Search
  • Follow NativePlanet
Share
ಮುಖಪುಟ » ಸ್ಥಳಗಳು» ಸಿಕ್ಕಿಂ

ಸಿಕ್ಕಿಂ - ನಯನಮನೋಹರ ಪರ್ವತಗಳು, ಆಕರ್ಷಣೀಯ ತಾಣಗಳು

ಆವಾಗಾವಾಗ ಪ್ರವಾಸ ಮಾಡುವುದು ನಿಜವಾಗಿಯೂ ಚೈತನ್ಯ ಕೊಡುವ ಅನುಭವ. ಕೇವಲ ದೇಹಕ್ಕಷ್ಟೆ ಅಲ್ಲ, ಮನಸ್ಸಿಗೂ ಕೂಡ ನೆಮ್ಮದಿ, ಸಂತೋಷ ಕರುಣಿಸುವ ಆಯಾಮ. ಗೊತ್ತಿರುವ ಅಥವಾ ಗೊತ್ತಿರದ ಯಾವುದೆ ಸ್ಥಳವಿರಲಿ ಪ್ರವಾಸ ಕೈಗೊಂಡಾಗ ಸಿಗುವ ಖುಶಿ ಅಷ್ಟಿಷ್ಟಲ್ಲ...

ಇನ್ನೂ ಭೂಲೋಕದ ಸ್ವರ್ಗವೆಂದೆ ಬಣ್ಣಿಸಲ್ಪಟ್ಟ ಸ್ಥಳಕ್ಕೆ ಹೋಗುವುದೆಂದರೆ ಕಲ್ಪಿಸಿಕೊಳ್ಳಿ, ಮೈಮನ ಪುಳಕಿತಗೊಂಡು ರೋಮಾಂಚನದ ಅನುಭೂತಿಯಲ್ಲಿ ತೇಲಾಡಿದಂತೆ ಭಾಸವಾಗುತ್ತದೆ. ಹಿಮಚ್ಛಾದಿತ ಸುಂದರ ಪರ್ವತ ಶೃಂಗಗಳು, ಸುತ್ತಲೂ ಪ್ರಕೃತಿ ಕನ್ಯೆಯ ಕೌಮಾರ್ಯತೆಯನ್ನು ಪ್ರದರ್ಶಿಸುವ ನಿತ್ಯಹರಿದ್ವರ್ಣದ ಹಸಿರು, ದುಂಬಿಗಳಲ್ಲಿ ಗೊಂದಲವನ್ನುಂಟು ಮಾಡುವ ವಿವಿಧ ಚಿತ್ತಾರದ ನಳನಳಿಸುತ್ತಿರುವ ಹೂವುಗಳು, ಯಾವುದೆ ಕೃತಕ ಉಪಕರಣಗಳ ಸಹಾಯ ಪಡೆಯದೆ ಅವುಗಳಿಗಿಂತಲೂ ಹೆಚ್ಚು ಪರಿಶುದ್ಧವಾದ ನೀರನ್ನು ಹೊಂದಿರುವ ನೈಸರ್ಗಿಕ ಜಲಪಾತ್ರಗಳು, ಭೇಟಿ ನೀಡಿದ ಪ್ರತಿಯೊಬ್ಬ ಪ್ರವಾಸಿಗನಿಗೂ ಇದು ಸ್ವರ್ಗಕ್ಕಿಂತ ಕಮ್ಮಿಯೆನಲ್ಲ ಎಂದು ಅತಿ ಹೆಮ್ಮೆಯಿಂದ ಹೇಳುತ್ತಿರುವಂತೆ ಗೋಚರಿಸುತ್ತದೆ.  

