ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅರ್ಕಿಯಿಂದ ಕೇವಲ ನಾಲ್ಕು ಕಿಮೀ ಅಂತರದಲ್ಲಿರುವ ಲುತುರು ಮಹಾದೇವ ದೇವಾಲಯ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ. ಹಿಂದೂ ದೇವರು ಶಿವನಿಗೆ ಮೀಸಲಾದ ಈ ದೇವಾಲಯವನ್ನು 1621 ರಲ್ಲಿ ಭಗಲ್ ಅನ್ನು ಆಳುತ್ತಿದ್ದ ರಾಜ ನಿರ್ಮಿಸಿದ ಎನ್ನುತ್ತವೆ ಐತಿಹಾಸಿಕ ದಾಖಲೆಗಳು.
ಸ್ಥಳ ಪುರಾಣದ ಪ್ರಕಾರ, ಒಮ್ಮೆ ರಾಜನ ಕನಸಿನಲ್ಲಿ ಕಾಣಿಸಿಕೊಂಡ ಶಿವ ಈ ದೇವಾಲಯವನ್ನು ಸ್ಥಾಪಿಸುವಂತೆ ಪ್ರೇರಣೆ ನೀಡಿದ್ದ ಎಂಬ ನಂಬಿಕೆ ಇವತ್ತಿಗೂ ಚಾಲ್ತಿಯಲ್ಲಿದೆ. ಇಲ್ಲಿ ಪ್ರತಿ ಶಿವರಾತ್ರಿಯನ್ನೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪರ್ವತದ ನೆತ್ತಿಯ ಮೇಲಿರುವ ಈ ದೇವಾಲಯದ ಶಿವಲಿಂಗ ಹಾಗೂ ಗೋಪುರಗಳು ಆಕರ್ಷಕವಾಗಿವೆ. ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸುತ್ತಮುತ್ತಲಿನ ನಿಸರ್ಗ ಸಿರಿಯನ್ನು ಕಣ್ತುಂಬಿಸಿಕೊಳ್ಳುವುದೇ ಮನಸಿಗೆ ಆನಂದ ನೀಡುತ್ತದೆ.