ನೀವು ನಿಸರ್ಗಪ್ರಿಯರಾಗಿದ್ದರೆ ನಿಮ್ಮ ಮನಸ್ಸಿಗೆ ಮುದನೀಡುವ ಮರೇಡಿಮಲ್ಲಿ ಪರಿಸರ ಪ್ರವಾಸೋದ್ಯಮ ತಾಣ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ರಾಜಮಂಡ್ರಿಯಿಂದ 100 ಕಿಲೋಮೀಟರುಗಳಷ್ಟು ಅಂತರದಲ್ಲಿರುವ ಈ ಪ್ರದೇಶ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ವಳಮುರೆ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಉದ್ಯಾನವಿದ್ದು ಉತ್ತಮ ಪ್ರವಾಸಿ ಅನುಭವವನ್ನು ನೀಡುತ್ತದೆ. ಮರೆಡಿಮಿಲ್ಲಿ ಮಿಂಡೆಲ್ ಅನ್ನುವ ಚಾರಣಕ್ಕೆ ಸೂಕ್ತವಾದ ಭೌಗೋಳಿಕ ವಿನ್ಯಾಸವಿರುವ ಪ್ರದೇಶವೂ ಇಲ್ಲಿದ್ದು, ನೀವು ಸಾಹಸ ಪ್ರವೃತ್ತಿಯವರಾದರೆ, ಚಾರಣಪ್ರಿಯರಾದರೆ ಉತ್ತಮ ಅನುಭೂತಿಯನ್ನು ಪಡೆಯಬಹುದಾಗಿದೆ. ಇಲ್ಲಿನ ಬಂಡೆಗಳ ನಡುವೆ 'ಜುಳುಜುಳು' ಸದ್ದು ಮಾಡುತ್ತ ಹರಿಯುವ ನದಿಗಳು ಮಧುರ ಅನುಭೂತಿಯನ್ನು ನೀಡುತ್ತವೆ. ಇವುಗಳನ್ನು ನೋಡುತ್ತಾ ನಿಲ್ಲುವುದೆ ಒಂದು ಸೊಬಗು ಎಂದು ಬಣ್ಣಿಸುತ್ತಾರೆ ಪ್ರವಾಸಿಗರು. ಇಲ್ಲಿನ ರೆಸಾರ್ಟುಗಳೂ ವಸತಿ ಹಾಗೂ ಔತಣದ ಉತ್ತಮ ಅನುಭವ ನೀಡುತ್ತವೆ.