ಸರಿ..ಇಷ್ಟೊಂದೆಲ್ಲ ಹೇಳಿದ ಮೇಲೆ, ಅಂತಹ ಸ್ಥಳ ಯಾವುದಪ್ಪಾ ಎಂಬ ಪ್ರಶ್ನೆ ಏಳುವುದು ಸಹಜ....ಅಲ್ಲವೆ. ಹೌದು, ನಾವು ಮಾತನಾಡುತ್ತಿರುವುದು ಹಿಮಾಲಯದ ಒಡಲಲ್ಲಿ ಪುಟ್ಟ ಮಗುವಿನಂತೆ ಆಟವಾಡುತ್ತಾ ಕುಳಿತಿರುವ ಸಿಕ್ಕಿಂ ರಾಜ್ಯ.ಭಾರತದ ಅತಿ ಸುಂದರ ರಾಜ್ಯಗಳಲ್ಲಿ ಒಂದಾಗಿರುವ ಸಿಕ್ಕಿಂ ತನ್ನ ಸಹಜ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿರುವ, ದೇವರು ನೀಡಿರುವ ವರದಾನವೆ ಹೌದು. ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಲ್ಲಿರುವ ಸುಂದರ ಸ್ಥಳಗಳಿಗೆ ಭೇಟಿ ನೀಡಿದರೆ, ಆ ದೇವರ ಸೃಷ್ಟಿಯ ಅಭೂತಪೂರ್ವ ಅನುಭವ ನಿಮ್ಮದಾಗಲಿದೆ.ಹಾಗಾದರೆ...

ತಡವೇಕೆ, ಈ ಸುಂದರ ಪುಟ್ಟ ರಾಜ್ಯದ ಕುರಿತು ಹಲವು ವಿಷಯಗಳನ್ನು ಸಂಕ್ಷೀಪ್ತವಾಗಿ ಇಲ್ಲಿ ಓದಿ ತಿಳಿಯಿರಿ ಹಾಗು ನಿಮ್ಮವರಿಗೂ ತಿಳಿಸಿರಿ.   

ಸಿಕ್ಕಿಂ ರಾಜ್ಯದ ಭೌಗೋಳಿಕತೆ

ಹಿಮಾಲಯದ ಗಿರಿ ಶೃಂಗಗಳಲ್ಲಿ ನೆಲೆಸಿದೆ ಪುಟ್ಟ ರಾಜ್ಯ ಸಿಕ್ಕಿಂ. ಇಲ್ಲಿ ಕಂಡುಬರುವ ಅನೇಕ ಸ್ಥಳಗಳು ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿದ್ದು, ಸಮುದ್ರ ಮಟ್ಟದಿಂದ ಸುಮಾರು 280 ಮೀ. ನಿಂದ ಹಿಡಿದು 8,585 ಮೀ ವರೆಗೆ ಎತ್ತರವಾಗಿವೆ. ಇಲ್ಲಿರುವ ಅತಿ ಎತ್ತರದ ಪ್ರದೇಶ ಕಂಚನ್ ಜುಂಗಾ ಪರ್ವತ. ಇದು ಜಗತ್ತಿನಲ್ಲಿಯೆ ಮೂರನೇಯ ಅತಿ ಎತ್ತರದ ಗಿರಿ ಶೃಂಗ. ಸಿಕ್ಕಿಂ ರಾಜ್ಯವು ತನ್ನ ಪೂರ್ವ, ಪಶ್ಚಿಮ ಹಾಗು ಉತ್ತರಕ್ಕೆ ಕ್ರಮವಾಗಿ ಭೂತಾನ್, ನೇಪಾಳ ಮತ್ತು ಟಿಬೇಟಿಯನ್ ಪ್ರಸ್ತಭೂಮಿಯಿಂದ ಸುತ್ತುವರೆದಿದೆ.

