ಇದು ಕ್ರಿಪೂ 3000 ಮತ್ತು 4000 ಅಂದರೆ ಮಧ್ಯ ಶಿಲಾಯುಗಕ್ಕೆ ಸೇರಿದ ಒಂದು ಗವಿ. ಈ ಗವಿಯ ಗೋಡೆಗಳ ಮೇಲೆ ಕೆಲವು ಶಾಸನಗಳು ಅಥವ ಚಿತ್ರಗಳು ಕೆತ್ತಲ್ಪಟ್ಟಿವೆ. ಇದು ಸಂಬಾಲ್ಪುರದಿಂದ 81 ಕಿಮೀ ದೂರದಲ್ಲಿದೆ. ಈ ಗವಿಯಲ್ಲಿನ ಶಾಸನಗಳನ್ನು ಬೆಳಕಿಗೆ ತಂದವರು ಕೆ.ಪಿ.ಜೈಸ್ವಾಲ್.
ಅವರನ್ನು 1933ರಲ್ಲಿ ಸಂನ್ಯಾಸಿ ಸಿರಿಕಾ ಈ ಗವಿಗಳಿಗೆ ಕರೆದೊಯ್ದರು. ಅವರು ಇಲ್ಲಿ ಕಂಡದ್ದನ್ನು 1935ರಲ್ಲಿ ಪುರಾತತ್ವ ಪತ್ರಿಕೆಯೊಂದರಲ್ಲಿ ಪ್ರಕಟಿಸಿದರು. ಅಂದಿನಿಂದ ಇವುಗಳ ಬಗ್ಗೆ ವಿಕ್ರಂಖೋಲ್ನಲ್ಲಿ ಸಂಶೋಧನೆಗಳು ನಡೆಯುತ್ತಿವೆಯಾದರೂ ಈ ಶಾಸನಗಳನ್ನು ಇಂದಿಗೂ ಓದಲು ಸಾಧ್ಯವಾಗಿಲ್ಲ.
ಈ ಗವಿಯು 37 ಮೀಟರ್ ಉದ್ದ ಮತ್ತು 8 ಮೀಟರ್ ಎತ್ತರವಿದೆ. ಈ ಗವಿಗಳು ಅರಣ್ಯದೊಳಗಿದೆ. ಈ ಸ್ಥಳವನ್ನು ಸಂರಕ್ಷಿಸುವ ದೃಷ್ಟಿಯಿಂದ ಇಲ್ಲಿಗೆ ರಸ್ತೆಗಳನ್ನಾಗಲಿ ಇತರ ಸೌಲಭ್ಯಗಳನ್ನಾಗಲೀ ಒದಗಿಸಿಲ್ಲ. ವಿಕ್ರಂಖೋಲ್ಗೆ ಭೇಟಿ ನೀಡುವುದೆಂದರೆ ಮನುಷ್ಯ ನಾಗರೀಕತೆಯ ಸಾವಿರ ವರ್ಷಗಳ ಹಿಂದಿನ ದಿನಗಳಿಗೆ ಭೇಟಿ ನೀಡಿದಂತೆ.