ಜಮ್ಮು ಕಾಶ್ಮೀರದ ಸುಂದರ ನಗರಗಳಲ್ಲೊಂದು ಪುಲ್ವಾಮಾ. ಇದನ್ನು ’ಕಾಶ್ಮೀರದ ಅಕ್ಕಿ ಪಾತ್ರೆ’ ಎಂದೂ ಕರೆಯಲಾಗುತ್ತದೆ. ಜಿಲ್ಲೆಯು 323 ಹಳ್ಳಿಗಳನ್ನು ಹೊಂದಿದೆ. ಅವಂತಿಪುರ, ಶಾಪಿಯನ್, ಪುಲ್ವಾಮಾ, ಟ್ರಾಲ್ ಮತ್ತು ಪಾಂಪೋರ್ ಎಂದು ಐದು ಗುಂಪುಗಳಾಗಿ ಇವುಗಳನ್ನು ವಿಂಗಡಿಸಲಾಗಿದೆ. ಶ್ರೀನಗರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ವಾಮಾವನ್ನು 1979 ರಲ್ಲಿ ಜಿಲ್ಲೆಯನ್ನಾಗಿ ಪರಿಗಣಿಸಲಾಯಿತು. ಮೊದಲು ಈ ಪ್ರಾಂತ್ಯಕ್ಕೆ ಪನ್ವಂಗಮ್ ಎಂದು ಕರೆಯಲಾಗಿತ್ತು. ನಂತರ ಪುಲ್ಗಾಮ್ ಎಂದು ಮರುನಾಮಕರಣ ಮಾಡಲಾಗಿತ್ತು.
1346 ರಿಂದ 1586 ರ ವರೆಗೆ ಕಾಶ್ಮೀರದ ರಾಜರು ಪುಲ್ವಾಮಾ ಪ್ರದೇಶವನ್ನು ಆಳುತ್ತಿದ್ದರು. ಮೊಘಲ್ ಆಡಳಿತಗಾರರು 16ನೇ ಶತಮಾನದಲ್ಲಿ ಇಲ್ಲಿಗೆ ಆಗಮಿಸಿದ್ದರು. 19ನೇ ಶತಮಾನದ ಆರಂಭದಲ್ಲಿ ಅಫಘನ್ನರು ಈ ಪ್ರದೇಶವನ್ನು ಆಕ್ರಮಿಸಿಕೊಂಡರು.ಇದು ಇದರ ಗತ ಇತಿಹಾಸ. ಇನ್ನು ಪ್ರವಾಸಿಗರಿಗೆ ಇಲ್ಲಿ ನೋಡಲು ಸಾಕಷ್ಟು ತಾಣಗಳಿವೆ. ಧಾರ್ಮಿಕ ತಾಣಗಳು, ಐತಿಹಾಸಿಕ ತಾಣಗಳು ಸೇರಿದಂತೆ ಹಲವು ಆಕರ್ಷಕ ಪ್ರವಾಸಿ ಕ್ಷೇತ್ರಗಳಿವೆ.
ದೇಶದ ಹಲವು ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಐತಿಹಾಸಿಕ ರಸ್ತೆ ಮುಘಲ್ ರಸ್ತೆ, ಅಹರ್ಬಲ್ ಜಲಪಾತ, ಶಿಕರಗಢ, ಅರಿಪಾಲ ನಾಗ್, ಹುರ್ಪೋರಾ ಮತ್ತು ತರ್ಸಾರ್ ಹಾಗೂ ಮರ್ಸಾರ್ ಕೆರೆಗಳಿಂದ ಪುಲ್ವಾಮಾ ಪ್ರದೇಶ ಪ್ರವಾಸಿಗರ ಸ್ವರ್ಗವಾಗಿದೆ. ಇನ್ನು ಪುಲ್ವಾಮಾಗೆ ಭೇಟಿ ನೀಡಿದ ಪ್ರವಾಸಿಗರು ಕುಂಗ್ವಾಟ್ಟನ್ ಮತ್ತು ನಾಗ್ಬರೆನ್ ಪ್ರದೇಶಕ್ಕೂ ಭೇಟಿ ನೀಡಬಹುದು. ಇವು ಪ್ರವಾಸಿಗರಿಗೆ ಮುದ ನೀಡುವಂಥ ಸ್ಥಳಗಳು.
ಪೇಯರ್ ದೇವಸ್ಥಾನ, ಅವಂತೀಶ್ವರ ದೇವಸ್ಥಾನ, ಶಾಹ್ ಹಮ್ದಾನ್ ಸಮಾಧಿ ಮತ್ತು ಸೈಯದ್ ಹಸನ್ ಮಂಟಾಕಿ ಸಮಾಧಿ ಇಲ್ಲಿನ ಜನಪ್ರಿಯ ಸ್ಥಳಗಳು. ಜಾಮಾ ಮಸೀದಿ ಶಾಪಿಯನ್ ಮತ್ತು ಅಸರ್ ಶರೀಫ್ ಪಿಂಜೂರಾ ಕೂಡಾ ಪುಲ್ವಾಮಾದ ಧಾರ್ಮಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳಗಳು.
ಸಾರಿಗೆಯ ಪ್ರಮುಖ ವಿಧಾನಗಳ ಮೂಲಕ ಪುಲ್ವಾಮಾಗೆ ಸುಲಭವಾಗಿ ತಲುಪಬಹುದು. ಶೇಖ್ ಉಲ್ ಅಲಮ್ ವಿಮಾನ ನಿಲ್ದಾಣವನ್ನು ಸಾಮಾನ್ಯವಾಗಿ ಶ್ರೀನಗರ ವಿಮಾನ ನಿಲ್ದಾಣವೆಂದೇ ಕರೆಯಲಾಗಿದೆ. ಮುಂಬೈ, ಜಮ್ಮು, ನವದೆಹಲಿ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕವಿದೆ. ಇನ್ನು ಪುಲ್ವಾಮಾಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಜಮ್ಮು ತಾವಿ ರೈಲ್ವೆ ನಿಲ್ದಾಣ. ಭಾರತದ ಪ್ರಮುಖ ನಗರಗಳನ್ನು ಈ ರೈಲು ನಿಲ್ದಾಣ ಸಂಪರ್ಕಿಸುತ್ತದೆ.
ಪ್ರವಾಸಿಗರ ಮನಸ್ಸಿನಲ್ಲಿ ಪುಲ್ವಾಮಾ ನೆಲೆನಿಲ್ಲುವುದು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮತ್ತು ಹಿತವಾದ ವಾತಾವರಣದಿಂದಾಗಿ. ಬೆಚ್ಚನೆಯ ಬೇಸಿಗೆ ಮತ್ತು ಹಿಮದಂಥಾ ಚಳಿಗಾಲವನ್ನು ಈ ಪ್ರದೇಶವು ಅನುಭವಿಸುತ್ತದೆ. ನೀವು ಪುಲ್ವಾಮಾಗೆ ಭೇಟಿ ನೀಡುತ್ತೀರಾದರೆ ಏಪ್ರಿಲ್ನಿಂದ ಅಕ್ಟೋಬರಿನವರೆಗೆ ಸೂಕ್ತ ಸಮಯ.