ಈ ರಾಜ್ಯದಲ್ಲಿ 28 ಗಿರಿಶೃಂಗಗಳು, 227 ಅತಿ ಎತ್ತರದಲ್ಲಿ ರೂಪಗೊಂಡಿರುವ ಕೆರೆಗಳು ಮತ್ತು 80 ಹಿಮನದಿಗಳನ್ನು ಕಾಣಬಹುದು. ಇಷ್ಟೆ ಅಲ್ಲ, ಇವುಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಏನಿಲ್ಲವೆಂದರೂ 100 ನದಿಗಳು, ಉಪನದಿಗಳು ಹಾಗು ಅನೇಕ ಬಿಸಿ ನೀರಿನ ಬುಗ್ಗೆಗಳು ಕೂಡ ತಮ್ಮ ಪಾತ್ರವನ್ನು ಶೃದ್ಧಾಭಕ್ತಿಯಿಂದ ನಿರ್ವಹಿಸುತ್ತಿವೆ. ಇಲ್ಲಿ ಕಂಡುಬರುವ ಬಿಸಿ ನೀರಿನ ಬುಗ್ಗೆಗಳು ವಿಶೇಷವೆಂದೆ ಹೇಳಬಹುದು. ಏಕೆಂದರೆ ಜನಪ್ರಿಯ ನಂಬಿಕೆಗಳ ಪ್ರಕಾರ, ಈ ನೀರಿನಲ್ಲಿ ಔಷಧಿಯುಕ್ತ ಗುಣಗಳಿವೆ ಹಾಗು ಸಾಮಾನ್ಯವಾಗಿ ಇದರ ತಾಪಮಾನವು 50°C ಆಗಿರುತ್ತದೆ.

ಇನ್ನೂ ಹೆಚ್ಚಿನ ಮಟ್ಟಿಗೆ ಹೇಳ ಬೇಕೆಂದರೆ ಸಿಕಿಂ ರಾಜ್ಯದ ಮೂರನೇಯ ಒಂದು ಭಾಗವು ದಟ್ಟವಾದ ಕಾಡು, ಅಲ್ಲಲ್ಲಿ ಹರಿಯುವ ಹಿಮ ಮಿಶ್ರಿತ ನೀರಿನಿ ತೊರೆಗಳಿಂದ ಆವೃತವಾಗಿದೆ. ಈ ಎಲ್ಲ ಪುಟ್ಟ ಪುಟ್ಟ ಕೆರೆ, ತೊರೆಗಳು ಅಂತಿಮವಾಗಿ "ಸಿಕ್ಕಿಂನ ಜೀವನ ರೇಖೆ" ಎಂದೆ ಹೇಳಲಾಗುವ ತೀಸ್ತಾ ನದಿಯಲ್ಲಿ ಐಕ್ಯಗೊಳ್ಳುತ್ತವೆ.

ಹವಾಮಾನ

ಎಷ್ಟು ಸುಂದರ ಸಿಕ್ಕಿಂ ರಾಜ್ಯವಿದೆಯೊ, ಅಷ್ಟೆ ಸುಂದರ ಇಲ್ಲಿನ ಹವಾಗುಣ ಕೂಡ. ಭಾರತದಲ್ಲಿ ಪ್ರತಿ ವರ್ಷ ನಿರಂತರವಾಗಿ ಹಿಮಪಾತವಾಗುವ ಕೆಲವೆ ಕೆಲವು ಪ್ರದೇಶಗಳಲ್ಲಿ ಸಿಕ್ಕಿಂ ಕೂಡ ಒಂದು. ಆದ್ದರಿಂದ ಇಲ್ಲಿನ ಜನರು ಯಾವಾಗಲೂ ಒಂದು ಬಗೆಯ ಹಿತಕರವಾದ ವಾತಾವರಣವನ್ನು ಅನುಭವಿಸುತ್ತಾರೆ. ಈ ರಾಜ್ಯದ ಉತ್ತರಭಾಗದ ತುಂದ್ರಾ ಭಾಗದಿಂದ ವಾತಾವರಣ ಬದಲಾವಣೆಗೊಳ್ಳುತ್ತಾ, ದಕ್ಷಿಣ ಭಾಗದಲ್ಲಿ ಉಪಷ್ಣವಲಯದ ಹವಾಗುಣವನ್ನು ಸೃಷ್ಟಿಸುತ್ತದೆ. ತುಂದ್ರಾ ಭಾಗದಲ್ಲಿ ವರ್ಷದ ನಾಲ್ಕು ತಿಂಗಳ ಕಾಲ, ತಾಪಮಾನವು 0°C ಗೆ ಕುಸಿದು ಹಿಮ ಬೀಳುವುದು ಸಾಮಾನ್ಯವಾಗಿದೆ.

