ಕಾಸರಗೋಡು ಕೇರಳದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ಜಿಲ್ಲೆಯಾಗಿದೆ. ಇದು ಇತಿಹಾಸ ಮತ್ತು ಪ್ರಾಚ್ಯ ವಸ್ತುಗಳ ಕುರಿತು ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನಂಬಿಕೆಗಳ ಪ್ರಕಾರ ಅರಬ್ಬರು ಕ್ರಿ.ಶ.9 ಮತ್ತು 14ನೇ ಶತಮಾನದಲ್ಲಿ ಕಾಸರಗೋಡಿನ ಮೂಲಕ ಕೇರಳ ರಾಜ್ಯವನ್ನು ಪ್ರವೇಶಿಸಿದರಂತೆ. ಕಾಸರಗೋಡಿನ ದಕ್ಷಿಣದ ತುದಿಯಲ್ಲಿರುವ ಕೊಲ್ಲಿಯಲ್ಲಿ ತಲೆ ಎತ್ತಿರುವ ಬೇಕಲ್ ಕೋಟೆಯ ಇಲ್ಲಿನ ಶ್ರೀಮಂತ ಸ್ಮಾರಕವಾಗಿದ್ದು, ಕಡಲಿನ ನೀರಿಗೆ ಚಾಚಿಕೊಂಡು ನಿಂತಿದೆ.
ಕಾಸರಗೋಡು ಎಂಬ ಪದವು "ಕಾಸರ" ಮತ್ತು "ಕ್ರೊಡ" ಎಂಬ ಪದಗಳಿಂದ ಆಗಿದೆ. ಇಲ್ಲಿ ’ಕಾಸರ’ ಎಂದರೆ ಸಂಸ್ಕೃತದಲ್ಲಿ ಕೆರೆ ಎಂದು ಹಾಗು ಕ್ರೊಡ ಎಂದರೆ ಸಂಪತ್ತನ್ನು ಸುರಕ್ಷಿತವಾಗಿಟ್ಟಿರುವ ಸ್ಥಳ ಎಂದರ್ಥ. ಕಾಸರಗೋಡು ಮುಖ್ಯವಾಗಿ ಕಾಸರಕ ಮರಗಳಿಂದ ಆಚ್ಛಾದಿತವಾಗಿದೆ. ಬಹುಶಃ ಆ ಒಂದು ನಿಟ್ಟಿನಲ್ಲಿ ಸಹ ಈ ಹೆಸರು ಬಂದಿರಬಹುದು. ಇವುಗಳ ಜೊತೆಗೆ ಕರಾವಳಿ ಪ್ರಾಂತ್ಯದ ಪ್ರತ್ಯೇಕತೆ ಹೊಂದಿರುವ ಹಲವಾರು ಮರಗಳು ಇಲ್ಲಿ ಬೆಳೆಯುತ್ತವೆ.
ಕಾಸರಗೋಡಿನ ಭೂಪ್ರದೇಶವು ತೆಂಗಿನ ತೋಪುಗಳು ಮತ್ತು ಬೆಟ್ಟ ಪ್ರದೇಶಗಳ ಮೂಲಕ ಧುಮ್ಮಿಕ್ಕಿ ಕಡಲು ಸೇರುವ ಝರಿಗಳಿಂದ ಕೂಡಿವೆ. ಹೆಂಚಿನ ಮನೆಗಳು ಈ ಪಟ್ಟಣದ ಇಲ್ಲಿನ ವೈಶಿಷ್ಟ್ಯವಾಗಿದ್ದು, ಅವುಗಳು ಈ ಊರಿನ ಅಂದವನ್ನು ಹೆಚ್ಚಿಸಿವೆ.
ವೈವಿಧ್ಯಮಯ ಸಂಸ್ಕೃತಿಯ ಹಿರಿಮೆ
ಕಾಸರಗೋಡು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿರುವ ತೆಯ್ಯಂ ಎಂಬ ದೈವದ ಆರಾಧನೆಗಾಗಿ ಕಂಬಳ (ಕೋಣಗಳ ಓಟ) ಮತ್ತು ಕೋಳಿ ಕಾಳಗಗಳನ್ನು ನಡೆಸಲಾಗುತ್ತದೆ. ಇದು ಇಲ್ಲಿನ ಪ್ರಸಿದ್ಧ ಆಚರಣೆಗಳಾಗಿ ಗುರುತಿಸಿಕೊಂಡಿವೆ.
ಕ್ರಿಶ್ಚಿಯನ್ನರು,ಹಿಂದೂಗಳು ಮತ್ತು ಮಸಲ್ಮಾನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಜಿಲ್ಲೆಯು ತನ್ನಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳಿಗೆ ಎಷ್ಟು ಖ್ಯಾತಿ ಪಡೆದಿದೆಯೊ, ಅಷ್ಟೇ ಖ್ಯಾತಿಯನ್ನು ಇಲ್ಲಿನ ಧಾರ್ಮಿಕ ಸಹಿಷ್ಣುತೆಗು ಸಹ ಪಡೆದುಕೊಂಡಿದೆ. ಕಾಸರಗೋಡಿನಲ್ಲಿ ಮಲಯಾಳಂ, ತುಳು, ಕನ್ನಡ, ಕೊಂಕಣಿ ಮತ್ತು ತಮಿಳು ಭಾಷೆಗಳನ್ನು ಮಾತನಾಡುತ್ತಾರೆ.
ಹವಾಗುಣ
ಕಾಸರಗೋಡಿನಲ್ಲಿನ ಸಂಸ್ಕೃತಿಯಂತೆ ಇಲ್ಲಿನ ಹವಾಗುಣವು ಸಹ ವೈವಿಧ್ಯಮಯವಾಗಿದೆ. ಕಾಸರಗೋಡಿನಲ್ಲಿ ಒಣ, ಆರ್ದ್ರತೆ, ತಂಪಾದ ಮತ್ತು ಬಿಸಿಲಿನಿಂದ ಕೂಡಿದ ಹವಾಮಾನವನ್ನು ಕಾಣಬಹುದು. ಈ ಊರಿಗೆ ಸಮೀಪದಲ್ಲಿ ಸಮುದ್ರವನ್ನು ಹೊಂದಿರುವುದರಿಂದಾಗಿ ಇಲ್ಲಿ ನವೆಂಬರ್ ನಿಂದ ಜನವರಿಯವರೆಗಿನ ಚಳಿಗಾಲವನ್ನು ಹೊರತುಪಡಿಸಿ ವರ್ಷದ ಎಲ್ಲಾ ದಿನಗಳು ಆರ್ದ್ರತೆಯಿಂದ ಕೂಡಿರುತ್ತದೆ.