಷ್ಠಾಪಿಸಿದ್ದಾರೆ. ಹಲವು ವರ್ಷಗಳ ಧ್ಯಾನದ ಬಳಿಕ ವಾದಿರಾಜರು ಸಮಾಧಿಯನ್ನು ಸ್ವೀಕರಿಸಿ ಆ ಸ್ಥಳದಲ್ಲೆ ಇಂದು ಬೃಂದಾವನವಿರುವುದನ್ನು ಕಾಣಬಹುದು.

ಎಲ್ಲವೂ ಮೂಡಿಪಾಗಿವೆ

ಎಲ್ಲವೂ ಮೂಡಿಪಾಗಿವೆ

ಮೂಲತಃ ವಾದಿರಾಜರ ಮಠದಲ್ಲಿ ಒಟ್ಟು ಐದು ಬೃಂದಾವನಗಳಿವೆ. ಮಧ್ಯದಲ್ಲಿರುವ ಬೃಂದಾವನವು ವಾದಿರಾಜರದ್ದಾಗಿದ್ದರೆ ಅದರ ಎಡ ಹಾಗೂ ಬಲಕ್ಕಿರುವ ಎರಡೆರಡು ಬೃಂದಾವನಗಳು ಬ್ರಹ್ಮ, ವಿಷ್ಣು, ಶಿವ ಹಾಗೂ ವಾಯುವನ್ನು ಪ್ರತಿನಿಧಿಸುತ್ತವೆ.

ಜಾರಿಗೆ ತಂದವರು

ಜಾರಿಗೆ ತಂದವರು

ನಿಮಗೆಲ್ಲ ಉಡುಪಿಯಲ್ಲಿ ಅಷ್ಟ ಮಠಗಳಿದ್ದು ಅಲ್ಲಿ ಪರ್ಯಾಯ ವ್ಯವಸ್ಥೆಯು ಕಟ್ಟುನಿಟ್ಟಾಗಿ ಮೊದಲಿನಿಂದಲೂ ಜಾರಿಯಲ್ಲಿರುವ ವಿಷಯ ಗೊತ್ತಿರಬೇಕಲ್ಲವೆ. ಆದರೆ ನಿಮಗಿದು ಗೊತ್ತೆ ಆ ಒಂದು ವ್ಯವಸ್ಥೆಯನ್ನು ಉಡುಪಿಯಲ್ಲಿ ಜಾರಿಗೆ ತಂದವರು ವಾದಿರಾಜರೆ ಎಂದು. ಮಠಗಳ ಶಿಸ್ತನ್ನು ಪಾಲಿಸುವ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಯತಿಗಳು ಜಾರಿಗೆ ತಂದರು ಎಂಬ ಮಾತಿದೆ. ಉಡುಪಿ ಕೃಷ್ಣ ಮಠ.

ಚಿತ್ರಕೃಪೆ: Shravan Kamath94

ಬಲು ಮಹತ್ವದ್ದು

ಬಲು ಮಹತ್ವದ್ದು

ಭೂತರಾಜರ ಗುಡಿ ಇಲ್ಲಿರುವ ಇನ್ನೊಂದು ಧಾರ್ಮಿಕ ತಾಣವಾಗಿದ್ದು ಭೂತರಾಜರು ಈ ಪವಿತ್ರ ಭೂಮಿಯ ರಕ್ಷಕರು ಎನ್ನಲಾಗಿದೆ. ಇಂದಿಗೂ ನಿರ್ದಿಷ್ಟ ಸಮಯದ ನಂತರ ಭೂತರಾಜರ ಸನ್ನಿಧಿಯೊಳಗ್ಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ. ತೆಂಗಿನಕಾಯಿಗಳನ್ನು ಕಾಣಿಕೆಯಾಗಿ ಭೂತರಾಜರಿಗೆ ಅಪ್ರಿಸಲಾಗುತ್ತದೆ. ಭೂತರಾಜರ ದರ್ಶನ ಪಡೆದ ತರುವಾಯ ಭಕ್ತರು ವಾದಿರಾಜ ಮಠದೆಡೆ ಸಾಗುತ್ತಾರೆ.