ಇಲ್ಲಿನ ವಾತಾವರಣ ಯಾವಾಗಲೂ ಹಿತಕರವಾಗಿರುವುದಕ್ಕೆ ಮತ್ತೊಂದು ಮುಖ್ಯ ಅಂಶವೆಂದರೆ ಇಲ್ಲಿನ ಗರಿಷ್ಠ ತಾಪಮಾನವು ಬೇಸಿಗೆಯಲ್ಲು ಕೂಡ ಎಂದಿಗೂ 28°C ದಾಟದೆ ಇರುವುದು. ಇಲ್ಲಿನ ಮಳೆಗಾಲ ಕೊಂಚ ಅಪಾಯಕಾರಿ ಎಂದೆ ಹೇಳಬಹುದು. ಏಕೆಂದರೆ ಈ ಸಂದರ್ಭದಲ್ಲಿ ಇಲ್ಲಿನ ಪ್ರದೇಶಗಳು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತವೆ ಹಾಗು ಇದರ ಪರಿಣಾಮವಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿರುತ್ತದೆ.  

ಸಿಕ್ಕಿಂನ ಹಲವು ನಾಮಗಳು, ವಿಭಾಗಗಳು ಮತ್ತು ಜನಸಂಖ್ಯೆ...

ಕೇಳಿದಾಗ ಅಚ್ಚರಿ ಎನಿಸಿದರೂ ಸಿಕ್ಕಿಂ ರಾಜ್ಯಕ್ಕೆ ಬೇರೆ ಬೇರೆ ಹೆಸರುಗಳಿವೆ. ಇಲ್ಲಿನ ಲೆಪ್ಚಾ(ಸ್ಥಳೀಯ ಒಂದು ಸಮುದಾಯದ ಹೆಸರು)ಗಳು ಇದನ್ನು ನೈ-ಮೈ-ಎಲ್ ಎಂದು ಕರೆಯುತ್ತಾರೆ. ಇದರ ಅರ್ಥ 'ಸ್ವರ್ಗ' ಎಂದಾಗುತ್ತದೆ. ಮತ್ತೊಂದು ಸಮುದಾಯವಾದ ಲಿಂಬುಗಳು ಇದನ್ನು 'ಸು ಖಿಮ್' (ಅಂದರೆ ಹೊಸ ಮನೆ) ಎಂದು ಸಂಭೋದಿಸುತ್ತಾರೆ. ಇನ್ನು ಭೂತಿಯಾ ಪಂಗಡದವರು 'ಬಚ್ಚಿಟ್ಟ ಅಕ್ಕಿಯ ಕಣಿವೆ' ಎಂಬರ್ಥ ಕೊಡುವ ಶಬ್ದವಾದ 'ಬೆಮುಲ್ ಡಿಮಾಝೊಂಗ್' ಎಂಬ ಹೆಸರಿನಿಂದ ಈ ರಾಜ್ಯವನ್ನು ಕರೆಯುತ್ತಾರೆ.

ಈ ರಾಜ್ಯವು ಪೂರ್ವ, ಪಶ್ಚಿಮ, ಉತ್ತರ ಹಾಗು ದಕ್ಷಿಣ ಸಿಕ್ಕಿಂ ಎಂದು ವಿಭಜನೆಗೊಂಡಿದ್ದು, ಕ್ರಮವಾಗಿ ಗ್ಯಾಂಗ್ಟಾಕ್, ಗೇಯ್ಝಿಂಗ್, ಮಂಗನ್ ಮತ್ತು ನಾಮ್ಚಿ ಅವುಗಳ ರಾಜಧಾನಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ರಾಜ್ಯದ ಒಟ್ಟಾರೆ ಜನಸಂಖ್ಯೆ ಸುಮಾರು 607,000. ಗೋವಾದ ತರುವಾಯ ಈ ರಾಜ್ಯವೇ ದೇಶದ ಎರಡನೇಯ ಚಿಕ್ಕ ರಾಜ್ಯವಾಗಿದ್ದು, ಜನಸಂಖ್ಯೆ ದೃಷ್ಟಿಯಿಂದ ಅತಿ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯವಾಗಿದೆ.

