ಪೆರೆನ್ ಪಟ್ಟಣದಿಂದ 40 ಕಿ. ಮೀ. ಹಾಗೂ ದಿಮಾಪುರ್ ನಿಂದ 37 ಕಿ. ಮೀ. ದೂರದಲ್ಲಿರುವ ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನವು ಇಂಟಾಂಕಿ ಎಂದೂ ಸಹ ಹಲವರಿಂದ ಗುರುತಿಸಲ್ಪಡುತ್ತದೆ. 1923 ರಲ್ಲಿ ಬ್ರಿಟಿಷ್ ಆಡಳಿತಗಾರರಿಂದ ಸ್ಥಾಪಿಸಲ್ಪಟ್ಟ ಈ ಉದ್ಯಾನವನವು 200 ಚದರ ಕಿ. ಮೀ. ಗಳಷ್ಟು ಹರಡಿಕೊಂಡಿದೆ. ಈಶಾನ್ಯದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನಗಳಲ್ಲೊಂದು ಎಂದು ಪರಿಗಣಿತವಾದ ಈ ಉದ್ಯಾನವನವು, ದಟ್ಟ ಮಳೆಕಾಡುಗಳನ್ನು ಹೊಂದಿದ್ದು, ಅನೇಕ ಪಕ್ಷಿಗಳು, ಸರೀಸೃಪಗಳು, ಮತ್ತು ಸಸ್ತನಿಗಳಿಗೆ ಪ್ರಾಕೃತಿಕ ತಾಣವಾಗಿದೆ. ಪರ್ವತಗಳು, ಕಡಿದಾದ ಬಂಡೆಗಳು, ಮತ್ತು ದಟ್ಟ ಅರಣ್ಯಗಳು ಈ ಸ್ಥಳವನ್ನು ಕ್ಯಾಂಪಿಂಗ್ ಮತ್ತು ಇತರ ಸಾಹಸಮಯ ಚಟುವಟಿಕೆಗಳಿಗೆ ಅತ್ಯುತ್ತಮ ತಾಣವನ್ನಾಗಿಸಿವೆ.
ಇಲ್ಲಿ, ಈ ರಾಷ್ಟ್ರೀಯ ಉದ್ಯಾನವನದಲ್ಲಿ, ನೀವು ಕಾಡುಕೋಣಗಳು (ಮಿಥುನ್) ಮತ್ತು ಹೂಲೊಕ್ ಗಿಬ್ಬಾನ್ ಎಂದು ಕರೆಯಲ್ಪಡುವ ಮಂಗಗಳನ್ನು ಕಾಣಬಹುದು. ಚಿಂಪಾಂಜಿಯನ್ನು ಹೋಲುವ ಈ ಮಂಗಗಳು ನಿಮಗೆ ನಾಗಾಲ್ಯಾಂಡ್ ನಲ್ಲಿ ಮಾತ್ರವೇ ಕಾಣಸಿಗುತ್ತವೆ. ಇವಿಷ್ಟು ಮಾತ್ರವಲ್ಲದೇ, ಈ ಉದ್ಯಾನದಲ್ಲಿ ಹುಲಿಗಳು, ಸ್ಲಾತ್ ಬೇರ್ ಎಂಬ ಒಂದು ಜಾತಿಯ ಕರಡಿಗಳು, ಕಾಡುನಾಯಿಗಳು, ಹಾರುವ ಅಳಿಲುಗಳು ಇವೆಲ್ಲವೂ ಇದ್ದು, ಇದು ಈ ಜಿಲ್ಲೆಗೆ ಭೇಟಿ ನೀಡುವ ಯಾವನೇ ಒಬ್ಬ ಪ್ರವಾಸಿಗನೂ ಸಹ ಇಲ್ಲಿಗೆ ಭೇಟಿ ಕೊಟ್ಟೇ ಕೊಡುವಂತೆ ಮಾಡುತ್ತದೆ. ಮಾತ್ರವಲ್ಲದೇ, ಮಾನವಾಭಾದಿತ ಅರಣ್ಯವು ಈ ಉದ್ಯಾನದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.