ದೇವಾಲಯ

ದೇವಾಲಯ

ಇಲ್ಲಿರುವ ಇನ್ನೊಂದು ಧಾರ್ಮಿಕ ಮಹತ್ವದ ದೇವಾಲಯ ಇದಾಗಿದೆ. ವಿಷ್ಣು ಹಾಗೂ ಲಕ್ಷ್ಮಿದೇವಿಗೆ ಮುಡಿಪಾದ ದೇವಾಲಯ ಇದಾಗಿದ್ದು ಬೃಹತ್ತಾದ ಧ್ವಜಗಂಬವನ್ನು ಹೊಂದಿದೆ. ಅದರ ಮೇಲೆ ಮುಖ್ಯ ದೇವರುಗಳ ವಾಹನಗಳಾದ ಗರುಡ ಹಾಗೂ ಬಾತು ಇರುವುದನ್ನು ಕಾಣಬಹುದು.

ಪುಷ್ಕರಿಣಿಗಳು

ಪುಷ್ಕರಿಣಿಗಳು

ಮಠದ ಆವರಣದಲ್ಲಿ ಎರಡು ಕಲ್ಯಾಣಿಗಳಿದ್ದು ಅವುಗಳು ಧವಳಗಂಗಾ ಹಾಗೂ ಶೀತಲಗಂಗಾ ಎಂಬ ಹೆಸರುಗಳಿಂದ ಕರೆಯಲ್ಪಡುತ್ತವೆ. ಎರಡೂ ಕಲ್ಯಾಣಿಯ ನೀರು ಬಲು ಪವಿತ್ರವಾದುದೆಂದು ನಂಬಲಾಗುತ್ತದೆ. ಈ ಪವಿತ್ರ ನೀರಿನಲ್ಲಿನ ಸ್ನಾನವು ಪಾಪ ಕಮ್ರಗಳ ಜೂತೆಗೆ ಆರೋಗ್ಯದ ತೊಂದರೆಗಳನ್ನೂ ಸಹ ನಾಶಪಡಿಸುತ್ತವೆ ಎನ್ನಲಾಗಿದೆ. ಈ ಎರಡೂ ಕೊಳಗಳಲ್ಲಿನ ನೀರು ಭಾರತದ ಎಲ್ಲ ನದಿಗಳ ಸಂಗಮದ ನೀರು ಎನ್ನಲಾಗುತ್ತದೆ.

ಚಿತ್ರಕೃಪೆ: Sritri

ಎರಡರಲ್ಲಿ ಮಾತ್ರ ಅವಕಾಶ

ಎರಡರಲ್ಲಿ ಮಾತ್ರ ಅವಕಾಶ

ಧವಳಗಂಗಾ ಕಲ್ಯಾಣಿಯು ಮೂರು ಮೂಲೆಗಳನ್ನು ಹೊಂದಿದ್ದು ಅದರಲ್ಲಿ ಎರಡು ಮೂಲೆಗಳನ್ನು ಮಾತ್ರವೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿಡಲಾಗಿದೆ. ಮೂರನೇಯ ಮೂಲೆಗೆ ಪ್ರವೇಶಿಸಲು ಅನುಮತಿಯಿಲ್ಲ ಹಾಗೂ ಈ ಮೂಲೆಯು ಭೂತರಾಜರು ಮಾತ್ರವೆ ಉಪಯೋಗಿಸುತ್ತಾರೆಂಬ ಪ್ರತೀತಿಯಿದೆ. ಇನ್ನುಳಿದಂತೆ ವಾದಿರಾಜರಿಂದ ಪ್ರತಿಷ್ಠಾಪಿತ ಚಂದ್ರಮೌಳೀಶ್ವರ, ಆಂಜನೇಯ, ವೇಣುಗೋಪಾಲಸ್ವಾಮಿಯರ ಸನ್ನಿಧಿಗಳು ಹಾಗೂ ಮಠದ ಆವರಣದಲ್ಲಿ ವೇದವ್ಯಾಸರ ಚಿಕ್ಕ ದೇಗುಲ ಮತ್ತು ನಾಗಗಳಿಗೆ ಮುಡಿಪಾದ ನಾಗವನವಿದೆ.