ಸಿಕ್ಕಿಂ ರಾಜ್ಯದಲ್ಲಿ ನೋಡಬಹುದಾದುದು...

ಸುಂದರ ಹಾಗು ಪುಟ್ಟ ರಾಜ್ಯವಾದ ಸಿಕ್ಕಿಂ ತನ್ನ ಒಡಲಿನಲ್ಲಿ ಅನೇಕ ನಯನ ಮನೋಹರ ಪ್ರವಾಸಿ ತಾಣಗಳನ್ನು ಹುದುಗಿಸಿಟ್ಟುಕೊಂಡಿದೆ. ಸಿಕ್ಕಿಂ ರಾಜ್ಯದ ಪೋಷಕನೆಂದೆ ಬಿಂಬಿತವಾದ ಸಂತ ಗುರು ಪದ್ಮಸಂಭವರ ಅತಿ ಎತ್ತರವಾದ ಪ್ರತಿಮೆಯನ್ನು ನಾಮ್ಚಿಯಲ್ಲಿ ಕಾಣಬಹುದು. ರಾಜ್ಯದ ಅಧಿಕೃತ ಹೂವೆನ್ನಲಾದ ರೊಡೋಡೆಂಡ್ರಾನ್ (ದೊಡ್ಡ ಹೂ ಬಿಡುವ ಗುಲ್ಮಾ) ಧಾಮವು ಅತ್ಯಂತ ಸುಂದರ ಪ್ರದೇಶವಾಗಿ ಪ್ರವಾಸಿಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಜಗತ್ತಿನ ಮೂರನೇಯ ಅತಿ ಎತ್ತರದ ಗಿರಿ ಶೃಂಗ ಕಂಚನ್ ಜುಂಗಾ ತನ್ನ ವಿಶೀಷ್ಟತೆಯಿಂದ ಮನ ಸೆಳೆಯುತ್ತದೆ. ಇವುಗಳಲ್ಲದೆ, ಧಾರ್ಮಿಕವಾಗಿ ಅನೇಕ ಬೌದ್ಧ ಮಠಗಳು, ದೇವಾಲಯಗಳು ಧಾರ್ಮಿಕ ಶೃದ್ಧೆಯುಳ್ಳ ಪ್ರವಾಸಿಗರನ್ನು ಆಕರ್ಷಿಸಿದರೆ, ನಿತ್ಯಹರಿದ್ವರ್ಣದಿಂದ ಕೂಡಿದ ಸುಂದರ ಕಣಿವೆಗಳು, ಝುಳು ಝುಳು ಹರಿಯುವ ನೀರಿನ ತೊರೆಗಳು, ಔಷಧಿಯುಕ್ತ ಗುಣಗಳುಳ್ಳ ಬಿಸಿ ನೀರಿನ ಬುಗ್ಗೆಗಳು, ಸಹಜ ಪ್ರಕೃತಿ ಸೌಂದರ್ಯ, ಗಿರಿ ಪರ್ವತಗಳು, ಪ್ರಕೃತಿ ಪ್ರಿಯರನ್ನು ಎರಡೂ ಕೈಗಳಿಂದ ಸ್ವಾಗತಿಸುತ್ತ ಅಪ್ಪಿಕೊಳ್ಳುತ್ತದೆ.

ಖಾದ್ಯ ಮತ್ತು ಉತ್ಸವಗಳು...

