ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಹಿಮಾಚಲ ಪ್ರದೇಶ ಪ್ರವಾಸೋದ್ಯಮ - ಒಂದಿಷ್ಟು ಪರಿಚಯ

ಹೆಸರೆ ಸೂಚಿಸುವ ಹಾಗೆ, ಯಾವಾಗಲೂ ಹಿಮದಿಂದ ಕೂಡಿರುವ ಹಿಮಾಚಲ ಪ್ರದೇಶವು ಭವ್ಯ ಭಾರತದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ. ತನ್ನಲ್ಲಿರುವ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಂದಾಗಿ ಇಂದು ಹಿಮಾಚಲ ಪ್ರದೇಶವು ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನೆಲ್ಲೆಡೆಯಿಂದ ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಪ್ರವಾಸೋದ್ಯಮವು ದಿನೆ ದಿನೆ ಬೆಳೆಯುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ತನ್ನದೆ ಆದ ಕೊಡುಗೆಯನ್ನು ಹೆಚ್ಚಿನ ಗಾತ್ರದಲ್ಲಿ ನೀಡುತ್ತಿದೆ. ಈ ಬೆಳವಣಿಗೆಗೆ ಪೂರಕವೆಂಬಂತೆ ಬಹುಸಂಖ್ಯೆಯಲ್ಲಿ ಸಣ್ಣಪುಟ್ಟ ರಿಸಾರ್ಟ್ ಗಳು, ಹೋಟೆಲ್ಗಳು ರೂಪಗೊಳ್ಳುತ್ತಿದ್ದು, ಪ್ರವಾಸದ ಒಂದು ಉತ್ಕೃಷ್ಟ ಅನುಭವಕ್ಕೆ ಸಾಕ್ಷಿಯಾಗುವಂತಾಗಿದೆ.  ಭೌಗೋಳಿಕ ಹಿನ್ನಿಲೆಯಿಂದ ನೋಡಿದಾಗ ಹಿಮಾಚಲ ಪ್ರದೇಶವು ಪೂರ್ವದಲ್ಲಿ ಟಿಬೇಟ್, ಪಶ್ಚಿಮದಲ್ಲಿ ಪಂಜಾಬ್ ಮತ್ತು ಉತ್ತರದಲ್ಲಿ ಜಮ್ಮು ಹಾಗು ಕಾಶ್ಮೀರಗಳಿಂದ ಸುತ್ತುವರೆದಿದೆ. ಈ ಪ್ರದೇಶವು 'ದೇವಭೂಮಿ' ಅಥವಾ 'ಲ್ಯಾಂಡ್ ಆಫ್ ದಿ ಗಾಡ್ಸ್' ಎಂಬ ಕಿರು ನಾಮಾಂಕಿತದಿಂದ ಹೆಸರುವಾಸಿಯಾಗಿದ್ದು, ತನ್ನಲ್ಲಿರುವ ಹಚ್ಚಹಸಿರಿನ ಕಣಿವೆಗಳು, ಹಿಮಶೃಂಗಗಳು, ಮಂಜುಗಡ್ಡೆಗಳು, ಹುಲ್ಲುಗಾವಲು ಮತ್ತು ರೋಮಾಂಚನಕಾರಿಯಾದ ಕೆರೆಗಳಿಂದ ಪ್ರವಾಸಿಗರಿಗೆ ಸ್ವರ್ಗವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಿಮಾಚಲ ಪ್ರದೇಶ

ವಾತಾವರಣ

ಪ್ರಮುಖವಾಗಿ ಮೂರು ಋತುಗಳನ್ನು ಹಿಮಾಚಲ ಪ್ರದೇಶದಲ್ಲಿ ಕಾಣಬಹುದಾಗಿದ್ದು, ಅವುಗಳೆಂದರೆ ವಸಂತ ಕಾಲ, ಚಳಿಗಾಲ ಮತ್ತು ಮಳೆಗಾಲ. ವಸಂತಕಾಲವು ಸಾಮಾನ್ಯವಾಗಿ ಫೆಬ್ರುವರಿಯಲ್ಲಿ ಪ್ರಾರಂಭವಾಗಿ ಏಪ್ರಿಲ್ ಮಧ್ಯಭಾಗದವರೆಗೂ ಮುಂದುವರೆಯುತ್ತದೆ. ಇನ್ನು ಚಳಿಗಾಲವು ಅಕ್ಟೋಬರ್ ನಲ್ಲಿ ಪ್ರಾರಂಭವಾದರೆ ಮಾರ್ಚ್ ನಲ್ಲಿ ಮುಕ್ತಾಯಗೊಳ್ಳುತ್ತದೆ ಮತ್ತು ಈ ಕಾಲವನ್ನು ಇಲ್ಲಿಗೆ ಭೇಟಿ ನೀಡಲು ಆದರ್ಶದಾಯಕವೆಂದು ಪರಿಗಣಿಸಲಾಗುತ್ತದೆ.

ಭಾಷೆ

ಹಿಮಾಚಲ ಪ್ರದೇಶದ ಅಧಿಕೃತ ಭಾಷೆಯೆಂದರೆ ಹಿಂದಿ. ಇದಲ್ಲದೆ, ಪಹಾರಿ ಎಂಬ ಭಾಷೆಯೂ ಕೂಡ ಇಲ್ಲಿ ಅತಿಯಾಗಿ ಬಳಸಲ್ಪಡುತ್ತದೆ. ಈ ಭಾಷೆಯ ಇತರೆ ಉಪಭಾಷೆಗಳೆಂದರೆ ಮಂಡಿಯಾಲಿ, ಕುಲವಿ, ಕೆಹ್ಲುರಿ, ಹಿಂದುರಿ, ಚಮೇಲಿ, ಸಿರ್ಮೌರಿ, ಮಿಯಾಹ್ಸ್ವಿ ಮತ್ತು ಪಂಗ್ವಾಲಿ. ಈ ಉಪಭಾಷೆಗಳು ಕ್ರಮವಾಗಿ ಮಂಡಿ, ಕುಲ್ಲು, ಬಿಲಾಸ್ಪುರ್, ನಲಗ್ರಹ್, ಚಂಬಾ, ಸಿರ್ಮೌರ್, ಮಹಾಸು ಮತ್ತು ಪಂಗಿ ಪ್ರದೇಶಗಳ ವಾಸಿಗರಲ್ಲಿ ಬಳಸಲ್ಪಡುತ್ತದೆ.ಇವಷ್ಟಲ್ಲದೆ ಇನ್ನೂ ಇತರೆ ಉಪಭಾಷೆಗಳಾದ ಕಿನ್ನೌರಿ, ಲಾಹೌಲಿ ಮತ್ತು ಭೊತ್ ಮೂಲದ ಸ್ಪಿತಿಯನ್ ಭಾಷೆಗಳೂ ಸಹ ಬಳಸಲ್ಪಡುತ್ತವೆ. ಪಹಾರಿ ಭಾಷೆಯ ಈ ಎಲ್ಲ ಉಪಭಾಷೆಗಳು ಸಂಸ್ಕೃತ ಭಾಷೆಯಿಂದ ರೂಪಗೊಂಡಿವೆ ಎಂದು ನಂಬಲಾಗಿದೆ. ರಾಜ್ಯದ ಇನ್ನೂ ಕೆಲವು ಭಾಗಗಳಲ್ಲಿ ಪಂಜಾಬಿ, ಡೊಗ್ರಿ ಮತ್ತು ಕಂಗ್ರಿ ಭಾಷೆಗಳು ಚಾಲ್ತಿಯಲ್ಲಿರುವುದನ್ನು ಕಾಣಬಹುದು. ರಾಜ್ಯದ ಪಶ್ಚಿಮ ಭಾಗಗಳಲ್ಲಿ ಗುಜರಾತಿಯನ್ನು ಮಾತನಾಡಲಾಗುತ್ತದೆ. ಮುಘಲ್ ಆಡಳಿತದ ಸಮಯದಲ್ಲಿ ಈ ಎಲ್ಲ ಭಾಷೆಗಳನ್ನು ಪರ್ಶಿಯನ್ ಲಿಪಿಯಲ್ಲಿ ಬರೆಯಲಾಗುತ್ತಿತ್ತಾದರೂ, ಪ್ರಸ್ತುತ ಇವುಗಳನ್ನು ದೇವನಾಗರಿ ಲಿಪಿಯಲ್ಲಿಯೇ ಬರೆಯಲಾಗುತ್ತದೆ.

ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ

ಹಿಮಾಚಲ ಪ್ರದೇಶ ರಾಜ್ಯದ ಪ್ರತಿ 12 ಜಿಲ್ಲೆಗಳೂ ಬಹುಸಂಖ್ಯೆಯಲ್ಲಿ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು, ಪ್ರವಾಸಕ್ಕೆಂದು ಒಂದು ಯೋಗ್ಯವಾದ ತಾಣವಾಗಿದೆ ಈ ರಾಜ್ಯ. ಇಲ್ಲಿನ ಕೆಲವು ಪ್ರಮುಖ ಪ್ರವಾಸಿ ಚಟುವಟಿಕೆಗಳೆಂದರೆ ಸ್ಥಳ ವೀಕ್ಷಣೆ, ತೀರ್ಥಕ್ಷೇತ್ರ ಭೇಟಿ, ಪರ್ವತಾರೋಹಣಗಳು, ಚಾರಣ, ಫಿಷಿಂಗ್, ರಿವರ್ ರಾಫ್ಟಿಂಗ್, ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್.ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ರಾಜ್ಯವನ್ನು ಮುಖ್ಯವಾಗಿ ಸಟ್ಲೇಜ್ ಘಟಕ, ಬಿಯಸ್ ಘಟಕ, ಧೌಲಾಧರ್ ಘಟಕ ಮತ್ತು ಟ್ರೈಬಲ್ ಘಟಕವೆಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದೆ. ಪ್ರಸಿದ್ಧವಾದ ಬಿಯಸ್ ನದಿಯು ಮನಾಲಿ ಮತ್ತು ಕುಲ್ಲು ಕಣಿವೆಗಳ ಮೂಲಕ ಹರಿದು ಹೋಗುತ್ತದೆ.

ಈ ಒಂದು ಘಟಕವು ದೇವದಾರು ಹಾಗು ಪೈನ್ ಮರಗಳಿಂದ ಸಂಪದ್ಭರಿತವಾಗಿದ್ದು, ವಿರಮಿಸಲು ಅತಿ ಸೂಕ್ತ ಪ್ರದೇಶವಾಗಿ ಗೋಚರಿಸುತ್ತದೆ. ಇಷ್ಟೆ ಅಲ್ಲ..ಅಕ್ಕಪಕ್ಕದಲ್ಲಿ ರಂಗುರಂಗಾದ ಹೂವುಗಳು ಕಂಗೊಳಿಸುತ್ತಿರುವುದನ್ನು, ರುಚಿರುಚಿಯಾದ ಹಣ್ಣಿನ ತೋಟಗಳನ್ನು ನೋಡಿ ಆನಂದಿಸಬಹುದು. ಇನ್ನು ಟ್ರೈಬಲ್ ಘಟಕಕ್ಕೆ ಭೇಟಿ ನೀಡಿದರೆ...ಅಬ್ಬಬ್ಬಾ..ರುದ್ರ ರಮಣೀಯವಾದ ಪರ್ವತಗಳು, ಮಂಜುಗಡ್ಡೆಗಳು, ಹೆಪ್ಪುಗಟ್ಟಿದ ಕೆರೆಗಳು, ಕಣಿವೆ ಮಾರ್ಗಗಳು, ಬೌದ್ಧ ಮಠಗಳು, ಲಾಮಾ ಹಾಗು ಯಾಕ್ ಪ್ರಾಣಿಗಳು ಕೈಬಿಸಿ ಸ್ವಾಗತಿಸುತ್ತವೆ.

ಸ್ಥಳೀಯ ಸಂಸ್ಕೃತಿಗಳಿಂದ ಶ್ರೀಮಂತವಾಗಿರುವ ಈ ಅದ್ವಿತೀಯ ತಾಣ, ಸಾಹಸಮಯ ಚಟುವಟಿಕೆಗಳಿಗೆ ಪೂರಕವಾಗಿದೆ.ಹಿಮಾಲಯ ಎಂದೂ ಕೂಡ ಕರೆಯಲಾಗುವ ಧೌಲಾಧರ್ ಘಟಕವು ಡಾಲ್ ಹೌಸಿಯಿಂದ ಪ್ರಾರಂಭವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ. ಈ ಘಟಕವನ್ನು ಕಂಗ್ರಾ ಕಣಿವೆಯಿಂದ ಸ್ಪಷ್ಟವಾಗಿ ಕಾಣಬಹುದು. ಇನ್ನು ಸಟ್ಲೇಜ್ ಘಟಕವು ಶಿವಾಲಿಕ್ ಪರ್ವತ ಶ್ರೇಣಿಗಳ ವಿಹಂಗಮ ನೋಟವನ್ನು ಒದಗಿಸುತ್ತದೆ. ಸೇಬು ತೋಟಗಳು, ಪೈನ್ ಕಾಡುಗಳು, ದೇವದಾರು ಮರಗಳು ಮತ್ತು ಸಟ್ಲೇಜ್ ನದಿಯಿಂದ ಆವರಿಸಿರುವ ಈ ಘಟಕವು ಭೇಟಿ ನೀಡುವ ಸಂದರ್ಶಕರಿಗೆ ಅಥವಾ ಪ್ರವಾಸಿಗರಿಗೆ ಆದ ಆಯಾಸವನ್ನು ಮರಿಸಿ ಹೆಚ್ಚಿನ ಹುಮ್ಮಸ್ಸನ್ನು ಕೊಡುತ್ತದೆ ಎಂದರೆ ಅತಿಶಯೋಕ್ತಿ ಏನಲ್ಲ.

ಪ್ರೀತಿಯಿಂದ "ದೇವತೆಗಳ ವಾಸಸ್ಥಾನ" ವೆಂದೂ ಕರೆಸಿಕೊಳ್ಳುವ ಈ ರಾಜ್ಯದಲ್ಲಿ ಜ್ವಾಲಾಮುಖಿ, ಚಾಮುಂಡಾ, ಬ್ರಜೇಶ್ವರಿ, ಬೈಜನಾಥ, ಲಕ್ಷ್ಮಿ ನಾರಾಯಣ, ಚೌರಾಸಿನಂತಹ ಪ್ರಮುಖ ಹಿಂದು ಧರ್ಮದ ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲದೆ ಹಲವಾರು ಗುರುದ್ವಾರಾಗಳು ಮತ್ತು ಚರ್ಚುಗಳನ್ನು ಈ ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಬಹುದು. ಪೌಂಟಾ ಸಾಹೀಬ್, ರೇವಲ್ಸರ್ ಮತ್ತು ಮಣಿಕರಣ್, ಸಿಖ್ ಸಮುದಾಯದ ಪ್ರಮುಖ ಯಾತ್ರಾ ಕ್ಷೇತ್ರಗಳಾಗಿದ್ದರೆ, ಕ್ರೈಸ್ಟ್ ಚರ್ಚ್ ಕಸೌಲಿ, ಕ್ರೈಸ್ಟ್ ಚರ್ಚ್ ಶಿಮ್ಲಾ ಮತ್ತು ಸೆಂಟ್ ಜಾನ್ಸ್ ಚರ್ಚ್ ಇಲ್ಲಿ ಕಾಣಬಹುದಾದ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಪ್ರಮುಖ ಚರ್ಚುಗಳಾಗಿವೆ.

ಪ್ರಕೃತಿ ಪ್ರಿಯರಿಗೂ ಕೂಡ ಹಿಮಾಚಲ ಪ್ರದೇಶ ನಿರಾಸೆಯನ್ನುಂಟು ಮಾಡುವುದಿಲ್ಲ. ಇಲ್ಲಿರುವ ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್, ಪಿನ್ ರಾಷ್ಟ್ರೀಯ ಉದ್ಯಾನ, ರೇಣುಕಾ ಧಾಮ, ಪೊಂಗ್ ಡ್ಯಾಮ್ ಧಾಮ, ಗೋಪಾಲ್ಪುರ್ ಮೃಗಾಲಯ ಮತ್ತು ಕುಫ್ರಿ ತನ್ನಲ್ಲಿರುವ ಅಮೋಘ ನೈಸರ್ಗಿಕ ಸಂಪತ್ತನ್ನು ಗಾಢವಾಗಿ ಅನಾವರಣಗೊಳಿಸುತ್ತವೆ. ರಾಜ್ಯದ ಐತಿಹಾಸಿಕ ಶ್ರೀಮಂತಿಕೆ ಮತ್ತು ವಾಸ್ತುಶಿಲ್ಪದ ಭವ್ಯತೆಗಳನ್ನು ನೋಡಬಯಸುವಿರಾದರೆ ಕಂಗ್ರಾ ಕೋಟೆ, ಜುಬ್ಬಲ್, ನಗ್ಗರ್ ಕ್ಯಾಸಲ್, ಕಮ್ರು ಕೋಟೆ, ಗೊಂಡ್ಲಾ ಕೋಟೆ, ಕ್ರೈಸ್ಟ್ ಚರ್ಚ್, ಚಾಪ್ಸ್ಲೀ, ದಿ ವುಡ್ ವಿಲ್ಲಾ ಪ್ಯಾಲೇಸ್ ಮತ್ತು ಚೈಲ್ ಅರಮನೆಗಳಿಗೆ ಭೇಟಿ ನೀಡಿ ಮನ ತಣಿಸಿಕೊಳ್ಳಬಹುದು.

ಇಲ್ಲಿರುವ ಸ್ಟೇಟ್ ಮ್ಯೂಸಿಯಮ್, ಕಂಗ್ರಾ ಆರ್ಟ್ ಗ್ಯಾಲರಿ, ಭುರಿ ಸಿಂಗ್ ಮ್ಯೂಸಿಯಮ್, ರೋರಿಚ್ ಆರ್ಟ್ ಗ್ಯಾಲರಿ ಮತ್ತು ಶೋಭಾ ಸಿಂಗ್ ಆರ್ಟ್ ಗ್ಯಾಲರಿ ಈ ರಾಜ್ಯವಾಳಿದ ಪುರಾತನ ರಾಜವಂಶದ ಹಲವಾರು ವೈವಿಧ್ಯಮಯ ಅಂಶಗಳನ್ನು ಅನಾವರಣಗೊಳಿಸುತ್ತವೆ. ಸರಿ..ಇದರಿಂದ ಸ್ವಲ್ಪ ಮುಂದೆ ಸಾಗಿ, ಆನಂದದಿಂದ ವಿರಮಿಸಲು ಜಲಾನಯನ ಪ್ರದೇಶದ ಹುಡುಕಾಟದಲ್ಲಿದ್ದಿರಾ? ಚಿಂತೆ ಬಿಡಿ. ಈ ರಾಜ್ಯವು ಹಲವು  ಮನೋಹರ ಕೆರೆಗಳನ್ನೂ ಹೊಂದಿದ್ದು, ಅವುಗಳಲ್ಲಿ ಪ್ರಮುಖವೆಂದರೆ ಪ್ರಾಶರ್ ಕೆರೆ, ಖಜ್ಜಿಯಾರ್ ಕೆರೆ, ರೇಣುಕಾ ಕೆರೆ, ಗೋಬಿಂದ್ ಸಿಂಗ್ ಸಾಗರ್ ಸರೋವರ, ಡಾಲ್ ಸರೋವರ, ಪೊಂಗ್ ಡ್ಯಾಮ್ ಕೆರೆ, ಪಂಡೋಹ ಕೆರೆ, ಮಣಿ ಮಹೇಶ್ ಕೆರೆ ಮತ್ತು ಬೃಘು ಸರೋವರ.

'ಉತ್ಸವಗಳ ನಗರಿ' ಎಂದೂ ಖ್ಯಾತವಾಗಿರುವ ಹಿಮಾಚಲ ಪ್ರದೇಶದಲ್ಲಿ ವಿಂಟರ್ ಕಾರ್ನಿವಾಲ್ ಶಿವರಾತ್ರಿ, ಲಾಡರ್ಚಾ ಉತ್ಸವ, ಮಿಂಜರ್ ಉತ್ಸವ, ಮಣಿ ಮಹೇಶ್ ಜಾತ್ರೆ, ಫುಲೆಚ್, ಕುಲ್ಲು ದಸರಾ ಉತ್ಸವ, ರೇಣುಕಾ ಜಾತ್ರೆ ಮತ್ತು ಐಸ್ ಸ್ಕೇಟಿಂಗ್ ಮುಂತಾದವುಗಳನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುವುದನ್ನು ಕಾಣಬಹುದು. ಇನ್ನು ಆಧುನಿಕ ಕ್ರೀಡೆಗಳಾದಂತಹ ಪ್ಯಾರಾ ಗ್ಲೈಡಿಂಗ್, ಹ್ಯಾಂಡ್ ಗ್ಲೈಡಿಂಗ್ ನಂತಹ ಚಟುವಟಿಕೆಗಳಿಗೆ ಬೀರ್, ಮನಾಲಿ, ಬಿಲಾಸ್ಪುರ್ ಮತ್ತು ರೊಹ್ರು ಪ್ರದೇಶಗಳು ಹೆಸರುವಾಸಿಯಾಗಿವೆ. ಒಟ್ಟಾರೆಯಾಗಿ ಇವೆಲ್ಲವು ಸೇರಿ ಹಿಮಾಚಲ ಪ್ರದೇಶದ ಪ್ರವಾಸೋದ್ಯಮದಲ್ಲಿ ತಮ್ಮದೆ ಆದ ಅಳಿಸಲಾಗದಂತಹ ಛಾಪನ್ನು ಮೂಡಿಸಿವೆ.