ಶಲ್ಮಲ ನದಿ

ಶಲ್ಮಲ ನದಿ

ಮಠದಿಂದ ಐದು ಕಿ.ಮೀ ದೂರದಲ್ಲಿ ಶಲ್ಮಲ ನದಿ ಹರಿದಿದ್ದು ಅದರ ತಟದ ಮೇಲೆ ತಪೋವನವಿದೆ. ವಾದಿರಾಜರು ಈ ಕ್ಷೇತ್ರಕ್ಕೆ ಬಂದಾಗ ಈ ತಟದ ಮೇಲೆ ಕುಳಿತು ಧ್ಯಾನ ಮಗ್ನರಾಗುತ್ತಿದ್ದರು. ದಂತಕಥೆಯಂತೆ, ಧ್ಯಾನಿಸಿದ ನಂತರ ಯತಿಗಳು ಕಡಲೆ ಬೇಳೆಯಿಂದ ಸಿಹಿಯಾದ ಖಾದ್ಯವನ್ನು ತಯಾರಿಸಿ ತಲೆಯ ಮೇಲೆ ಹಿಡಿದುಕೊಂಡು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದರು. ವಿಷ್ಣು ಕುದುರೆಯ ರೂಪದಲ್ಲಿ ಬಂದು ಆ ನೈವೇದ್ಯವನ್ನು ಸ್ವೀಕರಿಸುತ್ತಿದ್ದನು. ಆ ಸಿಹಿ ಖಾದ್ಯವೆ ಹಯಗ್ರೀವ ಎಂದು ಕರೆಯಲ್ಪಡುತ್ತದೆ. ಅತ್ಯಂತ ಪ್ರಶಾಂತತೆಯಿಂದ ಕೂಡಿದ ಸ್ಥಳ ಇದಾಗಿದೆ. ಮಠದ ದರ್ಶನದ ನಂತರ ಜೀಪುಗಳನ್ನು ಬಾಡಿಗೆಗೆ ಪಡೆದು ಈ ಸ್ಥಳಕ್ಕೆ ಭೇಟಿ ನೀಡಬಹುದು. ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹಾಗೂ ರಭಸ ಇಲ್ಲಿರುವುದರಿಂದ ಹೋಗಲು ಸಾಧ್ಯವಿಲ್ಲ.

ಅದ್ವೈತ ಪರಂಪರೆ

ಅದ್ವೈತ ಪರಂಪರೆ

ಶಲ್ಮಲ ನದಿ ತಟದ ಮೇಲೆ ಇನ್ನೊಂದು ಧಾರ್ಮಿಕ ತಾಣವು ನೆಲೆಸಿದ್ದು ಇದು ಅದ್ವೈತ ಪರಂಪರೆಗೆ ಒಳಪಟ್ಟಿದೆ. ಅದೆ ಸ್ವರ್ಣವಲ್ಲಿ ಮಠ. ಇದರ ಸುತ್ತಮುತ್ತಲಿನ ಹಸಿರು ಕಾಂತಿಯು ಮೈಮನವನ್ನು ಪ್ರಸನ್ನತೆಯ ಭಾವದಲ್ಲಿ ತೇಲಾಡಿಸುತ್ತದೆ. ಸೋಂದವು ಬೆಂಗಳೂರಿನಿಂದ 422 ಕಿ.ಮೀ ಹಾಗೂ ಶಿರಸಿಯಿಂದ 20 ಕಿ.ಮೀ ಗಳಷ್ಟು ದೂರದಲ್ಲಿದೆ. ತೆರಳಲು ಸಾಕಷ್ಟು ಬಸ್ಸುಗಳು ಎರಡೂ ಸ್ಥಳಗಳಿಂದ ದೊರೆಯುತ್ತದೆ. ಇಲ್ಲವಾದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಾಡಿಗೆ ಕಾರುಗಳ ಮೂಲಕವಾಗಿಯೂ ಸ್ವಾದಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X