ಇಷ್ಟೆಲ್ಲ ಹೇಳಿದ ಮೇಲೆ ಇಲ್ಲಿನ ಖಾದ್ಯ ಹಾಗು ಉತ್ಸವಗಳ ಕುರಿತು ಮಾತನಾಡದೆ ಇದ್ದರೆ ಹೇಗೆ? ಸಿಕ್ಕಿಂ ರಾಜ್ಯವು ತನ್ನದೆ ಆದ ವಿಶೀಷ್ಟ ಸಂಕೃತಿ ಹಾಗು ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಬಹುಪಾಲು ಜನರು ಮುಖ್ಯವಾಗಿ ತಮ್ಮ ಆಹಾರದಲ್ಲಿ ಅನ್ನವನ್ನು ಬಳಸುತ್ತಾರೆ. ಇಲ್ಲಿನ ಕೆಲವು ಸಾಂಪ್ರದಾಯಿಕ ಖಾದ್ಯಗಳೆಂದರೆ, ಮೊಮೊಸ್, ಚೊವ್ಮೆನ್, ವಂಟೊನ್, ಫಾಕ್ತು, ಗ್ಯಾಥುಕ್ ಅಥವಾ ಥುಕ್ಪಾ - ಇದೊಂದು ನೂಡಲ್ಸ್ ಮಿಶ್ರಿತ್ ಸೂಪ್, ಫಗ್ಶಪಾ ಹಾಗು ನಿಂಗ್ರೊ ಚುರ್ಪಿ. ಅಲ್ಕೊಹೋಲ್ ಯುಕ್ತ ಪಾನೀಯಗಳು ಕೂಡ ಇಲ್ಲಿನ ಜನರಲ್ಲಿ ಹೆಸರುವಾಸಿ.

ಇಲ್ಲಿ ಆಚರಿಸಲಾಗುವ ಕೆಲವು ಸಾಂಪ್ರದಾಯಿಕ ಉತ್ಸವಗಳೆಂದರೆ, ಮಘೈ ಸಂಕ್ರಾಂತಿ, ಭೀಮ್ ಸೇನ್ ಪೂಜಾ, ದ್ರುಪ್ಕಾ ತೇಶಿ, ಲೊಸರ್, ಬುಮ್ಚು, ಸಾಗಾ ದವಾ ಮತ್ತು ಲೂಸಂಗ್. ಎಲ್ಲ ವಿಧದ ಹಿಂದೂ ಉತ್ಸವಗಳನ್ನು ಇಲ್ಲಿ ನೆಲೆಸಿರುವ ನೇಪಾಳಿ ಮೂಲದವರಿಂದ ಆಚರಿಸಲ್ಪಡುತ್ತದೆ.

ಈ ರೀತಿಯಾಗಿ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡ ಪುಟ್ಟ ರಾಜ್ಯ ಸಿಕ್ಕಿಂ, ಖಂಡಿತವಾಗಿಯೂ ಜೀವಿತಾವಧಿಯಲ್ಲಿ ಒಮ್ಮೆ ಭೇಟಿ ಮಾಡಲೇಬೇಕಾದ ರಾಜ್ಯವಾಗಿ ಎಲ್ಲರ ಮನದಲ್ಲೂ ಉಳಿಯುವ ಒಂದು ಸುಂದರ ತಾಣದ ಕಲ್ಪನೆಯಾಗಿ ಗೋಚರಿಸುತ್ತದೆ. ಹಾಗಾದರೆ ಇನ್ನೇಕೆ ತಡ...ಈ ರಾಜ್ಯದ ಹಲವು ತಾಣಗಳ ಕುರಿತು ಈ ಸೈಟಿನಲ್ಲಿ ಓದಿ, ನಿಮ್ಮ ಅನುಕೂಲಾನುಸಾರ ಪ್ರವಾಸ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ.  

ಸಿಕ್ಕಿಂ ಸ್ಥಳಗಳು

  • ಅರಿಟಾರ್ 12
  • ಪೆಲ್ಲಿಂಗ್ 13
  • ಝೊಂಗು 6
  • ಅರಿಟಾರ್ 12
  • ಯುಕ್ಸಾಮ್ 14
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat