ಚೌಸಟ್ ಖಂಬಾ ಎಂದರೆ 64 ಖಂಬಗಳು ಎಂದರ್ಥ. ಈ ಕಟ್ಟಡವು ನಿಜಾಮುದ್ದೀನನ ಗೋರಿಯಾಗಿದೆ. ಇದು ನವದೆಹಲಿಯಲ್ಲಿನ ಇಸ್ಲಾಂ ಸೂಫಿ ಸಂತರ ಪಾರಂಪರಿಕ ತಾಣವಾಗಿದೆ. ಇದನ್ನು ಮೊಘಲ್ ದೊರೆ ಜಹಂಗೀರನ ಅವಧಿಯಲ್ಲಿ ಅಂದರೆ 1623-24 ರ ನಡುವೆ ನಿರ್ಮಿಸಲಾಯಿತು. ಇದನ್ನು ಅಟಗ ಖಾನ್ರವರ ಮಗನಾದ ಮಿರ್ಜಾ ಅಜೀಜ್ ಕೋಕ ಎಂಬಾತನು ನಿರ್ಮಿಸಿದನು. ಅಟಗ ಖಾನ್ ಬಾಲ್ಯದಲ್ಲಿ ಅಕ್ಬರನಿಗೆ ಹಾಲುಡಿಸಿದ ದಾದಿಯಾದ ಜಿಲಿ ಅಂಗಳ ಪತಿ.
ಅಟಗ ಖಾನ್ ಅಕ್ಬರನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದನು. ಮಿರ್ಜಾ ಅಜೀಜ್ ಕೋಕಾ ಮೊಘಲ್ ಸಾಮ್ರಾಟ ಜಹಂಗಿರನ ಕಾಲದಲ್ಲಿ ಗುಜರಾತಿನ ರಾಜ್ಯಪಾಲನಾಗಿದ್ದನು. ಈತನು ತನಗಾಗಿ ನಿರ್ಮಿಸಿಕೊಂಡ ಗೋರಿಯೇ ಈ ಚೌಸಟ್ ಖಂಬಾ.
ಮೂಲತಃ ಇದನ್ನು ಒಂದು ದೊಡ್ಡ ಹಾಲ್ ಮಾಡಬೇಕೆಂದು ನಿರ್ಮಾಣ ಮಾಡಲಾಯಿತು. ಆದರೆ ನಂತರ ಇದನ್ನು ಗೋರಿಯನ್ನಾಗಿ ಪರಿವರ್ತಿಸಲಾಯಿತು. ಚೌಕಾಕಾರದ ಈ ಕಟ್ಟಡವನ್ನು ಸಂಪೂರ್ಣವಾಗಿ ಬಿಳಿಯ ಅಮೃತಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಈ ಗೋರಿಯ ಹೆಸರೇ ಸೂಚಿಸುವಂತೆ ಇದರಲ್ಲಿ 64 ಖಂಬಗಳು ಮತ್ತು 25 ಮೊಗಸಾಲೆಗಳನ್ನು ಹೊಂದಿದೆ. ಚಪ್ಪಟೆಯಾಕಾರದ ಛಾವಣಿಯ ಈ ಗೋರಿಯು ಪಾರಂಪರಿಕ ಕಟ್ಟಡವಾಗಿ ಘೋಷಿಸಲ್ಪಟ್ಟಿದೆ. ಇದು ಜನ ಜಂಗುಳಿಯಿಂದ ಕೂಡಿರುವ ನಿಜಾಮುದ್ದೀನ್ ಬಸ್ತಿಯ ಬಲಕ್ಕೆ ನೆಲೆಗೊಂಡಿದೆ. ಈ ಬಸ್ತಿಯು ಸಂತ ಹಜರತ್ ನಿಜಾಮುದ್ದೀನ್ ಔಲಿಯರವರ ಬಸ್ತಿಯಾಗಿದೆ.